ಟೋಲ್ ಗೇಟ್ – ಅನಸೂಯ ಕಾಂಬಳೆ
ಪಾದ ಮುಟ್ಟದ ರಸ್ತೆಗಳು
ಕುಡಿದ ನೀರು ತುಳುಕದಂತೆ ಹೊತ್ತೊಯ್ಯುತ್ತವೆ
ಸದ್ದಾಗುವುದಿಲ್ಲ; ಯಾರ ಸೊಲ್ಲೂ ಕೇಳದು
ಸರಕೆಂದರೆ ಯಾವುದು ಬೇಕಾದರೂ ಆಗಬಹುದು
ಮನುಷ್ಯರು; ಮಹಿಳೆಯರು-ಮಕ್ಕಳು
ದನ-ಕರು ಮತ್ತೆ ಮರಬಳ್ಳಿಗಳು
ಸುಂಕದ ದಾರಿ ಸುಲಭದ್ದಲ್ಲ
ಹಂದರದಂತೆ ಹೆಣೆದ ಪಾದ ದಾರಿಗಳು
ಅರವಟ್ಟಿಗೆ-ಅಂಬಲಿ-ಮಜ್ಜಿಗೆ ಬಿಸಿಲೂರಿಗೆ
ಹರಸು ತಾಯೆ! ಹರಕೆ ಹೊತ್ತ ಮಕ್ಕಳಿಗೆ
ಊರು-ಕೇರಿ ಪಾದ ಎಲ್ಲ ಮಾಯ!
ಕೆಂಪು ಹಾಸಿನ ಮೇಲೆ ಸಾಗಿದ ತೇರು
ಚತುಷ್ಪಥದಿಂದ ಅಸ್ಪಷ್ಟವಾಗಿ ಹಿಗ್ಗಿ
ದ ಪಾದ ಸೋಂಕದ ಅಸ್ಪೃಶ್ಯ ದಾರಿ…
ಹೆದ್ದಾರಿ ಶಬ್ದಕೋಶದಲಿ ಅರ್ಥ ಹುಡುಕುತಿದೆ
ಬಾರಿ ವಾಹನಗಳ ನಡುವೆ ಮೂರು ಸಂಜೆ
ಹೂ ಮಾರುವ ಹುಡುಗನ ಆಕ್ರಂದನ!
ಹಸಿದ ಚಪ್ಪಾಳೆ ವಿಚಿತ್ರ ಸದ್ದು
ಗಂಡಿನೊಳಗಿನ ಹೆಣ್ಣು; ಹೆಣ್ಣೊಳಗಿನ ಗಂಡು
ಸಮುದಾಯ ಒಳಗೊಳ್ಳದ ಸಂಕಟ
ಸುಂಕದ ಬಾಗಿಲಲಿ ಎಲ್ಲವೂ ಸರಕು
ನಸುಕು-ಸಂಜೆಯಲಿ ನೆರೆವ ಸಣ್ಣ ಸಂತೆ
ಹಸಿದವರ ಊಟವಲ್ಲ; ದಾರಿಹೋಕರ ಕುರುಹೂ ಅಲ್ಲ
ಪುರದ ಪುಣ್ಯವು ಯಾವ ರೂಪಿಂದ ಪೋಗುತಿದೆ?
ಮೂರು ಹೊತ್ತೂ ಧರಿಸುವ ದಿರಿಸು
ಮಾತು … ಮಾತು … ಮಾತು …
ಯೋಚಿಸಲರಿಯದ ತನ್ನದಲ್ಲದ ಬರೀ ಮಾತು
ಮಾತಿನ ಮಧ್ಯವರ್ತಿಯ ಥಾಲಿ ತುಂಬುವ ಮಾತು
ಎಷ್ಟು ಸುಂಕದ ಕಟ್ಟೆಗಳು ಒಂದು ತೆರಿಗೆಯಲಿ
ಕಳೆದ ನೋಟಿನ ಬೆನ್ನೇರಿದ ತ್ರಿನೀತಿ
ಲೆಕ್ಕ ಬರದ ಕೊನೆ ಬೆಂಚಿನ ಸಾಲು
ಸುಣ್ಣದ ಗೋಡೆಯ ಮೇಲೆ ಕಪ್ಪು ನೆರಳು
ಬಿತ್ತಿದ ಸ್ವರ್ಗಸುಖದ ಕನಸು ನೆಕ್ಕುವ ಕೆನ್ನಾಲಿಗೆ
“ಬೆತ್ತಲೆ ರಾಜ್ಯದಲಿ ಈಗ ಬಟ್ಟೆ ತೊಟ್ಟವನೇ ಮೂರ್ಖ!”
ಸುಂಕವಿಲ್ಲದೆ ಹೋಗುವುದು ತೆಗೆದ ಅಗ್ಗದ ಜೀವ
ಪಾದ ಮುಟ್ಟದ ರಸ್ತೆ ದಾರಿ ಕಾಣದು
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
kavana chennagide