ಜಗದಗಲ/ ಅಫ್ಘಾನಿಸ್ತಾನ: ಮತ್ತಷ್ಟು ದುಃಸ್ಥಿತಿಗೆ ಮಹಿಳೆಯರ ಬದುಕು
ಅಫ್ಘಾನಿಸ್ತಾನದಲ್ಲಿ ತನ್ನದೇ ಆದ ಕಾರಣಗಳಿಗೆ ಅಮೆರಿಕ ಹಿಂದೆ ಸರಿದು, ದೇಶವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಮೊದಲೇ ದುರ್ಭರ ಸ್ಥಿತಿಯಲ್ಲಿದ್ದ ಅಲ್ಲಿನ ಮಹಿಳೆಯರ ಬದುಕು ಇನ್ನಷ್ಟು ಅಸಹನೀಯ ಮತ್ತು ಅಮಾನುಷ ಪರಿಸ್ಥಿತಿಗೆ ದೂಡಿದ ದುರಂತಕ್ಕೆ ಈಡಾಗಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಒಂದಿಷ್ಟಾದರೂ ಮನೆಯಿಂದ ಹೊರಗೆ ಬಂದು ಹೊಸಗಾಳಿಗೆ ಒಡ್ಡಿಕೊಳ್ಳುವ ಅವಕಾಶ ಪಡೆದಿದ್ದ ಅಲ್ಲಿನ ಮಹಿಳೆಯರು, ಇನ್ನು ಮನೆಯ ನಾಲ್ಕು ಗೋಡೆಗಳ ನಡುವೆ ಇರಬೇಕಾಗುತ್ತದೆ. ಹೆಣ್ಣುಮಕ್ಕಳಿಗೆ ಸ್ವಲ್ಪವಾದರೂ ಸಿಕ್ಕಿದ್ದ ಅವಕಾಶಗಳನ್ನು ಧರ್ಮದ ಹೆಸರಿನಲ್ಲಿ ಕಸಿದು ಅವರನ್ನು ಮೌಢ್ಯದ ಕತ್ತಲ ಕೋಣೆಗೆ ದೂಡುವ ಲಕ್ಷಣ ನಿಚ್ಚಳವಾಗಿದೆ. ಆ ದೇಶದ ಬಹುಪಾಲು ಮಹಿಳೆಯರು ದೇಶ ಬಿಟ್ಟು ಓಡಿ ಹೋಗಲು ಬಯಸಿದರೂ ಅದು ಸಾಧ್ಯವಾಗುವುದಿಲ್ಲ. ಆದರೆ ಅದ್ಭುತ ಸಂಗತಿ ಎಂದರೆ, ತಾಲಿಬಾನ್ ವಿರುದ್ಧ ದೇಶಾದ್ಯಂತ ಬೆಳೆಯುತ್ತಿರುವ ಪ್ರತಿಭಟನೆಗಳಲ್ಲಿ ಮಹಿಳೆಯರೂ ಪಾಲ್ಗೊಳ್ಳುತ್ತಿದ್ದಾರೆ.
ಜಗತ್ತಿನಲ್ಲಿ ಎಂದೂ ಒಬ್ಬ ಮಹಿಳೆ ಜೀವಿಸಲು ಬಯಸದ ದೇಶ ಯಾವುದಾದರೂ ಇದ್ದರೆ ಅದು ಅಫ್ಘಾನಿಸ್ತಾನ ಎಂದು ಹೇಳಲಾಗುತ್ತದೆ. ಈಗ ಅದು ಇನ್ನಷ್ಟು ನಿಜವೂ ನಿಚ್ಚಳವೂ ಆಗುತ್ತಿದೆ. ಅಮೆರಿಕದ ಸೈನ್ಯ ಒಗೆದು ಹೋದ ದೇಶವನ್ನು ಆವರಿಸಿಕೊಂಡಿರುವ ತಾಲಿಬಾನ್ ಈಗ ಭೀಕರ ಬಾಂಬ್ ದಾಳಿಗಳು, ಗುಂಡಿನ ಮಳೆಗಳ ಮೂಲಕ ಅಲ್ಲಿನ ಜನರನ್ನು ಹೆದರಿಸಿಟ್ಟಿದೆ. ಇತಿಹಾಸದಲ್ಲಿ ಯಾವ ಕಾಲದಲ್ಲಿ ಯಾವ ಯುದ್ಧವಾದರೂ ಮಹಿಳೆಯರು ಮತ್ತು ಮಕ್ಕಳು ಅನುಭವಿಸುವ ಸಂಕಷ್ಟಗಳೇ ಬೇರೆ ಬಗೆ ಎನ್ನುವುದು ಎಲ್ಲ ಕಾಲಕ್ಕೂ ಗೊತ್ತು.
1996 ರಿಂದ 2001 ರ ವರೆಗೆ ತಾಲಿಬಾನ್ ನೆರಳಿನಲ್ಲಿ ನರಳಿದ ಮಹಿಳೆಯರು ಈ ಮುಂದಿನ ಸ್ಥಿತಿಯನ್ನು ನೆನೆದು ಬೆಚ್ಚಿ ಬೀಳುತ್ತಿದ್ದಾರೆ. ನಾವು ಹಿಂದಿನಂತೆ ಇರುವುದಿಲ್ಲ, ಮಹಿಳೆಯರಿಗೆ ತೊಂದರೆಯಿಲ್ಲ, ಆಡಳಿತದಲ್ಲಿ ಅವರೂ ಪಾಲ್ಗೊಳ್ಳಲಿ' ಎಂಬ ತಾಲಿಬಾನ್ ನಾಯಕರ ಮಾತುಗಳಲ್ಲಿ ಎಷ್ಟು ಸತ್ಯವಿದೆ ಎನ್ನುವುದನ್ನು ಜಗತ್ತೇ ನಂಬುತ್ತಿಲ್ಲ.
ಮಹಿಳೆಯರು ಶರಿಅತ್ ಹೇಳಿರುವ ಪ್ರಕಾರ ನಡೆದುಕೊಂಡರೆ ಸಾಕು’ ಎನ್ನವ ಅವರ ಮಾತಂತೂ ಹಲವು ವ್ಯಾಖ್ಯಾನಗಳಿಗೆ ಒಳಗಾಗಿದೆ. `ಗಂಡುಮಕ್ಕಳು ಹೆಣ್ಣುಮಕ್ಕಳು ಒಟ್ಟಿಗೆ ಓದುವಂತಿಲ್ಲ, ಸಹಶಿಕ್ಷಣವೇ ಸಮಾಜದ ಎಲ್ಲ ಕೆಡಕುಗಳಿಗೆ ಮೂಲ’ ಎಂಬ ಮೊದಲ ನಿರ್ಬಂಧವೇ ಇನ್ನು ಮುಂದಿನ ಭೀಕರ ಸ್ಥಿತಿಯನ್ನು ಹೇಳುತ್ತಿದೆ.
ಹಳೆಯ ದುಃಸ್ಥಿತಿಗೆ ವಾಪಸ್
ಕಳೆದ ಎರಡು ದಶಕಗಳಲ್ಲಿ ಅಫ್ಘಾನಿಸ್ತಾನದ ಹುಡುಗಿಯರು, ಯುವತಿಯರು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಓದುವ ಅವರ ಹಕ್ಕಿನ ಅಲ್ಪಸ್ವಲ್ಪ ಅವಕಾಶವನ್ನು ಪಡೆದಿದ್ದರು. ಉದ್ಯೋಗ ಮತ್ತು ವ್ಯಾಪಾರದ ಹಲವು ಅವಕಾಶಗಳು ಅವರಿಗೆ ದೊರೆತಿದ್ದವು. ಬುರ್ಖಾ ಹಾಕದೆ ಮತ್ತು ತಲೆ ಬಟ್ಟೆ ಸುತ್ತದೆ ಎಲ್ಲರಂತೆ ಓಡಾಡುವ ಸ್ವಾತಂತ್ರ್ಯ ಅವರಿಗೆ ಲಭಿಸಿತ್ತು. ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸಬಹುದಿತ್ತು. ಹೊರಗೆ ಹೋಗಬೇಕಾದರೆ ಗಂಡಸು ಜೊತೆಗಿರಲೇ ಬೇಕು ಎಂಬ ನಿಯಮ ಇರಲಿಲ್ಲ. ಮಹಿಳೆಯರು ವಕೀಲರಾಗುವುದು, ಶಿಕ್ಷಕಿಯರಾಗುವುದು, ವ್ಯಾಪಾರಿಗಳು- ಉದ್ಯಮಿಗಳಾಗುವುದು, ಪತ್ರಕರ್ತೆಯರಾಗುವುದು ಸಾಧ್ಯವಿತ್ತು. ಅಷ್ಟೇಕೆ ಅಫ್ಘಾನಿಸ್ತಾನದ ಸಂಸತ್ತಿನಲ್ಲಿ ಶೇ. 27 ರಷ್ಟು ಮಹಿಳೆಯರಿದ್ದು, ಅನೇಕ ಅತ್ಯಾಧುನಿಕ ದೇಶಗಳಿಗಿಂತ ಮುಂದಿತ್ತು. ಲೇಖಕಿಯರು, ಪತ್ರಕರ್ತೆಯರು ತಮ್ಮ ಅಭಿಪ್ರಾಯಗಳನ್ನು ಧೈರ್ಯವಾಗಿ ವ್ಯಕ್ತಪಡಿಸಲು ಅವಕಾಶವಿತ್ತು. ಆದರೆ ಈಗ ಎಲ್ಲವೂ ಹಿಂದಿನ ಶತಮಾನಕ್ಕೆ ಹೋಗಲಿದೆ. ಸ್ವದೇಶದಲ್ಲಿ ಇರಲಾಗದೆ, ದಿಕ್ಕೆಟ್ಟು ಪರದೇಶಗಳಿಗೆ ನಿರಾಶ್ರಿತರಾಗಿ ಹೋಗುವ ಅನುಭವವಂತೂ ಪುರುಷರಿಗಿಂತ ಮಹಿಳೆಯರ ಪಾಲಿಗೆ ಭಯಾನಕವಾಗಲಿದೆ.
ಮೊದಲೇ ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳ ಸಾಕ್ಷರತೆ, ಶಾಲಾ ಶಿಕ್ಷಣ ಅತ್ಯಂತ ಕಡಿಮೆ. ಹದಿನಾರರ ವಯಸ್ಸಿಗೆ ಹೆಣ್ಣುಮಕ್ಕಳಿಗೆ ಮದುವೆ ಆಗುವುದು ತೀರಾ ಸಾಮಾನ್ಯ. ಅದರಲ್ಲಿ ಮುಕ್ಕಾಲು ಪಾಲು ಬಲವಂತದ ಮದುವೆಗಳೇ ಆಗಿರುತ್ತವೆ. ಮಹಿಳೆಯರ ಆತ್ಮಹತ್ಯೆ ಪ್ರಮಾಣವಂತೂ ಅತ್ಯಂತ ಹೆಚ್ಚು. ಕೌಟುಂಬಿಕ ದೌರ್ಜನ್ಯದಲ್ಲಿ ಅವರು ನರಳುವುದು ವಿಪರೀತ. ಆ ದೇಶದ ಸ್ತ್ರೀ ವಿರೋಧಿ ಮನೋಭಾವವೇ ಹೇಗಿದೆ ಎಂದರೆ, 2018 ರಲ್ಲಿ ನೂತನ ಕ್ರಿಮಿನಲ್ ಕೋಡ್ ತರಲಾಯಿತು. ಅದನ್ನು ಕಾಯಿದೆಯಾಗಿ ತರುವ ಮುನ್ನ, `ಮಹಿಳೆಯರ ಮೇಲಿನ ದೌರ್ಜನ್ಯ ಶಿಕ್ಷಾರ್ಹ ಅಪರಾಧ’ ಎಂಬ ಅಧ್ಯಾಯವನ್ನೇ ಕೈಬಿಡಲಾಯಿತು! ಅಮೆರಿಕದ ಇಪ್ಪತ್ತು ವರ್ಷದ ಉಸ್ತುವಾರಿ ಸೇರಿ, ಕಳೆದ ನಲವತ್ತು ವರ್ಷಗಳಲ್ಲಿ ಅಫ್ಘಾನಿಸ್ತಾನದ ಮಹಿಳೆಯರು ಅನುಭವಿಸಿರುವ ನರಕವನ್ನು ಬಣ್ಣಿಸಲು ಸಾಧ್ಯವಿಲ್ಲ. ಅಮೆರಿಕದ, ವಿಶ್ವಸಂಸ್ಥೆಯ, ಬೇರಾವುದೇ ದೇಶದ ಸಹಾಯ, ಯೋಜನೆ ಯಾವುದೂ ಮಹಿಳೆಯರ ಬದುಕನ್ನು ಬದಲಾಯಿಸಿಲ್ಲ.
ಕಳೆದ ಇಪ್ಪತ್ತು ವರ್ಷಗಳಲ್ಲಿ ಒಂದಷ್ಟು ಸುಧಾರಣೆಗಳು ಆಗಿದ್ದರೂ ಆಂತರಿಕವಾಗಿ ಅಫ್ಘನ್ ಸಮಾಜ ಧರ್ಮದ ಹೆಸರಿನಲ್ಲಿ ಸ್ತ್ರೀಸ್ವಾತಂತ್ರ್ಯದ ವಿರೋಧಿಯಾಗಿಯೇ ಇತ್ತು. ಈಗ ಅಮೆರಿಕ ಜನರಿಗೆ ಸರಿಯಾದ ಸೂಚನೆ ನೀಡದೆ, ಸಿದ್ಧತೆ ಇಲ್ಲದೆ ಸೈನ್ಯವನ್ನು ವಾಪಸ್ ಕರೆದುಕೊಂಡು ದೇಶ ತ್ಯಜಿಸಿದೆ. ಅಫ್ಘಾನಿಸ್ತಾನದಲ್ಲಿ ಅಲ್ಲಿನ ಜನರ ಗುಂಪುಗಳ ನಡುವೆಯೇ ಅಂತರ್ ಯುದ್ಧ ಆರಂಭವಾಗಿದೆ. ಆ ದೇಶ ನಾಲ್ಕು ನೂರಕ್ಕೂ ಹೆಚ್ಚು ಬುಡಕಟ್ಟುಗಳು, ಪಂಗಡಗಳು ಕಿಕ್ಕಿರಿದಿರುವ ನಾಡು. ಆದರೆ ಎಲ್ಲದರಲ್ಲಿ ಮಹಿಳೆಯರ ಪಾಡು ಮಾತ್ರ ಒಂದೇ. ಆಧುನಿಕತೆ ಎಂದರೆ ಅಧೋಗತಿ ಮತ್ತು ಧರ್ಮವಿರೋಧಿ ಎಂಬುದೇ ತಾಲಿಬಾನ್ ನಂಬಿರುವ ಮೂಲತತ್ವ ಮಹಿಳೆಯರ ವಿಚಾರಕ್ಕಂತೂ ತುಂಬ ಕೆಟ್ಟದಾಗಿ, ದಟ್ಟವಾಗಿ ಅನ್ವಯವಾಗುತ್ತದೆ. ಸಾಮಾಜಿಕ ನಿರ್ಬಂಧಗಳಿಗೆ ಧಾರ್ಮಿಕ ನೆಲೆಯೇ ಮುಖ್ಯವಾಗುತ್ತದೆ. ಜಗತ್ತಿನಾದ್ಯಂತ ಬೆಳೆಯುತ್ತಿರುವ ಜಿಹಾದ್ ಸಿದ್ಧಾಂತ, ಭಯೋತ್ಪಾದನೆ, ಇಸ್ಲಾಮೀಕರಣ, ಹಿಂದೂವಾದ, ಕೋಮುವಾದ, ರಾಷ್ಟ್ರೀಯವಾದ, ಮೂಲಭೂತವಾದ ಮೊದಲಾದ ಎಲ್ಲದರ ಪರಿಣಾಮವೂ ಮಹಿಳೆಯರ ಮೇಲೆ ಅತ್ಯಂತ ವಿಶಿಷ್ಟವಾಗಿ, ಭಯಂಕರವಾಗಿ ಇದ್ದೇ ಇರುತ್ತದೆ. ನೈಜೀರಿಯ, ಸೊಮಾಲಿಯ, ಸಿರಿಯಾ, ಮೊಜಾಂಬಿಕ್, ಇಂಡೋನೇಶಿಯ, ಉಜ್ಬೆಕಿಸ್ತಾನ, ತಜಿಕಿಸ್ತಾನ, ಲಿಬಿಯಾ, ಪಾಕಿಸ್ತಾನ, ಬಾಂಗ್ಲಾದೇಶ, ಭಾರತ, ಚೀನಾ ಹೀಗೆ ಹಲವು ದೇಶಗಳಲ್ಲಿ ಹರಡಿಕೊಳ್ಳುತ್ತಿರುವ ಕೋಮುವಾದಿ, ಮೂಲಭೂತವಾದಿ ಭಯೋತ್ಪಾದನೆಯಲ್ಲಿ ಮಹಿಳೆಯರು, ಮಕ್ಕಳ ಮೇಲೆ ಎರಗುವ ಕಷ್ಟನಷ್ಟಗಳು ಹೇಳತೀರದು.

ಇವೆಲ್ಲದರ ನಡುವೆ ಗಮನಾರ್ಹವಾದ ಬೆಳವಣಿಗೆ ಎಂದರೆ ಆಫ್ಘಾನಿಸ್ತಾನದ ಅನೇಕ ಪ್ರಾಂತಗಳಲ್ಲಿ ತಾಲಿಬಾನ್ ಆಡಳಿತ ಬೇಡ ಎನ್ನುವ ಪ್ರತಿಭಟನೆಗಳು ಹೆಚ್ಚುತ್ತಿರುವುದು. ಅವುಗಳಲ್ಲಿ ಮಹಿಳೆಯರು ಕಾಣಿಸಿಕೊಂಡು ತಮ್ಮ ಉಗ್ರ ವಿರೋಧವನ್ನು ಪ್ರದರ್ಶಿಸುವ ಧೈರ್ಯ ಮಾಡುತ್ತಿರುವುದು ಒಂದು ಮಹತ್ವದ ಸಂಗತಿ. ಎಷ್ಟೊಂದು ನಗರಗಳಲ್ಲಿ ಮಹಿಳೆಯರು ಫಲಕ ಹಿಡಿದು, ಘೋಷಣೆ ಕೂಗುತ್ತ, ಮೆರವಣಿಗೆಯಲ್ಲಿ ಸಾಗುತ್ತ ತಾಲಿಬಾನ್ ಸರ್ಕಾರ ಬರುವುದನ್ನು ವಿರೋಧಿಸುತ್ತಿದ್ದಾರೆ. ತಾಲಿಬಾನಿಗಳ ಧಾರ್ಮಿಕ ಸಿದ್ಧಾಂತ ಸಮಾಜಕ್ಕೆ ಒಳ್ಳೆಯದಲ್ಲ ಎಂದು ಕೂಗಿ ಹೇಳುತ್ತಿದ್ದಾರೆ. ಈಗ ತಾಲಿಬಾನ್ ಮೇಲುಗೈ ಪಡೆದಿರುವುದು ಜಗತ್ತಿನ ಹಲವು ಕಡೆಗಳಲ್ಲಿ ಮೂಲಭೂತವಾದಕ್ಕೆ ಶಕ್ತಿ ತುಂಬಬಹುದು, ಅದರಿಂದ ಮಹಿಳೆಯರ ಜೀವನ ಶೋಚನೀಯವಾಗಬಹುದು ಎನ್ನುವ ಭಯ, ಆತಂಕ ಹೆಚ್ಚುತ್ತಿದೆ. ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆಯ ಹಿಂದೆ ಆರ್ಥಿಕ ಪ್ರಾಬಲ್ಯ, ನೈಸರ್ಗಿಕ ಸಂಪನ್ಮೂಲಗಳ ಮೇಲೆ ಸರ್ವಾಧಿಕಾರ ಈ ದುರಾಶಯಗಳು ಇದ್ದೇ ಇರುತ್ತವೆ. ಇವುಗಳು ಮಹಿಳೆಯರ ಬದುಕಿನ ಮೇಲೆ ಬೀರುವ ಪ್ರತ್ಯಕ್ಷ, ಪರೋಕ್ಷ ದುಷ್ಪರಿಣಾಮಗಳಂತೂ ಊಹಾತೀತ. (ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹ)
–ಹಿತೈಷಿಣಿ ಬಳಗ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.