ಜಗದಗಲ/ ಜೀವಪರ ಕಾವ್ಯಪ್ರೀತಿಯ ಲೂಯಿಸ್ ಗ್ಲಕ್ – ಚನ್ನೇಶ್ ನ್ಯಾಮತಿ

ಜೀವನದ ನೋವುನಲಿವುಗಳ ಅಭಿವ್ಯಕ್ತಿಗೆ ಕಾವ್ಯವನ್ನೇ ಆರಿಸಿಕೊಂಡ ಅಮೆರಿಕದ ಕವಯತ್ರಿ ಲೂಯಿಸ್ ಎಲಿಜಬತ್ ಗ್ಲಕ್ 2020 ರ ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ. ಕಾವ್ಯ ಎಂದರೆ ಬರೀ ಸೌಂದರ್ಯೋಪಾಸನೆ ಅಲ್ಲ ಎಂದು ನಂಬಿದ ಅವರಿಗೆ ಬರಹ ಎನ್ನುವುದು ತನ್ನನ್ನು ತಾನೇ ಅರ್ಥೈಸಿಕೊಳ್ಳುವ ಜೀವಂತ ಮಾರ್ಗ. ಈ ಬಾರಿ ರಸಾಯನ ಶಾಸ್ತ್ರದಲ್ಲಿ ಎಮ್ಯಾನ್ಯುಯಲ್ ಶೆಪೆಂಟರ್ ಮತ್ತು ಜೆನ್ನಿಫರ್ ಡಾನಾ, ಭೌತಶಾಸ್ತ್ರದಲ್ಲಿ ಆಂಡ್ರಿಯಾಗೆಜ್ ಈ ಮೂವರಲ್ಲದೆ, ಲೂಯಿಸ್ ಗ್ಲಕ್, ನೊಬೆಲ್ ಪಡೆದ ನಾಲ್ಕನೆಯ ಮಹಿಳೆಯಾಗಿ ಮಿಂಚುತ್ತಿದ್ದಾರೆ.

Falling in love with poetry…. ನೊಬೆಲ್ ಪ್ರಶಸ್ತಿ ಪುರಸ್ಕøತೆ ಅಮೆರಿಕದ ಕವಯತ್ರಿ ಲೂಯಿಸ್‌ ಗ್ಲಕ್‌ ಕಾವ್ಯವನ್ನು ಹುಚ್ಚಾಗಿ ಪ್ರೀತಿಸುವ ಗೀಳು ಬೆಳೆಸಿಕೊಂಡವರು‌. ಚಿಕ್ಕವರಿದ್ದಾಗಲೇ ಅಜ್ಜಿಯಿಂದ ಓದಿನ ಪ್ರೀತಿಗೆ ಒಳಗಾಗಿ ಅಪ್ಪನಿಂದ ಮತ್ತಷ್ಟು ಹೆಚ್ಚಿಸಿಕೊಂಡವರು, ಕಾಲೇಜು ಕಟ್ಟೆಯನ್ನು ಹತ್ತಿದರೂ ಪದವಿಯನ್ನೇನೂ ಗಳಿಸಿದವರಲ್ಲ. ಆದರೂ ಬದುಕನ್ನು ಕೇವಲ ಸೌಂದರ್ಯೋಪಾಸನೆ ಅಲ್ಲ ಎಂದು ದೃಢವಾಗಿ ನಂಬಿದವರು. ತಮ್ಮ ಅಸ್ಮಿತೆಯನ್ನು ಉಳಿಸಕೊಳ್ಳಲು ಅನುಭವ ಹಾಗೂ ತಮ್ಮನ್ನು ತಾವೇ ಕಾಯ್ದುಕೊಳ್ಳುವ ಒತ್ತಾಸೆಗೆ ಬೆನ್ನು ಹತ್ತಿದವರು. “ಕಾವ್ಯಗಳ ಕಮ್ಮಟ ಹಾಗೂ ಕಾರ್ಯಾ‌ಗಾರ”ಗಳಿಂದಲೇ ವಿಶ್ವವಿದ್ಯಾಲಯದ ಹೊರಗುಳಿದೇ ಕಲಿತು ಬೆಳೆದರು. ಬೆಳದುದಷ್ಟೇ ಅಲ್ಲ! ಹೆಮ್ಮರವಾಗಿ ಅಮೆರಿಕ ರಾಷ್ಟ್ರಕವಿಯೆನ್ನಬಹುದಾದ “ಕವಿ ಪ್ರಶಸ್ತಿ” ಯನ್ನು ಸಂಪಾದಿಸಿದ ಮಹಿಳೆ.

ಲೂಯಿಸ್ ಗ್ಲಕ್ 1943 ರಲ್ಲಿ ನ್ಯೂಯಾರ್ಕ್‌ನಲ್ಲಿ ಜನಿಸಿದರು ಮತ್ತು ಇದೀಗ ಮ್ಯಾಸಚೂಸೆಟ್ಸ್‌ನ ಕೇಂಬ್ರಿಜ್‌ ಅಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಬರವಣಿಗೆಯ ಹೊರತಾಗಿ ಅವರು ಕನೆಕ್ಟಿಕಟ್‌ನ ನ್ಯೂ ಹೆವನ್‌ನ ಯೇಲ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಭಾಷೆಯ ಸಂಯೋಜಿತ ಪ್ರಾಧ್ಯಾಪಕರಾಗಿದ್ದಾರೆ. 1968 ರಲ್ಲಿ ಫಸ್ಟ್‌ ಬಾರ್ನ್‌ (First Born) ಕಾವ್ಯ ಸಂಕಲನವನ್ನು ಪ್ರಕಟಿಸಿ ಶೀಘ್ರದಲ್ಲೇ ಅಮೆರಿಕದ ಸಮಕಾಲೀನ ಸಾಹಿತ್ಯದಲ್ಲಿ ಪ್ರಮುಖ ಕವಿಗಳಲ್ಲಿ ಒಬ್ಬರಾಗಿ ಮೆಚ್ಚುಗೆ ಪಡೆದರು. ಸುಮಾರು 14 ಕವಿತಾ ಸಂಕಲನಗಳನ್ನು ಎರಡು ಪ್ರಮುಖ ಗದ್ಯ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಅವರು ಈಗಾಗಲೇ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ, ಅವುಗಳಲ್ಲಿ ಪುಲಿಟ್ಜೆರ್ ಪ್ರಶಸ್ತಿ (1993) ಮತ್ತು ರಾಷ್ಟ್ರೀಯ ಪುಸ್ತಕ ಪ್ರಶಸ್ತಿ (2014)ಗಳು ಪ್ರಮುಖವಾದವು. ಕೆಲವು ವಿಶ್ವವಿದ್ಯಾಲಯಗಳ ಗೌರವ ಡಾಕ್ಟೊರೇಟ್‌ ಕೂಡ ಅವರ ಮುಡಿಗೇರಿವೆ.

ಲೂಯಿಸ್‌ ನಟಿಯಾಗಬೇಕೆಂಬ ಕನಸು ಕಂಡವರು, ಓದಿನ ಪ್ರೀತಿಯಲ್ಲಿ ಕಾವ್ಯದ ಮೋಹಕ್ಕೆ ಒಳಗಾಗಿ ಕವಿಯಾದದ್ದು ಒಂದು ಸೋಜಿಗ. ಓದಿನ ಸಾಲುಗಳನ್ನು ಬಾಯಿ ಪಾಠ ಮಾಡಿಕೊಂಡು, ಮಾತನ್ನು ಸುಲಭವಾಗಿ ಪುನರುಚ್ಚರಿಸಲು ಕಲಿತದ್ದೇ ನಟಿಯಾಗಲು ಸಾಕೆಂಬ ಭ್ರಮೆಯಿಂದ ಹೊರಬರಲು ಪುಸ್ತಕಗಳ ಓದಿನ ಪ್ರೀತಿ ಕಲಿಸಿದ ಪಾಠವನ್ನೇ ದಾಳವಾಗಿ ಬಳಸಿದವರು. ಇದನ್ನೇ ಅಧ್ಯಾಪನದಲ್ಲಿ ಬಳಸುವ ಚತುರೆ. ಹಾಗಾಗಿ ಯೇಲ್‌ ವಿಶ್ವವಿದ್ಯಾಲಯದ ಸಂಯೋಜಿತ ಪ್ರಾಧ್ಯಾಪಕರಾಗಿಯಲ್ಲದೇ, ಸ್ಟಾನ್ ಫರ್ಡ್ ಬಾಸ್ಟನ್ ‌ ವಿವಿಗಳಲ್ಲೂ ಬೋಧಿಸುತ್ತಾರೆ. ಹಾಗನ್ನುವುದಕ್ಕಿಂತಾ ಅವರ ಮಾತಿನಲ್ಲೇ ಹೇಳುವುದಾದರೇ, ಕಲಿಸುತ್ತಾ ಕಲಿಯುತ್ತಾರೆ!

ಲೂಯಿಸ್‌ ತಾನೊಂದು ಸ್ವತಃ ಶುದ್ಧ ಆತ್ಮವಾಗುವ ಹೆಬ್ಬಕೆಯನ್ನು ಬೆಳೆಸಿಕೊಂಡ ಮಹಿಳೆ. ಇದೊಂದು ಬಗೆಯಲ್ಲಿ ತನ್ನಿಂದ ತಾನೆ ಬಿಡುಗಡೆಗೊಳ್ಳುವ ಮಾರ್ಗ ಎಂದು ತಿಳಿದಿದ್ದರು. ದೇಹವು ನಿರ್ಮಿತಿ ಹಾಗೂ ಸಮೃದ್ಧತೆಯ ಐಹಿಕತೆಯಿಂದ ಬಿಡುಗಡೆಯಾಗುವುದು ಜೀವನದ ಮುಖ್ಯ ಗುರಿಯೆಂದೇ ಭಾವಿಸಿದವರು. ಇಂತಹ ಮನಸ್ಸಿನ ಕವಯತ್ರಿ ಬಾಲ್ಯದಲ್ಲೇ ಕಾವ್ಯದ ಕಾರ್ಯಾಗಾರಗಳಿಂದ ಪ್ರಭಾವಿತರಾದವರು. ಶಾಲಾ ದಿನಗಳಲ್ಲೂ ಶ್ರದ್ಧೆ ಮತ್ತು ತಾಳ್ಮೆಯನ್ನು ಕವಿಗಿರಬೇಕಾಗದ ಗುಣಗಳೆಂದು ಕಲಿಸಿವರು ಆಗಿನ ಶಿಕ್ಷಕರು. ಕಾವ್ಯ ಕಮ್ಮಟಗಳ ಶಿಕ್ಷಕರನ್ನೂ ಶಾಲಾ ಶಿಕ್ಷಕರನ್ನೂ ಶ್ರದ್ಧೆ ಮತ್ತು ತಾಳ್ಮೆಗಳನ್ನು ಕಲಿಸಿದ್ದಕ್ಕೆ ತಮ್ಮ ಅನೇಕ ಸಂದರ್ಶನಗಳಲ್ಲಿ ನೆನಪಿಸುತ್ತಾರೆ.

ಬರಹ ಎಂಬುದು ತನ್ನನ್ನು ತಾನೇ ಅರ್ಥೈಸಿಕೊಳ್ಳಲು, ಅನುಭವಿಸಿಕೊಳ್ಳಲು ಹುಡುಕಿಕೊಂಡ ಜೀವಂತ ಮಾರ್ಗ. ಬದುಕೆಂಬುದು ಕೇವಲ ಸೌಂದರ್ಯೋಪಾಸನೆಯಲ್ಲ. ದಿನವೂ ದಾಟುವ ಕಷ್ಟ-ಸುಖಗಳ ಹಾದಿಯನ್ನು ಜತನದಿಂದ ಉತ್ತಮಿಸಿಕೊಳ್ಳಲು ಕಲಿಯುವ ವಿಶ್ವಾಸ ಎಂದು ದೃಢವಾಗಿ ನಂಬಿದವರು ಗ್ಲಿಕ್.‌ ಕಾವ್ಯ ಗುಣವನ್ನೂ ಇದರ ಗುರಿಯತ್ತಲೇ ವಿಭಾಗಿಸಿದವರು. ಕೇವಲ ಸೌಂದರ್ಯದ ದನಿಯಾಗದೇ ನಿತ್ಯ ಕಾಡುವ ಎಲ್ಲಾ ಕಷ್ಟಗಳಲ್ಲೂ ಅಸ್ತಿತ್ವವನ್ನು ಕಾಪಾಡುವ ದನಿಯನ್ನು ಬೆಳೆಸಿದ ಕವಿ. ಕಾವ್ಯದ ಅಥವಾ ಯಾವುದೇ ಬರಹದ ಮೂಲ ಪಠ್ಯದ ಮೊದಲ ಸಾಲು ಅಥವಾ ಸದ್ದು ಬರಹಗಾರರಿಗೇ ಕಿವಿಯಲ್ಲಿ ಅನುರಣಿಸಬೇಕು. ಆಗ ಅದು ಬೆಳೆದು ಪೂರ್ಣ ಪಾಠವಾಗಲು ಸಾಧ್ಯ. ಹಾಗಾಗಲು ಕಷ್ಟ-ಸುಖಗಳು ಕೇವಲ ಕಂಡ ಭ್ರಮೆಯಾಗದೆ ಅನುಭವದ ಪ್ರತಿಫಲನವಾಗಬೇಕು ಎಂಬ ದೃಢ ನಂಬಿದ ಕವಯತ್ರಿ ಲೂಯಿಸ್.

ಗ್ಲಕ್ ಅವರನ್ನು ಆತ್ಮಚರಿತ್ರೆಯ ಕವಿ ಎಂದು ವಿವರಿಸಲಾಗುತ್ತದೆ. ಅವರ ಕಾವ್ಯ ಅದರ ಭಾವನಾತ್ಮಕ ತೀವ್ರತೆಗೆ ಹೆಸರುವಾಸಿಯಾಗಿವೆ. ಅವರ ಕಾವ್ಯವು ವೈಯಕ್ತಿಕ ಅನುಭವಗಳು ಮತ್ತು ಆಧುನಿಕ ಜೀವನವನ್ನು ಧ್ಯಾನಿಸಲು ಪುರಾಣ, ಇತಿಹಾಸ ಅಥವಾ ಪ್ರಕೃತಿಯನ್ನು ಚಿತ್ರಿಸುವುದರಲ್ಲಿ ಹೆಸರುವಾಸಿಯಾಗಿದೆ. ಹಲವಾರು ವಿದ್ವಾಂಸರ ಪ್ರಕಾರ ಗ್ಲುಕ್ ತಮ್ಮ ಕೃತಿಯಲ್ಲಿ, ಆಘಾತ, ಬಯಕೆ ಮತ್ತು ಪ್ರಕೃತಿಯ ಪ್ರಕಾಶಿಸುವ ಅಂಶಗಳನ್ನು ಕೇಂದ್ರೀಕರಿಸಿದ್ದಾರೆ. ಈ ವಿಶಾಲ ವಿಷಯಗಳನ್ನು ಅನ್ವೇಷಿಸುವಲ್ಲಿ, ಅವರ ಕಾವ್ಯವು ದುಃಖ ಮತ್ತು ಪ್ರತ್ಯೇಕತೆಯ ಸ್ಪಷ್ಟ ಅಭಿವ್ಯಕ್ತಿಗಳಿಗೆ ಹೆಸರುವಾಸಿಯಾಗಿದೆ.

“ಕಠಿಣ ಸೌಂದರ್ಯದಿಂದ ವೈಯಕ್ತಿಕ ಅಸ್ತಿತ್ವವನ್ನು ಸಾರ್ವತ್ರಿಕವಾಗಿಸುವ ಅವರ ಸ್ಪಷ್ಟವಾದ ಕಾವ್ಯಾತ್ಮಕ ಧ್ವನಿಗಾಗಿ ಲೂಯಿಸ್‌ ಎಲೆಜೆಬೆತ್‌ ಗ್ಲಿಕ್‌ ಅವರಿಗೆ 2020ರ ನೊಬೆಲ್‌ ಬಹುಮಾನವನ್ನು ನೀಡಲಾಗಿದೆ” ಎಂದು ನೊಬೆಲ್‌ ಸಾಹಿತ್ಯ ಅಕಾಡೆಮಿಯು ಅವರ ಕಾವ್ಯ ಪ್ರೀತಿಯನ್ನು ವಿಮರ್ಶಿಸಿದೆ.

ಚನ್ನೇಶ್ ನ್ಯಾಮತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *