ಜಗದಗಲ / ಚಿಂಪಾಂಜಿಯನ್ನು ಅಪ್ಪಿಕೊಂಡ ಜೇನ್ ಗುಡಾಲ್ – ಟಿ.ಆರ್. ಅನಂತರಾಮು

ಮನುಷ್ಯನ ಬೆನ್ನ ಹಿಂದೆ ಹತ್ತಿರದಲ್ಲಿರುವ ಚಿಂಪಾಂಜಿಯನ್ನು ಮನುಷ್ಯಲೋಕಕ್ಕೆ ಸರಿಯಾಗಿ ಪರಿಚಯ ಮಾಡಿದ ಪ್ರಾಣಿ ಪರಿಣತೆ ಜೇನ್ ಗುಡಾಲ್ ಸಾಧನೆ ಅನನ್ಯವಾದದ್ದು. ಅವರ ಬದುಕಿನ ಬಹುಭಾಗ ಕಾಡಿನಲ್ಲೇ ಕಳೆದುಹೋಗಿದೆ. ಈ ಎಂಬತ್ತೈದರ ವಯಸ್ಸಿನಲ್ಲೂ ಕಾಡಿಗೆ ಬಂದು ತಮ್ಮನ್ನು ಅಪ್ಪಿ ಮುದ್ದಿಸುವ ಅವರನ್ನು ಕಂಡರೆ ಚಿಂಪಾಂಜಿಗಳಿಗೂ ಅದೇನೋ ಅಕ್ಕರೆ. ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆಯದಿದ್ದರೂ ಪ್ರಾಣಿಶಾಸ್ತ್ರಕ್ಕೆ ಎಷ್ಟೊಂದು ಹೊಸ ವಿವರಗಳನ್ನು ಕೊಟ್ಟ ಜೇನ್ ಗುಡಾಲ್ ಅವರನ್ನು ಪ್ರಸಿದ್ಧ ವಿಶ್ವವಿದ್ಯಾನಿಲಯಗಳು ಗೌರವಿಸಿವೆ.

ಈ ಹುಡುಗಿಗೆ ಕೋಳಿ ಹೇಗೆ ಮೊಟ್ಟೆ ಇಡುತ್ತದೆಂದು ನೋಡುವಾಸೆ. ಕೋಳಿ ಗೂಡಿನ ಬಳಿ ಬಚ್ಚಿಟ್ಟುಕೊಂಡು ಆ ಘಳಿಗೆಗಾಗಿ ಕಾಯುತ್ತಿದ್ದಳು. ಅಮ್ಮನಿಗೋ ಇವಳು ತಪ್ಪಿಸಿಕೊಂಡು ಹೋಗಿದ್ದಾಳೆ ಎಂಬ ಚಿಂತೆ. ಪ್ರತ್ಯಕ್ಷವಾದಾಗ ನಿಟ್ಟುಸಿರುಬಿಟ್ಟಳು. ಲಂಡನ್ನಿನ ಪ್ರಾಣಿ ಸಂಗ್ರಹಾಲಯದಲ್ಲಿ ಚಿಂಪಾಂಜಿ ಮರಿ ಹಾಕಿತ್ತು ಎಂದು ಇಡೀ ಲಂಡನ್ ಸಂಭ್ರಮಿಸಿತ್ತು. ಅಪ್ಪ, ಈ ಹುಡುಗಿಗೆ ಆ ನೆಪದಲ್ಲಿ ಚಿಂಪಾಂಜಿ ಬೊಂಬೆಯನ್ನು ತಂದುಕೊಟ್ಟು, ಸ್ನೇಹಿತರಿಂದ ಬೈಸಿಕೊಂಡ.’ ಅಲ್ಲಯ್ಯಾ, ಚಿಂಪಾಂಜಿಯ ವಿಕಾರ ಮುಖ ನೋಡಿ ಮಗು ಗಾಬರಿಪಟ್ಟುಕೊಳ್ಳುವುದಿಲ್ಲವೆ? ಇಂಥ ಗಿಫ್ಟ್ ಕೊಡುವುದೇ’ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಆ ಮಗುವೋ ಹಗಲು-ರಾತ್ರಿ ಎನ್ನದೆ ಅದನ್ನು ಹಿಡಿದುಕೊಂಡೇ ಇರುತ್ತಿದ್ದಳು. `ನೋಡು, ನಿನಗೆ ಪ್ರಾಣಿ ಪಕ್ಷಿಗಳ ಬಗ್ಗೆ ಅಷ್ಟೊಂದು ಆಸೆ ಇದ್ದರೆ ಅವುಗಳನ್ನು ಕುರಿತು ಗಂಭೀರವಾಗಿ ಅಧ್ಯಯನ ಮಾಡು, ಹಿಂದೆ ಸರಿಯಬಾರದು ಅಷ್ಟೇ’ ಎಂದಿದ್ದಳು ಅಮ್ಮ. ಈ ಮಾತು ಜೇನ್ ಳ ಎದೆಯನ್ನು ಹೊಕ್ಕಿತು. ಮುಂದೆ ಅಪ್ಪ-ಅಮ್ಮ ವಿಚ್ಛೇದನ ಪಡೆದರು. ಈಗೆ ಹೇಗೋ ಕಾಲೇಜು ಪೂರೈಸಿದಳು. ವಿಶ್ವವಿದ್ಯಾಲಯದ ಮೆಟ್ಟಲು ಹತ್ತಲಿಲ್ಲ. ಆದರೆ ಅಲ್ಲೇ ಟೈಪಿಸ್ಟ್ ಆದಳು. ಚಿತ್ರ ತಯಾರಿಸುವ ಟೀಂ ಸೇರಿದಳು. ಎಲ್ಲೋ ಪರಿಚಾರಿಕೆಯಾದಳು, ನಾಲ್ಕು ಕಾಸು ಕೂಡಿಸಿಕೊಂಡಳು. ಕೀನ್ಯಾಕ್ಕೆ ಹೋಗಬೇಕೆಂದು ದೋಣಿಯಲ್ಲಿ ಹೊರಟೇಬಿಟ್ಟಳು. ಅಲ್ಲಿ ಲೂಯಿಸ್ ಲೀಕಿ ಎಂಬ ಆಂಥ್ರೋಪಾಲಜಿಸ್ಟ್, ಈಕೆ ಪ್ರಾಣಿಗಳ ಬಗ್ಗೆ ತೋರಿದ ಆಸಕ್ತಿ ಗಮನಿಸಿ, ಸಹಾಯಕಿಯನ್ನಾಗಿ ನೇಮಿಸಿಕೊಂಡ. ಅವಳ ಮನಸ್ಸೋ ಪ್ರಾಣಿಗಳೊಡನೆ ಬೆರೆತು ಅವುಗಳೊಡನೆ ಮಾತನಾಡುವ ಕಡೆ ಹೊರಳಿತು. ಬ್ರಿಟನ್ನಿನಲ್ಲಿ ಇನ್ನೊಂದು ಬಗೆಯ ನಿಷೇಧವಿತ್ತು. 25ರ ತರುಣಿ ಒಬ್ಬೊಂಟಿಯಾಗಿ ಆಫ್ರಿಕದ ಕಾಣದ ಜಾಗಕ್ಕೆ ಹೋಗುವುದೆಂದರೇನು, ಸಾಧ್ಯವಿಲ್ಲ ಎಂದಿತು. ತಾಯಿ ಅನಿವಾರ್ಯವಾಗಿ ಅವಳನ್ನು ಕೂಡಿಕೊಳ್ಳಬೇಕಾಯಿತು.

ಅವಳ ಪೂರ್ತ ಹೆಸರು ಜೇನ್ ಗುಡಾಲ್. ನೇರವಾಗಿ ಅವಳು ಬಂದದ್ದು ತಾಂಜೇನಿಯದ ಗುಂಬೆ ಎನ್ನುವ ಕಾಡಿಗೆ. ಅದೋ 35 ಚ.ಕಿ.ಮೀ. ವಿಸ್ತೀರ್ಣದ ಪುಟ್ಟ ಕಾಡು. ಆದರೆ ಅಗಾಧ ಜೀವಿವೈವಿಧ್ಯವನ್ನು ಅದು ಅಡಗಿಸಿಕೊಂಡಿತ್ತು. ವಿಶೇಷವಾಗಿ, ಚಿಂಪಾಂಜಿಗಳ ಆವಾಸ. ಬಹು ದಿನ ಚಿಂಪಾಂಜಿಗಾಗಿ ಕಾದಳು. ಒಂದು ದಿನ ಬೆಟ್ಟದ ನೆತ್ತಿಯಿಂದ ಬೈನಾಕ್ಯುಲರ್ ನಲ್ಲಿ ನೋಡಿದಾಗ ಚಿಂಪಾಂಜಿಗಳು ಮೆಲ್ಲಗೆ ಮರದಿಂದ ಇಳಿಯುತ್ತಿದ್ದವು. ಒಂದಷ್ಟು ದಿನ ಅವಳು ನೇರವಾಗಿ ಅವುಗಳನ್ನು ದೃಷ್ಟಿಸಲಿಲ್ಲ. ಬದಲು ಅಲುಗದಂತೆ ಕೂತು ಅವುಗಳ ಚಲನ ವಲನಗಳನ್ನು ಗಮನಿಸಿದಳು. ಒಂದಲ್ಲ, ಹದಿನೈದು ವರ್ಷಗಳ ದೀರ್ಘ ಅಧ್ಯಯನ, ಚಿಂಪಾಂಜಿಗಳು ದೂರದಿಂದ ಇವಳನ್ನು ಕಂಡು ಹಿಂತಿರುಗಿತ್ತಿದ್ದವು. ಆದರೆ ಮರಿಗಳು ಕೈಗೆಟುಕುವಷ್ಟು ಹತ್ತಿರ ಬಂದವು. ಇವಳು ಅವುಗಳ ತಲೆ ಸವರಿದಳು. ಅವು ಇವಳ ತೊಡೆ ಏರುತ್ತಿದ್ದವು. ಅಮ್ಮ ಚಿಂಪಾಂಜಿಗಳು ಬರುಬರುತ್ತ ಹೊಂದಿಕೊಂಡವು. ಇವಳೂ ನಮ್ಮವರಲ್ಲಿ ಒಬ್ಬಳು ಎಂಬ ಆತ್ಮೀಯತೆ ಬೆಳೆಸಿಕೊಂಡವು.

ಅವಕ್ಕೂ ಮನುಷ್ಯರಂತೆ ಭಾವನೆಗಳಿವೆ, ಖುಷಿಯಾದಾಗ ಸಂಗಾತಿಗೆ ಮುತ್ತಿಡುತ್ತವೆ, ಬೆನ್ನು ತಟ್ಟುತ್ತವೆ, ಗುಂಪನ್ನು ಕರೆಯಲು ಅವುಗಳದ್ದೆ ಆದ ಶ್ರುತಿ ಹೊರಡಿಸುತ್ತವೆ. ಹುತ್ತದ ಬಳಿ ಹೋಗಿ ಒಂದು ಉದ್ದನೆಯ ಕಡ್ಡಿಯನ್ನು ಕೋವಿಯಲ್ಲಿ ತೂರಿಸಿ ಗೆದ್ದಲನ್ನು ಸಂಗ್ರಹಿಸುತ್ತಿದ್ದ ಪರಿಯನ್ನು ಮೊದಲು ಗಮನಿಸಿದವಳೇ ಜೇನ್ ಗುಡಾಲ್. ಹೂವು, ಹಣ್ಣು, ಎಲೆ, ಕಾಯಿ ಚಿಂಪಾಂಜಿಗಳ ನಿತ್ಯ ಆಹಾರವಾದರೂ ಅವುಗಳಿಗೆ ಬೇಟೆಯೂ ಖುಷಿಯೇ. ಆ ಕಾಡಿನ ಮಂಗಗಳನ್ನು, ಕಾಡು ಹಂದಿಗಳನ್ನು ಸಲೀಸಾಗಿ ಬೆನ್ನಟ್ಟಿ ಹಿಡಿದು ಮುಕ್ಕುತ್ತವೆ. ಇವೆಲ್ಲ ಲೋಕಕ್ಕೆ ಗೊತ್ತಾದದ್ದು ಜೇನ್ ಗುಡಾಲ್ ಳಿಂದ. ಈ 85ರ ಹರೆಯದಲ್ಲೂ ಆಕೆ ಕಾಡಿಗೆ ಹೋದಾಗ ಅದೇ ಮಮತೆ, ಅದೇ ನಂಬಿಕೆ ಆ ಪ್ರಾಣಿಗಳಿಗೆ. ಗುಂಬೆ ಈಗ ಈಕೆಯ ಪರಿಶ್ರಮದಿಂದ ರಾಷ್ಟ್ರೀಯ ಉದ್ಯಾನ ಎನ್ನಿಸಿದೆ.

ಆರು ಸಲ ಜೇನ್ ಗುಡಾಲ್ ಳ ಮುಖ `ನ್ಯಾಷನಲ್ ಜಿಯೋಗ್ರಫಿಕ್’ ಪತ್ರಿಕೆಯಲ್ಲಿ ರಾರಾಜಿಸಿದೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ತನ್ನೆಲ್ಲ ಕಾನೂನುಗಳನ್ನು ಬದಿಗಿಟ್ಟು ಈಕೆಗೆ ಪಿಎಚ್.ಡಿ. ಪದವಿಯನ್ನು ಪ್ರದಾನ ಮಾಡಿದೆ. ವರ್ಷದಲ್ಲಿ ಆಕೆಯನ್ನು ಭೇಟಿಮಾಡಬೇಕೆಂದರೆ ಬರೀ 65 ದಿನ ಅಷ್ಟೇ. ಉಳಿದಂತೆ ವಿಮಾನದಲ್ಲಿ ಹಾರಿ ಕರೆದಲ್ಲಿಗೆ ಹೋಗಿ ಚಿಂಪಾಂಜಿಗಳನ್ನು ಉಳಿಸಬೇಕೆಂದು ಕರೆಕೊಡುತ್ತಾಳೆ. ಆಕೆ ಕೇಳದಿದ್ದರೂ ದೇಣಿಗೆ ಬರುತ್ತಿದೆ. ಜೇನ್ ಗುಡಾಲ್ ಳಿಗೆ ಎರಡು ಬಾರಿ ವಿಚ್ಛೇದನವಾಗಿದೆ. ಮೊಮ್ಮಕ್ಕಳೂ ಇದ್ದಾರೆ. ಆದರೆ ಅವಳಿಗೆ ಮಕ್ಕಳು ಎಂದರೆ ಅಕ್ಷರಶಃ ಚಿಂಪಾಂಜಿಗಳೇ. ಒಂದು ಜೀವಿತಾವಧಿಯಲ್ಲಿ ಅದೆಷ್ಟು ಸಾಧನೆ ಮಾಡಬಹುದು ಎಂಬುದನ್ನು ಜಗತ್ತಿಗೆ ತೋರಿಸಿದ್ದಾಳೆ. ಚಿಂಪಾಂಜಿಗಳಿಗೂ ಮನುಷ್ಯರಿಗೂ ಕೇವಲ ಶೇ.2 ಭಾಗ ವಂಶವಾಹಿಗಳಲ್ಲಿ ವ್ಯತ್ಯಾಸ. ಇದು ಜೇನ್ ಗುಡಾಲ್ ಳಿಗೆ ಚೆನ್ನಾಗಿ ಗೊತ್ತು.

-ಟಿ.ಆರ್. ಅನಂತರಾಮು

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *