ಚುನಾವಣಾ ಸಂಸ್ಕೃತಿ ಮತ್ತು ಮಹಿಳೆ – ಡಾ. ಟಿ. ಆರ್. ಚಂದ್ರಶೇಖರ್
ಚುನಾವಣಾ ಸಂಸ್ಕೃತಿಯು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಅದರಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಅನೇಕ ಸಮಸ್ಯೆಗಳಿವೆ. ಚುನಾವಣೆ ಎನ್ನುವುದು ಸಮಾನ ನೆಲೆಯ ಅಖಾಡವಲ್ಲ. ಯಾವುದನ್ನು ಸಮಾನತೆ ಅನ್ನುತ್ತೇವೆಯೋ ಅದು ಇಲ್ಲಿ ಇಲ್ಲ. ಹಣ, ಜಾತಿ, ಧರ್ಮ, ಲಿಂಗ, ತೋಳ್ಬಲ, ಕೌಟುಂಬಿಕ ಹಿನ್ನೆಲೆ ಮುಂತಾದವು ಇಲ್ಲಿ ಮುಖ್ಯವಾಗುತ್ತವೆ.
ಅನಿತಾ ಕುಮಾರಸ್ವಾಮಿ ಅವರಿಗೆ ದೊರೆತಂತಹ ಸವಲತ್ತು ರೂಪ ಹಾಸನ, ಮೊನ್ನೆ `ಮದ್ಯ ನಿಷೇಧ ಚಳುವಳಿ’ ಸಂಘಟಿಸಿದ್ದ ಸ್ವರ್ಣಾ ಭಟ್ ಅವರಿಗೆ ಇಲ್ಲದಿರುವುದರಿಂದ ಅವರು ರಾಜಕೀಯದಲ್ಲಿ ಬೆಳೆಯುವುದು ಸಾಧ್ಯವಾಗಿಲ್ಲ. ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಮತ್ತು ಸ್ಥಿತಿಗತಿ ಹೇಗಿರುತ್ತದೋ ಅದನ್ನು ಚುನಾವಣಾ ರಾಜಕೀಯ ಪ್ರತಿಫಲಿಸುತ್ತಿರುತ್ತದೆ. ಸಮಾಜವು ಶ್ರೇಣೀಕರಣದಿಂದ ಕೂಡಿದ್ದರೆ ಚುನಾವಣೆಯೂ ಶ್ರೇಣೀಕರಣದಿಂದ ಕೂಡಿರುತ್ತದೆ. ಸಮಾಜದಲ್ಲಿ ಲಿಂಗ ತಾರತಮ್ಯ, ಜಾತಿಯ ಪಾತ್ರ ಮುಖ್ಯವಾಗಿದ್ದರೆ ಚುನಾವಣಾ ಸಂಸ್ಕೃತಿಯೂ ಅದೇ ರೀತಿಯಲ್ಲಿರುತ್ತದೆ. ಇಲ್ಲಿ ಅಪವಾದಗಳಿರಬಹುದು.
ನಮ್ಮ ಕನ್ನಡ ವಿಶ್ವವಿದ್ಯಾಲಯದಲ್ಲಿ ನಾವು ಗ್ರಾಮ ಪಂಚಾಯತಿ ಚುನಾಯಿತ ಮಹಿಳಾ ಸದಸ್ಯರಿಗೆ ಕಾರ್ಯಾಗಾರ ಮಾಡುತಿದ್ದೆವು. ಆಗ ನಾನು ತಮಾಷೆ ಮಾಡುತ್ತಿದ್ದೆ. ಏನೆಂದರೆ ಇವರಿಗೆ ಮನೆಯ ಹಣಕಾಸು ವ್ಯವಹಾರ ನಿರ್ವಹಿಸುವ ಸ್ವಾತಂತ್ರ್ಯ – ಅಧಿಕಾರ ಇರುವುದಿಲ್ಲ. ಆದರೆ ಗ್ರಾಮ ಪಂಚಾಯತಿಯ ಬಜೆಟ್ಟನ್ನು ಸಿದ್ಧಪಡಿಸುವ ಅಧಿಕಾರ ನೀಡಲಾಗಿದೆ ಅಂತ. ಚುನಾವಣೆಯು ಸಾಮಾಜಿಕ ನಂಬಿಕೆ, ಸಂಪ್ರದಾಯಗಳು ಮತ್ತು ವ್ಯವಸ್ಥೆಯಿಂದ ಭಿನ್ನವಾಗಿರುವುದಿಲ್ಲ. ಸಮಾಜದಲ್ಲಿ ಕಂಡುಬರುವ ಭ್ರಷ್ಠಾಚಾರವು ಚುನಾವಣೆಯಲ್ಲಿಯೂ ವಿಜೃಂಭಿಸುತ್ತಿರುತ್ತದೆ. ಸಾಮಾಜಿಕವಾಗಿ ಏನು ನಡೆಯುತ್ತಿರುತ್ತದೋ ಅದಕ್ಕಿಂತ ಬೇರೆಯೇ ಆದ ರೀತಿಯಲ್ಲಿ ಚುನಾವಣೆಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಈ ಮಾತು ರಾಜಕೀಯದಲ್ಲಿ-ಚುನಾವಣೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆಯೂ ಹೇಳಬಹುದು.
ಮಹಿಳೆಯರ ಬಗ್ಗೆ ಸಮಾಜದಲ್ಲಿ ಯಾವ ಬಗೆಯ ಪರಿಕಲ್ಪನೆಯಿರುತ್ತದೋ, ಅವರ ಪಾತ್ರದ ಬಗ್ಗೆ ಯಾವ ಚಿತ್ರವನ್ನು ಸಮಾಜ ಕಟ್ಟಿಕೊಂಡಿರುತ್ತದೋ ಅದೇ ರೀತಿಯಲ್ಲಿ ಚುನಾವಣಾ ರಾಜಕೀಯದಲ್ಲಿಯೂ ನಡೆಯುತ್ತದೆ. ಪ್ರಸಿದ್ಧ ಮನುಧರ್ಮಶಾಸ್ತ್ರದ ಹೇಳಿಕೆ ನಮಗೆಲ್ಲ ಗೊತ್ತಿದೆ. ಮಗಳಾಗಿ ತಂದೆಯ, ಹೆಂಡತಿಯಾಗಿ ಗಂಡನ, ತಾಯಿಯಾಗಿ ಮಗನ ನಿಯಂತ್ರಣದಲ್ಲಿರಬೇಕು. ಇದು ಒಂದು ಸೂತ್ರ. ನಾವು ಮನುವಾದದ ಬಗ್ಗೆ, ಮನುಶಾಸ್ತ್ರದ ಬಗ್ಗೆ ಏನೇ ಟೀಕೆ ಟಿಪ್ಪಣಿ ಮಾಡಲಿ, ಪ್ರತಿಭಟನೆ ಮಾಡಲಿ ನಮ್ಮಲ್ಲಿ ನಡೆಯುವುದು ಮಾತ್ರ ಅದೇ. ಸಾಮಾಜಿಕ, ಆರ್ಥಿಕ, ರಾಜಕೀಯ ಮುಂತಾದವು ನಮ್ಮ ಸಂದರ್ಭದಲ್ಲಿ ಬೇರೆ ಬೇರೆಯಲ್ಲ. ಇವೆಲ್ಲ ಒಂದರೊಡನೊಂದು ಹೆಣೆದುಕೊಂಡು ಬಿಟ್ಟಿರುತ್ತದೆ. ಮನುಸ್ಮೃತಿ ನಮ್ಮ ಸಂವಿಧಾನವಾಗಬೇಕು ಎಂದು ಇಂದು ಅಬ್ಬರಿಸಲಾಗುತ್ತಿದೆ. ಚುನಾವಣಾ ಸಂಸ್ಕೃತಿ ಮನುಧರ್ಮದ ನಿಯಮದಲ್ಲಿ ನಡೆಯುವಂತಾದರೆ ಮಹಿಳೆಯರ ರಾಜಕೀಯ ಸಹಭಾಗಿತ್ವ ಏನಾಗುತ್ತದೆ ಎನ್ನುವುದನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಈ ಹಿನ್ನೆಲೆಯಲ್ಲಿ ಲಿಂಗ ಸಂಬಂಧಗಳನ್ನು ಕುರಿತಂತೆ ಕೆಲವು ಸಂಗತಿಗಳನ್ನು ಇಲ್ಲಿ ಚರ್ಚೆ ಮಾಡಬಹುದು.
ಚುನಾವಣೆಯು ಪ್ರಜಾಪ್ರಭುತ್ವ ಪ್ರಕ್ರಿಯೆಯ ಒಂದು ಭಾಗ. ಸಮಾಜದಲ್ಲಿನ ಎಲ್ಲರಿಗೂ ಇದರಲ್ಲಿ ಭಾಗವಹಿಸುವ ಹಕ್ಕಿದೆ. ಮತ ಚಲಾಯಿಸುವುದಕ್ಕೆ, ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ, ಮಂತ್ರಿ-ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಯಾಗುವುದಕ್ಕೆ ಎಲ್ಲರಿಗೂ ಸಂವಿಧಾನ ಹಕ್ಕು ನೀಡಿದೆ.
ಆದರೆ ಜಾತಿ-ಧರ್ಮ, ಲಿಂಗ, ಪ್ರದೇಶ, ಅಂತಸ್ತು ಮುಂತಾದ ಸಂಗತಿಗಳಿಂದಾಗಿ ನಮ್ಮ ಚುನಾವಣೆಗಳಲ್ಲಿ ಎಲ್ಲರೂ ಸಮಾನ ನೆಲೆಯಲ್ಲಿ ಭಾಗವಹಿಸುವುದು ಸಾಧ್ಯವಾಗುವುದಿಲ್ಲ. ಏಕೆಂದರೆ ಜಾತಿ ಸಂಬಂಧಗಳು, ವರಮಾನದಲ್ಲಿನ ಅಂತರಗಳು, ಲಿಂಗ ಅಸಮಾನತೆ, ಹೆಣ್ಣಿನ ಬಗೆಗಿನ ತಾರತಮ್ಯಗಳು ಇಲ್ಲಿ ಕೆಲಸ ಮಾಡುತ್ತಿರುತ್ತವೆ.
ಒಂದು ಉದಾಹರಣೆ: ಒಂದು ವರದಿ ಪ್ರಕಾರ 2018ರಲ್ಲಿದ್ದ ಒಟ್ಟು ಮಹಿಳಾ ಮತದಾರರ ಸಂಖ್ಯೆ 42.11 ಕೋಟಿಯಾದರೆ ಪುರುಷ ಮತದಾರರ ಸಂಖ್ಯೆ 45.79 ಕೋಟಿ. ಇಲ್ಲ ಮಹಿಳಾ ಮತದಾರರ ಸಂಖ್ಯೆಯು ಪುರುಷ ಸಂಖ್ಯೆಗಿಂತ 3.68 ಕೋಟಿ ಕಡಿಮೆಯಿದೆ.
ಈ ಸಮಸ್ಯೆ ಕುರಿತಂತೆ ಜಾಗತಿಕ ಮಟ್ಟದಲ್ಲಿ ಯುಎನ್‍ಒ ಹೇಳುವುದು ಇದು: ಮಹಿಳೆಯರು ಈ ಜಗತ್ತಿನ ಅತ್ಯಂತ ದೊಡ್ಡ ಎಕ್ಸ್‍ಕ್ಲೂಶನ್ ಗುಂಪಿನವರು. ಈ ಎಕ್ಸ್‍ಕ್ಲೂಶನ್ ಗೆ ಜಾತಿ ಕಾರಣವಾಗಿರಬಹುದು, ಧರ್ಮ ಕಾರಣವಾಗಿರಬಹುದು, ಲಿಂಗ ಪಾತ್ರವೂ ಇರಬಹುದು. ಹಣಬಲದ ಪಾತ್ರವನ್ನು ಅಲ್ಲಗಳೆಯಲು ಬರುವುದಿಲ್ಲ.
ಚುನಾವಣಾ ಸಂಸ್ಕೃತಿ ಅಂದರೆ ಕೇವಲ ಚುನಾವಣೆಯಲ್ಲಿ ಸ್ಪರ್ಧಿಸುವುದು ಅಥವಾ ಎಂಪಿ, ಎಮ್‍ಎಲ್‍ಎ, ಎಂಎಲ್‍ಸಿ ಆಗುವುದು ಮಾತ್ರವಲ್ಲ. ಅದು ಅನೇಕ ಸಂಗತಿಗಳನ್ನು ಒಳಗೊಳ್ಳುತ್ತದೆ (1) ಚುನಾವಣೆಯಲ್ಲಿ ಸ್ಪರ್ಧಿಸುವುದು, (2) ರಾಜಕೀಯ ಪಕ್ಷವೊಂದರ ಸದಸ್ಯರಾಗುವುದು, (3) ಚುನಾವಣೆಯಲ್ಲಿನ ಪ್ರಚಾರದಲ್ಲಿ ಭಾಗವಹಿಸುವುದು, (4) ರಾಜಕೀಯ ಸಭೆಗಳಲ್ಲಿ, ಮೆರವಣಿಗೆಗಳಲ್ಲಿ ಭಾಗವಹಿಸುವುದು, (5) ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದು, (6) ಸರ್ಕಾರಿ ಅಧಿಕಾರಗಳನ್ನು ಸಾರ್ವಜನಿಕರ ಕೆಲಸಗಳಿಗಾಗಿ ಸಂಪರ್ಕಿಸುವುದು, (7) ಸಾರ್ವಜನಿಕವಾಗಿ ರಾಜಕೀಯ ನಿಲುವನ್ನು ವ್ಯಕ್ತಪಡಿಸುವುದು (8) ರಾಜಕೀಯ ಚರ್ಚೆ, ಸಂವಾದಗಳಲ್ಲಿ ಭಾಗವಹಿಸುವುದು (9) ಮತದಾನ ಮಾಡುವುದು (10) ರಾಜಕೀಯಕ್ಕೆ ಸಂಬಂಧಿಸಿದಂತೆ ಸೈದ್ಧಾಂತಿಕ ಬದ್ಧತೆಯನ್ನು ತಳೆಯುವುದು ಇತ್ಯಾದಿ.
ಚುನಾವಣೆಗೆ ಯಾರು ನಿಲ್ಲಬೇಕು, ಯಾವ ಪಕ್ಷದಿಂದ ನಿಲ್ಲಬೇಕು, ಎಷ್ಟು ಹಣ ಖರ್ಚು ಮಾಡಬೇಕು ಮತ್ತು ಹೇಗೆ ಪ್ರಚಾರ ಮಾಡಬೇಕು, ಕೊನೆಗೆ ಯಾರಿಗೆ ಮತ ನೀಡಬೇಕು ಎಂಬುದನ್ನು ನಮ್ಮ ಸಮಾಜದ ಸಂದರ್ಭದಲ್ಲಿ ತೀರ್ಮಾನಿಸುವವರು ಪುರುಷರು. ಇದಕ್ಕೆ ಅಪವಾದಗಳಿರಬಹುದು. ಆದರೆ ಅಪವಾದಗಳು ನಿಯಮಗಳಾಗಲು ಸಾಧ್ಯವಿಲ್ಲ. ಇದರಲ್ಲಿ ಮಹಿಳೆಯರಿಗೆ ಅವಕಾಶ-ಪ್ರವೇಶ ಇದ್ದಂತೆ ಇಲ್ಲ. ಕುಟುಂಬಮಟ್ಟದಲ್ಲಿಯೂ ಇದೇ ಕ್ರಮ. ಅದು ರಾಜಕೀಯದಲ್ಲಿಯೂ ಮುಂದುವರಿಯುತ್ತದೆ. ಇದು ಕೇವಲ ರಾಜಕೀಯ, ಸಾಮಾಜಿಕ ಅಥವಾ ಆರ್ಥಿಕ ಕ್ಷೇತ್ರಗಳಿಗೆ ಮಾತ್ರ ಸೀಮಿತವಲ್ಲ. ಇದು ಧಾರ್ಮಿಕ ಕ್ಷೇತ್ರಗಳಿಗೂ ಅನ್ವಯವಾಗುವ ಸಂಗತಿಯಾಗಿದೆ. ಧಾರ್ಮಿಕ ಹಕ್ಕುಗಳನ್ನು ನಾವು ಮಹಿಳೆಯರಿಗೆ ನೀಡಿಲ್ಲ. ಅಲ್ಲಿ ಆಕೆಗೆ ಸ್ವಾತಂತ್ರ್ಯವಿಲ್ಲ. ಇದು ರಾಜಕೀಯ ಕ್ಷೇತ್ರಕ್ಕೂ ವಿಸ್ತರಣೆಗೊಂಡಿದ್ದರೆ ಅದರಲ್ಲಿ ಆಶ್ಚರ್ಯದ ಸಂಗತಿಯೇನಿದೆ? ಧಾರ್ಮಿಕ ಕ್ಷೇತ್ರದಲ್ಲಿ ಮುಟ್ಟು-ತಟ್ಟು ಆಚರಣೆಯಿದೆಯೋ ಅದೇ ರೀತಿಯ ನಿಬಂಧನೆಗಳು ರಾಜಕೀಯದಲ್ಲಿಯೂ ನಡೆಯುತ್ತದೆ. ಮಹಿಳೆಯರು ಚುನಾವಣೆಯಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿದಂತೆ ನೀವು ಗೆಲ್ಲುವ ಹುರಿಯಾಳಲ್ಲ, ನಿಮಗೆ ಜಾತಿ ಬಲ ಇಲ್ಲ. ನಿಮ್ಮಲ್ಲಿ ಹಣವಿಲ್ಲ ಮುಂತಾದವು ನೆಪಗಳನ್ನು ಇಲ್ಲಿ ಮುಂದುಮಾಡಲಾಗುತ್ತದೆ.
ನಮ್ಮ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕವಾದುದಾಗಿದೆ. ವಾಸ್ತವವಾಗಿ ಮಹಿಳಾ ದುಡಿಮೆಗಾರರ ಸಹಭಾಗಿತ್ವ ಪ್ರಮಾಣ ಅತ್ಯಂತ ಕೆಳಮಟ್ಟದಲ್ಲಿದೆ. ಅದು ದುಡಿಮೆಗಾರರದ್ದು ಇರಬಹುದು ಅಥವಾ ಕಾರ್ಮಿಕರ ಸಹಭಾಗಿತ್ವವಿರಬಹುದು. ಇದಕ್ಕೆ ಅನೇಕ ಕಾರಣಗಳಿವೆ. 1. ಮಹಿಳೆಯರ ದುಡಿಮೆಯನ್ನು ಜನಗಣತಿಯಲ್ಲಿ ದಾಖಲಿಸುವ ಸಮಸ್ಯೆ. 2. ಮಹಿಳೆಯರು ನಿರ್ವಹಿಸುವ ಮನೆವಾರ್ತೆಯನ್ನು ಗಣನೆ ಮಾಡುವುದಕ್ಕೆ ಸಂಬಂಧಿಸಿದ ಸಮಸ್ಯೆ. 3. ಸಮಾಜದಲ್ಲಿನ ಮಹಿಳೆಯರ ಆರ್ಥಿಕ –ಮನೆ ಹೊರಗೆ ದುಡಿಯುವುದರ ಬಗೆಗಿನ ಸಮಸ್ಯೆ. 4. ಸಂಗೋಪನಾ ಜವಾಬ್ದಾರಿ ಕೇರಿಂಗ್ ರೆಸ್ಪಾನ್ಸಿಬಲಿಟಿ ನಿರ್ವಹಣೆ. 5. ಮಹಿಳೆಯರನ್ನು ಉತ್ಪಾದಕರೆಂದು ಪರಿಗಣಿಸದಿರುವುದು. ಅವರನ್ನು ಅನುಭೋಗಿಗಳೆಂದು ಪರಿಗಣಿಸಿರುವುದು. ಮಹಿಳೆಯರ ಜವಾಬ್ದಾರಿ ಸಂತಾನೋತ್ಪತ್ತಿ. ಪುರುಷರದ್ದು ಉತ್ಪಾದನಾ ಜವಾಬ್ದಾರಿ. 6. ಮಹಿಳೆಯರದ್ದು ಮನೆ, ಸಂಸಾರ, ಮಕ್ಕಳು, ಗಂಡ-ಒಟ್ಟಾರೆ ಖಾಸಗಿಯಾದುದು, ಅವಳಿಗೆ ಸಾಮಾಜಿಕ ಪಾತ್ರ-ಜವಾಬ್ದಾರಿ ಎನ್ನುವುದು ಇರುವುದಿಲ್ಲ. ಒಂದು ಉದಾಹರಣೆ: ಒಟ್ಟು ಭೂರಹಿತರಲ್ಲಿ ಪುರುಷರ ಪ್ರಮಾಣ ಶೇ.17.97ರಷ್ಟಿದ್ದರೆ ಮಹಿಳೆಯರ ಪ್ರಮಾಣ ಶೇ.40.33. ಇದು ಆಸ್ತಿ ಹಕ್ಕಿಗೆ ಸಂಬಂಧಿಸಿದ ಪ್ರಶ್ನೆ. ಮಹಿಳೆಯರಿಗೆ ಆಸ್ತ್ತಿ ಹಕ್ಕನ್ನು ನೀಡಲಾಗಿದ್ದರೂ ಅದನ್ನು ಚಲಾಯಿಸುವ ಸ್ಥಿತಿಯಲ್ಲಿ ಮಹಿಳೆಯರಿಲ್ಲ.
ದುಡಿಮೆ ಮತ್ತು ಉದ್ಯೋಗ ಭಿನ್ನ ಭಿನ್ನ. ಮಹಿಳೆಯರು ದುಡಿಮೆ ಲೋಕದಲ್ಲಿ ಇದ್ದಾರೆ. ಆದರೆ ಉದ್ಯೋಗ ಜಗತ್ತಿನಲ್ಲಿ ಅವರ ಪ್ರಮಾಣ ಕಡಿಮೆ. ದುಡಿಮೆಯಲ್ಲಿ ಅವರು ಇನ್ ಕ್ಲೂಡೆಡ್ . ಆದರೆ ಉದ್ಯೋಗದಲ್ಲಿ ಅವರು ಎಕ್ಸ್ ಕ್ಲೂಡೆಡ್.
ಮಹಿಳೆಯರನ್ನು ಆರ್ಥಿಕ ಆಯಾಮದಲ್ಲಿ ಸಮಾಜ ನೋಡಲು ಇಷ್ಟಪಡುವುದಿಲ್ಲ. ಅವರು ದುಡಿಮೆ ಮಾರುಕಟ್ಟೆಯಲ್ಲಿದ್ದರೂ ಕೂಡ, ಕುಟುಂಬಕ್ಕೆ ವರಮಾನ ನೀಡುತ್ತಿದ್ದರೂ ಸಾಂಸ್ಕೃತಿಕವಾಗಿ ಮಹಿಳೆಯರನ್ನು ಜೈವಿಕ ನೆಲೆಯಲ್ಲಿಯೇ ನೋಡಲಾಗುತ್ತದೆ. ಅವರ ದುಡಿಮೆಯ ಆರ್ಥಿಕ ಮಹತ್ವವನ್ನು ಸಮಾಜ ಗುರುತಿಸುತ್ತಿಲ್ಲ. ಅವರು ಯಾವತ್ತೂ ಗ್ರಾಹಕರೆ-ಅನುಭೋಗಿಗಳೇ. ಆಕೆ ಗೃಹಿಣಿಯೇ ವಿನಾ `ಬ್ರೆಡ್‍ವಿನ್ನರ್’ ಅಲ್ಲ. ಮುಕ್ಕಾಲುಪಾಲು ದುಡಿಮೆಯ ಕುಟುಂಬಗಳಲ್ಲಿ ಮಹಿಳೆಯರ ಕಾಣಿಕೆ ಕುಟುಂಬದ ವರಮಾನಕ್ಕೆ ಸಾಕಷ್ಟಿರುತ್ತದೆ.
ರಾಜಕೀಯ ಪ್ರಾತಿನಿಧ್ಯ: ಆರ್ಥಿಕ ಕ್ಷೇತ್ರದಲ್ಲಿ ಹೇಗೋ ಅದೇ ರೀತಿಯಲ್ಲಿ ರಾಜಕೀಯದಲ್ಲಿಯೂ ಅವರ ಪ್ರಾತಿನಿಧ್ಯ ಕನಿಷ್ಟ. ಇವೆಲ್ಲ ಬೇರೆ ಬೇರೆ ಅಲ್ಲ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ—ಎಲ್ಲವೂ ಪರಸ್ಪರ ಕೆಲಸ ಮಾಡುವ ಸಂಗತಿಗಳು. ಕೆಲವು ಅಂಕಿಅಂಶಗಳು: 1. 1951ರಲ್ಲಿ ಲೋಕಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ.5. ಇದು 2014ರಲ್ಲಿ 12.2ಕ್ಕೇರಿದೆ. ಮಹಿಳಾ ಸದಸ್ಯರ ಸಂಖ್ಯೆ 66. ಕರ್ನಾಟಕ ವಿಧಾನಸಭೆಯಲ್ಲಿ 2018ರಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ. 3. ನಮ್ಮ ದೇಶದಲ್ಲಿನ ಒಟ್ಟು ಮಹಿಳೆಯರಲ್ಲಿ 2014ರಲ್ಲಿ ಮತ ಚಲಾಯಿಸಿದವರ ಪ್ರಮಾಣ ಶೇ.71. ಪುರುಷರಲ್ಲಿ ಇದು ಶೇ.70.
ಪುರುಷಶಾಹಿ/ಪುರುಷಪ್ರಧಾನ ಸಾಮಾಜಿಕ ವ್ಯವಸ್ಥೆಯು ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪುರುಷಶಾಹಿ ಎನ್ನುವುದು ಅಥವಾ ಪುರುಷಶಾಹಿ ಮೌಲ್ಯಗಳು ಪುರುಷರಿಗೆ ಮಾತ್ರ ಸಂಬಂಧಪಟ್ಟ ಸಂಗತಿಗಳಲ್ಲ. ಸಾಮಾಜೀಕರಣದ ಕಾರಣವಾಗಿ, ಮಹಿಳೆಯರಲ್ಲಿಯೂ ಅವು ಕಂಡು ಬರುತ್ತವೆ. ಗಂಡು ಮಗುವಿನ ವ್ಯಾಮೋಹ ಮಹಿಳೆಯರಲ್ಲಿಯೂ ವ್ಯಾಪಕವಾಗಿದೆ. ಇಡೀ ಕುಟುಂಬವೇ ಪುರುಷಪ್ರಧಾನ ಮೌಲ್ಯಗಳನ್ನು ಒಪ್ಪಿಕೊಂಡಿರುವಾಗ, ಆರಾಧಿಸುವಾಗ ಮಹಿಳೆಯು ಅಲ್ಲಿ ಭಿನ್ನವಾಗಿರುವುದು ಕಷ್ಟಸಾಧ್ಯ.
ಮಹಿಳೆಯರ ರಾಜಕೀಯ ಪ್ರಾತಿನಿಧ್ಯವನ್ನು ಅಥವಾ ಯಾವುದೇ ಮಹಿಳಾ ಪರ ಸಂಗತಿಗಳನ್ನು ಸಾಧನ-ಸಂಪತ್ತನ್ನಾಗಿ ನೋಡುವ ಕ್ರಮದ ಬಗ್ಗೆ ಸಮಸ್ಯೆಯಿದೆ. ರಾಜಕೀಯ ಪ್ರಾತಿನಿಧ್ಯ ನೀಡಿದರೆ ರಾಜಕೀಯ ಶುದ್ಧವಾಗುತ್ತದೆ. ಆರ್ಥಿಕವಾಗಿ ಅವರ ಕಾಣಿಕೆಯನ್ನು ಪರಿಗಣಿಸಿದರೆ ಅಭಿವೃದ್ಧಿಗೆ ನೆರವಾಗುತ್ತದೆ. ಸಾಮಾಜಿಕವಾಗಿ ಅವರಿಗೆ ಮಹತ್ವ ನೀಡುವುದರಿಂದ ಸಮಾಜದಲ್ಲಿ ಸೌಹಾರ್ದತೆ ಉತ್ತಮವಾಗುತ್ತದೆ – ಇವೆಲ್ಲ ತನ್ನದೇ ಇತಿಮಿತಿಯಲ್ಲಿ ಕೆಲಸ ಮಾಡುತ್ತವೆ. ಆದರೆ ಅವಳನ್ನು ಮನುಷ್ಯಳನ್ನಾಗಿ ನೋಡುವ ಕ್ರಮ ಮುಖ್ಯ.
ಲಿಂಗ ಸಮಾನತೆ ಎಂಬ ಮೌಲ್ಯವನ್ನು ಇಂದು ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗಿದೆ. ಇಲ್ಲಿ ಒಂದು ಸಮಸ್ಯೆಯಿದೆ. ಇದನ್ನು ಒಂದು ಜೆಂಡರ್ ಮೌಲ್ಯವನ್ನಾಗಿ ಒಪ್ಪಿಕೊಳ್ಳಲಾಗಿದೆಯೇ ವಿನಾ ಸಾಮಾಜಿಕ ಮೌಲ್ಯವನ್ನಾಗಿಯಲ್ಲ. ಇದು ಬಹಳ ಮುಖ್ಯವಾದ ಸಂಗತಿ. ಸಾಮಾಜಿಕವಾಗಿ ಅದಕ್ಕೆ ಮನ್ನಣೆ ಇದ್ದಂತೆ ಕಾಣುವುದಿಲ್ಲ. ಲಿಂಗ ಸಮಾನತೆ ಎನ್ನುವುದನ್ನು ಒಂದು ಸಾಧನವನ್ನಾಗಿ ಗುರುತಿಸಲಾಗುತ್ತಿದೆ. ಮತ್ತೇನನ್ನೋ ಸಾಧಿಸಿಕೊಳ್ಳಲು ಬೇಕಾದ ಒಂದು ಸಾಧನವನ್ನಾಗಿ ಅದನ್ನು ಸಮಾಜ ಒಪ್ಪಿಕೊಂಡಿರುವಂತೆ ಕಾಣುತ್ತದೆ. ಇದು ಬದಲಾಗಬೇಕು. ಲಿಂಗ ಸಮಾನತೆಯು ತನ್ನಷ್ಟಕ್ಕೆ ಮಹತ್ವವಾದ ಸಂಗತಿ ಎಂಬುದನ್ನು ನಾವು ಪರಿಗಣಿಸಬೇಕು. ಆಕೆಗೆ ಒಂದು ಘನತೆಯನ್ನು, ವ್ಯಕ್ತಿತ್ವವನ್ನು ಅದು ನೀಡುತ್ತದೆ.
ಮಹಿಳೆಯರಿಗೆ ತನ್ನದೇ ಆದ ಹಿತಾಸಕ್ತಿಗಳು ಇರುತ್ತವೆಯೇ? ಇಲ್ಲ್ಲ ಎನ್ನುತ್ತದೆ ಸಮಾಜ. ಅವರ ಹಿತಾಸಕ್ತಿಗಳೇನಿದ್ದರೂ ಕುಟುಂಬ, ಗಂಡ, ಮಕ್ಕಳು- ಇತ್ಯಾದಿ ಇತ್ಯಾದಿ. ‘ಎಲ್ಲಕ್ಕೆ ಮನೆತನದ ಉದ್ದಾರಸೂತ್ರ’ ಎನ್ನುವುದು ಸಮಾಜದಲ್ಲಿರುವ ನಂಬಿಕೆ. ಆದರೆ ಕವಿಗೆ ಇದು ಹೆಣ್ಣು ಒಂದು ಮುಖ ಮಾತ್ರ. ‘ಅವ್ವ’ ಕವನದಲ್ಲಿ ‘ಸರೀಕರ ಮುಂದೆ ತಲೆಯೆತ್ತಿ ನಡೆಯಲಿಕ್ಕೆ’ ಎನ್ನುವ ಮಾತು ಬರುತ್ತದೆ. ಆಕೆಗೆ ತನ್ನದೇ ಆದ ಒಂದು ಗುರಿಯಿದೆ. ಹಿತಾಸಕ್ತಿಗಳಿಲ್ಲ್ಲದೆ ಇರುತ್ತದೆಯೇ? ಹಾಗೆ ಸ್ವಂತದ, ತನ್ನದ್ದು ಎನ್ನುವ ಆಸೆ-ಆಕಾಂಕ್ಷೆಗಳನ್ನು ಇಟ್ಟುಕೊಳ್ಳದಂತೆ ಮಹಿಳೆಯರನ್ನು ಬೆಳೆಸಲಾಗಿರುತ್ತದೆ. ನಮ್ಮ ಪರಂಪರೆಯಲ್ಲಿ ಸೀತೆ, ಸಾವಿತ್ರಿ, ಅನುಸೂಯ- ಬಿಟ್ಟರೆ ಯಾರು ಆದರ್ಶ ಸ್ತ್ರೀ? ದುಡಿಯುವ ಹೆಣ್ಣನ್ನು ನಾವು ಯಾವತ್ತಾದರೂ ಆದರ್ಶ ಹೆಣ್ಣಾಗಿ ಗುರುತಿಸಿಕೊಂಡಿದ್ದೇವೆ? ದುಡಿಮೆಯನ್ನೇ ಹಾಸು ಹೊದ್ದುಕೊಳ್ಳುವ ಸ್ಥಿತಿಯಿದ್ದರೂ ಆದರ್ಶಕ್ಕೆ ಮಾತ್ರ ಸೀತೆ-ಸಾವಿತ್ರಿ ಇಲ್ಲವೇ ಕುಂತಿ-ದ್ರೌಪದಿ. ಒಬ್ಬ ಕೂಲಿ ಹೆಣ್ಣು ಮಗಳಿಗೆ ತಮ್ಮ ಪರಂಪರೆಯ ಯಾವ ಹೆಣ್ಣು ಆದರ್ಶವಾಗಿ ಇದೆ ಹೇಳಿ? ಆಕೆಗೂ ಸೀತೆ ಸಾವಿತ್ರಿಯೇ ಆದರ್ಶ.
ಈಗ ಸ್ಥಿತಿ ಬದಲಾಗುತ್ತಿದೆ. ಅದು ಬೇರೆ ಸಂಗತಿ. ಈ ಕಾರಣಕ್ಕೆ ಇರಬೇಕು ವರ್ಜೀನಿಯ ವುಲ್ಫ್ ತನ್ನ ಪ್ರಸಿದ್ಧ ಪ್ರಬಂಧವೊಂದರಲ್ಲಿ ಹೆಣ್ಣಿಗೆ ಹಣಬೇಕು, ತನ್ನದೇ ಸ್ವಂತ ರೂಮ್- ಸ್ಥಳ ಬೇಕು – ಎ ರೂಮ್ ಆಫ್ ಒನ್ಸ್ ಓನ್ ಎನ್ನುತ್ತಾಳೆ. ಇದು ನಮ್ಮ ಸಂದರ್ಭದಲ್ಲಿ ರಾಜಕೀಯಕ್ಕೂ ಅನ್ವಯವಾಗುತ್ತದೆ. ವುಲ್ಫ್ ಸಾಹಿತ್ಯ ರಚನೆಗೆ ಸಂಬಂಧಿಸಿದಂತೆ ಇದನ್ನು ಹೇಳಿರಬಹುದು. ಆದರೆ ಮಹಿಳೆಯರ ರಾಜಕೀಯ ಪ್ರವೇಶಕ್ಕೂ ಇದು ಅನ್ವಯವಾಗುತ್ತದೆ.
ಸ್ವಂತದ್ದೂ, ತನ್ನದೂ, ಸ್ವಪ್ರಜ್ಞೆ, ತನ್ನದೇ ಜ್ಞಾನ – ಇದರ ಆಧಾರದ ಮೇಲೆ ಮಹಿಳೆಯರು ನಮ್ಮಲ್ಲಿ ರಾಜಕೀಯ ಮಾಡುವ ಸ್ಥಿತಿಯಿಲ್ಲ. ಎಲ್ಲದಕ್ಕೂ ತಂದೆ/ಗಂಡ/ಅಣ್ಣ/ತಮ್ಮ/ಮಗನನ್ನು ಅವಲಂಬಿಸುವ ಸ್ಥಿತಿಯಿದೆ. ಸ್ವತಂತ್ರವಾಗಿ ರಾಜಕೀಯ ಮಾಡುವುದು ಮಹಿಳೆಯರಿಗೆ ತುಂಬ ಕಷ್ಟ. ಇದರಲ್ಲಿ ಕೆಲವು ಅಪವಾದಗಳಿರಬಹುದು. ನಮ್ಮ ಸಮಾಜದಲ್ಲಿ ಮಹಿಳೆಯರು ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳುವ, ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಕಡಿಮೆ.
ನಮ್ಮ ಸಮಾಜದಲ್ಲಿ ಅನೇಕ ಮಹಿಳೆಯರು ಉದ್ದಿಮೆ, ವ್ಯಾಪಾರ, ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್, ಹಣಕಾಸು ವ್ಯವಹಾರ ಮುಂತಾದ ಕ್ಷೇತ್ರದಲ್ಲಿ ಉನ್ನತಮಟ್ಟದ ಹುದ್ದೆಗಳಲ್ಲಿದ್ದಾರೆ. ಇಲ್ಲಿರುವ ವಿಚಿತ್ರವನ್ನು ಗಮನಿಸಬೇಕು. ಹಣಕಾಸು ವ್ಯವಹಾರ ಮಹಿಳೆಯರಿಗೆ ಸಲ್ಲ ಎಂಬುದು ನಮ್ಮ ಸಮಾಜದಲ್ಲಿರುವ ನಂಬಿಕೆ. ಆದರೆ ಬಹಳಷ್ಟು ಹಣಕಾಸು ಕಾರ್ಪೋರೇಟ್ ಕಂಪನಿಗಳ ಮುಖ್ಯಸ್ಥರು ಮಹಿಳೆಯರಾಗಿದ್ದಾರೆ. ಚಂದ ಕೊಚ್ಚಾರ್, ಅರುಂಧತಿ ಭಟ್ಟಾಚಾರ್ಯ, ಕಿರಣ್ ಮುಜುಂದಾರ್, ಏಕ್ತಾ ಕಪೂರ್, ನಿತಾ ಅಂಬಾನಿ, ಐಎಮ್‍ಎಫ್ ಚೀಫ್ ಎಕನಾಮಿಸ್ಟ್ ಗೀತಾ ಗೋಪಿನಾಥ್ ಮುಂತಾದವರು. ಅತ್ಯಂತ ಉನ್ನತಮಟ್ಟದ ಸಂಗತಿಯಾಯಿತು. ಮಧ್ಯಮಮಟ್ಟದಲ್ಲಿ, ತಳಮಟ್ಟದಲ್ಲಿ ಮಹಿಳೆಯರ ಸಾಧನೆ ಹೇಳಿಕೊಳ್ಳುವಂತಿಲ್ಲ.
ರಾಜಕೀಯ ಎನ್ನುವುದು ಏಕರೂಪದಲ್ಲಿರುವುದಿಲ್ಲ. ಅದು ಏಕಾಕಾರಿಯಾದುದಲ್ಲ. ಉದಾಹರಣೆಗೆ ಮದ್ಯ ನಿಷೇಧ ಚಳುವಳಿಯಲ್ಲಿ ಭಾಗವಹಿಸಿದ್ದ ಮಹಿಳೆಯರ ರಾಜಕಾರಣ ಒಂದು ಬಗೆಯದ್ದು. ಇವರು ಉದ್ಯೋಗ ಕೇಳಲಿಲ್ಲ, ಆಹಾರ ಕೇಳಿಲ್ಲ, ಆರೋಗ್ಯ ಸೌಲಭ್ಯ ಕೇಳಲಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ಮೂರು ದಿನಗಳ ಮುಷ್ಕರ ನಡೆಸಿದರಲ್ಲ ಅವರ ರಾಜಕೀಯ ಬೇರೆ ರೀತಿಯದ್ದು. ಗಾರ್ಮೆಂಟ್ ಮಹಿಳೆಯರು ಪ್ರಾವಿಡೆಟ್ ಫಂಡ್‍ಗೆ ಸಂಬಂಧಿಸಿದ ನಿಯಮ ಬದಲಾದಾಗ ದಿಡೀರನೆ 2016ರಲ್ಲಿ ನಡೆಸಿದ ಮುಷ್ಕರದ ರಾಜಕಾರಣ ಭಿನ್ನವಾದುದು. ಮಂಡ್ಯದಲ್ಲಿನ ಸುಮಲತ ನಡೆಸುತ್ತಿರುವ ರಾಜಕಾರಣ ಇನ್ನೊಂದು ಬಗೆಯದ್ದಾಗಿದೆ. ಆದೇ ರೀತಿ ಜಯಮಾಲ-ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ರಾಜಕಾರಣ ಮತ್ತೊಂದು ಬಗೆಯದ್ದು. ನರೇಗ ಕಾರ್ಯಕ್ರಮದ ಮಹಿಳಾ ಕಾರ್ಮಿಕರಿಗೆ ಕೂಲಿ ಸರಿಯಾಗಿ ಪಾವತಿಯಾಗುತ್ತಿಲ್ಲ ಎಂಬುದು ಮುಖ್ಯ ಪ್ರಶ್ನೆ. ಬಡವರ, ದುಡಿಮೆಗಾರರ, ಭೂರಹಿತರ, ಗ್ರಾಮೀಣರ, ಬೆಂಗಳೂರಿಗೆ ದುಡಿಮೆಗಾಗಿ ವಲಸೆ ಬಂದು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ನಿರತರಾದ ಮಹಿಳೆಯರು ಬದುಕಿನ ರಾಜಕಾರಣದ ಪ್ರಶ್ನೆ ಬೇರೆ ರೀತಿಯದು. ಚುನಾವಣ ರಾಜಕಾರಣದಲ್ಲಿ ಮುಖ್ಯ್ಯ ಪ್ರಶ್ನೆ ಗೆಲ್ಲುವುದು ಮುಖ್ಯವಾಗಿ ಜನರ ಬದುಕು-ಬವಣೆಗಲು ಮುಖ್ಯವಾಗುವುದಿಲ್ಲ. ಇಂದು ಚುನಾವಣೆಯಲ್ಲಿ ಯಾವುದು ಚರ್ಚೆಯಲ್ಲಿರುವ ಸಮಸ್ಯೆ? ಯಾವುದೂ ಇಲ್ಲ. ಗೆಲ್ಲುವುದು ಹೇಗೆ ಎಂಬುದು ಮಾತ್ರ ನಿರ್ಣಾಯಕವಾದ ಪ್ರಶ್ನೆಯಾಗಿದೆ.
ಇಂದು ಸ್ತ್ರೀವಾದವೂ ಕೂಡ ಕಾರ್ಪೋರೇಟ್ ಸ್ವರೂಪ ತಳೆದಿರುವುದನ್ನು ಕಾಣಬಹುದು. ಉದಾಹರಣೆಗೆ ಶೆರ್ಲಿ ಸ್ಯಾಂಡ್‍ಬರ್ಗ್ ಅವರ ‘ಲೀನ್ ಇನ್: ವರ್ಕ್, ವುಮೆನ್ ಆಂಡ್ ವಿಲ್ ಟು ಲೀಡ್’ (2013) ಕೃತಿಯ ವಿಚಾರ ಪ್ರಣಾಳಿಕೆಯನ್ನು ನೋಡಬಹುದು. ಸ್ತ್ರೀವಾದದ ಮೇಲೆ ತುಂಬಾ ಪ್ರಭಾವ ಬೀರಿರುವ ಕೃತಿ ಇದು. ಲೀನ್ ಇನ್ ಸಂಘಟನೆಗಳು ಅಮೆರಿಕದಲ್ಲಿ ಹುಟ್ಟುಕೊಂಡಿವೆ, ಸ್ಯಾಂಡ್ ಬರ್ಗ್ ಲೀನ್ ಇನ್ ಫೌಂಡೇಶನ್ ಸ್ಥಾಪಿಸಿದ್ದಾಳೆ. ಇಲ್ಲಿ ವಾದ ಇಷ್ಟೇ. ಮಹಿಳೆಯರು ಮುಂದೆ ಬರಬೇಕಾದರೆ, ಸಾಧನೆ ಮಾಡಬೇಕಾದರೆ ಅತ್ಯಂತ ಸಮರ್ಥವಾಗಿ ಮನೆಗೆಲಸ ಮತ್ತು ಕಚೇರಿ ಕೆಲಸಗಳನ್ನು ನಿಭಾಯಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕು, ಲೀನ್‍ಇನ್ -ಬಾಗುವುದು ಎಂಬುದರ ಅರ್ಥವೂ ಇದೇ ಆಗಿದೆ. ಮಹಿಳೆಯರು ಇಂದು ಹಿಂದೆ ಬಿದ್ದಿದರೆ ಅದಕ್ಕೆ ಅವರೇ ಕಾರಣ ಎಂಬುದು ಇಲ್ಲಿನ ಪ್ರಮೇಯ. ಮಹಿಳೆಯರು ಕಷ್ಟಪಡಬೇಕು ಎಂಬುದು ಇಲ್ಲಿ ಒಂದು ಸೂತ್ರ.
ಇಲ್ಲಿನ ಒಂದು ಸಮಸ್ಯೆ ಎಂದರೆ ಇದು ಸಾಮಾಜಿಕ ವ್ಯವಸ್ಥೆಯ ಬಗ್ಗೆ ಮೌನ ತಳೆದಿದೆ. ನಮ್ಮ ಸಮಾಜದ ಸಂದರ್ಭದಲ್ಲಿ ಮಹಿಳೆಯರು ಸಾಧನೆಗೆ ಇರುವ ಮುಖ್ಯ ಅಡ್ಡಿ ತಡೆ ಎಂದರೆ ಸಾಮಾಜಿಕ ಸಂಗತಿಗಳು. ಬಹಳ ಮುಖ್ಯವಾಗಿ ಜಾತಿ. ಜಾತಿ ತಾರತಮ್ಯವನ್ನು ಮೀರಿ ರಾಜಕೀಯದಲ್ಲಿ ಬೆಳೆಯುವುದು ಅಸಾಧ್ಯ ಎನ್ನುವ ಸ್ಥಿತಿ ನಮ್ಮಲ್ಲಿದೆ.
ಪ್ರಸಿದ್ಧ ಸ್ತ್ರೀವಾದಿ ಅರ್ಥಶಾಸ್ತ್ರಜ್ಞೆ ಬೀನಾ ಅಗರವಾಲ ಒಂದು ಮಾತು ಹೇಳುತ್ತಾರೆ . ‘ಕುಟುಂಬಮಟ್ಟದಲ್ಲಿ ಸಮಾನತೆ ನೆಲೆಗೊಳ್ಳದಿದ್ದರೆ ಸಾಮಾಜಿಕವಾಗಿ ರೂಪುಗೊಳ್ಳುವ ಕಾನೂನುಗಳು-ಶಾಸನಗಳು ಅದರ ಬಗ್ಗೆ ಏನನ್ನೂ ಮಾಡಲು ಸಾಧ್ಯವಿಲ್ಲ’ (2000). ಶಾಸನಗಳು ಒಂದು ಹಂತದವರೆಗೆ ಕೆಲಸ ಮಾಡಬಹುದು. ಅಂತಿಮವಾಗಿ ಸಮಾಜ-ಜನರು ಇಲ್ಲಿ ಮುಖ್ಯ. ಜನರ ಮನೋಭಾವ, ಸಾಮಾಜಿಕ ನಂಬಿಕೆ, ಆಚರಣೆಗಳು ಮುಖ್ಯ. ಶಾಸನಗಳು ಬೇಕು. ಅವೇ ಎಲ್ಲವೂ ಅಲ್ಲ. ಸಮಾಜವು ಲಿಂಗ ಸಮಾನತೆಯನ್ನು ಒಂದು ಜೆಂಡರ್ ಮೌಲ್ಯ ಎಂದು ಭಾವಿಸದೆ ಸಾಮಾಜಿಕ ಮೌಲ್ಯ ಎಂದು ಭಾವಿಸಿದರೆ ಅದನ್ನು ಜನರು ಅನುಭವಿಸುವುದು ಸಾಧ್ಯ.
ಲಿಂಗ ಸಮಾನತೆ ಎನ್ನುವುದೂ ಒಂದು ಸೀಮಿತವಾದ ಮೌಲ್ಯ. ಏಕೆಂದರೆ ಕಳೆದ 30-40 ವರ್ಷಗಳಲ್ಲಿ ನಮ್ಮ ಸಮಾಜದಲ್ಲಿ ಲಿಂಗ ಅಸಮಾನತೆಯು ಕಡಿಮೆಯಾಗುತ್ತಾ ನಡೆದಿದೆ. ಆದರೆ ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆ, ಕೌಟುಂಬಿಕ ಕ್ರೌರ್ಯ ಮುಂದುವರಿದಿದೆ.
ಚುನಾವಣಾ ರಾಜಕಾರಣಕ್ಕೆ ಮಹಿಳೆಯರು ಪ್ರವೇಶಿಸುವುದಕ್ಕೆ ಸಂವಿಧಾನ ಅವಕಾಶ ನೀಡಿದೆ. ಇದು ಮಹಿಳೆಯರ ಮಾನವ ಹಕ್ಕು. ಆದರೆ ದೇವಾಲಯ ಪ್ರವೇಶಿಸುವುದಕ್ಕೆ ಮಹಿಳೆಯರಿಗೆ ಅವಕಾಶ ನೀಡದ ಸಮಾಜ, ಮಹಿಳೆಯರು ಹುಟ್ಟುವುದನ್ನೇ ದುರ್ಲಭ ಮಾಡಿರುವ ಸಮಾಜ, ಮಹಿಳೆಯರನ್ನು ಮೈಲಿಗೆ, ಸೂತಕ ಎಂದು ಅಸ್ಪಶ್ಯರನ್ನಾಗಿ ಕಾಣುವ ಸಮಾಜದಲ್ಲಿ ಚುನಾವಣ ರಾಜಕಾರಣಕ್ಕೆ ಪ್ರವೇಶಿಸುವುದು ಮಹಿಳೆಯರಿಗೆ ಕಷ್ಟ ಸಾಧ್ಯ.
ಎಲ್ಲ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಸಂಸತ್ತಿನಲ್ಲಿ ಮತ್ತು ಶಾಸನಸಭೆಗಳಲ್ಲಿ ಶೇ.33 ರಷ್ಟು ಸ್ಥಾನಗಳನ್ನು ಮೀಸಲಿಡುವ ಪ್ರಶ್ನೆಗೆ ತಮ್ಮ ಒಪ್ಪಿಗೆ ಸೂಚಿಸುತ್ತವೆ. ಆದರೆ ಅದರ ಮಸೂದೆ ಮತದಾನಕ್ಕೆ ಬಂದಾಗ ಸಂಸತ್ತಿನಲ್ಲಿ ಗಲಾಟೆ ಉಂಟು ಮಾಡಿ ಎರಡು ದಶಕಗಳಿಂದ ಅದು ಅನುಮೋದನೆಯಾಗದಂತೆ ನೋಡಿಕೊಳ್ಳುತ್ತಿವೆ. ರಾಜಕೀಯ ಪಕ್ಷಗಳಿಗೆ ನಿಜವಾಗಿಯೂ ಈ ಬಗ್ಗೆ ಬದ್ಧತೆಯಿದ್ದರೆ ತಮ್ಮ ಪಕ್ಷದ ಮಟ್ಟದಲ್ಲಿ ಚುನಾವಣೆಗೆ ಶೇ.33 ರಷ್ಟು ಸ್ಥಾನಗಳಲ್ಲಿ ಮಹಿಳೆಯರನ್ನು ನಿಲ್ಲಿಸಬಹುದು. ಒಂದು ಆಶಾದಾಯಕ ಸಂಗತಿಯೆಂದರೆ ಒರಿಸ್ಸಾದಲ್ಲಿ ನವೀನ್ ಪಟ್ನಾಯಕ್ ಅವರು ಪ್ರಸ್ತುತ ಚುನಾವಣೆಯಲ್ಲಿ ಶೇ.33 ರಷ್ಟು ಮಹಿಳೆಯರಿಗೆ ಸ್ಥಾನ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಪಶ್ಚಿಮಬಂಗಾಳದ ಮಮತಾ ಬ್ಯಾನರ್ಜಿ ಅವರು ಈ ದಿಶೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರು 2014ರಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಮಮತಾ ಅವಕಾಶ ನೀಡಿದ್ದರು. ಈಗ 2019ರಲ್ಲಿ ಅವರು ಶೇ.40 ರಷ್ಟು ಮಹಿಳೆಯರನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಇತರೆ ಪಕ್ಷಗಳು ಇದನ್ನು ಅನುಸರಿಸಬಹುದು. ಈಗಾಗಲೆ ಸಿದ್ಧವಾಗಿರುವಂತೆ ಚುನಾವಣೆಯಲ್ಲಿ ಸ್ಪರ್ಧಿಸಿದ ಉಮೇದುವಾರರಲ್ಲಿ ಗೆಲುವಿನ ಪ್ರಮಾಣ ಮಹಿಳೆಯರಲ್ಲಿ ಪುರುಷರಿಗಿಂತ ಅಧಿಕವಾಗಿದೆ.
ರಾಜಕೀಯ ಪ್ರಾತಿನಿಧ್ಯವಿರಬಹುದು ಅಥವಾ ಮಹಿಳೆಯರ ಶಿಕ್ಷಣವಿರಬಹುದು, ಮಹಿಳಾ ಉದ್ಯೋಗವಿರಬಹುದು – ಇವೆಲ್ಲ ಲಿಂಗ ಸಮಾನತೆಯನ್ನು ಸಾಧಿಸುವ ದಿಶೆಯಲ್ಲಿನ ಸಾಧನಗಳು. ಅವುಗಳ ಪಾತ್ರ ಶಕ್ತಿಯುತವಾಗ ಬೇಕಾದರೆ ಕುಟುಂಬಮಟ್ಟದಲ್ಲಿ ಮತ್ತು ಸಮಾಜದ ಮಟ್ಟದಲ್ಲಿ ಲಿಂಗ ಸಮಾನತೆಯನ್ನು ಒಂದು ನೈತಿಕ ಮೌಲ್ಯವಾಗಿ ಅಳವಡಿಸಿಕೊಳ್ಳುವುದು ಮುಖ್ಯ.
ಡಾ| ಟಿ. ಆರ್. ಚಂದ್ರಶೇಖರ್
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.