ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ `ಹಿತೈಷಿಣಿ’ ಹೆಜ್ಜೆ

ಬೆಂಗಳೂರಿನಲ್ಲಿ ನಡೆಯುತ್ತಿರುವ 11ನೇ  ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರವು, ಮಂಗಳವಾರ `ಸ್ತ್ರೀ ಸಂವೇದನೆ ಮತ್ತು ಲಿಂಗ ಸಮಾನತೆ’ ಕುರಿತು ಸಂವಾದ ಏರ್ಪಡಿಸಿತ್ತು.

ತಮಿಳು ಚಿತ್ರ `ಶಿವರಂಜಿನಿಯುಂ ಇನ್ನುಂ ಸಿಲ ಪೆಣ್ಗಳುಂ’ (ಶಿವರಂಜನಿ ಮತ್ತು ಇತರ ಹೆಂಗಸರು) ಚಿತ್ರ ಪ್ರದರ್ಶನದ ನಂತರ ಪ್ರೇಕ್ಷಕರು, ಪತ್ರಕರ್ತರು ಹಾಗೂ ಹಿತೈಷಿಣಿ ಬಳಗದವರು ಚಿತ್ರದ ನಿರ್ದೇಶಕ ವಸಂತ ಸಾಯಿ ಅವರೊಂದಿಗೆ ಸಂವಾದ ನಡೆಸಿದರು. ಚಿತ್ರದ ನಾಯಕಿ  ಸಹ ಸಂವಾದದಲ್ಲಿ ಪಾಲ್ಗೊಂಡಿದ್ದರು.

`ಅಮ್ಮಚ್ಚಿಯೆಂಬ ನೆನಪು’ ಚಿತ್ರದ ನಿರ್ದೇಶಕಿ ಚಂಪಾ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಹಿತೈಷಿಣಿ ಸಂಸ್ಥಾಪಕಿ ಹಿರಿಯ ಪತ್ರಕರ್ತೆ ಮತ್ತು ಲೇಖಕಿ ಆರ್. ಪೂರ್ಣಿಮಾ ಹಾಗೂ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ವೇದಿಕೆಯಲ್ಲಿದ್ದರು. ಹಿತೈಷಿಣಿಯ ಮತ್ತೊಬ್ಬ ಸಂಚಾಲಕಿ, ಮಹಿಳಾವಾದಿ ಚಿಂತಕಿ ಹಾಗೂ ಲೇಖಕಿ ಎನ್. ಗಾಯತ್ರಿ ಸಂವಾದವನ್ನು ನಿರ್ವಹಿಸಿದರು.

ಮೂವರು ಹಿರಿಯ ಲೇಖಕರು ಬರೆದ ಸಣ್ಣಕಥೆಗಳನ್ನು ಆಧರಿಸಿ `ಶಿವರಂಜಿನಿಯುಂ ಇನ್ನುಂ ಸಿಲ ಪೆಣ್ಗಳುಂ’ ಚಿತ್ರ ನಿರ್ಮಿಸಲಾಗಿದೆ. 80, 90ರ ದಶಕ ಹಾಗೂ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣುಮಕ್ಕಳು ಕುಟುಂಬದ ಚೌಕಟ್ಟಿನಲ್ಲಿ ಅನುಭವಿಸುವ ಹಿಂಸೆ, ತಮ್ಮ ಅಸ್ಮಿತೆ ಹಾಗೂ ಸ್ವಂತಿಕೆಗಾಗಿ ತುಡಿಯುವ ಅವರ ತಳಮಳಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ತಾವು ಬಾಲ್ಯದಲ್ಲಿ ಕಂಡ, ಹತ್ತಿರದಿಂದ ನೋಡಿದ ಹೆಣ್ಣುಮಕ್ಕಳ ಒಳತೋಟಿಗಳನ್ನು ಆಧರಿಸಿ ಸಿನಿಮಾ ಚಿತ್ರಿಸಿರುವುದಾಗಿ ವಸಂತ ಸಾಯಿ ತಿಳಿಸಿದರು. ಚಿತ್ರ ನೋಡಿದವರಲ್ಲಿ ತಳಮಳ, ಪ್ರತಿಕ್ರಿಯೆ ಹುಟ್ಟಿದಲ್ಲಿ ತಾವು ಗೆದ್ದಂತೆ. ಪ್ರೇಕ್ಷಕರಲ್ಲಿ ಚಿಂತನೆಯ ಅಲೆ ಹುಟ್ಟುಹಾಕುವುದು ಚಿತ್ರದ ಉದ್ದೇಶವೇ  ಹೊರತು ನಾಯಕಿಯರನ್ನು ವಿಜೃಂಭಿಸುವುದಲ್ಲ ಎಂದೂ ಅವರು ಹೇಳಿದರು.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *