ಜಗದಗಲ/ ನೂರು ದಿನ ದಾಟಿದ ಇರಾನ್ ಮಹಿಳೆಯರ ಪ್ರತಿಭಟನೆ
ಹಿಜಾಬ್ ಸರಿಯಾಗಿ ಹಾಕಿಲ್ಲ ಎಂಬ ಕಾರಣಕ್ಕೆ ಮಹ್ಸಾ ಅಮೀನಿ ಎಂಬ ಯುವತಿಯ ಹತ್ಯೆ ಆದೊಡನೆ, ಇರಾನ್‍ನಲ್ಲಿ ಮಡುಗಟ್ಟಿದ್ದ ಆಕ್ರೋಶ ಸಿಡಿಯಿತು. ಅಲ್ಲಿನ ಆಡಳಿತದ ವಿರುದ್ಧ ಇಂಥ ಪ್ರತಿರೋಧ ಯಾರೂ ಊಹಿಸಿರಲಿಲ್ಲ. ಧಾರ್ಮಿಕ ಕಟ್ಟುಪಾಡುಗಳ ನೆಲೆಯಲ್ಲಿ ನಡೆಯುವ ಸರ್ವಾಧಿಕಾರಿ ಆಡಳಿತದ ಮೊದಲ ಗುರಿ ಕಾಲಕಾಲಕ್ಕೆ ಮಹಿಳೆಯ ಹಕ್ಕುಗಳ ದಮನವೇ ಆಗಿರುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾದರೂ ಮಹಿಳೆಯರ ಹಕ್ಕುಗಳನ್ನು ಎತ್ತಿಹಿಡಿಯುವ ಈ ಪ್ರತಿಭಟನೆಯಲ್ಲಿ ಪುರುಷರೂ ಪಾಲ್ಗೊಳ್ಳುತ್ತಿದ್ದಾರೆ. `ಮಹಿಳೆ- ಜೀವನ- ಸ್ವಾತಂತ್ರ್ಯ’ ಎಂಬ ಘೋಷಣೆಯ ಇರಾನ್ ಮಹಿಳೆಯರ ಈ ಹೋರಾಟಕ್ಕೆ ದೇಶವಿದೇಶಗಳಲ್ಲಿ ಇನ್ನಿಲ್ಲದ ಬೆಂಬಲ ವ್ಯಕ್ತವಾಗುತ್ತಿದೆ.
ಮಹ್ಸಾ ಅಮೀನಿ ಎಂಬ 22 ವರ್ಷದ ಯುವತಿ ಹಿಜಾಬ್ ಸರಿಯಾಗಿ ತೊಡದೆ ಸಂಚರಿಸುತ್ತಿದ್ದಾಳೆ ಎಂದು ಇರಾನ್ ದೇಶದ ನೈತಿಕ ಪೊಲೀಸ್‍ಗಿರಿಯ ದಬ್ಬಾಳಿಕೆ ನಡೆದು ಸೆ. 16 ರಂದು ಅವಳ ಹತ್ಯೆ ಆಗಿ ನೂರು ದಿನಗಳಾದವು. ಆದರೆ ಅಂದು ಹೊತ್ತಿಕೊಂಡ ಪ್ರತಿಭಟನೆಯ ಬೆಂಕಿ ಇನ್ನೂ ಆರದೆ, ಜ್ವಾಲೆಗಳು ಇಮ್ಮಡಿಸುತ್ತಿವೆ. ಶಾಲೆಕಾಲೇಜುಗಳ ಹುಡುಗಿಯರು, ಯುವತಿಯರು ಬೀದಿಗಿಳಿದು, ಸಾರ್ವಜನಿಕವಾಗಿ ತಮ್ಮ ತಲೆಯ ಮೇಲಿನ ಹಿಜಾಬ್‍ಗಳನ್ನು ಕಿತ್ತೆಸೆಯುತ್ತಿದ್ದಾರೆ, ಅವುಗಳನ್ನು ಬೆಂಕಿಗೆ ಎಸೆಯುತ್ತಿದ್ದಾರೆ, ಅಲ್ಲದೆ ತಲೆಗೂದಲನ್ನು ಕತ್ತರಿಸಿ ಬಿಸಾಕಿ ಅದಕ್ಕೂ ಬೆಂಕಿ ಹಚ್ಚುತ್ತಿದ್ದಾರೆ. ದಂಗೆಯನ್ನು ಹತ್ತಿಕ್ಕುವ ಆಡಳಿತದ ಕಠಿಣ ಕ್ರಮಗಳಿಂದಾಗಿ ಈಗಾಗಲೇ ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ, ನೂರಾರು ಜನರ ಹತ್ಯೆ ನಡೆಯುತ್ತಿದೆ ಎಂಬ ಕಳವಳ ಹೆಚ್ಚುತ್ತಿದೆ. ಹೋರಾಟಕ್ಕೆ ಬೆಂಬಲ ಸೂಚಿಸಿದ ಹದಿಹರೆಯದ ಹುಡುಗಿಯರನ್ನು ಆರಿಸಿ ಕೊಲ್ಲಲಾಗುತ್ತಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡವರನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದೂ ನಡೆಯುತ್ತಿದೆ.

ಮಹಿಳೆಯರ ಹೋರಾಟಕ್ಕೆ ಬೆಂಬಲ ನೀಡುವುದೇ ಮಹಾಪರಾಧ ಎಂದು ಇರಾನ್ ಆಡಳಿತ ಪರಿಗಣಿಸಿದೆ. ಆದರೂ ದೇಶಾದ್ಯಂತ ಅದಕ್ಕೆ ಅನುಮೋದನೆ ಸಿಗುತ್ತಿದೆ. ಇತ್ತೀಚೆಗೆ ನಡೆದ ವಿಶ್ವ ಕಪ್ ಫುಟ್‍ಬಾಲ್ ಪಂದ್ಯದಲ್ಲಿ ಇರಾನ್‍ನ ಆಟಗಾರರು ತಮ್ಮ ರಾಷ್ಟ್ರಗೀತೆಯನ್ನು ಹಾಡದೆ ಮೌನವಾಗಿ ನಿಂತು, ಸತ್ತವರಿಗೆ ದುಃಖ ಮತ್ತು ಕ್ರೂರ ಆಡಳಿತಕ್ಕೆ ವಿರೋಧ ಸೂಚಿಸಿದರು. ಇನ್ನು ಸಾಮಾಜಿಕ ವಾಧ್ಯಮದಲ್ಲಿ ಜಗತ್ತಿನ ಎಲ್ಲ ವಯೋಮಾನದ ಜನರೂ ಇರಾನ್‍ನ ಧೈರ್ಯವಂತೆಯರ ಬೆನ್ನುತಟ್ಟುತ್ತಿದ್ದಾರೆ.
ಇರಾನ್‍ನಲ್ಲಿ ನಲವತ್ತಮೂರು ವರ್ಷಗಳ ಹಿಂದೆ ಇಸ್ಲಾಮಿ ಕ್ರಾಂತಿ ನಡೆದು ದೇಶ ಇಸ್ಲಾಮಿಕ್ ರಿಪಬ್ಲಿಕ್ ಆದಮೇಲೆ, ಮಹಿಳೆಯರ ಬದುಕಿನಲ್ಲಿ ತಲ್ಲಣ ತಳಮಳಗಳು ಹೆಚ್ಚಿವೆ. ಐದು ವರ್ಷಗಳಿಂದ ಈಚೆಗೆ ಇರಾನ್ ಆಡಳಿತದ ವಿರುದ್ಧ ಅಸಹನೆ ವ್ಯಕ್ತವಾಗಿದ್ದರೂ ಈ ನೂರು ದಿನಗಳ ಹೋರಾಟದ ಸ್ವರೂಪವೇ ಬೇರೆ. ಈ ಹಿನ್ನೆಲೆಯಲ್ಲಿ `ಇನ್ನು ಇರಾನ್ ಮಹ್ಸಾ ಅಮೀನಿ ಪೂರ್ವದ ದಿನಗಳಿಗೆ ಎಂದೂ ಮರಳಲಾರದು’ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ದೇಶದ ಬಹುಪಾಲು ನಗರಗಳಲ್ಲಿ ಪ್ರತಿಭಟನೆಗಳು ಬೆಳೆಯುತ್ತಿವೆ.
ನಿಜವಾಗಿ ಹೇಳುವುದಾದರೆ ಹಿಜಾಬ್ ಕಿತ್ತು ಎಸೆಯುವುದೇ ಮಹಿಳಾ ಶಕ್ತಿಯ ದ್ಯೋತಕವಾಗಿ, ಹೆಣ್ಣಿನ ಪ್ರತಿರೋಧದ ಸಂಕೇತವಾಗಿ ಗಟ್ಟಿಗೊಂಡಿದೆ. ಗಮನಾರ್ಹ ಸಂಗತಿ ಎಂದರೆ, ಅಮೆರಿಕದ `ಟೈಮ್’ ವಾರಪತ್ರಿಕೆ 2022 ರ ಸಾಲಿಗೆ ವರ್ಷದ ವ್ಯಕ್ತಿ’ಯಾಗಿ ಯುಕ್ರೇನ್‍ನ ಜೆಲೆನ್‍ಸ್ಕಿಯನ್ನು ಆಯ್ಕೆ ಮಾಡಿದ್ದರೆ, ಸರ್ವಾಧಿಕಾರವನ್ನು ಪ್ರತಿಭಟಿಸಿದ ಇರಾನ್ ಮಹಿಳೆಯರನ್ನು ‘ವರ್ಷದ ಹೀರೋಗಳು’ ಎಂದು ಆಯ್ಕೆ ಮಾಡಿದೆ. ಇದು ಒಂದು ರೀತಿಯಲ್ಲಿ ಜಗತ್ತೇ ಅವರ ಬೆನ್ನು ತಟ್ಟಿ ಬೆಂಬಲ ವ್ಯಕ್ತಪಡಿಸಿದಂತೆ. ಪ್ರತಿರೋಧ ಮಾಡಿದ ಇರಾನ್ ಮಹಿಳೆಯರು ಜಗತ್ತಿಗೇ ಮಾದರಿಯಾಗಿದ್ದಾರೆ.
ಅಫ್ಗಾನಿಸ್ತಾನದಲ್ಲಿ ಈಗ ಆಗಿರುವಂತೆ ಇರಾನ್ ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗ ನಿಷೇಧವಾಗಿಲ್ಲವಾದರೂ ಮುಂದೇನು ಆಗಬಹುದು ಎಂಬ ಆತಂಕವಂತೂ ಇದ್ದೇ ಇದೆ. ಆದರೆ ಹದಿಹರೆಯದ ಹುಡುಗಿಯರು, ಯುವತಿಯರೇ ಆರಂಭಿಸಿದ ಹೋರಾಟ ಸರ್ವಾಧಿಕಾರಕ್ಕೆ ಸವಾಲು ಹಾಕಿರುವುದಂತೂ ದಿಟ. (ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹ.)
- ಹಿತೈಷಿಣಿ ಬಳಗ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.