FEATUREDಜಗದಗಲ

ಜಗದಗಲ/ ಕಮಲಾ ಹ್ಯಾರಿಸ್ ಆಯ್ಕೆ ಎಂಬ ಇತಿಹಾಸದ ಸೋಜಿಗ

`ಮಹಿಳೆ ಮತ್ತು ರಾಜಕಾರಣ’ ವಿಚಾರ ಇತಿಹಾಸದುದ್ದಕ್ಕೂ ಮುಂದುವರೆದ ಪಿತೃಪ್ರಧಾನ ತೀರ್ಮಾನವೇ ಆಗಿದೆ. ಇತಿಹಾಸ ಇದಕ್ಕೆ ಅಲ್ಲೊಂದು ಇಲ್ಲೊಂದು ಅಪವಾದವನ್ನು ಮುಂದಿಡುತ್ತಿದ್ದರೂ ಒಟ್ಟಾರೆಯಾಗಿ ಜಾಗತಿಕ ರಾಜಕಾರಣದಲ್ಲಿ ಮಹಿಳೆಯರು ಹೆಜ್ಜೆ ಮೂಡಿಸುವುದು ಇನ್ನೂ ಅತ್ಯಂತ ಕಠಿಣ ಸವಾಲಾಗಿಯೇ ಉಳಿದಿರುವುದರಲ್ಲಿ ಸಂಶಯವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅಮೆರಿಕ, ನ್ಯೂಜಿಲೆಂಡ್ ಮತ್ತು ಇತರ ಕೆಲವು ದೇಶಗಳಲ್ಲಿ ನಡೆದ ಚುನಾವಣೆಗಳಲ್ಲಿ, ಮಿತಿಗಳನ್ನು ಮೀರಿದ, ನಿರ್ಬಂಧಗÀಳನ್ನು ಮುರಿದ ಮತ್ತು ಎತ್ತರಕ್ಕೆ ಏರಿದ ಮಹಿಳೆಯರು ಗೆದ್ದು ರಾಷ್ಟ್ರಾಡಳಿತದ ಅಧಿಕಾರವನ್ನು ಗಳಿಸಿರುವುದು ನಿಜಕ್ಕೂ ಅಸಾಧಾರಣವಾದ ಬೆಳವಣಿಗೆ. ನಿಸ್ಸಂಶಯವಾಗಿ ಇವು ಚರಿತ್ರೆಯ ಮಿತಿಗಳನ್ನು ಪಕ್ಕಕ್ಕೆ ಸರಿಸಿಟ್ಟ ಮಹಿಳೆಯರು ಇಟ್ಟ ದಿಟ್ಟ ಹೆಜ್ಜೆಗಳು.

ಜಗತ್ತಿಗೆ ಮತ್ತು ಮಹಿಳಾ ಮುನ್ನಡೆಗೆ ಒಂದು ಚಾರಿತ್ರಿಕ ಫಲಿತಾಂಶದ ಮೂಲಕ ಅದ್ಭುತ ಸಂದೇಶ ಕೊಟ್ಟಿರುವ ಅಮೆರಿಕದ ಚುನಾವಣೆ ಹಲವಾರು ದೃಷ್ಟಿಗಳಿಂದ ಗಮನಾರ್ಹವಾಗಿತ್ತು. ಕಳೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿಲರಿ ಕ್ಲಿಂಟನ್, ಒಳಹೊರಗಿನ ವಿಭಿನ್ನ ಕಾರಣಗಳಿಂದ ಸೋಲು ಅನುಭವಿಸಿದ್ದರು. ಆ ಹಿನ್ನೆಲೆ ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬ ಮಹಿಳೆಯ ಸ್ಪರ್ಧೆಗೆ ಅನುಕೂಲಕರ ವಾತಾವರಣ ಕಲ್ಪಿಸಿರಲಿಲ್ಲ. ಗೆದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಲ್ಕು ವರ್ಷಗಳ ಕಾಲ ನಡೆಸಿದ ನಿರಂಕುಶ ಆಡಳಿತದ ಬಗ್ಗೆಯಂತೂ ಹೇಳುವುದೇ ಬೇಡ. ಆರ್ಥಿಕತೆ, ವಿದೇಶಾಂಗ ವ್ಯವಹಾರ ಅನುಭವಿಸಿದ ಕಷ್ಟಕೋಟಲೆಗಳು ದಿನದಿನಕ್ಕೆ ಹೆಚ್ಚುತ್ತಿದ್ದವು. ಅಮೆರಿಕ ನೇರವಾಗಿ ಯಾವುದೇ ದೊಡ್ಡ ಯುದ್ಧ ಮಾಡದಿದ್ದರೂ ಪರೋಕ್ಷ ಸಮರದ ಸೋಲುಗಳು ಮಾತ್ರ ಅಪ್ಪಳಿಸುತ್ತಿದ್ದವು. ರಾಷ್ಟ್ರದಾದ್ಯಂತ ಹೆಚ್ಚಿದ ಜನಾಂಗೀಯ ದ್ವೇಷ ಮತ್ತು ಕಪ್ಪುಜನರ ಮೇಲಿನ ದೌರ್ಜನ್ಯಗಳಿಂದಾಗಿ ಬ್ಲ್ಯಾಕ್ ಲೈವ್ಸ್ ಮಾಟರ್' ಆಂದೋಲನ ಇನ್ನಷ್ಟು ವಿಸ್ತರಿಸಿತು.ಇನ್ನು ಕೊರೋನ ವೈರಾಣು ಹಾವಳಿ ಶುರುವಾದ ಮೇಲೆ ಅಮೆರಿಕ ನರಳಿದ- ನರಳುತ್ತಿರುವ ರೀತಿಗೆ ಟ್ರಂಪ್ ತೋರಿದ ಉಡಾಫೆ ಮತ್ತು ಉದಾಸೀನವೇ ಮುಖ್ಯ ಕಾರಣಗಳಾದವು. ಒಟ್ಟಿನಲ್ಲಿ ಅಮೆರಿಕದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ವಲಯಗಳಲ್ಲಿ ಆದ ಕುಸಿತಗಳು ಆ ದೇಶವನ್ನು ಹಲವು ರೀತಿಗಳಲ್ಲಿ ವಿಭಜಿಸಿ ಒಡೆದುಹಾಕಿಬಿಟ್ಟಿತ್ತು. ಹಾಗೆ ನೋಡಿದರೆ ಅಮೆರಿಕ ಹಲವು ಮೂಲಗಳಿಂದ, ಹಲವು ದೇಶಗಳಿಂದ ಬಂದ ವಿಭಿನ್ನ ಜನಾಂಗಗಳು ಆರಿಸಿಕೊಂಡು ನೆಲೆನಿಂತ ದೇಶವಾದ್ದರಿಂದ ಅದು ವಲಸಿಗರ ನಾಡು’ ಎಂದೇ ಹೆಸರಾಗಿದೆ. ಆದರೂ `ಅನುದಾರವಾದಿ ಪ್ರಜಾಪ್ರಭುತ್ವ’ ಎಂದು ಕರೆಸಿಕೊಂಡದ್ದು, ಅದರಲ್ಲಿ ಬದುಕುವ, ಅಭಿವೃದ್ಧಿ ಹೊಂದುವ ಹಕ್ಕು ಏನಿದ್ದರೂ ಬಿಳಿಯರದು ಎಂಬ ಜನಾಂಗವಾದಿ ಚಿಂತನೆ ಹರಡುತ್ತಿರುವುದು ಆತಂಕಕಾರಿಯಾಗಿತ್ತು.

ಅಭೂತಪೂರ್ವ

ಇಂಥ ಸನ್ನಿವೇಶದಲ್ಲಿ ನಡೆದ ಚುನಾವಣೆ ಮತ್ತದರ ಫಲಿತಾಂಶ ಅನೇಕ ರೀತಿಗಳಲ್ಲಿ ಮುಖ್ಯವಾಗುತ್ತವೆ. ಜೋ ಬೈಡನ್ ಅಧ್ಯಕ್ಷರಾಗಿ ಆಯ್ಕೆಯಾಗಿ ಪರಿವರ್ತನೆಯಲ್ಲಿ ಆಸೆ ಹುಟ್ಟಿಸಿದ್ದಾರೆ. ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಆಯ್ಕೆ ಅಭೂತಪೂರ್ವ ಎನಿಸಿದೆ. ಅದರಲ್ಲೂ ಪ್ರಪ್ರಥಮಬಾರಿಗೆ ಒಬ್ಬ ಮಹಿಳೆ, ಕಪ್ಪುವರ್ಣದ ಹಿನ್ನೆಲೆಯ ಮಹಿಳೆ, ಇಂಡಿಯನ್ ಅಮೆರಿಕನ್ ಆದ ಏಷ್ಯಾದ ಮಹಿಳೆ- ಉಪಾಧ್ಯಕ್ಷ ಪದವಿಗೆ ಆಯ್ಕೆಯಾಗಿರುವುದು ಐತಿಹಾಸಿಕ ಘಟನೆಯೇ ಸರಿ. ಎಂದಿನಂತೆ ಅಥವಾ ಹಿಲರಿ ಕ್ಲಿಂಟನ್ ಅವರಂತೆ ಕಮಲಾ ಕೂಡ ಚುನಾವಣಾ ಪ್ರಕ್ರಿಯೆಯ ಉದ್ದಕ್ಕೂ ಬೇಕಾದಷ್ಟು ಜನಾಂಗೀಯ ಹೀನ ಟೀಕೆಗಳನ್ನು ಕೇಳಬೇಕಾಯಿತು. ಉಪಾಧ್ಯಕ್ಷ ಮೈಕ್ ಪೆನ್ಸ್ ಜೊತೆ ಸಂವಾದದ ನಂತರ ಟ್ರಂಪ್ ಕಮಲಾ ಅವರನ್ನು “ರಾಕ್ಷಸಿ” ಎಂದೂ ಕರೆದರು. ಆದರೆ ಅದಕ್ಕೆಲ್ಲಾ ಹೆದರದೆ ಕಮಲಾ ಪ್ರಚಾರ ಮುಂದುವರೆಸಿದರು. ಗೆದ್ದ ಮೇಲೆ “ನಾನು ಈ ಸ್ಥಾನಕ್ಕೆ ಚುನಾಯಿತಳಾದ ಮೊದಲ ಮಹಿಳೆ ಇರಬಹುದು, ಆದರೆ ನಾನು ಕೊನೆಯ ಮಹಿಳೆ ಆಗುವುದಿಲ್ಲ'” ಎಂಬ ಕಮಲಾ ಹ್ಯಾರಿಸ್ ಘೋಷಣೆಗೆ ಹಲವು ಅರ್ಥಗಳ ಆಯಾಮಗಳಿವೆ. ಇದು ಅಧ್ಯಕ್ಷ ಸ್ಥಾನಕ್ಕೆ ಏರಲು ಮೊದಲ ಮೆಟ್ಟಿಲೂ ಆಗಿರಬಹುದು. ಏನಿದ್ದರೂ ಅವರ ಈಗಿನ ಸಾಧನೆಯೂ ಇತಿಹಾಸದಲ್ಲಿ ಹೊಸ ಅಧ್ಯಾಯವೇ ಆಗಿದೆ.

ಕಮಲಾ ಎರಡು ವಿಭಿನ್ನ ಜನಾಂಗಗಳ ಪರಂಪರೆಯಲ್ಲಿ ಹುಟ್ಟಿ ಬೆಳೆದವರು. ಭಾರತದಲ್ಲಿ ಕುಟುಂಬದ ಬೇರುಗಳಿರುವ ಶ್ಯಾಮಲಾ (ಕಮಲಾ ಅವರ ತಾಯಿ) ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೆರಿಕಕ್ಕೆ ತೆರಳಿ, ಅಲ್ಲಿ ಜಮೈಕಾ ಮೂಲದ ಅಮೆರಿಕನ್ ಪ್ರಜೆ ಡೊನಾಲ್ಡ್ ಹ್ಯಾರಿಸ್ ಅವರನ್ನು ಮದುವೆಯಾದದ್ದು ಆ ಕಾಲಕ್ಕೆ ಬಹಳ ದೊಡ್ಡ ಸುದ್ದಿಯಾಗಿತ್ತು. ಕಮಲಾ ಮತ್ತು ಮಾಲಾ ಎಂಬ ತನ್ನ ಹೆಣ್ಣುಮಕ್ಕಳನ್ನು ಸ್ವತಂತ್ರ ಮನೋಧರ್ಮದ ವೃತ್ತಿಪರ ಚಿಂತಕಿಯರನ್ನಾಗಿ ಶ್ಯಾಮಲಾ ಬೆಳೆಸಿದರು. ಡಗ್ ಎಮ್ಹಾಫ್ ಅವರನ್ನು ಕಮಲಾ ಮದುವೆಯಾದರು. ಕ್ಯಾಲಿಫೋರ್ನಿಯ ರಾಜ್ಯದ ಅಟಾರ್ನಿ ಜನರಲ್, ನಂತರ ಸೆನೆಟರ್, ಈಗ ರಾಷ್ಟ್ರದ ಉಪಾಧ್ಯಕ್ಷೆ, ಮುಂದೆ ಅಧ್ಯಕ್ಷೆ ಆಗುವ ಆಕಾಂಕ್ಷೆ – ಇದು ಕಮಲಾ ಹ್ಯಾರಿಸ್ ಅವರ ಬೆಳವಣಿಗೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿ ರದ್ದಾದಾಗ ಕಮಲಾ ದಿಟ್ಟವಾಗಿ ತಮ್ಮ ವಿರೋಧ ವ್ಯಕ್ತಪಡಿಸಿದ್ದರು ಎನ್ನುವುದನ್ನು ಅವರ ರಾಜಕೀಯ ಚಿಂತನೆಯ ಒಂದು ಉದಾಹರಣೆಯಾಗಿ ಗಮನಿಸಬೇಕು.

ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರ ಮುಂದಿರುವ ಸವಾಲುಗಳು ಒಂದೆರಡಲ್ಲ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಕೇವಲ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯ “ರನ್ನಿಂಗ್ ಮೇಟ್” ಮತ್ತು ನಂತರ ಬಹುಪಾಲು ಮೌನ ಪ್ರೇಕ್ಷಕರಾಗುವ ಉಪಾಧ್ಯಕ್ಷರಾಗಿ ಉಳಿಯದೆ ಇರುವ ನಿರೀಕ್ಷೆಯೇ ಹೆಚ್ಚು. ಅಮೆರಿಕದಲ್ಲಿ ಇದುವರೆಗೆ ಅಧ್ಯಕ್ಷರಾಗಿ 45 ಪುರುಷರು ಮತ್ತು ಉಪಾಧ್ಯಕ್ಷರಾಗಿ 48 ಪುರುಷರು ಆಯ್ಕೆಯಾಗಿ ಆಡಳಿತ ನಡೆಸಿದ್ದಾರೆ. ಕಮಲಾ ಹ್ಯಾರಿಸ್ ಆಯ್ಕೆ ವಿಭಿನ್ನ ಆಗಿರುವಂತೆ ಅವರ ಆಡಳಿತಾವಧಿಯೂ ವಿಭಿನ್ನವಾಗಿ ಇರಬಹುದು. (ವಿವಿಧ ಮೂಲಗಳಿಂದ ಸಂಗ್ರಹ)
ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *