ತಾರಾಬಾಯಿ ಶಿಂಧೆ ಪುಸ್ತಕ ಬಿಡುಗಡೆ
ತಾರಾಬಾಯಿ ಶಿಂಧೆ ಅವರ “ಸ್ತ್ರೀ- ಪುರುಷ ತುಲನೆ” ಎಂಬ ಚಿಕ್ಕ ಪುಸ್ತಕಕ್ಕೆ ದೊಡ್ಡ ಐತಿಹಾಸಿಕ ಮಹತ್ವ ಇದೆ. ಅದು “ಭಾರತದ ಮೊದಲ ಸ್ತ್ರೀವಾದಿ ಪಠ್ಯ” ಎಂದು ಮಾನ್ಯವಾಗಿದೆ.
`ಹಿತೈಷಿಣಿ’ ಅಂತರಜಾಲ ಮಹಿಳಾ ಪತ್ರಿಕೆಗೆ ಒಂದು ವರ್ಷ – ಅದರ ನಿಮಿತ್ತ ನಡೆದ ಸಮಾರಂಭದಲ್ಲಿ “ಭಾರತದ ಮೊದಲ ಸ್ತ್ರೀವಾದಿ ಪಠ್ಯ” ಎನ್ನಲಾದ ತಾರಾಬಾಯಿ ಶಿಂಧೆ ಅವರ ಪುಸ್ತಕದ ಕನ್ನಡ ಅನುವಾದ “ಸ್ತ್ರೀ- ಪುರುಷ ತುಲನೆ” (ಅನು : ಎನ್ . ಗಾಯತ್ರಿ) ಬಿಡುಗಡೆ ಆಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಪುಸ್ತಕ ಬಿಡುಗಡೆ ಮಾಡಿದರು. ನೇಮಿಚಂದ್ರ ಪುಸ್ತಕ ಕುರಿತು ಮಾತನಾಡಿದರು. ನಂತರ “ಸಂವಿಧಾನ ಮತ್ತು ಮಹಿಳೆ” ಕುರಿತು ಅಬ್ದುಲ್ ರೆಹಮಾನ್ ಪಾಷ ಉಪನ್ಯಾಸ ನೀಡಿದರು. ಹಿತೈಷಿಣಿಯ ಸಂಪಾದಕರಾದ ಆರ್. ಪೂರ್ಣಿಮಾ ಮತ್ತು ಎನ್ . ಗಾಯತ್ರಿ ವೇದಿಕೆಯ ಮೇಲಿದ್ದರು.
ತಾರಾಬಾಯಿ ಶಿಂಧೆ ಅವರ ಈ ಪುಸ್ತಕವನ್ನು `ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ’ ಪ್ರಕಟಿಸಿದೆ. 1882 ರಷ್ಟು ಹಿಂದೆಯೇ ಪ್ರಕಟವಾದ “ಸ್ತ್ರೀ- ಪುರುಷ ತುಲನೆ” ಎಂಬ ಚಿಕ್ಕ ಪುಸ್ತಕಕ್ಕೆ ದೊಡ್ಡ ಐತಿಹಾಸಿಕ ಮಹತ್ವ ಇದೆ. ಪಿತೃಪ್ರಧಾನ ಪರಂಪರೆ ಬಹಳ ಎಚ್ಚರಿಕೆಯಿಂದ, ಹೆದರಿಕೆಯಿಂದ ಪೊರೆದುಕೊಂಡು ಬಂಡ `ಸ್ತ್ರೀಧರ್ಮ’ ಎಂಬ ಗಾಳಿಗೋಪುರ ಅದುರುವಂತೆ ತಾರಾಬಾಯಿ ಒಂದೊಂದು ವಿಚಾರಕ್ಕೂ ಗದರುತ್ತಾರೆ. ಅವರ ಹಾಗೆ ಪ್ರಶ್ನಾಸ್ತ್ರಗಳ, ತರ್ಕಾಸ್ತ್ರಗಳ ಮಳೆಗರೆದ ಗಟ್ಟಿಗಿತ್ತಿಯರು ಬಹಳ ಅಪರೂಪ.
“ಇಂದು ಇಂಗ್ಲಿಷ್ ಆಳ್ವಿಕೆಯ ಪರಿಣಾಮವಾಗಿ ಕೆಲವರಾದರೂ ಶೋಷಿತ ಮಹಿಳಾ ಸಮುದಾಯಕ್ಕೆ ಸೇರಿದವರು ಹಿಂಜರಿಕೆಯಿಂದಲೇ ಓದು, ಬರಹದಲ್ಲಿ ತೊಡಗಿದ್ದಾರೆ. ಆರ್ಯರು ಸಾವಿರಾರು ವರ್ಷಗಳಿಂದ ಎಲ್ಲ ರೀತಿಯಿಂದಲೂ ಹೆಣ್ಣುಮಕ್ಕಳನ್ನು ಶೋಷಿಸುತ್ತಾ ಬಂದಿರುವಾಗ ಮತ್ತು ಈಗಲೂ ಅದನ್ನು ಮುಂದುವರಿಸಿರುವಾಗ ಅಂತಹ ಕುತಂತ್ರದ ಬಗ್ಗೆ ಹೆಣ್ಣುಮಕ್ಕಳ ಕಣ್ತೆರೆಸುವ ಒಂದು ಚಿಕ್ಕ ಪ್ರಯತ್ನವನ್ನು ತಾರಾಬಾಯಿ ಈ ಪುಸ್ತಕದಲ್ಲಿ ಮಾಡಿದ್ದಾರೆ” ಎಂದು ಸಮಾಜ ಸುಧಾರಕ ಜ್ಯೋತಿಬಾ ಫುಲೆ ಇದನ್ನು ಪ್ರಶಂಸೆ ಮಾಡಿದ್ದಾರೆ. “ಪಿತೃಪ್ರಾಧಾನ್ಯ ಮತ್ತು ಪುರುಷ ಆಧಿಪತ್ಯವು ರೂಪಿಸಿರುವ ಸಾಮಾಜಿಕ ವ್ಯವಸ್ಥೆ, ಸಾಂಸ್ಕೃತಿಕ ಪೂರ್ವಗ್ರಹಗಳನ್ನು ತಾರಾಬಾಯಿ ಅವರಂತೆ ಇಷ್ಟೊಂದು ನೇರವಾಗಿ ಮತ್ತು ಧೈರ್ಯದಿಂದ ಈ ಮುಂಚೆ ಯಾರೂ ಪ್ರಶ್ನಿಸಿರಲಿಲ್ಲ” ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಗುರುತಿಸಿದ್ದಾರೆ.
ಇಂಥ ಪುಸ್ತಕ ಸಮಾನತೆಯ ಸದಾಶಯದ ಸಂಗಾತಿಯಾದ ಹಿತೈಷಿಣಿಯ ಮೊದಲ ಪ್ರಕಟಣೆ ಆಗಿರುವುದು ಅರ್ಥಪೂರ್ಣ.
– ಹಿತೈಷಿಣಿ ಬಳಗ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.