ಚೆನ್ನೈನಲ್ಲಿ ತಿರುಮಲಾಂಬ – ಡಾ. ವಿಜಯಾ
ಆಧುನಿಕ ಕನ್ನಡದ ಮೊದಲ ಲೇಖಕಿ, ಸಂಪಾದಕಿ ಮತ್ತು ಪ್ರಕಾಶಕಿಯೆನಿಸಿಕೊಂಡ ನಂಜನಗೂಡು ತಿರುಮಲಾಂಬ ಅವರು ಹುಟ್ಟಿ ಇಂದು ಮಾರ್ಚ್ ೨೫ಕ್ಕೆ ೧೩೨ ವರ್ಷಗಳಾಗುತ್ತವೆ. ಹದಿನಾಲ್ಕನೇ ವಯಸ್ಸಿಗೆ ಬಾಲ ವಿಧವೆಯಾಗಿ ನಂತರ ತಪಸ್ಸಿನಂತೆ ಬರಹ, ಪ್ರಕಾಶನ, ಸಂಪಾದನೆಯನ್ನು ಕೈಗೊಂಡ ತಿರುಮಲಾಂಬ ಅವರು ’ಸತಿ ಹಿತೈಷಿಣಿ ಮಾಲಿಕೆ’ಯ ಮೂಲಕ ಪುಸ್ತಕಗಳನ್ನು ಪ್ರಕಟಿಸಿ ಆಧುನಿಕ ಕನ್ನಡದ ಮೊದಲ ಪ್ರಕಾಶಕಿಯೆನಿಸಿಕೊಂಡರು. ಸ್ವತಃ ತಾವೂ ಕಾದಂಬರಿಗಳನ್ನು, ನಾಟಕಗಳನ್ನು ರಚಿಸಿ ಆಧುನಿಕ ಕನ್ನಡದ ಮೊದಲ ಲೇಖಕಿಯೆನಿಸಿಕೊಂಡರು. ಹೆಣ್ಣುಮಕ್ಕಳಿಗಾಗಿ ‘ಕರ್ನಾಟಕ ನಂದಿನಿ’ ಎಂಬ ಪತ್ರಿಕೆಯನ್ನು, ಮಕ್ಕಳಿಗಾಗಿ ‘ಸನ್ಮಾರ್ಗದರ್ಶಿನಿ’ ಎಂಬ ಪತ್ರಿಕೆಯನ್ನು ಪ್ರಕಟಿಸಿ ಕನ್ನಡದ ಮೊದಲ ಪತ್ರಕರ್ತೆಯಾದರು. ಇಂತಹ ಕನ್ನಡದ ಅಕ್ಷರದ ಮೊದಲಗಿತ್ತಿಯನ್ನು ಒಮ್ಮೆ ಚೆನ್ನೈನಲ್ಲಿ ಭೇಟಿ ಮಾಡಿದ್ದ ಕನ್ನಡದ ಹಿರಿಯ ಲೇಖಕಿ ಡಾ.ವಿಜಯಾ ಅವರು ತಮ್ಮ ಅನುಭವವನ್ನು ತಮ್ಮ ನೆನಪಿನ ಖಜಾನೆಯಿಂದ ತೆಗೆದು ಇಲ್ಲಿ ಹಂಚಿಕೊಂಡಿದ್ದಾರೆ.
ತಿರುಮಲಾಂಬ ಅವರ ಬಗ್ಗೆ ಚಿ.ನ.ಮಂಗಳ ಅವರ ಬಳಿ ಮಾತನಾಡುವಾಗ ಕೇಳಿ ತಿಳಿದಿದ್ದೆ. ಅವರನ್ನು ಓದಿ ಅಭ್ಯಾಸ ಮಾ ಡುವ, ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಅಥವಾ ವ್ಯವಧಾನ ನನಗೆ ಇರಲಿಲ್ಲ. ನನ್ನ ಕೆಲಸ, ಬದುಕಿನ ಒತ್ತಡಗಳು ಹಾಗಿದ್ದವು. ವಿಜಯಾ ದಬ್ಬೆ, ಸುಮಿತ್ರಾ ಮೊದಲಾದ ಗೆಳತಿಯರು ಈ ಕುರಿತು ಮಾತನಾಡುವವರೆಗೆ ಈ ಹಿರಿಯ ಚೇತನಗಳ ಸಾಹಸ, ಸಾಧನೆಯ ಮಹತ್ವ, ಅವುಗಳನ್ನು ಅರಿಯುವ ಅಗತ್ಯವೂ ಗೊತ್ತಾಗಿರಲಿಲ್ಲ! ಆದರೆ ಆ ಮಹಾತಾಯಿಯನ್ನು ಪ್ರತ್ಯಕ್ಷ, ಅತಿ ಸನಿಹದಲ್ಲಿ ಕಂಡಿದ್ದೆ, ಎಂಬುದು ಧನ್ಯತಾಭಾವಕ್ಕೆ ಕಾರಣ.
ನಾವು ವಿ.ಎನ್. ಸುಬ್ಬರಾವ್ ಮೊದಲಾದ ಕೆಲವು ಪತ್ರಕರ್ತರು ವಿಶೇಷ ಸಂದರ್ಭವೊಂದರಲ್ಲಿ ಮದರಾಸಿಗೆ ಹೋಗಿದ್ದೆವು. ಚಲನ ಚಿತ್ರೋದ್ಯಮಕ್ಕೆ ಸಂಬಂಧಿಸಿದ ಕೆಲವು ಮಾಹಿತಿ ಸಂಗ್ರಹ ಅದರ ಉದ್ದೇಶವಾಗಿತ್ತು. ಹಿರಿಯ ತಂತ್ರಜ್ಞ, ಚಿತ್ರ ನಿರ್ದೇಶಕ ಬಿ.ಎಸ್. ರಂಗಾ ಅವರನ್ನು ಭೇಟಿ ಆದೆವು. ಅವರ ಸಂದರ್ಶನ ಆಗುತ್ತಿರುವಾಗಲೇ ಪದೇ ಪದೇ ಅವರು ಒಳಮನೆಗೆ ಹೋಗಿ ಬರುತ್ತಿದ್ದರು. ಯಾಕೆ ಸರ್, ನಮ್ಮಿಂದ ತೊಂದರೆ ಆಯಿತೆ? ಅಂತ ಕೇಳಿದೆ. ಛೆ, ತೊಂದರೆ ಅಲ್ಲ. ಬಾ ನಿನಗೆ ಏನೋ ನೋಡುವಂಥದ್ದು ಇದೆ ಅಂತ ಒಳಗೆ ಕರೆದೊಯ್ದರು.
ಎತ್ತರದ ಮಹಿಳೆಯೊಬ್ಬರು, ಅದೇ ಎತ್ತರದ ಕುರ್ಚಿಯಲ್ಲಿ ಕೂತಿದ್ದರು. ಸ್ವಸ್ಥವಾಗಿಲ್ಲ ಎಂದು ತಿಳಿಯುತ್ತಿತ್ತು. ತುಂಬಾ ವಯಸ್ಸಾಗಿತ್ತು. ಬಿಳಿ ಕೂದಲು ಗಂಟು ಹಾಕಿತ್ತು. ಇವರು ಯಾರು ಸರ್? ಎಲ್ಲೊ ನೋಡಿದೀನಿ ಅಂದೆ. ರಂಗಾ ಅವರು ನಕ್ಕು “ಹೌದಮ್ಮಾ, ಅವಳು ಲೋಕಕ್ಕೇ ತಾಯಿ. ಹೆಣ್ಣು ಮಕ್ಕಳಿಗಾಗಿ ಬದುಕೆಲ್ಲ ತೇದುಕೊಂಡವಳು. ನಿನ್ನ ಹಾಗೇ ಪತ್ರಕರ್ತೆ. ತನ್ನದೇ ಖರ್ಚಿನಲ್ಲಿ ’ಕರ್ನಾಟಕ ನಂದಿನಿ’ ಅಂತ ಪತ್ರಿಕೆ ಮಾಡಿದಳು; ’ಸತಿ ಹಿತೈಷಿಣಿ’ ಎಂಬ ಪ್ರಕಾಶನ ನಡೆಸಿದಳು. ಇವಳು ನನ್ನ ಸೋದರತ್ತೆ ತಿರುಮಲಾಂಬ ಅಂತ” ಎಂದರು. ಆಕೆಯ ಕಿವಿಯ ಬಳಿ ಬಗ್ಗಿ ನನ್ನ ಬಗ್ಗೆ ಹೇಳಿದರು. ಆಕೆ ನನ್ನತ್ತ ತಿರುಗಿ ನೋಡಿದರು. ಬಿಗು ಅನ್ನಿಸುವಂತಿದ್ದ ಮುಖ ಸಡಿಲಾಯಿತು. ತುಸುವೆ ಅರಳಿದ ತುಟಿಗಳು ನಗುತ್ತಿವೆ ಅನ್ನಿಸಿತು. ಅಥವಾ ಅದು ನನ್ನ ಭ್ರಮೆಯೋ! ನನಗೆ ತಿಳಿಯದಂತೆ ನಾನು ಆಕೆಗೆ ನಮಸ್ಕಾರ ಮಾಡಿದೆ. ತುಸು ಒರಟಾದ ಪಾದಗಳನ್ನು ತಾಗಿದಾಗ ಅವು ಹಿಂದೆ ಸರಿದವು. ಆಕೆಯ ಕೈಗಳನ್ನು ರಂಗಾ ಅವರೇ ನನ್ನ ತಲೆಯ ಮೇಲೆ ಇರಿಸಿದರು. ಆಕೆ ಏನೋ ಹೇಳಿದರು. ರಂಗಾ ಅವರು ತಮಿಳಿನಲ್ಲಿ ಉತ್ತರಿಸಿದರು. ’ಆಕೆಗೆ ನಿನ್ನ ನೋಡಿ ಸಂತೋಷವಾಗಿದ” ಎಂದರು. ಆಗ ನಾನು ಎಂತಹ ಮಹಾ ಚೈತನ್ಯದ ಬಳಿ ನಿಂತಿದ್ದೇನೆಂಬ ಪರಿವೆ ನನಗಿರಲಿಲ್ಲ.
ಮುಂದೆ ಚಿತ್ರೀಕರಣವೊಂದರಲ್ಲಿ ಭೇಟಿಯಾದಾಗ ರಂಗಾ ಅವರು ’ನನ್ನ ಸೋದರತ್ತೆ ತಿರುಮಲಾಂಬ ತೀರಿಕೊಂಡರಮ್ಮ’ ಎಂದರು. ಆಕೆಯ ನಿಧನ ಸುದ್ದಿಯಾದ ನೆನಪಿಲ್ಲ. ಆಗಿರಲೂಬಹುದು, ನಾನು ಗಮನಿಸಿಲ್ಲ. ಈಗ ತಿಳಿಯುತ್ತಿದೆ, ಅದೊಂದು ಧ್ರುವತಾರೆ. ಎಂಥ ಬೆಳಕಿನ ಸಾಮೀಪ್ಯ ನನಗೆ ಕೆಲಹೊತ್ತು ದಕ್ಕಿತ್ತು ಎಂಬ ನೆನಪೇ ಒಂದು ಸಾರ್ಥಕ ಭಾವವನ್ನು ತುಂಬಿ ತರುತ್ತಿದೆ. ಆ ಮಹಾ ಚೇತನಕ್ಕೆ ಮತ್ತೊಮ್ಮೆ ಮಗದೊಮ್ಮೆ ನಮಸ್ಕಾರ.
ಡಾ. ವಿಜಯಾ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.