ಜೊಲಾಂಟಾ, ಜೀವದಾತೆಯ ಜೀವನಕಥನ – ಜ್ಯೋತಿ ಇರ್ವತ್ತೂರು

ಆಕೆ 2,500 ಮಕ್ಕಳನ್ನು ಜೀವದ ಹಂಗು ತೊರೆದು ರಕ್ಷಿಸಿದಳು. ಹೆಸರು ಬದಲಿಸಿ ಮುಗ್ಧ ಕಂದಮ್ಮಗಳ ರಕ್ಷಣೆಗಾಗಿ ಪಡಬಾರದ ಕಷ್ಟ ಪಟ್ಟಳು. ಹಿಟ್ಲರ್ ಕಾಲದ ಅಮಾನವೀಯ ನರಮೇಧವ ಕಣ್ಣಾರೆ ಕಂಡು ಮರುಗಿದಳು. ನಿಜವಾದ ಹೆಸರು ಇರೇನಾ ಸೆಂಡ್ಲರ್.  ಬದಲಾಗಿದ್ದು ಜೊಲಾಂಟಾಳಾಗಿ. ಎಲ್ಲವು ಮಾನವೀಯತೆಗಾಗಿ. ಬದುಕಿಸೋದಕ್ಕಾಗಿ

ಹಿಸ್ಟರಿ ಅನ್ನೋದು ಹಿಸ್ ಸ್ಟೋರಿ ಆಗಿದೆ. ಹರ್ ಸ್ಟೋರಿ ಆಗಬೇಕು ಅಂತ ಹಿರಿಯ ಪತ್ರಕರ್ತೆ ಪೂರ್ಣಿಮಾ ಅವರು ಹೇಳ್ತಾನೇ ಇರ್ತಾರೆ. ನಿಜ ಇತಿಹಾಸದ ಪುಟಗಳನ್ನು ಕೆದಕಿ ನಿರ್ಮಿಸಿದ ಸಿನಿಮಾಗಳಲ್ಲಿ, ಜೀವನಚರಿತ್ರೆಯಲ್ಲಿ ಹೆಚ್ಚಾಗಿ ಸ್ತ್ರೀ ಪ್ರಮುಖ ಪಾತ್ರವಾಗಿ ಕಾಣುವುದಿಲ್ಲ. ಅಂತಹ ಪಾತ್ರಗಳನ್ನು ಸಮರ್ಪಕವಾಗಿ ದಾಖಲಿಸುವ ಪ್ರಯತ್ನಗಳು ನಡೆಯದಿರುವುದು ಇದಕ್ಕೆ ಪ್ರಮುಖ ಕಾರಣವೆನಿಸುತ್ತದೆ.ನಡೆದರು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲವೆನ್ನೋದು ಕೂಡ ವಾಸ್ತವ, ಇದೀಗ ಇತಿಹಾಸದ ಪುಟದೊಳಗೆ ಅಗೋಚರವಾಗಿದ್ದ, ಕೆಲವು ವಿದ್ಯಾರ್ಥಿನಿಯರ ಪ್ರಯತ್ನದಿಂದ ಬೆಳಕಿಗೆ ಬಂದ ಕರುಣಾಮಯಿ ತಾಯಿ, ಜೊಲಾಂಟಾ ಜೀವನಕಥನವನ್ನು ಲೇಖಕಿ ಪಲ್ಲವಿ ಇಡೂರ್ ಪುಸ್ತಕ ರೂಪಕ್ಕೆ ಇಳಿಸಿದ್ದಾರೆ.

ಈ ಪುಸ್ತಕವನ್ನು ಓದಿ ಮುಗಿಸಿದಾಗ ನನಗನ್ನಿಸಿದ್ದು. ‘ ಒಂದು ಹಿಡಿ ಪ್ರೀತಿಗಾಗಿ ಹಪಹಪಿಸುವ ಜೀವಗಳಿಗಾಗಿ ನಿನ್ನೆದೆ ಮಿಡಿಯುತ್ತಿದ್ದರೆ ನೀ ಬದುಕಿರುವೆ ಎಂದರ್ಥ.
ಅಂತಹ ಜೀವಗಳಿಗೆ ತುತ್ತ ನೀಡಿ ಆಸರೆಯ ಭದ್ರತೆ ನೀಡಿದರೆ ನೀ ಅವರ ಬದುಕಿಸಿದೆ ಎಂದರ್ಥ. ನಿಜವಾಗಿಯು ಬದುಕಿ ಬದುಕಿಸಿದ ಮಹಾನ್ ತಾಯಿ ಇರೇನಾ ಸೆಂಡ್ಲರ್. ಮೂಲ ಹೆಸರು ಇರೇನಾ ಸೆಂಡ್ಲರ್.ಮಕ್ಕಳ ರಕ್ಷಣೆಗಾಗಿ, ಜನರ ಕಷ್ಟಕ್ಕೆ ಸ್ಪಂದಿಸಲು ಸಹಕಾರಿಯಾಗುವಂತೆ ಹೆಸರನ್ನು ಬದಲಾಯಿಸಿದ್ದು ಜೊಲಾಂಟಾ ಆಗಿ. ಇದೇ ಹೆಸರಿನಲ್ಲಿ ಪಲ್ಲವಿ ಇಡೂರು ಪುಸ್ತಕವನ್ನು ಬರೆದಿದ್ದಾರೆ. ಜೊಲಾಂಟಾ ಅವರ ಕುರಿತಂತೆ ಪಲ್ಲವಿಯವರು ಬರೆದ ಬಗೆಗೆ ನನಗನ್ನಿಸಿದ ಮಾತುಗಳನ್ನು ಬರೆಯುವ ಮುನ್ನ ಈ ಪುಸ್ತಕದ ಅಗತ್ಯದ ಕುರಿತು ಹೇಳುವುದು ಅತ್ಯವಶ್ಯವೆನಿಸಿತು.

ತಂತ್ರಜ್ಞಾನದಲ್ಲಿ ಮುನ್ನುಗ್ಗಿ ,ಮಂಗಳನ ಅಂಗಳದ ಕುತೂಹಲವನ್ನು ತಣಿಸಿಕೊಳ್ಳುತ್ತಾ ನಭೋಮಂಡಲದ ವಿಸ್ಮಯಗಳನ್ನು ಬೇಧಿಸಲು ಹೊರಟ ನಾವು ಮಾನವೀಯತೆಯೆಂಬ ಪದದ ಅರ್ಥವನ್ನೇ ಮರೆತುಬಿಟ್ಟಿದ್ದೇವೆ. ರಸ್ತೆಯಲ್ಲಿ ರಕ್ತ ಸುರಿಸಿ ಬಿದ್ದವರ ಎಬ್ಬಿಸುವ ಮನಸ್ಥಿತಿಯನ್ನು ಕಳೆದುಕೊಂಡುಬಿಟ್ಟಿದ್ದೇವೆ. ಸ್ವಾರ್ಥ, ಪ್ರತಿಯೊಂದರಲ್ಲು ಲಾಭ ನಷ್ಟದ ಲೆಕ್ಕಾಚಾರ, ರಾಜಕಾರಣದ ಆಕ್ಟೋಪಸ್ ಎಲ್ಲೆಡೆ ಹರಡಿದೆ. ಇಂತಹ ಕಾಲಘಟ್ಟದಲ್ಲಿ ಮಾನವೀಯತೆಯ ಸಂದೇಶವನ್ನು ಹೊತ್ತ ಪಾತ್ರಗಳು ಹಿಂದೆಂದಿಗಿಂತಲು ಪ್ರಮುಖ ಪಾತ್ರವನ್ನು ವಹಿಸುತ್ತವೆ,ಅಂತಹ ಪಾತ್ರಗಳು ಹಳ್ಳಿಯಲ್ಲಿರಲಿ, ದಿಲ್ಲಿಯಲ್ಲಿರಲಿ, ಜಗತ್ತಿನ ಯಾವುದೇ ಮೂಲೆಯಲ್ಲಿರಲಿ ಆ ಪಾತ್ರಗಳು ಆಗಿಂದ್ದಾಗ್ಗೆ ನಮಗೆ ಮುಖಾಮುಖಿಯಾಗುತ್ತಲೇ ಇರಬೇಕು. ಆಗ ನಡೆಯುವ ಆತ್ಮಾವಲೋಕನ ಮಾನವೀಯತೆಯ ಮೌಲ್ಯವನ್ನು ನಮ್ಮೊಳಗೆ ಪ್ರತಿಪಾದನೆ ಮಾಡುತ್ತಾ ನಮ್ಮನ್ನು ಸದಾ ಜಾಗೃತವಾಗಿಸುತ್ತಿರುತ್ತದೆ. ಇಂತಹ ಒಂದು ಜಾಗೃತಿಯನ್ನು” ಜೊಲಾಂಟಾ “ ಮಾಡುತ್ತದೆ ಅನ್ನೋ ಗಟ್ಟಿ ನಂಬಿಕೆ ನನ್ನದು. ಹೀಗಾಗಿ ಪುಸ್ತಕದ ಉದ್ದೇಶ ಈ ಸಂದೇಶದೊಂದಿಗೆ ನೆರವೇರುತ್ತದೆ.

ಪೋಲಂಡ್ ನಲ್ಲಿ ಎರಡನೇ ಮಹಾಯುದ್ಧಕಾಲದಲ್ಲಿ ಹಿಟ್ಲರ್ ನ ಅಮಾನವೀಯತೆಗೆ ಸೆಡ್ಡು ಹೊಡೆಯೋ ರೀತಿಯಲ್ಲಿ ಹೆಸರನ್ನೇ ಬದಲಿಸಿ ಅವ ದ್ವೇಷಿಸುತ್ತಿದ್ದ 2,500 ಯಹೂದಿ ಮಕ್ಕಳನ್ನು ಬದುಕಿಸಿಕೊಟ್ಟ ತಾಯಿ, ಇರೇನಾ ಸೆಂಡ್ಲರ್ ಜೀವನದ ಮೈನವಿರೇಳಿಸುವ ನೈಜ ಜೀವನಗಾಥೆ ಜೊಲಾಂಟಾ. ಪುಸ್ತಕವನ್ನು ಓದಿ ಮುಗಿಸುವ ಹೊತ್ತಿಗೆ ಇಂತವರು ಇರುತ್ತಾರಾ? ತ್ಯಾಗದ ಪರಮಾವಧಿಯಿದು. ಗಂಧ ತೇಯ್ಡ ಹಾಗೆ ಬದುಕುವುದೆಂದರೆ ಹೀಗೆ ತಾನು ಬದುಕಿ ಬದುಕಿಸಿ ಎಂದನಿಸುತ್ತದೆ. ಇರೇನಾ ಸೆಂಡ್ಲರ್ ಮತ್ತು ಮಕ್ಕಳ ಬದುಕಿಸಲು ಆಕೆಯ ಜೊತೆಯಿದ್ದ ಸಮಾನಮನಸ್ಕರು, ಮಕ್ಕಳ ತಾಯಂದಿರ ಕರುಳ ಹಿಂಡುವ ಮಾತು, ಕಂಬನಿಯಲ್ಲಿ ಬದುಕ ಕಟ್ಟಿಕೊಡುವ ಇರೇನಾ ಛಲ ಎಲ್ಲವು ಹೃದಯ ತಟ್ಟುತ್ತದೆ.

ಇವತ್ತು ಸಿರಿಯಾ ಸೇರಿದಂತೆ ಜಗತ್ತಿನ ಹಲವೆಡೆ ನಡೆಯುವ ಹಿಂಸಾಚಾರ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರ, ಗಲಾಟೆ ಗಲಭೆಯ ಗದ್ದಲದ ಜಗತ್ತಿನಲ್ಲಿ ಪಲ್ಲವಿ ಈ ಪುಸ್ತಕವನ್ನು ಧರ್ಮದ ಹೆಸರಿನಲ್ಲಿ ಕರುಳಕುಡಿಗಳನ್ನು ಕಳೆದುಕೊಂಡ ಹೆತ್ತವರನ್ನು ಅಗಲಿ ಅನಾಥರಾದ ಜಗತ್ತಿನ ಕೋಟ್ಯಾಂತರ ತಬ್ಬಲಿಗಳಿಗೆ ಅರ್ಪಿಸಿದ್ದಾರೆ.  ಇರೇನಾ ಹುಟ್ಟು, ಹಿನ್ನಲೆ ಆದರ್ಶ ವ್ಯಕ್ತಿತ್ತ್ವದ ಹೆತ್ತವರು, ತಾರತಮ್ಯವನ್ನು ಚಿಕ್ಕಂದಿನಿಂದಲೇ ಪ್ರತಿರೋಧಿಸುವ ಗುಣ ಇದೆಲ್ಲವನ್ನು ಆರಂಭದಲ್ಲಿ ಪಲ್ಲವಿ ಕಟ್ಟಿಕೊಡುತ್ತಾರೆ. ಆನಂತರ ಪೋಲಂಡ್ ಮೇಲೆ ನಾಜಿ ಸೇನೆ ಆಕ್ರಮಣದ ಹಿಂಸೆಯ ಆ ದಿನಗಳು ಆ ನಂತರ ಅನುಭವಿಸಿದ ಯಾತನೆ, ಪೋಲಂಡ್ ನ್ನು ವಶಕ್ಕೆ ತೆಗೆದುಕೊಂಡ ಕ್ಷಣಗಳು , ದುಗುಡ, ಆತಂಕದ ದಿನಗಳ ಸುತ್ತ ಪುಸ್ತಕ ಸುತ್ತುತ್ತದೆ. ಯಾವುದೇ ಪುಸ್ತಕದ ಅನುವಾದವಾಗಿರದ ಮತ್ತು ಓದು ಹುಡುಕಾಟದ ಪ್ರತಿಫಲನವಾದ ಪುಸ್ತಕದಲ್ಲಿ ಸಮಾನಮನಸ್ಕರಾದ ಇವ, ಜಗಾ , ಇರೇನಾ ಶೆಲ್ಡ್ಸ್, ಡೊಬ್ರಾಸಿನ್ ಸ್ಕಿ ಹೇಗೆ ಇರೇನಾ ಸೆಂಡ್ಲರ್ ಕಾಯಕದಲ್ಲಿ ಹೇಗೆ ಬೆನ್ನಿಗೆ ನಿಂತರು ಎನ್ನುವುದರ ವಿವರಣೆಯು ಇದೆ.

ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದ ಇರೇನಾ ನೈರ್ಮಲ್ಯ ನಿಗಮದ ದಾದಿಯರ ಗುಂಪಿನ ಚೀಟಿ ತೋರಿಸಿ ನರ್ಸ್ ಗಳ ಸಮವಸ್ತ್ರ ಧರಿಸಿ ಹೋಗುತ್ತಿದ್ದ ರೀತಿಯನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. ಮೈಜುಮ್ಮೆನಿಸುವ ರೀತಿಯಲ್ಲಿ ನಡೆಯುವ ಘಟನೆಗಳು, ಹಂತ ಹಂತದಲ್ಲೂ ಸವಾಲನ್ನು ಸ್ವೀಕರಿಸಿ, ಎದುರಾಗುವ ಅಪಾಯವನ್ನು ಜಾಣ್ಮೆಯಿಂದ ನಿಭಾಯಿಸುತ್ತಲೇ ಸಾಗುವ ಪರಿ ಎದೆ ತುಂಬಿ ಬರುವಂತೆ ಮಾಡುತ್ತದೆ. ದ್ವೇಷಿಸುತ್ತಿದ್ದ ಯಹೂದಿಗಳಿಗೆ ಕೊಡುತ್ತಿದ್ದ ಚಿತ್ರಹಿಂಸೆ, ಅವರನ್ನು ಇಡಲಾದ ಕೊಳೆಗೇರಿಯಂತ ಘೆಟ್ಟೋ ಚಿತ್ರಣ ಮನಸ್ಸಿಗೆ ಹಿಂಸೆಯನಿಸುತ್ತದೆ. ಸಣಕಲು ದೇಹದ ಮಕ್ಕಳು, ದೊಡ್ಡವರು, ತಾಯಂದಿರ ನೋವಿನ ಕಥೆಯ ವಿವರಣೆ ಕಣ್ಣೆದುರು ಆ ಪಾತ್ರಗಳು ಬಂದು ಸುಳಿದಾಡಿದಂತಾಗಿ ಎದೆಗೆ ನಾಟುತ್ತದೆ. ನೋವಿನ ಎಳೆಯೊಂದು ಕಟ್ಟಿ ಹಾಕಿದಂತೆ ಭಾಸವಾಗುತ್ತದೆ.

ತನ್ನ ಆಪ್ತರಾದವರು, ವಿಕೃತ ಮನಸ್ಸಿನ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಾಗ ರಕ್ಷಿಸಿದ ಮಕ್ಕಳ ಕುರಿತು ಮಾಹಿತಿ ಬಹಿರಂಗವಾದೀತೆ ಅನ್ನೋ ಆತಂಕ,  ಆ  ಆತಂಕದ ಮಧ್ಯೆಯೇ ಕಾಯಕ ಮುಂದುವರಿಸುವ ಇರೇನಾ ಸೆಂಡ್ಲರ್ ಅನ್ನೋ ಅದ್ಬುತ, ಸುಂದರ ಮನಸ್ಸಿನ ತಾಯಿಯ ಅಗಾಧ ನೈತಿಕ ಸ್ಥೈರ್ಯ ಮನಮುಟ್ಟುತ್ತದೆ ಮನತಟ್ಟುತ್ತದೆ. ಬೆರಿಲ್ ಎಂಬ ಹುಡುಗಿಯ ರಕ್ಷಣೆ ಮಾಡೋ ರೀತಿ ಹಾಗೇ ಮಧ್ಯರಾತ್ರಿ ಮಕ್ಕಳ ಕುರಿತು ಮಾಹಿತಿ ಸಿಗದಿರಲೆಂದು ಲಾಟೀನು ಹಚ್ಚಿ ಸೇಬುಹಣ್ಣಿನ ಬುಡದಲ್ಲಿ ಜಾರ್ ಒಂದರಲ್ಲಿ ಹೆಸರುಗಳ ಬಚ್ಚಿಡುವ ಕ್ಷಣಗಳು ಮುಂದೇನಾಗಬಹುದೆಂಬ ಆತಂಕವನ್ನು ಸೃಷ್ಟಿಸುತ್ತದೆ.

ಬಿಯಾಟಾ ಎಂಬ ಹುಡುಗಿಯನ್ನು ಕರೆದುಕೊಂಡು ಹೋಗುವಾಗಿನ ಹೃದಯಕಲುಕುವ ಕ್ಷಣಗಳು, ತಾಯಿ ಮಿಡಿಯುವ ಮಾತು, ಬೆಳ್ಳಿ ಚಮಚ ನೀಡಿ ನುಡಿದ ನುಡಿ ಎಲ್ಲವೂ ಹೃದಯಸ್ಪರ್ಶಿ ಎನಿಸುತ್ತವೆ. ಮುಂದೆ ಬಿಯಾಟಾ ಬೆಳೆದ ನಂತರದ ಫೋಟೋಗಳು, ಹಾಗೇ ಬಾಲ್ಯದ ಫೋಟೋಗಳು ಪುಸ್ತಕದಲ್ಲಿವೆ.

ನತನ್ ಎಂಬ ಹುಡುಗ ಇರೇನಾ ಸೆಂಡ್ಲರ್ ಗೆ ಹೇಳುವ ಮಾತು ಮರೆಯದೆ ನೆನಪುಳಿಯುತ್ತದೆ.” ಈ ಮೊಟ್ಟೆಗಳು ಯಾವಾಗಲೂ ಮರಿ ಹಾಕುವುದಿಲ್ಲ ಜೊಲಾಂಟಾ.ಇವುಗಳ ಮೇಲೆ ಈ ತಾಯಿ ಕೋಳಿ ಕೂತರೂ ಇವು ಮರಿಯಾಗೋದಿಲ್ಲ. ಯಾಕಂದರೆ ಇದಾಗಲೇ ಬೇಯಿಸಿಯಾಗಿದೆ.” ಈ ಮಾತು ಕ್ರೌರ್ಯದ ಪರಮಾವಧಿಯನ್ನು ದಾಟಿ ಹಿಂಸೆಯಲ್ಲಿ ನಿರತವಾದ ಹಿಟ್ಲರ್ ದ್ವೇಷದ ತೀವ್ರತೆಯನ್ನು ಪ್ರತಿಬಿಂಬಿಸುತ್ತದೆ. ಕಂಡ ದೃಶ್ಯಗಳು, ಅನುಭವಿಸುವ ಯಾತನೆ ಎಲ್ಲವು ನಿರಾಶೆ ಮತ್ತು ಅಸಹಾಯಕತೆಯತ್ತ ಹೊರಳಿದ ಮನಸ್ಥಿತಿಯನ್ನು ತಿಳಿಸುತ್ತದೆ.

ಈ ಶಬ್ದಗಳು, ಈ ದಾಖಲೆಗಳು ಇವೆಲ್ಲಾ ಸತ್ತ ನಕ್ಷತ್ರಗಳಂತೆ, ಬರೀ ದೂರದಲ್ಲಿ ಕಾಣಿಸುವ ಬೆಳಕಿನಂತೆ . ಜೀವನವಿಡೀ ಕಾಡುತ್ತದೆ ನನ್ನನ್ನು ಎಂದು ಗದ್ಗದಿತಳಾಗಿ ಇರೇನಾ ಸೆಂಡ್ಲೆರ್ ಹೇಳುವ ಮಾತು ಗಂಟಲುಬ್ಬಿ ಬರುವಂತೆ ಮಾಡುತ್ತದೆ,ಅದೆಷ್ಟು ಯಾತನೆಯ ಮಧ್ಯೆಯು ಜೀವವನ್ನೇ ಪಣಕ್ಕಿಟ್ಟು ಮಿಡಿಯುವ ಆಕೆಯ ಹೃದಯ ಮಾನವೀಯತೆಯ ಸಂದೇಶವನ್ನು ಕೊಡುತ್ತಲೇ ಇರುತ್ತದೆ.

ಕೊನೆಗು ಸಿಕ್ಕಿಬೀಳುವ ಇರೇನಾ ಅಂದರೆ ಹೆಸರು ಬದಲಿಸಿಕೊಂಡ ಜೊಲಾಂಟಾ ಸಾವೇ ಎದುರಾದರೂ ಮಕ್ಕಳ ಮಾಹಿತಿ ನೀಡದೆ, ತನಗಿಂತ ಮುಗ್ಧ ಮಕ್ಕಳ ಬದುಕೇ ಪ್ರಮುಖವೆಂದು ಭಾವಿಸುತ್ತಾಳೆ. ಮಾನಸಿಕವಾಗಿ, ದೈಹಿಕವಾಗಿ ಕೊಟ್ಟ ಹಿಂಸೆ, ನೋವನ್ನು ಎದುರಿಸಿ ಕೊನೆಗೂ ಲಂಚ ಪಡೆದವರ ಸಹಾಯದಿಂದಲೇ ತಪ್ಪಿಸಿಕೊಂಡು ವಾಪಾಸು ಬರುವ ಕ್ಷಣಗಳು ಮೈಜುಮ್ಮೆನಿಸುತ್ತದೆ. ತಾಯಿಯ ಕೊನೆಯ ಕ್ಷಣದಲ್ಲೂ ಹಾಜರಿರಲಾರದ ಅಸಹಾಯಕ ಪರಿಸ್ಥಿತಿ ಎಂತವರಿಗೂ ಬರಲಾರದಿರಲಿ ಅನಿಸುತ್ತದೆ.

ಹೀಗೆ ತಪ್ಪಿಸಿ ಬಂದ ನಂತರ ಭೂಗತವಾಗಿ ಬದುಕಿದ ಇರೇನಾ ಬದುಕೇ ಸಿನಿಮಾ ಚಿತ್ರಕಥೆಯಂತೆ ತೋರುತ್ತದೆ. ಇಂತಹ ಇರೇನಾ ಅಗೋಚರವಾಗಿಯೇ ಇದ್ದ ಸಂದರ್ಭದಲ್ಲಿ ಕೆಲ ಹುಡುಗಿಯರು ಹಿಸ್ಚರಿ ಡೇಗಾಗಿ ತಡಕಾಡಿದ ವಿಷಯ ಇರೇನಾ ಸೆಂಡ್ಲರ್ ಎಂಬ ಮಹಾನ್ ಚೇತನವನ್ನು ಜಗತ್ತಿಗೆ ಪರಿಚಯಿಸುತ್ತದೆ. ಪ್ರಶಸ್ತಿಗಳ ಮಹಾಪೂರವೇ ಹರಿದುಬರುತ್ತದೆ. ಡಾಕ್ಯುಮೆಂಟರಿಗಳನ್ನು ನಿರ್ಮಿಸಲಾಗುತ್ತಿದೆ. ಲೇಖನಗಳು ಬರೆಯಲ್ಪಡುತ್ತವೆ. ಮಾಧ್ಯಮಗಳ ದಂಡೇ ಇರೇನಾ ಮನೆಯೆದುರು ಧಾವಿಸುತ್ತವೆ. ಹುದುಗಿಟ್ಟ ನೆನಪುಗಳನ್ನು ಮೆಲುಕು ಹಾಕುವ ಇರೇನಾ ಗದ್ಗದಿತರಾಗುತ್ತಾರೆ.ಕಂಡ ನೋವಿನ ಕಥೆ, ಅನುಭವಿಸಿದ ಯಾತನೆ ಕಣ್ಣಲ್ಲಿ ಕಾಣದ ಕಂಬನಿಯಾಗಿ ಕರಗಿಹೋದಂತೆ ಭಾಸವಾಗುತ್ತದೆ.

ಹಿಂದೊಮ್ಮೆ ಜರ್ಮನಿಯ ನಾಜಿ ಸೇನಾ ಪಡೆಯಿಂದ 2,500 ಯಹೂದಿ ಜನಾಂಗದ ಮಕ್ಕಳ ರಕ್ಷಣೆಯನ್ನು ಮಾಡಿದ ಕರುಣಾಮಯಿ ಆಗಾಗ ಹಳೆಯ ನೆನಪುಗಳ ಕೆದಕಿ ನಿಟ್ಟುಸಿರು ಬಿಡುತ್ತಾರೆ. ತನ್ನನ್ನು ಇನ್ನೂ ಹೆಚ್ಚುಜನರನ್ನು ರಕ್ಷಿಸಲಾರದ ಪಾಪಪ್ರಜ್ಞೆ ಕಾಡುತ್ತಲೇ ಇದೆ ಎಂದು ಹೇಳುವ ಮಾತು,  ನಾವೇನು ಮಾಡಿದ್ದೇವೆ ಎಂದು ಆತ್ಮಾವಲೋಕನ ಮಾಡುವಂತೆ ಒತ್ತಾಯಿಸುತ್ತದೆ.

98 ರ ವಯಸ್ಸಿನಲ್ಲಿ ಅಗಲಿದ ಈ ಹಿರಿಯ ಚೇತನ ಒಳ್ಳೆಯದ್ದು ಗೆಲ್ಲಬೇಕು ಎಂದು ಹೇಳಿರುವಂತೆ ಒಳ್ಳೆಯ ಉದ್ದೇಶ, ಒಳ್ಳೆಯ ಕೆಲಸದತ್ತ ನಮ್ಮೆಲ್ಲರ ಮನಸ್ಸು ಹೊರಳಲಿ. ಸ್ವಾರ್ಥದಿಂದ ಹೊರಬಂದು ನೊಂದವರ ಕಣ್ಣೀರು ಒರೆಸುವ, ಸಮಾಜಮುಖಿಯಾಗಿ ಬದುಕುವ ಬದುಕು ನಮ್ಮದಾಗಲಿ. ಬದುಕಿಸಲು ಸಾಧ್ಯವಿಲ್ಲದಿದ್ದರೂ ಬದುಕುವ ರೀತಿ ಅರ್ಥಪೂರ್ಣವಾಗಿರಲಿ.

ಜ್ಯೋತಿ ಇರ್ವತ್ತೂರು

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *