Latestಜಗದಗಲ

ಜಗದಗಲ/ ಅಫ್ಗಾನ್ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ತಾಲಿಬಾನ್ ಕಣ್ಣು

ಕಳೆದ ವರ್ಷ ಅಫ್ಗಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್ ಆಡಳಿತದ ಆದ್ಯತೆಗಳಲ್ಲಿ ಹೆಣ್ಣುಮಕ್ಕಳ ಜೀವನವನ್ನು ನಿರ್ಬಂಧಿಸುವುದು ಕೂಡ ಒಂದಾಗಿರುವುದು ನಿರೀಕ್ಷಿತವೇ ಆಗಿದೆ. ಏಕೆಂದರೆ ಯಾವುದೇ ಸರ್ವಾಧಿಕಾರದ ಕೆಂಗಣ್ಣು ಮೊದಲು ಬೀಳುವುದೇ ಹೆಣ್ಣುಮಕ್ಕಳ ಹಕ್ಕುಗಳ ಮೇಲೆ ಎನ್ನುವುದನ್ನು ಜಗತ್ತಿನ ಇತಿಹಾಸ ಅಂದಿನಿಂದ ಇಂದಿನವರೆಗೂ ಸಾಬೀತು ಮಾಡುತ್ತಿದೆ. ಅಫ್ಗಾನಿಸ್ತಾನದ ವಿಶ್ವವಿದ್ಯಾಲಯಗಳ ಆವರಣಗಳಲ್ಲಿ ಮೊನ್ನೆ ಬುಧವಾರ ಹೆಣ್ಣುಮಕ್ಕಳ ಕಣ್ಣೀರ ಕೋಡಿ ಹರಿಯಿತು. ದೇಶವನ್ನು ತನ್ನ ಬಿಗಿಮುಷ್ಟಿಯಲ್ಲಿ ಇಟ್ಟುಕೊಂಡಿರುವ ತಾಲಿಬಾನ್, ಪದವಿ ಹಂತಕ್ಕೆ ಬಂದಿದ್ದ ಅವರೆಲ್ಲರ ಅಕ್ಷರದ ಹಕ್ಕು ಕಸಿದಿದ್ದೇ ಅವರ ಆಕ್ರಂದನಕ್ಕೆ ಕಾರಣ. ಖಾಸಗಿ ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‍ಗೆ ಹೆಣ್ಣುಮಕ್ಕಳ ಪ್ರವೇಶವನ್ನೇ ನಿಷೇಧಿಸುವ ಈ ಕ್ರಮ ಜಗತ್ತಿನಾದ್ಯಂತ ಖಂಡನೆಗೆ ಗುರಿಯಾಗುತ್ತಿದೆ.

ಅಫ್ಗಾನಿಸ್ತಾನದಲ್ಲಿ ಕೆಲವೇ ತಿಂಗಳ ಹಿಂದೆ ಹೆಣ್ಣುಮಕ್ಕಳ ಪಾಲಿಗೆ ಪ್ರೌಢಶಾಲೆಗಳ ಬಾಗಿಲು ಮುಚ್ಚಲಾಗಿತ್ತು. ಈ ವರ್ಷದ ಮಾರ್ಚ್‍ನಲ್ಲಿ ಅವರಿಗಾಗಿ ಶಾಲೆ ತೆರೆಯುವುದಾಗಿ ಹೇಳಿದರೂ ಮಾತಿಗೆ ತಪ್ಪಿತು. ಇದೀಗ ಮಂಗಳವಾರ ಹೊರಡಿಸಿದ ಆದೇಶ ಹೆಣ್ಣುಮಕ್ಕಳ ಉನ್ನತ ಶಿಕ್ಷಣದ ಹಕ್ಕನ್ನೂ ಕಿತ್ತುಕೊಂಡಿದೆ. ಕೆಲವೇ ವಾರಗಳ ಹಿಂದೆ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಗಳನ್ನು ಬರೆದಿದ್ದ ವಿದ್ಯಾರ್ಥಿನಿಯರು, ಪದವಿ ಪಡೆಯುವ ಕನಸು ಕಾಣುತ್ತಿದ್ದರು. ಈಗಾಗಲೇ ಶಾಲೆ ದಾಟಿ ವಿಶ್ವವಿದ್ಯಾಲಯಕ್ಕೆ ಕಾಲಿರಿಸಿದ್ದ, ಮೂರು ನಾಲ್ಕು ಸೆಮಿಸ್ಟರ್‍ಗಳನ್ನು ಮುಗಿಸಿದ್ದ ವಿದ್ಯಾರ್ಥಿನಿಯರು ಉದ್ಯೋಗ ಪಡೆದು ವೃತ್ತಿ ರೂಪಿಸಿಕೊಳ್ಳುವ ಆಸೆಆಕಾಂಕ್ಷೆ ಇಟ್ಟುಕೊಂಡಿದ್ದರು. ಸರ್ಕಾರ ಮಂಗಳವಾರ ಏಕಾಎಕಿ ಹೊರಡಿಸಿದ ಆದೇಶ ಅವೆಲ್ಲವನ್ನೂ ಒಂದೇ ಏಟಿಗೆ ನುಚ್ಚುನೂರು ಮಾಡಿತು.

ಅಫ್ಗಾನಿಸ್ತಾನದಲ್ಲಿ ಪುಟ್ಟ ಹುಡುಗಿಯರಿಂದ ವೃದ್ಧ ಮಹಿಳೆಯರವರೆಗೆ ಎಲ್ಲರೂ ತಲೆಯಿಂದ ಪಾದದವರೆಗೆ ಮೈಮುಚ್ಚುವ ವಸ್ತ್ರದ ಆದೇಶಕ್ಕೆ ಬದ್ಧರಾಗಬೇಕು. ಶಾಲೆ ಕಾಲೇಜಿಗೆ, ಉದ್ಯೋಗಕ್ಕೆ ಹೋಗಲು ಬಿಟ್ಟರೆ ಸಾಕು ಎಂದು ಅದನ್ನು ಅಲ್ಲಿನ ಮಹಿಳಾ ಸಂಕುಲ ಒಪ್ಪಿಕೊಳ್ಳುವುದು ಅನಿವಾರ್ಯವೆನಿಸಿತು. ಆದರೀಗ ಉದ್ಯೋಗ ವಲಯದಲ್ಲಿ ಹೆಣ್ಣುಮಕ್ಕಳ ಕೆಲಸಕ್ಕೂ ಕುತ್ತು ಬರುತ್ತಿದೆ. ಕೆಲಸದಿಂದ ವಜಾ ಮಾಡುವುದು, ಅರ್ಧ ಸಂಬಳ ಕೊಡುವುದು ಹೆಚ್ಚುತ್ತಿದೆ. ಹೆಣ್ಣುಮಕ್ಕಳು ಮನೆಯಿಂದ ಹೊರಗೆ ಬಂದರೆ ಬುರ್ಖಾ ಧರಿಸಲೇಬೇಕು, ಅಲ್ಲದೆ ಜೊತೆಗೆ ಪುರುಷನಿಲ್ಲದೆ ಹೊರಗೆ ಸಂಚರಿಸುವಂತಿಲ್ಲ. ಸಾರ್ವಜನಿಕ ಉದ್ಯಾನಗಳಲ್ಲಿ, ಜಿಮ್‍ಗಳು, ಮನರಂಜನೆ ಮೇಳಗಳಿಗೆ ಹೋಗುವಂತಿಲ್ಲ. ಹೆಣ್ಣುಮಕ್ಕಳು ಮನೆಯಲ್ಲೇ ಇರಬೇಕು ಎನ್ನುವ ನಿರ್ಬಂಧ ಇಸ್ಲಾಂ ಧರ್ಮದಲ್ಲಿ ಇಲ್ಲ ಎಂದು ಯಾರು ಏನು ಹೇಳಿದರೂ ಅದನ್ನು ಒಪ್ಪದೇ ತಾಲಿಬಾನ್ ತನ್ನದೇ ನಿಯಮಗಳನ್ನು ಜಾರಿ ಮಾಡುತ್ತಿದೆ.

ವಿಶ್ವವಿದ್ಯಾಲಯಗಳಲ್ಲಿ ಕೆಲವು ತಿಂಗಳುಗಳಿಂದ ತರಗತಿಗಳಲ್ಲಿ ಹೆಣ್ಣುಮಕ್ಕಳನ್ನು ಗಂಡುಮಕ್ಕಳ ಕಣ್ಣಿಗೆ ಬೀಳದಂತೆ, ತರಗತಿಗಳಲ್ಲಿ ಪರದೆಗಳನ್ನು ಹಾಕಲಾಗುತ್ತಿತ್ತು. ಇಬ್ಬರಿಗೂ ವಿಶ್ವವಿದ್ಯಾಲಯದ ಪ್ರವೇಶದ್ವಾರಗಳನ್ನು ಬೇರೆ ಮಾಡಲಾಗಿತ್ತು. ಇನ್ನು ಕೆಲವು ವಿಶ್ವವಿದ್ಯಾಲಯಗಳಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ತರಗತಿಗಳನ್ನು ನಡೆಸಿ, ಅಲ್ಲಿ ಮಹಿಳೆಯರು ಮತ್ತು ವೃದ್ಧ ಪುರುಷರು ಮಾತ್ರ ಪಾಠ ಮಾಡುವಂತೆ ಕಟ್ಟುನಿಟ್ಟು ಮಾಡಲಾಗಿತ್ತು. ಈಗ ಇವೆಲ್ಲವನ್ನೂ ರದ್ದು ಮಾಡಿ, ಹೆಣ್ಣುಮಕ್ಕಳು ದೇಶದ ಯಾವ ವಿಶ್ವವಿದ್ಯಾಲಯದೊಳಗೂ ಕಾಲಿಡುವಂತೆಯೇ ಎಂದು ಘೋಷಿಸಿಬಿಟ್ಟಿದೆ. ತಾಲಿಬಾನ್ ದೇಶದ ಆಡಳಿತವನ್ನು ಹಿಡಿದುಕೊಂಡಾಗ, ಮಹಿಳೆಯರ ಜೀವನಕ್ಕೆ ಸಂಬಂಧಿಸಿದಂತೆ ಬಿಗಿಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಹೇಳಿತ್ತು. ಆದರೆ ಅದರ ನಡೆ ಈಗ ಅದಕ್ಕೆ ವ್ಯತಿರಿಕ್ತವಾಗಿದೆ.

ಜಾಗತಿಕ ಖಂಡನೆ

ಅಫ್ಗಾನಿಸ್ತಾನದ ಈ ಕ್ರೂರ ನಿರ್ಧಾರವನ್ನು ಜಗತ್ತಿನಾದ್ಯಂತ ಖಂಡಿಸಲಾಗುತ್ತಿದೆ. ಸೌದಿ ಅರೇಬಿಯ, ಟರ್ಕಿಯೆ, ಪಾಕಿಸ್ತಾನ, ಕತಾರ್, ಯುನೈಟೆಡ್ ಎಮಿರೇಟ್ಸ್, ಇಂಡೋನೇಷ್ಯ ಮೊದಲಾದ ಮುಸ್ಲಿಂ ದೇಶಗಳೇ ಹೀಗೆ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕನ್ನು ಕಸಿಯುವುದಕ್ಕೆ ತಮ್ಮ ಅಸಮ್ಮತಿಯನ್ನು ಸೂಚಿಸಿವೆ. ವಿಶ್ವಸಂಸ್ಥೆ ಇದನ್ನು ಕಟುಮಾತುಗಳಲ್ಲಿ ಖಂಡಿಸಿದೆ. ಅಮೆರಿಕ ನಿಷೇಧವನ್ನು ತೆಗೆಯದಿದ್ದರೆ, ಬೆಲೆ ತೆರಬೇಕಾಗುತ್ತದೆ ಎಂದಿದೆ. ಭಾರತವು ಕೂಡ ಈ ಬೆಳವಣಿಗೆಗೆ ಅತ್ಯಂತ ಕಾಳಜಿಯಿಂದ ತನ್ನ ಕಳವಳ ವ್ಯಕ್ತಪಡಿಸಿದೆ. ಪ್ರಜೆಗಳೆಲ್ಲರ ಹಕ್ಕುಗಳನ್ನು ಗೌರವಿಸುವ, ಎಲ್ಲರನ್ನೂ ಒಳಗೊಳ್ಳುವ ಪ್ರಾತಿನಿಧಿಕ ಸರ್ಕಾರದ ಪ್ರಾಮುಖ್ಯವನ್ನು ಎತ್ತಿಹಿಡಿದಿದೆ. ಮಹಿಳೆಯರ ಹಕ್ಕುಗಳು ಸೇರಿ ಮಾನವ ಹಕ್ಕುಗಳನ್ನು ರಕ್ಷಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಲಿಯ ನಿರ್ಣಯವನ್ನು ಮತ್ತೊಮ್ಮೆ ನೆನಪಿಸಿದೆ. “ಈ ನಡೆ ನಿರಾಶೆ ತಂದಿದೆ. ಇಸ್ಲಾಂ ಆಶಯದ ಪ್ರಕಾರ ಗಂಡು ಮತ್ತು ಹೆಣ್ಣು ಇಬ್ಬರಿಗೂ ಶಿಕ್ಷಣದ ಹಕ್ಕು ಇದೆ” ಎಂದು ಪಾಕಿಸ್ತಾನ ಹೇಳಿದೆ. ಆಸ್ಟ್ರೇಲಿಯ, ಕೆನಡಾ, ಫ್ರಾನ್ಸ್, ಇಟಲಿ, ಜಪಾನ್, ನೆದರರ್ಲೆಂಡ್ಸ್, ಬ್ರಿಟನ್, ನಾರ್ವೆ, ಸ್ಪೇನ್ ಸೇರಿ ಹಲವಾರು ದೇಶಗಳ ವಿದೇಶಾಂಗ ಸಚಿವರು ಜಂಟಿ ಹೇಳಿಕೆ ನೀಡಿ ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. 2021 ರ ಆಗಸ್ಟ್‍ನಲ್ಲಿ ಅಫ್ಗಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಾಗ ದೇಶದಿಂದ ಪರಾರಿಯಾದ ಅಂದಿನ ಅಧ್ಯಕ್ಷ ಅಶ್ರಫ್ ಘನಿ ಇದನ್ನು ನರಮೇಧ ಎಂದೇ ಕರೆದು ಖಂಡಿಸಿದ್ದಾರೆ.

ಹೆಣ್ಣುಮಕ್ಕಳ ಶಿಕ್ಷಣವನ್ನು ನಿಷೇಧಿಸುವ ಆದೇಶ ಹೊರಟ ಮರುದಿನ, ದಿಗ್ಭ್ರಾಂತರಾದ ಅನೇಕ ವಿದ್ಯಾರ್ಥಿನಿಯರು ಆ ದೇಶದ ಹಲವಾರು ವಿಶ್ವವಿದ್ಯಾಲಯಗಳ ಮುಂದೆ ನೆರೆದು ಬಿಕ್ಕಿಬಿಕ್ಕಿ ಅತ್ತರು. ನಂತರ ಗುರುವಾರ ಪ್ರತಿಭಟಿಸುವ ಧೈರ್ಯ ವಹಿಸಿ ಕಾಬೂಲ್ ವಿಶ್ವವಿದ್ಯಾಲಯದ ಮುಂದೆ ತಮ್ಮ ಮೊದಲ ಸಾರ್ವಜನಿಕ ಪ್ರತಿರೋಧವನ್ನು ದಾಖಲಿಸಿದರು. ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಫಲಕಗಳನ್ನು ಹಿಡಿದು “ಶಿಕ್ಷಣ ನಮ್ಮ ಹಕ್ಕು, ವಿಶ್ವವಿದ್ಯಾಲಯಗಳನ್ನು ನಮಗೆ ತೆರೆಯಬೇಕು” ಎಂದು ಕೂಗಿದರು. ತಾಲಿಬಾನ್ ಆಡಳಿತ ಬಂದ ನಂತರ ಭಾರಿ ಸಾರ್ವಜನಿಕ ಪ್ರತಿಭಟನೆಗಳು, ಮುಷ್ಕರಗಳು ಅಲ್ಲಿ ನಡೆಯಲು ಸಾಧ್ಯವೇ ಇಲ್ಲದಂತಾಗಿದೆ.

ತಾಲಿಬಾನ್‍ನ ಈ ಆದೇಶಕ್ಕೆ ಅನೇಕ ವಿಶ್ವವಿದ್ಯಾಲಯಗಳಲ್ಲಿ ಗಂಡುಮಕ್ಕಳೇ ಪ್ರತಿಭಟಿಸಿ, ಪರೀಕ್ಷೆಗಳನ್ನು ಬಹಿಷ್ಕರಿಸಿದ್ದಾರೆ. ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕನ್ನು ಮತ್ತೆ ಕೊಡುವವರೆಗೆ ತಾವು ಪರೀಕ್ಷೆ ಬರೆಯುವುದಿಲ್ಲ ಎಂದು ಹೇಳಿದ್ದಾರೆ. ಅನೆಕ ವಿಶ್ವವಿದ್ಯಾಲಯಗಳಲ್ಲಿ ಹಲವಾರು ಅಧ್ಯಾಪಕರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ ಪ್ರತಿಭಟಿಸಿದ್ದಾರೆ.

ಅಫ್ಗಾನಿಸ್ತಾನದ ಜನಸಾಮಾನ್ಯರು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. # # ಎಂಬ ಹ್ಯಾಶ್‍ಟ್ಯಾಗ್‍ನಲ್ಲಿ ಶಿಕ್ಷಣ ನಿಷೇಧವನ್ನು ಖಂಡಿಸುತ್ತಿದ್ದಾರೆ. ಗೋಡೆ ಮೇಲೆ ಅದನ್ನು ಬರೆಯುತ್ತಿದ್ದಾರೆ. ಫೇಸ್‍ಬುಕ್, ಟ್ವಿಟರ್‍ಗಳಲ್ಲಿ ವಿದ್ಯಾರ್ಥಿನಿಯರು ತಮ್ಮ ದುಃಖವನ್ನು ತೋಡಿಕೊಳ್ಳುತ್ತಿದ್ದಾರೆ. ಆದರೆ ತಾಲಿಬಾನ್ ಆಡಳಿತದ ಶಿಕ್ಷಣ ಸಚಿವ ಇಸ್ಲಾಂ ಪ್ರಕಾರ ತಮ್ಮ ನಿರ್ಧಾರವೇ ಸರಿ ಎಂದಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ವಿಪರೀತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರುವುದಲ್ಲದೆ ಕೆಲವು ಯುವತಿಯರನ್ನು ಬಂಧಿಸಲಾಯಿತು ಎಂದೂ ಹೇಳಲಾಗಿದೆ. ಅಫ್ಗಾನಿಸ್ತಾನದಲ್ಲಿ ಈಗ ಇಸ್ಲಾಂ ನಿಯಮಗಳ ಅನುಸಾರ ಗಂಡು ಹೆಣ್ಣು ಸೇರಿ ಎಲ್ಲ ‘ಅಪರಾಧಿ’ ಗಳಿಗೆ ಸಾರ್ವಜನಿಕವಾಗಿ ಚಾಟಿ ಏಟು ಬಾರಿಸುವ ಕ್ರಮ ಜಾರಿಗೆ ಬಂದಿದೆ.

ಜಗತ್ತಿನ ಎಲ್ಲ ದೇಶಗಳು, ಸಾಮಾಜಿಕ ಚಿಂತಕರು ಈಗ ತಬ್ಬಲಿಗಳಾಗಿರುವ ಅಫ್ಗಾನಿಸ್ತಾನದ ಮಹಿಳೆಯರ ಪರವಾಗಿ ನಿಲ್ಲಬೇಕು, ನಿಷೇಧವನ್ನು ತೆಗೆಯುವಂತೆ ಆಗ್ರಹಿಸಬೇಕು ಎಂದು ಅಲ್ಲಿನ ಹಲವು ಲೇಖಕಿಯರು, ಕಾರ್ಯಕರ್ತೆಯರು ಕೋರಿದ್ದಾರೆ. ಈ ಕ್ರಮ ಮಾನವ ಸಂಕುಲದ ಮೇಲೆ ಆಗಿರುವ ಆಕ್ರಮಣ ಎಂದೇ ಪರಿಗಣಿಸಬೇಕು ಎಂದಿದ್ದಾರೆ. ಮಹಿಳೆಯರನ್ನು ಸಾರ್ವಜನಿಕ ಜೀವನದಿಂದ ಮರೆಮಾಡುವ ಈ ಕೃತ್ಯ, ಮುಂದಿನ ಭೀಕರ ಸನ್ನಿವೇಶಗಳಿಗೆ ಮುನ್ನುಡಿ ಎಂದೇ ಹೇಳಲಾಗುತ್ತಿದೆ. ಸೆಪ್ಟೆಂಬರ್ 22 ರಂದು ಇರಾನ್‍ನಲ್ಲಿ ಹಿಜಾಬ್ ವಿರೋಧಿಸಿ ಹತ್ಯೆಯಾದ ಮಹಸಾ ಅಮಿನಿ ಪರವಾಗಿ ದನಿಯೆತ್ತಿದ್ದ ಅಫ್ಗಾನಿಸ್ತಾನದ ಯುವತಿಯರ ಮೇಲೆ ತಾಲಿಬಾನ್ ಕೆಂಗಣ್ಣು ಬೀರಿತ್ತು. ಈಗ ತಾವೇ ಅಕ್ಷರದ ಹಕ್ಕು ಕಳೆದುಕೊಂಡು ಸಂಕಷ್ಟದಲ್ಲಿರುವ ಅಫ್ಗಾನ್ ಹೆಣ್ಣುಮಕ್ಕಳನ್ನು ಜಗತ್ತಿನ ಬೆಂಬಲವೇ ರಕ್ಷಿಸಬೇಕಾಗಿದೆ. (ಈ ಬರಹಕ್ಕೆ ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ.)

  • ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *