ಜಗದಗಲ/ ಅಫ್ಘಾನಿಸ್ತಾನದ ಹೆಣ್ಣಿನ ದುರ್ಭರ ಬದುಕು- ಡಾ.ಕೆ. ಷರೀಫಾ
ಯಾವ ದೇಶದಲ್ಲಿ ರಾಜಕೀಯ, ಸಾಮಾಜಿಕ, ಧಾರ್ಮಿಕ ತಲ್ಲಣಗಳು ಮೇಲೆದ್ದರೂ ಅವುಗಳ ದುರ್ಭರ ಪರಿಣಾಮ ಹೆಚ್ಚಾಗಿ ಎರಗುವುದು ಅಲ್ಲಿನ ಮಹಿಳೆಯರ ಮೇಲೆ ಎನ್ನುವುದು ನಿಸ್ಸಂಶಯ. ಅಫ್ಘಾನಿಸ್ತಾನದಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಸುಧಾರಿಸುತ್ತಿದ್ದ ಮಹಿಳೆಯರ ಸ್ಥಿತಿ, ಈಗಿನ ಬೆಳವಣಿಗೆಗಳಿಂದ ಮೊದಲಿನ ದುಃಸ್ಥಿತಿಗೆ ಮರಳುತ್ತಿದೆ. ಅಲ್ಲಿನ ಸಂವಿಧಾನದ ಹಾಗೆಯೇ ಮಹಿಳೆಯರ ಹಕ್ಕುಗಳೂ ದಮನಕ್ಕೆ ಪಕ್ಕಾಗಿವೆ. ಬೇರೆಲ್ಲ ದೇಶಗಳಂತೆ ಅಫ್ಘಾನಿಸ್ತಾನದ ಶಾಂತಿ ಮತ್ತು ಪ್ರಗತಿಗೂ ಮಹಿಳೆಯರ ಬದುಕಿನ ಸಮಾಧಾನವೇ ಮಾನದಂಡವಾಗಬೇಕು. ಆದರೆ ಅದು ಮಾಯವಾಗುವ ಸೂಚನೆಗಳು ನಿಚ್ಚಳವಾಗಿವೆ.
ಅಫ್ಘಾನಿಸ್ತಾನದಲ್ಲಿ ನಡೆದಿರುವ ದಂಗೆಗಳಿಂದಾಗಿ ಅಲ್ಲಿಯ ಮಹಿಳೆಯರು ಭಯಭೀತರಾಗಿದ್ದಾರೆ. ಜಗತ್ತಿನಲ್ಲಿ ಅದೊಂದು ಸುಂದರವಾದ ದೇಶ. ಅಲ್ಲಿಯೂ ಹಲವಾರು ಧರ್ಮಗಳು, ಸಂಸ್ಕøತಿಗಳು, ಬುಡಕಟ್ಟು ಜನಾಂಗಗಳು, ಆದಿವಾಸಿಗಳು, ಇದ್ದಾರೆ. ಹಲವಾರು ಭಾಷೆಗಳಿರುವ ಬಹುಸಂಸ್ಕøತಿಯ ದೇಶವಾಗಿದೆ. ಭಾರತದಂತೆಯೇ ಅದೂ ಕೂಡ ಹಲವಾರು ಸಾಮ್ರಾಜ್ಯಗಳ ದಾಳಿಗೊಳಗಾದಂತಹ ದೇಶ. ನಮ್ಮಂತೆಯೇ ಅವರೂ ಕೂಡ ಅವರ ವಿರುದ್ಧ ಹೋರಾಡಿ ಅಮೂಲ್ಯವಾದ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದಾರೆ. ಇಪ್ಪತ್ತನೆಯ ಶತಮಾನದಿಂದಲೂ ಅಲ್ಲಿ ಮೊದಲು ಬ್ರಿಟಿಷರ ವಸಾಹತುವಾದ, ರಷ್ಯಾದ ವಿಸ್ತರಣವಾದ, ನಂತರ ಅಮೆರಿಕದ ಸಾಮ್ರಾಜ್ಯಶಾಹಿ ಮತ್ತು ಚೀನಾ ದೇಶ ಸೇರಿಕೊಂಡು ಅಫ್ಘಾನಿಸ್ತಾನವನ್ನು ತಮ್ಮ ಸ್ವಾರ್ಥಕ್ಕೆ ಮತ್ತು ತಮ್ಮ ಸಾಮ್ರಾಜ್ಯದ ವಿಸ್ತರಣೆಗಾಗಿ ಸ್ಥಳೀಯರನ್ನು ಮೂಲೆಗುಂಪು ಮಾಡಿವೆ. ನೈಸರ್ಗಿಕ ಸಂಪತ್ತಿನಿಂದ ಕೂಡಿದ ಈ ದೇಶವನ್ನು ದೋಚಿಕೊಂಡು ಬಡ ದೇಶಗಳ ಸಾಲಿನಲ್ಲಿ ನಿಲ್ಲಿಸಿವೆ.
ಅಮೆರಿಕವು ಅಫ್ಘಾನಿಸ್ತಾನದ ಮೇಲೆ ತನ್ನ ನಿಯಂತ್ರಣ ಹೊಂದಲು ಅವರಿಗೆ ಶಸ್ತ್ರಾಸû್ರಗಳಿಗಾಗಿ, ವಿಮಾನಗಳಿಗಾಗಿ ಸುಮಾರು 470 ಲಕ್ಷ ಕೋಟಿಗಳಷ್ಟು ಹಣವನ್ನು ವೆಚ್ಚ ಮಾಡಿದೆ. ಆದರೆ 2008ರಲ್ಲಿ ಅಫ್ಘಾನಿಸ್ತಾನದ ಶೇ 60 ರಷ್ಟು ಜನರು ಬಡತನದ ರೇಖೆಗಿಂತ ಕೆಳಗಿದ್ದಾರೆ. 2018ರಲ್ಲಿ ಅವರು ಶೇ 90 ಆಗಿದ್ದಾರೆ. ಆ ದೇಶದ ಅರ್ಧ ಭಾಗದಷ್ಟು ಊರುಗಳಲ್ಲಿ ಕುಡಿಯುವ ನೀರಿಲ್ಲ. ಆದರೂ ಇದು ಜಗತ್ತಿನ ಅತಿ ದೊಡ್ಡ ಅಫೀಮು ಉತ್ಪಾದಕ ದೇಶವಾಗಿದೆ. ದೇಶದ ಮುಕ್ಕಾಲು ಭಾಗಕ್ಕೆ ವಿದ್ಯುತ್ತಿಲ್ಲ. ಅಲ್ಲಿಯ ಶೇ 90ರಷ್ಟು ಜನ ಕೃಷಿಯನ್ನೆ ನಂಬಿ ಬದುಕುತ್ತಿದ್ದಾರೆ. ಹೀಗಿರುವಾಗ ಅಮೆರಿಕ ಖರ್ಚು ಮಾಡಿದ 470 ಲಕ್ಷ ಕೋಟಿ ಹಣ ಎಲ್ಲಿ ಹೋಯಿತು? ಅಮೆರಿಕದ ಸೆನೆಟ್ ಗೆ ನೀಡಿರುವ ವರದಿಯಲ್ಲಿ ತಿಳಿಸಿರುವಂತೆ, 43000 ಸೈನಿಕರು ಅಲ್ಲಿ ಇರಲಿಲ್ಲ. ಆದರೂ ಅವರಿಗೆ ಸಂಬಳ ಪಾವತಿಯಾಗುತ್ತಿತ್ತು. ಆಗಸ್ಟ್ 15, 2021ರಂದು ಕಾಬೂಲ್ ಕೈವಶವಾಗುವುದರೊಂದಿಗೆ ಉತ್ತರದ ಪಂಜ್ ಶೀರ್ ಪ್ರಾಂತ್ಯವೊಂದನ್ನು ಬಿಟ್ಟು ಮಿಕ್ಕೆಲ್ಲಾ ಭಾಗಗಳು ತಾಲಿಬಾನಿಗಳ ವಶವಾಗಿವೆ.
ಅಲ್ಲಿ ಹಿಂದಿನ ಸರ್ಕಾರವಿದ್ದಾಗ ಮಹಿಳೆಯರ ಪಾಲಿಗೆ ಅವಕಾಶಗಳಿದ್ದವು. ಆಗ ಅಲ್ಲಿಯ ಹೆಣ್ಣುಮಕ್ಕಳು ಶಾಲೆ, ಕಾಲೇಜು, ಉದ್ಯೋಗ ಮತ್ತು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದುವರೆದಿದ್ದರು. ಯಾವ ದೇಶದಲ್ಲಿ ಧರ್ಮದ ಹುಚ್ಚು ಅತಿರೇಕ ಮುಟ್ಟುತ್ತದೋ ಆ ದೇಶದಲ್ಲಿ ಉದ್ಯೋಗದ ಸಾಧ್ಯತೆಗಳು ಕಡಿಮೆಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ. ಇಂತಹದೇ ಧರ್ಮದ ಅತಿರೇಕದ ಕಾನೂನುಗಳಿಂದ ಭಾರತದ ಒಂದು ಪ್ರದೇಶದಲ್ಲಿ ಹಿಂದೊಮ್ಮೆ ಹೆಣ್ಣುಮಕ್ಕಳು ಮೊಲೆ ಕಾಣದಂತೆ ಮೇಲುಡುಪು ಧರಿಸುವುದಕ್ಕೂ `ಮೊಲೆತೆರಿಗೆ’ ಕಟ್ಟಬೇಕಾಗಿತ್ತು. ದೇವರ ಸೇವೆಗಾಗಿ ಎಂದು ಹೇಳುತ್ತಲೇ ಮುಗ್ಧ ಬಡ, ಕೆಳಜಾತಿಯ ಹೆಣ್ಣುಮಕ್ಕಳನ್ನು ದೇವದಾಸಿಯರಾಗಿ ಮಾಡಿ ಅವರನ್ನು ಊರ ಗಂಡಸರು ಉಪಯೋಗಿಸುತ್ತಿದ್ದುದು ಮುಚ್ಚುಮರೆಯೇನಿಲ್ಲ.
ಯಾವುದೇ ಧರ್ಮ ತನ್ನ ನಿಜವಾದ ಧರ್ಮವನ್ನು ಬಿಟ್ಟು ಇಂತಹ ಅತಿರೇಕಗಳ ದಾಸನಾದಾಗ, ರಾಕ್ಷಸತನ ಮನೆ ಮಾಡುತ್ತದೆ. ಅದು ಹಿಂದು, ಮುಸ್ಲಿಂ, ಸಿಖ್ಖ ಅಥವಾ ಕ್ರೈಸ್ತ ಯಾವುದೇ ಆಗಿರಲಿ ಅದು ಮೊದಲು ಕನಿಷ್ಠ ಮಾನವೀಯತೆಯನ್ನೂ ನಿರಾಕರಿಸುತ್ತದೆ. ತಮ್ಮ ತಮ್ಮ ಧರ್ಮಗಳೇ ಶ್ರೇಷ್ಠವೆಂಬ ವಾದವನ್ನು ಮಂಡಿಸುತ್ತವೆ. ತಮ್ಮ ಧರ್ಮವನ್ನು ರಕ್ಷಿಸುವುದೇ ತಮ್ಮ ಸರ್ವಶ್ರೇಷ್ಠ ಧರ್ಮವೆಂದು ಸಾರುತ್ತದೆ. ಅಫ್ಘಾನಿಸ್ತಾನವನ್ನು ಇಸ್ಲಾಂ ತೀವ್ರವಾದಿಗಳು ನರಕವಾಗಿಸಿದಂತೆ ಭಾರತದಲ್ಲೂ ಹಿಂದೂ ಕೋಮುವಾದ ಬಲಗೊಳ್ಳುತ್ತಿದೆ.
ಅಫ್ಘಾನಿಸ್ತಾನದ ಮಹಿಳೆಯರು ಹಿಂದಿನಂತೆ ಈಗ ಕೋಮುವಾದಿ ಪುರುಷರ ಗುಲಾಮರಾಗಿ ಬದುಕಲು ಸಿದ್ಧರಿಲ್ಲ. ಆ ತಾಯಂದಿರು ಪಂಜ್‍ಶೇರ್ ವಲಯವನ್ನು ಬಿಟ್ಟುಕೊಡದೆ ಹೆಣ್ಣುಮಕ್ಕಳು ತಾಲಿಬಾನಿಗಳಿಗೆ ದಾಸಿಯರಾಗಿ ಬದುಕಲು ನಿರಾಕರಿಸಿದರು. ಅವರು ತಮ್ಮ ಜನರ ಜನಪದ ಗೀತೆಗಳ ಮೂಲಕವೇ ಇತರೇ ಅಫ್ಘನ್ನರನ್ನು ತಮ್ಮ ಜೊತೆಯಲ್ಲಿ ಜೊತೆಯಾಗಿ ನಿಲ್ಲಲು ಕರೆ ನೀಡಿದರು. ಈ ಹೆಣ್ಣುಮಕ್ಕಳು ತಾವು ತಾಲಿಬಾನಿಗಳ ವಿರುದ್ಧ ಹೋರಾಡುವುದಾಗಿ ಅಮೆರಿಕದವರಿಗೆ ಹೇಳಿದ್ದಾರೆ. ಅಫ್ಘಾನಿಸ್ತಾನದ ಸಾವಿರಾರು ಮಹಿಳೆಯರು ಇಂದು ತಾಲಿಬಾನಿಗಳ ವಿರುದ್ಧ ಪ್ರತಿಭಟನೆ ಮಾಡಿ ಬೀದಿಗಿಳಿದಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಬುಡಕಟ್ಟುಗಳಿವೆ. ಹಲವಾರು ಪಂಗಡಗಳಾಗಿ ಅದು ಹರಿದು ಹಂಚಿ ಹೋಗಿದೆ. ಮುಸ್ಲಿಮ್ ಎಂದರೆ ಒಂದೇ ಅಲ್ಲ. ಅದರಲ್ಲಿ ಹಲವಾರು ಪಂಗಡಗಳೂ ಉಪಪಂಗಡಗಳೂ ಇವೆ. ಆದರೆ ಇಲ್ಲಿ ಎಲ್ಲ ಮಹಿಳೆಯರ ಪಾಡೂ ಒಂದೇ ಆಗಿದೆ. ಇಲ್ಲಿಯವರೆಗೆ ತಾಲಿಬಾನಿಗಳು ಆಧುನಿಕತೆ, ಫ್ಯಾಷನ್, ಸಿನಿಮಾ, ಮನರಂಜನೆಗಳು ಧರ್ಮವಿರೋಧಿ ಮತ್ತು ಇಸ್ಲಾಂ ವಿರೋಧಿ ಎಂದೇ ನಂಬಿರುತ್ತಾರೆ. ಧಾರ್ಮಿಕ ನೆಲೆಯಲ್ಲಿಯೇ ಮಹಿಳೆಯರನ್ನು ಎಲ್ಲ ಧರ್ಮಗಳೂ ನಿಯಂತ್ರಿಸುತ್ತ ಬಂದಿವೆ. ಕೋಮುವಾದ, ಭಯೋತ್ಪಾದನೆ, ಮೂಲಭೂತವಾದ, ಹಿಂದೂವಾದ, ಇಸ್ಲಾಮೀಕರಣ ಈ ಎಲ್ಲದರ ಪರಿಣಾಮವೂ ಮಹಿಳೆಯರ ಮೇಲೆಯೇ ಆಗುತ್ತಿರುವುದು ಶತಸ್ಸಿದ್ಧ. ಮೂರನೇ ಜಗತ್ತಿನ ರಾಷ್ಟ್ರಗಳಾದ ನೈಜೀರಿಯಾ, ಪಾಕಿಸ್ತಾನ, ಸಿರಿಯಾ, ಇಂಡೋನೇಶಿಯಾ, ಪ್ಯಾಲೆಸ್ತೀನ್, ಸಿರಿಯಾ, ಮೊಜಾಂಬಿಕ್, ಉಜ್ಬೆಕಿಸ್ತಾನ, ತಜಕಿಸ್ತಾನ, ಲಿಬಿಯಾ, ಭಾರತ, ಚೀನಾ, ಬಾಂಗ್ಲಾದೇಶಗಳಲ್ಲಿ ಹರಡುತ್ತಿರುವ ಮೂಲಭೂತವಾದ ಮತ್ತು ಕೋಮುವಾದಗಳಿಗೆ ನಲುಗುತ್ತಿರುವವರು ಮಹಿಳೆಯರು ಮತ್ತು ಮಕ್ಕಳೇ ಆಗಿದ್ದಾರೆ
1996 ರಿಂದ 2001ರವರೆಗೆ ತಾಲಿಬಾನಿಗಳ ಅತಿರೇಕಗಳಿಂದ ನೊಂದಿರುವ ಮಹಿಳೆಯರು ಇಂದು ಮತ್ತೇ ತಾಲಿಬಾನ್ ಅಧಿಕಾರಕ್ಕೆ ಬಂದಿರುವುದರಿಂದ ಬೆಚ್ಚಿ ಬೀಳುತ್ತಿದ್ದಾರೆ. ಅವರ ಭಯ ದೂರವಾಗಿಸಲು ತಾಲಿಬಾನಿಗಳೂ “ನಾವು ಹಿಂದಿನಂತೆ ಇರುವುದಿಲ್ಲ. ಮಹಿಳೆಯರಿಗೆ ಯಾವುದೆ ರೀತಿಯ ತೊಂದರೆಯಾಗುವುದಿಲ್ಲ. ಅವರೂ ಅಡಳಿತದಲ್ಲಿ ಪಾಲ್ಗೊಳ್ಳಲಿ” ಎಂದು ಹೇಳುತ್ತಿರುವ ಮಾತಿನಲ್ಲಿ ಎಷ್ಟರ ಮಟ್ಟಿನ ಸತ್ಯವಿದೆ ಎಂದು ಕಾಲವೇ ನಿರ್ಧರಿಸಬೇಕಿದೆ. “ಗಂಡುಮಕ್ಕಳು ಹೆಣ್ಣುಮಕ್ಕಳು ಒಟ್ಟಿಗೆ ಓದುವಂತಿಲ್ಲ. ಸಹಶಿಕ್ಷಣವೇ ಸಮಾಜದ ಎಲ್ಲ ಕೆಡಕುಗಳಿಗೆ ಮೂಲ” ಎಂಬುದು ಅವರ ನಿಲುವಾಗಿದೆ.

“ಅಫ್ಘನ್ ಮಹಿಳೆಯರು 1920ರಲ್ಲಿಯೇ ಮತದಾನದ ಹಕ್ಕು ಪಡೆದಿರುವರು. ಅಮೆರಿಕದಲ್ಲೂ ಹೆಚ್ಚು ಕಡಿಮೆ ಇದೇ ಸಮಯದಲ್ಲಿ ಮತದಾನದ ಹಕ್ಕನ್ನು ಮಹಿಳೆಯರಿಗೆ ನೀಡಲಾಯಿತು. 1990ರ ಸಮಯದಲ್ಲಿಯೇ ವಿಶ್ವವಿದ್ಯಾಲಯದಲ್ಲಿ ಪದವೀಧರರಾದವರಲ್ಲಿ ಶೇ 50ರಷ್ಟು ಮತ್ತು ಕಾಬೂಲಿನಲ್ಲಿನ ವೈದ್ಯರಲ್ಲಿ ಶೇ 40 ರಷ್ಟು ಮಂದಿ ಮಹಿಳೆಯರೇ ಇದ್ದರೆಂಬುದು ತಿಳಿದಿದೆಯೇ? 1977ರಲ್ಲಿ ಶಾಸನಸಭೆಯಲ್ಲಿನ ಶೇ 15ರಷ್ಟು ಮಂದಿ ಮಹಿಳೆಯರೇ ಇದ್ದರೆಂಬ ವಿಷಯ ತಿಳಿದಿದೆಯೇ?” ಎಂದು ಕೇಳುತ್ತಾರೆ ಪತ್ರಕರ್ತರಾದ ರಾಜದೀಪ್ ಸರ್ದೇಸಾಯಿ.
ಬೇಯುವ ಮಹಿಳೆಯರು
ಯಾವುದೇ ಧರ್ಮವಿರಲಿ ಅಥವಾ ಯಾವುದೇ ದೇಶವಿರಲಿ ಅಲ್ಲಿ ಧರ್ಮದ ಆಧಾರದಲ್ಲಿ ಅಡಳಿತವಿದ್ದರೆ, ಆ ದೇಶವು ತನ್ನ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ತನ್ನ ದೇಶದವರ ಪಾಲಿಗೆ ನರಕವಾಗುತ್ತದೆ. ಅಲ್ಲಿ ಮಹಿಳೆ ಮತ್ತು ಮಕ್ಕಳ, ಮತ್ತು ಹಿಂದುಳಿದ ಬಡವರು ಅಲ್ಪಸಂಖ್ಯಾತರ ಬದುಕಿನ ಮೂಲಗಳನ್ನು ಕಸಿದುಕೊಳ್ಳುತ್ತದೆ. ಅದು ಯಾವುದೇ ದೇಶದ ಅಲ್ಪಸಂಖ್ಯಾತರ ಮೇಲೆ ತನ್ನ ಪುರೋಹಿತಶಾಹಿ ದರ್ಪ ತೋರಿಸಬಹುದು. ಯಾವುದೇ ಧರ್ಮವಿರಲಿ ಅದು ಮನುಷ್ಯ ವಿರೋಧಿಯಲ್ಲ. ಅದು ಧರ್ಮವನ್ನು ಅರ್ಥೈಸುವ ವ್ಯಕ್ತಿಗಳನ್ನು ಅವಲಂಬಿಸಿರುತ್ತದೆ. ಕ್ರೌರ್ಯವೂ ಮನೆ ಮಾತಾಗಿ, ಶಾಂತಿಯ ಮತ್ತು ರಾಷ್ಟ್ರದ ಅಭಿವೃದ್ಧಿಗಳು ಕನಸಿನ ಮಾತಾಗುತ್ತವೆ. ಆಗ ಆ ದೇಶ ನರಕಕ್ಕೆ ಸಮನಾಗುತ್ತದೆ. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಬೆಂದು ಹೋಗುತ್ತಾರೆ. ಎಲ್ಲಾ ಕಾನೂನುಗಳು ಮಹಿಳೆಯರಿಗಾಗಿ ಅವರನ್ನು ನಿರ್ಬಂಧಿಸಲು ರಚನೆಯಾಗುತ್ತವೆ. ಅವು ಮಹಿಳೆಯರ ಮೇಲೆ ಹೇರಲ್ಪಡುತ್ತವೆ. ಅದು ಹಿಂದೂ ಧರ್ಮವೇ ಆಗಲಿ, ಅದು ಮುಸ್ಲಿಂ ಧರ್ಮವೇ ಆಗಲಿ. ಮಹಿಳೆಯರ ಉಡುಗೆ ತೊಡುಗೆ, ಆಟಪಾಠ, ಹೊರಗೆ ಹೋಗುವುದು, ಉದ್ಯೋಗ, ಮನೆ, ಮದುವೆ, ಮನೋರಂಜನೆ ಹೀಗೆ ಅವಳ ಚಲನವಲನಗಳನ್ನೂ ನಿರ್ಬಂದಿಸಲಾಗುತ್ತದೆ. ಅಂತಹ ಎಲ್ಲ ದೇಶಗಳೂ ತಮ್ಮ ಮಹಿಳೆಯರನ್ನು ಹೆರಿಗೆಯ ಯಂತ್ರದಂತೆ ಬಳಸಲು ಆರಂಭಿಸುತ್ತಾರೆ.
ಅಫ್ಘಾನಿಸ್ತಾನದಲ್ಲಿರುವ ಪ್ರಮುಖ ಕುಟುಂಬಗಳ ಪಟ್ಟಿಯನ್ನು ಮಾಡಿ ನೋಡಿದರೆ ಆ ಶ್ರೀಮಂತರ ಬೇರುಗಳು ಅಮೆರಿಕದಲ್ಲಿಯೋ ಇಂಗ್ಲೆಂಡಿನಲ್ಲಿಯೋ ಇರುವುದನ್ನು ಕಾಣುತ್ತೇವೆ. ಇಲ್ಲಿಯ ಸಿರಿವಂತ ಸಂಬಂಧಿಕರ ಸಂಪತ್ತು ಅಲ್ಲಿಗೆ ರವಾನೆಯಾಗಿ ಅವರು ಹೆಚ್ಚು ಲೋಲುಪ, ಐಷಾರಾಮದ ಬದುಕು ನಡೆಸುತ್ತಿರುವುದನ್ನು ಕಾಣುತ್ತೇವೆ. ಅಫ್ಘಾನಿಸ್ತಾನದ ಸಂಪತ್ತು ಲೂಟಿ ಹೊಡೆದು ಅಲ್ಲಿ ವ್ಯಯಿಸಲಾಗುತ್ತಿದೆ. ತನ್ನ ದೇಶದ ರಾಜಕೀಯ ಮತ್ತು ಆಳುವ ವರ್ಗದವರ ಹಿತಾಸಕ್ತಿಗಳಿಗಾಗಿ ಅವರು ತಮ್ಮದೇ ದೇಶವನ್ನು ಬಲಿಕೊಡುತ್ತಿದ್ದಾರೆ. ಇದಕ್ಕೆ ಬಲಿಯಾಗುವವರು ಅಲ್ಲಿಯ ಅಮಾಯಕ ಬಡಜನರಾಗಿದ್ದಾರೆ. ಈ ದೇಶದ ಕಾರ್ಪೋರೇಟ್ ವರ್ಗ ಜಾಗತಿಕ ಮಟ್ಟದ ದೊಡ್ಡ ಶಕ್ತಿಗಳ ಪರವಾಗಿ ನಿಂತು ತನ್ನದೇ ದೇಶದ ಜನರನ್ನು ಬಲಿಕೊಡುತ್ತಿದೆ. ನಾಯಕರ ದೂರದೃಷ್ಟಿಯಿಲ್ಲದ, ಸ್ವಾರ್ಥಪರ ತೀರ್ಮಾನಗಳಿಂದಾಗಿ ಈಗ ಅಲ್ಲಿಯ ಬಡ ಜನರು ಬೆಲೆ ಕೊಡಬೇಕಾಗಿರುವ ದುರಂತ ನಮ್ಮ ಕಣ್ಣೆದುರಿಗಿದೆ. ಆ ದೇಶದ ಮಹಿಳೆಯರಲ್ಲಿ ಶೇ. 76 ಮಂದಿ ಗ್ರಾಮೀಣ ಪ್ರದೇಶದಲ್ಲೇ ಇದ್ದಾರೆಂಬ ಅಂದಾಜಿದೆ.
ಧರ್ಮದ ಹೆಸರಿನಲ್ಲಿ ಕ್ರೌರ್ಯ ಹಿಂಸೆಯನ್ನೇ ಉಸಿರಾಡುವವರು ಅವರು ಭಾರತದಲ್ಲಿರಲಿ, ಅಫ್ಘಾನಿಸ್ತಾನದಲ್ಲಿಯೇ ಇರಲಿ ಅವರು ಅಂತಿಮವಾಗಿ ಸೈತಾನರೇ ಆಗಿರುತ್ತಾರೆ. ಧರ್ಮನಿಷ್ಠೆಗಾಗಿ ಹಿಂಸೆ ಕ್ರೌರ್ಯವನ್ನು ಯಾರೇ ಬೆಂಬಲಿಸಲಿ ಅವರು ಸೈತಾನರೇ ಆಗಿರುತ್ತಾರೆ. ನಿಜ ಹೇಳಬೇಕೆಂದರೆ ಧರ್ಮಕ್ಕೂ ಈ ಸೈತಾನರಿಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ. ನಿಜವಾದ ಧರ್ಮೀಯರಿಂದ ಧರ್ಮ ಉಳಿಯುತ್ತದೆಯೇ ವಿನಾ ಯಾವುದೇ ಹಿಂಸ್ರಕ ಮನುವಾದಿಗಳಿಂದಾಗಲಿ, ತಾಲಿಬಾನಿಗಳಿಂದಾಗಲಿ ಅಲ್ಲ ಎನ್ನುವುದನ್ನು ತಿಳಿಯಬೇಕಿದೆ. ಧರ್ಮ ಹೇಳುತ್ತದೆ. “ಭೂಮಿಯ ಮೇಲೆ ಕ್ಷೋಭೆಯನ್ನುಂಟು ಮಾಡದಿರಿ” ಎಂದು ಅವರೊಡನೆ ಹೇಳಿದಾಗಲೆಲ್ಲಾ ಅವರು “ನಾವು ಸುಧಾರಕರು ಮಾತ್ರ” ಎಂದು ಹೇಳುತ್ತಾರೆ. ಅವರು ಅಲ್ಲಾಹನನ್ನೂ, ವಿಶ್ವಾಸಿಗಳನ್ನೂ ವಂಚಿಸುತ್ತಾರೆ. ವಾಸ್ತವದಲ್ಲಿ ಅವರು ತಮ್ಮನ್ನು ತಾವೇ ವಂಚಿಸಿಕೊಳ್ಳುತ್ತಿದ್ದಾರೆ ಮತ್ತು ಅವರಿಗೆ ಅದರ ಜ್ಞಾನವಿಲ್ಲ.”
ಇಂದು ಅಫ್ಘಾನಿಸ್ತಾನದ ಮಹಿಳೆಯರು ಅತ್ಯಂತ ಧೈರ್ಯದಿಂದ ತಮ್ಮ ಹಕ್ಕುಗಳಿಗಾಗಿ ತಾಲಿಬಾನಿಗಳ ವಿರುದ್ಧ ಪ್ರತಿಭಟಿಸಿ ಪ್ರಶ್ನಿಸುತ್ತಿದ್ದಾರೆ. ಕಾಬೂಲಿನ ಬೀದಿಬೀದಿಗಳಲ್ಲಿ ರಾಷ್ಟ್ರ ಧ್ವಜ ಹಿಡಿದು ಮಹಿಳೆಯರು “ನಮ್ಮ ಧ್ವಜ ನಮ್ಮ ಅಸ್ಮಿತೆ” ಎಂದು ರಸ್ತೆಗಿಳಿದಿದ್ದಾರೆ.
ಮೊದಲು ಅಫ್ಘಾನಿಸ್ತಾನದ ಮಹಿಳೆಯರು ತಮ್ಮ ದೇಶ ಮಾತ್ರವಲ್ಲ. ಬೇರೆ ದೇಶಗಳಿಗೂ ಹೋಗಿ ಉನ್ನತ ಶಿಕ್ಷಣ ಪಡೆಯುತ್ತಿದ್ದರು. ಅವರು ಭಾರತಕ್ಕೂ, ಅದರಲ್ಲೂ ಬೆಂಗಳೂರಿಗೂ ಬಂದು ಶಿಕ್ಷಣ ಪಡೆಯುತ್ತಿದ್ದರು. “ಇಸ್ಲಾಮಿಕ್ ಪ್ಯಾರಾಮೀಟರ್ ಒಳಗೇನೆ ಮಹಿಳೆಯರಿಗೆ ಹಕ್ಕುಗಳನ್ನು ನೀಡಲಾಗುವುದು” ಎಂದು ಈಗ ತಾಲಿಬಾನಿಗಳು ಹೇಳಿದ್ದರು. ಆದರೆ ಕಾಬೂಲ್ ವಿಶ್ವವಿದ್ಯಾಲಯಕ್ಕೆ ಬಂದ ಹೊಸ ಕುಲಪತಿ, ಮಹಿಳೆಯರು ಅಲ್ಲಿ ಓದುವ ಹಾಗಿಲ್ಲ ಎಂದು ಘೋಷಿಸಿಬಿಟ್ಟಿದ್ದಾರೆ. ಈಗಾಗಲೇ ಶಾಲೆ ಕಾಲೇಜುಗಳಲ್ಲಿ ಗಂಡು ಮತ್ತು ಹೆಣ್ಣುಮಕ್ಕಳನ್ನು ಪ್ರತ್ಯೇಕಿಸಲಾಗಿದೆ. ಮುಂದುವರೆದು ತಾಲಿಬಾನಿಗಳು “ಮಹಿಳೆಗೆ ಶಿಕ್ಷಣ, ಉದ್ಯೋಗಕ್ಕೆ ಅವಕಾಶ ನೀಡುತ್ತೇವೆ” ಎಂದು ಹೇಳುತ್ತಿದ್ದಾರೆ. ಅದನ್ನು ನಂಬಲು ಆಧಾರಗಳಿಲ್ಲ.
ಇಷ್ಟೆಲ್ಲಾ ಬೆದರಿಕೆಗಳಿದ್ದರೂ ಆಡಳಿತವನ್ನು ಪ್ರಶ್ನೆ ಮಾಡುತ್ತಿರುವ, ಅಸಮ್ಮತಿ ತೋರುತ್ತಿರುವ, ಬೀದಿಗಿಳಿದು ಪ್ರತಿಭಟಿಸುತ್ತಿರುವ ಅಫ್ಘಾನಿಸ್ತಾನದ ಹೆಣ್ಣುಮಕ್ಕಳ ಧೈರ್ಯ ಹೆಣ್ಣುಕುಲದ ಮೂಲಭೂತ ದಿಟ್ಟತನವನ್ನೇ ಬಿಂಬಿಸುತ್ತಿದೆ.

- ಡಾ.ಕೆ.ó ಷರೀಫಾ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.