ಜಗದಗಲ/ ಮೊಕಾದಿಶಾ: ಹೊಸ ನೆಲ, ಹೊಸ ಬೇರು – ಜಯಶ್ರೀ ದೇಶಪಾಂಡೆ

               

ಎಂಬತ್ತರ ದಶಕದ ರಾಜಕೀಯ ಕ್ಷೋಭೆ ಹಿನ್ನೆಲೆಯಲ್ಲಿ ಆಫಘನ್ ಹೆಣ್ಣುಮಕ್ಕಳ ಬದುಕು ನರಕಕ್ಕಿಂತ ಹೀನಗತಿ ಕಂಡಿತು. ಧರ್ಮದ ಹೆಸರಿನಲ್ಲಿ, ನೀತಿ ಸಂಹಿತೆ ಎಂಬ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುವ ಕ್ರೌರ್ಯ ಅತಿ ಘೋರ ಮಟ್ಟವನ್ನು ಮುಟ್ಟಿತು. ಲಕ್ಷ ಲಕ್ಷ ಜನ ನಿರಾಶ್ರಿತರು ತ್ರಿಶಂಕುಗಳಾಗಿದ್ದಾರೆ. ಅವರದೇನು ? ಜಗತ್ತು ಉತ್ತರಿಸಬೇಕು ಅಥವಾ ಜಗತ್ತನ್ನು ಬೆರಳ ತುದಿಯಲ್ಲಿ ಆಡಿಸಬಯಸುವ ಹಲಕೆಲವು ಕೈಗಳು ಹೇಳಬೇಕು.

ಮೊಕಾದಿಶಾ – ಇದು ಅವಳ ಹೆಸರು… ಆಫ್ರಿಕನ್ ದೇಶ – ಸೊಮಾಲಿಯಾದ – ರಾಜಧಾನಿಯ ಹೆಸರಲ್ಲ. ಯುದ್ಧಗ್ರಸ್ತತೆಯಲ್ಲಿ ಕಂದಿದ ತನ್ನ ಹುಟ್ಟಿದ ನಾಡು ಸಾವಿನ ಮಡಿಲಾದಾಗ ಅಲ್ಲಿಂದ ಓಡಿ ಬಂದು ಸುರಕ್ಷತೆ ಮತ್ತು ಮುಂದಿನ ಭಯರಹಿತ ಬದುಕಿಗಾಗಿ ಯೂರೋಪಿನ ಫಿನ್ಲೆಂಡ್ ದೇಶಕ್ಕೆ ಅರಸಿ ಅಲ್ಲಿ ತಮ್ಮ ಪುನರ್ವಸತಿಗಾಗಿ ಮೊರೆ ಇಟ್ಟ ಹೆಣ್ಣುಮಗಳು ಈ ಮೊಕಾದಿಶಾ.

ಇವಳ ಸಂಸಾರ ವರ್ಷಗಟ್ಟಲೆ `ಅಸೈಲಮ್ ಸೀಕರ್ಸ್’ ಪಟ್ಟಿಯಲ್ಲಿ ಕಾಯುತ್ತಲೇ ಕೂತು ತಮ್ಮ ಉಳಿವಿನ ಅಖಂಡ ಹೋರಾಟ ನಡೆಸಿದ ಕತೆ ಇದು. ಹಾಗೆ ನೋಡಿದರೆ ಬರಿಗೈಯಲ್ಲಿ ದೇಶ ತೊರೆದು ಓಡಿ ಹೋಗುವ ನಿರ್ಗತಿಕ ರೆಫ್ಯೂಜಿಗಳಷ್ಟು ದುರ್ದೈವಿಗಳು ಇವರಲ್ಲ, ಆದರೂ ಸೇಫ್ ಅನಿಸಬಹುದಾದ ನೆಲೆ ಸಿಗುವ ವರೆಗಿನ ತ್ರಿಶಂಕು ಬದುಕೆಂಬುದು ಕಠಿಣ… ಘೋರ…

ಇವಳದು ಸತ್ಯಕತೆ. ಹೌದು, ನನಗೆ ಹೇಳಿದ ಅವಳ ಮಾತುಗಳಲ್ಲಿ ಇದ್ದದ್ದು ಅದೆಷ್ಟು ಆಳವಾದ ಸತ್ಯವೇ ಆಗಿದ್ದರೂ ಅದಕ್ಕೆ ಒಂದು ತಾರ್ಕಿಕ ಅಂತ್ಯ ಇಡುವವರು ಯಾರು? ನ್ಯಾಯ ಅನಿಸುವ ಖಚಿತ ಮುಕ್ತಾಯದತ್ತ ಕೊಂಡೊಯ್ಯುವವರು ಯಾರು? ಬದುಕುವ ಹಕ್ಕು ಕೆಲವರಿಗೆ ಶಾಪವಾಗಿಬಿಡುವುದೇಕೆ? ‘ಲಿವ್ ಎಂಡ್ ಲೆಟ್ ಲಿವ್’ ಈ ಜನ್ಮಸಹಜ ಹಕ್ಕು ಇವರಿಗೂ ಬೇಕು, ಇದನ್ನು ಕೊಡುವುದೇ ಪ್ರಪಂಚದ ಹೊಣೆ. ಆದರೆ ಕ್ಷಣಕ್ಷಣಕ್ಕೆ ಬದಲಾಗುತ್ತಿರುವ ಜಗತ್ತು ಈ ಹೊಣೆ ಹೊತ್ತುಕೊಳ್ಳುತ್ತದೆಯೇ, ಅಥವಾ ನಾವು ನೀವೂ ಇದಕ್ಕೆ ಮುಂದಾಗಬೇಕೋ? ಆಗುವುದು ಸಾಧ್ಯವೇ? ಆದರೂ ನಾವೇನು ಮಾಡೇವು? ಎಷ್ಟು ಮಾಡಲಾದೀತು? ಎನ್ನುವ ಉತ್ತರವಿಲ್ಲದಿರುವ ಅಥವಾ ಉತ್ತರ ತಿಳಿದಿದ್ದರೂ ಅದಕ್ಕೇನು ಬೇಕೋ ಅದನ್ನು ಮಾಡಲಾಗದಿರುವ ಅಸ್ಪಷ್ಟ ಒದ್ದಾಟಗಳ ಹಲವು ಬಗೆಯ ಸಂದೇಹಗಳನ್ನಿಟ್ಟುಕೊಂಡೇ ನಾನಿವಳ ಜೊತೆಗೆ ಮಾತನಾಡಲು ಅಣಿಯಾದೆ.

ಬನ್ನಿ, ನಿಮಗೆ ಪರಿಚಯ ಮಾಡಿಸುತ್ತೇನೆ ಇವಳನ್ನು. ಮೊಕಾದಿಶಾ – ಇದೇ ಅವಳ ನಿಜವಾದ ಹೆಸರು. ಆಫಘಾನಿಸ್ತಾನದ ಕಂದಹಾರ್ ನ ಒಂದು ಹಳ್ಳಿಯಲ್ಲಿ ಸುಮಾರು ಇಪ್ಪತ್ತೆಂಟು ವರ್ಷಗಳ ಹಿಂದೆ ಹುಟ್ಟಿದಳು. ಮನೆಯಿಡೀ ತುಂಬಿ ತುಳುಕುವಷ್ಟು ಅಣ್ಣ, ತಮ್ಮ ಅಕ್ಕ ತಂಗಿ ಇವಳಿಗೆ. ಮನೆಯ ಸುತ್ತಮುತ್ತಲೇ ಇವಳ ಸಂಬಂಧಿಕರು ಸಾಕಷ್ಟು ಜನ. ಅವರಲ್ಲಿ ಹೆಚ್ಚಿನವರು ಈಗ ತಮ್ಮದಾಗಿದ್ದ ಸ್ಥಳ, ಊರುಗಳಲ್ಲಿ ಇಲ್ಲ, ಜೀವ ಉಳಿಸಿಕೊಂಡು ಪಾರಾಗಿ ಬೇರೆಲ್ಲೋ ಬದುಕುತ್ತಿದ್ದಾರೆ.

ಕಳೆದ ಒಂದು ಒಂದೂವರೆ ದಶಕದಿಂದ ಅಫಘಾನಿಸ್ತಾನ ಎಂಬ, ಹಿಂದೂಕುಶ್ ಪರ್ವತಗಳ ಅಗಾಧ ಶ್ರೇಣಿಯ ಮಡಿಲಿನ ಖಂಡರುಗಳಿಂದ, ನದೀ ತಪ್ಪಲುಗಳಿಂದ ಕೂಡಿದಂಥ ಭೂಮಿಯ ಭಾಗವೊಂದು ಇದೀಗ ಒಂದು ದೇಶವಾಗಿ, ನಾಲ್ಕು ಜನ ದುಡಿದು, ಉಂಡು ತಿಂದು ಬದುಕು ಕಟ್ಟಿಕೊಂಡು ಉಳಿಯುವ ನೆಲವಾಗಿ ಉಳಿದಿಲ್ಲ…ಒಂದೊಮ್ಮೆ ಅಲೆಕ್ಸಾಂಡರ್ ನಿಂದ ಹಿಡಿದು ಮಂಗೋಲರು, ಮುಸ್ಲಿಂ ಅರಬ್ಬರು, ಸೋವಿಯತ್ತರು, ಬ್ರಿಟಿಶರೆಲ್ಲ ಇದೇ ಹಿಂದೂಕುಶ್ ಪರ್ವತಾವಳಿಗಳನ್ನು ಮೆಟ್ಟಿ ಹಾದು ಆಕ್ರಮಿಸಿಕೊಳ್ಳಲು ನೋಡಿದ್ದಲ್ಲದೇ ನೂರಾರು ವರ್ಷಗಳಿಂದ ಅವರ ಕಣ್ಣು ಕುಕ್ಕುತ್ತಿದ್ದ, ನಮ್ಮ ದೇಶದ ಸಂಪತ್ತು, ಸಮೃದ್ಧಿಗಳ ಆಕರ್ಷಣೆಯಿಂದಾಗಿ ಪ್ರಾಣಗಳನ್ನೇ ಪಣಕ್ಕೊಡ್ಡುತ್ತ ಈ ದುರ್ಗಮ ಕಂದರಗಳನ್ನು ಬಿದ್ದೆದ್ದು ದಾಟುತ್ತ ಈ ದಾರಿಯಲ್ಲೇ ಭಾರತಕ್ಕೆ ಬಂದವರು. ಹಿಮ, ಮರಳು, ಖಂಡರುಗಳೆಲ್ಲವೂ ಕಲೆತಿರುವ ಅಫಘಾನಿಸ್ತಾನದ ಈ ಪರ್ವತಗಳು ಹಾಗೇ ನಿಂತಿವೆ ನಿಶ್ಚಲವಾಗಿವೆ, ಇತಿಹಾಸ, ವರ್ತಮಾನಗಳು ಮಾತ್ರ ಬದಲಾಗುತ್ತಿವೆ. ಮಣ್ಣು ಧೂಳು, ರಕ್ತಸಿಕ್ತ ಹಾದಿ ಬೀದಿ, ಬಿಕೋ ಎನ್ನುವ ಹಾಳೂರುಗಳು ಇಂದಿನ ಇಲ್ಲಿನ ವರ್ತಮಾನ.

ಸ್ಮಶಾನ ಮೌನ: ಹಾಗೆ ನೋಡಿದರೆ ಹಾಳಾಗಿರುವುದು ಇದೊಂದೇ ದೇಶ ಅಲ್ಲ, ಮಧ್ಯ ಪ್ರಾಚ್ಯದ ಅನೇಕ ನಾಡುಗಳು ಈಗ ಒಂದೋ ತೊಂಬತ್ತು ಭಾಗ ಉಧ್ವಸ್ತ ಗೊಂಡಿವೆ, ಅಥವಾ ಕುಸಿದು ಧೂಳಿನ ಕಣವಾಗಿ ಹೋಗಿರುವ, ಒಂದೊಮ್ಮೆ ಬಣ್ಣ ಬಣ್ಣದ ಮನೆಗಳಿಂದ, ಅವುಗಳೊಳಗಿನ ಮಕ್ಕಳು, ಹೆಣ್ಣು, ಗಂಡು ಜನರಿಂದ ತುಂಬಿ ನಕ್ಕಿದ್ದ ಊರುಗಳು. ಸಿರಿಯಾ, ಯೆಮೆನ್, ಲಿಬಿಯಾ, ಇರಾಕ್, ಲೆಬನಾನ್, ಟರ್ಕಿ, ಸೋಮಾಲಿಯಾ, ಈಜಿಪ್ಟ್ ನ ಅನೇಕಾನೇಕ ಊರುಗಳಲ್ಲಿ ಈಗ ಸ್ಮಶಾನ ಮೌನ. ಹೌದು, ಸ್ಮಶಾನ!! ಊರಿನಿಂದ ಹೊರಗಿರುವ ಸ್ಮಶಾನವನ್ನು ತಂದು ಊರಿಡೀ ಇಟ್ಟು ಜನರನ್ನು ಹುಳಗಳಂತೆ ಹೊಸಕಿ ಕೊಂದು ಅಟ್ಟಹಾಸ ಗೈದ ಟೆರರಿಸ್ಟ್ ಗಳಿಗೆ ಸಹ ಕೊನೆಗೆ ದಕ್ಕಿದ್ದು, ಸ್ಮಶಾನವೇ! ಇರಲಿ… ಪಟ್ಟಿ ಮಾಡ ಹೊರಟರೆ ಅವರ ಹಲವು ಹೆಸರುಗಳು ಕಂಡಾವು. ತಾಲಿಬಾನ್, ಮುಜಾಹಿದೀನ್, ಅಲ್ ಕೈದಾ, ಐಸಿಸ್, ಬೋಕೋ ಹರಾಮ್ ಇತ್ಯಾದಿ. ಹೆಚ್ಚಿನಂಶ ಇಡೀ ಮಧ್ಯಪೂರ್ವ, ಆಫ್ರಿಕಾದ ಹಲವು ನಾಡುಗಳು ಇವರ ಹಾವಳಿಗೆ ತ್ರಸ್ತವಾದುವು.

ಹಾಗೆ ನೋಡಿದರೆ ತಾಲಿಬಾನ್ ಅಂದರೆ ವಿದ್ಯಾರ್ಥಿಗಳು ಎಂದು ಅರ್ಥ. ಜೀವನದ ನಿಜವಾದ ಅರ್ಥವನ್ನೇ ಕಲಿಯದವರು ಇವರು. ಎಂಬತ್ತರ ದಶಕದ ರಾಜಕೀಯ ಕ್ಷೋಭೆ, ರಶಿಯನ್ ಆಕ್ರಮಣಗಳ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕಾಣಿಕೆಯಾಗಿ ಉದ್ಭವಿಸಿದ ಈ ತಾಲಿಬ್ ಗಳು ಕಳೆದ ಇಪ್ಪತ್ತು ವರ್ಷಗಳಿಂದ ಅಫಘಾನಿಸ್ತಾನದ ಸಮಗ್ರ ಬದುಕನ್ನೇ ತಮ್ಮ ಕೈಗೆ ತೆಗೆದುಕೊಂಡವರು. ಇಲ್ಲಿನ ಸಂಸ್ಕೃತಿ, ಜನಜೀವನ ಎಲ್ಲಕ್ಕೂ ಒಂದು ಗ್ರಹಣಗ್ರಸ್ತತೆಯ ಕಳೆ ತಂದು ಹಾಕಿದರು. ಇವರ ಅಟಾಟೋಪದಲ್ಲಿ ಆಫಘನ್ ಹೆಣ್ಣುಮಕ್ಕಳ ಬದುಕು ನರಕಕ್ಕಿಂತ ಹೀನಗತಿ ಕಂಡಿತು. ಧರ್ಮದ ಹೆಸರಿನಲ್ಲಿ, ನೀತಿ ಸಂಹಿತೆ ಎಂಬ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುವ ಕ್ರೌರ್ಯ ಅತಿ ಘೋರ ಮಟ್ಟವನ್ನು ಮುಟ್ಟಿದ್ದು ಇವರ ದುರಾಡಳಿತದ ಸಮಯದಲ್ಲಿ.

ಹಲವು ನದಿಗಳು, ಕೆರೆ ಸರೋವರಗಳಿದ್ದರೂ ಅವುಗಳಲ್ಲಿ ಯಾವುದನ್ನೂ ವೈಜ್ಞಾನಿಕವಾಗಿ ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಲಾಗದೇ ಇಲ್ಲಿನ ರಾಜಕೀಯ, ಮತ್ತು ಆಡಳಿತಗಳೆಲ್ಲ ಹೆಸರಿಗೆ ಮಾತ್ರ ಆಗಿ ನಿಂತಿರುವುದು ನಿಜ.
ಜಗತ್ತಿನ ಇಂದಿನ ಸ್ಥಿತಿ, ಮತ್ತದಕ್ಕೆ ಇರುವ ಕಾರ್ಯಕಾರಣ ಸಂಬಂಧ, ಯುದ್ಧಗಳು ಮತ್ತವುಗಳ ಹಿಂದಿರುವ ನಿಜವಾದ ಪರಿಸ್ಥಿತಿಯ ಮೂಲಸಂದರ್ಭಗಳನ್ನು ಹುಡುಕಿಕೊಂಡು ಹೊರಟರೆ ನಾವು ಸತ್ಯ, ಅಸತ್ಯ, ಅಘಟಿತ ಘಟನಾವಳಿಗಳ ಅಸ್ಪಷ್ಟ ಹಿನ್ನಲೆಯ ಸುಳಿಯಲ್ಲಿ ಸಿಕ್ಕಿಕೊಂಡುಬಿಡುತ್ತೇವೆ. ಯಾರು ಯಾರನ್ನು ಬಳಸಿಕೊಳ್ಳುತ್ತಿದ್ದಾರೆ? ಯಾವ ಯಾವ ದೇಶಗಳ ಸ್ವಾರ್ಥ ಜಗತ್ತನ್ನು ಆಟವಾಡಿಸುತ್ತದೆ? ಎಲ್ಲೋ ಒಂದೆಡೆ ಸಿಡಿಯುವ ಬಾಂಬಿನ ಹಿಂದಿರುವ ಒತ್ತುಗುಂಡಿ ಬೇರೆಲ್ಲೋ ಯಾಕೆ ಇರುತ್ತದೆ… ಯಾವ ಯಾವ ಪಂಗಡಗಳ ನಡುವಿನ ವೈರ ಪ್ರಪಂಚವನ್ನೇ ಸುಡುವಷ್ಟು ತೀವ್ರವಾಗಿದೆ? ಏನೆಲ್ಲವೂ ಯೋಚನೆಗಳಾಗಿ ಸದಾ ತಮ್ಮನ್ನೇ ತಿರುವಿ ತಿರುವಿ ಹಾಕುತ್ತವೆ ಮನಸ್ಸಿನಲ್ಲೇ.

ಅಪರೋಕ್ಷ ಯುದ್ಧ : ಎರಡು ಸಾವಿರದಾ ಹದಿನಾಲ್ಕು, ಹದಿನೈದು ಮತ್ತು ಹದಿನಾರರ ಇಸವಿಗಳಲ್ಲಿ ಜಗತ್ತು- ಹಿಂದೆಂದೂ ಕಾಣದಂಥ- ನ ಭೂತೋ ನ ಭವಿಷ್ಯತಿ ಅನಿಸಬಹುದಾದ- ತಂತಮ್ಮ ದೇಶಗಳನ್ನು ಬಿಟ್ಟೋಡಿದ ನಿರಾಶ್ರಿತರ ಸಾಗರವನ್ನೇ ಕಂಡು ಅದರ ಕಾರಣಗಳಿಗೆ ಪರಿಹಾರ ಹುಡುಕಲಾಗದೇ ಮಧ್ಯಪೂರ್ವದ ಅನೇಕ ದೇಶಗಳಲ್ಲಿ ನಡೆದ ಅಪರೋಕ್ಷ ಯುದ್ಧದ ಹಿಂದುಮುಂದಿನ ಮಾರಣ ಹೋಮ ಅರ್ಥಾತ್ ಕತ್ಲೇ ಆಮ್ ಗಳನ್ನು, ಹಗಲು ರಾತ್ರಿ ಎನ್ನದೆ ನಡೆದ ಅಮಾನುಷ ಕ್ರೌರ್ಯವನ್ನು ಅಸಹಾಯಕವಾಗಿ ಕಾಣುತ್ತ ನಿಂತಿತು.

ಮೆಡಿಟರೇನಿಯನ್ ಸಮುದ್ರದ ದಂಡೆತುಂಬ ಇದ್ದಕ್ಕಿದ್ದಂತೆ ಜನರ ಹೆಜ್ಜೆಗಳು ತುಂಬಿಹೋದುವು. ಅಫ್ಘಾನಿಸ್ತಾನ, ಯೆಮೆನ್, ಇರಾನ್, ನೈಜೀರಿಯಾ, ಎರಿಟ್ರಿಯ, ಪಾಕಿಸ್ತಾನ, ಇರಾಕ್ ಮತ್ತು ಸಿರಿಯಾಗಳಿಂದ ಉಟ್ಟ ಬಟ್ಟೆಯಲ್ಲಿ ಕೂಸು, ಕುನ್ನಿಗಳನ್ನು ಹೆಗಲಿಗೇರಿಸಿಕೊಂಡು ಹೊರಬಿದ್ದವರ ಹೆಜ್ಜೆಗಳಿವು. ತಾನು ಹೊರಲಾಗದಷ್ಟು ಜನರ ತೂಕವನ್ನು ಹೊತ್ತು ಹೊಯ್ದಾಡುತ್ತ ಸಮುದ್ರ ದಾಟುವ ಬೋಟುಗಳಿಂದ ತುಂಬಿ ಒದ್ದಾಡಿತು. ಸುತ್ತಲೂ ಬಾಂಬುಗಳಿಂದ ಹೊತ್ತಿಕೊಂಡು ಉರಿಯುತ್ತಿದ್ದ ಗಡಿಪ್ರದೇಶದ ಊರುಗಳಿಂದ ರಾಶಿ ರಾಶಿ ಜನ ದಿಕ್ಕು ಕಂಡಲ್ಲಿಗೆ ಓಡಿ ಎಲ್ಲೂ ಬದುಕಲು ಸಾಧ್ಯವಾಗದೆ ಯೂರೋಪಿನ ಅನೇಕ ನಗರಗಳಿಗೆ ಧಾವಿಸತೊಡಗಿದರು. ಸುಮಾರು ಹತ್ತು ಲಕ್ಷ ನಿರಾಶ್ರಿತರು ತಂತಮ್ಮ ಮನೆ, ಊರು, ದೇಶಗಳಿಂದ ದಿಕ್ಕಾಪಾಲಾಗಿ ಹೊರಬಿದ್ದ ಘೋರಕ್ಕೆ ಜಗತ್ತು ಕಂಗೆಟ್ಟಿತು. ವಿಶ್ವಸಂಸ್ಥೆಯ ನಿರಾಶ್ರಿತರ ಪುನರ್ವಸತಿ ಕಾರ್ಯಾಂಗ ಈ ಜನಸಾಗರದ ಸಂಖ್ಯೆಗೆ ಬೆಚ್ಚಿದರೂ ಅವರಿಗೊಂದು ವ್ಯವಸ್ಥೆ ಕಲ್ಪಿಸದೇ ವಿಧಿಯಿರಲಿಲ್ಲ.

ಇಂಥ ಗುಂಪಿನಲ್ಲೊಂದಾಗಿ ಓಡಿ ಬಂದವರು ಮೊಕಾದಿಶಾ ಮತ್ತವಳ ಸಂಸಾರ. ಪ್ರಾಣ ಒಂದನ್ನೇ ಉಳಿಸಿಕೊಂಡ ಇವಳೂ ಇವಳ ಗಂಡನೂ ವಿಶ್ವಸಂಸ್ಥೆಯ ನಿರಾಶ್ರಿತರ ಪುನರ್ವಸತಿಗೆ ಅರ್ಜಿ ಹಾಕಿದರು.
ಅಫಘಾನಿಸ್ತಾನದಿಂದ ಇರಾನ್, ಟರ್ಕಿ, ಮೆಸಿಡೋನಿಯಾ ಮಾರ್ಗದ ದುರ್ಗಮ ದಾರಿಗಳಲ್ಲಿ, ಸಮುದ್ರದಲ್ಲಿ ಮೂರೂವರೆ ತಿಂಗಳು ಜೀವನ್ಮರಣದ ಹೋರಾಟ ಮಾಡುತ್ತ ಹೇಗೋ ದಾಟಿ ಕೊನೆಗೊಮ್ಮೆ ಇವರಿಗೆ ಆಶ್ರಯ ಕೊಡಲು ಒಪ್ಪಿಕೊಂಡ ಫಿನ್ಲೆಂಡ್ ದೇಶಕ್ಕೆ ಬಂದಿಳಿದು ಸ್ವಾತಂತ್ರ್ಯದ ನಿಟ್ಟುಸಿರು ಬಿಟ್ಟಿದ್ದರು.
ಅಂತಾರಾಷ್ಟ್ರೀಯ ರೆಫ್ಯೂಜಿ, ಮತ್ತು ಅಸೈಲಮ್ ಸೀಕರ್ ಶೆಲ್ಟರ್ ಟ್ರೀಟಿ, ಅಥವಾ ಒಪ್ಪಂದದ ಅನ್ವಯ ಇವರಿಗೆ ಫಿನ್ಲೆಂಡ್ ತನ್ನ ಬಾಗಿಲು ತೆರೆದಾಗ ಇನ್ನೂ ನೂರಾರು ಜನರೊಂದಿಗೆ ಈ ಸುಭಿಕ್ಷ ವೆಲ್ಫೇರ್ ಸ್ಟೇಟ್ ಗೆ ಕಾಲಿಟ್ಟ ಕೆಲವೇ ಅದೃಷ್ಟವಂತರಲ್ಲಿ ಮೊಕಾದಿಶಾಳ ಕುಟುಂಬವೂ ಒಂದು. ಕುಟುಂಬ ಅಂದರೆ ಇಡೀ ಮನೆಯವರೆಲ್ಲ ಅಲ್ಲ, ಇವಳು ಇವಳ ಗಂಡ ಮತ್ತು ಮೂರು ಮಕ್ಕಳು. ಕೊನೆಯದಂತೂ ಇಲ್ಲಿನ ಪುನರ್ವಸತಿ ಕೇಂದ್ರದ ಆಶ್ರಯದಲ್ಲೇ ಹುಟ್ಟಿದ ಎಳೆಯಕುಡಿ!

ಕಳೆದ ಬಾರಿ ನಾನು ಫಿನ್ಲೆಂಡ್ ಗೆ ಹೋಗಿದ್ದಾಗ ಕಂಪಾಸ್ಸಿಯ ಆಫೀಸಿನಲ್ಲಿ ನನಗೆ ಭೇಟಿಯಾದ ಇವಳ ಜೊತೆಯಲ್ಲಿ ಅರ್ಧಗಂಟೆಯಷ್ಟೊತ್ತು ಅಲ್ಲಿನ ಒಂದು ಕೋಣೆಯಲ್ಲಿ ಕೂತು ಮಾತನಾಡಿದೆ. ನನ್ನನ್ನು ಕಂಡು ಒಂದಿಷ್ಟು ಸಂಕೋಚಗೊಂಡಿದ್ದರೂ ತನ್ನ ಕತೆಯನ್ನು ಹೇಳುವ ಇಚ್ಛೆ ಅವಳಲ್ಲಿತ್ತು. ಅವಳ ಕತೆಯಲ್ಲಿ ಅಡಕವಾಗಿರಬಹುದಾದ ಇನ್ನೂ ಲಕ್ಷಾವಧಿ ರೆಫ್ಯೂಜಿಗಳ ಇಂಥದೇ ಕತೆಯನ್ನು, ನೋವನ್ನು ತಿಳಿದುಕೊಳ್ಳುವ ತವಕ ನನಗಿತ್ತು. ಏಳು, ಐದು ಮತ್ತು ಇದೀಗ ಒಂದು ವರ್ಷದ ಕೈಕೂಸು ಅವಳ ಮಡಿಲಲ್ಲಿ ಇನ್ನೂ ಹಾಲು ಕುಡೀತಿತ್ತು. ಅವಳಿಗೆ ಇಪ್ಪತ್ತೈದು ವರ್ಷಗಳು ತುಂಬುವಷ್ಟೊತ್ತಿಗಾಗಲೇ ಮೂರು ಹೆತ್ತಿದ್ದಾಳೆ. ಇಪ್ಪತ್ತು ಮೂವತ್ತರ ನಡುವೆ ಇರುವ ಅವಳ ಗರ್ಭ ಇನ್ನೂ ಎಷ್ಟನ್ನು ಹೊರಗೆ ತರುತ್ತೋ ಗೊತ್ತಿಲ್ಲ.


ಅವಳ ಕತೆ : ” ನಿಮ್ಮ ಊರಿನ ಬಗ್ಗೆ, ದೇಶದ ಬಗ್ಗೆ, ಅಲ್ಲಿ ಹೇಗಿತ್ತೆಂದು ಹೇಳು’ ನಾನು ಕೇಳಿದೆ.
ಸ್ವಲ್ಪ ಉರ್ದು ಮಿಶ್ರಿತ ಅರ್ಧಂಬರ್ಧ ಇಂಗ್ಲಿಷ್ ಶಬ್ದಗಳಲ್ಲಿ ನಿಧಾನವಾಗಿ ತಡೆತಡೆದು ತನ್ನ ಕತೆ ಹೇಳಿದಳು. ನಾನದನ್ನು ಕನ್ನಡಿಸಿದ್ದೇನೆ..

” ಕಂದಹಾರ್ ಪ್ರದೇಶದಲ್ಲಿ ನಮ್ಮ ಮನೆ, ಜಮೀನು ಎಲ್ಲಾ ಇತ್ತು. ಸುಮಾರು ಮೂವತ್ತು ವರ್ಷಗಳ ಹಿಂದೆ ಅಂದರೆ ನಾನು ಹುಟ್ಟುವುದಕ್ಕೆ ಮೊದಲು ಎಲ್ಲವೂ ಶಾಂತವಾಗಿತ್ತು, ನಮ್ಮಲ್ಲಿ ನಮ್ಮ ಕುಟುಂಬ ಕಷ್ಟಪಟ್ಟು ದುಡಿದು ಬೆಳೆದ. ಗಸಗಸೆ, ದಾಳಿಂಬೆ, ದ್ರಾಕ್ಷಿ, ಖರ್ಜೂರ ಎಲ್ಲವೂ ಹೊಟ್ಟೆ ತುಂಬಲು ಸಾಕಾಗುವಷ್ಟು ಹಣವನ್ನು ನಮಗೆ ತಂದು ಕೊಡ್ತಾ ಇದ್ದವು ಎಂದು ನಮ್ಮಪ್ಪ ಅಮ್ಮ ಹೇಳುತ್ತಿದ್ದರು. ಅದೇ ನಮ್ಮ ಅಣ್ಣ ಅಕ್ಕಂದಿರು ಚಿಕ್ಕ ಮಕ್ಕಳು. ನಾನಿನ್ನೂ ಹುಟ್ಟಿರಲಿಲ್ಲ ಆಗ…” ಮೊಕಾದಿಶಾಳ ಕಣ್ಣುಗಳಲ್ಲಿ ಅಪ್ಪ ಅಮ್ಮ ಹಿಂದೊಮ್ಮೆ ಸುಖವಾಗಿದ್ದರು ಎಂಬ ಮಾತಿನ ಸಂತೋಷ ಇಣುಕಿತ್ತು.

“ಮದರಸಾಗಳಲ್ಲಿ ಅಣ್ಣಂದಿರೊಡನೆ ನಾನೂ ಓದಿದ್ದೇನೆ. ನಮ್ಮ ಮನೆಯವರು ಕಾಬೂಲಿ ಸಂಪ್ರದಾಯಸ್ಥರು. ಪ್ರತಿಯೊಂದು ಹಬ್ಬವನ್ನೂ ನಾವು ಆಚರಿಸುತ್ತಿದ್ದೆವು. ನನ್ನ ತಂದೆ ವ್ಯಾಪಾರ ಮಾಡ್ತಿದ್ದರು. ನಮ್ಮ ಬಳಗದ ಅನೇಕರಿಗೆ ಬಹಳ ಚಂದದ ರೇಷ್ಮೆಗಂಬಳಿಗಳನ್ನು ಮಾಡಲು ಗೊತ್ತಿತ್ತು, ಆದರೆ ಈಗ ಅಲ್ಲೇನೂ ಉಳಿದೆ ಇಲ್ಲ. ಎಲ್ಲಾ ಹಾಳುಬೂದಿಯಾಗಿದೆ.”

”ಛೆ .. ಸುಮಾರು ಎರಡು ಸಾವಿರದ ಇಸ್ವಿಯ ನಂತರ ನಿಮ್ಮಲ್ಲಿ ಬಹಳ ಹೆಚ್ಚು ವಿಧ್ವಂಸಕ ವಾತಾವರಣ ಆಯಿತು ಅಲ್ಲವೇ? ” ಎಂದೆ.

” ಹೌದು, ತಾಲೀಬ್ ಗಳು ಯಾರಿಂದ ಆಜ್ಞೆ ಪಡೆದು ಅಷ್ಟು ಹಾವಳಿ ಮಾಡ್ತಿದ್ದರೋ ನನಗೆ ತಿಳಿದಿರಲಿಲ್ಲ, ಮುಂದೊಮ್ಮೆ ಇದ್ದಕ್ಕಿದ್ದ ಹಾಗೆ ಎಲ್ಲೆಲ್ಲಿಂದಲೋ ಬಿಳಿ ಬಿಳಿ ಜನರ ಸೈನ್ಯದವರು ಬಂದರು. ಅಮೇರಿಕಾದ ಸೈನ್ಯ ಅಂತ ನಾವೆಲ್ಲಾ ಮಾತಾಡ್ತಾ ಇದ್ದೆವು, ಅವರ ಟ್ಯಾಂಕ್ ಗಳು, ರಾಕ್ಷಸನಂಥ ದೊಡ್ಡ ಟ್ರಕ್ಕುಗಳು ಎಲ್ಲೆಂದರೆ ಅಲ್ಲಿ ನುಗ್ಗಿ ಬರುತಿದ್ವು ಹಗಲೂ ರಾತ್ರಿಯೂ ತಲೆ ಮೇಲೆ ಭಯಂಕರ ಶಬ್ದ ಮಾಡುತ್ತಾ ವಿಮಾನಗಳು ಹಾರ್ತಾ ಇರುತ್ತಿದ್ವು. ಅವುಗಳ ಘೋರ ಶಬ್ದಕ್ಕೆ ಪುಟ್ಟ ಮಕ್ಕಳು ಬೆಚ್ಚಿ ಅಳ್ತಾ ಇರೋವು… . ಮುಜಾಹಿದೀನು, ತಾಲೀಬಗಳನ್ನು ಅವರು ಹುಡುಕಿಕೊಂಡು ಎಲ್ಲೆಂದರೆ ಅಲ್ಲಿ ಧಡಧಡ ಬರ್ತಿದ್ರು. ಕೆಲವೊಮ್ಮೆ ಯಾರನ್ನಾದರೂ ಹಿಡಿದು ಪ್ರಶ್ನೆಗಳನ್ನು ಕೇಳ್ತಿದ್ರು… ಅವರ ಪ್ರಶ್ನೆಗಳಿಗೆ ನಾವೇನಾದರೂ ಉತ್ತರಿಸಿದರೆ ನಮ್ಮ ಮೇಲೆ ಕಣ್ಣಿಟ್ಟ ಇಲ್ಲಿನವರು ಮರುದಿನವಾಗುವಷ್ಟರಲ್ಲಿ ಇಡೀ ಮನೆಯನ್ನೇ ಉಡಾಯಿಸಿಬಿಡ್ತಿದ್ದರು. ಆಹಾರಪದಾರ್ಥ, ದಿನಸಿ, ತರಕಾರಿ ಹಾಲು ಯಾವುದೂ ಸಿಗದೇ ಒದ್ದಾಡ್ತಾ ಇದ್ವಿ… ಚಿಕ್ಕ ಮಕ್ಕಳ ಮೇಲೆ ನಾವು ಹಗಲು ರಾತ್ರಿ ನಿಗಾ ಇಟ್ಟಿರುತ್ತಿದ್ವಿ. ಯಾವ ಕ್ಷಣದಲ್ಲಿ ಯಾವ ಮಗು ಕಾಣೆ ಆಗಿಬಿಡುತ್ತೋ ಎನ್ನುವ ಭಯ ಕಾಡ್ತಿತ್ತು… ಎಲ್ಲಿ ನೋಡಿದರೂ ಉರುಳಿ ಬಿದ್ದ ಮನೆ, ಅಂಗಡಿ ಮುಂಗಟ್ಟು, ಬಿಲ್ಡಿಂಗುಗಳ ರಾಶಿ ರಾಶಿ ಮಣ್ಣು, ಧೂಳು. ಎಲ್ಲಾ ಕಡೆ ಭಿಕ್ಷುಕರು, ಅವರಲ್ಲಿ ಮಕ್ಕಳು ದೀನವಾಗಿ ಕೈ ಚಾಚುತ್ತಿದ್ದದ್ದನ್ನು ಕಂಡು ಸಂಕಟವಾಗ್ತಿತ್ತು. ನಾನೇ ಎಷ್ಟೋ ಸಲ ನನ್ನ ಹತ್ತಿರ ಇದ್ದ ಎರಡೋ ನಾಲ್ಕೋ ಅಫಘನಿ (ಅವರ ಕರನ್ಸಿ ದುಡ್ಡು)ಗಳನ್ನು ಅವರಿಗೆ ಕೊಟ್ಟಿದ್ದೆ. ದುಡ್ಡಿದ್ದರೂ ಏನೂ ಕೊಳ್ಳಲಿಕ್ಕೆ ಸಿಗುತ್ತಲೇ ಇರಲಿಲ್ಲ. ಅಕಸ್ಮಾತ್ ಏನಾದರೂ ಕೊಂಡರೆ ಹಿಂದಿನಿಂದ ಘಡಾರ್ ಎನ್ನುತ್ತ ಬರ್ತಿದ್ದ ತಾಲೀಬುಗಳ ಜೀಪಿನೊಳಗಿಂದ ಯಾವುದೋ ಕೈ ಅದನ್ನು ಕಿತ್ತುಕೊಂಡು ಹೋಗ್ತಿತ್ತು” ಮೊಕಾದಿಶಾಳ ಕಣ್ಣುಗಳು ಕಹಿ ನೆನಪಿನ ಹೊಡೆತಕ್ಕೆ ತುಂಬಿ ಬಂದಿದ್ದುವು.

“ಬರಬರ್ತಾ ಪರಿಸ್ಥಿತಿ ಬಹಳ ತೀವ್ರವಾಗಿತ್ತು ,ಯುದ್ಧ ಇಡೀ ದೇಶವನ್ನು ಸಾಯಿಸಿ ಹಾಕಿದ ಹಾಗೆ ಆಗಿತ್ತು. ಮಿಲಿಟರಿ ಟ್ಯಾಂಕ್, ಗನ್ನು ಮತ್ತು ಸಾವು ಇವು ಮಾತ್ರ ನಮ್ಮ ದಿನದಿನದ ನಿಜ ಆಗಿತ್ತು. ಇಂಥದ್ದರಲ್ಲೂ ಜೀವನ ನಡೆದೇ ಇತ್ತು. ಒಮ್ಮೆ ಕಂದಹಾರನಲ್ಲಿ ಮನೆಯ ಬಳಿ ಹೋಟೆಲ್ ಒಂದರಲ್ಲಿ ನಿಕಾಹ್ ನಡೆದಿತ್ತು. ಆಗಲೇ ಅಲ್ಲೊಂದು ಭಯಂಕರ ಬಾಂಬ್ ಸಿಡಿದು ನನ್ನ ಅಣ್ಣ ಅದರಲ್ಲಿ ಸತ್ತೇ ಹೋದ…” ಮೊಕಾದಿಶಾಳ ಕಣ್ಣೀರು ನಿಲ್ಲಲಿ ಎಂದು ಎರಡು ಮೂರು ನಿಮಿಷ ನಾನು ಕಾದೆ.

“ನಮ್ಮೆಲ್ಲರ ಜೀವಗಳೂ ಯಾವುದೇ ಕ್ಷಣದಲ್ಲಿ ಯಾವುದೇ ಗುಂಡು ಅಥವಾ ಬಾಂಬಿಗೆ ಉಡಾಯಿಸಿ ಹೋಗಿ ಬಿಡಬಹುದಿತ್ತು. ಅಲ್ಲಿ ಗಳಿಗೆ ಗಳಿಗೆಗೂ ಅಪಾಯ ಇತ್ತು. 2014- 15 ರ ಸಮಯದಲ್ಲಿ ಅಲ್ಲಿಂದ ಹೇಗಾದರೂ ಪಾರಾಗಲೇಬೇಕೆಂದು ನನ್ನ ಗಂಡ ಒದ್ದಾಡ್ತಿದ್ದ. ಕಡೆಗೆ ವಿಶ್ವಸಂಸ್ಥೆಯವರು ನಮ್ಮಂಥವರು ದೇಶ ಬಿಟ್ಟು ಹೊರಬಿದ್ದರೆ ನಾವು ಬದುಕಲಿಕ್ಕೆ ಏನೋ ಮಾಡ್ತಾರೆ ಎಂಬ ಸುದ್ದಿ ಗೊತ್ತಾಗಿತ್ತು . ನಾವಿಬ್ಬರೂ ಒಮ್ಮೆ ರಾತ್ರಿಯೇ ಯಾರಿಗೂ ಸುಳುವು ಕೊಡದೆ ಟೆಹ್ರಾನ್ ಗೆ ಹೋಗಿ ತಲುಪಿದೆವು. ಅಲ್ಲಿ ನಮ್ಮ ಪರಿಚಯದವರೊಬ್ಬರ ಮನೆ ಇತ್ತು, ಅಲ್ಲಿಂದ ಮುಂದೆ ಟರ್ಕಿ ಸೇರಿದೆವು ಆದರೆ ಅಲ್ಲಿಯೂ ಪರಿಸ್ಥಿತಿ ಭಯಂಕರವೇ ಇತ್ತು.ಅನಂತರ ಮೆಸಿಡೋನಿಯಾದ ಒಂದು ನಿರಾಶ್ರಿತರ ಕ್ಯಾಂಪ್ ನಲ್ಲಿ ನಮಗೆ ಜಾಗ ಸಿಕ್ಕಿತ್ತು. ಅಲ್ಲಿ ಇರುವುದೂ ಬಹಳ ಕಷ್ಟದ್ದಾಗಿತ್ತು. ನಮ್ಮ ಕಣ್ಣೆದುರಲ್ಲೇ ಎಷ್ಟೋ ಜನ ಯಾವ್ಯಾವುದೋ ಕಾಯಿಲೆಗೆ ಬಿದ್ದು ಸತ್ತು ಹೋದರು. ಕುಡಿಯುವ ನೀರು ಸಹ ಇಲ್ಲದೆ ಒದ್ದಾಡ್ತಿದ್ವಿ. ನನ್ನ ಮಕ್ಕಳ ಅವಸ್ಥೆ ಕರುಳು ಹಿಂಡಿಹಾಕ್ತಿತ್ತು…”

ನಾನು ಮಾತನಾಡಲಾಗದೆ ಮೌನವಾಗಿದ್ದೆ. ಏನು ಮಾತಾಡಬೇಕು? ಮತ್ತೆ ಸ್ವಲ್ಪ ಹೊತ್ತು ತಡೆದು,
”ಫಿನ್ಲೆಂಡ್ ಗೆ ಯಾವಾಗ ಬಂದಿರಿ ನೀವು? ಇಲ್ಲಿ ಎಂಟ್ರಿ ಹೇಗೆ ಸಿಕ್ಕಿತು? ಎಂದೆ.
” ನಾವು ಹಲವಾರು ತಿಂಗಳು ಅತಂತ್ರ ಸ್ಥಿತಿಯಲ್ಲೇ ತಿರುಗುತ್ತ ಅಸೈಲಮ್ ವಸತಿ ಮತ್ತು ರಿ ಹ್ಯಾಬ್ ಬೇಕೆಂದು ಮನವಿ ಮಾಡಿಕೊಳ್ತಾ ಇದ್ವಿ. ಅದೇ ಸಮಯದಲ್ಲೇ ಸಾವಿರಾರು ಜನ ಮೆಡಿಟರೇನಿಯನ್ ಸಮುದ್ರದಲ್ಲಿ ರಾತ್ರಿಯ ಹೊತ್ತುಗುಟ್ಟಾಗಿ ಅಕ್ಕಪಕ್ಕದ ಯೂರೋಪಿನ ದೇಶಗಳಿಗೆ ಹೋಗಿ ಹೊಕ್ಕಿಕೊಂಡು ಬಿಡ್ತಾ ಇದ್ರು. ನಾವೂ ಅಂಥ ಒಂದು ಬೋಟು ಏರಿದ್ವಿ. ಬೇರೆ ಬೇರೆ ಬೋಟುಗಳಲ್ಲಿ ಕೆಲವು ಸಮುದ್ರಕ್ಕೆ ಬಿದ್ದು ಮುಳುಗಿ ಎಷ್ಟೋ ಜನ ಸತ್ತರು… ದೈವವನ್ನು ನಂಬಿದ್ದೆವು ನಾವು ಅದೇ ನಮ್ಮ ದೈವ ನಮ್ಮನ್ನು ಕಾಪಾಡಿತ್ತು. ಒಂದು ದಿನ ಇಲ್ಲಿಗೆ ಕರ್ಕೊಂಡು ಬಂತು ನಮ್ಮನ್ನು”

‘ಸರಿ, ಈಗ ಇಲ್ಲಿ ಹೇಗಿದ್ದೀರಿ? ನೆಮ್ಮದಿಯಾಗಿದ್ದೀರಿ ಅಲ್ಲವೇ?”

”ಸಾವಿನ ಭಯ ಈಗ ಕಾಡುತ್ತಿಲ್ಲ ಮೇಡಂ ಆದರೆ ಮುಂದಿನ ದಿನಗಳು ಹೇಗೋ ಏನೋ? ನಮ್ಮ ಭವಿಷ್ಯ, ನಮ್ಮ ಮಕ್ಕಳ ಭವಿಷ್ಯ ಏನಾದೀತೋ ಎನ್ನುವ ಚಿಂತೆ. ಇಲ್ಲೇ ಬದುಕುಳಿಯುವ ಅಪೇಕ್ಷೆ. ಅದಕ್ಕಾಗಿ ಫಿನ್ಲೆಂಡ್ ಸರಕಾರಕ್ಕೆ ಅರ್ಜಿ ಹಾಕಿ ಕಾಯ್ತಾ ಇದ್ದೀವಿ. ಎಷ್ಟೋ ಜನಕ್ಕೆ ಹಾಗೆ ಇರಲು ಒಪ್ಪಿದ್ದಾರೆ ಈ ಸರಕಾರದವರು ಆದರೆ ನಮ್ಮದಿನ್ನೂ ಆಗಿಲ್ಲ”

ಅವಳ ಕಣ್ಣುಗಳಲ್ಲಿ ಭಯ, ಅಭದ್ರತೆ, ನೋವು, ತುಂಬಿದ್ದುವು ಸಹಜವೇ… ತಲೆಯ ಮೇಲೊಂದು ಸೂರು, ಹೊಟ್ಟೆಗೆ ಆಹಾರ, ಬದುಕಲು ಒಂದು ಉದ್ಯೋಗದ ದಾರಿ ಇಷ್ಟಕ್ಕಾಗಿ ಒದ್ದಾಡುವ ಜೀವಿಗಳಲ್ಲವೇ ನಾವು ?

”ನಿಮ್ಮ ತಂದೆ ತಾಯಿ ಮನೆಯ ಉಳಿದವರ ನೆನಪಾಗುವುದಿಲ್ಲವೇ? ಅವರೆಲ್ಲ ಎಲ್ಲಿದ್ದಾರೆ ಹೇಗಿದ್ದಾರೆ ?”

”ಅವರೂ ಕಂದಹಾರನಲ್ಲಿ ಇಲ್ಲ ಈಗ, ಪಾಕಿಸ್ತಾನದ ಕ್ವೆಟ್ಟಾ ಪ್ರದೇಶದಲ್ಲಿದ್ದಾರೆ ಹೇಗಿದ್ದಾರೋ ….”
ಅವಳ ಕಣ್ಣುಗಳಲ್ಲಿ ಮತ್ತೆ ನೀರು ತುಂಬಿಕೊಂಡಿತು… ಆ ನೀರು ಆರಲಿ, ನಗು ತುಂಬಲಿ ಎಂದು ಮನಸ್ಸಿನಲ್ಲೇ ಹಾರೈಸುತ್ತ ಅಲ್ಲಿಂದ ಎದ್ದೆ.

ಬದುಕಿನ ಭದ್ರತೆ : ಇದನ್ನೆಲ್ಲಾ ಬರೆಯಲು ಈಗ ಮನಸ್ಸಾಗಿದ್ದು ಯಾಕೆ ಅಂದರೆ ಇದಾಗಿ ಎರಡು ವರ್ಷಗಳ ಅನಂತರ ಒಂದು ಸುದ್ದಿ ತಿಳಿಯಿತು. ಮೊಕಾದಿಶಾ ಮತ್ತವಳ ಸಂಸಾರವನ್ನು ಫಿನ್ಲೆಂಡ್ ಸರಕಾರ ತಮ್ಮಲ್ಲಿ ಕಾಯಂ ಆಗಿ ಇರಿಸಿಕೊಳ್ಳಲು ಒಪ್ಪಿಗೆ ಕೊಟ್ಟಿತ್ತು! ಅವರಿಗೀಗ ಅಲ್ಲಿ ಪರ್ಮನೆಂಟ್ ರೆಸಿಡೆನ್ಸ್ ಪರವಾನಗಿ ಸಿಕ್ಕು ಬದುಕಿನ ಭದ್ರತೆಯ ಪ್ರಶ್ನೆಗೆ ಒಂದು ಸುಖಾಂತ್ಯ ಬಂದಿಳಿದಿದೆ…

ಆದರೆ ಇನ್ನೂ ಲಕ್ಷ ಲಕ್ಷ ಜನ ನಿರಾಶ್ರಿತರು ಈ ಭಾಗ್ಯಕ್ಕೆ ಪಾತ್ರರಾಗದೆ ತ್ರಿಶಂಕು ಲೋಕವಾಸಿಗಳಾಗಿದ್ದಾರೆ.
ಅವರದೇನು ? ಜಗತ್ತು ಉತ್ತರಿಸಬೇಕು ಅಥವಾ ಜಗತ್ತನ್ನು ಬೆರಳ ತುದಿಯಲ್ಲಿ ಆಡಿಸುವ, ಆಡಿಸಬಯಸುವ ಹಲಕೆಲವು ಕೈಗಳು ಹೇಳಬೇಕು. ಜಗತ್ತು ತಮ್ಮಂತಾಗಬೇಕು, ತಮ್ಮ ಧರ್ಮ ಮಾತ್ರವೇ ಭೂಮಿಯಾಕಾಶಗಳುದ್ದಗಲಕ್ಕೂ ಚಾಚಿಕೊಳ್ಳಬೇಕು ಎನ್ನುವ ಹಟದ ಜನರ ಧಾರ್ಷ್ಟ್ಯ ಇದಕ್ಕೆಲ್ಲ ಉತ್ತರಿಸಬೇಕಿದೆ.

‘ವಸುಧೈವ ಕುಟುಂಬಕಂ’ ಕನಸಾಗಿಯೇ ಉಳಿಯುವುದೇ?

-ಜಯಶ್ರೀ ದೇಶಪಾಂಡೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಜಗದಗಲ/ ಮೊಕಾದಿಶಾ: ಹೊಸ ನೆಲ, ಹೊಸ ಬೇರು – ಜಯಶ್ರೀ ದೇಶಪಾಂಡೆ

 • March 16, 2020 at 4:13 pm
  Permalink

  Story of tragedy, well narrated.

  Reply

Leave a Reply

Your email address will not be published. Required fields are marked *