Uncategorizedಜಗದಗಲ

ಜಗದಗಲ/ ಯುದ್ಧದ ಕರಿನೆರಳಿನಲ್ಲಿ ಮಹಿಳಾ ದಿನಾಚರಣೆ

ಕಳೆದ ಎರಡು ವರ್ಷಗಳಿಂದ ಕೊರೋನ ಸಂಕಷ್ಟದಲ್ಲಿ ನರಳುತ್ತಿದ್ದ ಬದುಕಿನಲ್ಲಿ ವಿಶ್ವದ ಮಹಿಳಾ ಸಂಕುಲ ಹಲವು ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಈಗ ಅದರ ಜೊತೆಗೆ ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ, ಆ ಪ್ರದೇಶದ ಎಲ್ಲ ದೇಶಗಳ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿಶೇಷವಾಗಿ ಇನ್ನಿಲ್ಲದ ಜೀವ ಭಯ ಮತ್ತು ದುರ್ಭರತೆಯ ಮಳೆಗರೆದಿದೆ. ಅವರಿಗೆ ಅನುಕಂಪವನ್ನು, ಬೆಂಬಲವನ್ನು ಸೂಚಿಸುತ್ತಾ ಈ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಬೇಕಾಗಿದೆ.

`ಭೇದಭಾವವನ್ನು ಬಡಿದಟ್ಟಿ’ (Beat the Bias)ಎಂಬರ್ಥದ ಆಶಯದೊಂದಿಗೆ ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ. ಇದರೊಂದಿಗೆಸುಸ್ಥಿರ ನಾಳೆಗಾಗಿ ಇಂದು ಲಿಂಗಸಮಾನತೆ’ ಎಂಬ ಘೋಷವಾಕ್ಯವೂ ಅಂಗೀಕೃತವಾಗಿ ಪ್ರಚಾರ ಪಡೆದಿದೆ. ಒಂದಿಡೀ ವರ್ಷ ಮತ್ತು ಇಡೀ ಹೋರಾಟದ ಉದ್ದಕ್ಕೂ ಇವುಗಳನ್ನು ನೆನಪಿಸುವ ಕಾರ್ಯಕ್ರಮಗಳು, ಯೋಜನೆಗಳು, ಉಪಕ್ರಮಗಳನ್ನು ಜಗತ್ತಿನ ಎಲ್ಲ ದೇಶಗಳೂ ರೂಪಿಸಬೇಕು ಎನ್ನುವುದು ಇದರ ಉದ್ದೇಶ. ಇಪ್ಪತ್ತೊಂದನೇ ಶತಮಾನದ ಬಹುಮುಖ್ಯ ಸವಾಲು ಎಂದು ಪರಿಗಣಿತವಾದ ಹವಾಮಾನ ಬಿಕ್ಕಟ್ಟು ನಿವಾರಣೆಗೆ ಚಿಂತಿಸುವುದು ಮತ್ತು ದುಡಿಯುವುದು ಮಾನವ ಜನಾಂಗದ ಒಟ್ಟಾರೆ ಜವಾಬ್ದಾರಿಯಾಗಿದೆ. ಈಗ ಈ ನಿಟ್ಟಿನ ಹೋರಾಟಗಳಲ್ಲಿ ಬದ್ಧತೆಯಿಂದ ಶ್ರಮಿಸುತ್ತಿರುವ ಮಹಿಳೆಯರು, ಯುವತಿಯರು ಮತ್ತು ಬಾಲಕಿಯರಿಗೆ ಈ ದಿನ ವಿಶೇಷ ಪ್ರಶಂಸೆ ಸಲ್ಲುತ್ತಿದೆ.

ಮಾನವ ಜನಾಂಗದ ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆಯನ್ನು ಸಾಧಿಸುವುದು ಅತ್ಯಗತ್ಯ; ಆದರೆ ಇದನ್ನು ಸಾಧಿಸಲು ಮಹಿಳೆಯರನ್ನು ಕುರಿತು ಎಲ್ಲೆಡೆ ಇರುವ ಭೇದಭಾವ, ತಾರತಮ್ಯ, ಪಕ್ಷಪಾತ ಮುಂತಾದ ನಕಾರಾತ್ಮಕ ಭಾವನೆಗಳು ಅಡ್ಡಿಬರುತ್ತವೆ. ಮಹಿಳೆಯರನ್ನು ಇವುಗಳನ್ನು ದಿಟ್ಟತನದಿಂದ ಎದುರಿಸಿ ಜನಮನದಿಂದ ಹೊರದೂಡಬೇಕು ಎಂದು ನೀಡಿರುವ ಜಾಗತಿಕ ಕರೆ ಬಹಳ ಅರ್ಥಪೂರ್ಣವಾಗಿದೆ.

ಮಹಿಳೆಯರ ಪಾಲಿಗೆ ಸಮಾನತೆ ಮತ್ತು ಸಬಲೀಕರಣ ಎರಡೂ ಬಹಳ ಮುಖ್ಯ ಎಂದು ಸರಿಯಾಗಿಯೇ ನಂಬಿರುವ ವಿಶ್ವಸಂಸ್ಥೆ, ಈ ವಿಚಾರದಲ್ಲಿ ಆಗಿರುವ ಸಾಧನೆಯನ್ನು ಸ್ಮರಿಸಿಕೊಳ್ಳುವ ಮತ್ತು ಆಗಬೇಕಾಗಿರುವುದನ್ನು ದೃಢಪಡಿಸಿಕೊಳ್ಳುವ ದಿನ ಇದಾಗಿದೆ ಎಂದು ಆಶಿಸಿದೆ. ಕ್ಲಾರಾ ಜೆಟ್‍ಕಿನ್ ಅವರಿಂದ ಹಿಡಿದು ಅನೇಕ ಮಹಿಳೆಯರ ಹೋರಾಟ ಜಾಗತಿಕವಾಗಿ ಸ್ತ್ರೀಪುರುಷರಿಬ್ಬರಲ್ಲೂ ಹೊಸ ಅರಿವನ್ನು ಮೂಡಿಸಿದೆ, ಮೂಡಿಸುತ್ತಿದೆ. ಇದನ್ನು ಮುಂದುವರೆಸಿ ಮುಂದಿನ ತಲೆಮಾರುಗಳಲ್ಲಿ ತಾರತಮ್ಯವನ್ನು ಅಳಿಸಿಹಾಕುವ ಮಹೋದ್ದೇಶ ಈ ಆಚರಣೆಗಿದೆ.

1917 ರಲ್ಲಿ ರಷ್ಯಾದ ಮಹಿಳೆಯರು `ಆಹಾರ ಮತ್ತು ಶಾಂತಿ’ (Bread and Peace) ಘೋಷಣೆಯೊಂದಿಗೆ ಪ್ರತಿಭಟನೆ ಮತ್ತು ಮುಷ್ಕರಗಳನ್ನು ನಡೆಸಿದ್ದು ಚರಿತ್ರಾರ್ಹವಾಗಿದೆ. ಈ ಆಂದೋಲನವು ಅವರಿಗೆ ಮತದಾನದ ಹಕ್ಕನ್ನೂ ತಂದುಕೊಡುವಷ್ಟು ಸಫಲವಾಗಿತ್ತು. ಇಂದು ರಷ್ಯಾದ ವ್ಲಾದಿಮಿರ್ ಪುಟಿನ್ ಆಡಳಿತವು ಉಕ್ರೇನ್ ಮೇಲೆ ನಡೆಸುತ್ತಿರುವ ಅಮಾನುಷ ದಾಳಿ, ಅಮಾಯಕರ ಬದುಕನ್ನು ನುಚ್ಚುನೂರು ಮಾಡುತ್ತಿದೆ. ಯಾವ ದೇಶದಲ್ಲಿ ಯುದ್ಧವಾದರೂ ಅದರ ವ್ಯತಿರಿಕ್ತ ಪರಿಣಾಮಗಳ ಹೆಚ್ಚಿನ ಭಾರ ಮಹಿಳೆಯರ ಮೇಲೇ ಎರಗುತ್ತದೆ ಎನ್ನುವುದನ್ನು ಇತಿಹಾಸ ದೃಢಪಡಿಸಿದೆ.ಯುದ್ಧ ಮತ್ತು ಮಹಿಳೆ’ ಎನ್ನುವ ವಿಷಯವೇ ಈ ವರ್ಷ ಜಗತ್ತಿನಾದ್ಯಂತ ಹೆಚ್ಚು ಚರ್ಚೆಗೆ ಒಳಪಡುವ ಸಂಭವ ಇದ್ದೇ ಇದೆ.

ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ’ವು ಕೂಡ ಮಾರ್ಚ್ 6 ರಂದು `ಸಮಕಾಲೀನ ಸಾಮಾಜಿಕ ಅಧ್ಯಯನ ಕೇಂದ್ರ’ದ ಜೊತೆಗೂಡಿ ಯುದ್ಧದ ಪರಿಣಾಮಗಳನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಚಿತ್ರಿಸುವ ಸನ್‍ಫ್ಲವರ್’ ಸಿನಿಮಾ ಪ್ರದರ್ಶನವನ್ನು ಏರ್ಪಡಿಸಿತ್ತು. ಮಾರ್ಚ್ 8 ರಂದು `ಯುದ್ಧ ಮತ್ತು ಮಹಿಳೆ’ ವಿಷಯ ಕುರಿತ ಸಂವಾದ, ಕವನ ವಾಚನ ಮುಂತಾದ ಕಾರ್ಯಕ್ರಮ ಬೆಂಗಳೂರಿನಲ್ಲಿ ಜರುಗಲಿದೆ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *