ತಳಮಳ/ ಹೆಣ್ಣನುಳಿಸುವ ದಾರಿ ಯಾವುದೋ? – ರೂಪ ಹಾಸನ
ಹೆಣ್ಣುಮಕ್ಕಳ ಮೇಲಿನ ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ ಹೆಚ್ಚಳಕ್ಕೆ ಭ್ರೂಣಹತ್ಯೆಯೂ ಒಂದು ಮುಖ್ಯ ಕಾರಣವೆಂದು ಸಮಾಜವಿಜ್ಞಾನಿಗಳು ಗುರುತಿಸುತ್ತಿದ್ದಾರೆ. ಇದಕ್ಕೆ ಒತ್ತು ನೀಡುವಂತೆ ಇತ್ತೀಚೆಗಿನ ಕೆಲವರ್ಷಗಳಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಪ್ರಮಾಣ ಆತಂಕ ಹುಟ್ಟಿಸುವ ಪ್ರಮಾಣದಲ್ಲಿ ಹೆಚ್ಚಾಗಿದೆ. ಬದಲಾಗುತ್ತಿರುವ ಸಂಸ್ಕೃತಿಯ ಪರಿಕಲ್ಪನೆಗಳು, ಸುಲಭವಾಗಿ ಕೈಗೆಟುಕುತ್ತಿರುವ ತಂತ್ರಜ್ಞಾನ, ಆಧುನಿಕತೆ ತಂದೊಡ್ಡುತ್ತಿರುವ ಸವಾಲುಗಳಿಂದಾಗಿ ಅಸಮಾನ ಲಿಂಗಾನುಪಾತವು ನಾವು ಊಹಿಸಲೇ ಸಾಧ್ಯವಿಲ್ಲದಂತಹ ನೂರಾರು ಸಮಸ್ಯೆಗಳನ್ನು ಮಹಿಳೆಗೆ ಮತ್ತು ಸಮಾಜಕ್ಕೆ ತಂದೊಡ್ಡಬಹುದೆಂದು ಸಮಾಜವಿಜ್ಞಾನಿಗಳು ಆತಂಕಿಸುತ್ತಿದ್ದಾರೆ.
ಉತ್ಸಾಹದಿಂದ ಚಿಮ್ಮುತ್ತಾ, ಆರೋಗ್ಯದಿಂದ ನಳನಳಿಸುತ್ತಿದ್ದ ಯುವ ಗೆಳತಿಯೊಬ್ಬಳು ಮದುವೆಯಾದ ಐದು ವರ್ಷಗಳ ನಂತರ ಇತ್ತೀಚೆಗೆ ಸಿಕ್ಕಿದ್ದಳು. ನಿಸ್ತೇಜಳಾಗಿಹೋಗಿದ್ದ ಅವಳ ಆರೋಗ್ಯ ಆತಂಕಪಡುವಷ್ಟು ಸೂಕ್ಷ್ಮವಾಗಿತ್ತು. ನಿಧಾನಕ್ಕೆ ಅವಳ ಬಾಯಿ ಬಿಡಿಸಿ, ಕಥೆ ಕೇಳುತ್ತಾ ಹೋದಂತೆ ತಳಮಳಿಸಿಹೋದೆ. ಮಧ್ಯಮ ವರ್ಗದ ಅವರು, ಇರುವ ಸಂಪಾದನೆಯಲ್ಲಿ ಒಂದು ಮಗುವನ್ನು ಮಾತ್ರ ಮಾಡಿಕೊಳ್ಳುವುದೆಂದುಕೊಂಡಿದ್ದರು. ಮತ್ತೆ ಆ ಮಗು ಗಂಡೇ ಆಗಿರಬೇಕೆಂಬುದು ಗಂಡನ ಕುಟುಂಬದ ನಿರ್ಧಾರ! ಚಕ್ರಾಧೀಶ್ವರರಲ್ಲವೇ? ಅವರ ವಂಶವನ್ನು ಮುನ್ನೆಡೆಸುವ ಗಂಡು ಬೇಕಲ್ಲ! ಹೀಗಾಗಿ ಅವಳು ನಾಲ್ಕು ಬಾರಿ ಬಸಿರಾದಾಗಲೂ, ಸ್ಕ್ಯಾನಿಂಗ್ ಯಂತ್ರಕ್ಕೆ ಗರ್ಭ ಒಡ್ಡಿ, ಭ್ರೂಣ ಪರೀಕ್ಷಿಸಲಾಗಿತ್ತು. ಅದು ಹೆಣ್ಣು ಎಂದು ತಿಳಿದೊಡನೆ ಕತ್ತರಿಸಿ ಬಿಸುಡಲಾಗಿತ್ತು. ಅದರಿಂದ ಇವಳು ಮಾನಸಿಕವಾಗಿ, ದೈಹಿಕವಾಗಿ ಜರ್ಜರಿತವಾಗಿ ಹೋಗಿದ್ದಳು.
ಇಂದು ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಿತರಾಗುತ್ತಿದ್ದಾರೆ, ಔದ್ಯೋಗಿಕ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದಾರೆ, ಆರ್ಥಿಕವಾಗಿ ಒಂದಿಷ್ಟು ಸಬಲರಾಗುತ್ತಿದ್ದಾರೆ ಎಂಬುದು ತಕ್ಷಣಕ್ಕೆ ಕಣ್ಣಿಗೆ ಕಾಣಿಸುವ ಸತ್ಯಗಳಾದರೂ ಇದರ ಒಳ ಹೊಕ್ಕು ವಿಶ್ಲೇಷಿಸುತ್ತಾ ಹೋದರೆ ನಿಗೂಢ ಕರಾಳತೆಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ದಶಕಗಳ ಇಷ್ಟೆಲ್ಲಾ ಹೋರಾಟ, ಜಾಗೃತಿ, ಪ್ರತಿಭಟನೆಗಳ ನಂತರವೂ ಹೆಣ್ಣಿನ ಮೇಲಿನ ದೌರ್ಜನ್ಯ ಕಡಿಮೆಯಾಗಿಲ್ಲ, ಬದಲಿಗೆ ಹೆಚ್ಚಾಗುತ್ತಾ, ಸೂಕ್ಷ್ಮವಾಗುತ್ತಾ ಸ್ವರೂಪದಲ್ಲಿ ಮಾತ್ರ ಬದಲಾಗುತ್ತಿರುವುದು ಗೋಚರಿಸುತ್ತದೆ. ಹೆಣ್ಣು ಜೀವ ಹಿಂದೆಂದಿಗಿಂತಲೂ ಇಂದು ಅತ್ಯಂತ ಆತಂಕದ ಸ್ಥಿತಿಯಲ್ಲಿದೆ. ಅಸಮಾನ ಲಿಂಗಾನುಪಾತ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, 2011ರ ಜನಗಣತಿಯಂತೆ ದೇಶದಲ್ಲಿ ಪ್ರತಿ 1000 ಪುರುಷರಿಗೆ ಕೇವಲ 940 ಮಹಿಳೆಯರು ಮಾತ್ರ ಉಳಿದುಕೊಂಡಿದ್ದಾರೆ ಮತ್ತು ಆರು ವರ್ಷದೊಳಗಿನ ಮಕ್ಕಳ ಅನುಪಾತದಲ್ಲಿ 2001ರಲ್ಲಿ 927 ಹೆಣ್ಣುಮಕ್ಕಳಿದ್ದಿದ್ದು, 2011ರಲ್ಲಿ 919ಕ್ಕೆ ಇಳಿದಿರುವುದು ಭವಿಷ್ಯವನ್ನು ನೆನೆದು ತಲ್ಲಣಿಸುವಂತೆ ಮಾಡುತ್ತಿದೆ.
ಅನೇಕ ಕಾರಣಗಳಿಗಾಗಿ ಹೆಣ್ಣು ಪುರುಷನಿಗಿಂತ ಕೀಳೆಂದು ಭಾವಿಸಿರುವ ನಮ್ಮ ಸಮಾಜ ಹೆಣ್ಣುಮಗು ಹುಟ್ಟಿದೊಡನೆ ಅದಕ್ಕೆ ವಿಷವುಣ್ಣಿಸಿ, ಬಾಯಿಗೆ ಭತ್ತ, ಜೊಂಡುಹುಲ್ಲು ತುಂಬಿ ಬೇರೆ ಬೇರೆ ಕ್ರೂರ ವಿಧಾನಗಳಿಂದ ಕೊಲ್ಲುತ್ತಿದ್ದುದು ಚರಿತ್ರೆಯಲ್ಲಿ ದಾಖಲಾಗಿದೆ. ಗರ್ಭದಲ್ಲಿರುವ ಶಿಶು ಹೆಣ್ಣೋ-ಗಂಡೋ ಎಂದು ಗುರುತಿಸಲು ಅನೇಕ ಅನಾಗರಿಕ ವಿಧಾನಗಳನ್ನು ಆ ಕಾಲಕ್ಕೇ ಪ್ರಯತ್ನಿಸಲಾಗಿದ್ದಕ್ಕೆ ನಿದರ್ಶನಗಳಿವೆ. ಆದರೆ ಇಂದು ಯಾವ ಕಷ್ಟವೂ ಇಲ್ಲದಂತೆ, ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಾದ ಅಲ್ಟ್ರಾ ಸೋನೋಗ್ರಫಿ, ಸ್ಕ್ಯಾನಿಂಗ್ ಯಂತ್ರಗಳಿಂದ ಹೆಣ್ಣುಭ್ರೂಣ ಪತ್ತೆ ಮತ್ತು ಹತ್ಯೆಯ ವಿಧಾನಗಳು ಸುಲಭವಾಗಿ, ಕಣ್ಣಿಗೆ ಕಾಣದ ರೀತಿಯಲ್ಲಿ ಹೆಣ್ಣನ್ನು ನಾಶ ಮಾಡಲು ಪಣ ತೊಟ್ಟಂತೆ ನಿಂತಿವೆ. ನಾವು ದೇವರ ಪ್ರತಿರೂಪವೆಂದು ಭಾವಿಸುವ ವೈದ್ಯರು ಎದೆಯೊಳಗೆ ಯಾವ ಅಳುಕೂ ಇಲ್ಲದೇ ಇಂತಹ ಪಾಪ ಕಾರ್ಯದಲ್ಲಿ ನಿರ್ಲಜ್ಜವಾಗಿ ತೊಡಗಿಕೊಂಡಿರುವಾಗ ಹೆಣ್ಣು ಸಂತತಿಯನ್ನುಳಿಸಿ ಎಂದು ಇನ್ನು ಯಾರಿಗೆ ಮೊರೆಯಿಡುವುದು?
ಕಣ್ಣಿಗೆ ಕಾಣುವ ದೌರ್ಜನ್ಯವನ್ನು ಪ್ರತಿಭಟಿಸಬಹುದು, ಪ್ರಶ್ನಿಸಬಹುದು, ನ್ಯಾಯ ಕೇಳಬಹುದು. ಆದರೆ ಕಣ್ಣಿಗೇ ಕಾಣದಂತೆ, ಅತ್ಯಂತ ಖಾಸಗಿಯಾಗಿ ನಡೆಯುವ ಈ ದೌರ್ಜನ್ಯವನ್ನು ಗುರುತಿಸುವುದು ಹೇಗೆ? ಇಂತಹ ಕ್ರೌರ್ಯವನ್ನು ಎಸಗುತ್ತಿರುವ ನಿಜವಾದ ಶತ್ರು ಯಾರೆಂದು ಕಂಡು ಹಿಡಿಯುವುದೇ ದುಸ್ತರವಾದರೆ ಯಾರ ವಿರುದ್ಧ ಹೋರಾಡುವುದು? ದೌರ್ಜನ್ಯವನ್ನು ಸಾಬೀತುಪಡಿಸಲು ನಮ್ಮ ನ್ಯಾಯ ವ್ಯವಸ್ಥೆಗೆ ಸಾಕ್ಷಿಬೇಕು. ಸಾಕ್ಷಿ ಹೇಳಬೇಕಿರುವ ಕಂದಮ್ಮನನ್ನು ಜಗತ್ತಿಗೇ ಬರಲು ಬಿಡದೇ ಭ್ರೂಣದಲ್ಲೇ ತುಂಡರಿಸಿ ಬಿಸುಟುತ್ತಿರುವಾಗ, ಜೀವ ಉಳಿಸಿ ಎಂದು ಯಾರಲ್ಲಿ ಬೇಡುವುದು?
ಮೂರು ದಶಕಗಳ ಅವಧಿಯಲ್ಲಿ ಲೆಕ್ಕಕ್ಕೆ ಸಿಗದಷ್ಟು ಲಕ್ಷಾಂತರ ಹೆಣ್ಣುಮಕ್ಕಳ ಬದುಕನ್ನು ಹುಟ್ಟುವ ಮೊದಲೇ ಕಿತ್ತುಕೊಳ್ಳಲಾಗಿದೆ. ಕಾಕತಾಳೀಯವೆಂಬಂತೆ ಲಿಂಗಪತ್ತೆ ಹಚ್ಚುವ ಸ್ಕ್ಯಾನಿಂಗ್ ಯಂತ್ರ ದೇಶವನ್ನು ಪ್ರವೇಶಿಸಿಯೂ ಮೂರು ದಶಕವಾಯ್ತು! ಈ ಯಂತ್ರ ಮತ್ತು ಅದರಿಂದ ಭ್ರೂಣದ ಲಿಂಗ ಪತ್ತೆ ಮಾಡಿ ಕೊಲ್ಲುತ್ತಿರುವ ವೈದ್ಯರು ಹೆಣ್ಣು ಸಂತತಿಯ ಪಾಲಿಗೆ ಯಮದೂತರಾಗಿದ್ದಾರೆ. ಪ್ರತಿ ವರ್ಷ ಭಾರತದಲ್ಲಿ ಅಂದಾಜು 6 ಲಕ್ಷ ಹೆಣ್ಣುಭ್ರೂಣಗಳನ್ನು ವೈದ್ಯರು ಹತ್ಯೆ ಮಾಡುತ್ತಿದ್ದಾರೆಂದು ವರದಿಗಳು ಹೇಳುತ್ತವೆ. ಜನರು ಅಜ್ಞಾನಿಗಳು, ಅಮಾಯಕರು, ಲಾಭ/ಲೋಭಕೋರತೆ, ಇನ್ನಾವುದೇ ದುರುದ್ದೇಶದಿಂದ ಹೆಣ್ಣು ಹುಟ್ಟುವುದನ್ನೇ ಬಯಸದಿರಬಹುದು. ಆದರೆ ಅತ್ಯಂತ ವಿವೇಚನಾಶಾಲಿಗಳು, ಸಮಾಜದ ಜವಾಬ್ದಾರಿಯುತ ನಾಗರಿಕರೂ ಆದ ವೈದ್ಯರೇ ಇಂತಹ ಕೊಲೆಗಳನ್ನು ಮಾಡುತ್ತಾರೆಂದರೆ ವೈದ್ಯಕೀಯ ಸೇವೆಯ ಉದಾತ್ತತೆಗ್ಯಾವ ಬೆಲೆ?
ಜಗತ್ತಿನೆಲ್ಲೆಡೆ ಹೆಣ್ಣಿನ ಸಂತತಿಯೇ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಇದರಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ನಂತರದಲ್ಲಿ ಭಾರತ, ಶ್ರೀಲಂಕಾ, ನೇಪಾಳ, ಕೊರಿಯಾ, ಪಾಕಿಸ್ಥಾನ, ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕಾ ಮುಂತಾದ ರಾಷ್ಟ್ರಗಳಲ್ಲಿ ಹೆಣ್ಣಿನ ಸಂಖ್ಯೆಯಲ್ಲಿ ಅಗಾಧ ಪ್ರಮಾಣದ ಕುಸಿತವುಂಟಾಗುತ್ತಿರುವುದು ಗೋಚರಿಸುತ್ತಿದೆ. ಈ ಪ್ರಮಾಣದ ಲಿಂಗಾನುಪಾತವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವಸಂಸ್ಥೆ ಪ್ರತಿ ವರ್ಷ ಸೆಪ್ಟೆಂಬರ್ 24ನ್ನು ‘ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ’ವೆಂದು ಘೋಷಿಸಿ, ಹೆಣ್ಣು ಭ್ರೂಣಹತ್ಯೆಯ ವಿರುದ್ಧವಾಗಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ. ಆದರೆ… ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ಹೆಣ್ಣುಮಕ್ಕಳ ಮೇಲಿನ ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ ಹೆಚ್ಚಳಕ್ಕೆ ಭ್ರೂಣಹತ್ಯೆಯೂ ಒಂದು ಮುಖ್ಯ ಕಾರಣವೆಂದು ಸಮಾಜವಿಜ್ಞಾನಿಗಳು ಗುರುತಿಸುತ್ತಿದ್ದಾರೆ. ಇದಕ್ಕೆ ಒತ್ತು ನೀಡುವಂತೆ ಇತ್ತೀಚೆಗಿನ ಕೆಲವರ್ಷಗಳಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಪ್ರಮಾಣ ಆತಂಕ ಹುಟ್ಟಿಸುವ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಅಗಾಧ ಪ್ರಮಾಣದ ಗಂಡು-ಹೆಣ್ಣಿನ ನಡುವಿನ ವ್ಯತ್ಯಾಸದಿಂದ ಸಂಗಾತಿಯಾಗಿ ಹೆಣ್ಣು ದೊರಕದೇ ಈಗಾಗಲೇ ರಾಜಾಸ್ಥಾನ, ಹರಿಯಾಣ, ಪಂಜಾಬ್ ಮುಂತಾದ ರಾಜ್ಯಗಳು ಹೆಣ್ಣುವಧುಗಳನ್ನು ಇತರ ರಾಜ್ಯಗಳಿಂದ ಆಮದು ಮಾಡಿಕೊಳ್ಳುತ್ತಿವೆ. ಕರ್ನಾಟಕದಲ್ಲಿ ಹೆಚ್ಚುತ್ತಿರುವ ಇನ್ನೊಂದು ಕ್ರೂರ ಪದ್ಧತಿ ‘ವಧು ಮಾರಾಟ’! ‘ಗುಜ್ಜರ್ ಮದುವೆ’ ಹೆಸರಿನ ಈ ಹಣದ ಒಪ್ಪಂದದ ಮದುವೆ ಕಳೆದ 10-12 ವರ್ಷಗಳಿಂದ ಧಾರವಾಡ, ಬೆಳಗಾವಿ, ಕೊಪ್ಪಳ ಜಿಲ್ಲೆಗಳಲ್ಲಿ ವ್ಯಾಪಿಸಿದ್ದು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ರೋಗದಂತೆ ಹರಡುತ್ತಿದೆ. ಬಡ ಹೆಣ್ಣು ಇಲ್ಲಿ ಕೇವಲ ಮಾರಾಟದ ಸರಕು. ತಲೆತಲಾಂತರದಿಂದ ನಡೆದುಕೊಂಡು ಬಂದ ವೇಶ್ಯಾವಾಟಿಕೆಯೆಂಬ ಹೆಣ್ಣಿನ ಮೈಮಾರಾಟದ ದಂಧೆ ಇಂದು ಕರಾಳ ರೂಪವನ್ನು ಪಡೆದು ಬೃಹತ್ ಮಾಫಿಯಾ ಆಗಿ ಬೆಳೆದು ನಿಂತಿದೆ. ಹೆಣ್ಣುಮಕ್ಕಳ ನಾಪತ್ತೆಯೆಂಬ ಜಾಣಕುರುಡಿನ ಹುಡುಕಾಟದ ನಾಟಕ, ಮಹಿಳೆಯರ ಕಳ್ಳಸಾಗಾಣಿಕೆ ಮತ್ತು ಅಕ್ರಮ ಮಾರಾಟ ದಂಧೆ ಇದಕ್ಕೆ ಪೂರಕಾಗಿ ಹುಟ್ಟಿಕೊಂಡಿದ್ದು ಪ್ರತಿನಿತ್ಯ ಈ ವಿಷಜಾಲಕ್ಕೆ ನೂರಾರು ಹೆಣ್ಣುಮಕ್ಕಳು ನೂಕಲ್ಪಡುತ್ತಿದ್ದಾರೆ.
ಹೀಗೇ….. ಬದಲಾಗುತ್ತಿರುವ ಸಂಸ್ಕøತಿಯ ಪರಿಕಲ್ಪನೆಗಳು, ಸುಲಭವಾಗಿ ಕೈಗೆಟುಕುತ್ತಿರುವ ತಂತ್ರಜ್ಞಾನ, ಆಧುನಿಕತೆ ತಂದೊಡ್ಡುತ್ತಿರುವ ಸವಾಲುಗಳಿಂದಾಗಿ ಅಸಮಾನ ಲಿಂಗಾನುಪಾತವು ನಾವು ಊಹಿಸಲೇ ಸಾಧ್ಯವಿಲ್ಲದಂತಹಾ ನೂರಾರು ಸಮಸ್ಯೆಗಳನ್ನು ಮಹಿಳೆಗೆ ಮತ್ತು ಸಮಾಜಕ್ಕೆ ತಂದೊಡ್ಡಬಹುದೆಂದು ಸಮಾಜವಿಜ್ಞಾನಿಗಳು ಆತಂಕಿಸುತ್ತಿದ್ದಾರೆ. ಸ್ತ್ರೀಯರಿಗೆ ಸಾಮಾಜಿಕ ಭದ್ರತೆಯ ಕುಸಿತದಿಂದ, ಸಮಾಜದ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳ ಹೆಚ್ಚಳ ಮಾತ್ರವಲ್ಲ, ಇದು ಜೀವವಿರೋಧಿಯಾದ ವೈಜ್ಞಾನಿಕ ಬೆಳವಣಿಗೆಗೂ ಕಾರಣವಾಗುತ್ತಿದೆ. ಹೆಣ್ಣನ್ನು ಭ್ರೂಣದಲ್ಲೇ ಕೊಂದು ಬಿಸುಟುವುದು ಮಹಿಳೆಯ ಬದುಕಿನ ಹಕ್ಕಿನ ಉಲ್ಲಂಘನೆ ಮಾತ್ರವಲ್ಲ, ಇದು ಮಾನವ ಹಕ್ಕುಗಳ ಉಲ್ಲಂಘನೆಯ ಪರಮೋಚ್ಚ ಘಟ್ಟ! ತಾಂತ್ರಿಕತೆಯ ಪರವಾದ ಧನದಾಹಿ ಬಂಡವಾಳಶಾಹಿಯ ಧೋರಣೆಯೇ ಇದಕ್ಕೆ ಕಾರಣವೆಂದು ಸಮಾಜಕ್ಕೆ ಮನದಟ್ಟು ಮಾಡುವುದಾದರೂ ಹೇಗೆ?
ನಮ್ಮ ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯಗಳು ಮತ್ತೆ ಮತ್ತೆ ಕಟುವಾಗಿ ಹೆಣ್ಣು ಭ್ರೂಣಹತ್ಯೆಯ ಹೆಚ್ಚಳ ಮತ್ತು ಅಸಮಾನ ಲಿಂಗಾನುಪಾತದ ಕುರಿತು ಎಚ್ಚರಿಸುತ್ತಲೇ ಇವೆ. ‘ಹೆಣ್ಣು ಭ್ರೂಣಹತ್ಯೆ ಮಾನವ ಜನಾಂಗದ ಅತಿ ದುಷ್ಟ ಪದ್ಧತಿ’ ಎಂದು ಖಾರವಾಗಿ ಪ್ರತಿಕ್ರಿಯಿಸಿವೆ. ಕಾನೂನು ರಚನೆಯಾಗಿದ್ದರೂ ಅದರ ಪರಿಣಾಮಕಾರಿ ಅನುಷ್ಠಾನವೇಕಾಗಿಲ್ಲ ಎಂದು ಪ್ರಶ್ನಿಸುತ್ತಿವೆ. ‘ಪ್ರಸವಪೂರ್ವ ಲಿಂಗಪತ್ತೆ ಮತ್ತು ಭ್ರೂಣಹತ್ಯೆ ನಿಷೇಧ’ ಕಾನೂನು 1994ರಲ್ಲಿಯೇ ಜಾರಿಯಾಯ್ತು. ಆದರೆ ಲಿಂಗಪತ್ತೆ ಮತ್ತು ಹೆಣ್ಣುಭ್ರೂಣಹತ್ಯೆ ಮಾತ್ರ ಎಗ್ಗಿಲ್ಲದಂತೆ ನಡೆಯುತ್ತಿದೆ. ಹೆಣ್ಣುಮಕ್ಕಳೇ ಎಚ್ಚೆತ್ತು, ಸಿಡಿದು ನಿಂತು ತಮ್ಮ ಕುಲವನ್ನು ಉಳಿಸಿಕೊಳ್ಳಲು ದೃಢ ಸಂಕಲ್ಪ ಮಾಡದಿದ್ದರೆ….ಉಳಿಗಾಲವಿಲ್ಲವೆನ್ನಿಸುತ್ತಿದೆ.
ಹೆಣ್ಣು ಸಂತತಿಯ ಮೇಲಿನ ಈ ‘ಸಾಂಸ್ಕøತಿಕ ಅತ್ಯಾಚಾರ’ ತಡೆಯಲು ಸರ್ಕಾರ ತೆಗೆದುಕೊಂಡಿರುವ ಈವರೆಗಿನ ಕ್ರಮಗಳೆಲ್ಲಾ ವಿಫಲವಾಗಿವೆ. ಇನ್ನಾದರೂ ಪ್ರತ್ಯೇಕವಾದ ಪ್ರಬಲ ‘ಆಯೋಗ’ವೊಂದನ್ನು ರಚಿಸಿ ಈ ಬಗೆಯ ಹೆಣ್ಣು ನಾಶಕ್ಕೆ ಪೂರ್ಣವಿರಾಮ ಹಾಕಲೇಬೇಕು. ಅಲ್ಲಿಯವರೆಗಿನ ಇಂತಹ “ಮಹಿಳೆಯ ಮೇಲಿನ ದೌರ್ಜನ್ಯ ನಿರ್ಮೂಲನೆಯ ಅಂತರಾಷ್ಟ್ರೀಯ ದಿನ”ಗಳು ಅದೆಷ್ಟು ಬಂದು ಹೋಗುತ್ತವೋ!ರೂಪ ಹಾಸನ

ರೂಪ ಹಾಸನ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.