ಚಿತ್ರ ಭಾರತಿ/ ಶಿವರಂಜಿನಿ ಮತ್ತು ಇತರ ಮಹಿಳೆಯರು ಕಂಡುಕೊಂಡ ಪರ್ಸನಲ್ ಸ್ಪೇಸ್

 ಕಾಲ ಎಷ್ಟೇ ಬದಲಾದರೂ ಹೆಣ್ಣಿನ ಸ್ಥಿತಿಗತಿಯಲ್ಲಿ ಸ್ವಲ್ಪವೂ ಬದಲಾಗಿಲ್ಲ ಎಂಬುದನ್ನು ಈಗಾಗಲೇ ಅನೇಕ ಸಿನಿಮಾಗಳು ತೋರಿಸಿಕೊಂಡು ಬಂದಿವೆ. ಆದರೆ ‘ಶಿವರಂಜಿನಿಯಂ ಇನ್ನೂಂ ಸಿಲ ಪೆಂಗುಲಂ’ ತಮಿಳು ಸಿನಿಮಾದ ವಿಶೇಷವೆಂದರೆ, ಸರಳ ನಿರೂಪಣೆ ಮತ್ತು ಅದರಲ್ಲಿನ ಆಪ್ತತೆ. ಇದು ನಮ್ಮ ಮನೆಯಲ್ಲೇ ನಡೆದಿದೆಯೇನೋ ಅನಿಸುವಷ್ಟು ಸಹಜತೆ. ಜೊತೆಗೆ ನಮ್ಮ ಹೆಣ್ಣುಮಕ್ಕಳು ತಮ್ಮ ಪರ್ಸನಲ್ ಸ್ಪೇಸ್‍ನ್ನು ತಾವೇ ಕಂಡುಕೊಳ್ಳಬೇಕೆಂಬ ಸೂಕ್ಷ್ಮ ಸಂದೇಶ. ಸಂಭಾಷಣೆಗಿಂತ ಕ್ಯಾಮರಾವನ್ನೇ ಹೆಚ್ಚು ಬಳಸಿಕೊಂಡಿರುವುದು. ಮೆಲೋಡ್ರಾಮಾವಾಗಿಸದೆ ತುಂಬ ಸಹಜವಾಗಿಸುವಲ್ಲಿನ ಒಂದು ಎಚ್ಚರ, ಈ ಎಲ್ಲ ಕಾರಣಗಳಿಗಾಗಿ ಈ ಸಿನಿಮಾ ತುಂಬ ಭಿನ್ನವಾಗಿ ನಿಲ್ಲುತ್ತದೆ.
ಅವಳ ಎರಡೂ ಹೆಗಲುಗಳ ಮೇಲೆ ಒಂದೊಂದು ತುಂಬಿದ ಚೀಲ, ಕೈಯಲ್ಲಿ ಪುಟ್ಟ ಮಗುವನ್ನು ಎತ್ತಿಕೊಂಡು ನಡೆಯುತ್ತಿದ್ದಾಳೆ. ಅವಳ ಗಂಡ ಅವಳಿಗಿಂತ ಮಾರುದ್ದಕ್ಕೆ ಕೈಬೀಸಿಕೊಂಡು ನಡೆಯುತ್ತಿದ್ದಾನೆ. ಇಬ್ಬರ ನಡುವೆ ಸಾಕಷ್ಟು ಅಂತರ. ಮನೆಗೆ ಬಂದವಳೇ ಮನೆಯ ಬೀಗವನ್ನು ತೆಗೆಯಲು ಪರ್ಸ್‍ನ್ನು ತಡಕಾಡುತ್ತಾಳೆ. ಮಗುವನ್ನು ಎತ್ತಿಕೊಂಡೇ ಎರಡೂ ಚೀಲಗಳನ್ನು ಇಳಿಸಿ ಜಾಲಾಡುತ್ತಾ ಅಂತೂ ಕೀ ಹೊರತೆಗೆದು ಮನೆಯ ಬಾಗಿಲು ತೆಗೆಯುತ್ತಾಳೆ. ಅವಳ ಅಷ್ಟೂ ಕಸರತ್ತನ್ನು ಅಸಹನೆಯಿಂದ ನೋಡುತ್ತಾ ನಿಲ್ಲುತ್ತಾನೆ ಗಂಡ. ಮಗುವಿನ ಅಳುವನ್ನು ಕೇಳಲಾರದೆ ಬೈಯ್ಯುವ ಗಂಡನಿಗೆ ಒಂದು ಸಣ್ಣದಾಗಿ ತಿರುಗಿ ಹೇಳಿದ್ದಕ್ಕೆ ಹೊಡೆಯುವ ಗಂಡ, ಅವನ ಹೊಡೆತವನ್ನು ತಾಳಲಾರದ ಹೆಂಡತಿ ಹೊಡಿಬೇಡಾ…ಎಂದು ಒಂದು ಸಲ ತಿರುಗಿ ನಿಲ್ಲುತ್ತಾಳೆ. ಎಂದೂ ಎದುರು ಮಾತನಾಡದ ಹೆಂಡತಿ ಇದ್ದಕ್ಕಿದ್ದಹಾಗೆ ಹೀಗೆ ತಿರುಗಿ ಬಿದ್ದದ್ದು ನೋಡಿ ಒಳಗೊಳಗೇ ಕುಸಿಯುವ ಗಂಡ ಧೀರ್ಘ ಮೌನವಹಿಸುತ್ತಾನೆ. ಎಷ್ಟೆಂದರೆ ಸದಾ ಮೌನವಾಗಿರುವ ಸರಸ್ವತಿಗೂ ಅಸಹನೀಯವೆನಿಸುವಷ್ಟು. ಮನೆಯಲ್ಲಿರುವ ಒಂದೇ ಒಂದು ಕುರ್ಚಿಯಲ್ಲಿ ಕುಳಿತುಕೊಳ್ಳುವ ಗಂಡನಿಗೆ ಹೆದರುತ್ತ ಕಾಫಿಲೋಟವನ್ನು ಪಕ್ಕದಲ್ಲಿಡುವ ಹೆಂಡತಿಗೆ ಗಂಡನ ಮೌನವೊಂದು ಒಗಟು. ಹೀಗೆ ಮೌನವಾಗಿರುವ ಗಂಡ ಒಂದು ದಿನ ಮನೆಯಿಂದ ನಾಪತ್ತೆಯಾಗುತ್ತಾನೆ. ಸರಸ್ವತಿ ಅವನಿಗಾಗಿ ಕಾದುಕಾದು ಕಡೆಗೆ ಅವನನ್ನು ಹುಡುಕಿಕೊಂಡು ಅವನು ಕೆಲಸ ಮಾಡುವ ಕಾರ್ಖಾನೆಗೆ ಹೋದರೆ ಅಲ್ಲಿ ಅವನು ಬಾರದೇ ಮೂರುದಿನಗಳಾಗಿವೆ ಎಂಬುದು ತಿಳಿಯುತ್ತದೆ. ಮೌನವಾಗಿ ಮನೆಗೆ ಬಂದ ಸರಸ್ವತಿ ಹಪ್ಪಳ ಕಾರ್ಖಾನೆಯೊಂದರಲ್ಲಿ ಕೆಲಸಮಾಡಿ ಮಗಳನ್ನು ಬೆಳೆಸುತ್ತಾಳೆ. ಮುಂದೆ ಮಗಳನ್ನು ಶಾಲೆಗೆ ಕಾಫಿ ಲೋಟವನ್ನು ಹಿಡಿದು ಅದೇ ಖುರ್ಚಿಯ ಮೇಲೆ ಅವಳು ಕೂರುವಾಗ ಅವಳ ಆಂಗಿಕ ಭಾಷೆಯೇ ಬದಲಾಗಿಬಿಡುತ್ತದೆ. ತಲೆತಗ್ಗಿಸಿಕೊಂಡು ಹೆದರಿ ನಡುಗುತ್ತಿದ ಸರಸ್ವತಿ ಈಗ ಆತ್ಮವಿಶ್ವಾಸದಿಂದ ಕೂತಿದ್ದಾಳೆ.
***
ದೇವಕಿ ಉದ್ಯೋಗಸ್ಥ ಮಹಿಳೆ. ಅವಿಭಕ್ತ ಕುಟುಂಬದ ಸೊಸೆ. ಪ್ರತಿದಿವಸ ಆಫೀಸಿನಿಂದ ಬರುವಾಗ ಸ್ಕೂಟರ್‍ನಲ್ಲಿ ಗಂಡ ಮತ್ತು ಅವಳ ಸೋದರಳಿಯನನ್ನು ಕೂರಿಸಿಕೊಂಡು ಬರುತ್ತಾಳೆ. ಅವಳ ಅತ್ತಿಗೆಗೆ ಇವಳೆಂದರೆ ಅಸಮಾಧಾನ. ಯಾಕೆಂದರೆ ಇವಳು ಉದ್ಯೋಗಸ್ಥೆ. ತಾನಾದರೆ ಮನೆಯಲ್ಲೇ ಕೆಲಸಮಾಡುವವಳು ಎಂದು. ಹೀಗೆ ಇರುವಾಗ ದೇವಕಿ ಬರೆವ ಪರ್ಸನಲ್ ಡೈರಿಯೊಂದು ಅವಳ ಬದುಕಲ್ಲಿ ಬಿರುಗಾಳಿಯನ್ನೇ ಎಬ್ಬಿಸುತ್ತದೆ. ಕುಟುಂಬದ ಗೌರವಕ್ಕೆ ಧಕ್ಕೆಯಿದು ಎಂದು ಅವಳ ಡೈರಿಯನ್ನು ಕೇಳುತ್ತಾರೆ. ಅವಳು ಖಾಸಗಿತನವನ್ನು ಹೊಂದಲು ಅವಳಿಗೆ ಹಕ್ಕಿಲ್ಲ, ಅವಳ ಪರ್ಸನಲ್ ಸ್ಪೇಸ್ ಎಂಬುದು ಅವಳ ಗಂಡ ಮತ್ತು ಕುಟುಂಬದ ಹೊರತಾಗಿ ಅವಳಿಗ್ಯಾವುದೇ ರೀತಿಯ ವೈಯಕ್ತಿಕವಾದ ಸ್ವಾತಂತ್ರ್ಯದ ಹಕ್ಕು ಅವಳಿಗಿಲ್ಲ. ಇದರಿಂದ ನೊಂದ ದೇವಕಿ ಮನೆಯಿಂದ ಹೊರಬರುತ್ತಾಳೆ. ಕೊನೆಯಲ್ಲಿ ಬೀದಿಬದಿಯ ಒಂದು ಟೀ ಅಂಗಡಿಯಲ್ಲಿ ಅವಳೊಬ್ಬಳೇ ಟೀ ಕುಡಿಯುತ್ತಾ ನಿಲ್ಲುತ್ತಾಳೆ. ಅವಳ ಮುಂದೆಯೇ ಅವಳ ಗಂಡ, ಭಾವ ಮತ್ತು ಪುಟ್ಟ ಸೋದರಳಿಯ ಇರುವ ಸ್ಕೂಟರ್ ಹಾದು ಹೋಗುತ್ತದೆ.
***
ಶಿವರಂಜಿನಿ ಒಬ್ಬ ಭರವಸೆಯ ಕ್ರೀಡಾಪಟು. ಶಾಲಾ ಕಾಲೇಜುಗಳಲ್ಲಿ ತುಂಬ ಬಹುಮಾನವನ್ನು ಪಡೆದ ಪ್ರತಿಭಾವಂತೆ. ಅವಳಿನ್ನೇನು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಹೋಗಬೇಕು. ಅಷ್ಟರಲ್ಲಿ ಅವಳಿಗೆ ಮದುವೆಯಾಗುತ್ತದೆ. ಅವಳು ಗರ್ಭಿಣಿಯಾಗುವುದಿಲ್ಲವೆಂದು ಗಂಡ ಸಹಿಹಾಕಿಕೊಟ್ಟರೆ ಅವಳು ಸ್ಪರ್ಧೆಗೆ ಹೋಗಬಹುದು. ಆದರೆ ಗಂಡ ಒಪ್ಪುವುದಿಲ್ಲ. ಅವಳು ಗರ್ಭಿಣಿಯಾಗುತ್ತಾಳೆ. ಮುಂದೆ ಸಂಸಾರದ ನೊಗ ಅವಳ ತಲೆಯಮೇಲೆ. ಬೆಳಗ್ಗೆಯಿಂದ ಸಂಜೆಯವರೆಗೆ ಮಗಳನ್ನು ಶಾಲೆಗೆ ರೆಡಿಮಾಡು, ಗಂಡನಿಗೆ ತಿಂಡಿ ತಂದುಕೊಡು, ಅತ್ತೆ ಮಾವನ ಸೇವೆ ಮಾಡು. ಹೀಗೆ ಎಲ್ಲರ ಕೆಲಸಗಳನ್ನು ಮಾಡುವ ಶಿವರಂಜಿನಿಗೆ ತಾನ್ಯಾರು, ತನ್ನ ಸಾಮರ್ಥ್ಯವೇನೆಂಬುದೇ ಮರೆತು ಹೋಗಿರುತ್ತದೆ. ಹೀಗಿರುವಾಗಲೇ ಒಮ್ಮೆ ಅವಳು ಮೈದಾನವೊಂದರಲ್ಲಿ ಮಕ್ಕಳು ಆಟವಾಡುತ್ತಿರುವುದನ್ನು ಕಂಡಾಗ ಅವಳಿಗೆ ತನ್ನ ಹಳೆಯ ದಿನಗಳು ಮರುಕಳಿಸುತ್ತವೆ. ತಾನು ಪಡೆದ ಮೆಡೆಲ್‍ಗಳ ನೆನಪಾಗಿ ಸೀದ ತನ್ನ ಕಾಲೇಜಿಗೆ ಹೋಗಿ ಅವನ್ನೆಲ್ಲ ಹುಡುಕುತ್ತಾಳೆ. ಆದರೆ ಅವು ಸಿಗುವುದಿಲ್ಲ. ಬೇಸರದಿಂದಲೇ ಮನೆಗೆ ಬಂದವಳು ಮತ್ತೆ ಮನೆಯ ಜಗತ್ತಿನಲ್ಲಿ ಮುಳುಗಿ ಹೋಗುತ್ತಾಳೆ. ಆದರೆ ಒಂದು ದಿನ ಮಗಳು ತಿಂಡಿ ಡಬ್ಬಿಯನ್ನು ಮರೆತು ಹೋದಾಗ, ಅದನ್ನು ಕೊಟ್ಟುಬರಲು ಅಪಾರ್ಟ್‍ಮೆಂಟ್‍ನಿಂದ ಕೆಳಗೆ ಬಂದು ಗೇಟಿನವರೆಗೂ ಹೋಗುತ್ತಾಳೆ. ಅಷ್ಟರಲ್ಲಿ ಶಾಲಾ ವ್ಯಾನ್ ಮಕ್ಕಳನ್ನು ಹತ್ತಿಸಿಕೊಂಡು ಹೊರಡುತ್ತದೆ. ಆ ವ್ಯಾನನ್ನು ಹಿಡಿಯಲು ವ್ಯಾನ್‍ನ ಸರಿಸಮವಾಗಿ ಓಡಿ ಅದನ್ನು ನಿಲ್ಲಿಸಿ, ಮಗಳಿಗೆ ತಿಂಡಿಡಬ್ಬಿ ಕೊಡುತ್ತಾಳೆ. ವ್ಯಾನ್‍ನಲ್ಲಿರುವರೆಲ್ಲ ಆಶ್ಚರ್ಯದಿಂದ ಚಪ್ಪಾಳೆ ತಟ್ಟುತ್ತಾರೆ. ವ್ಯಾನ್ ಹೋದಮೇಲೆ ಹಿಂತಿರುಗಿ ನೋಡಿದಾಗ ತಾನಿಷ್ಟು ಜೋರಾಗಿ ಓಡಿಬಂದಿದ್ದೀನಾ ಎಂದು ಅಚ್ಚರಿಯಾಗುತ್ತದೆ. ಅಂದರೆ…ತನ್ನಲ್ಲಿನ್ನೂ ಓಡುವ  ಸಾಮರ್ಥ್ಯವಿದೆ ಎಂದು ಅವಳಿಗೆ ಅರಿವಾಗುತ್ತದೆ. ಹಾಗೆ ಅರಿವಾದೊಡನೆಯೇ ಅವಳು ಕ್ಯಾಮರಾಕ್ಕೆ ಅಭಿಮುಖವಾಗಿ ನಡೆಯುತ್ತಾಳೆ. ತಲೆಎತ್ತಿ ಆತ್ಮವಿಶ್ವಾಸದಿಂದ.
ಇದು 2018ರಲ್ಲಿ ಬಿಡುಗಡೆಯಾದ, ‘ಶಿವರಂಜಿನಿಯಂ ಇನ್ನೂಂ ಸಿಲ ಪೆಣ್ಣುಗಳಂ’ ತಮಿಳು ಸಿನಿಮಾದ ಕತೆ. ವಸಂತ ಸಾಯಿ ನಿರ್ದೇಶನದ ಈ ಸಿನಿಮಾದಲ್ಲಿ ಲಕ್ಷ್ಮೀ ಪ್ರಿಯ, ಪಾರ್ವತಿ ಮೆನನ್ ಮತ್ತು ಕಲ್ಲೇಶ್ವರಿ ಶ್ರೀನಿವಾಸನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದು ತಮಿಳಿನ ಪ್ರಸಿದ್ಧ ಲೇಖಕರಾದ ಅಶೋಕಮಿತ್ರನ್, ಬಿ. ಜಯಮೋಹನ್ ಮತ್ತು ಆದವನ್ ಅವರು ಬರೆದ ಮೂರು ಕತೆಗಳನ್ನು ಆಧರಿಸಿ ನಿರ್ಮಿಸಿದಂಥದ್ದು. ಮೂರು ವಿವಿಧ ಕಾಲಘಟ್ಟದಲ್ಲಿ ನಡೆದ ಕತೆ. ಈ ಮೂರೂ ಕತೆಗೆ ಒಂದೇ ಕಾಮನ್ ಎಳೆ ಇದೆ, ಅದೆಂದರೆ ಪುರುಷಾಧಿಪತ್ಯದ ದಬ್ಬಾಳಿಕೆ ವಿರುದ್ಧ ಹೋರಾಡಿದ ಮಹಿಳೆಯರ ಕತೆ. ಈಗಾಗಲೇ ಸಾಕಷ್ಟು ಸದ್ದು ಮಾಡಿರುವ ಈ ಸಿನಿಮಾ 2019ರ 11ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮಾದಲ್ಲಿ ಪ್ರದರ್ಶನಗೊಂಡಿತ್ತು.
ಸಿನಿಮಾದಲ್ಲಿ ನಿರ್ದೇಶಕ ವಸಂತ್‍ಸಾಯಿ ಎಲ್ಲಿಯೂ ಮೆಲೋಡ್ರಾಮಾವಾಗಿಸದೆ ತುಂಬ ಸಹಜತೆಯಿಂದ ಪ್ರತಿಯೊಂದನ್ನೂ ನಿರ್ವಹಿಸಿದ್ದು ನಿಜಕ್ಕೂ ಅವರ ಜಾಣ್ಮೆಯನ್ನು ತೋರಿಸುತ್ತದೆ. ಈ ಮೂರೂ ಕತೆಗಳಲ್ಲಿಯೂ ಅತ್ತೂ ಕರೆದು, ಹೊಡೆದು ಅವಳ ತಲೆಯನ್ನು ಜಗ್ಗಾಡಿ ಕ್ರೌರ್ಯವನ್ನು ಮೆರೆಯುವಂಥ ದೃಶ್ಯಗಳನ್ನು ತೋರಿಸಲು ಬೇಕಾದಷ್ಟು ಅವಕಾಶಗಳಿದ್ದವು. ಆದರೆ ಎಲ್ಲಿಯೂ ಅದಕ್ಕೆ ಅವಕಾಶಕೊಡದೆ ತುಂಬ ಸಹಜವಾಗಿ ಹೆಣ್ಣು ಹೇಗೆಲ್ಲ ಅವಳ ಅರಿವಿಗೆ ಬಾರದೆಯೇ ತನ್ನ ಪರ್ಸನಲ್ ಸ್ಪೇಸ್‍ಗಳನ್ನು ಕಳೆದುಕೊಳ್ಳುತ್ತಾಳೆ ಮತ್ತು ಇವನ್ನೆಲ್ಲ ಅವಳಿಗೆ ಪಡೆಯಲು ಸಾಧ್ಯಕೂಡ ಎಂಬುದನ್ನು ತುಂಬ ಸೂಕ್ಷ್ಮವಾಗಿ ತೋರಿಸಿದ್ದಾರೆ. ಅದು ಸರಸ್ವತಿ ಸಹಜ ಆತ್ಮವಿಶ್ವಾಸದಿಂದ ಕುರ್ಚಿಯ ಮೇಲೆ ಕುಳಿತು ಕಾಫಿ ಕುಡಿಯುವುದು, ಟೀ ಅಂಗಡಿಯಲ್ಲಿ ದೇವಕಿ ಒಬ್ಬಳೇ ನಿಂತು ಟೀ ಕುಡಿಯುವುದು, ಕ್ಯಾಮರಾಕ್ಕೆ ಅಭಿಮುಖವಾಗಿ ತಲೆಎತ್ತಿ ಆತ್ಮವಿಶ್ವಾಸದಿಂದ ನಡೆಯುವ ಶಿವರಂಜಿನಿ…ಇಲ್ಲೆಲ್ಲ ಅವರವರ ಸ್ಪೇಸ್‍ನ್ನು ಹೇಗೆ ಅವರೇ ಕಂಡುಕೊಳ್ಳುತ್ತಾರೆ ಎಂಬುದನ್ನು ತೋರಿಸಿದ್ದಾರೆ. ಸರಸ್ವತಿಯ ಕತೆಯಲ್ಲಂತೂ ಅವಳು ತಲೆತಗ್ಗಿಸಿ ಗಂಡನಿಗೆ ಹೆದರುತ್ತಿದ್ದವಳು ಕುರ್ಚಿಮೇಲೆ ಕೂತು ಕಾಫಿಕುಡಿಯುವ ಅವಳ ಆ ಒಂದು  ಭಂಗಿಯೇ ಹೇಳಿಬಿಡುತ್ತದೆ ಅವಳಲ್ಲಾದ ಸ್ಥಿತ್ಯಂತರದ ಬಗ್ಗೆ.
ಇಲ್ಲಿ ನಿರ್ದೇಶಕ ವಸಂತ ಸಾಯಿ, 1980, 1995 ಮತ್ತು 2007. ಹೀಗೆ ಮೂರು ಕಾಲ   ಘಟ್ಟಗಳಲ್ಲಿ ಬರುವ ಹೆಣ್ಣಿನ ಚಿತ್ರಣವನ್ನು ತೋರಿಸುತ್ತಾರೆ. ಮೊದಲಲ್ಲಿ ಬರುವ ಸರಸ್ವತಿ ಅನಕ್ಷರಸ್ಥೆ. ಅನಿವಾರ್ಯವಾಗಿ ಬದುಕನ್ನು ಏಕಾಂಗಿಯಾಗಿ ಕಟ್ಟಿಕೊಳ್ಳುತ್ತಾಳೆ. ಆದರೆ ಅಕ್ಷರ ಲೋಕ ಮಹಿಳೆಗೆ ತೆರೆದುಕೊಂಡಂತೆಲ್ಲ ಅವಳ ಸ್ಥಿತಿ ಸುಧಾರಣೆಯಾಗಬೇಕಿತ್ತು. ಆದರೆ ಅಂದಿನಿಂದ ಇಂದಿನವರೆಗೂ ಅವಳ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ ಎಂಬುದು ಸ್ಪಷ್ಟವಾಗಿ ಅರ್ಥವಾಗುವುದು ಶಿವರಂಜಿನಿ ಕತೆಗೆ ಬಂದಾಗ.
ಶಿಕ್ಷಣವೆಂಬುದು ಅವಳಿಗೆ ವಿಮೋಚನೆಯ ಅಸ್ತ್ರವಾಗಬೇಕಿತ್ತು. ಆದರೆ ಕಾಲೇಜಿನಲ್ಲಿರುವಾಗಲೇ ಅವಳನ್ನು ಮದುವೆಮಾಡುತ್ತಾರೆ. ಅಲ್ಲಿಂದ ನಂತರ ಅವಳು ತನ್ನ ಅಸ್ತಿತ್ವವನ್ನೇ ಮರೆಯುವಷ್ಟು ಸಂಸಾರದಲ್ಲಿ ಮುಳುಗಿಹೋಗುತ್ತಾಳೆ. ಶಿವರಂಜಿನಿ ಎಪಿಸೋಡಲ್ಲಿ ಅವಳು ವಾಪಸು ಕ್ಯಾಮೆರಾಕ್ಕೆ ಬೆನ್ನು ಹಾಕಿ ತಲೆ ಎತ್ತಿ ನಡೆಯುವುದು ನಿಜಕ್ಕೂ ಮಾರ್ಮಿಕವಾಗಿದೆ.
ವಸಂತ್ ಇದರಲ್ಲಿ, ಕಾಲ ಬದಲಾದರೂ ಭಾರತೀಯ ಸಮಾಜದಲ್ಲಿ ಮಹಿಳೆಯ ಸ್ಥಿತಿಗತಿ ಬದಲಾಗಿಲ್ಲ ಎಂಬುದನ್ನು ಗಂಡ ಹೆಂಡತಿಯ ನಡುವಿನ ಅಂತರವನ್ನು ತೋರಿಸುವ ಮೂಲಕ, ಸಂಸಾರದಲ್ಲಿ ಶಿವರಂಜಿನಿ ಕಳೆದು ಹೋಗುವ ರೀತಿಯನ್ನು ತೋರಿಸುವುದರ ಮೂಲಕ..ದೇವಕಿ ರಸ್ತೆ ಬದಿಯಲ್ಲಿರುವ ಅಂಗಡಿಯೊಂದರಲ್ಲಿ ಎಲ್ಲ ಪುರುಷರ ನಡುವೆ ಒಬ್ಬಳೇ ನಿಂತು ಟೀ ಕುಡಿಯುವುದನ್ನು ತೋರಿಸುವುದರ ಮೂಲಕ ತುಂಬ ಸೂಕ್ಷ್ಮವಾಗಿ ಮತ್ತು ಅಷ್ಟೇ ಸ್ಪಷ್ಟವಾಗಿ ತೋರಿಸುತ್ತಾರೆ. ಅಂದರೆ ಇಲ್ಲಿ ಮಾತಿಗಿಂತ ವಸಂತ್ ಅವರ ಕ್ಯಾಮರಾವೇ ಹೆಚ್ಚು ಮಾತನಾಡುತ್ತದೆ. ಸಿನಿಮಾದಲ್ಲಿ ಡೈಲಾಗ್‍ಗಿಂತ ಕ್ಯಾಮರಾವೇ ಸಿನಿಮಾದ ಅತ್ಯುತ್ತಮ ಭಾಷೆ ಎಂಬುದು ಈ ಚಿತ್ರ ನಿರೂಪಿಸುತ್ತದೆ
ನಿಜಕ್ಕೂ ವಸಂತ್ ಭಾರತೀಯ ಸಮಾಜದಲ್ಲಿ ಮಹಿಳೆಯರ ಮೇಲಿನ ಶೋಷಣೆಯನ್ನು ಮತ್ತು ಅವರಿಗಿರಬೇಕಾದ ಸ್ಥಾನಮಾನವನ್ನು ತುಂಬ ಸರಳವಾಗಿ ನಿರೂಪಿಸಿದ್ದಾರೆ. ಆದರೆ ಇದರಲ್ಲಿನ ವಿಷಯ ಮಾತ್ರ ಅಷ್ಟೇ ಗಂಭೀರವಾಗಿದೆ.
ಭಾರತಿ ಹೆಗಡೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *