ಚಿತ್ರ ಭಾರತಿ/ ಬದುಕಿನ ಈ ಪರಿಗೆ ಏನೆನ್ನಲೇ…? – ಭಾರತಿ ಹೆಗಡೆ

ಎಲ್.ವಿ.ಶಾರದಾ ಎಂದರೆ ನೆನಪಾಗುವುದೇ ತಲೆಬೋಳಿಸಿಕೊಂಡು, ಬಿಳಿಸೀರೆ ಉಟ್ಟು ಅಜ್ಜಿಯಂತೆ ಬಾಗಿ ನಡೆದ ಫಣಿಯಮ್ಮ. ಈ ಪಾತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದವರು. ನಟಿಸಿದ್ದು ಕೆಲವೇ ಸಿನಿಮಾಗಳಾದರೂ ಎಲ್ಲವೂ ಪ್ರಮುಖವಾದವುಗಳು. ಈ ಪೈಕಿ ಕೆಲವು ಸಿನಿಮಾಗಳಿಗೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಂಥವು. ಇಂಥ ಅಪರೂಪದ ಕಲಾವಿದೆ ಎಲ್.ವಿ.ಶಾರದಾ ಕಳೆದ ಮಾರ್ಚ್.21ರಂದು ನಿಧನರಾದರು. ಅವರ ಕೆಲವು ಹೆಜ್ಜೆಗುರುತುಗಳು ಇಲ್ಲಿವೆ.

ಫಣಿಯಮ್ಮ, ಭೂತಯ್ಯನ ಮಗ ಅಯ್ಯು, ವಂಶವೃಕ್ಷ ಖ್ಯಾತಿಯ ಎಲ್.ವಿ.ಶಾರದಾ ಇತ್ತೀಚೆಗಷ್ಟೇ ತೀರಿಕೊಂಡಾಗ ದೊಡ್ಡ ಸುದ್ದಿಯೇನೂ ಆಗಲಿಲ್ಲ. ಹಾಗೆ ಸುದ್ದಿಯಾಗದಿರುವುದಕ್ಕೆ ಕಾರಣಗಳಿವೆ. ಕಮರ್ಷಿಯಲ್ ಸಿನಿಮಾದತ್ತ ತಿರುಗಿಯೂ ನೋಡದ ಶಾರದಾ ಕಲಾತ್ಮಕ ಸಿನಿಮಾಗಳಿಗಾಗಿಯೇ  ತಮ್ಮನ್ನು    ಮೀಸಲಾಗಿರಿಸಿಕೊಂಡವರು. ಎಷ್ಟೆಂದರೆ ಒಂದೊಳ್ಳೆ ಪಾತ್ರಕ್ಕಾಗಿ ವರ್ಷಗಟ್ಟಲೆ ಕಾದಿದ್ದೂ ಇದೆ. ವಂಶವೃಕ್ಷ ಸಿನಿಮಾದ ನಂತರ ಪ್ರೇಮಾ ಕಾರಂತ್ ಫಣಿಯಮ್ಮ ಸಿನಿಮಾ ಮಾಡಬೇಕೆಂದಿದ್ದೇನೆ. ಅದರಲ್ಲಿ ನೀನೇ ಫಣಿಯಮ್ಮನನ್ನು ಮಾಡಬೇಕು ಎಂದಾಗ ಬೇರಾವ ಆಫರ್ ಗಳನ್ನೂ  ಒಪ್ಪಿಕೊಳ್ಳಲಿಲ್ಲ. ಆ ಒಂದು ಪಾತ್ರಕ್ಕಾಗಿ 3 ವರ್ಷ ಕಾದಿದ್ದೇನೆಂದು ಆಗಿನ ನೆನಪುಗಳನ್ನು ಮೆಲುಕು ಹಾಕುತ್ತಿದ್ದ ಶಾರದಾ ಈಗ ನಮ್ಮೊಂದಿಗಿಲ್ಲ.

ಕಲಾವಿದೆ ಎಂಬ ಯಾವ ಹಮ್ಮೂ ಇಲ್ಲದೆ ಸರಳವಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದ ಶಾರದಾ ರಂಗಭೂಮಿ, ಕಲಾತ್ಮಕ ಸಿನಿಮಾಗಳ ಆಸಕ್ತರು. ಬಿ.ವಿ.ಕಾರಂತರ ಬಳಿ ತಮ್ಮ ಆಸಕ್ತಿಯನ್ನು ತೋಡಿಕೊಂಡಾಗ ಅದಾಗಲೇ ವಂಶವೃಕ್ಷ ಸಿನಿಮಾದ ನಾಯಕಿಗಾಗಿ ತಲಾಶ್‍ನಲ್ಲಿದ್ದ ಕಾರಂತರು ಹುಡುಕುತ್ತಿದ್ದ ಬಳ್ಳಿ ತಾನಾಗಿಯೇ ಬಂದಂತೆನಿಸಿ ವಂಶವೃಕ್ಷ ಸಿನಿಮಾದ ಕಾತ್ಯಾಯಿನಿ ಪಾತ್ರ ನೀಡಿದರು. ಆದರೆ ಶಾರದಾ ತಂದೆ ಅದನ್ನು ಒಪ್ಪಲಿಲ್ಲ. ಕಾತ್ಯಾಯಿನಿ ತುಂಬ ಸಂಕೀರ್ಣವಾದ ಪಾತ್ರ, ಕಟ್ಟಾ ಬ್ರಾಹ್ಮಣರ ಮನೆಯ ಸೊಸೆಯೊಬ್ಬಳು ವಿಧವೆಯಾಗಿ, ನಂತರ ಕಾಲೇಜಿಗೆ ಹೋಗಿ, ನಂತರ ಮದುವೆಯಾಗುವಂಥ ಸಂಕೀರ್ಣವಾದ ಪಾತ್ರವನ್ನು ಮಗಳು ಮಾಡುವುದಕ್ಕೆ ಅವರ ಮನ ಒಪ್ಪಲಿಲ್ಲ. ನಂತರ ಒತ್ತಾಯಿಸಿದ ಮೇಲೆ ಒಪ್ಪಿದರು. ಹೀಗೆ ಚಿತ್ರರಂಗಕ್ಕೆ ಕಾಲಿರಿಸಿದ ಶಾರದಾ ಮೊದಲ ಸಿನಿಮಾದಲ್ಲಿಯೇ ರಾಷ್ಟ್ರ ಪ್ರಶಸ್ತಿ ಪಡೆದವರು.

ಇದರ ನಂತರ ಮೂರು ವರ್ಷ ಖಾಲಿ ಕೂತಿದ್ದರು. ನಂತರ ಫಣಿಯಮ್ಮ ಸಿನಿಮಾಗಾಗಿ ಸ್ವತಃ ತಮ್ಮ ಉದ್ದನೆಯ ಕೂದಲನ್ನು ತೆಗೆಸಿಕೊಂಡಿದ್ದರು. ಇದು ಆ ಕಾಲಕ್ಕೆ ತುಂಬ ಜನರ ಕಣ್ಣು ಕೆಂಪಗಾಗಿಸಿತ್ತು. ಈ ಸಿನಿಮಾವನ್ನು ಪ್ರೇಮಾ ಕಾರಂತ್ ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ. ಆ ಕಾಲದಲ್ಲಿ ಹಣವಿಲ್ಲದೆ ಇಂಥ ಒಂದು ಸಿನಿಮಾವನ್ನು ಒಮ್ಮ ಮಹಿಳೆ ಮಾಡಿದ್ದಾರೆಂದರೆ ನಿಜಕ್ಕೂ ಮೆಚ್ಚತಕ್ಕ ವಿಷಯ ಎಂದು ಸ್ವತಃ ಶಾರದಾ ಹೇಳುತ್ತಿದ್ದರು. ಪ್ರೇಮಾಗೆ ಒಳ್ಳೆ ಸಿನಿಮಾಟೋಗ್ರಫಿ ಇದೆ ಎಂದು ಬಿ.ವಿ.ಕಾರಂತರೇ ಹೇಳುತ್ತಿದ್ದುದನ್ನು           ನೆನೆಸಿಕೊಂಡಿದ್ದರು ಶಾರದಾ. ನಿಜಕ್ಕೂ ಫಣಿಯಮ್ಮ ತುಂಬ ವಿಶಿಷ್ಟವಾದ ಸಿನಿಮಾ.

ಒಬ್ಬ ಬಾಲವಿಧವೆ ಬದುಕಿನಲ್ಲಿ ನಡೆಯುವಂಥ ಘಟನೆಗಳನ್ನು, ಅವಳ ಕಣ್ಣಲ್ಲಿ ಇಡೀ ವ್ಯವಸ್ಥೆಯ ಕರ್ಮಟ, ಕಂದಾಚಾರಗಳನ್ನು ಬಹಳ ಪರಿಣಾಮಕಾರಿಯಾಗಿ ಹಿಡಿದಿಟ್ಟಿದ್ದರು ಪ್ರೇಮಾ.  ದೃಶ್ಯ ಮಾಧ್ಯಮದ ಮೂಲಕ ಸಮಾಜದಲ್ಲಿ ಬೇರೂರಿದ್ದ ಕಂದಾಚಾರಗಳನ್ನು, ಅನಿಷ್ಟ ಸಂಪ್ರದಾಯಗಳನ್ನು ಎಷ್ಟು ಪರಿಣಾಮಕಾರಿಯಾಗಿ ಬಿಂಬಿಸಲು ಸಾಧ್ಯ ಎಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆಯಾಗಿ ನಿಲ್ಲುತ್ತದೆ.

ರಾತ್ರೋರಾತ್ರಿ ಮಹಿಳೆಯೊಬ್ಬಳ ಹೆರಿಗೆಯನ್ನು ಮಾಡಿಸಲು ಲಾಟೀನು ಹಿಡಿದು ಹೊರಟ ಫಣಿಯಮ್ಮ ಅವಳನ್ನು ಹೆರಿಗೆ ಮಾಡಿಸಿ ಸೀದ ಬಂದದ್ದು ತನ್ನ ತವರು ಮನೆಗೆ. ದೊಡ್ಡದಾದ ಆ ಮನೆಯನ್ನು ಹೊಕ್ಕ ಫಣಿಯಮ್ಮ ಇಡೀ ಮನೆಯಲ್ಲಿ ಓಡಾಡುತ್ತ ಒಂದೊಂದು ಕಂಬ, ಒಂದೊಂದು ಪಡಸಾಲೆ, ಜಗುಲಿಯಲ್ಲೆಲ್ಲ ಏನೇನು ನೆಡೀತು ಎಂಬುದನ್ನು ಅವಳ ಕಣ್ಣುಗಳಲ್ಲಿ ಪ್ರೇಮಾಕಾರಂತ್ ನೋಡಿಸಿರುವ ರೀತಿಯೇ ಅದ್ಭುತ. ಅವಳ ಬಾಲ್ಯ, ಚಿಕ್ಕ ವಯಸ್ಸಿಗೇ ಮದುವೆ, ಜಾತಕ, ತಾರಾನುಕೂಲ ಹದಿನಾರಣೆ ಕೂಡಿಬರುತ್ತದೆಂದು ಲೆಕ್ಕ ಮಾಡಿ ಹೇಳಿದ ಅಪ್ಪ, ಅಜ್ಜಂದಿರು, ಜಾತ್ರೆಗೆ ಅಮ್ಮ, ಚಿಕ್ಕಮ್ಮಂದಿರೊಂದಿಗೆ ತಾನೂ ಜಡೆಬಂಗಾರ ತೊಟ್ಟು ಹೊರಟ ಬಾಲೆ ಫಣಿ ಅಲ್ಲಿ ಚಿಕ್ಕಿಬಳೆಯನ್ನು ತೊಡುವಾಗ ಯಾರೋ ಅವಳ ಜಡೆ ಕತ್ತರಿಸಿದ್ದು, ಅವಳ ಅಮ್ಮ ಅವಳನ್ನು ಮುಚ್ಚಿಟ್ಟು ಮನೆಗೆ ಕರೆತಂದು ಕತ್ತಲ ಕೋಣೆಗೆ ನೂಕಿದ್ದು, ಎಲ್ಲಿ ಮಗಳ ಜಡೆ ಕತ್ತರಿಸಿದ್ದು ಗೊತ್ತಾದರೆ ಅಪಶಕುನ ಎಂದು ಗಂಡಿನವರಿಗೆ ತಿಳಿಯುತ್ತದೋ ಎಂದು ಜಡೆ ಬೆಳೆಯುವವರೆಗೂ ಕತ್ತಲ ಕೋಣೆಯಲ್ಲೇ ಕೂರಿಸಿದ್ದು, ನಂತರ ಅವಳ ಗಂಡ ಹಾವು ಕಚ್ಚಿ ಸತ್ತು ಹೋಗಿದ್ದು, ‘ಫಣೀ ನಿನ್ನ ಬದುಕು ಇನ್ನು ಕತ್ತಲೆಯಲ್ಲೇ ಮುಗೀತಲ್ಲೇ’ ಎಂದು ಅಮ್ಮ ಬೋರೆಂದು ಅಳುವಾಗಲೂ ಅವಳಿಗೇನೂ ತಿಳಿಯದೇ ಅಮ್ಮನನ್ನು ನೋಡುತ್ತ ನಿಂತಿದ್ದು, ನಂತರ ಮೈ ನರೆದ ಕೂಡಲೇ ಅವಳ ತಲೆಗೂದಲನ್ನು ತೆಗೆದು ಅವಳಿಗೆ ಬಿಳಿಸೀರೆ ಉಡಿಸಿದ್ದು ಎಲ್ಲವೂ ಅವಳ ಕಣ್ಣಮುಂದೆ ಚಿತ್ರಪಟದಂತೆ ಹಾದುಹೋಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಬಳೆ ಒಡೆಯುವಾಗ, ನನ್ನ ಚಿಕ್ಕಿಬಳೆ..ಎಂದು ಕಣ್ಣೀರು ಹಾಕಿದ್ದನ್ನು ನೆನೆಸಿಕೊಂಡ ಫಣಿಯಮ್ಮ ಅದೇ ಜಾಗದಲ್ಲಿ ನಿಂತು ತನ್ನ ಬೋಳು ಕೈಗಳನ್ನೊಮ್ಮೆ ನೋಡಿಕೊಳ್ಳುತ್ತಾಳೆ.

ಹೀಗೆ ಎಲ್ಲ ಕಂದಾಚಾರವನ್ನೂ ಮೌನವಾಗಿ ಒಪ್ಪಿದ ಫಣಿಯಮ್ಮ ಬೇರೆಯವರ ಸ್ವಾತಂತ್ರ್ಯಕ್ಕೆ ಅಡ್ಡಿಬಂದವಳಲ್ಲ. ಅದಕ್ಕೆ ಪುಟ್ಟಾಜೋಯಿಸ ಮತ್ತು ಸುಬ್ಬಿಯ ಸಂಬಂಧವನ್ನು ನೋಡಿದ ಫಣಿಯಮ್ಮನಿಗೆ ಅದೊಂದು ತಪ್ಪು ಎಂದೆನಿಸುವುದಿಲ್ಲ. ಆದರೆ ಕೂದಲು ತೆಗೆಯಲು ಬಂದವನಿಗೆ, ಬದುಕಿನಲ್ಲಿ ಒಮ್ಮೆಯೂ ಗಂಡಸಿನ ಸಂಪರ್ಕವೇ ಮಾಡದ ತನಗೆ ತಿಂಗಳು ತಿಂಗಳು ಇವನಿಂದ್ಯಾಕೆ ಕೂದಲು ತೆಗೆಸಿಕೊಳ್ಳಬೇಕೆಂದು ಯೋಚಿಸಿ, ಉಮಾತನ ಕಾಯಿ ರಸವನ್ನು ತಲೆತುಂಬ ಹಚ್ಚಿಕೊಂಡು ಕೂದಲು ಬೆಳೆಯದಂತೆ ನೋಡಿಕೊಳ್ಳುತ್ತಾಳೆ.
ಅವಳ ಸಂಬಂಧಿ ದಾಕ್ಷಾಯಿಣಿ ಗಂಡ ತೀರಿಕೊಂಡಾಗ ಇಡೀ ಮನೆಯವರೆಲ್ಲ ಅವಳಿಗೆ ಬಿಳಿಸೀರೆ ಉಡಿಸಿ ಮಡಿ ಮಾಡಿಸಬೇಕೆಂದುಕೊಂಡಾಗ ಫಣಿಯಮ್ಮ ಅದನ್ನು ವಿರೋಧಿಸುತ್ತಾಳೆ. ನಂತರ ಅವಳು ಮೈದುನನಿಗೇ ಗರ್ಭಿಣಿಯಾದಾಗಲೂ ಅವಳು ಅದನ್ನು ತಪ್ಪೆಂದು ಹೇಳುವುದಿಲ್ಲ. ಎಲ್ಲರೂ ಫಣಿಯಮ್ಮನನ್ನು ಹೀಗಳೆದಾಗ, ಕಾಲ ಬದಲಾಗಿದೆ, ನಾನು ಹಾಗಿದ್ದೇನೆಂದೂ ಇವರೂ ಜೀವ ತೇಯಬೇಕೆಂದೇನಿಲ್ಲ ಎಂದು ಹೇಳುವಷ್ಟು ಫಣಿಯಮ್ಮ ಆಧುನಿಕ ಮನೋಭಾವದವಳು. ‘ಏನ್ ಶಾಸ್ತ್ರಾನೋ ಏನೋ..ಗಂಡಸರಾದರೆ ತಪ್ಪು ಮಾಡಿದರೆ ಸ್ನಾನ ಮಾಡಿ ಜನಿವಾರ ಬದಲಾಯಿಸಿಕೊಂಡುಬಿಟ್ಟರೆ ಶುದ್ಧವಾಗಿಬಿಡುತ್ತದೆ. ಅದೇ ಹೆಂಗಸರಾದರೆ ಗಂಡ ಸತ್ತರೆ ತಲೆಬೋಳಿಸ್ಕೋಬೇಕಂತೆ, ಮಡಿ ಮಾಡಬೇಕಂತೆ..’ ಎಂದು ನಿಟ್ಟುಸಿರುಬಿಡುತ್ತಾಳೆ. ಬೇರೆಯವ ಬದುಕಿನಲ್ಲೇ ತನ್ನ ಸಂತೋಷ ಕಾಣುವವಳು. ಅದೆಷ್ಟು ಮೊಮ್ಮಕ್ಕಳು, ಮರಿಮಕ್ಕಳನ್ನೆಲ್ಲ ಅವಳು ಎತ್ತಿ ಆಡಿಸಿದ್ದಾಳೋ. ಅದೆಷ್ಟು ಜನರ ಬಾಣಂತನವನ್ನು ಮಾಡಿದ್ದಾಳೋ ಲೆಕ್ಕವಿಲ್ಲ.

ಅಂಥ ಫಣಿಯಮ್ಮ ತನ್ನ 7-8 ವಯಸ್ಸಿಗೆ ಕೇಶಮುಂಡನ ಮಾಡಿಸಿಕೊಂಡು, ಬಿಳಿಸೀರೆ ಉಟ್ಟು, ಜಪಸರ ಹಿಡಿದು 70 ವರ್ಷಗಳ ಕಾಲ ತಪಸ್ವಿನಿಯಂತೆ ಬದುಕುತ್ತಾಳೆ.
ಇದು ಎಂ.ಕೆ.ಇಂದಿರಾ ಕಾದಂಬರಿ ಆಧಾರಿತ ಫಣಿಯಮ್ಮ ಸಿನಿಮಾದ ಕಥೆ. 1983ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಪ್ರೇಮಾ ಕಾರಂತ್ ಅವರು ನಿರ್ದೇಶಿಸಿದ್ದಾರೆ. ಇದಕ್ಕೆ ರಾಜ್ಯ, ರಾಷ್ಟ್ರ ಅಂತಾರಾಷ್ಟ್ರೀಯ ಪ್ರಶಸ್ತಿಗಳು, ಗೌರವಗಳು ಸಂದಿವೆ. ಎಲ್.ವಿ.ಶಾರದಾ ಕಣ್ಣುಗಳಲ್ಲೇ ಭಾವವನ್ನು ತುಳುಕಿಸುತ್ತ, ಇಡೀ ಮೌನವನ್ನು ಕಣ್ಣಿನಿಂದಲೇ ಮಾತಾಗಿಸುತ್ತಾರೆ. ಜೊತೆಗೆ ಅಜ್ಜಿ ಫಣಿಯಮ್ಮನ ಪಾತ್ರ ಮಾಡುವಾಗ ಶಾರದಾಗೆ ಇಪ್ಪತೈದೋ ಇಪ್ಪತ್ತಾರೋ ವರ್ಷಗಳಾಗಿರಬಹುದು. ಅಷ್ಟು ಚಿಕ್ಕ ಹುಡುಗಿ ವಯಸ್ಸಿಗೆ ಮೀರಿದ ಪಾತ್ರವನ್ನು ನಿರ್ವಹಿಸಿ ಸೈ ಎನಿಸಿಕೊಳ್ಳುತ್ತಾರೆ ಕೂಡ. ಬಿಳಿ ಸೀರೆ ಉಟ್ಟು ಉಸ್ಸಪ್ಪಾ ಎಂದು ತಡಕಾಡುತ್ತ ಥೇಟು ಅಜ್ಜಿಯಂತೆಯೇ ನಡೆದಾಡುವ ಫಣಿಯಮ್ಮನ ಪಾತ್ರದಾರಿ ಶಾರದಾ ಸಂಪೂರ್ಣವಾಗಿ ಫಣಿಯಮ್ಮನಿಗಾಗಿ ಅರ್ಪಿಸಿಕೊಂಡಿದ್ದರು ಎನ್ನುವುದರಲ್ಲಿ ಎರಡುಮಾತಿಲ್ಲ.

 

ಇಷ್ಟೆಲ್ಲ ಆಧುನಿಕ ಮನೋಭಾವದ ಫಣಿಯಮ್ಮ ಚಿಕ್ಕವಳಿರುವಾಗ ಅವಳು ತುಳಸಿ ಪೂಜೆ ಮಾಡುವಾಗ ಅರಿಶಿಣ ಕುಂಕುಮ ಚೆಲ್ಲುವುದು ನೋಡಿದಾಗ ಎಲ್ಲೋ ಮುಂದಾಗುವ ಅವಘಡದ ಮುನ್ಸೂಚನೆಯಾಗಿ ಗೋಚರಿಸುತ್ತದೆ. ಅಂದರೆ ಅದು ಕಾದಂಬರಿಯಲ್ಲಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರೇಮಾ ಈ ದೃಶ್ಯವನ್ನು ಕೈಬಿಡಬಹುದಿತ್ತು ಎಂದೆನಿಸದಿರದು. ಇದಲ್ಲದೆ ಅವಳ ಜಡೆ ಕತ್ತರಿಸುವುದು, ಜಡೆ ಬೆಳೆಯುವವರೆಗೂ ಕತ್ತಲ ಕೋಣೆಯಲ್ಲಿ ಕೂಡಿ ಹಾಕಿದಾಗ ಮನೆಯ ಗಂಡಸರಾರೂ ಮಾತಾಡದಿದ್ದವರು ಫಣಿಯಮ್ಮ ವಿಧವೆ ಆದ ತಕ್ಷಣ ಅವಳ ಕೂದಲು ತೆಗೆಯುವುದು ಯಾಕೋ ಕಸಿವಿಸಿ ಅನಿಸುತ್ತದೆ.

ಬದುಕಿನುದ್ದಕ್ಕೂ ಒಂಟಿಯಾಗಿಯೇ ಕಳೆದ ಎಲ್.ವಿ.ಶಾರದಾ, ಕಲಾತ್ಮಕ ಸಿನಿಮಾಗಳು ಕಡಿಮೆಯಾದಾಗ ಸಾಕ್ಷ್ಯಚಿತ್ರಗಳತ್ತ ಒಲವು ತೋರಿದರು. ಫಣಿಯಮ್ಮ ಸಿನಿಮಾದ ಶೂಟಿಂಗ್ ಸಮಯದಲ್ಲಿ ಆ ಊರಲ್ಲಿ ಉಕ್ಕಿ ಹರಿಯುತ್ತಿದ್ದ ನದಿ ನಂತರದ ವರ್ಷಗಳಲ್ಲಿ ಬತ್ತಿಹೋಗಿದ್ದನ್ನು ನೆನಸಿಕೊಂಡು ಶಾರದಾ ಬೇಸರಿಸಿಕೊಳ್ಳುತ್ತಿದ್ದರು. ಪರಿಸರ, ಕೆರೆ ಉಳಿಯುವಿಕೆಗಾಗಿ ಕಾಳಜಿ ತೋರಿಸುತ್ತಿದ್ದ ಶಾರದಾ ಈ ಕುರಿತು ಅನೇಕ ಸಾಕ್ಷ್ಯಚಿತ್ರಗಳನ್ನೂ ನಿರ್ಮಿಸಿದ್ದರು. ಅವರು ಪರಿಸರ ಕುರಿತು ತೋರುವ ಕಾಳಜಿ. ಕೆರೆಗಳ ನಾಶದ ಕುರಿತು ಮಾಡಿದ ಸಾಕ್ಷ್ಯ ಚಿತ್ರ ಇಂದಿಗೂ ಇಲಾಖೆಯವರು ಕೆರೆಗಳ ಕುರಿತು ಅಧ್ಯಯನ ಮಾಡುವಾಗ ಇವರ ಸಾಕ್ಷ್ಯಚಿತ್ರವನ್ನು ಪರಿಗಣಿಸುತ್ತಾರೆ. ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಗಾಗಿ ಕರ್ನಾಟಕ 1 ಮತ್ತು 2 ಎಂಬಸಾಕ್ಷ್ಯಚಿತ್ರಗಳನ್ನು ಶಾರದಾ ರೂಪಿಸಿದರು. ಅನಂತರ ಹಂಪಿ ಕುರಿತು ಸಾಕ್ಷ್ಯ ಚಿತ್ರ ನಿರ್ಮಿಸಿದರು. ಇದಲ್ಲದೆ ಬಿ.ಸರೋಜಾದೇವಿ, ನಿಟ್ಟೂರು ಶ್ರೀನಿವಾಸರಾವ್, ಮಾಸ್ಟರ್ ಹಿರಣ್ಣಯ್ಯ, ಶಿವಮೊಗ್ಗ ಸುಬ್ಬಣ್ಣ ಅವರ ಕುರಿತು 5 ನಿಮಿಷಗಳ ಸಾಕ್ಷ್ಯ ಚಿತ್ರವನ್ನು ಕರ್ನಾಟಕ ಸರ್ಕಾರಕ್ಕೆ ನಿರ್ಮಿಸಿಕೊಟ್ಟಿದ್ದಾರೆ.

ಹೀಗೆ ಕಲಾತ್ಮಕ ಸಿನಿಮಾ, ರಂಗಭೂಮಿ, ಸಾಕ್ಷ್ಯಚಿತ್ರ ಎಂದು ಬದುಕಿನುದ್ದಕ್ಕೂ ಕಳೆದ ಶಾರದಾ ಕೆಲವು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದರು. ಇಷ್ಟಾದರೂ ಕಲಾತ್ಮಕ ಸಿನಿಮಾಗೆ ಒಂದೊಳ್ಳೆ ಪಾತ್ರ ಬಂದರೆ ಖಂಡಿತ ನಟಿಸುತ್ತೇನೆ ಎಂದಿದ್ದರು ಕೂಡ.
ಇಂದು ಶಾರದಾ ನಮ್ಮೊಂದಿಗಿಲ್ಲ. ಅವರು ನಟಿಸಿದ್ದು ಕೆಲವೇ ಚಿತ್ರಗಳಿರಬಹುದು. ಆದರೆ ಅವೆಲ್ಲವೂ ಚಿತ್ರರಂಗದ ಇತಿಹಾಸದಲ್ಲಿ ದಾಖಲಾಗಿ ನಿಲ್ಲುವಂಥವು ಎಂಬುದನ್ನು ಮರೆಯುವಂತಿಲ್ಲ.

ಭಾರತಿ ಹೆಗಡೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *