ಡಾ. ಎಚ್.ಎಸ್.ಶ್ರೀಮತಿಯವರ ’ಸ್ತ್ರೀವಾದ” ಪದವಿವರಣ ಕೋಶ
ಕನ್ನಡದಲ್ಲಿ ಮೊದಲ ಬಾರಿಗೆ ರಚಿತವಾಗಿರುವ ಡಾ. ಎಚ್.ಎಸ್. ಶ್ರೀಮತಿಯವರಿಂದ ರಚಿತವಾದ “ಸ್ತ್ರೀವಾದ ಪದವಿವರಣಾ ಕೋಶ”. ಮಹಿಳಾ ಅಧ್ಯಯನಕ್ಕೊಂದು ಅಮೂಲ್ಯ ಕೊಡುಗೆ.
ಎಂಬತ್ತರ ದಶಕದಲ್ಲಿ ವಿವಿಧ ಅಧ್ಯಯನ ವಲಯಗಳ ಭಾಗವೇ ಆಗಿದ್ದ ಹಲವು ಸ್ತ್ರೀವಾದಿ ಚಿಂತಕಿಯರು ತಮ್ಮ ತಮ್ಮ ಅಧ್ಯಯನ ವಲಯಗಳಲ್ಲಿ ಬಳಕೆಗೊಳ್ಳುತ್ತಿದ್ದ ಪರಿಕಲ್ಪನೆಗಳನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ಮರುವ್ಯಾಖ್ಯಾನಿಸಲು ತೊಡಗಿದರು. ಎಲ್ಲ ಜ್ಞಾನವಲಯಗಳಲ್ಲೂ ಮಹಿಳಾ ಬದುಕಿನ ಬಗೆಗೆ ಅಖಂಡ ನಿರ್ಲಕ್ಷ್ಯ, ಅಪವ್ಯಾಖ್ಯಾನಗಳು ಹಾಗೂ ಅಪಮೌಲ್ಯೀಕರಣಗಳೇ ತುಂಬಿಕೊಂಡಿದ್ದು ಅದಕ್ಕೆ ಕಾರಣವನ್ನು ಪುರುಷಾಧಿಪತ್ಯದಲ್ಲಿ ಗುರುತಿಸಿದರು. ಇದರಿಂದಾಗಿ ಪುರುಷ ಪ್ರಾಬಲ್ಯಕ್ಕೆ ಕಾರಣವನ್ನು ಶೋಧಿಸತೊಡಗಿದ ಸ್ತ್ರೀವಾದಿ ಚಿಂತನೆಗಳು ಸಮಾಜದ ರಾಚನಿಕ ಚೌಕಟ್ಟಿನಲ್ಲೇ ಅಡಕಗೊಂಡಿರುವ ಬಹುಮುಖ್ಯ ರಾಜಕಾರಣವನ್ನು ಗುರುತಿಸಿದರು. ಈ ಮಹತ್ತರ ಅಗತ್ಯದಲ್ಲಿ ಮಹಿಳಾ ಅಧ್ಯಯನಗಳು ಆರಂಭವಾದವು. ಅವರ ಮುಖ್ಯ ಸವಾಲೆಂದರೆ, ಈವರೆಗೂ ಯಾವ ’ಜ್ಞಾನ’ ವನ್ನು ತಟಸ್ಥಗುಣದ್ದೆಂದೂ, ವಸ್ತುನಿಷ್ಠವಾದುದೆಂದೂ ಎಲ್ಲರಿಗೂ ಅನ್ವಯವಾಗುವ ಸಾರ್ವಕಾಲಿಕ ’ಸತ್ಯ’ವನ್ನು ಶೋಧಿಸುವ ಸಾಧನವೆಂದು ನಂಬಿಸಲಾಗಿತ್ತೋ ಅದೇ ’ಜ್ಞಾನ’ವನ್ನು ನಿರಾಕರಿಸುವ ಮತ್ತು ತಮ್ಮ ಬದುಕಿಗೆ ಅರ್ಥಪೂರ್ಣವೆನಿಸುವ ಪರ್ಯಾಯ ’ಜ್ಞಾನ’ವನ್ನು ಕಟ್ಟಿಕೊಳ್ಳುವ ಸವಾಲೂ ಅವರ ಎದುರಿಗಿತ್ತು. ಈ ಅರ್ಥದಲ್ಲಿ ಮಹಿಳಾ ಅಧ್ಯಯನವನ್ನು ಅಂತರ್ಶೀಸ್ತೀಯ ಅಧ್ಯಯನ ಎಂದು ಕರೆಯಲಾಯಿತು.
ಇಂಥ ಅಧ್ಯಯನಗಳಲ್ಲಿ ಪರಿಕಲ್ಪನೆಗಳನ್ನು ರೂಪಿಸಿ ಬಳಸುವ ಅಗತ್ಯ ಬಹಳವಾಗಿರುತ್ತದೆ. ಅಂದರೆ ವಿವಿಧ ಜ್ಞಾನ ವಲಯಗಳಲ್ಲಿ ಈಗಾಗಲೇ ಬಳಕೆಗೊಳ್ಳುತ್ತಿರುವ ಪರಿಕಲ್ಪನೆಗಳನ್ನು ಸ್ತ್ರೀವಾದಿ ನೆಲೆಯಿಂದ ಪುನರ್ರಚಿಸುವ ಕೆಲಸವು ಒಂದು ಮುಖ್ಯ ಭಾಗವಾಗುವುದರಿಂದ ನಮ್ಮದೇ ಸ್ತ್ರೀವಾದಿ ಚಿಂತನೆಗಳನ್ನು ಕಟ್ಟಿ ಬೆಳೆಸಲು ಅಗತ್ಯವಾದ ಹೊಸ ಪರಿಕಲ್ಪನೆಗಳೂ ಅಷ್ಟೇ ಮುಖ್ಯವಾಗುತ್ತವೆ. ಇಂಥ ಹಲವು ಪ್ರಯತ್ನಗಳು ಈಗಾಗಲೇ ನಡೆಯುತ್ತಲೇ ಬಂದಿವೆ. ಈ ಮಾದರಿಗಳನ್ನು ಗಮನಿಸಿ ಕನ್ನಡದಲ್ಲಿ ಸ್ತ್ರೀವಾದಿ ಚಿಂತನೆಗಳು ಮತ್ತು ಮಹಿಳಾ ಅಧ್ಯಯನದ ಶೈಕ್ಷಣಿಕ ಅಗತ್ಯಗಳಿಗೆ ಒದಗಿ ಬರುವ ಪರಿಕಲ್ಪನೆಗಳ ಒಂದು ಕೋಶವನ್ನು ಸಿದ್ಧಪಡಿಸುವ ಕಾರ್ಯ ಇಲ್ಲಿ ನಡೆದಿದೆ. ಇವು ಸ್ತ್ರೀವಾದ, ಮಹಿಳಾ ಅಧ್ಯಯನಗಳ ಪರಿಕಲ್ಪನಾ ಕೋಶದಲ್ಲಿ ವಿವಿಧ ಅಧ್ಯಯನ ವಲಯಗಳಲ್ಲಿ ರಚನೆಗೊಂಡಿರುವ ಪರಿಕಲ್ಪನೆಗಳೇ ಆಗಿವೆ. ಉದಾಹರಣೆಗೆ ಮನೋವಿಜ್ಞಾನದಲ್ಲಿ ಫ್ರಾಯ್ಡ್ ಬಳಸಿರುವ ಪರಿಕಲ್ಪನೆಗಳು ರಾಚನಿಕ ವಿವರಗಳನ್ನು ಪ್ರಧಾನವಾಗಿ ಒಳಗೊಂಡಿರಬಹುದಾದರೆ ಸ್ತ್ರೀವಾದಿಗಳು ಈ ಪರಿಕಲ್ಪನೆಗಳನ್ನೂ ಅಲ್ಲಿ ಹೇಳಲಾಗುವ ರಾಚನಿಕ ವಿವರಗಳನ್ನೂ ಒಟ್ಟಿಗೆ ಪ್ರಶ್ನೆಗಳಿಗೆ ಒಳಪಡಿಸಿರುತ್ತಾರೆ. ಆತನು ನಿರೂಪಿಸುವ ಚಿಂತನೆಗಳು ಹೆಣ್ಣು ಮನೋಲೋಕದ ಬಗೆಗೆ ಎಷ್ಟೊಂದು ಅಪವ್ಯಾಖ್ಯಾನಗಳಿಗೆ ಕಾರಣಗಳಾಗಿವೆ ಎಂಬುದನ್ನು ತೋರಿಸುತ್ತಾರೆ.
ಸ್ತ್ರೀವಾದಿ ಅಧ್ಯಯನಕಾರರು ಬೆಳೆಸುತ್ತಿರುವ ಚಿಂತನೆಗಳನ್ನು ಗ್ರಹಿಸುವಲ್ಲಿ, ಚರ್ಚೆಗಳನ್ನು ಬೆಳೆಸುವಲ್ಲಿ ಅಗತ್ಯವಾದ ಪರಿಕಲ್ಪನೆಗಳ ಕೋಶವೊಂದು ಕನ್ನಡದಲ್ಲಿ ಸಿದ್ಧಗೊಂಡಿರುವುದು ಸ್ವಾಗತಾರ್ಹ. ಅದನ್ನು ಸಂಪಾದಿಸಿಕೊಟ್ಟಿರುವ ಡಾ. ಎಚ್.ಎಸ್. ಶ್ರೀಮತಿಯವರು ಅಭಿನಂದನಾರ್ಹರು. ಇಲ್ಲಿ ಚರ್ಚಿತವಾಗಿರುವ ಹಲವಾರು ಪರಿಕಲ್ಪನೆಗಳ ಪುರುಷ ರಾಜಕಾರಣವನ್ನು ಭೇದಿಸಿ ತೋರಿಸುವ ವಿವರ, ವಿಶ್ಲೇಷಣೆಗಳು ಇಲ್ಲಿ ಮುಖ್ಯವಾಗಿವೆ. ಹಲವು ಅಧ್ಯಯನ ವಲಯಗಳ ಪರಿಕಲ್ಪನೆಗಳು ಈ ಸ್ತ್ರೀವಾದಿ ಕೋಶದಲ್ಲಿ ಒಟ್ಟೊಟ್ಟಿಗೆ ಎದುರಾಗುತ್ತವೆ. ಆ ಪ್ರಕ್ರಿಯೆಯಲ್ಲಿ ಅಲ್ಲೊಂದು ಸ್ತ್ರೀವಾದಿ ಚಿಂತನೆಯು ಆಕಾರ ತಳೆದಿರುತ್ತದೆ. ಆ ಚಿಂತನೆಯನ್ನು ಹಿಡಿದಿಡುವ ಒಂದು ಪರಿಕಲ್ಪನೆಯೂ ಕಾಣಿಸುತ್ತದೆ. ಹಾಗಾಗಿ ಇಲ್ಲಿ ಪರಿಕಲ್ಪನೆಗಳು ಚಿಕ್ಕ ಚಿಕ್ಕ ಟಿಪ್ಪಣಿಗಳ ರೂಪದಲ್ಲೇ ಇವೆ. ಹಲವಾರು ಬಾರಿ ಈ ವಿವರಗಳು ಪುನರಾವರ್ತಿತವಾದಂತೆಯೂ ತೋರುತ್ತವೆ. ಆದರೆ ಈ ಪುನರಾವರ್ತನೆಗಳು ಮತ್ತೊಂದು ಹೊಸ ಸ್ತ್ರೀವಾದಿ ಚಿಂತನೆಯನ್ನು ಪ್ರಸ್ತುತಪಡಿಸಬೇಕಾದ ಅಗತ್ಯದ್ದಾಗಿರುತ್ತದೆ ಎಂಬುದನ್ನು ಗಮನಿಸಬಹುದು. ಈ ಕೋಶವನ್ನು ಸಿದ್ಧಪಡಿಸುವಾಗ ಮ್ಯಾಗಿ ಹಮ್ ಳ ’ The Dictionary of Feminist Theory’ ಮಾದರಿಯನ್ನಾಗಿಟ್ಟುಕೊಂಡು ರೂಪಿಸಲಾಗಿದೆ.
– ಹಿತೈಷಿಣಿ ಬಳಗ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.