ಜಗದಗಲ/ ಜರ್ಮನಿಯ `ವಿಶ್ವ ನಾಯಕಿ’ ಗೆ ಪ್ರೀತಿಯ ವಿದಾಯ

ಜಗತ್ತಿನ ಯಾವ ದೇಶದ ರಾಜಕೀಯ ಇತಿಹಾಸ ನೋಡಿದರೂ ಅದರಲ್ಲಿ `ಅಧಿಕಾರ ನಡೆಸಲು ಅಬಲೆಗೆ ಸಾಧ್ಯವಿಲ್ಲ’ ಎಂಬ ನಂಬಿಕೆಯೇ ಬಹುಪಾಲು ಅಂತರ್ಗತ; ಆದರೆ ಹಲವಾರು ದೇಶಗಳಲ್ಲಿ ಅಪಾರ ಶ್ರಮದಿಂದ ಅಧಿಕಾರ ಪಡೆಯುವ ಕೆಲವು ರಾಜಕೀಯ ನಾಯಕಿಯರು ತಮ್ಮ ಕಾಯಕ್ಷಮತೆಯಿಂದ ಮಿಂಚುತ್ತಾರೆ. ಜರ್ಮನಿಯ ಏಂಜೆಲಾ ಮರ್ಕೆಲ್ ಅಂಥ ಅಪರೂಪದ ನಾಯಕಿ. ಹದಿನೆಂಟು ವರ್ಷಗಳ ಆಡಳಿತದಲ್ಲಿ ಹಲವಾರು ಸಂಘರ್ಷಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಈ ಅಸಾಮಾನ್ಯ ಮಹಿಳೆ ರಾಜಕಾರಣದಿಂದ ನಿವೃತ್ತಿ ಘೋಷಿಸಿದಾಗ, ಜನರ ಹೃದಯದಲ್ಲಿ ಅವರ ಬಗ್ಗೆ ಇದ್ದ ಗೌರವ ಅಪೂರ್ವ ರೀತಿಯಲ್ಲಿ ವ್ಯಕ್ತವಾಯಿತು. ಯೂರೋಪ್ ರಾಜಕಾರಣದ ಚಹರೆಯನ್ನೇ ಬದಲಾಯಿಸಿದ ದಿಟ್ಟ ಮಹಿಳೆ ಏಂಜೆಲಾ ಮರ್ಕೆಲ್ ಜಾಗತಿಕ ನಾಯಕತ್ವಕ್ಕೂ ಮಾದರಿಯನ್ನು ಒದಗಿಸಿದ್ದಾರೆ.

ಚರ್ಚಿನ ಮುಖ್ಯಸ್ಥನ ಮಗಳಾಗಿ ಧಾರ್ಮಿಕ ವಾತಾವರಣದಲ್ಲೇ ಬೆಳೆದ, ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸಿ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ, ಘನತೆ ಗಾಂಭೀರ್ಯದ ನಡವಳಿಕೆಯಲ್ಲಿ ನಂಬಿಕೆಯಿಟ್ಟ ಯುವತಿ ಏಂಜೆಲಾ ಮರ್ಕೆಲ್ ಜರ್ಮನಿಯ ರಾಜಕಾರಣವನ್ನು ಪ್ರವೇಶಿಸಿದಾಗ ಎಂದಿನಂತೆ ಪುರುಷರಿಂದ ನಿರೀಕ್ಷಿತ ಟೀಕೆಟಿಪ್ಪಣಿಗಳ ಮಳೆ ಸುರಿಯಿತು. ಆದರೆ ಅದನ್ನು ಲೆಕ್ಕಿಸದೆ ತಮ್ಮ ಆತ್ಮವಿಶ್ವಾಸದ ಕೊಡೆ ಹಿಡಿದು ನಡೆದ ಅವರು ರಾಜಕಾರಣದಲ್ಲಿ ಮಹತ್ವದ ಹೆಜ್ಜೆ ಗುರುತುಗಳನ್ನು ಮೂಡಿಸಿದರು. ಅವರಿಗೆ ರಾಜಕೀಯ ಹಿನ್ನೆಲೆ ಇಲ್ಲ, ಸಾರ್ವಜನಿಕ ಜೀವನದ ಅನುಭವ ಇಲ್ಲ, ಅಧಿಕಾರ ನಡೆಸಿದ ಅನುಭವ ಇಲ್ಲ, ಮಿರುಗುವ ಪ್ರಭಾವಿ ವ್ಯಕ್ತಿತ್ವ ಇಲ್ಲ ಎಂದು ಅನೇಕರು ಆಡಿಕೊಂಡಿದ್ದರು. ಅವರನ್ನು ಆಯ್ಕೆ ಮಾಡಿದ್ದು ಜರ್ಮನ್ ರಾಜಕಾರಣದ ದೊಡ್ಡ ತಪ್ಪು ಎಂದು ಹೀಯಾಳಿಸಲಾಗಿತ್ತು – ಆದರೆ ಅದೇ ಏಂಜೆಲಾ ಮರ್ಕೆಲ್ ಮುಂದೆ ಜರ್ಮನಿಯ ರಾಣಿ',ಯೂರೋಪಿನ ಸಾಮ್ರಾಜ್ಞಿ’, `ವಿಶ್ವ ನಾಯಕಿ’ ಎಂದೆಲ್ಲಾ ಬಿರುದು, ಪ್ರಶಂಸೆ ಪಡೆದರು.

ಜರ್ಮನಿಯಲ್ಲಿ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಚಾನ್ಸೆಲರ್ (ಅಧ್ಯಕ್ಷ) ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ರಾಜಕೀಯ ನಿವೃತ್ತಿ ಘೋಷಿಸಿದ ಅವರು, ತಮ್ಮ ರಾಜಕೀಯ ಪಕ್ಷವಾದ `ಕ್ರಿಶ್ಚಿಯನ್ ಡೆಮೊಕ್ರಾಟಿಕ್ ಯೂನಿಯನ್’ ಅಧ್ಯಕ್ಷ ಸ್ಥಾನ ತ್ಯಜಿಸುವ ನಿರ್ಧಾರವನ್ನೂ ಪ್ರಕಟಿಸಿದರು. ಆ ಹಿನ್ನೆಲೆಯಲ್ಲಿ ಜನವರಿಯಲ್ಲಿ ಜರ್ಮನಿಯ ಜನತೆ ಅವರಿಗೆ ನೀಡಿದ ವಿದಾಯ ಅಭೂತಪೂರ್ವವಾಗಿತ್ತು. ಇಡೀ ದೇಶದ ಪ್ರಜೆಗಳು ರಸ್ತೆಗಳಲ್ಲಿ, ಬಾಲ್ಕನಿಗಳಲ್ಲಿ ಕಿಕ್ಕಿರಿದು ನೆರೆದು ಆರು ನಿಮಿಷಗಳ ಕಾಲ ಎಡೆಬಿಡದೆ ಕರತಾಡನ ಮಾಡಿ, ಏಂಜೆಲಾ ಅವರ ಮೇಲೆ ತಮಗಿರುವ ಪ್ರೀತಿಯನ್ನೂ ಅಭಿಮಾನವನ್ನೂ ಧನ್ಯವಾದವನ್ನೂ ವ್ಯಕ್ತಪಡಿಸಿದರು.

ಏಂಜೆಲಾ ಮರ್ಕೆಲ್ ಜರ್ಮನಿಯ ಆಡಳಿತದ ಸಾರಥ್ಯ ವಹಿಸಿದಾಗ ಒಂದುಗೂಡಿದ ಜರ್ಮನಿ ದೇಶದ ಅಭಿವೃದ್ಧಿಯ ಆಶಯಗಳು ಇನ್ನೂ ಈಡೇರಿರಲಿಲ್ಲ. ಯೂರೋಪ್ ಖಂಡದ ದೇಶಗಳಲ್ಲಿ ಯಾವುದರ ಬಗ್ಗೆಯೂ ಸುಲಭವಾಗಿ ಸಹಮತ ಸಿಗುತ್ತಿರಲಿಲ್ಲ. ಏಂಜೆಲಾ ಜರ್ಮನಿಯ ಚಾನ್ಸೆಲರ್ ಆದ ಮೇಲೆ ಸ್ವಂತ ದೇಶ ಜರ್ಮನಿಯ ಪ್ರಗತಿಗೆ ರೂಪರೇಷೆ ರೂಪಿಸಿ ಶ್ರಮಿಸುವುದರ ಜೊತೆಗೆ ಯೂರೋಪಿನ ಇನ್ನಿತರ ದೇಶಗಳನ್ನು ಸಂಭಾಳಿಸುವ ಮಹತ್ತರ ಜವಾಬ್ದಾರಿಗಳನ್ನು ಅವರು ನಿರ್ವಹಿಸಬೇಕಾಗಿತ್ತು. 2005 ರಲ್ಲಿ ಅವರು ಅಧಿಕಾರಕ್ಕೇರಿದ ಮುಂದಿನ ವರ್ಷಗಳಲ್ಲಿ ಯೂರೋಪಿನಲ್ಲಿ ಇನ್ನಿಲ್ಲದ ಆರ್ಥಿಕ ಬಿಕ್ಕಟ್ಟು ತಲೆದೋರಿ ಕೆಲವು ದೇಶಗಳು ದಿವಾಳಿಯಾದವು. ಐರೋಪ್ಯ ಒಕ್ಕೂಟವು ಛಿದ್ರವಾಗದಂತೆ ನೋಡಿಕೊಳ್ಳುವ, ಬಲಾಢ್ಯ ದೇಶಗಳ ಸವಾಲು ಎದುರಿಸಲು ಒಗ್ಗಟ್ಟನ್ನು ಕಾಪಾಡಿಕೊಳ್ಳುವ ನಿರ್ಣಾಯಕ ಕಾರ್ಯವನ್ನು ಅವರು ನಿರ್ವಹಿಸಿದ ಬಗೆಯನ್ನು ಜಗತ್ತು ಬೆರಗಿನಿಂದ ನೋಡಿ ಮೆಚ್ಚಿತು.

ನಾಲ್ಕು ಅವಧಿಗಳ ಕಾಲ ಜರ್ಮನಿಯ ಚಾನ್ಸೆಲರ್ ಆಗಿ ದೇಶವನ್ನು ಮುನ್ನಡೆಸಿದ್ದು ಏಂಜೆಲಾ ಮರ್ಕೆಲ್ ಅವರ ಹೆಗ್ಗಳಿಕೆ. ಏಷ್ಯಾ ಖಂಡದಲ್ಲಿ ಇಂದಿರಾ ಗಾಂಧಿ, ಬೆನಜೀರ್ ಭುಟ್ಟೋ, ಸಿರಿಮಾವೋ ಬಂಡಾರನಾಯಿಕೆ ಪ್ರಧಾನ ಮಂತ್ರಿಗಳಾಗಿದ್ದರೂ ಬ್ರಿಟನ್ ನಲ್ಲಿ ಮಾರ್ಗರೆಟ್ ಥ್ಯಾಚೆರ್ ಬಿಟ್ಟರೆ ಇತರ ಪಾಶ್ಚಾತ್ಯ ದೇಶಗಳಲ್ಲಿ ಮಹಿಳಾ ನಾಯಕತ್ವ ಒಂದು ರೀತಿಯಲ್ಲಿ ಕನಸಿನ ಮಾತೇ ಆಗಿತ್ತು. ಆದರೆ ಏಂಜೆಲಾ ಅವರ ಆಡಳಿತ ಮತ್ತು ರಾಜಕಾರಣದ ನಿರ್ವಹಣೆ ಐರೋಪ್ಯ ದೇಶಗಳಲ್ಲಿ ಮಹಿಳಾ ನಾಯಕತ್ವದ ಆಶಯ ಮತ್ತು ಕನಸುಗಳನ್ನು ಬಿತ್ತಿತು ಎಂದೂ ಗುರುತಿಸಲಾಗಿದೆ. ಏಂಜೆಲಾ ಅವರ ನಾಲ್ಕು ಅವಧಿಯ ಹದಿನೆಂಟು ವರ್ಷಗಳ ಆಡಳಿತಾವಧಿಯಲ್ಲಿ ಅಮೆರಿಕ ನಾಲ್ಕು ಅಧ್ಯಕ್ಷರನ್ನು ಕಂಡಿತು. ಫ್ರಾನ್ಸ್ ದೇಶದಲ್ಲಿ ಮೂರು ಅಧ್ಯಕ್ಷರು ಬಂದರು. ಎಷ್ಟೊಂದು ಜಾಗತಿಕ ಬಿಕ್ಕಟ್ಟುಗಳನ್ನು ಅವರು ಎದುರಿಸಿದರು, ಎಷ್ಟೊಂದು ಜಾಗತಿಕ ಸಮ್ಮೇಳನಗಳಲ್ಲಿ ಅವರು ನಾಯಕತ್ವ ವಹಿಸಿದರು, ಎಷ್ಟೊಂದು ಜಾಗತಿಕ ಸಂಸ್ಥೆಗಳಿಗೆ ದಿಕ್ಸೂಚಿ ನಿರ್ದೇಶನ ನೀಡಿದರು ಎಂಬುದನ್ನು ಗಮನಿಸಿದರೆ, ಇಡೀ ಜಗತ್ತಿನಲ್ಲೇ ಅವರನ್ನು ಹೋಲುವ ದಿಟ್ಟ ಮಹಿಳಾ ರಾಜಕಾರಣಿ ಸಿಗುವುದಿಲ್ಲ: ಮಾತ್ರವಲ್ಲ ಪುರುಷ ರಾಜಕಾರಣಿಗಳೂ ಬಹಳ ಕಾಣುವುದಿಲ್ಲ. ಯೂರೋಪ್ ಖಂಡಕ್ಕೆ ಅವರು ರೂಪಿಸಿದ ನೀತಿನಿಯಮಗಳು ಜಗತ್ತಿನ ಹಲವು ದೇಶಗಳಿಗೆ ಅನ್ವಯವಾದವು. ಹಾಗೆ ನೋಡಿದರೆ ಅಮೆರಿಕ, ರಷ್ಯ ಮುಂತಾದ ದೇಶಗಳನ್ನೂ ಪುರುಷ ರಾಜಕಾರಣವನ್ನೂ ಅವರು ಎದುರಿಸಲು ಹೆದರಲಿಲ್ಲ.

ರಾಜಕೀಯ ಮುತ್ಸದ್ದಿತನ, ಅಸಾಧಾರಣ ಬುದ್ಧಿವಂತಿಕೆ ಎಲ್ಲವೂ ಇದ್ದ ಏಂಜೆಲಾ ಬದುಕಿನುದ್ದಕ್ಕೂ ಪ್ರಾಮಾಣಿಕತೆ, ಸರಳತೆಗಳನ್ನು ಮೈಗೂಡಿಸಿಕೊಂಡಿದ್ದರು. ದೇಶದ ಚಾನ್ಸೆಲರ್ ಆಗಿದ್ದರೂ ಅವರು ಬೃಹತ್ ಭವನಗಳಲ್ಲಿ ವಾಸಿಸಲಿಲ್ಲ, ಸ್ವಂತಕ್ಕೆ ಆಸ್ತಿಪಾಸ್ತಿ ಮಾಡಲಿಲ್ಲ. ರಾಜಕಾರಣಿಗಳಲ್ಲಿ ಸಾಮಾನ್ಯವಾಗಿ ಕಾಣುವ ಮೆರೆಯುವಿಕೆ, ಹೀರೋಯಿನ್ ಇಮೇಜ್ ವ್ಯಾಮೋಹ ಅವರ ಹತ್ತಿರವೂ ಸುಳಿಯಲಿಲ್ಲ. ಭಾಷಣಗಳಲ್ಲಿ ಇಲ್ಲದ್ದನ್ನು ಹೇಳಿ ಪ್ರಜೆಗಳಿಗೆ ಮೋಸ ಮಾಡಲು ಯತ್ನಿಸಲಿಲ್ಲ. ಅವರ ವೇಷಭೂಷಣವೂ ಸಾಮಾನ್ಯರಂತೆಯೇ ಇತ್ತು. ಅವರ ರಾಜಕೀಯ ನಿರ್ಧಾರಗಳಲ್ಲಿ ಕೆಲವು ತೀವ್ರ ಟೀಕೆಗೆ ತುತ್ತಾದರೂ ಏಂಜೆಲಾ ಮರ್ಕೆಲ್ ಇತಿಹಾಸದಲ್ಲಿ ಉಳಿಯುವುದು ಅವರ ಅಸಾಧಾರಣ ನಾಯಕತ್ವದಿಂದ. ಸವಾಲುಗಳನ್ನು ಎದುರಿಸಿದ ಅವರ ಧೈರ್ಯ, ಆತ್ಮವಿಶ್ವಾಸ ಎಂದಿಗೂ ರಾಜಕಾರಣದಲ್ಲಿ ಮಾದರಿ. (ವಿವಿಧ ಮೂಲಗಳಿಂದ)

  • ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *