ಚಿತ್ರ ಭಾರತಿ/ಅಸ್ತಿತ್ವದ ಹುಡುಕಾಟದಲ್ಲಿ – ಭಾರತಿ ಹೆಗಡೆ

ಗಂಡ-ಮಕ್ಕಳು -ಸಂಸಾರ…ಈ ಮೂರರ ಹೊರತಾಗಿ ಮಹಿಳೆಯೊಬ್ಬಳು ಯೋಚಿಸುತ್ತಾಳೆಂದರೆ ಅದು ಅವಳ ತೀವ್ರವಾದ ಸ್ವೇಚ್ಛಾಚಾರವಾಗುತ್ತದೆ, ಸ್ವಾರ್ಥ ಎಂದೆನಿಸಿಕೊಂಡುಬಿಡುತ್ತದೆ. ಇಂಥ ಎಲ್ಲ ನಿಂದನೆಗಳು, ಒತ್ತಡಗಳ ನಡುವೆಯೂ ಅವಳು ಗೆಲ್ಲುವುದು ಅವಳತನವನ್ನು ಕಾಯ್ದುಕೊಂಡದ್ದರಿಂದ. ಇದನ್ನು ಎತ್ತಿಹಿಡಿಯುವುದರಿಂದ ಬಂಗಾಳಿ ಸಿನಿಮಾ ‘ಅಂಡರ್ ಕನ್ ಸ್ಟ್ರಕ್ಷನ್’  ಈ ಕಾರಣಕ್ಕಾಗಿಯೇ ತುಂಬ ಇಷ್ಟವಾಗುತ್ತದೆ

ಅವಳೊಬ್ಬಳು ಕಲಾವಿದೆ. ಕಲೆಯಲ್ಲಿ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಳ್ಳಬೇಕೆಂದು ಹೊರಟಿರುವವಳು. ಆದರೆ ಕುಟುಂಬದ ಸಾಂಪ್ರದಾಯಿಕ ಮನಸ್ಸು ಅವಳನ್ನು ಅವಳಷ್ಟಕ್ಕಿರಲು ಬಿಡುವುದಿಲ್ಲ. ನೀನೊಬ್ಬಳು ಮಹಿಳೆ. ಮಹಿಳೆಯ ಸಾರ್ಥಕ್ಯವಿರುವುದೇ ಮಗುವನ್ನು ಪಡೆಯುವುದರಲ್ಲಿ. ಹಾಗಾಗಿ ಮಗುವನ್ನು ಹೆರಲೇಬೇಕೆಂಬ ಒತ್ತಾಯವನ್ನು ಅವಳ ಮೇಲೆ ಹೇರಲಾಗುತ್ತದೆ. ಈ ಚಡಪಡಿಕೆಯಲ್ಲಿ ಅವಳೇನು ಮಾಡುತ್ತಾಳೆ…?

ಇದು 2015ರಲ್ಲಿ ಬಿಡುಗಡೆಯಾದ, ರಾಹುಲ್ ಬೋಸ್ ಮತ್ತು ಮಿತಾ ರೆಹಮಾನ್ ಮುಖ್ಯ ಭೂಮಿಕೆಯಲ್ಲಿರುವ  ‘ಅಂಡರ್ ಕನ್ ಸ್ಟ್ರಕ್ಷನ್’   ಮಹಿಳಾ ಅಂತಃಸತ್ವವನ್ನು, ಮಹಿಳಾ ಅಸ್ಮಿತೆಯನ್ನು ನಿಜದ ಅರ್ಥದಲ್ಲಿ ಎತ್ತಿ ಹಿಡಿಯುವಂಥ ಸಿನಿಮಾ. 2016 ರ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ತೆರೆಕಂಡು ಮೆಚ್ಚುಗೆ ಪಡೆದ ಸಿನಿಮಾ. ರುಬೈಯಾತ್   ಹೊಸೇನ್ ನಿರ್ದೇಶನದ ಈ ಸಿನಿಮಾ ಬಾಂಗ್ಲಾದೇಶದ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ, ಅತ್ಯುತ್ತಮ ಸಂಭಾಷಣೆಗಾಗಿಯೂ ರಾಷ್ಟ್ರ ಪ್ರಶಸ್ತಿ ಪಡೆದಿದೆ.

ನಿಜ, ಈ ನೆಲದಲ್ಲಿ ಮಹಿಳೆಯ ಬದುಕನ್ನು ನಿರ್ಧರಿಸುವವರು ಬೇರೆ ಯಾರೋ… ಎಂಥ ಗಂಡ, ಎಂಥ ಮನೆ, ಯಾವಾಗ ಮದುವೆ, ನಂತರ ಮಗು ಯಾವಾಗ, ಯಾವ ಮಗುವನ್ನು ಪಡೆಯಬೇಕು, ಈಗಲೇ ಮಗು ಬೇಕೇ ಬೇಡವೇ, ಅವಳು ಕೆಲಸಕ್ಕೆ ಹೋಗಬೇಕೇ ಬೇಡವೇ, ಅವಳು ಹೆಚ್ಚಿಗೆ ಓದಬೇಕೇ ಬೇಡವೇ…ಹೀಗೆ ಪ್ರತಿಯೊಂದನ್ನೂ ನಿರ್ಧರಿಸುವುದು ಒಬ್ಬ ಪುರುಷ. ಮೊದಲು ಅಪ್ಪ, ನಂತರ ಗಂಡ.

ಆದರೆ ಅವರಿಗೆ ಅವರದ್ದೇ ಆದ ಲೋಕವಿದೆ. ಅವರ ಬದುಕನ್ನು ಅವರೇ  ನಿರ್ಧರಿಸಬಲ್ಲರು. ಆದರೆ ಹಾಗೆ ನಿರ್ಧರಿಸ ಹೊರಟರೆ ಅವರನ್ನು ಸ್ವಾರ್ಥಿ ಎನ್ನುತ್ತದೆ ಈ ಸಮಾಜ.

ಇಂಥದ್ದೇ ಕಥಾವಸ್ತುವನ್ನಿಟ್ಟುಕೊಂಡು ನಿರ್ಮಿಸಿದ ಬಂಗಾಳಿ ಭಾಷೆಯ ಸಿನಿಮಾ ‘ಅಂಡರ್ ಕನ್ ಸ್ಟ್ರಕ್ಷನ್’ನಲ್ಲಿ ನಿರ್ದೇಶಕಿ ರುಬೈಯಾತ್  ಹೊಸೇನ್ ಚೌಕಟ್ಟಿನಾಚೆ ಮಹಿಳೆಯನ್ನು ನೋಡುವ ಪ್ರಯತ್ನ ಮಾಡಿದ್ದಾರೆ. ಸಿನಿಮಾದಲ್ಲಿ ತಮ್ಮ  ಆದ್ಯತೆಗಳು ಮತ್ತು ಅಗತ್ಯತೆಗಳ ಬಗ್ಗೆ ಇನ್ನೂ ಗೊಂದಲಕ್ಕೊಳಗಾಗುವ ಇಂದಿನ ಮಹಿಳೆಯರನ್ನು ನೋಡುತ್ತೇವೆ. ಈ ಮಹಿಳೆಯರೆಲ್ಲ ಈಗಲೂ  ನಿರ್ಮಾಣದ ಹಂತದಲ್ಲೇ ಇದ್ದಾರೆ. ತಮ್ಮದೇ ಹುಟ್ಟು, ತಾವಿರುವ ಜಾಗ ಹಾಗೂ ಇತರರ ಜಾಗದಲ್ಲಿ ತಮ್ಮ ಸ್ಥಾನಗಳೇನು…ಇವುಗಳ ಕುರಿತೇ ಅವರ ಹುಡುಕಾಟವಿರುತ್ತದೆ, ಎನ್ನುತ್ತಾರೆ ನಿರ್ದೇಶಕಿ.

ರವೀಂದ್ರನಾಥ್ ಠಾಗೋರ್ ಅವರ ‘ರೆಡ್ ಓಲಿಯಂಡರ್’ನ ನಾಟಕದ ಮರು ರಚನೆ ಎಂದೇ ಕರೆಸಿಕೊಳ್ಳುವ ‘ಅಂಡರ್ ಕನ್ ಸ್ಟ್ರಕ್ಷನ್’ ಸಿನಿಮಾ ಕುರಿತು ನಿರ್ದೇಶಕಿ, ತಾನು ಎಂ.ಎ ಮಾಡುತ್ತಿರುವಾಗಲೇ, ಈ ನಾಟಕವನ್ನು ಓದಿದ್ದೆ ಮತ್ತು ಎಲ್ಲ ಕಡೆ ರಂಗಪ್ರಯೋಗಕ್ಕೂ ಇಳಿಸಿದ್ದೆ ಕೂಡ. ನಿಜ ಹೇಳಬೇಕೆಂದರೆ ನಾನು ಈ ನಾಟಕದ ದೃಶ್ಯೀಕರಣದ ಬಗ್ಗೆ ಹೆಚ್ಚು ಆಸಕ್ತಿಯುಳ್ಳವಳಾಗಿದ್ದೆ ಮತ್ತು ಇದು ಎಲ್ಲ ಕಾಲಕ್ಕೂ ಸಲ್ಲುವಂಥದ್ದು  ಎಂದೆನಿಸಿತು. ಠಾಗೋರ್ ಅವರ ದೃಷ್ಟಿಕೋನವನ್ನು ಅಭ್ಯಸಿಸಿದೆ. ಅದೇ ಸಮಯದಲ್ಲಿ ನಂದಿನಿ ಪಾತ್ರವನ್ನು ಅವರು ಪ್ರಸ್ತುತ ಪಡಿಸಿರುವ ಕುರಿತೂ ವಿಮರ್ಶಿಸಿದ್ದೇನೆ ಎನ್ನುತ್ತಾರೆ.

ರೋಯಾ ಒಬ್ಬ ರಂಗಭೂಮಿ ಕಲಾವಿದೆ. ಆಕೆಗೆ ಮದುವೆಯಾಗಿದೆ. ಮೇಲ್ನೋಟಕ್ಕೆ ಅವಳು ಸುಖಿ. ಅವಳಿಗೆಲ್ಲವೂ ಇದೆ. ವಿದ್ಯಾವಂತೆ, ರಂಗಭೂಮಿ ಕಲಾವಿದೆ. ಮೆಲುವಾಗಿ ಮಾತನಾಡುವ ಗಂಡ, ಒಳ್ಳೆಯವನು ಎಂದು ಹೆಸರು ಪಡೆದವನು. ಸುಂದರವಾದ ಅಪಾರ್ಟ್‍ಮೆಂಟಲ್ಲಿ ಆಪ್ತ ಸೇವಕಿಯೊಂದಿಗೆ ವಾಸ. ಇವಳ ಸುಖಕ್ಕಿನ್ನೇನು ಬೇಕು ಎಂದೆನಿಸಿಬಿಡುತ್ತದೆ.

ರೋಯಾಳಿಗೆ ತಾನೊಬ್ಬ ಹೌಸ್‍ವೈಫ್ ಆಗಿ ಮನೆಗೆಲಸ ಮಾಡಿಕೊಂಡಿರಲು ಮನಸ್ಸು ಒಪ್ಪುವುದಿಲ್ಲ. ಹಾಗಾಗಿ ಅವಳು ಸದಾ ತನ್ನ ಕಲೆಯ ಕುರಿತೇ ಯೋಚಿಸುತ್ತಿರುತ್ತಾಳೆ. ಆದರೆ ಅವಳ ಗಂಡನಿಗೆ ಮತ್ತು ಗಂಡನನ್ನು ಬಿಟ್ಟು ಇವಳ ಮನೆಯಲ್ಲೇ ವಾಸ್ತವ್ಯವಿರುವ ರೋಯಾಳ ಅಮ್ಮನಿಗೆ ಅವಳು ಮಗುವನ್ನು ಹೆತ್ತು ಸಂಸಾರದ ಕಡೆ ಗಮನಹರಿಸಬೇಕೆಂಬಾಸೆ. ಅದಕ್ಕಾಗಿ ಅವಳ ಮೇಲೆ ಒತ್ತಡ ಹೇರುತ್ತಾರೆ. ಹೆಣ್ಣಿನ ಸಾರ್ಥಕ್ಯವೇನಿದ್ದರೂ ಅವಳು ಮಗುವನ್ನು ಪಡೆಯುವುದರಲ್ಲಿದೆ. ಹಾಗಾಗಿ ನೀನು ಮಗುವನ್ನು ಹೆರಲೇ ಬೇಕು ಎಂಬ ಒತ್ತಡ. ಅದು ಎಲ್ಲಿವರೆಗೆ ಹೋಗುತ್ತದೆಂದರೆ ಗಂಡ ಅವಳಿಗೊಮ್ಮೆ ನೀನೆಂಥ ಸ್ವಾರ್ಥಿ. ನಿನಗೆ ಗಂಡ-ಮಕ್ಕಳು, ಸಂಸಾರಕ್ಕಿಂತ ನಿನಗೆ ನಿನ್ನ ಸ್ವಾರ್ಥವೇ ಹೆಚ್ಚು ಮುಖ್ಯ ಎಂದು ಬಯ್ಯುತ್ತಾನೆ. ಅವಳು ಅವಳ ಇಚ್ಛೆಯ ಬಗ್ಗೆ ಯೋಚಿಸಿದರೆ ಅದು ಅವಳ ಸ್ವಾರ್ಥವಾಗುತ್ತದೆ. ಮಗುವನ್ನು ಪಡೆದರೆ  ಅವಳು ತ್ಯಾಗಿಯಾಗುತ್ತಾಳೆ. ಅವತ್ತು ರಾತ್ರಿ ಅವಳು ಮಲಗಿದಾಗ, ಪಕ್ಕದಲ್ಲಿ ಮಲಗಿದ ಗಂಡ ಅವಳಿಗೆ ಹಾವಿನಂತೆ ಕಾಣುತ್ತಾನೆ. ಅಂದರೆ ಅಲ್ಲಿಂದ ಅವಳಿಗೆ ಇದು ತನ್ನ ಜಗತ್ತಲ್ಲ, ಇದು ತನಗೆ ಬೇಕಾದ್ದಲ್ಲ ಎಂದು ಅನಿಸಲು ಶುರುವಾಗುತ್ತದೆ. ರೋಯಾ ಠಾಗೋರರ ನಂದಿನಿ ಪಾತ್ರವನ್ನು ಮಾಡಲಿಕ್ಕಿರುವವಳು. ನಾಟಕದಲ್ಲಿ ನಂದಿನಿ ತುಂಬ ಸ್ವತಂತ್ರ ವ್ಯಕ್ತಿತ್ವದ ಹೆಣ್ಣು. ಹೀಗೆ ನಂದಿನಿ ಪಾತ್ರವನ್ನು ಮಾಡುತ್ತ ರೋಯಾಳ ಒಳಗೊಬ್ಬಳು ನಂದಿನಿ ಇರುವುದನ್ನು ಹೊರತೆಗೆಯುತ್ತಾರೆ ನಿರ್ದೇಶಕರು.

ಅವಳ ಆಪ್ತ ಸಖಿ ಮೊಯ್ನಾ ಕೂಡ ತನ್ನ ಬದುಕಿನ ಸುರಕ್ಷತೆಯನ್ನು ಅರಸುತ್ತಿರುತ್ತಾಳೆ. ಅವಳಿಗೊಬ್ಬ ಪ್ರೇಮಿ. ಅವನಿಗಾಗಿ ಅವಳು ಅವರ ಮನೆಗೆಲಸವನ್ನೂ ಬಿಟ್ಟು ಗಾರ್ಮೆಂಟ್ಸ್‌ ಗೆ ಸೇರಿಕೊಳ್ಳುತ್ತಾಳೆ. ಅಲ್ಲಿ ಅವಳೂ ಸೇರಿದಂತೆ ಅನೇಕರನ್ನು ನೋಡುತ್ತ ಬರುವ ರೋಯಾಳಿಗೆ, ಅದುವರೆಗೆ ಅವಳ ಗೆಳತಿ, ಕೆಲಸದವಳಿಗಿರುವ ಅಸ್ತಿತ್ವವೂ ಅಲ್ಲಿಗೆ ಹೋದ ಮೇಲೆ ಮಾಯವಾಗಿ ಬಿಡುತ್ತದೆ. ಆಗವಳು ಇತರರಲ್ಲಿ ಒಬ್ಬಳಾಗಿಬಿಡುತ್ತಾಳೆ. ಅಂದರೆ ಅಸ್ತಿತ್ವವೇ ಇಲ್ಲದ ಇಂಥವರ ಪಾಡೇನು ಎಂದು ಯೋಚಿಸುತ್ತಾಳೆ ರೋಯಾ.

ಹೀಗೆ ಸಮಾನಾಂತರವಾಗಿ ಎರಡು ಕತೆಗಳು ಸಾಗುವ ಇದರಲ್ಲಿ ಮುಕ್ತತೆಗಾಗಿ, ಬಿಡುಗಡೆ ಮತ್ತು ಸುರಕ್ಷತೆ ಈ ಮೂರನ್ನೂ ಹೆಣ್ಣಿನ ದೃಷ್ಟಿಕೋನದಲ್ಲಿ ಸಾಕಷ್ಟು ಚರ್ಚಿಸಿದ್ದಾರೆ.

ಹೀಗೆ ಮುಕ್ತತೆ ಮತ್ತು ಗಾರ್ಮೆಂಟ್‍ನ ಮಹಿಳಾ ನೌಕರರ ಸಮಸ್ಯೆ ಈ ಎರಡನ್ನೂ ಒಟ್ಟೊಟ್ಟಿಗೇ ತಂದಿರುವುದು ನಿರ್ದೇಶಕಿಯ ಜಾಣ್ಮೆಯನ್ನು ತೋರಿಸುತ್ತದೆ. ಅದು ಹೆಚ್ಚು ಪ್ರಕಟಗೊಳ್ಳುವುದು, ಗಾರ್ಮೆಂಟ್ ನೌಕರರೆಲ್ಲ ಎರಡೂ ಕಡೆ ಸಾಲಾಗಿ ಹೋಗುತ್ತಿರುವಾಗ ಅವರ ಮಧ್ಯೆನಿಂತ ರೋಯಾಳಿಗೆ ಅವರ ಮುಖಗಳು ಕಾಣಿಸುವುದೇ ಇಲ್ಲ, ಬರೀ ಸಂಖ್ಯೆ ದೃಷ್ಟಿಯಲ್ಲಿಮಾತ್ರ. ಇರುತ್ತಾರೆ. ಅಂದರೆ ಹೇಗೆ ಅವರೆಲ್ಲ ಇಂಡಿವಿಜ್ಯುವಾಲಿಟಿಯನ್ನು ಕಳೆದುಕೊಳ್ಳುತ್ತಾರೆ, ಅದೇ ಹೊತ್ತಲ್ಲಿ ತಾನು ಕೂಡ ತನ್ನ ಇಂಡಿವಿಜ್ಯುವಾಲಿಟಿಯನ್ನು ಕಳೆದುಕೊಳ್ಳಬೇಕಾಗಿ ಬರಬಹುದೆಂಬ ಭಯ. ಅದಕ್ಕಾಗಿ ಅವಳು ಮನೆಯ ಕೆಲಸದವಳನ್ನು ಗಾರ್ಮೆಂಟ್‍ಗೆ ಹೋಗಬೇಡ ಎಂದು ತಡೆಯುತ್ತಾಳೆ. ಆದರೆ ಆ ಹುಡುಗಿಗೆ ಅನಿಸುತ್ತದೆ, ತನಗೆ ಸುರಕ್ಷೆ ಅಪ್ಪ-ಅಮ್ಮನ ಬಳಿ ಇಲ್ಲ ಅದು ಸಿಕ್ಕುವುದು ಪ್ರೇಮಿಯಿಂದ ಮಾತ್ರ ಎಂದು ಅವನನ್ನೇ ಮದುವೆಯಾಗುತ್ತಾಳೆ. ಆದರೆ ಕಡೆಗೊಮ್ಮೆ ಅವಳ ಮನೆಗೆ ಹೋಗಿ ನೋಡುವ ರೋಯಾಗೆ ಅರಿವಾಗುತ್ತದೆ, ಇಲ್ಲಿಯೂ ಅವಳು ಸುರಕ್ಷಿತವಾಗಿಲ್ಲ ಎಂದು. ಅದಕ್ಕೆ ತನ್ನ ಸುರಕ್ಷೆಯನ್ನು ತಾನೇ ಕಂಡುಕೊಳ್ಳಬೇಕೆಂಬ ನಿಟ್ಟಿನಲ್ಲಿ ಹೊರಡುತ್ತಾಳೆ. ಗಾರ್ಮೆಂಟ್ಸ್ ನೌಕರರಿಗೆ ಅಸ್ತಿತ್ವವೇ ಇಲ್ಲ ಎಂಬುದನ್ನು ಅವರು ಬಟ್ಟೆ ಹೊಲಿಯುವಾಗ ಅವರ ಕೈ ತುಂಡಾಗುವುದು, ಬೆರಳುಗಳು ಗಾಯಗಳಾಗುವುದು, ಅದನ್ಯಾರೂ ಗಂಭೀರವಾಗಿ ಪರಿಗಣಿಸದೇ ಇರುವುದು ಎಲ್ಲವನ್ನೂ ತುಂಬ ಸಾಂಕೇತಿಕವಾಗಿ ತೋರಿಸಿದಂತೆಯೇ ರೋಯಾಳಿಗೆ ಅವಳ ಗಂಡ ಪಕ್ಕದಲ್ಲಿ ಬಂದು ಮಲಗಿದಾಗ ಹಾವಿನಂತೆ ತೋರಿಸಿರುವುದು ಕೂಡ ಅಷ್ಟೇ ಮಾರ್ಮಿಕವಾಗಿದೆ.

ಈ ನಾಟಕವನ್ನು ಠಾಗೋರ್ ಅವರು 1926ರಲ್ಲೇ ಬರೆದಿದ್ದರು. ಅವರು ಬರೆಯುವ ಹೊತ್ತಿಗೆ ಇಡೀ ಜಗತ್ತು ಅದರಲ್ಲೂ ಪಶ್ಚಿಮದಲ್ಲಿ ಕೈಗಾರಿಕಾ ಕ್ರಾಂತಿಯಾಗಿತ್ತು. ಕೈಗಾರೀಕರಣ ಮತ್ತು ಪಾಶ್ಚಿಮಾತ್ಯ ಆಧುನಿಕತೆಯನ್ನು ಈ ನಾಟಕದಲ್ಲಿ ಟೀಕಿಸಿದರು. ಅವರ ನಾಟಕದ ನಾಯಕಿ ನಂದಿನಿ ಈ ಅರೆ ಆಧುನಿಕ ಜಗತ್ತಿನ ಒಂದು ಗೆರೆಯಿಂದ ಬಂದವಳು. ಅವಳೊಬ್ಬಳು ಸುಂದರವಾದ ಯೌವ್ವನಭರಿತ ಹೆಣ್ಣು. ಅಸ್ತಿತ್ವಕ್ಕಾಗಿ, ಐಡೆಂಟಿಟಿಗಾಗಿ ಹೋರಾಡುವವಳು. ನಾನಿಲ್ಲಿ ಬಾಂಗ್ಲಾದೇಶದ ಇಂದಿನ ಗಾರ್ಮೆಂಟ್ಸ್ ನೌಕರರ ಸಮಸ್ಯೆಯ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ನಿರ್ಮಿಸಿದೆ. ನೂರಾರು ಕೆಲಸಗಾರರು ವಿಶೇಷವಾಗಿ ಮಹಿಳೆಯರು, ಅವರೆಲ್ಲ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರೆಲ್ಲ ಸಂಖ್ಯಾ ದೃಷ್ಟಿಯಲ್ಲಿ ಮಾತ್ರ ಜೀವಂತವಾಗಿರುತ್ತಾರೆಯೇ ಹೊರತು ಅವರು ನಿಜವಾಗಿ ಜೀವಿಸಿರುವುದಿಲ್ಲ. ಈ ನೌಕರರ ಬದುಕಿನ ಹಿನ್ನೆಲೆಯಲ್ಲಿ ರೋಯಾ ಪಾತ್ರವನ್ನು ಕಟ್ಟುತ್ತಾ ಹೋದೆ ಎನ್ನುತ್ತಾರೆ ನಿರ್ದೇಶಕಿ ರುಬೈಯಾತ್  ಹೊಸೇನ್.

ಬಾಂಗ್ಲಾದೇಶದಲ್ಲಿ ಇರುವ ಕೆಲವೇ ನಿರ್ದೇಶಕಿಯರಲ್ಲಿ  ಇಂಥ ಕಟು ಸ್ತ್ರೀವಾದದ ಸಿನಿಮಾವನ್ನು ತರಲು ಕಷ್ಟ ಎಂದೆನಿಸಲಿಲ್ಲವೇ ಎಂದು ಕೇಳಿದ್ದಕ್ಕೆ, ಚಿತ್ರೋದ್ಯಮ ಮಾತ್ರವಲ್ಲ, ಇಡೀ ಜಗತ್ತನ್ನು ಆಳುವುದೇ ಪಿತೃಪ್ರಭುತ್ವದ ನಿಯಮಗಳು ಮತ್ತು ಕಲ್ಪನೆಗಳು. ಹಾಗಾಗಿ ಸಿನಿಮಾ ರಂಗದಲ್ಲಿ ಕೂಡ ನಾನು ಬಹುದೊಡ್ಡ ಸವಾಲನ್ನು ಎದುರಿಸಬೇಕಾಯಿತು. ಸಿನಿಮಾ ಇತಿಹಾಸದುದ್ದಕ್ಕೂ ಕ್ಯಾಮೆರಾದ ಮುಂದಿರುತ್ತಾಳೆ ಮಹಿಳೆ. ಅವಳೇನು ಮಾಡಬೇಕು, ಏನು ಹೇಳಬೇಕು ಎಂಬುದನ್ನು ಅಲ್ಲಿ ನಿರ್ದೇಶಿಸಲಾಗುತ್ತದೆ. ಇಂದು ಮಹಿಳೆಯ ಪಾತ್ರಗಳೇನಿದ್ದರೂ ಅದು ಪುರುಷನ ಕಲ್ಪನೆಯಲ್ಲಿ ಮೂಡಿದ್ದು. ನನ್ನ ಉದ್ದೇಶವಿದ್ದದ್ದೇ ನನಗೆ ಕಂಡಂತೆ, ಅಂದರೆ ಸ್ತ್ರೀಯೊಬ್ಬಳ ದೃಷ್ಟಿಯಲ್ಲಿ ಸ್ತ್ರೀಯನ್ನು ಚಿತ್ರಿಸಬೇಕೆಂಬುದಾಗಿತ್ತು.  ಅದನ್ನು ನಾನಿಲ್ಲಿ ಮಾಡಿದ್ದೇನೆ ಎಂದು ವಿವರಿಸುತ್ತಾರೆ ನಿರ್ದೇಶಕಿ.

ನಗರೀಕರಣದ ಅವ್ಯವಸ್ಥೆಯಲ್ಲಿ ನಲುಗಿಹೋಗುವ ಸಾಕಷ್ಟು ದುರ್ಬಲರ ನಡುವೆ, ತನ್ನದೇ ಹುಡುಕಾಟದಲ್ಲಿ ಹೋರಾಡುವ, ರಂಗಭೂಮಿ ಕಲಾವಿದೆ ರೋಯಾ ಮನೆಯಲ್ಲಿ ತನ್ನ ಗಂಡನಿಂದಲೇ ಸಮಸ್ಯೆ ಎದುರಿಸುತ್ತಿರುವಾಗಲೂ, ಅವಳು ಮಾಡುವ ಪಾತ್ರ ನಂದಿನಿ ಅಲ್ಲಿ ಸದಾ ಜಾಗೃತಳಾಗಿರುತ್ತಾಳೆ.  ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಯೋಚಿಸುವ ಗಂಡನಿಗೆ ಮಗು ಬೇಕು, ಆದರೆ ತಾಯ್ತನದಲ್ಲಿ ಆಸಕ್ತಿ ಇಲ್ಲದ ರೋಯಾ, ಸ್ವತಂತ್ರವಾಗಿರಲು ನಿರ್ಧರಿಸುತ್ತಾಳೆ. ಕಡೆಗೂ ಅವಳು ತನ್ನ ಪ್ರೀತಿಯ ಕಲೆಯನ್ನೇ ಆಯ್ಕೆಮಾಡಿಕೊಂಡು ಹೊರಡುತ್ತಾಳೆ. ತನ್ನ ಅಸ್ತಿತ್ವ, ಸ್ವಾತಂತ್ರ್ಯ ಮತ್ತು ಲೈಂಗಿಕತೆ ಎಲ್ಲವನ್ನೂ ಅವಳದ್ದೇ ಆದ ಹಾದಿಯಲ್ಲಿ ಕಂಡುಕೊಳ್ಳಲು ಪ್ರಯತ್ನಿಸುತ್ತಾಳೆ ಮತ್ತು ಹಾಗೆ ಹೊರಡುತ್ತಾಳೆ ಕೂಡ.

ನಿಜವಾದ ಮಹಿಳಾ ಅಸ್ಮಿತೆಯ ಅಭಿವ್ಯಕ್ತಿಯನ್ನು ಕಾಣಬೇಕೆಂದರೆ  ‘ಅಂಡರ್ ಕನ್ ಸ್ಟ್ರಕ್ಷನ್’ ಸಿನಿಮಾ ನೋಡಲೇ ಬೇಕು.

ಭಾರತಿ ಹೆಗಡೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *