ನಮ್ಮ ಕಥೆ/ ಟ್ರಾನ್ಸ್ ಚಳುವಳಿಯ ನನ್ನ ಬಾಳ ಪುಟಗಳು- ಎನ್. ಗಾಯತ್ರಿ

‘ಎ ಲೈಫ್ ಇನ್ ಟ್ರಾನ್ಸ್ಜೆಂಡರಿಸಮ್’ ಕೃತಿಯಲ್ಲಿ ರೇವತಿಯವರ ಕ್ರಿಯಾತ್ಮಕ ಸಾಮಾಜಿಕ ಚಟುವಟಿಕೆಗಳ ಪರಿಚಯ ದೊರೆಯುತ್ತದೆ. ಹಾಗೆಯೇ ರೇವತಿಯ ಒಳಗೆ ಇರುವಂತಹ ಒಬ್ಬ ಕವಿಯಿತ್ರಿ, ನಟಿ, ತಾಯಿ ಮತ್ತು ಸಂಘಟಕಿಯ ಪಾತ್ರವನ್ನುಈ ಕೃತಿ ಪರಿಚಯ ಮಾಡಿಕೊಡುತ್ತದೆ

 

“ಎ ಲೈಫ್ ಇನ್ ಟ್ರಾನ್ಸ್ಜೆಂಡರಿಸಮ್” – ರೇವತಿಯವರ ಎರಡನೆಯ ಆತ್ಮಕಥಾನಕ.“ಭಾರತದಲ್ಲಿ ಶಿವನನ್ನು ‘ಅರ್ಧ ನಾರೀಶ್ವರನೆಂದು ಪೂಜಿಸಲಾಗುತ್ತದೆ. ಅಂತಹ ದೇಶ ಹಿಜ್ರಾಗಳನ್ನು ಯಾಕೆ ನಿಂದಿಸಬೇಕು? ಮಹಾಭಾರತದಲ್ಲಿ ‘ಶಿಖಂಡಿ’ಯ ಕತೆಯಿದೆ. ಹಾಗಿರುವಾಗ ಹಿಜ್ರಾಗಳನ್ನು ಯಾಕೆ ಅರ್ಥಮಾಡಿಕೊಳ್ಳಲಾಗುತ್ತಿಲ್ಲ? ‘ಮೂಲಭೂತ ಹಕ್ಕುಗಳು’ ಎನ್ನುವುದು ಕೇವಲ ಗಂಡು ಮತ್ತು ಹೆಣ್ಣು ಎಂದೆನಿಸಿಕೊಂಡವರಿಗೆ ಮಾತ್ರವೇ?ಈ ಹಕ್ಕುಗಳನ್ನು ಅನುಭವಿಸಲು ನಾವು ಹಿಜ್ರಾಗಳು ಮನುಷ್ಯರಲ್ಲವೆ? ನಾವು ಈ ದೇಶದ ಪ್ರಜೆಗಳಲ್ಲವೆ? ನಮಗೆ ಮತದಾನದ ಹಕ್ಕು, ಪಾಸ್ ಪೋರ್ಟ್, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ಆಸ್ತಿಯ ಹಕ್ಕು – ಇವೆಲ್ಲ ಬೇಡವೇ? ಗಂಡಾಗಿ ಹುಟ್ಟಿದ ನಾನು, ಈ ಎಲ್ಲ ಸೌಕರ್ಯ ಪಡೆಯಲು ಗಂಡಾಗಿಯೇ ಬದುಕಬೇಕೆಂದು ಹೇಳುವುದು ಎಷ್ಟು ಸರಿ? ನನ್ನ ಲಿಂಗವನ್ನು ಬದಲಿಸಿಕೊಳ್ಳಬೇಕೆಂದು ಬಯಸಿದರೆ ಅದಕ್ಕೆ ನನಗೆ ಹಕ್ಕಿಲ್ಲವೆ? ನನ್ನನ್ನು ಮತ್ತು ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ನೀವೇಕೆ ನಿರಾಕರಿಸುತ್ತೀರ?” ಹೀಗೆ ಹಲವಾರು ಮೂಲಭೂತ ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತಾ ಆರಂಭವಾಗುವ ಈ ಪುಸ್ತಕ ರೇವತಿಯವರ ಪ್ರಶ್ನೆಗಳು ಮಾತ್ರವಾಗದೆ, ಇಂದಿನ ನಮ್ಮ ಸಮಾಜದ ಎಲ್ಲ ತೃತೀಯ ಲಿಂಗೀಯರ ಪ್ರಶ್ನೆಗಳಾಗಿ ಈ ಪುಸ್ತಕಕ್ಕೆ ಒಂದು ಅಧಿಕೃತತೆಯನ್ನು ಮತ್ತು ವ್ಯಾಪಕತೆಯನ್ನು ದೊರಕಿಸಿಕೊಡುತ್ತದೆ. ಇದು ಕೇವಲ ಅನುಭವ ಕಥನವಲ್ಲ. ಇದಕ್ಕೆ ‘ಸಂಶೋಧನೆ’ ಎನ್ನುವ ಗಂಭೀರ ಚೌಕಟ್ಟಿದೆ. ೨೦೦೦ದಿಂದೀಚೆಗೆ ರೇವತಿಯವರು ಕ್ರಿಯಾಶೀಲವಾಗಿ ನಡೆಸಿದ ಚಳುವಳಿಗಳ ಪರಿಚಯವನ್ನು ಈ ಪುಸ್ತಕ ಮಾಡಿಕೊಡುತ್ತದೆ. ಅವರ ಅಭಿಪ್ರಾಯದಲ್ಲಿ ತೃತೀಯಲಿಂಗೀಯರ ಚಳುವಳಿ  ಕಲ್ಯಾಣ ಕಾರ್ಯಕ್ರಮ ಅಲ್ಲ; ಬದಲಿಗೆ ಹಕ್ಕುಗಳ ಸ್ಥಾಪನಾ ಕಾರ್ಯಕ್ರಮ.

ಅವರ ಮೊದಲ ಆತ್ಮಕಥೆ, “ಟ್ರೂಥ್ ಎಬೌಟ್ ಮಿ-ಎ ಹಿಜ್ರಾ ಲೈಫ್ ಸ್ಟೋರಿ”ಯು ಏಳು ಭಾರತೀಯ ಭಾಷೆಗೆ ಅನುವಾದಿಸಲ್ಪಟ್ಟಿರುವುದಷ್ಟೇಅಲ್ಲದೆ, ದೇಶದ ವಿವಿಧ ವಿಶ್ವವಿದ್ಯಾಲಯಗಳ ೩೦೦ ಕಾಲೇಜಿನ ಗ್ರಂಥಭಂಡಾರವನ್ನು ತಲುಪಿವೆ. ಇಪ್ಪತ್ತು ವಿಶ್ವವಿದ್ಯಾಲಯಗಳಲ್ಲಿ ಇದು ಶೈಕ್ಷಣಿಕ ಪಠ್ಯದ ಭಾಗವಾಗಿದೆ. ಇದನ್ನು ‘ಬದುಕು ಬಯಲು’ ಎಂಬ ಹೆಸರಿನಲ್ಲಿ ದು.ಸರಸ್ವತಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.  ಈ ಪುಸ್ತಕ ಇಂಗ್ಲಿಷಿನಲ್ಲಿ ಪ್ರಕಟವಾದಾಗ ಲೇಖಕಿ ರೇವತಿಗೆ ಸಿಕ್ಕ ಗೌರವ, ಪ್ರಚಾರ, ಮನ್ನಣೆ , ಪ್ರತಿಕ್ರಿಯೆಗಳು ಅವರ ಬದುಕಿನ ಕಷ್ಟಗಳನ್ನು ಸ್ವಲ್ಪ ಹಗುರವಾಗಿಸಿದವು. ಅದಕ್ಕೆ ಮುಖ್ಯ ಕಾರಣ, ಅದು ಅವರೊಬ್ಬಳ ಕತೆ ಮಾತ್ರವಾಗಿರದೆ, ಹಿಜ್ರಾ ಸಮುದಾಯದವರ ಬದುಕಿನ ಕತೆಯಾಗಿತ್ತು. ಅವರ ಬಗ್ಗೆ ಇದ್ದ ಹಲವಾರು ತಪ್ಪು ಕಲ್ಪನೆಗಳನ್ನು ಸಮಾಜಕ್ಕೆ ತೆರೆದಿಡಲು ಸಾಧ್ಯವಾಯಿತು. ಈ ಸಮುದಾಯದ ಸಮಸ್ಯೆಗಳ ಬಗೆಗೆ ಮಾತನಾಡಲು  ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಯನ್ನು ಕಲ್ಪಿಸಿಕೊಟ್ಟಿತು. ಸಮಾಜ ಪರಿಭಾವಿಸುವ ‘ಅಸಹಜ ಬದುಕು’ ಎನ್ನುವ ಒಟ್ಟು ಲೈಂಗಿಕ ಅಲ್ಪಸಂಖ್ಯಾತರ ಬದುಕಿನ ಸತ್ಯಗಳ ಬಗ್ಗೆ ಕಣ್ಣು ತೆರೆಸಿತು.

ತಮಿಳುನಾಡಿನಲ್ಲಿ ತೃತೀಯ ಲಿಂಗಿಗಳನ್ನು ಕುರಿತು ಅಧ್ಯಯನ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ಡಾ|ನಂದಿನಿ ಮುರಳಿಯವರು ತಮ್ಮ ಅಧ್ಯಯನಕ್ಕಾಗಿ ರೇವತಿಯವರ ವಿಸ್ತೃತ ಅಧ್ಯಯನ ಮಾಡಿಕೊಂಡಿರುತ್ತಾರೆ. ಹೀಗೆ ಉಂಟಾದ ಪರಿಚಯ ಮತ್ತು ರೇವತಿಯವರ ಮೊದಲ ಆತ್ಮಕಥೆಯನ್ನು ಓದಿದ ನಂತರ ಅವರಲ್ಲಿ ಈ ವಿಷಯದ ಬಗ್ಗೆ ಹೆಚ್ಚಿದ ಆಸಕ್ತಿಯಿಂದಾಗಿ ರೇವತಿಯವರ ಕ್ರಿಯಾಶೀಲ ಚಳುವಳಿಯನ್ನು ಕುರಿತು ಬರೆಯಲು ತೊಡಗಿದರ ಫಲವೇ ಈ ಪುಸ್ತಕ. ೨೦೧೫ರ ಜನವರಿ ತಿಂಗಳಿನ ಒಂದು ಸುಂದರ ಬೆಳಗ್ಗೆ ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ತಿರುಚಿಂಗೊಡೆಯಲ್ಲಿರುವ ಬೆಟ್ಟದ ಮೇಲಿನ ಅರ್ಧನಾರೀಶ್ವರ ದೇವಾಲಯದ ಪ್ರಾಂಗಣದಲ್ಲಿದ್ದ ಗ್ರಾನೈಟ್ ಮಂಟಪದಲ್ಲಿ ಕುಳಿತು ರೇವತಿಯವರ ಬದುಕಿನ ಕಥೆಯನ್ನು ಆಲಿಸಲು ಆರಂಭಿಸುತ್ತಾರೆ. ನಂತರ ವಿವಿಧ ಸ್ಥಳಗಳಲ್ಲಿ ಸುಮಾರು ಆರು ತಿಂಗಳುಗಳ ಕಾಲ ಇವರಿಬ್ಬರ ನಡುವೆ ತಮಿಳಿನಲ್ಲಿ ನಡೆಯುವ ಸಂಭಾಷಣೆಯು ಇಂಗ್ಲೀಷಿನಲ್ಲಿ ‘ಎ ಲೈಫ್ ಇನ್ ಟ್ರಾನ್ಸ್ಜೆಂಡರಿಸಮ್’ ಎಂಬ ಕೃತಿಯಾಗಿ ಹೊರಹೊಮ್ಮುತ್ತದೆ. ಡಾ| ನಂದಿನಿ ಮುರಳಿಯವರ ಭಾಷಾ ಲಾಲಿತ್ಯವನ್ನು ಇಲ್ಲಿ ಮೆಚ್ಚಬೇಕು. ಪದಗಳು ತುಂಬಿಹ ಪುಸ್ತಕವಿದಲ್ಲ. ಹೃದಯವೇ ಅಡಗಿದೆ ಇದರಲ್ಲಿ. ಆರು ತಿಂಗಳುಗಳ ಕಾಲ ನಂದಿನಿ ಮತ್ತು ರೇವತಿಯವರು ನಡೆಸಿದ ಸಂಭಾಷಣೆಯ ಫಲವಾದ ಸಂವಾದದ ಮೂರ್ತರೂಪವಾದ ಈ ಕೃತಿ ಅವರ ಸೋದರಿತ್ವದ ಫಲ. ಮೂರು ತಲೆಮಾರುಗಳ ಹಿಜ್ರಾ ಸಮುದಾಯದ ನಡುವೆ ಬದಲಾಗುತ್ತಿರುವ ಮೌಲ್ಯಗಳ ಸಂಘರ್ಷವನ್ನು ಇಲ್ಲಿ ಗುರುತಿಸಬಹುದಾಗಿದೆ. ಸಮಾಜದ ಫ್ಯೂಡಲ್ ಮೌಲ್ಯಗಳು/ ಶ್ರೇಣಿಕರಣ ವ್ಯವಸ್ಥೆಯು ‘ಜಮಾತ್’ ಸಂಸ್ಕೃತಿಯಲ್ಲಿ ಪ್ರತಿಬಿಂಬಿತವಾಗಿದೆ. ಆ ಎಲ್ಲ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ಮಾನವೀಯವಾಗಿ ಚಿಂತಿಸುವ ರೇವತಿಯೆಂಬ ಸ್ತ್ರೀಪರ ಮನಸ್ಸು ತನ್ನ ಸಮುದಾಯದ ಒಳಿತಿಗಾಗಿ ಶ್ರಮಿಸುವ ಮಾನವೀಯ ಕಥನ ಈ ಪುಸ್ತಕ.

‘ಎ ಲೈಫ್ ಇನ್ ಟ್ರಾನ್ಸ್ಜೆಂಡರಿಸಮ್’ ಕೃತಿಯಲ್ಲಿ ರೇವತಿಯವರ ಕ್ರಿಯಾತ್ಮಕ ಸಾಮಾಜಿಕ ಚಟುವಟಿಕೆಗಳ ಪರಿಚಯ ದೊರೆಯುತ್ತದೆ. ಹಾಗೆಯೇ ರೇವತಿಯ ಒಳಗೆ ಇರುವಂತಹ ಒಬ್ಬ ಕವಿಯಿತ್ರಿ, ನಟಿ, ತಾಯಿ ಮತ್ತು ಸಂಘಟಕಿಯ ಪಾತ್ರವನ್ನು ಪರಿಚಯ ಮಾಡಿಕೊಡುತ್ತದೆ. ರೇವತಿಯವರ ಇಡೀ ಜೀವನವೇ ಒಂದು ದೀರ್ಘ ಹೋರಾಟವಾಗಿದೆ. ಹೆಣ್ತನವನ್ನು ಅನುಭವಿಸುವುದಕ್ಕಾಗಿ, ಹೆಣ್ಣಾಗಿ ಅಭಿವ್ಯಕ್ತಿಸುವುದಕ್ಕಾಗಿ ಅವರು ನಡೆಸಿದ ಹೋರಾಟವಿದು. ಹದಿನೇಳು ವರ್ಷಗಳಿಂದ ಅವರು ಲೈಂಗಿಕ ಅಲ್ಪ ಸಂಖ್ಯಾತರ ಹಕ್ಕುಗಳ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಇದರ ಜೊತೆಗೆ ಸಾಮಾಜಿಕ ಕಾರ್ಯಕರ್ತೆಯಾಗಿ ದಲಿತರ ಮತ್ತು ಆದಿವಾಸಿಗಳ ಹಕ್ಕುಗಳ ಹೋರಾಟಕ್ಕಾಗಿಯೂ ಹೋರಾಟ ನಡೆಸಿದ್ದಾರೆ. ಸರ್ಕಾರೇತರ ಸಂಸ್ಥೆಗಳು, ಕಾಲೇಜು, ವಿಶ್ವವಿದ್ಯಾಲಯ, ಸಾರ್ವಜನಿಕ ಸಭೆಗಳು, ಮಾಧ್ಯಮ, ರಂಗಭೂಮಿ ಮತ್ತು ಬರವಣಿಗೆ- ಈ ಎಲ್ಲ ಕ್ಷೇತ್ರಗಳಲ್ಲೂ ಅವರ ಕಾರ್ಯವ್ಯಾಪ್ತಿ ಹರಡಿದೆ. ಅವರ ಹೋರಾಟದ ಪಯಣದಲ್ಲಿ ಎದುರಿಸಿದ ಸವಾಲುಗಳು, ಚಿಕ್ಕಪುಟ್ಟ ವಿಜಯಗಳು, ಎಡರುತೊಡರುಗಳ ದರ್ಶನ ಇಲ್ಲಿ ಸಿಕ್ಕುತ್ತದೆ.

ಬೆಂಗಳೂರಿನಲ್ಲಿ ತೃತೀಯ ಲಿಂಗೀಯರು ಮತ್ತು ಸಲಿಂಗಕಾಮಿಗಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಹೋರಾಟ ನಡೆಸುವ ಹಾಗೂ ಅವರ ಬಗ್ಗೆ ಮಾಹಿತಿ, ಅಧ್ಯಯನ ನಡೆಸುವ ಸಂಸ್ಥೆ ಸಂಗಮದ ಪರಿಚಯವಾದದ್ದೇರೇವತಿಯವರ ಬದುಕಿನಲ್ಲಿ ಹೊಸದೊಂದು ಬಾಗಿಲು ತೆರೆದುಕೊಳ್ಳುತ್ತದೆ. ತಮ್ಮ ಸಮುದಾಯದವರ ಒಳಿತಿಗಾಗಿ ದುಡಿಯಬೇಕೆಂದು ಸದಾ ತುಡಿಯುತ್ತಿದ್ದ ರೇವತಿಯ ಮನಸ್ಸು ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತದೆ. ೨೦೦೦ದಲ್ಲಿ ಸಂಗಮದಲ್ಲಿ ಕಚೇರಿ ಸಹಾಯಕರಾಗಿ ಕೆಲಸಕ್ಕೆ ಸೇರುವ ರೇವತಿ, ನಂತರ ೨೦೦೯ರಲ್ಲಿ ಅದರ ನಿರ್ದೇಶಕ ಸ್ಥಾನದವರೆಗೂ ಬೆಳೆಯುವ ಪ್ರಕ್ರಿಯೆ ನಿಜಕ್ಕೂ ಅತ್ಯಂತ ರೋಮಾಂಚಕವಾದದ್ದು. ಈ ಸಂಗಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬೆಂಗಳೂರಿನ ಮಹಿಳಾ ಸಂಘಗಳ ಒಕ್ಕೂಟವು ವೈಭವದಿಂದ ಆಚರಿಸಿದ ವಿಶ್ವ ಮಹಿಳಾದಿನದಲ್ಲಿ ಭಾಗವಹಿಸಿದ ರೇವತಿ, ಅಲ್ಲಿ ನೂರಾರು ಮಹಿಳೆಯರ ಎದುರಿಗೆ ತನ್ನ ಸ್ವರಚಿತ ಕವನವನ್ನು ಓದುವ ಮೂಲಕ ಅವರ ಅಭಿವ್ಯಕ್ತಿಗೊಂದು ಹೊಸರೂಪ ಪಡೆದುಕೊಳ್ಳುತ್ತಾರೆ. ೨೦೦೪ರ ಜನವರಿಯಲ್ಲಿ ಮುಂಬೈನಲ್ಲಿ ನಡೆದ ವರ್ಲ್ಡ್ ಸೋಷಿಯಲ್ ಫೋರಂನಲ್ಲಿ ಆಹ್ವಾನಿತರಾದ ರೇವತಿಗೆ ಅವರ ಜೀವನ ಗಾಥೆಯನ್ನು ನಿವೇದಿಸುವ ಅವಕಾಶ ಸಿಕ್ಕುತ್ತದೆ. ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಲೇ ಪರಿಚಯವಾಗುವ ಅಲ್ಲಿನ ಹಿರಿಯ ಸಹೋದ್ಯೋಗಿಯೊಬ್ಬರನ್ನು ಪ್ರೇಮಿಸಿ ಮದುವೆಯಾಗುವ ರೇವತಿಗೆ ಬದುಕಿನ ಮತ್ತೊಂದು ಮಜಲು ತೆರೆಯುತ್ತದೆ. ಆದರೆ ಮದುವೆಯ ಈ ಬದುಕು ಕೇವಲ ಒಂದು ವರ್ಷದ ಅವಧಿಯದ್ದಾಗಿದ್ದು ಅಲ್ಲೂ ಅವಳಿಗೆ ನಿರಾಸೆ ಎದುರಾಗುತ್ತದೆ.

ಭಾರತದಲ್ಲಿ ಪಾಸ್‌ಪೋರ್ಟ್ ಪಡೆದ ಮೊದಲ ಹಿಜ್ರಾ ಮಹಿಳೆ ರೇವತಿಯವರು. ಪಾಸ್‌ಪೋರ್ಟ್ ಪಡೆಯಲು ಅವರು ನಡೆಸಿದ ಹೋರಾಟವು ಅವರ ಚಳುವಳಿಯ ಒಂದು ಪರಿಚಯವನ್ನು ಮಾಡಿಕೊಡುತ್ತದೆ.  ಏಷ್ಯನ್ ವಿಮೆನ್ ರೈಟ್ಸ್ ಕೌನ್ಸಿಲ್‌ರವರು ಬಾಂಗ್ಲಾದೇಶದಲ್ಲಿ ವ್ಯವಸ್ಥೆ ಮಾಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಿದಾಗ ರೇವತಿಯವರಿಗೆ ಮೊದಲ ಬಾರಿಗೆ ಪಾಸ್‌ಪೋರ್ಟ್ ಪಡೆಯಬೇಕಾದ ಸಂದರ್ಭವೊದಗಿ ಬರುತ್ತದೆ. ಪಾಸ್‌ಪೋರ್ಟ್‍ಗೆಂದು ಸ್ಟಾಂಪ್ ಪೇಪರಿನಲ್ಲಿ ರೇವತಿಯೆಂಬ ಹೆಸರನ್ನು ಬದಲಾಯಿಸಿಕೊಂಡು ಪತ್ರಿಕೆಯಲ್ಲಿ ಕೊಟ್ಟು ಈ ವಿವರಗಳನ್ನು  ಮತ್ತು ವಯಸ್ಸಿನ ಪುರಾವೆಗಾಗಿ ಶಾಲಾ ಸರ್ಟಿಫಿಕೇಟನ್ನು ಲಗತ್ತಿಸಿ ಪಾಸ್‌ಪೋರ್ಟ್ ಕಚೇರಿಗೆ ನೀಡಿದಾಗ, ಅಲ್ಲಿ ಅರ್ಜಿ ತಿರಸ್ಕೃತವಾಗುತ್ತದೆ. ಅಷ್ಟೇಅಲ್ಲ, ಬ್ಯಾಂಕ್ ಠೇವಣಿ, ಆಸ್ತಿ ದಾಖಲೆ, ವಿದ್ಯುಚ್ಛಕ್ತಿ ಬಿಲ್ – ಹೀಗೆ ಎಲ್ಲ ದಾಖಲೆಗಳಲ್ಲೂ ಅವರ ರೇವತಿಯಾಗುವ ಈ ಪ್ರಕ್ರಿಯೆ ಒಂದು ದೊಡ್ಡ ಹೋರಾಟವೇ ಆಗುತ್ತದೆ. ನಂತರ ಉಳಿದವರಿಗೆ ಇದರಿಂದ ಹಾದಿ ಸ್ವಲ್ಪ ಸುಗಮವಾಯಿತು.

ಈ ಪುಸ್ತಕದ ವಿಶೇಷವೇನೆಂದರೆ, ಟ್ರಾನ್ಸ್ ಪುರುಷರ ಹಕ್ಕಿನ ಹೋರಾಟದ ಕಥೆಯೂ ಇಲ್ಲಿದೆ. ಟ್ರಾನ್ಸ್ ಪುರುಷರ ಬದುಕು ಟ್ರಾನ್ಸ್ ಮಹಿಳೆಯರ ಬದುಕಿಂತ ಕಷ್ಟತರವಾದ್ದು. ಮೂಕನ್, ಚಾರು, ಕಿರಣ್, ಸೋನು ನಿರಂಜನ್, ಕ್ರಿಷ್ಟಿ ರಾಜ್, ಗೀ ಇಮಾನ್ ಸೆಮ್ಮ್ಲಾ ಮತ್ತು ಸತ್ಯ ರಾಯ್ ನಾಗಪಾಲ್ ಮುಂತಾದವರ ಬದುಕಿನ ಸಂಕಥನವೂ ಇಲ್ಲಿ ಬಿಚ್ಚಿಕೊಳ್ಳುತ್ತದೆ. ಹೆಣ್ಣು ದೇಹದೊಳಗೆ ಅಡಗಿಕೊಂಡಿದ್ದ ಈ ಗಂಡು ಜೀವಗಳ ಜೀವನ ಕಥನ ಯಾರಿಗೂ ಅರ್ಥವಾಗುವುದಿಲ್ಲ. ಇವರೆಲ್ಲರು  ಗಂಡಾಗಿ ಬದುಕಲು ಆಸೆಪಟ್ಟು ಹೆಂಗಸರೊಂದಿಗೆ ಬದುಕಲು ಇಚ್ಛಿಸಿದವರು. ಸತ್ಯ ರಾಯ್ ನಾಗಪಾಲ್ ರಾಷ್ಟ್ರಪ್ರಶಸ್ತಿಪಡೆದ ಛಾಯಾಚಿತ್ರ ಕಲಾವಿದರು. ಇವರಲ್ಲಿ ಕೆಲವರು ಮದುವೆಯಾಗಿ ಸುಂದರ ಬದುಕನ್ನು ಸಾಗಿಸುತ್ತಿದ್ದಾರೆ. ಇವರೆಲ್ಲ ಅವರದೇ ಗುಂಪಿನ ಸಂಘ, ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಬಾಳಿನ ಸಂಕಥನದ  ವೈವಿಧ್ಯಮಯ ಅನುಭವವನ್ನು ಪರಿಚಯಿಸುವುದರ ಮೂಲಕ ಈ ಪುಸ್ತಕಕ್ಕೆ ಮೌಲಿಕತೆಯನ್ನು ತಂದುಕೊಟ್ಟಿದೆ.

ರೇವತಿಯವರಲ್ಲಿ ಕವಿ ಹೃದಯದ ಜೊತೆಗೆ ನಟಿಯೂ ಇದ್ದಾಳೆ. ಪ್ರಸಿದ್ಧ ತಮಿಳು ನಿರ್ದೇಶಕ ಸಂತೋಷ್ ಶಿವನ್ ಅವರ ನಿರ್ದೇಶನದ ಚಿತ್ರ ‘ನವರಸ’ದಲ್ಲಿ ನಟಿಸಿದರು. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯು ಸಿಕ್ಕಿತು. ನಂತರ ಮತ್ತೊಂದು ತಮಿಳು ಚಿತ್ರ ವಿ.ವಿ. ಕಾತಿರ್ ನಿರ್ದೇಶನದ ‘ತೇನವತ್ತು’ನಲ್ಲಿಯೂ ಅಭಿನಯಿಸಿದ್ದಾರೆ. ೨೦೧೩ರಲ್ಲಿ ಹೆಗ್ಗೋಡಿನ  ನೀನಾಸಂ ಕಲಾವಿದ ಡಾ| ಎಂ.ಗಣೇಶ್ ಅವರ ಹನ್ನೊಂದು ಸದಸ್ಯರ ‘ಜನಮನದಾಟ’ ತಂಡದ ಮೂಲಕ ರೇವತಿಯವರ ಆತ್ಮಕಥೆ ಬದುಕು ಬಯಲು ಕೃತಿಯನ್ನು ರಂಗದ ಮೇಲೆ ತಂದರು. ಈ ನಾಟಕ ೫೦ ಶೋಗಳನ್ನು ಕಂಡಿತು. ಇದನ್ನು ನೋಡಿದ ಮೇಲೆ ರೇವತಿಗೂ ನಾಟಕದಲ್ಲಿ ಅಭಿನಯಿಸುವ ಆಸೆ ಮೂಡುತ್ತದೆ. ಎಂದೂ ನಟನಾ ತರಬೇತಿ ಪಡೆಯದ ರೇವತಿ, ನಟನೆಯನ್ನು ಅಭ್ಯಾಸ ಮಾಡಲು ನೀನಾಸಂನಲ್ಲಿ ಎರಡು ತಿಂಗಳ ತರಬೇತಿ ಪಡೆಯುತ್ತಾರೆ. ನಂತರ ನಾಟಕದಲ್ಲಿ ರೇವತಿಯ ಪಾತ್ರವನ್ನು ಅಭಿನಯಿಸುತ್ತಾರೆ. ಸಾಮಾಜಿಕ ಕಾಳಜಿಯನ್ನು ಹೊಂದಿರುವ ಜನಮನದಾಟ ತಂಡ ಕರ್ನಾಟಕದ ೩೦ ಜಿಲ್ಲೆಗಳಲ್ಲೂ ಈ ನಾಟಕವನ್ನು ಅಭಿನಯಿಸಿದಾಗ, ರೇವತಿ ಮತ್ತು ಅವರ ಇಡೀ ಜೀವನದ ಕಥೆ ಕರ್ನಾಟಕದಾದ್ಯಂತ ಪ್ರಚಾರವಾಗುತ್ತದೆ.

ಕೃತಿಯ ಆರಂಭದಲ್ಲಿ ನಂದಿನಿಯವರು ಹೇಳುವ  “ಜೀವಂತ ಅನುಭವಗಳಿಗಿಂತ ಬೇರೆ ಶಿಕ್ಷಕ ಬೇಕಿಲ್ಲ. ನೊಂದ ವ್ಯಕ್ತಿಗಳ ಸ್ಥಾನದಲ್ಲಿ ನಮ್ಮನ್ನು ಕಲ್ಪಿಸಿಕೊಂಡು ಅವರ ಅನುಭವವನ್ನು ಸಹನೆಯಿಂದ ನೋಡಬಲ್ಲ ಅನುಭವ ನಮಗಿರಬೇಕು. ಇದಾಗಿಲ್ಲದಿದ್ದರೆ ಜಗತ್ತನ್ನು ನಾವು ನೋಡುವ ದೃಷ್ಟಿ ಮಂಕಾಗಿರುತ್ತದೆ, ಇಲ್ಲವೆ ಕಪ್ಪು/ಬಿಳಿ ವರ್ಣಗಳಲ್ಲಿ ಸಿಲುಕಿಕೊಂಡಿರುತ್ತದೆ. ಹೀಗೆ ಮಾಡುವ ಮೂಲಕ ಹಲವಾರು ಛಾಯೆಯ ಅನುಭವಗಳನ್ನು ನೋಡುವುದನ್ನು ನಾವು ಕಳೆದುಕೊಳ್ಳುತ್ತೇವೆ. ಜೀವನವಿರುವುದು ಹಾಗೆ” ಎಂಬ ಮಾತುಗಳ ಹಿನ್ನೆಲೆಯಲ್ಲಿಯೇ ಈ ಕೃತಿಯನ್ನು ಓದಬೇಕು.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *