ಜಗದಗಲ / ಅನೇಕ ಮಕ್ಕಳ ಅಮ್ಮ! ಡಾ. ಕೆ.ಎಸ್. ಚೈತ್ರಾ

ಪುಟ್ಟ ದ್ವೀಪ ಬಾಲಿಯಲ್ಲಿ ಹಾದಿ ಬೀದಿಗಳಲ್ಲಿ ಮೂರ್ತಿಗಳಿದ್ದರೂ ಇಲ್ಲಿಯ ಜನರಿಗೆ ಮೂರ್ತಿ ಪೂಜೆಯಲ್ಲಿ ನಂಬಿಕೆ ಕಡಿಮೆ. ನಿಸರ್ಗದ ಅಂಶಗಳಾದ ಕಲ್ಲು, ನೀರು, ಅಗ್ನಿ, ಮಣ್ಣು, ಗಾಳಿ ಅವರಿಗೆ ಶಕ್ತಿ ಸಂಕೇತಗಳು. ಆಶ್ಚರ್ಯವೆಂದರೆ ಹಣೆಯ ಮೇಲೆ ನೆರಿಗೆಯುಳ್ಳ, ಅಸ್ತವ್ಯಸ್ತ ಕೂದಲಿನ, ತೆರೆದೆದೆಯ, ವಿವಿಧ ವಯಸ್ಸಿನ ಮಕ್ಕಳು ಸುತ್ತುವರಿದ ಸಂತೃಪ್ತ ಮುಖಭಾವದ ಮಹಿಳೆಯ ಶಿಲ್ಪ ಪೂಜಿಸುತ್ತಾರೆ. ಆಕೆ ಯಾವ ದೇವತೆಯೂ ಅಲ್ಲ ಬಾಲಿಯ ಗ್ರಾಮೀಣ ಮಹಿಳೆ- ಅನೇಕ ಮಕ್ಕಳ ಅಮ್ಮ!


ಹಿಂದೂ ಸಂಸ್ಕøತಿಯ ನೆಲೆವೀಡುಎಂದು ಹೆಸರಾಗಿ ಅದ್ಭುತ ದೇವಾಲಯಗಳನ್ನು ಹೊಂದಿದ ಈ ಪುಟ್ಟ ದ್ವೀಪ ಬಾಲಿ ಕುತೂಹಲ ಕೆರಳಿಸಿದ್ದರೆ ಚಿತ್ರದಲ್ಲಿ ಕಂಡ ದಟ್ಟ ಕಾಡುಗಳು, ಅಗ್ನಿಪರ್ವತ, ಬೆಟ್ಟ ಗುಡ್ಡಗಳು ಕೈ ಬೀಸಿ ಕರೆದಿದ್ದವು. ನೇರವಾದ ಸಂಪರ್ಕ ಇಲ್ಲವಾದ್ದರಿಂದ ಮಲೇಶ್ಯಾ ಮೂಲಕ ಪಯಣಿಸಿ ಇಂಡೋನೇಶ್ಯಾದ ಬಾಲಿಯಲ್ಲಿ ಕೆಳಗಿಳಿದದ್ದೇ ಕಂಡದ್ದು ‘ಗರುಡ ಏರ್ ಲೈನ್ಸ್’ ಎಂಬ ಹೆಸರು ಹೊತ್ತ ವಿಮಾನಗಳು. ಅರೆ ನಮ್ಮ ಗರುಡ ಇಲ್ಲಿಗೂ ಹಾರಿ ಬಂದ ಎಂದು ಅಚ್ಚರಿ ಪಡುತ್ತಲೇ ಹೊರಗೆ ಬಂದರೆ ಎಲ್ಲೆಲ್ಲೂ ದೇಗುಲಗಳು; ಪ್ರತೀ ಬೀದಿಗಲ್ಲ, ಪ್ರತೀ ಮನೆಗೆ ! ಹಾಗಾಗಿಯೇ ಸಾವಿರ ದೇಗುಲಗಳ ದ್ವೀಪ ಎಂಬ ಹೆಸರು ಅನ್ವರ್ಥಕವೇ.

ದಾರಿಯುದ್ದಕ್ಕೂ ಎತ್ತೆತ್ತರದ ಕೃಷ್ಣ, ರಾಮ, ಬರುಣ, ಗರುಡ, ಅರ್ಜುನ, ಭೀಮರ, ಹನುಮನ ಮೂರ್ತಿಗಳು ಕಂಡವು. ನಮ್ಮ ರಾಮಾಯಣ ಮಹಾಭಾರತ ಇಲ್ಲಿ ಪವಿತ್ರ ಮತ್ತು ಜನಪ್ರಿಯ. ಹಾದಿ ಬೀದಿಗಳಲ್ಲಿ ಮೂರ್ತಿಗಳಿದ್ದರೂ ಇಲ್ಲಿಯ ಜನರಿಗೆ ಮೂರ್ತಿ ಪೂಜೆಯಲ್ಲಿ ನಂಬಿಕೆ ಕಡಿಮೆ. ನಿಸರ್ಗದ ಅಂಶಗಳಾದ ಕಲ್ಲು, ನೀರು, ಅಗ್ನಿ, ಮಣ್ಣು, ಗಾಳಿ ಅವರಿಗೆ ಶಕ್ತಿ ಸಂಕೇತಗಳು. ಹಾಗಾಗಿ ಪ್ರತೀ ಮನೆಯಲ್ಲೂ ದೇಗುಲವಿದ್ದರೂ ಒಳಗೆ ಯಾವುದೇ ಮೂರ್ತಿಯಿಲ್ಲ: ದೇವರು, ಹಿರಿಯರು ಶಕ್ತಿ ಸ್ವರೂಪಿಗಳಾಗಿ ಭಕ್ತಿಗೆ ಒಲಿದು ಆಗಮಿಸಿ, ಕುಳಿತು, ಹರಸುತ್ತಾರೆ ಎಂಬ ನಂಬಿಕೆ ಇಲ್ಲಿನ ಜನರದ್ದು. ಹಾಗೆಯೇ ದೇವರ ಹೆಸರನ್ನು ಮನುಷ್ಯರಿಗೆ ಇಡುವಂತಿಲ್ಲ, ಅದು ಅಗೌರವ ಎಂದು ನಂಬುತ್ತಾರೆ. ಆದರೆ ಹಳ್ಳಿಗಳನ್ನು ಸುತ್ತುವಾಗ, ದೇಗುಲಗಳನ್ನು ಸಂದರ್ಶಿಸುವಾಗ ಅಲ್ಲಲ್ಲಿ ಜನರು ಪೂಜಿಸುತ್ತಿದ್ದ ಶಿಲ್ಪವೊಂದು ಕಂಡುಬಂತು. ಗೋವ ಗಜ ಎಂಬ ಪ್ರವಾಸಿ ತಾಣದಲ್ಲಿ ಮತ್ತು ನಂತರ ಸಾಂಸ್ಕøತಿಕ ರಾಜಧಾನಿ ಎಂದೇ ಪ್ರಸಿದ್ಧಿ ಪಡೆದ ಉಬುಡ್‍ನಲ್ಲಿ ಕಲಾವಿದರ ಕೆತ್ತನೆ, ಚಿತ್ರಗಳಲ್ಲಿಯೂ ಮತ್ತದೇ ವಿಚಿತ್ರ ವ್ಯಕ್ತಿ. ಅದರಲ್ಲಿದ್ದುದು ಹಣೆಯ ಮೇಲೆ ನೆರಿಗೆಯುಳ್ಳ, ಅಸ್ತವ್ಯಸ್ತ ಕೂದಲಿನ, ತೆರೆದೆದೆಯ, ಸಂತೃಪ್ತ ಮುಖಭಾವದ ಮಹಿಳೆ. ಆಶ್ಚರ್ಯವೆಂದರೆ ಆಕೆಯನ್ನು ಸುತ್ತುವರಿದ ವಿವಿಧ ವಯಸ್ಸಿನ ಮಕ್ಕಳು. ಬೆನ್ನ ಮೇಲೆ, ಕಂಕುಳಲ್ಲಿ, ಕೈ-ಕಾಲ ಬಳಿ, ತಲೆ ಮೇಲೆ ,ಎದೆ ಹಾಲು ಚೀಪುತ್ತಾ ಹೀಗೆ ಎಲ್ಲೆಡೆ ಮಕ್ಕಳು ! ತಡೆಯಲಾರದೆ ಕಡೆಗೊಮ್ಮೆಇದ್ಯಾವ ದೇವತೆ ಎಂದು ವಿಚಾರಿಸಿದಾಗ ‘ ಅದು ಮೆನ್‍ ಬ್ರಾಯುತ್! ಯಾವ ದೇವತೆಯೂ ಅಲ್ಲ; ಬಾಲಿಯ ಗ್ರಾಮೀಣ ಮಹಿಳೆ. ಆಕೆಗಿಲ್ಲಿ ಪೂಜೆ ಸಲ್ಲುತ್ತದೆ’ ಎಂದು ವಿವರಣೆ ಸಿಕ್ಕಿತು.

ಬ್ರಾಯುತ್‍ ಎಂಬುದು`ಬಹು ಮಕ್ಕಳ ಹೊರೆ ಹೊತ್ತ’ ಎಂಬ ಅರ್ಥ ಬರುವ ಕುಟುಂಬದ ಹೆಸರು.ಈ ಕುಟುಂಬದ ದಂಪತಿ, ಪಾನ್ ಮತ್ತು ಮೆನ್ ಬ್ರಾಯುತ್ (ಅಪ್ಪ-ಅಮ್ಮ). ಬಡಕುಟುಂಬ, ಹೊಟ್ಟೆಗೆ ಬಟ್ಟೆಗೆ ಕಷ್ಟಪಡುವ ಪರಿಸ್ಥಿತಿ.ಆದರೆ ಮನೆ ತುಂಬಾ ಮಕ್ಕಳು, ಒಂದೆರಡಲ್ಲ, ಹದಿನೆಂಟು!! ಮಕ್ಕಳನ್ನು ಹೆರುತ್ತಾ ಅವರನ್ನು ಸಾಕುವ ಸಂಪೂರ್ಣ ಹೊಣೆ ಹೊತ್ತ ಅಮ್ಮ ಬ್ರಾಯುತ್‍ ಗದ್ದೆಯ ಜತೆ ನೇಯುವ ಕೆಲಸವನ್ನೂ ಮಾಡುತ್ತಾಳೆ. ಇತ್ತ ಅಪ್ಪನನ್ನು ಅಂಗಳ ಗುಡಿಸಿ, ಪೂಜೆಗೆ ಬೇಕಾದ ವಿಶೇಷ ಖಾದ್ಯ ಸಿದ್ಧಪಡಿಸುವಂತೆ ಮನ ಒಲಿಸುತ್ತಾಳೆ. ಹೀಗೆ ಬಡತನ, ಕಷ್ಟವಿದ್ದರೂ ಕಂಗೆಡದೆ ಪತಿಯನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳಗೆ-ಹೊರಗೆ ದುಡಿದು, ಮನೆಯಲ್ಲಿ ಶಾಂತಿ ಕಾಪಾಡಿಕೊಂಡು ತನ್ನ ಹದಿನೆಂಟು ಮಕ್ಕಳನ್ನು ಒಳ್ಳೆಯ ಸ್ಥಿತಿಗೆ ತರಲು ಅಮ್ಮ ಶ್ರಮಿಸುತ್ತಾಳೆ. ಆಕೆಯ ಶಿಸ್ತು ಮತ್ತು ಪ್ರೀತಿಯ ಕಣ್ಗಾವಲಲ್ಲಿ ಬೆಳೆದು ಮಕ್ಕಳು ದೊಡ್ಡವರಾಗುತ್ತಾರೆ. ತಮ್ಮದೇ ಕುಟುಂಬದ ನಾಟಕ ತಂಡವನ್ನು ಕಟ್ಟಿ ಬರೊಂಗ್ ನಾಟಕವನ್ನು ಪ್ರದರ್ಶಿಸುತ್ತಾರೆ. ಬರೊಂಗ್ ನಾಟಕವೆಂದರೆ ಒಳ್ಳೆಯ ಶಕ್ತಿ ಕೆಟ್ಟದ್ದನ್ನು ಮಣಿಸುವ ವಸ್ತುವುಳ್ಳದ್ದು. ಹೀಗೆ ಮಕ್ಕಳು ಶ್ರೀಮಂತರಾಗಿ , ಸಮಾಜದಲ್ಲಿ ಗಣ್ಯರೆನಿಸಿಕೊಂಡಾಗ ಅಮ್ಮನಿಗೆ ಹೆಮ್ಮೆ ಮತ್ತು ಸಂತೋಷ. ಆದರೆ ತನ್ನ ಕರ್ತವ್ಯ ಮುಗಿಯಿತೆಂದು ಆಕೆ ಪತಿಯೊಂದಿಗೆ ಈ ಲೌಕಿಕ ಜಗತ್ತಿನ ಮೋಹ ತೊರೆದು ವಾನಪ್ರಸ್ಥಕ್ಕೆ ತೆರಳುತ್ತಾಳೆ.

ಸಾಮಾನ್ಯ ಮಹಿಳೆಯೊಬ್ಬಳ ಜೀವನಕತೆ ಎಂದು ಭಾಸವಾದರೂ ಬಾಲಿಯ ಜನರಿಗೆ ಆಕೆ ಎಲ್ಲ ಅಮ್ಮಂದಿರ ಸಂಕೇತ. ಪುರುಷ ಪ್ರಧಾನ ಸಮಾಜವಾದ ಬಾಲಿಯಲ್ಲಿ ಮಹಿಳೆ ಅಡಿಗೆ-ಮನೆ-ಮಕ್ಕಳು ಎಂಬ ಪಾರಂಪರಿಕ ಪಾತ್ರವನ್ನು ನಿರ್ವಹಿಸುತ್ತಾ ಬಂದಿದ್ದಾಳೆ. ಮಕ್ಕಳು ಮನೆಯ ಸಂಪತ್ತು; ಹಾಗಾಗಿ ಹೆಚ್ಚಿದ್ದಷ್ಟೂ ಒಳ್ಳೆಯದು ಎನ್ನುವ ನಂಬಿಕೆಯೂ ಜಾರಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಬಡ ಕುಟುಂಬದವಳಾದರೂ ಮೇನ್ ಬ್ರಾಯುತ್‍ ಕಂಗೆಡಲಿಲ್ಲ. ತನ್ನ ಕೆಲಸಗಳ ಜತೆ ಮಕ್ಕಳಿಗಾಗಿ ಪುರುಷರ ಕೆಲಸವನ್ನೂ ಮಾಡಿದಳು, ಬಿಡುವಿಲ್ಲದೇ ದುಡಿದಳು. ಗಂಡನ ಮೇಲಷ್ಟೇ ಜವಾಬ್ದಾರಿ ಹೊರಿಸಲಿಲ್ಲ, ಬದಲಾಗಿ ತಾನೇ ಹೊತ್ತಳು.ಕುಟುಂಬ ತೊರೆದು ಹೋಗದೇ ಎಲ್ಲವನ್ನೂ ಎದುರಿಸಿದಳು. ಯಾರಲ್ಲದಿದ್ದರೂ ತನ್ನನ್ನು ದೈವ ಕಾಪಾಡುತ್ತದೆ ಎಂಬ ಅಚಲ ನಂಬಿಕೆಯೊಂದೇ ಆಕೆಗಿದ್ದ ಆಧಾರ. ಹಾಗಾಗಿ ನಿತ್ಯವೂ ಪೂಜೆ ಮಾಡಿ ಕೆಲಸ ಮಾಡುತ್ತಿದ್ದಳು. ಮಕ್ಕಳ ಅಭ್ಯುದಯ ಆಕೆಯ ಏಕೈಕ ಗುರಿಯಾಗಿತ್ತು. ಅದನ್ನು ನಿಷ್ಠೆಯಿಂದ ಮಾಡಿ ಯಶಸ್ಸು ಪಡೆದಳು. ತನ್ನ ಕರ್ತವ್ಯ ಮುಗಿಸಿದ ನಂತರ ಮಕ್ಕಳಿಂದ ಏನನ್ನೂ ಅಪೇಕ್ಷಿಸದೇ ಯೋಗ ಸಮಾಧಿ ಪಡೆದದ್ದು ಎಲ್ಲರಿಗೂ ಆದರ್ಶ ಎಂದು ಅಲ್ಲಿನವರು ನಂಬುತ್ತಾರೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದೂ ಧರ್ಮೀಯರ ಜತೆ ಬೌದ್ಧ ಧರ್ಮೀಯರೂ ಈಕೆಯನ್ನು ಮಕ್ಕಳನ್ನು ಕಾಪಾಡುವ ಹಾರಿತಿ ಎಂಬ ದೇವತೆಯನ್ನಾಗಿ ಪೂಜಿಸುತ್ತಾರೆ.ಸಂತಾನಪ್ರಾಪ್ತಿಗಾಗಿ ದಂಪತಿಗಳು ಈಕೆಗೆ ಪೂಜೆ ಸಲ್ಲಿಸುತ್ತಾರೆ.ಬಾಲಿಯ ಮನೆಗಳಲ್ಲಿ ಮಕ್ಕಳಿಗೆ ಈ ಕತೆಯನ್ನು ರಾತ್ರಿ ಮಲಗುವಾಗ ಹೇಳುವುದು ರೂಢಿ.
ಬಹು ಮಕ್ಕಳ ಅಮ್ಮ ಎನ್ನುವ ಮೆನ್‍ಬ್ರಾಯುತ್ ಶಿಲ್ಪ ನೋಡುತ್ತಾ ನಾನು ‘ಎಲ್ಲರೂ ಭಕ್ತಿಯಿಂದ ಪೂಜಿಸುವುದನ್ನು ಕಂಡು ಯಾರೋ ಯೋಗಿ ಅಂದುಕೊಂಡಿದ್ದೆ’ ಎಂದೆ.ಕೂಡಲೇ ನಮ್ಮ ಗೈಡ್ ‘ಅಮ್ಮನೆಂದರೆ ಯೋಗಿಯೇ! ಗಂಡಸರು ಕಾಡಲ್ಲಿ ಕುಳಿತು ತಪಸ್ಸು ಮಾಡುತ್ತಾರೆ., ಅಮ್ಮ ಪ್ರತಿಕ್ಷಣ ಸಂಸಾರದಲ್ಲಿ ತಪಸ್ಸು ಮಾಡುತ್ತಿರುತ್ತಾಳೆ. ಅಮ್ಮನೆಂದರೆ ಸಾಮಾನ್ಯಳಲ್ಲ; ಕುಟುಂಬದ ದೇವತೆ. ಆಕೆ ಮನಸ್ಸು ಮಾಡಿದರೆ ಏನೂ ಆಗಬಲ್ಲದು. ಈ ಶಿಲ್ಪ, ಬಾಲಿಯ ಎಲ್ಲಾ ಅಮ್ಮಂದಿರ ಸಂಕೇತ. ಅಮ್ಮಂದಿರಿಗೆ ಆಗದ್ದು ಏನಿದೆ? ’ ಎಂದು ಭಕ್ತಿಯಿಂದ ನುಡಿದ. ಅಪ್ರಯತ್ನವಾಗಿ ನಾನೂ ಕೈ ಮುಗಿದೆ.

ಆದರೆ ಒಂದು ಕ್ಷಣ ಹೀಗೆ ದೇವತೆಯಂತೆ ಪೂಜಿಸುವ ಈ ಮಹಿಳೆಯ ಹೆಸರಿನ ಉಲ್ಲೇಖವೇ ಇಲ್ಲವಲ್ಲ, ಏನಿದ್ದರೂ ಕುಟುಂಬದ ಹೆಸರಷ್ಟೇ ಎಂದು ಪಿಚ್ಚೆನಿಸಿತು. ಇರಲಿ ಅದು ಸಾಂಕೇತಿಕ ಎಂದುಕೊಂಡರೂ ಪೂಜಿಸುವ ಜತೆ ಮಹಿಳೆಯ ಜವಾಬ್ದಾರಿಯನ್ನೂ ಒಂದಿಷ್ಟು ಹಂಚಿಕೊಂಡರೆ ಎಲ್ಲ ಅಮ್ಮಂದಿರು ಹರಸುತ್ತಿದ್ದರು ಅನ್ನಿಸಿತು!


ಡಾ.ಕೆ.ಎಸ್.ಚೈತ್ರಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *