Latestಚಾವಡಿಚಿಂತನೆ

ಜಾತಿ ಸಂಘರ್ಷಕ್ಕೆ ಮರ್ಯಾದಾ ಹತ್ಯೆಯ ಬಣ್ಣ – ಮಾಲತಿ ಭಟ್

 

ಮರ್ಯಾದಾ ಹತ್ಯೆಯ ಪ್ರಕರಣಗಳಲ್ಲಿ ಮಗಳೋ, ಮಗನೋ ಪ್ರೀತಿಸಿ ಮದುವೆಯಾಗಿ ಮನೆತನದ ಮರ್ಯಾದೆ ಕಳೆದರು ಎನ್ನುವ ಕೋಪಕ್ಕಿಂತ ಅನ್ಯಧರ್ಮೀಯರು, ಕೆಳ ಜಾತಿಯವರನ್ನು ಮದುವೆಯಾದರು ಎನ್ನುವ ಅಸಮಾಧಾನದ ತೀವ್ರತೆಯೇ ಹೆಚ್ಚಾಗಿರುತ್ತದೆ

2016ರಲ್ಲಿ ಮರಾಠಿಯಲ್ಲಿ ತೆರೆಕಂಡ ‘ಸೈರಾಟ್’ ಚಲನಚಿತ್ರ ರಾತ್ರಿ ಬೆಳಗಾಗುವುದರಲ್ಲಿ ಸೂಪರ್ ಹಿಟ್ ಆಯಿತು. ಹಲವು ರಾಷ್ಟ್ರೀಯ, ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿಕೊಂಡಿತು. ಆ ಸಿನಿಮಾದ ನಾಯಕಿ ರಿಂಕು ರಾಜಗುರು ಮತ್ತು ನಾಯಕ ಆಕಾಶ್ ಥೋಸರ್ ಅಭಿನಯ ಸಹ ಭಾರಿ ಮೆಚ್ಚುಗೆಗೆ ಪಾತ್ರವಾಯಿತು.

ಈ ಚಿತ್ರದ ವಸ್ತುವೇ ಬಹು ವಿಶಿಷ್ಟವಾಗಿತ್ತು. ಮಹಾರಾಷ್ಟ್ರದ ಪುಟ್ಟ ಪಟ್ಟಣವೊಂದರಲ್ಲಿ ವಿಭಿನ್ನ ಜಾತಿಗೆ, ಅಂತಸ್ತುಗಳಿಗೆ ಸೇರಿದ ಹದಿಹರೆಯದ ಜೋಡಿಯ ನಡುವೆ ಅರಳುವ ಪ್ರೇಮ, ಅದರ ಪರಿಣಾಮ, ಕುಟುಂಬದ ಪ್ರತಿಷ್ಠೆಗಾಗಿ ಆ ಯುವ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡುವ ಯುವತಿಯ ಕುಟುಂಬದ ಕಥೆಯನ್ನು ಈ ಚಿತ್ರ ಒಳಗೊಂಡಿತ್ತು. ಚಿತ್ರಮಂದಿರದಿಂದ ಹೊರಬರುವವರೆಲ್ಲ ಭಾರವಾದ ಹೃದಯ ಹೊತ್ತು ಹಿಂದಿರುಗುತ್ತಿದ್ದರು.

ಇದರ ಪರಿಣಾಮ ಮಹಾರಾಷ್ಟ್ರದ ಕೆಲವು ಕಡೆ ಅಂತರ್ಜಾತಿ ವಿವಾಹವಾದ ತಮ್ಮ ಮಕ್ಕಳನ್ನು ಅಪ್ಪ, ಅಮ್ಮ ಒಪ್ಪಿಕೊಂಡರು. ಪ್ರೀತಿಸಿ ಓಡಿಹೋದ ಜೋಡಿಗಳಿಗೆ ನೆರವಾಗಲು ಸಂಘಟನೆಯೂ ಹುಟ್ಟಿಕೊಂಡಿತ್ತು. ಭಾರತದ ಗ್ರಾಮೀಣ ಭಾಗದಲ್ಲಿ ಕುದಿಯುತ್ತಿರುವ ಜಾತಿ ಸಂಘರ್ಷದ ಕಥೆಯನ್ನು ತೆರೆಯ ಮೇಲೆ ದಿಟ್ಟವಾಗಿ ತೋರಿಸಿದ್ದಕ್ಕೆ ನಿರ್ದೇಶಕ ನಾಗರಾಜ್ ಮಂಜುಳೆ ಸಹ ಶ್ಲಾಘನೆಗೆ ಒಳಗಾದರು. ದೇಶದ ಹಲವು ಭಾಷೆಗಳಲ್ಲಿ ಈ ಚಿತ್ರವನ್ನು ಮರು ನಿರ್ಮಿಸಲಾಯಿತು.

ಆದರೆ, ಸೈರಾಟ್‍ನಂತಹ ಒಂದೆರಡು ಚಿತ್ರಗಳು ಜಾತಿ ತಾರತಮ್ಯವನ್ನು ಅಂತರ್ಗತವಾಗಿಸಿಕೊಂಡಿರುವ ಭಾರತೀಯ ಸಮಾಜದ ಒಳಗಣ್ಣನ್ನು ತೆರೆಯಿಸಲು ಸಾಧ್ಯವೇ ಇಲ್ಲ. ಹರಿಯಾಣಾವೋ, ತಮಿಳುನಾಡೋ, ಆಂಧ್ರವೋ, ಕರ್ನಾಟಕವೋ….ಭಾರತದ ಯಾವುದೋ ಮೂಲೆಯ ಹಳ್ಳಿಯಲ್ಲಿ, ಪಟ್ಟಣಗಳಲ್ಲಿ ಇಂತಹ ಮರ್ಯಾದೆಗೇಡು ಹತ್ಯೆಗಳು ವರದಿಯಾಗುತ್ತಲೇ ಇರುತ್ತವೆ.

ಕಳೆದ ವಾರ ಗದಗ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ದೇವಪ್ಪ ಎಂಬಾತ ತನ್ನ ಸಹೋದರಿ ಮತ್ತು ಆಕೆಯ ಗಂಡನನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ. ಅಷ್ಟೇ ಅಲ್ಲ ಪೊಲೀಸ್ ಠಾಣೆಗೆ ಹೋಗಿ ಶರಣಾದ. ತನ್ನ ಅಕ್ಕ ಸೋಮವ್ವ ಮುಸ್ಲಿಂ ಧರ್ಮಕ್ಕೆ ಸೇರಿದ್ದ ಆಸೀಫ್ ಅಲಿಯನ್ನು ಮದುವೆಯಾಗಿದ್ದು ಆತನ ದ್ವೇಷಕ್ಕೆ ಕಾರಣವಾಗಿತ್ತು. 13 ವರ್ಷಗಳ ನಂತರ ಮನೆಗೆ ಬಂದಿದ್ದ ದಂಪತಿಯನ್ನು ಆತ ಹಿಂದೆ, ಮುಂದೆ ನೋಡದೇ ಕೊಲೆ ಮಾಡಿದ್ದ. ಅಂತರಧರ್ಮೀಯ ವಿವಾಹದ ಕಾರಣಕ್ಕೆ ಆದ ಕೊಲೆಯಲ್ಲ. ಆಕೆ ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಆ ಪ್ರಕರಣವನ್ನು ತಿರುಚಲಾಯಿತು.

ಹದಿನೈದು ದಿನಗಳ ಹಿಂದೆ ಆಂಧ್ರಪ್ರದೇಶದ ನಲಗೊಂಡ ಜಿಲ್ಲೆಯಲ್ಲಿ ನಡೆದ ಮತ್ತೊಂದು ಭೀಕರ ಪ್ರಕರಣದಲ್ಲಿ ದಲಿತ ಕ್ರೈಸ್ತ ಪಂಗಡಕ್ಕೆ ಸೇರಿದ ಪ್ರಣಯ್‍ಕುಮಾರ್ (23) ಎಂಬ ಯುವಕನನ್ನು ಆತನ ಗರ್ಭಿಣಿ ಪತ್ನಿ ಅಮೃತವರ್ಷಿಣಿ (21) ಎದುರು ಬಾಡಿಗೆ ಕೊಲೆಗಾರರು ಕೊಂದು ಹಾಕಿದರು. ವೈಶ್ಯ ಸಮುದಾಯಕ್ಕೆ ಸೇರಿದ್ದ ಅಮೃತಾಳ ತಂದೆ ಮಾರುತಿ ರಾವ್ ಕೋಟಿ ರೂಪಾಯಿಗೆ ಬಾಡಿಗೆ ಕೊಲೆಗಾರರನ್ನು ಗೊತ್ತು ಮಾಡಿದ್ದ. ಹೈಸ್ಕೂಲ್ ದಿನಗಳಿಂದಲೇ ಸ್ನೇಹಿತರಾಗಿದ್ದ ಪ್ರಣಯ್, ಅಮೃತಾ ಈ ವರ್ಷದ ಜನವರಿಯಲ್ಲಿ ಆಕೆಯ ಕುಟುಂಬದ ವಿರೋಧದ ನಡುವೆಯೂ ವಿವಾಹವಾಗಿದ್ದರು.

ಘಟನೆ ನಡೆದ ತಕ್ಷಣ ಆರೋಪಿಗಳನ್ನು ಬಂಧಿಸಲಾಯಿತು. ಆದರೆ, ಇದಕ್ಕಿಂತ ಕಳವಳಕಾರಿಯಾಗಿದ್ದು ಫೇಸ್‍ಬುಕ್‍ನಲ್ಲಿ ಕೆಲವರು ಮಾರುತಿರಾವ್ ಬೆಂಬಲಿಸಿ ಪೋಸ್ಟ್ ಹಾಕಿದರು. ಹೆಣ್ಣುಮಕ್ಕಳನ್ನು ಹೇರುವುದೇ ತಪ್ಪು, ಅಮೃತಾಳನ್ನು ಗರ್ಭದಲ್ಲೇ ಕೊಂದುಹಾಕಿಬಿಡಬೇಕಿತ್ತು ಎಂಬಂತಹ ವಿಕೃತ ಪೋಸ್ಟ್ಗಳು ಹರಿದಾಡಿದವು. ನ್ಯಾಯಕ್ಕಾಗಿ ಹೋರಾಡುತ್ತಿರುವ ಅಮೃತಾ ಈಗ ತನ್ನ ತಂದೆಗೆ ನೇಣು ಹಾಕಬೇಕು ಎಂದು ಒತ್ತಾಯಿಸುತ್ತಿದ್ದಾಳೆ.

ಎರಡು ವರ್ಷಗಳ ಹಿಂದೆ ತಮಿಳುನಾಡಿನ ತಿರೂಪುರ್ ಜಿಲ್ಲೆಯಲ್ಲಿ ತೇವರ್ ಜಾತಿಗೆ ಸೇರಿದ ಕೌಸಲ್ಯಾ ಎಂಬ ಯುವತಿಯನ್ನು ಮದುವೆಯಾಗಿದ್ದಕ್ಕಾಗಿ ದಲಿತ ಸಮುದಾಯಕ್ಕೆ ಸೇರಿದ ಶಂಕರನನ್ನು ರಸ್ತೆಯಲ್ಲಿ ಹಾಡುಹಗಲೇ ಕೊಚ್ಚಿ ಕೊಲ್ಲಲಾಗಿತ್ತು. ಇಲ್ಲಿಯೂ ಸಹ ಕೌಸಲ್ಯಾ ತಂದೆ, ತಾಯಿ, ಸಹೋದರ ಮಾವ ಕೊಲೆ ಸಂಚು ರೂಪಿಸಿದ್ದರು.

ತಮಿಳುನಾಡು ಒಂದರಲ್ಲೇ ವರ್ಷಕ್ಕೆ ಕನಿಷ್ಠ 80 ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿವೆ. ಹರಿಯಾಣಾ, ಉತ್ತರಪ್ರದೇಶದ ಕಾಪ್ ಪಂಚಾಯತಿಗಳು ಜಾತಿ ಕಟ್ಟುಪಾಡು ಉಲ್ಲಂಘಿಸಿದ್ದಕ್ಕಾಗಿ ನವಜೋಡಿಗಳ ಕೊಲೆಗೆ ಫತ್ವಾ ಹೊರಡಿಸುತ್ತವೆ. ಮಾಧ್ಯಮಗಳಲ್ಲಿ ಸುದ್ದಿಯಾಗುವ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಬಹುದು. ಆದರೆ, ಅಸಂಖ್ಯಾತ ಪ್ರಕರಣಗಳು ಹಳ್ಳಿಗಳ ಗಡಿ ದಾಟದೆಯೇ ಮುಚ್ಚಿಹೋಗುತ್ತವೆ.

ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಮನೆಯ ಜಗುಲಿ ದಾಟಿ ಹೋದ ಮಗಳ ಮೇಲೆ ಪಾಲಕರಿಗೆ, ಅದರಲ್ಲೂ ಅಪ್ಪ, ಚಿಕ್ಕಪ್ಪ, ಅಜ್ಜ, ಸಹೋದರ ಮಾವ ಇತ್ಯಾದಿ ಪುರುಷ ಸಂಬಂಧಿಗಳಿಗೆ ಅಗಾಧ ಕೋಪವಿರುತ್ತದೆ. ಪ್ರೀತಿಸುವುದೇ ಅಪರಾಧ, ಪ್ರೀತಿಸುವುದು ಅಶ್ಲೀಲ, ಇದು ಹದ್ದು ಮೀರಿದ ನಡವಳಿಕೆ ಎಂಬ ತೀರ್ಮಾನಕ್ಕೆ ಅವರು ಬಂದುಬಿಡುತ್ತಾರೆ.

ಪ್ರೀತಿಸಿದ ಜೋಡಿ ಒಂದೇ ಜಾತಿ ಅಥವಾ ಒಂದೇ ಜಾತಿಯ ವಿಭಿನ್ನ ಪಂಗಡಗಳಿಗೆ ಸೇರಿದಲ್ಲಿ ಸ್ವಲ್ಪ ರಿಯಾಯತಿ ತೋರಬಹುದೇನೋ. ಮಗಳು ಪ್ರೀತಿಸಿದ ಯುವಕ ದಲಿತನಾಗಿದ್ದರೆ, ಹಿಂದುಳಿದ ವರ್ಗಕ್ಕೆ ಸೇರಿದ್ದರೆ ಅಥವಾ ಮುಸ್ಲಿಂನಾಗಿದ್ದರೆ ಯುವತಿಯ ಕುಟುಂಬ ಸದಸ್ಯರಷ್ಟೇ ಅಲ್ಲ, ಆ ಜಾತಿಯ ಮುಖಂಡರು, ಧರ್ಮದ ಮುಖಂಡರು ಈ ಕೋಪ, ಅಸಮಾಧಾನಗಳಿಗೆ ತುಪ್ಪ ಸುರಿಯುತ್ತಾರೆ. ಯುವಕನನ್ನು ಕೊಲ್ಲುವ ಸಂಚು ಮಾಡುತ್ತಾರೆ.

ಯುವತಿಯೇನಾದರೂ ಕೆಳಜಾತಿಗೆ ಸೇರಿದ್ದಲ್ಲಿ ಆಕೆಯನ್ನು ಪತಿಯ ಪಾಲಕರು ಮನೆಗೆ ಸೇರಿಸಿಕೊಳ್ಳುವುದಿಲ್ಲ. ಸೊಸೆಯ ಸ್ಥಾನಮಾನ ನೀಡುವುದಿಲ್ಲ. ಆ ಕುಟುಂಬದ ಯಾವುದೇ ಸಮಾರಂಭಗಳಲ್ಲಿ ಅವಳು ಪಾಲ್ಗೊಳ್ಳುವಂತಿಲ್ಲ. ಎಷ್ಟೋ ಪ್ರಕರಣಗಳಲ್ಲಿ ಕೆಲ ವರ್ಷಗಳ ನಂತರ ಮಗನಿಗೆ ತಮ್ಮದೇ ಜಾತಿಯ ಹುಡುಗಿ ಜೊತೆ ಮದುವೆ ಮಾಡಿಸುವುದು, ಇಲ್ಲವೇ ಆತ ವಿಚ್ಛೇದನ ನೀಡುವಂತೆ ಮನಸ್ಸು ತಿರುಗಿಸುವುದೂ ಉಂಟು.

ಈ ಪ್ರಕರಣಗಳನ್ನು ಮರ್ಯಾದಾ ಹತ್ಯೆ ಅಥವಾ ಮರ್ಯಾದೆಗೇಡು ಹತ್ಯೆ ಎಂದು ವಿಶ್ಲೇಷಿಸುವುದಕ್ಕಿಂತ ಈ ಕೊಲೆಗಳ ಹಿಂದಿರುವ ವರ್ಗ ಅಸಮಾನತೆ, ಜಾತಿ ಸಂಘರ್ಷಗಳನ್ನು ಗಮನಿಸಬೇಕಿದೆ. ಮೇಲುಜಾತಿಗೆ ಸೇರಿದವರಿಗೆ ತಮ್ಮ ಜಾತಿಯ ಕುರಿತ ಅಭಿಮಾನ ತೀವ್ರವಾಗಿರುತ್ತದೆ. ಇದೇ ದುರಭಿಮಾನ ತಮ್ಮ ಮಕ್ಕಳನ್ನು, ಅವರು ಪ್ರೀತಿಸಿದ ಯುವಕ, ಯುವತಿಯನ್ನು ಕೊಲ್ಲುವಂತೆ ಪ್ರೇರೇಪಿಸುತ್ತದೆ.

ಭಾರತೀಯ ಸಮಾಜದಲ್ಲಿ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಬೇರುಬಿಟ್ಟಿರುವ ಜಾತಿ ವ್ಯವಸ್ಥೆಯನ್ನು ಅಷ್ಟು ಸುಲಭವಾಗಿ ಬದಲಿಸಲು ಸಾಧ್ಯವಿಲ್ಲ. ಎಷ್ಟೇ ಆಧುನಿಕರಾದರೂ, ಮಾಹಿತಿ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಸಹ ತಮ್ಮ ಜಾತಿಗೆ ಬಲವಾಗಿ ಅಂಟಿಕೊಂಡಿರುತ್ತಾರೆ. ಫೇಸ್‍ಬುಕ್, ವಾಟ್ಸ್ಯಾಪ್‍ಗಳಲ್ಲಿ ಆಯಾ ಜಾತಿ, ಸಮುದಾಯದ ಗುಂಪುಗಳನ್ನು ಸಹಜವಾಗಿ ಎಂಬಂತೆ ಕಟ್ಟಿಕೊಳ್ಳಲಾಗಿದೆ.

ಈ ಜಾತಿ ಅಸಮಾನತೆ ನಾಶವಾಗಬೇಕಾದರೆ ಎರಡೇ ಸಾಧ್ಯತೆಗಳಿವೆ. ನಗರ, ಪಟ್ಟಣಗಳನ್ನು ಆಕ್ರಮಿಸಿಕೊಳ್ಳುತ್ತಿರುವ ಪಾಶ್ಚಾತ್ಯ ಜೀವನಶೈಲಿ, ಸಮಾನ ಶಿಕ್ಷಣ ಅವಕಾಶ ಶತಮಾನಗಳ ನಂತರ ಈ ಅಂತರವನ್ನು ನಿವಾರಿಸಬೇಕು. ಇಲ್ಲವೇ ಮತ್ತೊಬ್ಬ ಬುದ್ದನೋ, ಬಸವನೋ ಈ ನೆಲದಲ್ಲಿ ಹುಟ್ಟಿ ಬರಬೇಕು.

-ಮಾಲತಿ ಭಟ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *