ಚುಕ್ಕಿಗಳ ಕಸುನ್ಯಾಗ ಜೀವ ಐತಿ – ಗಿರಿಯಪ್ಪ ಅಸಂಗಿ
ಪ್ರೀತಿ ತೆಕ್ಕ್ಯಾಗ ಕೊಳೆ ಹುಡ್ಕೋರಿಗೆ ಏನ ಹೇಳುದು ಹೃದಯದ ಕಸುನ್ಯಾಗ ಜೀವ ಐತಿ
ನಿಜ ಐತಿ ಗೆಳತಿ ನನ್ನ ನಿನ್ನ ಪ್ರೀತಿ ಕೊಂದವರ ನೆರಳ್ನ್ಯಾಗ ಜೀವ ಐತಿ
ಸಂಶಯದ ಸಲಾಕಿ ಎದಿಗೆ ಹಿಡಿದು ಜೊಳ್ಳು ನಾಲಿಗೆ ಓಣ್ಯಾಗ ಹಾಸ್ಯಾರ
ನಾಲಿಗೆ ಇರಿತ ಎದೆಯ ಬ್ಯಾನಿಗೆ ತಟ್ಟುದಿಲ್ಲ ಸಖಿ ಪ್ರೀತಿ ಹಗೆದಾಗ ಜೀವ ಐತಿ
ಹಾದಿಬೀದ್ಯಾಗ ಕಿಕ್ಕಿರಿದ ಹೆಜ್ಜೆಗಳು ಗೊಂದಲದ ಗೂಡ್ನ್ಯಾಗ ಸಿಕ್ಕಂಗ
ಕರೆ ನಾಡಿಯ ಗೆಜ್ಜೆ ನುಡಿದು ಸಾಗೂನು ಸಖಿ ನೆಲದ ಪಿಸುಮಾತ್ನ್ಯಾಗ ಜೀವ ಐತಿ
ನಕ್ಕಾಡಿ ಪ್ರೀತಿ ತೆನೆಯ್ಹಂಗ ಹೃದಯದ ರೆಕ್ಕೆಗಳಿಗೆ ಒಲುವಿನ ರಾಶಿ ನಲಿದ್ಹಂಗ
ತಲೆಮಾರಿನ ದ್ಯಾಸಗಳ ತಿರುವಿ ಮಗುಚಿ ಬಿದ್ದ ಚುಕ್ಕಿಗಳ ಕಸುನ್ಯಾಗ ಜೀವ ಐತಿ
ಸಖಿ ನಿನ ಸಂಗ ನನ್ನೆದೆಯ ಬತ್ತಿದ ಬದುನ್ಯಾಗ ಪಾತರಗಿತ್ತಿಗಳ ಚಿತ್ತಾರ
ಜಗದ ನೆತ್ತಿಗೆ ಹೋಗಿ ತಿಳಿಲಿ ಕಸುತುಂಬಿ ಮೈ ಕಣ್ಣಾಗಿಸಿ ಬಿದ್ದ ಹೊಸ್ತಿಲ ನೋಟದಾಗ ಜೀವ ಐತಿ
ಗಿರಿಯಪ್ಪ ಅಸಂಗಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.