ಟಿಪ್ಪು ವಂಶದ ಕುಡಿ ನೂರ್ ಇನಾಯತ್ ಖಾನ್ – ಡಾ.ಕೆ.ಷರೀಫಾ

ಜೀವಪಣಕ್ಕಿಟ್ಟು ಹಿಟ್ಲರ್ ನ ವಿರುದ್ಧ ಹೋರಾಡಿದ ನೂರ್ ಇನಾಯತ್ ಖಾನ್ ಮಾನವ ಪ್ರತಿಭೆಯ ಅನನ್ಯ ಬೆಳಕು . ನೂರ್ ಎಂದರೆನೇ ಬೆಳಕು ಎಂದರ್ಥ. ಅವಳು ತನ್ನ ಕೇವಲ 30 ವರ್ಷದ ವಯಸ್ಸಿನಲ್ಲಿ ಹಿಟ್ಲರನ ಸಾಮ್ರಾಜ್ಯ ಶಾಹಿಯನ್ನು ವಿರೋಧಿಸಿ ಹೋರಾಡಿ ಶಹೀದಾದವಳು. ಇವಳನ್ನು ಕುರಿತು ಚಂದ್ರಶೇಖರ ಮಂಡೆಕೋಲು ರವರು “ನಾಝೀ ಹೋರಾಟದ ಆದ್ರ್ರಕಾವ್ಯ ನೂರ್ ಇನಾಯತ್ ಖಾನ್” ಎಂಬ ಅದ್ಭುತ ಕೃತಿಯನ್ನು ರಚಿಸಿದ್ದಾರೆ.


ಇತ್ತೀಚಿನ ದಿನಗಳಲ್ಲಿ ಅಜ್ಞಾತವಾಗಿರುವ ಮಹತ್ವದ ಮಹಿಳಾ ಸಾಧಕಿಯರ ಕುರಿತು ಸಂಶೋಧನೆ, ಚಿಂತನೆ, ಮತ್ತು ಅವರ ಚರಿತ್ರೆಯನ್ನು ಕಟ್ಟುವ ಕೆಲಸಗಳು ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕಾಲಚಕ್ರ ಉರುಳಿದಂತೆ ಬಹತ್ವದ ಸಾಧಕಿಯರು ಮರವಿಗೆ ಸಲ್ಲುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ, ಚರಿತ್ರೆಯಲಿ ಮಸುಕಾಗುತ್ತಿರುವ ಇಂತಹ ಸಾಧಕಿಯರನ್ನು ಗುರುತಿಸಿ ದಾಖಲಿಸುತ್ತಿರುವುದು ಮಹತ್ವದ ಕಾರ್ಯವಾಗಿದೆ. ಇಂತಹದೇ ಮಹತ್ವದ ಕೆಲಸವನ್ನು ಚಂದ್ರಶೇಖರ ಮಂಡೆಕೋಲು ರವರು “ನಾಝೀ ಹೋರಾಟದ ಆದ್ರ್ರಕಾವ್ಯ ನೂರ್ ಇನಾಯತ್ ಖಾನ್” ಕೃತಿ ರಚಿಸುವ ಮೂಲಕ ಮಾಡಿದ್ದಾರೆ. ಇದೇ ಲೇಖಕರು ಚರಿತ್ರೆಯಲ್ಲಿ ಮಸುಕಾಗುತ್ತಿರುವ ಹಲವಾರು ಸಾಧಕಿಯರಲ್ಲಿ ಒಬ್ಬರಾದ ದೇಶ ಕಂಡ ಪ್ರಥಮ ವೈದ್ಯೆ ಆನಂದಿಬಾಯಿ ಜೋಶಿಯವರ ಬಗ್ಗೆಯೂ ಕೃತಿ ರಚಿಸಿದ್ದಾರೆ. ಹಲವಾರು ಸಾಹಿತಿಗಳು ಭಾರತದ ಮೊಟ್ಟ ಮೊದಲ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆಯವರ ಬಗ್ಗೆ, ಕಸ್ತೂರಬಾ ಗಾಂಧೀಯವರ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ಚರಿತ್ರೆಯಲ್ಲಿ ಅಜ್ಞಾತರಾಗುತ್ತಿರುವ ಅನೇಕ ಮಹಿಳಾ ಸಾಧಕಿಯರಿದ್ದಾರೆ. ಮರವಿಗೆ ಸಲ್ಲುತ್ತಿರುವ ಇವರನ್ನು ದಾಖಲಿಸುವುದು ಈ ಕಾಲದ ಅಗತ್ಯತೆಯಾಗಿದೆ.

ಮೊಟ್ಟ ಮೊದಲ ಬಾರಿಗೆ 1980ರಲ್ಲಿ ನಾನು ನೂರ್ ಇನಾಯತ್ ಖಾನರ(1914-1944) ಬಗ್ಗೆ ಪರಿಚಯಾತ್ಮಕ ಲೇಖನವನ್ನು ಓದಿದಾಗ ರೋಮಾಂಚಿತಳಾಗಿದ್ದೆ. ನೂರ್ ಮೈಸೂರಿನ ಟಿಪ್ಪು ಸುಲ್ತಾನರ ಮನೆತನ ಕುಡಿ. ಟಿಪ್ಪುರವರ ಮರಿ ಮೊಮ್ಮಗಳಾಗಿದ್ದಾಳೆ ಎಂಬುದು ತಿಳಿಯಿತು. ನೂರ್ ಇನಾಯತ್ ಖಾನರ ಬಗ್ಗೆ ಇಂಗ್ಲೀಷ ಮಾಸಿಕ ಪತ್ರಿಕೆಯಾದ ‘ಪ್ರೋಬ್ ಇಂಡಿಯಾ’ದ ಮಾರ್ಚ 1980ರ ಸಂಚಿಕೆಯಲ್ಲಿ ‘ಎ ರಿಯಲ್ ಲೈಫ್ ಸ್ಟೋರಿ’ ಎಂಬ ಶೀರ್ಷಿಕೆಯಡಿಯಲ್ಲಿ ನೂರ್‍ಳ ಕುರಿತ ನಿಜ ಜೀವನದ ಬದುಕಿನ ಗಾಥೆ ಪ್ರಕಟವಾಯಿತು. ಆಗ ಈ ಶೀರ್ಷಿಕೆಯಡಿಯಲ್ಲಿ ಬದುಕಿನ ನಿಜ ಜೀವನದ ಲೇಖನಗಳನ್ನು ಪ್ರಕಟಿಸುತ್ತಿದ್ದರು. ಆಗ ಅಜಯ್ ರಾಯ್‍ರವರು ಬರೆದ ನೂರ್‍ಳ ಬದುಕು, ಹೋರಾಟ, ಮತ್ತು ಸಾವುಗಳ ಬಗ್ಗೆ ಓದಿದಾಗ ಮೈನವಿರೇಳುವ ಘಟನಾವಳಿಗಳಿಂದ ರೋಮಾಂಚನಗೊಂಡೆ. ಜೀವಪಣಕ್ಕಿಟ್ಟು ಬ್ರಿಟನಗಾಗಿ ಹೋರಾಡಿದ ಅವಳು ಮಾನವ ಪ್ರತಿಭೆಯ ಅನನ್ಯ ಬೆಳಕು ಎನಿಸಿತು. ನೂರ್ ಎಂದರೆನೇ ಬೆಳಕು ಎಂದರ್ಥ. ಅವಳು ತನ್ನ ಕೇವಲ 30 ವರ್ಷದ ವಯಸ್ಸಿನಲ್ಲಿ ಹಿಟ್ಲರನ ಸಾಮ್ರಾಜ್ಯ ಶಾಹಿಯನ್ನು ವಿರೋಧಿಸಿ ಹೋರಾಡಿ ಶಹೀದಾದವಳು.

ನಾನು ನಲವತ್ತು ವರ್ಷಗಳ ಹಿಂದೆಯೇ ಪತ್ರಿಕೆಗೆ ನೂರ್ ಬಗ್ಗೆ ಲೇಖನ ಬರೆದಿದ್ದೆ. ಅದನ್ನು ನನ್ನ ಕೃತಿ ‘ಅಮ್ಮ ಮತ್ತು ಯುಧ್ಧ’ದಲ್ಲಿ ದಾಖಲಿಸಿರುವೆ. ಆಗಿನಿಂದಲೂ ನೂರ್ ನನಗೆ ಕಾಡುತ್ತಲೇ ಇದ್ದಾಳೆ. ದೆಹಲಿಯ ಹಜರತ್ ನಿಜಾಮುದ್ದಿನ್‍ರವರ ದರ್ಗಾಕ್ಕೆ ಹೋದಾಗ, ನೂರ್‍ಳ ತಂದೆ ಇನಾಯತ್ ಖಾನ್‍ರ ಸಮಾಧಿಯನ್ನು ನೋಡಿ ಬರುತ್ತಿದ್ದೆ. ನೂರ್‍ಳ ಕುರಿತ ನನ್ನ ಹುಡುಕಾಟವನ್ನು ಚಂದ್ರಶೇಖರ್ ಮಂಡೆಕೋಲುರವರು ಹಗುರಗೊಳಿಸಿದ್ದಾರೆ. ಅವರು ಅತ್ಯಂತ ಶ್ರಮವಹಿಸಿ, ನೂರ್‍ರ ಕುಟುಂಬದವರನ್ನು ಭೇಟಿ ಮಾಡಿ, ವಿಷಯ ತಿಳಿದುಕೊಂಡು, ನೂರ್‍ಳ ಸೋದರ ವಿಲಾಯತ್ ಖಾನರ ಮಗನಾದ ಪೀರ್ ಝಿಯಾ ಇನಾಯತ್ ಖಾನ್‍ರನ್ನು ಭೇಟಿಯಾಗಿ ಅವರ ಅನುಮತಿ ಪಡೆದು ಈ ಕೃತಿಯನ್ನು ಪ್ರಕಟಿಸಿದ್ದಾರೆ. ಮಂಡೆಕೋಲು ಹೇಳುವಂತೆ ನಾಲ್ಕು ವರ್ಷಗಳ ಕಾಲ ಸುತ್ತಾಡಿ ವಿಷಯ ಸಂಗ್ರಹಿಸಿ, ಅನೇಕ ಗ್ರಂಥಗಳನ್ನು ಪರಾಮರ್ಶಿಸಿ, ಜನರನ್ನು ಸಂದರ್ಶಿಸಿ, ಯಾವುದೇ ಮಹಾಪ್ರಬಂಧಕ್ಕೆ ಕಡಿಮೆಯಿಲ್ಲದಂತೆ ನೂರ್‍ಳ ಜೀವನ ಚರಿತ್ರೆಯನ್ನು ರಚಿಸಿದ್ದಾರೆ. ನೂರುನ್ನಿಸಾ ಇನಾಯತ್ ಖಾನ್ ಅವಳ ಪೂರ್ಣ ಹೆಸರು. ಅವಳ ಬದುಕೇ ಒಂದು ರೋಮಾಂಚಕ ಪತ್ತೇದಾರಿ ಕಾದಂಬರಿಯಂತಿದೆ. ಕಾಲಚಕ್ರದಲ್ಲಿ ಕಳೆದು ಹೋಗುತ್ತಿದ್ದ ನೂರಳ ಜೀವನ ಚರಿತ್ರೆಯನ್ನು ಚಂದ್ರಶೇಖರ ಮಂಡೆಕೋಲುರವರು ಶ್ರಮವಹಿಸಿ, ಮಾಹಿತಿಗಳನ್ನು ಕಲೆಹಾಕಿ, ಶ್ರದ್ಧೆಯಿಂದ ಕೃತಿ ರಚಿಸಿರುವ ಅವರಿಗೆ ಒಂದು ಸಲಾಂ ಹೇಳಲೇಬೇಕು.

ಭಾರತದ ಅದರಲ್ಲೂ ಕರ್ನಾಟಕದ ಮೈಸೂರಿನವರಾದ ಟಿಪ್ಪುಸುಲ್ತಾನ್‍ರವರ ಮೊಮ್ಮಗಳಾದ ಖಾಸಿಂಬೀಯವರ ಮೊಮ್ಮಗ ಇನಾಯತ್ ಖಾನ್. ಇನಾಯತ್ ಖಾನರ ಮಗಳೇ ನೂರ್ ಇನಾಯತ್ ಖಾನ್.ಟಿಪ್ಪು ಸುಲ್ತಾನರ ಮರಿಮೊಮ್ಮಗಳು. ಇನಾಯತ್ ಖಾನರು ಅಮೇರಿಕದವರಾದ ನೊರಾ ರೇ ಬೇಕರ್ ಅಲಿಯಾಸ್ ಶಾರದಾ ಅಮೀನಾಬೇಗಂ ಎಂಬ ಅಪ್ರತಿಮ ಸುಂದರಿಯನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಅವರಿಗೆ ನಾಲ್ಕು ಜನ ಮಕ್ಕಳು ಹುಟ್ಟುತ್ತಾರೆ. ಅವರ ಹಿರಿಯ ಮಗಳೇ ನೂರ್. ನೂರ್ ಹುಟ್ಟಿದ್ದು ದಿನಾಂಕ 1-1-1914 ರಷ್ಯದಲ್ಲಿ. ಅವಳಿಗೆ ಯಾವುದೇ ಗಡಿಗಳು ಅರ್ಥವಿಲ್ಲದ ಗೆರೆಗಳಾಗಿದ್ದವು. ಸೂಪೀ ತತ್ವಗಳ ಜಿಜ್ಞಾಸೆ, ಸಂಗೀತ, ವೀಣೆ ನುಡಿಸುತ್ತ, ಮಕ್ಕಳಿಗೆ ಕಥೆ ಹೇಳುತ್ತ ಬಾಲ್ಯ ಕಳೆಯುತ್ತಾಳೆ. ಅವಳು ಹುಟ್ಟಿದ್ದು ರಷ್ಯನ್ ಕ್ರಾಂತಿಯ ದಂಗೆಗಳು ನಡೆಯುತ್ತಿರುವ ಸಂದರ್ಭದಲ್ಲಿ. ರಷ್ಯದಿಂದ ಲಂಡನ್‍ಗೆ ತೆರಳುತ್ತಾರೆ. ಹೀಗೆ ಲಂಡನ್ ಅಮೇರಿಕಾ, ರಷ್ಯಾ, ಇಂಗ್ಲೆಂಡ್, ಫ್ರಾನ್ಸ, ಪ್ಯಾರಿಸ್ ಹೀಗೆ ವಿಶ್ವಕುಟುಂಬಿಯಾಗಿ ಸೂಫೀ ತತ್ವಗಳನ್ನು ಪ್ರಸಾರ ಮಾಡುತ್ತಾ ಸಂಚರಿಸುತ್ತಾರೆ. ತಂದೆ ಇನಾಯತ್ ಖಾನರು ಕುಟುಂಬವನ್ನು ಫ್ರಾನ್ಸನಲ್ಲಿಯೇ ಬಿಟ್ಟು ತಾವು ಭಾರತಕ್ಕೆ ಬಂದು 1927ರಲ್ಲಿ ನಿಧನರಾಗುತ್ತಾರೆ. ಅವರನ್ನು ದೆಹಲಿಯ ನಿಜಾಮುದ್ದಿನ್ ಜೌಲಿಯಾರವರ ಮಸೀದಿಯ ಬಳಿಯಲ್ಲಿಯೆ ಇದೆ. ಇನಾಯತ್ ಖಾನರು ಬದುಕಿದ್ದಾಗಲೇ ಹೆಂಡತಿ ಮಕ್ಕಳ ಜವಾಬ್ದಾರಿಯನ್ನು ಬಿಟ್ಟು ಬಂದಿರುತ್ತಾರೆ. ಆಗಿನಿಂದಲೇ ನೂರ್ ಮತ್ತು ತಾಯಿಯ ಮೇಲೆ ಸಂಪೂರ್ಣ ಜವಾಬ್ದಾರಿ ಬೀಳುತ್ತದೆ. ಅಲ್ಲಿಂದ ಅವಳ ಕುಟುಂಬ ಮತ್ತೇ ಇಂಗ್ಲೇಂಡಿಗೆ ಬರುತ್ತಾರೆ.

ಅವಳು ಬ್ರಿಟಿಷರ ಪರ ಗೂಢಚಾರಿಣಿಯಾಗಿ ಆರ್ಯರ ರಕ್ತದ ಶ್ರೇಷ್ಠತೆಯನ್ನು ಸಾರಲು ಹೊರಟ ಹಿಟ್ಲರನ ವಿರುದ್ಧ ಕೆಲಸ ಮಾಡುತ್ತಿರುತ್ತಾಳೆ. 1939 ರಿಂದ 1945ರವರೆಗೆ ನಡೆದ ವಿಶ್ವದ 2ನೇ ಮಹಾಯುಧ್ಧದಲ್ಲಿ ಆರು ಕೋಟಿ ಜನರ ಹತ್ಯೆಯಾಗುತ್ತದೆ. ಆಗ ವೀಣೆ ಮೀಟಿದ ಸೂಫೀ ವಿಚಾರಧಾರೆಯ ನೂರಳ ಕೈಯಲ್ಲೀಗ ಪುಟ್ಟ ಪಿಸ್ತೂಲು ಅಕ್ರಮಿಸಿಕೊಂಡಿತ್ತು. ಆಗ ಅವಳಿಗೆ 29ರ ಹರೆಯ ದೇವತೆಯಂತಹ ಸೌಂದರ್ಯ ಕಣ್ಣುಗಳಲ್ಲಿ ಹೊಳೆಯುವ ಕ್ಷಾತ್ರ ತೇಜಸ್ಸು. ಬ್ರಿಟನ್ ಸೇನೆಯ ಗುಪ್ತಚರ ವಿಭಾಗದ ಎಸ್.ಓ.ಇ. ಬೇಹುಗಾರಳಾಗಿದ್ದಳು(ಸ್ಪೇಷಲ್ ಆಪರೇಶನ್ಸ ಎಗ್ಜಿಕ್ಯೂಟಿವ್), ಇದೊಂದು ರಹಸ್ಯ ಪಡೆಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಕೊನೆಗೆ ಜರ್ಮನಿಯ ಹಿಟ್ಲರನ ನಾಝಿಗಳ ಕೈಯಲ್ಲಿ ಸಿಕ್ಕಿಬಿದ್ದು. ಜೈಲಿನಿಂದ ಜೈಲಿಗೆ ವರ್ಗಾಯಿಸುತ್ತಾರೆ. ಅಸಹನೀಯ ಹಿಂಸೆಗೊಳಗಾಗಿ ಜರ್ಮನಿಯ ಡಕಾವೋ ಕಾನ್ಸಂಟ್ರೇಶನ್ ಕ್ಯಾಂಪಿನಲ್ಲಿ ಇಡೀ ರಾತ್ರಿ ಬರೀ ಮೈಯಲ್ಲಿ ಅವಳಿಗೆ ರಕ್ತ ಬರುವಂತೆ ಹೊಡೆಯುತ್ತಾರೆ. ಮರುದಿನ ನಡೆಯಲೂ ಆಗದ ಅವಳನ್ನು ಮಂಡಿಯೂರಿ ಕುಳಿತುಕೊಳ್ಳಲು ಹೇಳಿ ಹಣೆಗೆ ಗುಂಡಿನಿಂದ ಹೊಡೆದು ಸಾಯಿಸುತ್ತಾರೆ. ಅವಳಿಗೆ ಅತ್ಯಂತ ಯಾತನಾಮಯ ಸಾವು ನೀಡುತ್ತಾರೆ. ಇಂತಹ ದಿಟ್ಟ ಹಾಗೂ ಜೀವ ಪಣಕ್ಕಿಟ್ಟು ಹೋರಾಡಿದ ಭಾರತೀಯ ಕುವರಿ ಅದರಲ್ಲೂ ನಮ್ಮ ಕರ್ನಾಟಕದ ಕುಡಿ ಅವಳು. ಸಾಯುವಾಗ ಅವಳ ಬಾಯಿಯಿಂದ ಬಂದ ಕೊನೆಯ ಶಬ್ದ “ಲಿಬರ್ಟಿ”.

ನೂರಳ ಮುತ್ತಾತ ಟಿಪ್ಪು ಸುಲ್ತಾನ್ ಬ್ರಿಟಿಶï ಸಾಮ್ರಾಜ್ಯಶಾಹಿಯ ವಿರುದ್ದ ಹೋರಾಡಿ ಶಹೀದಾದರೆ, ನೂರ್ ಕೂಡ ಹಿಟ್ಲರನ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿ ಶಹೀದಾಗುತ್ತಾಳೆ. ಚರಿತ್ರೆಯ ಭಿನ್ನ ಕಾಲಘಟ್ಟದಲ್ಲಿ ಒಂದು ಕಾಲದಲ್ಲಿ ಬ್ರಿಟೀಷರು ಭಾರತದ ಶತ್ರುವಾಗಿದ್ದರೆ, ಇನ್ನೊಂದು ಕಾಲಘಟ್ಟದಲ್ಲಿ ಹಿಟ್ಲರ ಶತ್ರುವಾಗುತ್ತಾನೆ. ಇದೇ ಚರಿತ್ರೆಯ ವಿಪರ್ಯಾಸ. ಚರಿತ್ರೆಯೊಳಗಿನ ಮಾನವ ಬಂಧುತ್ವ ಇಲ್ಲಿ ಪ್ರಕಟವಾಗುತ್ತದೆ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡುತ್ತ ರಣರಂಗದಲ್ಲಿ ರಕ್ತ ಹರಿಸುತ್ತ ಜೀವಬಿಟ್ಟರೆ, ನೂರ್ ಅದೇ ಬ್ರಿಟಿಷರ ಪರ ಹೋರಾಡುತ್ತ ಕಾನ್ಸಂಟ್ರೇಶನ್ ಕ್ಯಾಂಪಿನ ಯಾತನಾ ಶಿಬಿರದಲ್ಲಿ ರಕ್ತಮಯವಾಗುತ್ತಾಳೆ. ಭಿನ್ನ ನಿಲುವಿನ ದೇಶಗಳ ಗಡಿಗಳನ್ನು ಒಪ್ಪದ ,ಇಡೀ ವಿಶ್ವವನ್ನೇ ಒಂದಾಗಿ ನೋಡಬಯಸಿದ ಅವಳು 2 ಮಹಾಯುದ್ಧ ಮುಗಿದ ಬಳಿಕ ಭಾರತಕ್ಕೆ ಬಂದು ಇಲ್ಲಿಯ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸುವವಳಿದ್ದಳು. ಈ ವೀರ ಕ್ರಾಂತಿಕಾರಿಣಿಗೆ ಸೆಪ್ಟೆಂಬರ್ 1944ರಲ್ಲಿ ಹಿಟ್ಲರನ ಆದೇಶದ ಮೇರೆಗೆ ಕೊಲ್ಲಲಾಗುತ್ತದೆ.

ನೂರಳು ಬಹಳಷ್ಟು ಜನ ಸೂಫೀ ಸಂತರ, ಶರಣರ ಸಂದೇಶಗಳನ್ನು ಸತತವಾಗಿ ಕೇಳುತ್ತಿದ್ದಳು. ವೀಣೆ ಹಿಡಿದು ಶಂಕರಾಭರಣ ನುಡಿಸುತ್ತಿದ್ದಳು. ವೇದಾಂತ, ಕುರಾನ್,ಹದೀಸ್,ಬೈಬಲ್, ವಿಶ್ವ ದಾರ್ಶನಿಕರ ಪರಂಪರೆಗಳನ್ನು ಓದಿಕೊಳ್ಳುತ್ತಿದ್ದಳು. ಬುದ್ಧನ ಜಾತಕದ ಕತೆಗಳನ್ನು ಬರೆದಳು, ಮಕ್ಕಳಿಗೆಲ್ಲ ಕೂಡಿಸಿಕೊಂದು ಪಾಠ ಮಾಡಿದವಳು, ಕತೆಗಳನ್ನು ಬರೆದವಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಭಾರತಕ್ಕೆ ಸ್ವಾತಂತ್ರ ಸಿಗಲೆಂದು ಸತತವಾಗಿ ಹಾರೈಸುತ್ತಿದ್ದವಳು ನೂರ್.
ನೂರ್‍ಗೆ 1949ರಲ್ಲಿ ಬ್ರಿಟನ್ನಿನ ಅತ್ಯುನ್ನತ ನಾಗರೀಕ ಪುರಸ್ಕಾರ ಜಾರ್ಜ ಕ್ರಾಸ್ ಪ್ರಶಸ್ತಿ ನೀಡಿ ಗೌರವಿಸುತ್ತದೆ. 1946ರಲ್ಲಿ ಫ್ರಾನ್ಸ ಕೂಡ ತನ್ನ ದೇಶದ ಅತ್ಯುನ್ನತ ನಾಗರೀಕ ಪುರಸ್ಕಾರ ಗೋಲ್ಡ್ ಸ್ಟಾರ್ ನೀಡಿ ಗೌರವಿಸುತ್ತದೆ. ಲಂಡನ್,ಫ್ರಾನ್ಸ, ಇಂಗ್ಲೆಂಡ್ ಮತ್ತು ಜರ್ಮನಗಳಲ್ಲಿ ನೂರ್ ನೆನಪಿನ ಅನೇಕ ಸ್ಮಾರಕಗಳಿವೆ. ಅವಳ ಮೂರ್ತಿ ಸ್ಥಾಪಿಸಲಾಗಿದೆ. ಫ್ರಾನ್ಸ್ ನ ನೂರಳ ಫಜಲ್ ಮಂಝಿಲ್ ಮನೆಯ ಮುಂದೆ ಪ್ರತಿ ವರ್ಷ ಸೇನಾ ಗೌರವ ಸಲ್ಲಿಸಲಾಗುತ್ತದೆ. ಅವಳ ತ್ಯಾಗ ಬಲಿದಾನಗಳನ್ನು ನೆನೆಯುವ ಯುನಿವರ್ಸಲ್ ದೇಗುಲವನ್ನು ಕಟ್ಟಲಾಗಿದೆ. ಅವಳ ಭಾವಚಿತ್ರವಿರುವ ಅಂಚೆ ಚೀಟಿ ಹೊರಡಿಸಿದೆ. 50 ಪೌಂಡನ ನೋಟಿನಲ್ಲಿ ನೂರ್ ಸ್ಥಾನ ಪಡೆದಿದ್ದಾಳೆ. ಆದರೆ ಮೈಸೂರಿನ ಮರಿಮೊಮ್ಮಗಳ ಒಂದು ಸ್ಮಾರಕವನ್ನೂ ನಾವು ಇಲ್ಲಿಯವರೆಗೂ ಮೈಸೂರಿನಲ್ಲಿ ಕಟ್ಟಿಸದಿರುವುದು ಮಹಾ ದುರಂತವೇ ಸರಿ.
ಈ ಕೃತಿಯಲ್ಲಿ 174 ಪುಟಗಳಿದ್ದು ಒಟ್ಟು 23 ಅಧ್ಯಾಯಗಳಿವೆ. ಅವಳ ಬದುಕಿನ ಮೈನವಿರೇಳಿಸುವ ವೃತ್ತಾಂತಗಳಿವೆ. ಇದು ಎಕಕಾಲದಲ್ಲಿ ಸೂಫೀ ಸಿದ್ದಾಂತ, ಸಂಗೀತ, ಹೋರಾಟದ ಗಾಥೆಯನ್ನು ಮತ್ತು ಚರಿತ್ರೆಯ ಪುಟಗಳನ್ನು ಈ ಕೃತಿ ತೆರೆದಿಡುತ್ತದೆ. ಆಕರ್ಷಕ ಮುಖಪುಟವಿರುವ ಮಹತ್ವದ ಮಾಹಿತಿಯನ್ನೊಳಗೊಂಡ ಈ ಕೃತಿ ಕುತೂಹಲದಿಂದ ಓದಿಸಿಕೊಳ್ಳುತ್ತದೆ. ಚಂದ್ರಶೇಖರ ಮಂಡೆಕೋಲುರವರ ಶ್ರಮ ಇಲ್ಲಿ ಸಾರ್ಥಕವಾಗುತ್ತದೆ.

ಡಾ.ಕೆ.ಷರೀಫಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *