ಜಗದಗಲ/ ಎಲ್ಲಿದೆ ಹವಾಮಾನ ನ್ಯಾಯ? – ಡಾ. ಹರೀಶ್ ಹಂದೆ

ಇತ್ತೀಚೆಗೆ ಪೋಲೆಂಡ್‍ನಲ್ಲಿ ಹವಾಮಾನ ವೈಪರೀತ್ಯ ಕುರಿತು 200ಕ್ಕೂ ಹೆಚ್ಚು ದೇಶಗಳು ಒಟ್ಟು ಸೇರಿದ COP 24 ಎಂದೇ ಕರೆಯಲ್ಪಡುವ (UN Climate Change Conference, also known as COP24) ವಿಶ್ವಸಂಸ್ಥೆಯ ಶೃಂಗ ಸಭೆ ನಡೆಯಿತು. ಅದರಲ್ಲಿ ದೊಡ್ಡವರು ಕೈಗೊಂಡ ತೀರ್ಮಾನದ ವಿರುದ್ಧ
ಯುವಜನತೆ ತಿರುಗಿಬಿದ್ದದ್ದು ವಿಶ್ವದೆಲ್ಲೆಡೆ ಅನುರಣಿಸಿತು. ಮುಖ್ಯವಾಗಿ ಗ್ರೇಟಾ ಥನ್‍ಬರ್ಗ್ ಎಂಬ ಹುಡುಗಿ `ಹವಾಮಾನ ನ್ಯಾಯ’ದ ಬಗ್ಗೆ ಮಾತನಾಡಿದ್ದು ವಿಶೇಷವಾಗಿ ಗಮನ ಸೆಳೆಯಿತು.

“ನಾನೀಗ ಹವಾಮಾನ ನ್ಯಾಯದ ಬಗ್ಗೆ ಮಾತನಾಡುತ್ತಿದ್ದೇನೆ. ಸ್ವೀಡನ್ ಒಂದು ಸಣ್ಣ ದೇಶ.
ಹಾಗಾಗಿ ಬದಲಾಗುತ್ತಿರುವ ಹವಾಮಾನದಂಥ ದೊಡ್ಡ ಸಂಗತಿಗೆ ನಾವೇನು ಮಾಡಬೇಕಾಗಿಲ್ಲ
ಎಂದು ತುಂಬ ಜನ ಹೇಳುತ್ತಿದ್ದಾರೆ. ಆದರೆ ಚಿಕ್ಕದು ಕೂಡ ಬದಲಾವಣೆಗೆ ಕಾರಣವಾಗಬಲ್ಲದು ಎಂಬುದನ್ನು ನಾನೂ ಕಲಿತಿದ್ದೇನೆ. ಪ್ರತಿಬಾರಿಯೂ ಇಲ್ಲಿ ಸಭೆ ಸೇರಿ ಬದಲಾಗುತ್ತಿರುವ ವಾತಾವರಣದ ಕುರಿತು
ಚರ್ಚೆ ಮಾಡುತ್ತೀರಿ ಅಷ್ಟೆ. ಯಾವುದೇ ನಿರ್ಣಯಕ್ಕೂ ಬರುವುದಿಲ್ಲ. ಇಂದು ನೀವು ಮಾಡುವ ತಪ್ಪು
ನಿರ್ಧಾರ ಮುಂದಿನ ನಮ್ಮ ಭವಿಷ್ಯಕ್ಕೆ ಮಾರಕವಾಗುತ್ತದೆ ಎನ್ನುವುದು ನಿಮಗೆ ನೆನಪಿರಲಿ. ಹಾಗಾಗಿ ನಾನು
ನಿಮ್ಮನ್ನು ಬೇಡಿಕೊಳ್ಳುವುದಿಲ್ಲ. ನಾವೇ ಮಕ್ಕಳೆಲ್ಲ ಸೇರಿ ಇದರ ವಿರುದ್ಧ ಹೋರಾಡುತ್ತೇವೆ…”

ಸ್ವೀಡನ್ ದೇಶದ ಹದಿಹರೆಯದ ಹುಡುಗಿ ಗ್ರೇಟಾ ಥನ್‍ಬರ್ಗ್ ಪೋಲೆಂಡಿನಲ್ಲಿ ನಡೆದ ಹವಾಮಾನ
ಬದಲಾವಣೆಯ ವಿಶ್ವಸಂಸ್ಥೆಯ ಶೃಂಗ ಸಭೆಯಲ್ಲಿ ವಾತಾವರಣದ ಬದಲಾವಣೆಯ ಕುರಿತು ಮಾತನಾಡಿದ್ದು
ಜಗತ್ತಿನೆಲ್ಲೆಡೆ ಸದ್ದು ಮಾಡಿತು.

ಹವಾಮಾನ ವೈಪರೀತ್ಯದ ಬಗ್ಗೆ ಪೋಲೆಂಡ್‍ನಲ್ಲಿ 200ಕ್ಕೂ ಹೆಚ್ಚು ದೇಶಗಳು ಒಟ್ಟು ಸೇರಿದ ಅಔP24
ಎಂದೇ ಕರೆಯಲ್ಪಡುವ ಯುಎನ್ ಕ್ಲೈಮೇಟ್ ಚೇಂಜ್ ಕಾನ್‍ಫೆರೆನ್ಸ್ (Uಓ ಅಟimಚಿಣe ಅhಚಿಟಿge
ಅoಟಿಜಿeಡಿeಟಿಛಿe, ಚಿಟso ಞಟಿoತಿಟಿ ಚಿs ಅಔP24) ನಲ್ಲಿ ಅವಳು ಮಾತನಾಡಿದ್ದು ಭಾರತದ ಮಾಧ್ಯಮಗಳಲ್ಲಿ ಹೆಚ್ಚಾಗಿ ಪ್ರಚಾರವಾಗಲಿಲ್ಲ. ಇಷ್ಟಕ್ಕೂ ಕಾಪ್ ಕುರಿತೇ ಅಷ್ಟೊಂದು ಸದ್ದು ಕೇಳಲಿಲ್ಲ.
ಇದೇ ಹೊತ್ತಿನಲ್ಲಿ ಗ್ರೇಟಾಳ ಭಾಷಣದಿಂದ ಪ್ರೇರೇಪಿತರಾಗಿ ಆಸ್ಟ್ರೇಲಿಯಾದಲ್ಲಿ 8, 9, 10 ನೇ ತರಗತಿಯ
1 ಲಕ್ಷಕ್ಕೂ ಅಧಿಕ ಹುಡುಗ- ಹುಡುಗಿಯರು ಶಾಲೆಯಿಂದ ಹೊರಬಂದು ರಸ್ತೆ ಬಂದ್ ಮಾಡಿ
ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಏಕೆಂದರೆ ಆಸ್ಟ್ರೇಲಿಯಾ ಸರ್ಕಾರ ಹವಾಮಾನಕ್ಕೆ ಸಂಬಂಧಿಸಿದಂತೆ ಒಂದು ತಪ್ಪು ನಿರ್ಧಾರವನ್ನು ತೆಗೆದುಕೊಂಡಿತ್ತು. ಹವಾಮಾನ ಬದಲಾವಣೆಯ ಕುರಿತಾದ ನಿಮ್ಮ ಏನೇ ನಿರ್ಧಾರÀಗಳಿದ್ದರೂ ಅದು ನಮ್ಮ ಭವಿಷ್ಯಕ್ಕೆ ಪೂರಕವಾಗಿರಬೇಕು ಎಂದು ಆ ಮಕ್ಕಳು ಪ್ರತಿಭಟನೆ ಮಾಡಿದರು. ಈ ಪ್ರತಿಭಟನೆ ಐತಿಹಾಸಿಕವಾದ, ಹೆಚ್ಚು ಮೌಲಿಕವಾದ, ಜಾಗೃತವಾದ ಪ್ರತಿಭಟನೆ ಎಂದು ನಾನು ಗೌರವಿಸುತ್ತೇನೆ.

ನಮ್ಮ ಕೈಗಾರೀಕರಣದಿಂದಾಗಿ ಸರಾಸರಿ ಜಾಗತಿಕ ತಾಪಮಾನ ಏರುತ್ತಿದೆ. ಇದರ ಪರಿಣಾಮ ಈಗಾಗಲೇ
ನಮ್ಮ ಗೋಚರಕ್ಕೆ ಬಂದಿದೆ. ಸುಂಟರಗಾಳಿ, ಚಂಡಮಾರುತಗಳು ಹೆಚ್ಚಾಗಿವೆ. ಬರ ಹೆಚ್ಚಾಗುತ್ತಿದೆ.
ಮರುಭೂಮಿಯ ವಿಸ್ತಾರ ಹೆಚ್ಚುತ್ತಿದೆ. ಇವೆಲ್ಲವೂ ಹವಾಮಾನದಲ್ಲಿ ಉಂಟಾದ, ಆಗುತ್ತಿರುವ
ಬದಲಾವಣೆಗಳು. ಈ ಬದಲಾವಣೆಯ ದುಷ್ಪರಿಣಾಮ ಮೊದಲು ಕಾಣುವುದು ಕೃಷಿ ಕ್ಷೇತ್ರದ ಮೇಲೆ.
ಜೊತೆಗೆ ಆರೋಗ್ಯ, ಆರ್ಥಿಕತೆ, ಹೀಗೆ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ.

ಏರುತ್ತಿರುವ ಜಾಗತಿಕ ತಾಪಮಾನ, ಬದಲಾಗುತ್ತಿರುವ ಕೃಷಿ ಚಕ್ರ, ಹೆಚ್ಚುತ್ತಿರುವ ಹವಾಮಾನ
ಬದಲಾವಣೆ ಇವಕ್ಕೆಲ್ಲ ಮೂಲ ಇಂಗಾಲದ ಬಳಕೆ ಹೆಚ್ಚುತ್ತಿರುವುದು. ಅದಕ್ಕಾಗಿ ಪ್ರತಿವರ್ಷ ನಡೆಯುವ
ಈ ಶೃಂಗಸಭೆಯಲ್ಲಿ ಪ್ರತಿ ದೇಶದಲ್ಲೂ ಇಂಗಾಲದ ಬಳಕೆಯನ್ನು ಹೇಗೆ ಕಡಿಮೆ ಮಾಡಬಹುದು
ಎಂಬುದರ ಕುರಿತು ಚರ್ಚಿಸುವುದಲ್ಲದೆ, ಇಂತಿಷ್ಟೇ ಬಳಸಬೇಕೆಂದೂ ಅದರ ಪ್ರಮಾಣವನ್ನೂ ಹೇಳಲಾಗುತ್ತದೆ.
ಆದರೆ ಬಡರಾಷ್ಟ್ರಗಳು ಶ್ರೀಮಂತ ರಾಷ್ಟ್ರಗಳ ಮೇಲಿನ ಜವಾಬ್ದಾರಿ ಹೆಚ್ಚಿದೆ ಎಂದು ಯೋಚಿಸುತ್ತವೆ. ಶೇ.
25 ರಷ್ಟು ವಾಯುಮಾಲಿನ್ಯ ಅಮೆರಿಕದಿಂದ ಆಗುತ್ತದೆ ಎಂದಾದರೆ, ಭಾರತ ಶೇ. 5ಕ್ಕಿಂತಲೂ ಕಡಿಮೆ
ಮಾಡುತ್ತದೆ. ಆದರೆ ಭಾರತ ವೇಗವಾಗಿ ಬೆಳೆಯುತ್ತಿದೆ. 2 ಡಿಗ್ರಿ ಸೆಲ್ಷಿಯಸ್ ತಾಪಮಾನ ಜಾಸ್ತಿ ಆದರೂ
ನಾವು ತೊಂದರೆಗೆ ಸಿಲುಕುತ್ತೇವೆ. ಅಂಟಾರ್ಟಿಕ, ಆಕ್ರ್ಟಿಕಗಳು ಕರಗಿದರೆ, ಆಗ ಸಮುದ್ರ ಮೇಲೇರಿ ದ್ವೀಪ
ರಾಷ್ಟ್ರಗಳೆಲ್ಲ ಮುಳುಗಿಹೋಗುವ ಅಪಾಯಗಳಿವೆ.

ಇನ್ನು ಕೆಲವು ದೇಶಗಳಿಗೆ ಈ ಹವಾಮಾನ ಬದಲಾವಣೆ ಯಾವುದೇ ರೀತಿಯ ಪರಿಣಾಮವೇ ಆಗುತ್ತಿಲ್ಲ.
ಉದಾಹರಣೆಗೆ ಸೌದಿ ಅರೇಬಿಯಾ. ಮರುಭೂಮಿಯಾದ ಅಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ.
ಹಾಗಾಗಿ ನಾವು ಮಾಲಿನ್ಯವನ್ನು ನಿಯಂತ್ರಣ ಮಾಡುವ ಅಗತ್ಯವಿಲ್ಲವೆಂದು ಅದು ಹೇಳುತ್ತದೆ. ಅಂದರೆ ಇದು
ನನಗೆ ಸಂಬಂಧಿಸಿದ್ದಲ್ಲ ಎಂದು ಯಾವುದೇ ದೇಶ ಯೋಚಿಸುತ್ತ ಹೋದರೆ ಭೂಮಿಗೆ ಅಪಾಯ ತಪ್ಪಿದ್ದಲ್ಲ.
ಇಡೀ ಭೂಮಿಗೆ ಇರುವುದು ಒಂದೇ ಒಂದು ವಾತಾವರಣ ಕವಚ. ಅದಕ್ಕೆ ಧಕ್ಕೆಯಾದರೆ ಎಲ್ಲ ದೇಶಕ್ಕೂ
ಸಮಸ್ಯೆ ಎನ್ನುವುದನ್ನು ಅರಿಯಬೇಕು. ಈ ಕಾರಣಕ್ಕಾಗಿ ಈ ಕಾಪ್ ಸಮ್ಮೇಳನ ತುಂಬ ಮುಖ್ಯ.

ಭಾರತಕ್ಕೆ ಏನು ಧಕ್ಕೆ?

ಈ ಹವಾಮಾನ ಬದಲಾವಣೆ ಮತ್ತು ಬಡತನಕ್ಕೆ ನೇರ ಸಂಬಂಧವಿದೆ. ಕೃಷಿ ಚಕ್ರದ ಬದಲಾವಣೆಯಿಂದಾಗಿ
ಜೀವನೋಪಾಯಕ್ಕೆ ಸಮಸ್ಯೆಯಾಗುತ್ತದೆ. ಈಗ ಮುಂಗಾರು ಯಾವಾಗ ಬರುತ್ತದೆಂದು ಅಂದಾಜಿಸಲು
ಸಾಧ್ಯವೇ ಇಲ್ಲದಂಥ ಕಾಲದಲ್ಲಿ ನಾವಿದ್ದೇವೆ. ಈಗ ರೈತನಿಗೆ, ಮಳೆ ಯಾವಾಗ ಬರುತ್ತದೆ, ಯಾವಾಗ ಬೀಜ
ಖರೀದಿಸುತ್ತೇನೆ, ಯಾವಾಗ ಆದಾಯ ಬರುತ್ತದೆ ಅಂತ ಗೊತ್ತಿರುವುದಿಲ್ಲ. ಅದರಿಂದ ಆತ ಬದುಕಲಾರದ ಸ್ಥಿತಿಗೆ ತಲುಪಿ, ಅನಿವಾರ್ಯವಾಗಿ ಸಾಲ ಮಾಡುವಂತಾಗುತ್ತದೆ.

ಆ ಸಮಯದಲ್ಲಿ ಇತರ ಶಕ್ತಿಯ ಮೂಲಗಳಾದ ಸೋಲಾರ್, ಬಯೋಗ್ಯಾಸ್ ಮುಂತಾದ ಹೊಸ
ಶೋಧಗಳಿಂದ ಆದಾಯ ಬರುವಂಥ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿದರೆ ಅವರ ಜೀವನಕ್ಕೊಂದು
ಆಧಾರವಾಗುತ್ತದೆ. ಆಗ ನಮ್ಮಲ್ಲಿರುವ ಬಡತನ ನಿವಾರಣೆಗೊಂದು ಭಿನ್ನತೆಯನ್ನು ನೋಡಬಹುದು. ಸೆಲ್ಕೋದಂತಹ ಸುಸ್ಥಿರ ಪರಿಹಾರದ ಹಾದಿಯಲ್ಲಿರುವ ಸಂಸ್ಥೆಗಳು ಮಾಡಬೇಕಾದದ್ದು ಇದನ್ನೇ. ಸೌರಶಕ್ತಿ ಚಾಲಿತ ಹೊಲಿಗೆ ಯಂತ್ರ, ರೊಟ್ಟಿ ಯಂತ್ರ, ಕಮ್ಮಾರಿಕೆಗೆ ಬೇಕಾದ ಗಾಳಿಯೂದುವ ಯಂತ್ರ, ಹಾಲುಕರೆಯುವ ಯಂತ್ರ ಹೀಗೆ ಯಾವುದೇ ಜೀವನಾಧಾರದ ಯಂತ್ರಗಳನ್ನು ವಿದ್ಯುತ್ ಇಲ್ಲದೆಯೇ ಯಾವುದೇ ಪ್ರದೇಶದಲ್ಲೂ, ಯಾವಾಗ ಬೇಕಾದರೂ ಬಳಸಲು ಸಾಧ್ಯ ಮತ್ತು ಅವುಗಳ ಬಳಕೆಯಿಂದ ಉದ್ಯಮ ನಡೆಸಿ ಬದುಕು ಕಟ್ಟಿಕೊಳ್ಳಲು ಸಾಧ್ಯ. ಅದಕ್ಕೆ ಸಂಬಂಧಿಸಿದಂತೆ ತಂತ್ರಜ್ಞಾನದಲ್ಲಿ ಮಾಡಿದ ಸಂಶೋಧನೆಯನ್ನು ಇತರ ರಾಷ್ಟ್ರಗಳಿಗೆ ತೋರಿಸಿ, ಭಾರತ ಇತರ ದೇಶಗಳಿಗೆ ಮಾದರಿಯಾಗಿ ನಿಲ್ಲಬಹುದು.

ಕಾಪ್ ಸಮಾವೇಶದಲ್ಲಿ ಈ ಬಾರಿ ಬ್ರೆಜಿಲ್ ಮತ್ತು ಟರ್ಕಿ ಎರಡು ದೇಶಗಳು ಬಿಟ್ಟರೆ ಮಿಕ್ಕ 200 ದೇಶಗಳು ಒಂದು ಒಮ್ಮತ ಅಭಿಪ್ರಾಯಕ್ಕೆ ಬಂದಿದ್ದು 2015ರ ಕಾಪ್ ಸಮಾವೇಶದ ಒಪ್ಪಂದಕ್ಕೆ ಒಪ್ಪಿವೆ. ಆದರೆ ಇದಕ್ಕೂ
ಮುಂಚಿನ ಕಾಪ್ ಸಮಾವೇಶಗಳು ಜಗಳದಲ್ಲೇ ಮುಕ್ತಾಯವಾಗುತ್ತಿತ್ತು. ಅಂದರೆ ನಮ್ಮಲ್ಲಿ ಬಡತನ ಇದೆ,
ನಾವು ಮಾಡಲ್ಲ, ಆ ದೇಶ ಮಾಡಲಿ ಎಂದು ಬಹುತೇಕ ದೇಶಗಳು ಜಗಳ ಮಾಡುತ್ತಲೇ ಇದ್ದವು.
ಬ್ರೆಝಿಲ್ ದೇಶದ ಜನಸಂಖ್ಯೆ 100 ಮಿಲಿಯನ್‍ಗಳಷ್ಟು, ಅಂದರೆ ನಮ್ಮ ಉತ್ತರ ಪ್ರದೇಶಕ್ಕೆ
ಸರಿಸಮಾನವಾದ ಜನಸಂಖ್ಯೆ. ಆದರೆ ಬ್ರೆಝಿಲ್ ಇಡೀ ವಿಶ್ವದ ಶ್ವಾಸಕೋಶ (ಲಂಗ್ಸ್ ಆಫ್ ದ ವಲ್ರ್ಡ್),
ಅಲ್ಲಿರುವುದು ಇಡೀ ವಿಶ್ವದ ಹಸಿರು ಸರಪಳಿಯನ್ನು ಹಿಡಿದಿಡುವ ಅಮೆಜಾನ್ ಕಾಡು. ಅಮೆಜಾನ್
ಕಾಡುಗಳನ್ನು ಕತ್ತರಿಸಿದರೆ ಅದರ ನೇರ ಪರಿಣಾಮ ಆಫ್ರಿಕಾ, ಭಾರತ ಮುಂತಾದ ಅನೇಕ ದೇಶಗಳ ಮೇಲೆ
ಆಗುತ್ತದೆ. ಆದರೆ ಬ್ರೆಝಿಲ್ ಇದು ನಮ್ಮ ಜಾಗ, ನಾವು ನಮ್ಮ ಮರ ಕತ್ತರಿಸುತ್ತೇವೆ ಎನ್ನುತ್ತದೆ!

ಮಂಗಳ ಗ್ರಹದಿಂದ ದಾಳಿ ನಡೆಯುತ್ತದೆ ಎಂದಾದಾಗ ಅದು ಮೊದಲು ಅಮೆರಿಕದ ಮೇಲೆ ದಾಳಿ
ಮಾಡುತ್ತದೆಯಾ ಅಥವಾ ಭಾರತದ ಮೇಲಾ ಎಂದು ಯೋಚಿಸಲಾಗುವುದಿಲ್ಲ. ಒಟ್ಟಾರೆಯಾಗಿ ಅದು
ನಡೆಯವುದು ಈ ಭೂಮಿ ಮೇಲೆ. ಆದರೆ ನಾವು ಉತ್ತರ, ದಕ್ಷಿಣ ಎಂದು ಗಡಿ ಮಾಡುತ್ತ ಹೋದರೆ
ಅದಕ್ಕೆ ಪರಿಹಾರವಿಲ್ಲ. ನಿಜವಾಗಿ ನೋಡಿದರೆ ಈ ಹವಾಮಾನ ವೈಪರೀತ್ಯವೆಂಬುದು ಹೊರಗಡೆಯಿಂದ
ಆಗುತ್ತಿರುವ ದಾಳಿ. ಇದು ಎಲ್ಲರ ಮೇಲೂ ಪರಿಣಾಮ ಬೀರುವಂಥದ್ದು. ಹಾಗಾಗಿ ನಾವು ಭಾರತೀಯರು,
ಅಮೆರಿಕನ್ನರು, ಚೀನೀಯರು, ಕ್ರಿಶ್ಚಿಯನ್ನರು, ಮುಸ್ಲಿಮರು, ಹಿಂದುಗಳು ಎಂಬೆಲ್ಲಾ ಲೆಕ್ಕಾಚಾರಗಳನ್ನು ಬಿಟ್ಟು, ನಾವೆಲ್ಲ ಮನುಷ್ಯರು, ಇದು ಭೂಮಿಗೆ ಆಗುತ್ತಿರುವಂತಹ ಅಪಾಯ ಎಂದು ಯೋಚಿಸಬೇಕಿದೆ. ಗ್ರೇಟಾ ಸೇರಿ ಮಕ್ಕಳು ಕೇಳಿದ ಪ್ರಶ್ನೆ ಈ ಮೂಲದಿಂದ ಹೊರಟಿದೆ.

ಈ ವಿಪ್ಲವವನ್ನು ಎದುರಿಸುವ ಬಗೆ ಹೇಗೆ?

ನಿಧಾನಕ್ಕೆ ಏರುತ್ತಿರುವ ಈ ತಾಪಮಾನದ ಬಗ್ಗೆ, ವಿಸ್ತರಿಸಿಕೊಳ್ಳುತ್ತಿರುವ ಮರುಭೂಮಿಯ ಬಗ್ಗೆ ನಮಗೆ
ಅರಿವಾಗುತ್ತಿಲ್ಲ. ಹೇಗೆಂದರೆ ನಾವು ಕಪ್ಪೆಯ ಥರ ಆಗುತ್ತಿದ್ದೇವೆ. ಕಪ್ಪೆಯನ್ನು ನೀರಿಗೆ ಹಾಕಿ ನಿಧಾನಕ್ಕೆ ನೀರನ್ನು ಕುದಿಸಿದರೆ, ನೀರಿನಲ್ಲಾದ ತಾಪಮಾನದ ಬದಲಾವಣೆಯನ್ನು ಅದು ಗುರುತಿಸುವುದಿಲ್ಲ. ಅದು ಹಾರಿ ಹೊರ ಬರದೇ ಅಲ್ಲಿಯೇ ಸತ್ತು ಹೋಗುತ್ತದೆ. ನಾವು ಕೂಡ ಕಪ್ಪೆ ಥರ ಆಗುತ್ತಿದ್ದೇವೆ. ಈ ಬಾರಿ ಭಾರೀ ಸೆಖೆ
ಇತ್ತು, ಕಳೆದ ಬಾರಿ ಇರಲಿಲ್ಲ, ಅಂತ ಮಾತ್ರ ಹೇಳುತ್ತೇವೆÉ. ಮತ್ತು ಅದಕ್ಕೆ ಹೊಂದಿಕೊಳ್ಳುತ್ತೇವೆ. ಒಂದು ದಿನ ನಾವೂ ಸಾಯುತ್ತೇವೆ ಇದೇ ತಾಪಮಾನ ಏರಿಕೆಯಿಂದ- ಅದು ನಮ್ಮ ಅರಿವಿಗೆ ಬರುವುದಿಲ್ಲ. ಹೀಗೆ
ಅರಿವಿಗೆ ಬಾರದೆ ಕಪ್ಪೆಯಂತೆಯೇ ನಮ್ಮ ಸ್ಥಿತಿಯೂ ಆಗುತ್ತಿದೆ.

ಹಾಗಾಗಿ ವಾತಾವರಣದ ಕುರಿತಾಗಿ ನಮ್ಮಲ್ಲಿ ದೂರದೃಷ್ಟಿ ಇರಬೇಕು. ಮಹಾರಾಷ್ಟ್ರದಲ್ಲಿ ಬರಬಂದಾಗ
ನೀರಿಲ್ಲದೆ ರೈತ ಆತ್ಮಹತ್ಯೆ ಮಾಡಿಕೊಳ್ತಾನೆ ಎಂದರೆ, ಅದೇ ರೀತಿ ಕರ್ನಾಟಕದಲ್ಲಿ ಆದರೆ ಏನು
ಮಾಡಬೇಕು, ಮಳೆ ಬರದಿದ್ದರೆ ಅವರ ಜೀವನಕ್ಕೆ ಏನು? ಎಂಬುದರ ಕುರಿತು ಒಂದು ತಂತ್ರಗಾರಿಕೆಯನ್ನು
ನಾವು ಮೊದಲೇ ಸಿದ್ಧಪಡಿಸಿಕೊಳ್ಳಬೇಕು. ಹತ್ತು ವರ್ಷದಲ್ಲಿ ನೀರು ಸಮಸ್ಯೆಯಾಗುತ್ತದೆ ಎಂದರೆ ಆಗ
ನೀರನ್ನು ಎಲ್ಲಿಂದ ತರಲಿ ಎಂದು ಯೋಚಿಸುತ್ತೇವೆ. ನೀರಿಲ್ಲದೇ ಬೆಳೆ ಬೆಳೆಯುವುದು ಹೇಗೆಂದು
ಯೋಚಿಸುವುದಿಲ್ಲ.

ಪರಿಸರಕ್ಕೆ ಸಂಬಂಧಿಸಿದಂತೆ ಆಗಬೇಕಾದ್ದು ಇನ್ನೂ ತುಂಬ ಇದೆ. ಈ ನಿಟ್ಟಿನಲ್ಲಿ ಕಾನೂನು ಇನ್ನಷ್ಟು ಬಿಗಿ
ಆಗಬೇಕು. ದೇಶ, ರಾಜ್ಯ, ಜಿಲ್ಲೆ, ತಾಲೂಕು ಸೇರಿದಂತೆ ಪ್ರತಿ ಪಂಚಾಯ್ತಿಯಲ್ಲೂ ವಾತಾವರಣ
ಬದಲಾವಣೆಯ ಕುರಿತು ಒಂದು ತಂತ್ರಗಾರಿಕೆಯ ಯೋಜನೆ ಇರಬೇಕು. ಮುಖ್ಯವಾಗಿ ಮಹಿಳೆಯರೂ ಸೇರಿದಂತೆ ಎಲ್ಲರೂ ಎಲ್ಲಕ್ಕಿಂತ ಮುಖ್ಯವಾಗಿ ಅರಿಯಬೇಕು. ನಮ್ಮ ಯುವಜನತೆ, ನಮ್ಮ ಮಕ್ಕಳು ಆಸ್ಟ್ರೇಲಿಯಾದ ಆ ಹುಡುಗರಂತೆ, ಸ್ವೀಡನ್‍ನ ಆ ಹುಡುಗಿ ಗ್ರೇಟಾಳಂತೆ ವಾತಾವರಣ ಕುರಿತು ಕಾಳಜಿಯಿಂದ, ಪ್ರತಿಭಟಿಸುವಂತಾಗಬೇಕು. ನಮ್ಮ ದೇಶ ಮುಂದಿನ ಕಾಪ್ ಸಮಾವೇಶಕ್ಕೆ ನಮ್ಮ ಯುವಕರನ್ನು, ಮಕ್ಕಳನ್ನು ಕಳಿಸಬೇಕು. ಯಾಕೆಂದರೆ ಇವತ್ತಿನ ನಮ್ಮ ಯಾವುದೇ ನಿರ್ಧಾರದಲ್ಲಿ ಅವರ ಭವಿಷ್ಯ ಅಡಗಿದೆ. ನಾಳಿನ ನಮ್ಮ ಮಕ್ಕಳ ಕಣ್ಣಿನಲ್ಲಿ ನಾವು ಅಪರಾಧಿಗಳಾಗಬಾರದು. ಆ ಎಚ್ಚರ ಇಂದಿನ ಎಲ್ಲ ನೀತಿ ನಿರೂಪಕರಲ್ಲಿ ಇರಬೇಕಾಗಿದೆ. ಗ್ರೇಟಾಳ ಪ್ರತಿಭಟನೆ ಆ ಎಚ್ಚರದ ಸಂಕೇತದಂತೆ ಕಾಣಿಸುತ್ತಿದೆ. (ಲೇಖಕರು ಸೌರ ವಿಜ್ಞಾನಿ, ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕøತರು)

-ಡಾ. ಹರೀಶ್ ಹಂದೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *