Uncategorizedಜಗದಗಲ

ಜಗದಗಲ / ಹೊಸ ಚಿಂತನೆಗೆ ಪ್ರೇರೇಪಿಸುವ ಮಹಿಳಾ ಸಮಾನತಾ ದಿನ

ಅಂತರರಾಷ್ಟ್ರೀಯ ಮಹಿಳಾ ದಿನದ ಹಾಗೆ ಆಗಸ್ಟ್ 26 ರ ಮಹಿಳಾ ಸಮಾನತಾ ದಿನ' ವೂ ಮುಂದಿನ ಹೋರಾಟದ ಗುರಿಗಳನ್ನು ನೆನಪಿಸುವ ದಿವಸ. ಜಗತ್ತಿನಾದ್ಯಂತ ಬಹುಪಾಲು ದೇಶಗಳಲ್ಲಿ ಈ ದಿನವನ್ನು ಸಮಾನತೆ ಸಾಧಿಸಲು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ನೆಲೆಗಳಲ್ಲಿ ನಡೆಸಬೇಕಾದ ಜಾಗೃತಿ ಕುರಿತ ಚಿಂತನೆಗೆ ಸಂಕೇತಿಸಲಾಗುತ್ತದೆ. 1920 ರ ಆಗಸ್ಟ್ 26 ರಂದು ಅಮೆರಿಕದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ಸಂದರ್ಭದ ಸ್ಮರಣೆಗೆಮಹಿಳಾ ಸಮಾನತಾ ದಿನ’ ಆರಂಭಿಸಿ ಈಗ ನೂರು ವರ್ಷಗಳಾಗಿವೆ. ಈಗ ಜಗತ್ತಿನ ಹೊಸ ಪರಿಸ್ಥಿತಿಯಲ್ಲಿ ಸಮಾನತೆಯ ಚಿಂತನೆ ಹೊಸ ಆಯಾಮಗಳಲ್ಲಿ ನಡೆಯಬೇಕಾಗಿದೆ.

ಮಹಿಳೆಯರನ್ನು ಕುಟುಂಬದ ಅಧಿಕಾರ ಮತ್ತು ಸಂಪತ್ತಿನ ಒಡೆತನದಿಂದ ದೂರವಿಟ್ಟ ಜಗತ್ತಿನ ಪೌರುಷಮಯ ಇತಿಹಾಸದಲ್ಲಿ, ನಾಗರಿಕತೆ ಬೆಳೆದ ಹಾಗೆ ಅವರನ್ನು ರಾಜಕಾರಣ ಮತ್ತು ಆಡಳಿತದಿಂದಲೂ ದೂರವಿಟ್ಟದ್ದು ಅಸಹಜವಲ್ಲ. ರಾಜಮಹಾರಾಜರ ಕಾಲದಲ್ಲಿ ಮಹಿಳೆಯರಿಗಿದ್ದ ಸ್ಥಾನಮಾನ, ಪ್ರಜಾಪ್ರಭುತ್ವದ ಬೆಳವಣಿಗೆಯ ಉದ್ದಕ್ಕೂ ಬದಲಾಗಲಿಲ್ಲ. ಆದ್ದರಿಂದ ಅಧಿಕಾರ ಮತ್ತು ಆಡಳಿತವನ್ನು ನಿರ್ಧರಿಸುವ ಚುನಾವಣೆ, ಮತದಾನ ಇವುಗಳಲ್ಲೂ ಅವರಿಗೆ ಪ್ರವೇಶವೇ ಇರಲಿಲ್ಲ. ಆದರೆ ಮಹಿಳೆಯರಲ್ಲಿ ಜಾಗೃತಿ ಮೂಡುತ್ತ ಹೋರಾಟಗಳು ಬೆಳೆದ ಹಾಗೆ, ಮತದಾನದ ಹಕ್ಕು ಪಡೆಯುವುದು ಸಮಾನತೆಯ ಮೊದಲ ಮೆಟ್ಟಿಲು ಎನ್ನುವುದು ಅರಿವಾಯಿತು. ಹಾಗೆ ಅಮೆರಿಕದಲ್ಲಿ ನಡೆದ ಮಹಿಳಾ ಹಕ್ಕುಗಳ ಚಳವಳಿಯು 1920 ರಲ್ಲಿ ಸಂವಿಧಾನದ 19 ನೇ ತಿದ್ದುಪಡಿಗೆ ದಾರಿ ಮಾಡಿತು. ಆ ಮೂಲಕ ಅಮೆರಿಕದ ಮಹಿಳೆಯರಿಗೆ ಮತದಾನದ ಸಾಂವಿಧಾನಿಕ ಹಕ್ಕು ದೊರೆತದ್ದು, ಆ ದೇಶದ ಇತಿಹಾಸದಲ್ಲಿ ಒಂದು ಮಹತ್ವದ ಘಟನೆ.

ಲಿಂಗಾಧಾರಿತ ತಾರತಮ್ಯ, ಹಿಂಸೆ, ದೌರ್ಜನ್ಯ ಇವುಗಳೇ ತುಂಬಿದ್ದ 19 ನೇ ಶತಮಾನದ ಆರಂಭದ ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅಮೆರಿಕದ ಮಹಿಳೆಯರಿಗೆ ಆಸ್ತಿ ಹಕ್ಕು ಇರಲಿಲ್ಲ. ಕೆಲಸದಲ್ಲಿ ಅವರಿಗೆ ಗಂಡಸಿನ ಸಂಬಳದ ಅರ್ಧ ಮಾತ್ರ ಸಿಗುತ್ತಿತ್ತು. ರಾಜಕೀಯ ಹಕ್ಕು ಮತ್ತು ಪ್ರಾತಿನಿಧ್ಯದ ಕನಸೂ ಕಾಣುವಂತಿರಲಿಲ್ಲ. ಯೂರೋಪಿನ ಕೆಲವು ದೇಶಗಳಲ್ಲೂ ಆಗ ಮತದಾನದ ಹಕ್ಕು ಪಡೆಯಲು ಚಳವಳಿ ನಡೆಯುತ್ತಿದ್ದು ಕೆಲವೆಡೆ ಅದಕ್ಕೆ ಗೆಲುವು ಸಿಕ್ಕಿತ್ತು. ಅಮೆರಿಕದಲ್ಲೂ 1878 ರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡುವ ಮಸೂದೆಯ ಮಂಡನೆ ಆದರೂ ಅದು ಬೆಂಬಲ ಸಿಗದೆ ಬಿದ್ದು ಹೋಯಿತು. ಮೊದಲ ಮಹಾಯುದ್ಧದ ನಂತರ ಅಮೆರಿಕ ಸೇರಿ ಇನ್ನೂ ಕೆಲವು ದೇಶಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕಿಗೆ ಒತ್ತಾಯ ಹೆಚ್ಚಿತು. ಕೊನೆಗೆ 1920 ರಲ್ಲಿ ಅಮೆರಿಕದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ದಕ್ಕಿತು.

1920 ರ ಆಗಸ್ಟ್ 26 ರ ಈ ಐತಿಹಾಸಿಕ ಸಂದರ್ಭದ ಸುವರ್ಣ ಮಹೋತ್ಸವದಲ್ಲಿ ಆಗಸ್ಟ್ 26 ದಿನವನ್ನು ಮಹಿಳಾ ಸಮಾನತಾ ದಿನ' ಎಂದು ಘೋಷಿಸಲಾಯಿತು. ಅಂದಿನಿಂದ ಪ್ರತಿವರ್ಷ ಆ ದಿನದಂದು ಮಹಿಳೆಯರಿಗೆ ಬದುಕಿಗೆ ಅರ್ಥ ತುಂಬುವ ಏನನ್ನಾದರೂ ಹೊಸತನ್ನು ಹೇಳಲಾಗುತ್ತದೆ. ಈ ದಿನವನ್ನು ಜಗತ್ತಿನಾದ್ಯಂತ`ಮಹಿಳಾ ಸಮಾನತಾ ದಿನ’ ಎಂದು ಆಚರಿಸಲಾಗುತ್ತದೆ. ಮನೆ, ಉದ್ಯೋಗಸ್ಥಳ, ಹೊರಗಿನ ಪರಿಸರ ಸೇರಿ ಇಡೀ ಜಗತ್ತು ಮಹಿಳೆಯರ ಪಾಲಿಗೆ ಸುಭದ್ರ ನೆಲೆ ಆಗಿರಲಿ ಎಂದು ಆಶಿಸಲಾಗುತ್ತದೆ. ಈ ದಿನವನ್ನು ಮಹಿಳಾ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ದಿನ ಎಂದು ಭಾವಿಸಿ ಹೊಸ ಚಿಂತನೆಗಳನ್ನು ಪ್ರತಿಪಾದಿಸಲಾಗುತ್ತದೆ, ಹೊಸ ಕ್ರಮಗಳನ್ನು ಪರಿಚಯಿಸಲಾಗುತ್ತದೆ.

`ಮಹಿಳಾ ಸಮಾನತಾ ದಿನ’ ದ ಇನ್ನೊಂದು ವೈಶಿಷ್ಟ್ಯ ಎಂದರೆ ಅಂದು ಮಹಿಳಾ ಸಮಾನತೆಯ ಸಂಕೇತವಾಗಿ ನೇರಳೆ (ಪರ್ಪಲ್) ಬಣ್ಣಕ್ಕೆ ಸಿಗುವ ಪ್ರಾಮುಖ್ಯ. ಮಹಿಳೆಗೆ ನ್ಯಾಯ, ಘನತೆ ದೊರಕಲಿ ಎಂದು ಕಳೆದ ಶತಮಾನದಲ್ಲೇ ಇಂಗ್ಲೆಂಡ್ ಮತ್ತಿತರ ಕಡೆಗಳಲ್ಲಿ ಆ ಬಣ್ಣವನ್ನು ಸಂಕೇತ ಮಾಡಲಾಗಿತ್ತು. ಈಗ ನೇರಳೆ ಬಣ್ಣದ ರಿಸ್ಟ್ ಬ್ಯಾಂಡ್, ಅಂಗಿ, ರಿಬ್ಬನ್, ಸ್ಕಾರ್ಫ್ ಮುಂತಾದುವು ಈ ದಿನ ಎಲ್ಲೆಡೆ ಕಾಣುತ್ತವೆ. ಅದಕ್ಕಿಂತ ಸಮಾನತೆಯ ಪರಿಕಲ್ಪನೆಯ ಚಿಂತನ- ಮಂಥನ ಹಲವು ರೀತಿಗಳಲ್ಲಿ ನಡೆಯುತ್ತವೆ. ಈಗ ಕೊರೋನ ಕಾಲದಲ್ಲಿ ಮತ್ತು ಕೊರೋನೋತ್ತರ ಕಾಲದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಂಡಿತವಾಗಿ ಉಳಿಸುವ ಮತ್ತು ಬೆಳೆಸುವ ಹೊಸ ಕ್ರಮಗಳ ಬಗ್ಗೆ ಚಿಂತನೆ ನಡೆಯುವುದು ಅಗತ್ಯ ಎಂಬುದೂ ಅರಿವಾಗಿದೆ. (ವಿವಿಧ ಮೂಲಗಳಿಂದ)

  • ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *