ಜಗದಗಲ/ ಗರ್ಭಪಾತ ಹಕ್ಕು: ಒಂದು ವಿಶ್ಲೇಷಣೆ – ಡಾ. ಗೀತಾ ಕೃಷ್ಣಮೂರ್ತಿ

ಅಮೆರಿಕಾದ ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ನೀಡಿದ ತೀರ್ಪು, ಐವತ್ತು ವರ್ಷಗಳಿಂದ ಮಹಿಳೆಯರು ಅನುಭವಿಸಿಕೊಂಡು ಬಂದಿದ್ದ ಈ ಹಕ್ಕನ್ನು ಒಮ್ಮಿಂದೊಮ್ಮೆಗೇ ಇಲ್ಲವಾಗಿಸಿಬಿಟ್ಟಿತು. ಪ್ರಜನನ ಸ್ವಾತಂತ್ರ್ಯದ ಹಕ್ಕುಗಳೂ ಮಹಿಳೆಯರ ಮಾನವ ಹಕ್ಕುಗಳಲ್ಲಿ ಸೇರುತ್ತವೆ. ಪ್ರಜನನ ಹಕ್ಕುಗಳಲ್ಲಿ ಗರ್ಭಪಾತದ ಹಕ್ಕು ಬಹು ಮುಖ್ಯವಾದುದು. ಗರ್ಭಪಾತ ಹಕ್ಕನ್ನು ರದ್ದು ಮಾಡಿದ ಅಮೆರಿಕಾದ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು, ಮಹಿಳೆಯರ ಮಾನವ ಹಕ್ಕುಗಳಿಗೆ ಮತ್ತು ಲಿಂಗ ಸಮಾನತೆಗೆ ಕೊಟ್ಟ ದೊಡ್ಡ ಪೆಟ್ಟು, ಧರ್ಮದ ಹೆಸರಿನಲ್ಲಿ ಹಿಮ್ಮುಖ ಚಲನೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಅಮೆರಿಕಾದ ಸರ್ವೋಚ್ಚ ನ್ಯಾಯಾಲಯ ಗರ್ಭಪಾತಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನೀಡಿರುವ ತೀರ್ಪು, ಗರ್ಭಪಾತದ ಬಗ್ಗೆ ಜಾಗತಿಕ ಚರ್ಚೆಯನ್ನು ಹುಟ್ಟು ಹಾಕಿದೆ ಮತ್ತು ಆ ತೀರ್ಪಿಗೆ ಮಹಿಳಾ ಹಕ್ಕುಗಳಿಗಾಗಿ ಹೋರಾಡುವವರಿಂದ ತೀವ್ರವಾದ ವಿರೋಧವೂ ವ್ಕಕ್ತವಾಗಿದೆ. ಇದಕ್ಕೆ ಕಾರಣ, 1973 ರಲ್ಲಿ, ‘ರೋ ವಿರುದ್ಧ ವೇಡ್’ ಎಂಬ ಪ್ರಕರಣದಲ್ಲಿ, ಅಮೆರಿಕಾದ ಸರ್ವೋಚ್ಚ ನ್ಯಾಯಾಲಯ ಗರ್ಭಪಾತಕ್ಕೆ ಸಂಬಂಧಿಸಿದಂತೆ ನೀಡಿರುವ ತೀರ್ಪನ್ನು ತಳ್ಳಿ ಹಾಕಿ ಗರ್ಭಪಾತಕ್ಕೆ ಸಂಬಂಧಿಸಿದಂತೆ ಮಹಿಳೆಗೆ ಇರುವ ಹಕ್ಕುಗಳನ್ನು ಮೊಟಕುಗೊಳಿಸಿದುದು. ಅಮೆರಿಕಾದ ಮಹಿಳಾ ಹಕ್ಕುಗಳ ಹೋರಾಟದ ಇತಿಹಾಸದಲ್ಲಿ 50 ವರ್ಷಗಳ ಹಿಂದೆ, 1973 ರಲ್ಲಿ ‘ರೋ ವಿರುದ್ಧ ವೇಡ್’ ಎಂಬ ಪ್ರಕರಣದಲ್ಲಿ, ನೀಡಿದ ತೀರ್ಪು ಒಂದು ಮೈಲಿಗಲ್ಲು. ಈ ತೀರ್ಪು ಗರ್ಭ ಧರಿಸಿದ ಮೊದಲ ಮೂರು ತಿಂಗಳೊಳಗೆ ಗರ್ಭಪಾತ ಮಾಡಿಸಿಕೊಳ್ಳಲು ಮಹಿಳೆಯರಿಗೆ ಅನುಮತಿ ನೀಡಿತು. ನಂತರದ ಎರಡು ತ್ರೈ ಮಾಸಗಳಲ್ಲಿನ ಗರ್ಭಪಾತಕ್ಕೆ ಅನೇಕ ಕಾನೂನಾತ್ಮಕ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲಾಯಿತು.

ಆದರೆ, ಇತ್ತೀಚಿನ ಅಮೆರಿಕಾದ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು, ಐವತ್ತು ವರ್ಷಗಳಿಂದ ಮಹಿಳೆಯರು ಅನುಭವಿಸಿಕೊಂಡು ಬಂದಿದ್ದ ಈ ಹಕ್ಕನ್ನು ಒಮ್ಮಿಂದೊಮ್ಮೆಗೇ ಇಲ್ಲವಾಗಿಸಿಬಿಟ್ಟಿತು. ಈ ತೀರ್ಪಿನ ಪರಿಣಾಮವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಐವತ್ತು ರಾಜ್ಯಗಳಲ್ಲಿ ಅರ್ಧಕ್ಕೂ ಹೆಚ್ಚು ರಾಜ್ಯಗಳು ಗರ್ಭಪಾತವನ್ನು ನಿಷೇಧಿಸಲು ಮುಂದಾಗುತ್ತವೆ ಎಂದು ಅಂದಾಜಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಒಂಬತ್ತು ನ್ಯಾಯಮೂರ್ತಿಗಳ ಪೈಕಿ ಗರ್ಭಪಾತ ನಿಷೇಧದ ಪರವಾಗಿ ತೀರ್ಪು ನೀಡಿರುವ ಆರು ಮಂದಿ ನ್ಯಾಯಮೂರ್ತಿಗಳು, ಈ ತೀರ್ಪು ಗರ್ಭಪಾತಕ್ಕೆ ಸಂಬಂಧಿಸದೆ ಇರುವ ಇತರ ಮಹಿಳಾ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ ಎಂದು ಭಾವಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಗರ್ಭಪಾತಕ್ಕೆ ಮಹಿಳೆಯರಿಗೆ ಇರುವ ಸ್ವಾತಂತ್ರ್ಯವನ್ನು ಬೆಂಬಲಿಸುವ ಮೂಲಕ ಭಿನ್ನ ನಿಲುವನ್ನು ತಳೆದ ಉಳಿದ ಮೂವರು ನ್ಯಾಯಮೂರ್ತಿಗಳು, ಈ ತೀರ್ಪು, ವಿವಾಹ, ಲೈಂಗಿಕತೆ ಮತ್ತು ಜನನ ನಿಯಂತ್ರಣಕ್ಕೆ ಸಂಬಂಧಿಸಿದ ಇತರ ಸ್ವಾತಂತ್ರ್ಯಗಳನ್ನೂ ಕೊನೆಗಳಿಸಲು ವೇದಿಕೆಯನ್ನು ಒದಗಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜನನ ಹಕ್ಕುಗಳಲ್ಲಿ ಗರ್ಭಪಾತದ ಹಕ್ಕು ಸಹ ಸೇರುತ್ತದೆ. ಹಾಗಾಗಿ, ಮಹಿಳಾ ಹಕ್ಕುಗಳ ಚಳವಳಿಯ ಒಂದು ಬೇಡಿಕೆಯಾಗಿ ಇದು ಚರ್ಚೆಗೆ ಒಳಗಾಗುತ್ತಲೇ ಬಂದಿದೆ. ಒತ್ತಾಯ, ತಾರತಮ್ಯ, ಹಿಂಸೆಗಳಿಂದ ಮುಕ್ತವಾದ ಲೈಂಗಿಕತೆ ಮತ್ತು ಆ ಬಗ್ಗೆ ಮುಕ್ತವಾಗಿ, ವಿವೇಚನೆಯಿಂದ ನಿರ್ಧಾರ ಕೈಗೊಳ್ಳುವ ಹಕ್ಕು ಮತ್ತು ಪ್ರಜನನ ಸ್ವಾತಂತ್ರ್ಯದ ಹಕ್ಕುಗಳೂ ಮಹಿಳೆಯರ ಮಾನವ ಹಕ್ಕುಗಳಲ್ಲಿ ಸೇರುತ್ತವೆ. ಪ್ರಜನನ ಹಕ್ಕುಗಳಲ್ಲಿ ಗರ್ಭಪಾತದ ಹಕ್ಕು ಬಹು ಮುಖ್ಯವಾದುದು.

ಇದು ಖಾಸಗಿತನಕ್ಕೆ ಇರುವ ಹಕ್ಕಿನ ಒಂದು ಭಾಗ ಎಂಬುದು ಮಹಿಳಾ ಹಕ್ಕು ಹೋರಾಟಗಾರ್ತಿಯರ ವಾದ. ಈ ವಾದ ವಿವಾದಗಳಿಂದಾದ ಒಂದು ಧನಾತ್ಮಕ ಬದಲಾವಣೆಯೆಂದರೆ, ಗರ್ಭಪಾತ ಅಪರಾಧ ಎಂಬ ಭಾವನೆ ಬದಲಾದುದು ಮತ್ತು ಅದು ಮಹಿಳೆಯರ ಹಕ್ಕು ಎಂದು ಪರಿಗಣಿಸುವ ನಿಟ್ಟಿನಲ್ಲಿ ಮನೋಭೂಮಿಕೆ ಸಿದ್ಧವಾದುದು. ಇದರ ಫಲವಾಗಿ, ತಾಯಿಯ ಜೀವವನ್ನು ಉಳಿಸಲು ಗರ್ಭಪಾತಕ್ಕೆ ಅನುಮತಿ ನೀಡಬಹುದು ಎಂಬ ಮಟ್ಟಿಗೆ ನೈತಿಕ ನಿಲುವು ಉದಾರಗೊಂಡಿತು. ಎಲ್ಲ ದೇಶಗಳ ಎಲ್ಲ ಧರ್ಮಗಳೂ ನೈತಿಕತೆಯ ನೆಲೆಯಲ್ಲಿ ಗರ್ಭಪಾತವನ್ನು ವಿರೋಧಿಸಿದವುಗಳೇ!

ಆದರೂ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ಹಾಗೂ ಧಾರ್ಮಿಕ ಕ್ರೌರ್ಯಗಳಂತೆಯೇ ಮಹಿಳೆಯ ದೇಹ ರಚನೆ ಹಾಗೂ ಅವಳ ಗರ್ಭಧಾರಣೆಯ ಸಾಮಥ್ರ್ಯವೂ ಅನೇಕ ಬಾರಿ ಅವಳ ಮೇಲಿನ ಕ್ರೌರ್ಯಕ್ಕೆ ಕಾರಣವಾಗಿದೆ. ಮಹಿಳೆಯ ಇಷ್ಟಾನಿಷ್ಟಕ್ಕಿಂತ ಹೆಚ್ಚಾಗಿ, ಭಾರತೀಯ ಸಾಮಾಜಿಕ ಸಂದರ್ಭದಲ್ಲಿ, ಮಹಿಳೆ ಇತರರ ಸಂತೋಷಕ್ಕಾಗಿ ಗರ್ಭಧರಿಸುವುದು ಅನಿವಾರ್ಯವಾಗಿದೆ. ಅವಳು ಗರ್ಭ ಧರಿಸುವುದಕ್ಕೆ ಮಹಿಳೆಯಷ್ಟೇ ಪುರುಷನೂ ಕಾರಣನಾಗುತ್ತಾನೆ, ಮಗು ಗಂಡೋ ಹೆಣ್ಣೋ ಎಂಬುದು ನಿರ್ಧಾರವಾಗುವುದು ಗಂಡನಿಂದ ಎಂಬುದನ್ನು ಒಪ್ಪಿಕೊಳ್ಳಲು ಸಮಾಜದ ಬಹು ಭಾಗ ಇವತ್ತಿಗೂ ಸಿದ್ಧವಿಲ್ಲ. ಈ ಅಜ್ಞಾನದಿಂದಾಗಿ, ಈ ಕಾರಣಕ್ಕೆ, ಅವಳ ಮೇಲೆ ಕ್ರೌರ್ಯ ಅನಾದಿ ಕಾಲದಿಂದಲೂ ನಡೆದುಕೊಂಡೇ ಬಂದಿದೆ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ, ಗರ್ಭವನ್ನು ತೆಗೆಸುವುದು ಅನಿವಾರ್ಯವಾದಾಗ ಸಹ ಗರ್ಭವನ್ನು ತೆಗೆಸುವುದು ಕಾನೂನಿನ ತೊಡಕು ಮತ್ತು ನ್ಯಾಯಾಲಯದ ವಿಳಂಬ ಪ್ರಕ್ರಿಯೆಯಿಂದಾಗಿ ಸಾಧ್ಯವಾಗದೆ ಹೋಗುತ್ತದೆ. ಆಗಲೂ ಆ ನಂತರದ ತೊಂದರೆಗಳನ್ನು ಮಹಿಳೆಯೇ ಅನುಭವಿಸಬೇಕಾಗುತ್ತದೆ.

ಧಾರ್ಮಿಕ ನಂಬಿಕೆ- ಸಂಘರ್ಷ

ಗರ್ಭಪಾತ ಮಹಾಪಾಪ ಎಂಬ ನಂಬಿಕೆ ಸರಿ ಸುಮಾರು ಎಲ್ಲ ದೇಶಗಳಲ್ಲೂ ಆಳವಾಗಿ ಬೇರೂರಿರುವ ಆಳವಾದ ಧಾರ್ಮಿಕ ನಂಬಿಕೆ. ‘ಗರ್ಭಪಾತ’ ಎಂದರೆ ಮೂಡಿದ ಜೀವವನ್ನು ಕೊಲ್ಲುವುದು ಎಂದರ್ಥ. ಹಾಗಾಗಿ ಜೀವ ಪರ ವಾದಿಗಳು ಗರ್ಭಪಾತಕ್ಕೆ ವಿರೋಧ ವ್ಯಕ್ತ ಪಡಿಸುತ್ತಾರೆ. ಆದರೆ, ಆಯ್ಕೆ ಮಹಿಳೆಯ ಹಕ್ಕು ಎನ್ನುವವರು ಗರ್ಭಪಾತಕ್ಕೆ ಅವಕಾಶವಿರಬೇಕು ಎಂದು ವಾದಿಸುತ್ತಾರೆ. ಹಾಗಾಗಿ ಗರ್ಭಪಾತದ ಬಗ್ಗೆ ಚರ್ಚೆ ಎಂದರೆ ಕೇವಲ ಕಾನೂನಿನ ಪ್ರಕಾರ ಅದಕ್ಕೆ ಅನುಮತಿ ಇದೆಯೇ ಇಲ್ಲವೇ ಎಂಬಷ್ಟಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಅದರಲ್ಲಿ ಧಾರ್ಮಿಕ ನಂಬಿಕೆಯೂ ತಳುಕು ಹಾಕಿಕೊಂಡಿರುತ್ತದೆ. ಹಾಗಾಗಿ ಈ ಚರ್ಚೆ, ವೈಯಕ್ತಿಕ ಹಕ್ಕುಗಳ ನೆಲೆಯನ್ನು ದಾಟಿ ಧಾರ್ಮಿಕ ನೆಲೆಗಟ್ಟಿನ ಆಯಾಮವನ್ನು ಪಡೆದುಕೊಳ್ಳುತ್ತದೆ. ಗರ್ಭಪಾತಕ್ಕೆ ಪೂರ್ಣ ಅವಕಾಶವನ್ನು ಕೊಟ್ಟಿದ್ದೇ ಆದರೆ, ಅದು ಸಾಮಾಜಿಕ ಸಮಸ್ಯೆಗಳ ಸರಣಿಯನ್ನೇ ಸೃಷ್ಟಿಸಬಹುದು ಎಂಬ ಸಾಧ್ಯತೆ ಇರುವುದರಿಂದ, ಈ ಚರ್ಚೆಯನ್ನು ಸಾಮಾಜಿಕ ನೆಲೆಗಟ್ಟಿನ ಆಯಾಮದಿಂದಲೂ ವಿಶ್ಲೇಷಿಸಬೇಕಾಗುತ್ತದೆ. ಒಟ್ಟಿನಲ್ಲಿ, ಈ ಬಗೆಗಿನ ಎಲ್ಲ ಆಯಾಮಗಳಲ್ಲಿ ನಡೆಯುವ ವಾದಗಳೂ ‘ಜೀವ ಪರ’ ಮತ್ತು ‘ಆಯ್ಕೆ ಪರ’ವಾದ ಗುಂಪುಗಳ ವಾದಗಳೇ ಆಗಿರುತ್ತವೆ. ಹಾಗಾಗಿ ಅವು ವೈಯಕ್ತಿಕ ಸ್ವಾತಂತ್ರ್ಯ ಮತ್ತು ನೈತಿಕತೆಗಳ ನಡುವಿನ ಸಂಘರ್ಷವಾಗುತ್ತವೆ.

ಎಲ್ಲ ದೇಶಗಳ ಕಾನೂನುಗಳೂ ಗರ್ಭಪಾತ ಮಾಡಿಸಲು ಅನುಮತಿಗಾಗಿ 20 ರಿಂದ 25 ವಾರಗಳವರೆಗಿನ ಅವಧಿಯನ್ನು ನಿಗದಿಪಡಿಸಿವೆ. ಇದರ ಉದ್ದೇಶ, 20-25 ವಾರಗಳನ್ನು ದಾಟಿದ ನಂತರ ಭ್ರೂಣ ಸಾಕಷ್ಟು ಬೆಳೆದಿರುತ್ತದೆ. ಆಗ ಗರ್ಭಪಾತ ಮಾಡಿಸಿಕೊಂಡರೆ ತಾಯಿಯ ಜೀವಕ್ಕೆ ಅಪಾಯವಾಗುತ್ತದೆ ಎಂಬುದು. ಆದರೆ, ಮಗು ಗರ್ಭಾವಸ್ಥೆಯಲ್ಲೇ ಜೀವಿಸುವ ಹಕ್ಕನ್ನು ಪಡೆದಿರುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಈ ನಂಬಿಕೆಯ ಫಲವಾಗಿಯೇ, ಜೀವ ಯಾವಾಗ ಆರಂಭವಾಗುತ್ತದೆ? ವೀರ್ಯಾಣು ಅಂಡಾಣುಗಳನ್ನು ಸೇರಿದ ಕ್ಷಣದಿಂದಲೋ? ಅಥವಾ ಭ್ರೂಣ 24-28 ವಾರಗಳನ್ನು ಕಳೆದ ನಂತರವೋ? ಅಥವಾ ಮಗು ತಾಯಿಯ ಹೊಟ್ಟೆಯಿಂದ ಹೊರ ಬಂದು ಸ್ವತಂತ್ರವಾಗಿ ಜೀವಿಸಲು ಪ್ರಾರಂಭವಾದಂದಿನಿಂದಲೋ? ಎಂಬ ಪ್ರಶ್ನಗಳಿಗೆ ಉತ್ತರ ಕಂಡುಕೊಳ್ಳುವ ಬಗ್ಗೆ ಚರ್ಚೆ ನಡೆದೇ ಇದೆ. ಆದರೆ, ನಾಡಿನ ಕಾನೂನು, ಧಾರ್ಮಿಕ ನಂಬಿಕೆಗಳು ಮತ್ತು ಆರೋಗ್ಯ ಸಮಸ್ಯೆಗಳು ಇವು ಯಾವುವೂ ಗರ್ಭವನ್ನು ಇಳಿಸಿಕೊಳ್ಳ ಬಯಸುವ ಮಹಿಳೆಗೆ ಮುಖ್ಯವಾಗುವುದಿಲ್ಲ. ಆ ಕ್ಷಣಕ್ಕೆ ಅವಳಿಗೆ ಬೇಕಾಗುವುದು ಅದಕ್ಕೆ ಅಗತ್ಯವಾದ ವೈದ್ಯಕೀಯ ನೆರವು ಅಷ್ಟೇ. ಆದರೆ ಈ ಸುಳಿಗಳ ನಡುವೆ ಅವಳು ಅಸಹಾಯಕಳಾಗಿರುತ್ತಾಳೆ! ಸಂದಿಗ್ಧತೆಗಳು, ಅನುಮಾನಗಳು ಇದ್ದಾಗ, ವಿವೇಚನಾಯುತ ತೀರ್ಮಾನಗಳಿಗೆ ಧಾರ್ಮಿಕ ನಂಬಿಕೆಗಳು ಅಡ್ಡ ಬಂದಾಗ ಮೊರೆ ಹೋಗುವುದು ಕಾನೂನನ್ನೇ. ಆದ್ದರಿಂದ ಈ ಬಗ್ಗೆ ದೇಶದ ಕಾನೂನು ಅನುಮತಿ ನೀಡುತ್ತದೆಯೇ ಇಲ್ಲವೇ ಎನ್ನುವುದಷ್ಟೇ ಮುಖ್ಯವಾಗುತ್ತದೆ.

ಗರ್ಭಪಾತಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣಕ್ಕಾಗಿ, ಕರ್ನಾಟಕದ ಹೆಣ್ಣು ಮಗಳೊಬ್ಬಳು ಐರ್ಲೆಂಡಿನಲ್ಲಿ ಸಾವನ್ನಪ್ಪಿದುದು ಒಂದು ಮರೆಯಲಾಗದ ದುರ್ಘಟನೆ. 17 ವಾರಗಳ ಗರ್ಭಿಣಿಯಾಗಿದ್ದ ಸವಿತಾ ಆರೋಗ್ಯ ಏರುಪೇರಾಗಿ ಮಗು ಉಳಿಯುವುದಿಲ್ಲವೆಂದು ತಿಳಿದರೂ ಅಲ್ಲಿನ ವೈದ್ಯರು ಅವಳಿಗೆ ಗರ್ಭಪಾತ ಮಾಡಲು ನಿರಾಕರಿಸಿದರು. ಅಲ್ಲಿನ ಗರ್ಭಪಾತ ಕಾನೂನು ಅತಿ ಕಟ್ಟುನಿಟ್ಟಾಗಿತ್ತು. ಹೊಟ್ಟೆಯಲ್ಲಿರುವ ಮಗುವಿನ ಉಸಿರು ನಿಲ್ಲುವವರೆಗೂ ಗರ್ಭಪಾತ ಮಾಡಿಸಲು ಅಲ್ಲಿನ ವೈದ್ಯರು ಒಪ್ಪಲಿಲ್ಲ. ಆದರೆ, ಗರ್ಭಪಾತ ಮಾಡುವ ನಿರ್ಧಾರ ಕೈಗೊಳ್ಳುವ ವೇಳೆಗೆ ಅತಿಯಾದ ಸೋಂಕಿನಿಂದ ಆಕೆ ಮೃತಪಟ್ಟಳು. ಈ ಪ್ರಕರಣದ ನಂತರ, ಗರ್ಭಪಾತ ಕಾನೂನನ್ನು ಸಡಿಲಗೊಳಿಸಬೇಕೆಂಬ ಹೋರಾಟದ ಫಲವಾಗಿ ಅಲ್ಲಿನ ಕಾನೂನನ್ನು ತಿದ್ದುಪಡಿ ಮಾಡಲಾಯಿತು.

ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥೆಯಾದ ಮಿಚೆಲ್ ಬ್ಯಾಚಲೆ ಅವರು, ಸಂವೈಧಾನಿಕ ಗರ್ಭಪಾತ ಹಕ್ಕನ್ನು ರದ್ದು ಮಾಡಿದ ಅಮೆರಿಕಾದ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಮಹಿಳೆಯರ ಮಾನವ ಹಕ್ಕುಗಳಿಗೆ ಮತ್ತು ಲಿಂಗ ಸಮಾನತೆಗೆ ಕೊಟ್ಟ ದೊಡ್ಡ ಪೆಟ್ಟು ಎಂದಿದ್ದಾರೆ. ಗರ್ಭಪಾತಕ್ಕೆ ನಿರ್ಬಂಧಗಳನ್ನು ಹೇರಿದ ಮಾತ್ರಕ್ಕೆ ಗರ್ಭಪಾತ ಮಾಡಿಸಿಕೊಳ್ಳುವ ಸಂಖ್ಯೇಯೇನೂ ಕಡಿಮೆಯಾಗುವುದಿಲ್ಲ. ಅಷ್ಟೇ ಅಲ್ಲ, ಅನ್ಯ ಮಾರ್ಗಗಳನ್ನು ಅವಲಂಬಿಸುವುದರಿಂದ ಇನ್ನಷ್ಟು ಅಪಾಯಕಾರಿಯನ್ನಾಗಿಸುತ್ತದೆ ಎಂದೂ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆಯ ವಿಶ್ವ ಸಂಸ್ಥೆಯ ಏಜೆನ್ಸಿ ‘ಪ್ರಜನನ ಹಕ್ಕು ಮಹಿಳೆಯರ ಹಕ್ಕುಗಳ ಅವಿಭಾಜ್ಯ ಅಂಗ. ಈ ಬಗ್ಗೆ ಅಂತಾರಾಷ್ಟ್ರೀಯ ಒಡಂಬಡಿಕೆಗಳು ಆಗಿವೆ ಮತ್ತು ಅನೇಕ ರಾಷ್ಟ್ರಗಳು ತಮ್ಮ ದೇಶದ ಕಾನೂನಿನಲ್ಲಿ ಸೇರ್ಪಡೆ ಮಾಡಿವೆ. ವಿಶ್ವ ಸಂಸ್ಥೆಯ ಜನಸಂಖ್ಯಾ ನಿಧಿ, ಜಗತ್ತಿನ ಜನಸಂಖ್ಯೆಯ ಸ್ಥಿತಿಗತಿ ಬಗೆಗೆ ಸಲ್ಲಿಸಲಾಗಿರುವ ವರದಿಯ ಪ್ರಕಾರ ’ಜಗತ್ತಿನ ಒಟ್ಟು ಗರ್ಭಧಾರಣೆಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಉದ್ದೇಶಿತವಲ್ಲದವು ಮತ್ತು ಅವುಗಳ ಪೈಕಿ ಶೇ 60 ರಷ್ಟು ಗರ್ಭಪಾತದಲ್ಲಿ ಕೊನೆಗೊಳ್ಳುತ್ತವೆ’ ಎಂಬುದನ್ನು ಉಲ್ಲೇಖಿಸುತ್ತದೆ. ಈಗ ಆಗುತ್ತಿರುವ ಗರ್ಭಪಾತಗಳ ಪೈಕಿ ಶೇ 45 ರಷ್ಟು ಸುರಕ್ಷಿತವಲ್ಲದ ಗರ್ಭಪಾತಗಳು. ಇನ್ನು, ಕಾನೂನು ತೊಡಕು ಉಂಟಾದರೆ ಈ ಪ್ರಮಾಣ ಇನ್ನೂ ಹೆಚ್ಚುತ್ತದೆ ಮತ್ತು ತಾಯಂದಿರ ಸಾವಿಗೆ ಇದು ಮುಖ್ಯ ಕಾರಣವೂ ಆಗಬಹುದು ಎಂಬ ಹೆದರಿಕೆಯನ್ನೂ ವ್ಯಕ್ತಪಡಿಸಿದೆ.

ಭಾರತದಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸಿ, ವೈದ್ಯಕೀಯ ಗರ್ಭಪಾತ ಅಧಿನಿಯಮವನ್ನು ಜಾರಿಗೊಳಿಸಿದ್ದು 1972 ರ ಏಪ್ರಿಲ್ 1 ರಿಂದ. ಈ ಕಾನೂನನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು, ಅನೇಕ ತಡೆ ಹಾಗೂ ಎಚ್ಚರಿಕೆಯ ಕ್ರಮಗಳನ್ನೂ ಕಾನೂನು ವಿಧಿಸಿತು ಮತ್ತು ಅವುಗಳ ಉಲ್ಲಂಘನೆ ಶಿಕ್ಷಾರ್ಹ ಅಪರಾಧವಾಯಿತು. ಹಾಗಾಗಿ, ನೋಂದಾಯಿತ ವೈದ್ಯರು ಮಾತ್ರ, ಕೆಲವು ಸಂದರ್ಭಗಳಲ್ಲಿ, ಗರ್ಭಪಾತ ಮಾಡಬಹುದಾಗಿತ್ತು. ಈ ಕಾನೂನನ್ನು 2002 ರಲ್ಲಿ ತಿದ್ದುಪಡಿ ಮಾಡಲಾಯಿತು. ಈ ಅಧಿನಿಯಮವನ್ನು ಜಾರಿಗೆ ತಂದುದರ ಉದ್ದೇಶವೆಂದರೆ, ಮಹಿಳೆಯ ಜೀವಕ್ಕೆ ಅಥವಾ ಅವಳ ದೈಹಿಕ ಆರೋಗ್ಯಕ್ಕೆ ಇರುವ ಅಪಾಯವನ್ನು ತಪ್ಪಿಸುವುದು; ಲೈಂಗಿಕ ಅಪರಾಧಗಳಾದ ಅತ್ಯಾಚಾರ ಅಥವಾ ಮಾನಸಿಕ ಅಸ್ವಸ್ಥಳೊಡನೆ ನಡೆದ ಲೈಂಗಿಕ ಸಂಪರ್ಕದಿಂದ ಉಂಟಾದ ಅವಳ ಗರ್ಭವನ್ನು ತೆಗೆಸುವುದು; ಮಗು ಹುಟ್ಟಿದ ನಂತರ ಅಂಗವಿಕಲವಾಗುವ ಅಥವಾ ಖಾಯಿಲೆಗೆ ತುತ್ತಾಗುವ ಸಂಭವವಿದ್ದರೆ ಅಂಥ ಭ್ರೂಣವನ್ನು ತೆಗೆಯುವುದು ಹಾಗೂ ಸಂತಾನ ನಿಯಂತ್ರಣ ಕ್ರಮವನ್ನು ಅನುಸರಿಸಿದ ಅನಂತರವೂ ಗರ್ಭಧಾರಣೆಯಾಗಿದ್ದರೆ ಅಂಥ ಗರ್ಭವನ್ನು ತೆಗೆಯುವುದಕ್ಕೆ ಅವಕಾಶ ಕಲ್ಪಿಸುವುದು. ಹಾಗಿದ್ದಾಗ್ಯೂ, ಕಾರಣ ಏನೇ ಇದ್ದರೂ, 20 ವಾರಗಳನ್ನು ದಾಟಿದ ಗರ್ಭವನ್ನು, ತಿದ್ದುಪಡಿಯಾದ, ಈಗ ಜಾರಿಯಲ್ಲಿರುವ ಕಾನೂನಿನ ಪ್ರಕಾರವೂ ತೆಗೆಯುವಂತಿಲ್ಲ. ಆದರೆ, ಗರ್ಭ ಮುಂದುವರಿದರೆ ತಾಯಿಯ ಜೀವಕ್ಕೆ ಅಪಾಯವಿದೆ ಎಂದಾಗ ಮಾತ್ರ ಗರ್ಭಪಾತ ಮಾಡಿಸಬಹುದು. ಆದರೆ ತಾಯಿಯ ಜೀವಕ್ಕೆ ಅಪಾಯವಿದೆ ಎಂದು ನೋಂದಾಯಿತ ವೈದ್ಯರು ಪ್ರಮಾಣೀಕರಿಸಬೇಕು. ಅದರ ಆಧಾರದ ಮೇಲೆ ನ್ಯಾಯಾಲಯ ಗರ್ಭಪಾತಕ್ಕೆ ಅನುಮತಿ ನೀಡಬೇಕು. ಈ ಅವಕಾಶವಿರುವುದು ತಾಯಿಯ ಜೀವಕ್ಕೆ ಅಪಾಯವಿದೆ ಎಂದಾಗ ಮಾತ್ರ. ಮಗುವಿನ ಜೀವಕ್ಕೆ ಅಥವಾ ಆರೋಗ್ಯಕ್ಕೆ ಅಪಾಯವಿದೆ ಎಂದಾಗ ಅಲ್ಲ. ತಾಯಿಯ ಜೀವವನ್ನು ಉಳಿಸುವುದಕ್ಕೆ ಅಲ್ಲದೆ ಬೇರೆ ಯಾವುದೇ ಕಾರಣಕ್ಕೆ 20 ವಾರಗಳು ದಾಟಿದ ಗರ್ಭದ ಗರ್ಭಪಾತಮಾಡುವ ವೈದ್ಯರು ಏಳು ವರ್ಷಗಳ ಕಾರಾಗೃಹವಾಸ ಶಿಕ್ಷೆಗೆ ಗುರಿಯಾಗುತ್ತಾರೆ.

ಹಿಮ್ಮುಖ ಚಲನೆ

ಸಾಮಾಜಿಕ ಸ್ಥಿತ್ಯಂತರಗಳಿಗೆ ಹೊಂದುವಂತೆ ಸರಿ ಸುಮಾರು ಎಲ್ಲ ದೇಶಗಳೂ ತಮ್ಮ ನಿಲುವಿನಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿವೆ. ಆದರೆ, ಮುಂದುವರಿದ ಅಮೆರಿಕಾ ದೇಶ ಗರ್ಭಪಾತದ ಬಗ್ಗೆ ತೆಗೆದುಕೊಳ್ಳಾದ ಪ್ರಗತಿಪರ ನಿಲುವು ಮತ್ತು ಮಾಡಲಾದ ಕಾನೂನು ವಿಪರ್ಯಯಗೊಂಡು ಧರ್ಮದ ಹೆಸರಲ್ಲಿ ಹಿಮ್ಮುಖವಾಗಿ ಚಲಿಸಿದರೆ, ಜಾಗತಿಕ ಸಂಚಲನ ಉಂಟಾಗುವುದು ತೀರ ಸಹಜ.

ಗರ್ಭಪಾತಕ್ಕೆ ಸಂಬಂಧಿಸಿದ ಕಟ್ಟುನಿಟ್ಟಾದ ಕಾನೂನನ್ನು ಸಡಿಲಿಸಬೇಕೆಂಬ ಅಂತಾರಾಷ್ಟ್ರೀಯ ಒಡಂಬಡಿಕೆಗೆ ಅಮೆರಿಕಾ ಸರ್ವೋಚ್ಚ ನ್ಯಾಯಾಲಯದ ಈಗಿನ ತೀರ್ಪು ವಿರುದ್ಧವಾದುದಾಗಿದೆ. ಮಹಿಳೆಯರ ಸ್ವಚ್ಛಂದ ಪ್ರವೃತ್ತಿಗೆ ಕಡಿವಾಣವಿಲ್ಲ ಎಂಬ ನಂಬಿಕೆ ವ್ಯಾಪಕವಾಗಿರುವ, ಜಗತ್ತಿನಲ್ಲೇ ಅತಿ ಮುಂದುವರಿದ ದೇಶವಾದ ಅಮೆರಿಕಾದಲ್ಲಿ, ಗರ್ಭಪಾತ ಕುರಿತಂತೆ ಹೊರಬಿದ್ದಿರುವ ಈ ತೀರ್ಪು ಪ್ರಗತಿ ವಿರೋಧಿಯಾಗಿದೆ ಎಂಬ ವ್ಯಾಪಕ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಮಹಿಳೆಯರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಹಕ್ಕುಗಳ ವಿಷಯಕ್ಕೆ ಬಂದಾಗ, ಮಹಿಳೆಯರು ಅವರ ಸಿದ್ಧ ಪಾತ್ರಗಳ ನಿರ್ವಹಣೆಗೆ ಬದ್ಧರಾಗಿರಬೇಕು ಎಂಬ ಈ ದೇಶದ ನಿಲುವು ಬದಲಾಗಿಲ್ಲ ಎಂಬುದು ಈ ತೀರ್ಪಿನಿಂದ ಸಾಬೀತಾಗಿದೆ. ಇದಕ್ಕೆ ದೇಶದಲ್ಲಿ ವ್ಯಾಪಕ ಪ್ರತಿರೋಧ ವ್ಯಕ್ತವಾಗುತ್ತಿದೆ. ಗರ್ಭಪಾತವನ್ನು ನಿಷೇಧಿಸುವ ಅಥವಾ ನಿರ್ಬಂಧಿಸುವ ರಾಜ್ಯಗಳಲ್ಲಿ ವಾಸಿಸುವ ಗರ್ಭಿಣಿ ಮಹಿಳೆಯರು ಪೂರ್ಣಾವಧಿಗೆ ಗರ್ಭ ಧರಿಸಿ ಮಗುವನ್ನು ಪಡೆಯಬೇಕು ಇಲ್ಲವೇ ಕಾನೂನು ಸಡಿಲವಾಗಿರುವ ರಾಜ್ಯಗಳಿಗೆ ಹೋಗಿ, ಅಲ್ಲಿ ಗರ್ಭಪಾತ ಮಾಡಿಸಿಕೊಂಡು ಹಿಂತಿರುಗಬೇಕು ಎಂಬಂಥ ಪರಿಸ್ಥಿತಿ ಇದರಿಂದ ಉಂಟಾಗುತ್ತದೆ. ಆದರೆ, ಈಗಾಗಲೇ ಅನೇಕ ಪ್ರತಿಷ್ಠಿತ ಕಂಪನಿಗಳು, ಗರ್ಭಪಾತ ಮಾಡಿಸಿಕೊಳ್ಳಲು ಇತರ ರಾಜ್ಯಗಳಿಗೆ ಪ್ರಯಾಣಮಾಡಬೇಕಾಗಿ ಬರುವ ತನ್ನ ಮಹಿಳಾ ಉದ್ಯೋಗಿಗಳಿಗೆ ತಗಲುವ ವೆಚ್ಚವನ್ನು ಕಂಪನಿಯಿಂದ ಭರಿಸುವುದಾಗಿ ಭರವಸೆ ನೀಡಿವೆ!

ಅಮೆರಿಕಾದ ಸರ್ವೋಚ್ಚ ನ್ಯಾಯಾಲಯ ಈ ತೀರ್ಪು ನೀಡಿದ ಸ್ವಲ್ಪ ದಿನಗಳಲ್ಲಿಯೇ ಈ ತೀರ್ಪಿನ ಬಗ್ಗೆ ಅಮೆರಿಕಾದ ಅಧ್ಯಕ್ಷರಾದ ಬೈಡನ್ ಅವರು ಪ್ರತಿಕ್ರಿಯಿಸಿದ್ದಾರೆ. ಮಹಿಳೆಯರಿಗೆ ಗರ್ಭಪಾತಕ್ಕಿರುವ ಸಂವೈಧಾನಿಕ ಹಕ್ಕನ್ನು ಮೊಟಕುಗೊಳಿಸುವ ಈ ತೀರ್ಪನ್ನು, ಅವರು, ‘ಘೋರವಾದದ್ದು ಮತ್ತು ವಿಪರೀತವಾದದ್ದು’ ಎಂದು ಕರೆದಿದ್ದಾರೆ. ಮಹಿಳೆಯರು, ಗರ್ಭಪಾತ ಹಕ್ಕನ್ನು ಚಲಾಯಿಸಲು ಅನುಕೂಲವಾಗುವಂತೆ ಒಂದು ಕಾರ್ಯಕಾರೀ ಆದೇಶವನ್ನು ಹೊರಡಿಸಿದ್ದಾರೆ. ಮೊದಲ ಕ್ರಮವಾಗಿ ಕಾರ್ಯಕಾರೀ ಆದೇಶವನ್ನು ಹೊರಡಿಸಿರುವ ಅಧ್ಯಕ್ಷರ ಕ್ರಮವನ್ನು ಮಹಿಳಾವಾದಿಗಳು ಶ್ಲಾಘಿಸಿದ್ದರೂ ಅದಷ್ಟೇ ಸಾಲದು ಎನ್ನುತ್ತಾರೆ. ಈ ಇತ್ತೀಚಿನ ತೀರ್ಪಿನ ನಂತರದ ಕ್ರಮವಾಗಿ ಗರ್ಭಪಾತ ನಡೆಸುವುದನ್ನು ನಿಷೇಧಿಸುವ ಫೆಡರಲ್ ರಾಜ್ಯಗಳ ನಿರ್ಧಾರವನ್ನು ಅನೂರ್ಜಿತಗೊಳಿಸಲು ಗರ್ಭಪಾತ ಹಕ್ಕನ್ನು ನೀಡುವ ಕಾನೂನನ್ನು ಕ್ರೋಡೀಕರಿಸುವುದು ಒಂದೇ ಮಾರ್ಗವಾಗಿದೆ. ಇದಕ್ಕೆ ಅಮೆರಿಕಾದ ಸಂಸತ್ತಿನಲ್ಲಿ ಕಾನೂನು ಜಾರಿಯಾಗಬೇಕು. ಇದಕ್ಕೆ, ಈ ಕಾನೂನನ್ನು ಬೆಂಬಲಿಸುವ ಡೆಮಾಕ್ರೆಟ್‍ಗಳು ಬಹುಮತ ಹೊಂದಿರಬೇಕು. ಆದ್ದರಿಂದ, ನವೆಂಬರ್‍ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರೆಟ್‍ಗಳನ್ನು ಗೆಲ್ಲಿಸುವಂತೆ ಕರೆ ನೀಡುತ್ತಿದ್ದಾರೆ. ಆದರೆ, 79 ವರ್ಷಗಳ ಬೈಡನ್, ಅಮೆರಿಕಾದ ಕಟು ಸಂಪ್ರದಾಯವಾದೀ ಹಕ್ಕಿನ ಸಮಸ್ಯೆಯನ್ನೆತ್ತಿಕೊಂಡು ಹೋರಾಡಬಲ್ಲರೇ ಎಂಬುದು ಡೆಮಾಕ್ರೆಟ್ ಸಂಸದರಲ್ಲೇ ಮೂಡಿರುವ ಪ್ರಶ್ನೆ.

ಭಾರತದಲ್ಲಿ ಗರ್ಭಪಾತ ಕಾನೂನಿಗೆ 2021 ರಲ್ಲಿ ತಿದ್ದುಪಡಿ ಮಾಡಲಾಯಿತು. ಈ ತಿದ್ದುಪಡಿಯ ಮೂಲಕ, ಮಹಿಳೆಯರು, ಸುರಕ್ಷಿತವಾಗಿ ಮತ್ತು ಕಾನೂನಾತ್ಮಕವಾಗಿ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವಿಶೇಷ ಸಂದರ್ಭಗಳಲ್ಲಿ, ಗರ್ಭದ ಅವಧಿ 24 ವಾರಗಳಾಗಿದ್ದರೂ, ನ್ಯಾಯಾಲಯದ ಮಧ್ಯ ಪ್ರವೇಶವಿಲ್ಲದೆ ಗರ್ಭಪಾತಕ್ಕೆ ಅನುಮತಿ ನೀಡುವ ಅವಕಾಶ ಕಲ್ಪಿಸಲಾಗಿದೆ. ಈ ತಿದ್ದುಪಡಿಯೊಂದಿಗೆ, ಭಾರತದಲ್ಲಿ ಜಾರಿಯಲ್ಲಿರುವ ವೈದ್ಯಕೀಯ ಗರ್ಭಪಾತ ಕಾನೂನಿನ ಪ್ರಕಾರ, ಗರ್ಭಪಾತಕ್ಕೆ ಅನುಮತಿಯನ್ನು ವಿಸ್ತøತವಾದ ವೈದ್ಯಕೀಯ, ಮಾನವೀಯ ಮತ್ತು ಸಾಮಾಜಿಕ ಕಾರಣಗಳಿಗಾಗಿ ನೀಡಬಹುದಾಗಿದೆ. ಇದರಿಂದಾಗಿ, ಭಾರತ ವಿಶ್ವದಲ್ಲೇ ಅತ್ಯಂತ ಪ್ರಗತಿಪರ ಕಾನೂನನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಿದೆ.

ಡಾ.ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *