ಜಗದಗಲ/ ಅಂತರರಾಷ್ಟ್ರೀಯ ಹೆಣ್ಣುಮಕ್ಕಳ ದಿನ

“ಸಮಾನತೆಗಾಗಿ ನಮ್ಮ ಧ್ವನಿ” ಎಂಬ ಘೋಷವಾಕ್ಯದೊಡನೆ ಅಕ್ಟೋಬರ್ 11 ರಂದು `ಅಂತರರಾಷ್ಟ್ರೀಯ ಹೆಣ್ಣುಮಕ್ಕಳ ದಿನ’ವನ್ನು ಆಚರಿಸಲಾಗುತ್ತದೆ. ಹೆಣ್ಣುಮಕ್ಕಳಿಗೆ ಹುಟ್ಟುವ ಹಕ್ಕು, ಆರೋಗ್ಯವಾಗಿ ಬೆಳೆಯುವ ಹಕ್ಕು, ಸಮಾನ ಶಿಕ್ಷಣದ ಹಕ್ಕು ಸೇರಿದಂತೆ ಹಲವು ಹಕ್ಕುಗಳನ್ನು ನೆನಪಿಸುವ, ಅವರಿಗೆ ಅದು ದೊರೆಯುವಂತೆ ಮಾಡುವ ಮತ್ತು ಅದಕ್ಕಾಗಿ ಅವರನ್ನು ಹುರಿದುಂಬಿಸುವ ದಿನ ಇದು. ಜಗತ್ತಿನಲ್ಲಿ ಏನೇನು ಕೊರತೆ ಇದೆಯೋ ಅವುಗಳ ಕಡೆ ಗಮನ ಹರಿಸಲು ಅಂತರರಾಷ್ಟ್ರೀಯ ದಿನಗಳನ್ನು ರೂಪಿಸುವ ವಿಶ್ವ ಸಂಸ್ಥೆ 2012 ರಲ್ಲಿ ಇದನ್ನು ಆರಂಭಿಸಿದೆ. 2020 ರ ಈ ಕೊರೋನ ಸಂಕಷ್ಟದ ದಿನಗಳಲ್ಲಿ ಹುಡುಗಿಯರಿಗೆ ಎರಗುವ ಇನ್ನಷ್ಟು ಕಷ್ಟಗಳ ಬಗ್ಗೆ ಯೋಚಿಸಲು, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಕೂಡ ಇದು ಪ್ರಶಸ್ತವಾದ ದಿನ. (ಕಲೆ: ಡಾ. ಕೃಷ್ಣ ಗಿಳಿಯಾರ್ )

ಬದುಕಿನಲ್ಲಿ ಯಾವ ವಿಚಾರದಲ್ಲಿ ದೌರ್ಬಲ್ಯ ಇದೆಯೋ ಯಾರ ವಿಚಾರದಲ್ಲಿ ದೌರ್ಜನ್ಯ ಇದೆಯೋ ಅವುಗಳನ್ನು ನಿವಾರಿಸಿ ಸಬಲೀಕರಣ ಮತ್ತು ಸಮಾನತೆಯನ್ನು ಸಾಧಿಸಲು ವಿಶೇಷ ಗಮನ ಅಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾನೂನು, ನಿಯಮ, ಮೀಸಲಾತಿ, ದೃಢ ನಿರ್ಧಾರ ಇವುಗಳ ಹಾಗೆ ವಿಷಯಾಧಾರಿತ ಆಚರಣೆಗಳೂ ಬಹಳ ಮುಖ್ಯ. ಆದ್ದರಿಂದಲೇ ವಿಶ್ವ ಸಂಸ್ಥೆ ಮತ್ತು ಅಂಥ ಇನ್ನೂ ಅನೇಕ ಅಂತರರಾಷ್ಟ್ರೀಯ ಸಂಘಟನೆಗಳು “ವಿಶ್ವ ದಿನ” ಅಥವಾ “ಅಂತರರಾಷ್ಟ್ರೀಯ ದಿನ” ಗಳನ್ನು ಘೋಷಿಸುತ್ತವೆ. ಆ ಹಿನ್ನೆಲೆಯಲ್ಲಿ “ಅಂತರರಾಷ್ಟ್ರೀಯ ಹೆಣ್ಣುಮಕ್ಕಳ ದಿನ” ದ ಘೋಷಣೆ ಮತ್ತು ಆಚರಣೆಗಳೇ ಅವರ ಸ್ಥಿತಿಗತಿಯ ಸುಧಾರಣೆಯನ್ನು ಕೂಗಿ ಹೇಳುತ್ತವೆ.

ಹೆಣ್ಣುಮಕ್ಕಳ ಸಬಲೀಕರಣ ಕುರಿತ ಬೀಜಿಂಗ್ ಘೋಷಣೆಗೆ ಇದೀಗ 25 ವರ್ಷ ಆಗಿದೆ. ಹೊಸ ಸವಾಲುಗಳ ಹಿನ್ನೆಲೆಯಲ್ಲಿ ತುರ್ತು ಅಗತ್ಯಗಳನ್ನು ಗುರುತಿಸಿ ಅದಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾದ ಸಮಯ ಇದಾಗಿದೆ. 2012 ರಿಂದ ಪ್ರತೀ ವರ್ಷ ವಿಭಿನ್ನ ಕೇಂದ್ರ ವಿಷಯಗಳೊಂದಿಗೆ `ಅಂತರರಾಷ್ತ್ರೀಯ ಹೆಣ್ಣುಮಕ್ಕಳ ದಿನ’ ಆಚರಿಸಲಾಗುತ್ತಿದ್ದು ಈ ವರ್ಷ ಅವರ ಧ್ವನಿ ಅವರ ಸಮಾನತೆಗಾಗಿ ಎಂದು ಎತ್ತಿ ಹೇಳಲಾಗಿದೆ. ಜಗತ್ತಿನ ಯಾವ ಬೆಳವಣಿಗೆಯೇ ಆಗಲಿ, ಅದರ ವಿರುದ್ಧ ಎಂಥ ಹೋರಾಟವೇ ಆಗಲಿ, ಅದರಲ್ಲಿ ಹೆಣ್ಣು ದನಿ ಮತ್ತು ಅವಳ ಪಾತ್ರ ಇಲ್ಲದಿದ್ದರೆ ಅದು ಸಂಪೂರ್ಣ ಅನ್ನಿಸುವುದೇ ಇಲ್ಲ. ಅದನ್ನು ಮತ್ತಷ್ಟು ಒತ್ತಿ ಹೇಳುವುದು ಈ ವರ್ಷದ ಗುರಿ.

ಹವಾಮಾನ ಬದಲಾವಣೆ ಕುರಿತು ಗಮನ ಸೆಳೆಯುವ ಹೋರಾಟ, ಲಿಂಗ ಸಮಾನತೆ ಸಾಧನೆಯ ಪ್ರಯತ್ನ, ಜನಾಂಗೀಯ ದ್ವೇಷಕ್ಕೆ ಪ್ರತಿರೋಧ ಹೀಗೆ ಹಲವಾರು ಮುಖ್ಯ ಜಾಗತಿಕ ಚಳವಳಿಗಳಲ್ಲಿ ಹದಿಹರೆಯದ ಹೆಣ್ಣುಮಕ್ಕಳೂ ಭಾಗವಹಿಸಿರುವ, ಅವುಗಳ ಮುಖ್ಯ ಹೋರಾಟಗಾರ್ತಿಯರೂ ಆಗಿರುವ ಅತ್ಯುತ್ತಮ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅವುಗಳನ್ನು ಇನ್ನಷ್ಟು ಬಲಪಡಿಸುವ ಗುರಿ ಸಾಧಿಸಬೇಕಾದರೆ ಇನ್ನಷ್ಟು ಹೆಣ್ಣುಮಕ್ಕಳನ್ನು ಅದರಲ್ಲಿ ತೊಡಗಿಸಬೇಕು. ಅವುಗಳನ್ನು ಕುರಿತು ಚಿಕ್ಕಂದಿನಲ್ಲೇ ಅವರಲ್ಲಿ ಸೂಕ್ಷ್ಮ ಸಂವೇದನೆಯನ್ನು ಬೆಳೆಸಬೇಕು. ಇಂಥ ದಿನಾಚರಣೆಗಳು ಅವುಗಳತ್ತ ಕೂಡ ಗಮನ ಹರಿಸುತ್ತವೆ.

ಜಗತ್ತಿನ ಹಲವಾರು ದೇಶಗಳಲ್ಲಿ ಅದಾಗಲೇ ಆಚರಣೆ ಹಲವು ಬಗೆಯಲ್ಲಿ ನಡೆದಿದೆ. ಜನಸಂಖ್ಯೆಯಲ್ಲಿ ಗಂಡು ಹೆಣ್ಣು ಅನುಪಾತ ಕಳವಳಕಾರಿಯಾಗಿರುವ, ಶಿಕ್ಷಣದ ಅವಕಾಶಗಳು ಕಡಿಮೆ ಇರುವ ಮತ್ತು ದೌರ್ಜನದ ಹಲವು ಕರಾಳ ರೂಪಗಳಲ್ಲಿ ಎರಗುತ್ತಿರುವ ನಮ್ಮ ದೇಶದಲ್ಲಿ ಹೆಣ್ಣುಮಕ್ಕಳ ಹಕ್ಕು ಮತ್ತು ಸಮಾನತೆ ಕುರಿತು ಯೋಚಿಸಲು, ನಿರ್ಧಾರಗಳನ್ನು ಕೈಗೊಳ್ಳಲು ಇದೊಂದು ದಿನ ಸಾಲದು- ಪ್ರತಿದಿನವೂ ಆ ಕುರಿತು ಚಿಂತನೆ ನಡೆಯಬೇಕು. ದೃಢ ಕ್ರಮಗಳು ಸರ್ಕಾರ, ಸಮಾಜ ಮತ್ತು ಕುಟುಂಬ ಇವೆಲ್ಲದರ ನೆಲೆಯಲ್ಲಿ ರೂಪುಗೊಳ್ಳಬೇಕು. ಆಗ ಮಾತ್ರ “ಬೇಟಿ ಬಚಾವ್, ಬೇಟಿ ಪಡಾವ್” ಎನ್ನುವುದಕ್ಕೆ ಅರ್ಥ ತುಂಬಿಕೊಳ್ಳಬಹುದು.

  • ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *