Latestಜಗದಗಲ

ಜಗದಗಲ/ ಮಹಿಳೆಯ ಕಷ್ಟ `ಮುಟ್ಟು’ವ ಸ್ಕಾಟ್ಲೆಂಡ್ ಮಾದರಿ

ಯಾವುದೇ ದೇಶದ ಸಂವಿಧಾನ, ಕಾನೂನು, ಆಡಳಿತ ಮುಂತಾದ ಎಲ್ಲವೂ ಲಿಂಗಸಮಾನತೆಯ ತತ್ವದ ಮೇಲೆ ಇರುವುದು ನ್ಯಾಯೋಚಿತ. ಅದರೊಂದಿಗೆ, ದೈಹಿಕ ರಚನೆಯ ಕಾರಣವಾಗಿ ಹೆಣ್ಣಿಗೇ ಮೀಸಲಾಗಿರುವ ಕೆಲವು ಕಷ್ಟಗಳಿಗೆ ನೆರವಾಗುವ ಸೂಕ್ಷ್ಮ ಸಂವೇದನೆಯೂ ಅಷ್ಟೇ ಮುಖ್ಯ. ಹೆಣ್ಣು ಪ್ರತೀ ತಿಂಗಳೂ ಅನುಭವಿಸುವ ಮುಟು'್ಟ ಕೂಡ ರಾಷ್ಟ್ರೀಯ ಸೂಕ್ಷ್ಮತೆಗೆ ಅರ್ಹವಾದ ಮತ್ತು ಅದಕ್ಕೆ ನೆರವಾಗುವ ಕ್ರಮಗಳನ್ನು ಕೈಗೊಳ್ಳಲು ತಕ್ಕುದಾದ ವಿಷಯ ಎಂಬುದನ್ನು ಸ್ಕಾಟ್ಲೆಂಡ್ ತೋರಿಸಿದೆ. ಹೆಣ್ಣುಮಕ್ಕಳಿಗೆಋತುಸ್ರಾವ ಅಗತ್ಯ ಸಾಮಗ್ರಿ’ ಯನ್ನು ಉಚಿತವಾಗಿ ಒದಗಿಸುವ ಹೊಸ ಮಸೂದೆಯನ್ನು ಆ ದೇಶದ ಸಂಸತ್ತು ಅವಿರೋಧವಾಗಿ ಅಂಗೀಕರಿಸಿದೆ. ಸ್ಕಾಟ್ಲೆಂಡ್ ಇಂಥ ಅಪೂರ್ವ ಕ್ರಮವನ್ನು ಕೈಗೊಂಡ ಜಗತ್ತಿನ ಪ್ರಥಮ ದೇಶ.

ಲೋಕದಲ್ಲಿ ಹಣಕಾಸು ಬಡತನದೊಂದಿಗೆ, ಹಣವಿದ್ದರೂ ಗುಣವಾಗದ ಇನ್ನೂ ಹಲವು ಬಗೆಯ ಬಡತನಗಳಿವೆ; ಅವುಗಳಲ್ಲಿ ಹೆಣ್ಣು ಅನುಭವಿಸುವ ಬಡತನಗಳ ಪಟ್ಟಿ ದೊಡ್ಡದಾಗಿದ್ದು ಪೀರಿಯಡ್ ಪಾವರ್ಟಿ'- ಅಂದರೆಋತುಚಕ್ರ ಸಮಯದ ಬಡತನ’ವೂ ಅದರಲ್ಲಿ ಸೇರಿದೆ. “ಪೀರಿಯಡ್ ಪಾವರ್ಟಿ” ನಿವಾರಣೆಗೆ ಜಾಗತಿಕವಾಗಿ ಆಂದೋಲನವೇ ನಡೆಯುತ್ತಿದೆ ಎನ್ನುವುದನ್ನು ಗಮನಿಸಬೇಕು. ಹೆಣ್ಣಿನ ಬದುಕಿನಲ್ಲಿ ಅಂದಾಜು ನಾಲ್ಕು ದಶಕಗಳ ಕಾಲ ಹಾಸುಹೊಕ್ಕಾಗಿರುವ ಪ್ರತೀತಿಂಗಳ ಮುಟ್ಟಿನ ಮೂರರಿಂದ ಐದು ದಿನಗಳಿಗೆ ಬೇಕಾಗುವ ಸ್ಯಾನಿಟರಿ ಪ್ಯಾಡ್, ಟಾಂಪನ್, ಕಪ್ ಮೊದಲಾದ ಅಗತ್ಯ ವಸ್ತುಗಳನ್ನು ಹೊಂದಿಸಿಕೊಳ್ಳುವುದು ಅವಳ ಆದ್ಯತೆ- ಸಮಸ್ಯೆ ಆಗಿರುತ್ತದೆ.

ಜಗತ್ತಿನ ಹಲವಾರು ಮುಂದುವರೆದ ದೇಶಗಳ ಹೆಣ್ಣುಮಕ್ಕಳಿಗೂ ಇದೇ ದೊಡ್ಡ ಸಮಸ್ಯೆ ಎಂದಾಗಿರುವಾಗ, ಇನ್ನು ಭಾರತದಂಥ ದೇಶದಲ್ಲಿ ಇರುವ ಬಡ, ಗ್ರಾಮೀಣ, ಅನಕ್ಷರಸ್ಥ, ಜಾತಿಗ್ರಸ್ತ, ಧಾರ್ಮಿಕ ಮೂಢನಂಬಿಕೆ ಹೆಚ್ಚಿರುವ ಮಹಿಳಾ ಸಮುದಾಯಗಳಲ್ಲಿ ಈ ಸಮಸ್ಯೆಯ ಆಳಅಗಲಗಳನ್ನು ಊಹಿಸುವುದೂ ಕಷ್ಟ. ಇಂಥದೊಂದು ಸಮಸ್ಯೆಯನ್ನು ಕೈಗೆತ್ತಿಕೊಂಡ ಯೂರೋಪ್ ಖಂಡದ ಸ್ಕಾಟ್ಲೆಂಡ್ ದೇಶದ ಸಂಸತ್ತು “ಮಹಿಳೆಯರೇ ಚಿಂತೆ ಬಿಡಿ, ನಿಮ್ಮೆಲ್ಲರಿಗೂ ಬೇಕಾದ ಈ ಅಗತ್ಯ ವಸ್ತುಗಳನ್ನು ಸರ್ಕಾರವೇ ಉಚಿತವಾಗಿ, ನೀವು ಇರುವ ಕಡೆ ಕೈಗೆಟುಕುವಂತೆ ಒದಗಿಸುತ್ತದೆ” ಎಂಬ ಭರವಸೆ ನೀಡಿ ಅದಕ್ಕೆ ಬೇಕಾದ ಕಾನೂನು ಜಾರಿಮಾಡಿದೆ (24 ನವೆಂಬರ್ 2020). ಆ ಮೂಲಕ ಮಹಿಳೆಯರ ಈ ಕಷ್ಟಕ್ಕೆ ಆಡಳಿತಾತ್ಮಕವಾಗಿ ಮಿಡಿದ ಜಗತ್ತಿನ ಮೊದಲ ದೇಶವೆಂಬ ದಾಖಲೆ ಬರೆದಿದೆ.

“ಋತುಸ್ರಾವ ಅಗತ್ಯ ಸಾಮಗ್ರಿ (ಉಚಿತ ಪೂರೈಕೆ) ಸ್ಕಾಟ್ಲೆಂಡ್ ಮಸೂದೆ” ಯನ್ನು ಸ್ಕಾಟ್ಲೆಂಡ್ ಸಂಸತ್ತು ಅವಿರೋಧವಾಗಿ ಅಂಗೀಕರಿಸಿದೆ. ಲೇಬರ್ ಪಕ್ಷದ ಸಂಸದೆ ಮೋನಿಕ ಲೆನ್ನನ್ ಸಂಸತ್ತಿನಲ್ಲಿ ಕಳೆದ ವರ್ಷ ಈ ಮಸೂದೆಯನ್ನು ಮಂಡಿಸಿದ್ದರು. ಈಗ ಅದು ಅಂಗೀಕೃತವಾದ ಮೇಲೆ, `ಪೀರಿಯಡ್ ಪಾವರ್ಟಿ’ ಯನ್ನು ಇತಿಹಾಸಕ್ಕೆ ಸರಿಸುವುದರಲ್ಲಿ ಸ್ಕಾಟ್ಲೆಂಡ್ ಕೊನೆಯ ದೇಶ ಆಗುವುದಿಲ್ಲ, ಈಗ ನಾವು ಈ ವಿಚಾರದಲ್ಲಿ ಮೊದಲ ದೇಶ ಅನ್ನಿಸಿಕೊಳ್ಳುವ ಅವಕಾಶ ಪಡೆದೆವಷ್ಟೆ ಎಂಬಂಥ ಹೆಮ್ಮೆಯ ಮಾತುಗಳನ್ನು ಆಡಿದರು. ಈ ಮಾತುಗಳಲ್ಲಿ ಈ ಮಹಿಳಾಪರ ಕ್ರಮ ಮುಂದೆ ಅನೇಕ ದೇಶಗಳಲ್ಲೂ ಜಾರಿಗೆ ಬರುವ ಒಳ್ಳೆಯ ಸೂಚನೆಯಿದೆ. ಈ ಮಸೂದೆ ಜಾರಿಗಾಗಿ ಶಿಕ್ಷಣ ಸಂಸ್ಥೆಗಳು, ಕಾರ್ಮಿಕ ಸಂಘಟನೆಗಳು, ಸಮಾಜ ಸೇವಾ ಸಂಸ್ಥೆಗಳು, ಮಹಿಳಾ ಸಂಘಟನೆಗಳು ಎಲ್ಲವೂ ಒಂದಾಗಿ ಸೇರಿ ಸ್ಕಾಟ್ಲೆಂಡ್ ದೇಶದಾದ್ಯಂತ ಆಂದೋಲನವನ್ನೇ ನಡೆಸಿದ್ದವು. ದೇಶದ ಅಸಮಾನತೆಯ ಅಂದಾಜಿನ ಪ್ರಕಾರ, ಅಲ್ಲಿನ ಶೇ. 20 ರಷ್ಟು ಮಹಿಳೆಯರು ಬಡತನದಲ್ಲಿ ಬದುಕುತ್ತಿದ್ದು, ಅವರಿಗೆಲ್ಲ ಇದು ನೆಮ್ಮದಿ ನೀಡಲಿದೆ.

ಸ್ಕಾಟ್ಲೆಂಡ್ ದೇಶದ ಪ್ರಥಮ ಸಚಿವೆ ನಿಕೋಲ ಸ್ಟರ್ಜನ್ ಹೇಳುವ ಹಾಗೆ ಮಹಿಳೆಯರು ಮತ್ತು ಹುಡುಗಿಯರ ಪಾಲಿಗೆ ಇದೊಂದು ಅಭೂತಪೂರ್ವ ಕಾಯಿದೆ. ಆ ದೇಶದಲ್ಲಿ ಅಧಿಕಾರದಲ್ಲಿ ಇಲ್ಲದ ಇತರ ಪಕ್ಷಗಳೂ ಈ ಕಾಯಿದೆಗೆ ಪೂರ್ತಿ ಬೆಂಬಲ ವ್ಯಕ್ತಪಡಿಸಿದವು ಎನ್ನುವುದೇ ವಿಶೇಷ. ಇನ್ನುಮುಂದೆ, ಶಾಲೆ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ, ಸಮುದಾಯ ಕೇಂದ್ರಗಳು, ಯುವಜನ ಕ್ಲಬ್‍ಗಳು, ಔಷಧಿ ಅಂಗಡಿಗಳು ಮುಂತಾದ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ, ಸಾರ್ವಜನಿಕ ಸರ್ಕಾರಿ ಕಟ್ಟಡಗಳಲ್ಲಿ ಈ ಸಾಮಗ್ರಿ ಉಚಿತವಾಗಿ ಲಭ್ಯವಾಗಲಿದೆ. ಇದರ ಪೂರೈಕೆ ಅಬಾಧಿತವಾಗಿರುವಂತೆ ನೋಡಿಕೊಳ್ಳುವುದು ಶಿಕ್ಷಣ ಸಂಸ್ಥೆಗಳು ಮತ್ತು ಸ್ಥಳೀಯ ಆಡಳಿತಗಳ ಹೊಣೆ ಆಗಿರುತ್ತದೆ.

ಋತುಸ್ರಾವದ ಸಾಮಗ್ರಿಯನ್ನು ಒದಗಿಸುವ ಸ್ಕಾಟ್ಲೆಂಡ್ ದೇಶದ ಈ ಕ್ರಮ ಇನ್ನೂ ಹಲವು ದೇಶಗಳಿಗೆ ಪ್ರೇರಣೆ ನೀಡಲಿದೆ. ಈಗಾಗಲೇ ಕಾಯಿದೆ ಇಲ್ಲದಿದ್ದರೂ ಸರ್ಕಾರಿ ಘೋಷಣೆಯಂತೆ ಇಂಗ್ಲೆಂಡ್ ತನ್ನ ಶಾಲೆ ಕಾಲೇಜುಗಳಲ್ಲಿ, ಗ್ರಂಥಾಲಯಗಳಲ್ಲಿ, ಮನರಂಜನಾ ಕೇಂದ್ರಗಳಲ್ಲಿ ಈ ಸಾಮಗ್ರಿಯನ್ನು ಎರಡು ವರ್ಷಗಳಿಂದೀಚೆಗೆ ಉಚಿತವಾಗಿ ಒದಗಿಸುತ್ತಿದ್ದು, ಈ ಸೌಲಭ್ಯವನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಯಿದೆ. ನ್ಯೂಜಿಲೆಂಡ್ ದೇಶದಲ್ಲಿ ಕೂಡ ಈ ವರ್ಷ ಇದನ್ನು ಜಾರಿಗೆ ತರಲಾಗಿದೆ. ನಮ್ಮ ಭಾರತದಂಥ ದೊಡ್ಡ ದೇಶದ ಅಪಾರ ಸಂಖ್ಯೆಯ ಹೆಣ್ಣುಮಕ್ಕಳು ಕೂಡ ಈ ಬಗೆಯ “ಬೇಟಿ ಬಚಾವ್”- ಅಂದರೆ ಪ್ರತೀ ತಿಂಗಳ ಋತುಸ್ರಾವದ ಕಷ್ಟಗಳಿಂದ ಅವರನ್ನು ಉಳಿಸುವ, ಪಾರುಮಾಡುವ ಮಹತ್ವದ ಕೊಡುಗೆಗೆ ಕಾಯುತ್ತಿದ್ದಾರೆ.

  • ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *