ಜಗದಗಲ / ಸೆರೀನಾ ಸಾಧನೆಗೆ ಸಂತೋಷ ಪಡೋಣ!
ಅಮ್ಮನಾದ ಮೂರು ವರ್ಷಗಳ ನಂತರ ಅದ್ಭುತ ಆಟಗಾರ್ತಿ ಸೆರೀನಾ ವಿಲಿಯಮ್ಸ್ ನ್ಯೂಜಿಲೆಂಡ್ ದೇಶದ ಆಕ್ಲೆಂಡ್‍ನಲ್ಲಿ ನಡೆದ ಟೆನಿಸ್ ಪಂದ್ಯಾವಳಿಯಲ್ಲಿ ಅಗ್ರಪಟ್ಟ ಗಳಿಸಿದಾಗ ಟೆನಿಸ್‍ಲೋಕ ಅಚ್ಚರಿಗೊಂಡಿತು. ಗೆದ್ದಿದ್ದಕ್ಕೆ ಮತ್ತು ಗೆಲುವಿನಿಂದ ಗಳಿಸಿದ ಹಣವನ್ನೆಲ್ಲ ಆಸ್ಟ್ರೇಲಿಯದ ಕಾಳ್ಗಿಚ್ಚು ಪರಿಹಾರ ನಿಧಿಗೆ ಕೊಟ್ಟಿದ್ದಕ್ಕೆ ಅಪಾರ ಪ್ರಶಂಸೆಯ ಜೊತೆಗೆ, `ಅಮ್ಮನ ಕರ್ತವ್ಯ’ದ ಬಗ್ಗೆ ಪುರುಷೋಪದೇಶವೂ ಕೇಳಿಬಂದ ವಿಪರ್ಯಾಸಕ್ಕೆ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ.
ಅಮ್ಮನಾದ ಮಾತ್ರಕ್ಕೆ ಟೆನಿಸ್ ಆಟ ಆಡುವುದು ಬಿಡಬೇಕಿಲ್ಲ ಎನ್ನುವುದು ಅಸಾಧಾರಣ ಆಟಗಾರ್ತಿ ಸೆರೀನಾ ವಿಲಿಯಮ್ಸ್ ದೃಢ ನಂಬಿಕೆ. ಇದುವರೆಗೆ ಆಡಿರುವ 33 ಗ್ರ್ಯಾನ್ ಸ್ಲಾಮ್ ಪಂದ್ಯಾವಳಿಗಳಲ್ಲಿ 23 ಪ್ರಶಸ್ತಿಗಳನ್ನು ಗೆದ್ದಿರುವ, 10 ಬಾರಿ ರನ್ನರ್ ಅಪ್ ಆಗಿರುವ ಸೆರೀನಾಗೆ ಇನ್ನಷ್ಟು ಗೆದ್ದು, ಮಾರ್ಗರೆಟ್ ಕೋರ್ಟ್ ದಾಖಲೆಯನ್ನು ಸರಿಗಟ್ಟುವ ಮತ್ತು ಮೀರಿಸುವ ಗುರಿ ಇದೆ. (ಟೆನಿಸ್ ಜಗತ್ತಿನ ನಾಲ್ಕು ಮೇಜರ್- ಗ್ರ್ಯಾನ್ ಸ್ಲಾಮ್ ಪಂದ್ಯಾವಳಿಗಳೆಂದರೆ- ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಮತ್ತು ಯುಎಸ್ ಓಪನ್ ಪಂದ್ಯಾವಳಿಗಳು.) ಇವಲ್ಲದೆ ಎಟಿಪಿ/ಡಬ್ಲ್ಯುಟಿಎ ಎಂದು ಹಲವಾರು ದೇಶಗಳಲ್ಲಿ ನಡೆಯುವ ಪ್ರಮುಖ ಟೆನಿಸ್ ಚಾಂಪಿಯನ್‍ಶಿಪ್‍ಗಳಲ್ಲೂ ಸೆರೀನಾ ವಿಕ್ರಮ ಸ್ಥಾಪಿಸಿರುವ ಆಟಗಾರ್ತಿ. ಮೊನ್ನೆ ಭಾನುವಾರ ನ್ಯೂಜಿಲೆಂಡ್‍ನ ಆಕ್ಲೆಂಡ್‍ನಲ್ಲಿ ನಡೆದ ಎಎಸ್‍ಬಿ ಕ್ಲಾಸಿಕ್ ಪಂದ್ಯಾವಳಿಯಲ್ಲಿ ಸೆರೀನಾ ಕಪ್ ಗೆದ್ದದ್ದು ಮುಂದಿನ ಗೆಲುವುಗಳಿಗೆ ಮುನ್ನುಡಿ ಅನ್ನಿಸಿತು. ಇದು ಆಕೆಯ ಒಟ್ಟಾರೆ ಟೆನಿಸ್ ಜೀವನದಲ್ಲಿ 73 ನೆಯ ಗೆಲುವು!
ಪಂದ್ಯ ಮುಗಿದು ಎದುರಾಳಿ ಜೆಸ್ಸಿಕ ಪೆಗುಲ ಮೇಲೆ ವಿಜಯ ಸಾಧಿಸಿದ ಸೆರೀನಾ ಬಹುಮಾನ ಸ್ವೀಕರಿಸುವ ಗಳಿಗೆಯಲ್ಲಿ ಅದೇಕೋ ಮೈದಾನದ ಅಂಚಿಗೆ ಹೋದಾಗ ವಿಪರೀತ ಸಂಭ್ರಮ ಪಡುತ್ತಿದ್ದ ಪ್ರೇಕ್ಷಕ ವರ್ಗಕ್ಕೆ ಆಶ್ಚರ್ಯ. ಅಲ್ಲಿ ಖುಷಿ ಪಡುತ್ತಾ ನಿಂತಿದ್ದ ಬಾಳಸಂಗಾತಿ ಅಲೆಕ್ಸಿಸ್ ಒಹಾನಿಯನ್ ತೋಳಿನಲ್ಲಿದ್ದ ಪುಟಾಣಿ ಮಗಳು ಅಲೆಕ್ಸಿಸ್ ಒಲಿಂಪಿಯಾಳನ್ನು ಎತ್ತಿಕೊಂಡು ಬಂದು, ಅವಳೊಂದಿಗೇ ಬಹುಮಾನದ ದೊಡ್ಡ ಕಪ್ ಎತ್ತಿಕೊಂಡಾಗ ಕ್ರೀಡಾಂಗಣ ಚಪ್ಪಾಳೆಗೆ ಬಿರಿದುಹೋಯಿತು. “ನನಗೆ ಸೂಪರ್ ಹೆಮ್ಮೆ” ಎಂದ ಸೆರೀನಾ ಮಾತಿಗೆ ಇದ್ದದ್ದು ಒಂದೇ ಅರ್ಥವಲ್ಲ. 2017 ರಲ್ಲಿ ಒಲಿಂಪಿಯಾ ಹುಟ್ಟಿದ ಮೇಲೆ ಗೆದ್ದ ಮೊದಲ ಕಪ್ ಜೊತೆ ಅವಳಿರದಿದ್ದರೆ ಹೇಗೆ? ಒಂದು ತೋಳಿನಲ್ಲಿ ಮಗು, ಇನ್ನೊಂದರಲ್ಲಿ ಕಪ್ ಹಿಡಿದ ಸೆರೀನಾ ಚಿತ್ರ, ಹೆಣ್ಣುಸಂಕುಲಕ್ಕೆ ದೊಡ್ಡ ಸಂದೇಶವನ್ನೇ ಕೊಟ್ಟಿತು. ಮದುವೆ, ಸಂಸಾರ, ಬಸಿರು, ಹೆರಿಗೆ, ತಾಯ್ತನ ಯಾವುದೂ ಮುನ್ನಡೆಗೆ ತಡೆಗಳಲ್ಲ ಎಂದು ಹೇಳಿತು.
ಸೆರೀನಾ ಬಗ್ಗೆ ಇನ್ನಷ್ಟು ಅಭಿಮಾನ ಉಕ್ಕಲು ಇನ್ನೂ ಒಂದು ಕಾರಣವಿತ್ತು. ಈ ಪಂದ್ಯಾವಳಿಯಲ್ಲಿ ಕಪ್ ಜೊತೆಗೆ ಬಂದ ಅಷ್ಟೂ ಹಣವನ್ನು ಈಗ ಆಸ್ಟ್ರೇಲಿಯ ದೇಶದಲ್ಲಿ ಎದ್ದಿರುವ ಭೀಕರ ಕಾಳ್ಗಿಚ್ಚಿನಿಂದ ಆಗಿರುವ ಅನಾಹುತದ ಪರಿಹಾರ ನಿಧಿಗೆ ಕೊಡುತ್ತೇನೆ ಎಂದು ಘೋಷಿಸಿದಾಗ, ಮೆಚ್ಚುಗೆ ಮೇರೆ ಮೀರಿ ಹರಿಯಿತು. “ನಾನು ಇಪ್ಪತ್ತು ವರ್ಷಗಳಿಂದ ಆಸ್ಟ್ರೇಲಿಯಕ್ಕೆ ಹೋಗಿ ಟೆನಿಸ್ ಆಡುತ್ತಿದ್ದೇನೆ. ಕೋಟ್ಯಂತರ ಪ್ರಾಣಿಗಳು ಸತ್ತಿವೆ. ಎಷ್ಟೊಂದು ಜನರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ನನಗೆ ಅಲ್ಲಿನ ದುರಂತದಿಂದ ತುಂಬಾ ದುಃಖವಾಗುತ್ತಿದೆ” ಎಂದದ್ದಲ್ಲದೆ, ತನ್ನ ಕೆಲವು ಉಡುಪು, ಕ್ರೀಡಾ ಸಾಮಗ್ರಿಯನ್ನೂ ಹರಾಜಿಗೆ ಕೊಟ್ಟು ಅದರಿಂದ ಬಂದ ಹಣವನ್ನೂ ಪರಿಹಾರ ನಿಧಿಗೆ ಕೊಟ್ಟಾಗ, ಅನೇಕರಿಗೆ ಅದು ಪ್ರೇರಣೆ ನೀಡಿತು.
ಆದರೆ ಇಂಥವಕ್ಕೆಲ್ಲ ಬರೀ ಮೆಚ್ಚುಗೆ ಮಾತ್ರ ಹರಿದರೆ ಹೇಗೆ? ಅಮ್ಮನಾದ ಮೇಲೆ ಆಟದ ಅಂಗಳಕ್ಕೆ ಇಳಿದದ್ದನ್ನೇ ಸಹಿಸದ ಮನಸ್ಸುಗಳು “ಹೆಂಗಸಿನ ಮುಖ್ಯವಾದ ಕೆಲಸ ಏನು? ಅಮ್ಮನಾದ ಮೇಲೆ ಮನೆಯಲ್ಲಿದ್ದು ಮಕ್ಕಳನ್ನು ಸಾಕುವುದಲ್ಲವೇ?” ಎಂದು ಬೊಬ್ಬಿರಿಯಿತು. “ತಾಯಿಯಾದ ಮೇಲೆ ಪಂದ್ಯ ಗೆದ್ದ ಇವರನ್ನೆಲ್ಲ ರೋಲ್ ಮಾಡೆಲ್‍ಗಳಾಗಿ ಮೆರೆಸುವುದು ಬೇಡ. ಪಾಪ, ಮಗು ಒಲಿಂಪಿಯಾಳನ್ನು ರಕ್ಷಿಸಬೇಕು, ಅವಳನ್ನು ಯಾರು ನೋಡಿಕೊಳ್ಳುತ್ತಾರೆ” ಎಂದೆಲ್ಲ ನ್ಯೂಜಿಲೆಂಡ್‍ನ ಹಿರಿಯ ಕ್ರೀಡಾ ಅಂಕಣಕಾರ ಮಾರ್ಕ್ ರೀಸನ್ ಅನ್ನುವ ಪುರುಷ ಅಹಂಕಾರಿ ಕಾರಣವಿಲ್ಲದೆ ಕಾರಿಕೊಂಡ. ಸೆರೀನಾಳನ್ನು “ದ ಒನ್ ದ ಓನ್ಲಿ” ಎಂದೆಲ್ಲ ಬಹುಮಾನ ಸ್ವೀಕರಿಸಲು ಆಯೋಜಕರು ಕರೆದದ್ದರ ಬಗ್ಗೆ ಅಸಹನೆಯಿಂದ ವಾಂತಿ ಮಾಡಿಕೊಂಡ. ಟ್ರಾಲೋದ್ಯಮದಲ್ಲೇ ನಿರತರಾದ ಟ್ರಾಲಿಗರು ಸಾಮಾಜಿಕ ಮಾಧ್ಯಮದಲ್ಲಿ ಅವನಿಗೆ ಬೆಂಬಲ ಕೊಟ್ಟರು. ಒಟ್ಟಾರೆ ಇದು ಎಲ್ಲ ಸಮಾಜಗಳಲ್ಲಿ ಹೆಚ್ಚುತ್ತಿರುವ ಹೆಣ್ಣನ್ನು ಕುರಿತ ಅಸಹನೆ, ಸಮಾನತೆ ಕುರಿತ ಆಕ್ರೋಶ, ಪುರುಷ ಪ್ರಾಧಾನ್ಯ ಚಿಂತನೆ ಎಲ್ಲದಕ್ಕೂ ಕನ್ನಡಿ ಹಿಡಿಯಿತು.
ಆದರೆ ಇಂಥ ದರಿದ್ರ ಮನೋಭಾವಕ್ಕೆ ವಿರೋಧವೂ ಸಾಕಷ್ಟು ವ್ಯಕ್ತವಾಯಿತು. ಪತ್ರಿಕೆಗಳಲ್ಲಿ ಇದನ್ನು ವಿರೋಧಿಸುವ ಬರಹಗಳು ಬಂದವು. `ದ ಸ್ಪಿನ್ ಆಫ್’ ಎಂಬ ಪತ್ರಿಕೆಯಲ್ಲಿ ಮೊಡೈನ್ ಚಾಪ್ಮನ್ ಎಂಬ ಹಿರಿಯ ಬರಹಗಾರ್ತಿ ಮಾರ್ಕ್ ರೀಸನ್ ಅಂಕಣಕ್ಕೆ ಸರಿಯಾಗಿ ಬಾರಿಸಿ ಬರೆದದ್ದು ಮುಖ್ಯವಾಯಿತು. ಹರಿತವಾದ ವ್ಯಂಗ್ಯದ ಮಾತುಗಳಿಂದ ಅವರ ನಿಲುವುಗಳನ್ನು ಸೀಳಿ ಹಾಕಿದಳು. “ಮಕ್ಕಳನ್ನು ಸಾಕುವುದು ಏನೆಂಬುದೇ ನಿನಗೆ ಗೊತ್ತಿಲ್ಲ ಕಣಯ್ಯ. ಅದರ ಬಗ್ಗೆ ಉಪದೇಶ ಮಾಡಬೇಡ. ಮೊದಲು ಅದನ್ನೆಲ್ಲ ಸರಿಯಾಗಿ ತಿಳಿದುಕೋ. ಮ್ಯಾರಥಾನ್‍ಗೆ ಹೋಗುವ ಮೊದಲು ವಾಕಿಂಗ್ ಮಾಡುವುದು ಕಲಿ” ಎಂದು ರೀಸನ್‍ನ ಅಹಂಕಾರಕ್ಕೆ ಚುಚ್ಚಿದಳು.
ಜಗತ್ತಿನಲ್ಲಿ ಎಲ್ಲೇ ಆಗಲಿ, ಹೆಣ್ಣನ್ನು ಹೀಗಳೆದಾಗ ಅದಕ್ಕೆ ಹುರುಪಿನ ಬೆಂಬಲ ಸಿಗುವುದು ಸಾಮಾನ್ಯ. ಆದರೆ ಹೆಂಗಸರು, ಗಂಡಸರು ಯಾರಾದರೂ ಆಗಿರಲಿ ಸಮಾನತೆಯನ್ನು ನಂಬಿದವರು ಅಂಥ ಹೀಗಳಿಕೆಯನ್ನು ಕಠಿಣ ಮಾತುಗಳಲ್ಲಿ ಖಂಡಿಸದಿದ್ದರೆ ಅನ್ಯಾಯ ಹೆಚ್ಚುತ್ತದೆ. ಮುಖ್ಯವಾಗಿ ಬೆಳೆಯುವ ಮಕ್ಕಳ ಎದೆಯಲ್ಲಿ ಸಮಾನತೆಯ ಬೀಜ ಬಿತ್ತುವುದು ಎಲ್ಲಕ್ಕಿಂತ ಮುಖ್ಯ. ಆ ಹಿನ್ನೆಲೆಯಲ್ಲಿ ಸೆರೀನಾಳನ್ನು ಸಂತೋಷದಿಂದ ಬೆಂಬಲಿಸೋಣ, ಬೆಂಬಲಿಸಲು ಕಲಿಸೋಣ. (ವಿವಿಧ ಮೂಲಗಳಿಂದ)
-ಹಿತೈಷಿಣಿ ಬಳಗ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.