Latestಅಂಕಣ

ಚಿತ್ರಭಾರತಿ/ ಹೀರೊಗಳಿಗೆ ಕಾನೂನಿಲ್ಲ – ಭಾರತಿ ಹೆಗಡೆ

 ಸಿನಿಮಾ ಸಂಪೂರ್ಣವಾಗಿ ಪುರುಷರ ಜಗತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿ ತಮಗೆ ಬೇಕಾದ ಹಾಗೆ  ಹೆಣ್ಣನ್ನು ಚಿತ್ರಿಸುತ್ತ ಹೋಗುತ್ತಿರುವುದು ಕೂಡ ಎಲ್ಲರಿಗೂ ತಿಳಿದಿದೆ. ಹೀಗೆ ಚಿತ್ರಿಸುವ ಭರದಲ್ಲಿ ಕಾನೂನನ್ನು ಉಲ್ಲಂಘಿಸುವಂಥ ಅನೇಕ ದೃಶ್ಯಗಳು ಬಂದು ಹೋಗಿವೆ. ಅಂತಹ ಕೆಲವು ದೃಶ್ಯಗಳಿರುವ ಸಿನಿಮಾಗಳ ಕುರಿತು ಇಲ್ಲಿ ಚರ್ಚೆಮಾಡಲಾಗಿದೆ.

ಭಾರತೀಯ ಸಿನಿಮಾಕ್ಷೇತ್ರದ ಬಹುತೇಕ ಸಿನಿಮಾಗಳಲ್ಲಿ ನಾಯಕ ನಟರಿಗೆ ಕಾನೂನು ಎಂಬುದುಇರುವುದಿಲ್ಲವಾ?…ಹೀಗೊಂದು ಪ್ರಶ್ನೆಯನ್ನು ಕೇಳಿಕೊಳ್ಳಲು ಹಲವು ಕಾರಣಗಳಿವೆ. ಮಹಿಳಾಪರವಾದ ಕಾನೂನುಗಳು ಬೇಕಾದಷ್ಟು ಬಂದಿದ್ದರೂ, ನಮ್ಮ ಸಿನಿಮಾಗಳಲ್ಲಿ ಮಾತ್ರ  ಹೀರೊಗಳು ಅವುಗಳನ್ನೆಲ್ಲ ಬಹಳ ಸುಲಭವಾಗಿ ಉಲ್ಲಂಘಿಸಿಬಿಡಬಹುದು. ಇದಕ್ಕೆ ಸಂಬಂಧಿಸಿದಂತೆ ನಾನೀಗ ಕೇಳುವ ಪ್ರಶ್ನೆಗಳು ಬಹುತೇಕ ಭಾರತೀಯ ಸಿನಿಮಾಗಳಲ್ಲಿ ಬಂದಿರುವಂಥವು. ಎಲ್ಲ ಭಾಷೆಗಳ ಸಿನಿಮಾಗಳಲ್ಲಿಯೂ ಇದು ಕಾಣಲು ಸಾಧ್ಯ. ಕೆಲವು ಉದಾಹರಣೆಗಳನ್ನಷ್ಟೇ  ನಾನಿಲ್ಲಿ ಕೊಡುತ್ತಿದ್ದೇನೆ…

ಅವಳ ಹೆಸರು ದೇವಿ. ಅವಳಿಗೆ ಸಿಕ್ಕಾಪಟ್ಟೆ ದುರಹಂಕಾರ. ಗಂಡಸರ ದ್ವೇಷಿ. ಮದುವೆಯಾಗುವುದಿಲ್ಲ ಎಂದು ದೃಢ ನಿರ್ಧಾರ ಮಾಡಿರುವವಳು. ಅವಳ ಸೊಕ್ಕನ್ನು ಮುರಿಯುವವನು ಸಿನಿಮಾದ ನಾಯಕ. ಪ್ರತಿಹೆಜ್ಜೆಯಲ್ಲೂ ಅವಳನ್ನು ಸೋಲಿಸುವಂಥ ದೃಶ್ಯಗಳು. ಆ ಪೈಕಿ ಒಂದು, ಅವಳಿಗೆ ಹುಚ್ಚು ಎಂದು ಎತ್ತಿಕೊಂಡು ಹೋಗಿ ಹುಚ್ಚಾಸ್ಪತ್ರೆಯಲ್ಲಿ ಸೇರಿಸುವುದು. ಮತ್ತೊಂದು ದೃಶ್ಯ, ಅವಳು ಈಜು ಕೊಳದಲ್ಲಿ ಈಜುತ್ತಿರುತ್ತಾಳೆ. ಅದು ಮಹಿಳೆಯರಿಗಾಗಿಯೇ ಇರುವ ಈಜುಕೊಳ. ಅವನು ಈಜುಕೊಳಕ್ಕೆ ಬಂದಾಗ ಅಲ್ಲಿರುವ ಸೆಕ್ಯುರಿಟಿ “ಇಲ್ಲೆಲ್ಲ ಬರೋ ಹಾಗಿಲ್ಲ ನೀವು. ಇದು ಮಹಿಳೆಯರಿಗೆ ಮಾತ್ರ’ ಎಂದಿದ್ದರೂ ಅದನ್ನೂ ಲೆಕ್ಕಿಸದೆ ಆತ ಅಲ್ಲಿಗೆ ನುಗ್ಗುತ್ತಾನೆ. ಅಷ್ಟಲ್ಲದೆ, ಕೊಳಕ್ಕೆ ಹಾರಿ ಅವಳನ್ನು ಎತ್ತಿಕೊಂಡು ಬರುತ್ತಾನೆ. ಅಲ್ಲಿನ ಸೆಕ್ಯುರಿಟಿ “ಯಾಕ್ ಸಾರ್‍ ಅವರನ್ನುಎತ್ತಿಕೊಂಡು ಹೋಗುತ್ತೀರಾ.? ಬಿಡಿ ಅವಳನ್ನು’ಎಂದು ಕೇಳಿದರೂ ಅವನನ್ನೂ ತಳ್ಳಿ  ಅವಳನ್ನು ಎತ್ತಿಕೊಂಡು ಹೋಗಿ ಕಾರಲ್ಲಿ ಕೂರಿಸುತ್ತಾನೆ.  ಕಾರಿನಲ್ಲಿ ಕೊಸರಿಕೊಂಡು ಅವಳು ಇಳಿದು ಮತ್ತೆ ಈಜುಕೊಳಕ್ಕೇ ಹೋಗುತ್ತಾಳೆ. ಅಲ್ಲಿ ಡಾನ್ಸ್  ಪ್ರಾರಂಭ.

***

ಇದೇ ರೀತಿ ಬಹದ್ದೂರ್ ಗಂಡು ಸಿನಿಮಾದಲ್ಲಿ ನಾಯಕಿ ಕಮಲಾ ಈಜುಕೊಳದಲ್ಲಿ ಈಜುತ್ತಿರುವಾಗ ನಾಯಕ ಪಂಜು ಅಲ್ಲಿಗೆ ಬಂದು ಅವಳನ್ನು ಹಿಡಿದು ಎತ್ತಿ, ಮುಳುಗಿಸಿ ಹಾಡುತ್ತಾ, ಕುಣಿಯುತ್ತಾನೆ.
ಮೇಲಿನ ಎರಡೂ ದೃಶ್ಯಗಳು ಕ್ರಮವಾಗಿ ನಂಜುಂಡಿ ಕಲ್ಯಾಣ ಮತ್ತು ಬಹದ್ದೂರ್ ಗಂಡು ಸಿನಿಮಾಗಳದ್ದು.  ಮಹಿಳಾ ಈಜುಕೊಳವೆಂದೇ  ಪ್ರತ್ಯೇಕವಾಗಿ ಇರುವಲ್ಲಿ ಪುರುಷರಿಗೆ ಪ್ರವೇಶವಿರುವುದಿಲ್ಲ. ಆದರೆ ಸೆಕ್ಯುರಿಟಿಯನ್ನಿಟ್ಟೂ ಅವರನ್ನು ದೂಡಿಕೊಂಡು ಸ್ವಿಮ್ಮಿಂಗ್ ಫೂಲ್‍ಗೆ ಹೋಗುವಂಥ ದಾಡ್ಶೀತನ ತೋರುತ್ತಾನೆ. ಹಾಗೆಯೇ ಬಹದ್ದೂರ್ ಗಂಡು ಸಿನಿಮಾದಲ್ಲಿ ಬರುವ ಈಜುಕೊಳ ನಾಯಕಿ ಕಮಲಾಳ ಖಾಸಗಿಯದ್ದಾಗಿದ್ದರೂ ಒಂದು ಹೆಣ್ಣು ಸ್ನಾನ ಮಾಡುವಾಗ ಹಾಗೆಲ್ಲ ಹೋಗಿ, ಅವಳನ್ನು ಎತ್ತಿ ಮುಳುಗಿಸಿ ಮಾಡುವುದು ಸರಿಯೇ? ಈ ಬಗ್ಗೆ ಕಾನೂನು ಕೂಡ ಏನೂ ಹೇಳುವುದಿಲ್ಲವೇ?ಅಥವಾ ಈ ಕಾನೂನುಗಳೆಲ್ಲ ನಮ್ಮ ನಾಯಕರಿಗೆ ಇರುವುದೇ ಇಲ್ಲವೇ? ಅಂದರೆ ಕಾನೂನು ಅದರ ಪಾಡಿಗದು ಇರಲಿ, ಇದೆಲ್ಲ ತಮಗೆ ಅನ್ವಯಿಸುವುದೇ ಇಲ್ಲ ಎಂಬಂಥ ಒಂದು ಸಂದೇಶವನ್ನು ಪರೋಕ್ಷವಾಗಿ ಈ ಸಿನಿಮಾಗಳು ನಮ್ಮ ಸಮಾಜಕ್ಕೆ ರವಾನಿಸಿದಂತಾಗುವುದಿಲ್ಲವೇ?

ಇದೇ ರೀತಿ ಅಂಜದಗಂಡು ಸಿನಿಮಾದಲ್ಲಿ ನಾಯಕ ನಟ ನಾಯಕಿಯನ್ನು ಅಟ್ಟಿಸಿಕೊಂಡು ಹೋಗಿ ಹೊಡೆದು, ಅವಳ ಮುಖಕ್ಕೆ ಸಗಣಿಯನ್ನು ಹಚ್ಚಿ, ಎಳೆದಾಡಿ, ಹಗ್ಗ ಕಟ್ಟಿ ಅಟ್ಟಾಡಿಸಿಕೊಂಡು ಓಡಿಸುತ್ತಾನೆ. ಅವಳನ್ನು ಈಜುಕೊಳದಲ್ಲಿ ಅದ್ದಿ ತೆಗೆದು ಮಾಡುವುದು ಎಷ್ಟು ಸಾರಿಯೋ… ಇದೆಲ್ಲವನ್ನೂ ಮಾಡುವುದು ಅವಳ ಸೊಕ್ಕನ್ನು ಮುರಿಯುವುದಕ್ಕಾಗಿ. ಅಂದರೆ ಅವಳ ಸೊಕ್ಕನ್ನು ಮುರಿಯುವುದಕ್ಕಾಗಿ ನಾಯಕ ಕಾನೂನನ್ನೂ ಮುರಿಬಲ್ಲ.

ಹೀಗೆ ಮಹಿಳೆಯ ಸೊಕ್ಕನ್ನು ಮುರಿದು ಹೆಡೆಮುರಿ ಕಟ್ಟಿ ಅವಳಿಗೆ ಮುತ್ತಿನಂಥ ಮಾತನ್ನುಉಪದೇಶ ಮಾಡುವ ನಾಯಕ ನಟರು, ಅವಳ ಸೊಕ್ಕು ಮುರಿಯುವಲ್ಲಿ ಬೇಕಿದ್ದರೆ ಅವರು ಕಾನೂನನ್ನೂ ಮುರಿಯಬಲ್ಲರು. ಇಂಥ ವಿಷಯವನ್ನಿಟ್ಟುಕೊಂಡು ಬಂದ ಸಿನಿಮಾಗಳು ನಮ್ಮ ದೇಶದಲ್ಲಿ ಬೇರೆಬೇರೆ ಭಾಷೆಗಳಲ್ಲಿ ಬಂದಿವೆ. ಈ ಎಲ್ಲ ಸಿನಿಮಾಗಳು ಗೆದ್ದಿವೆ ಕೂಡ. ನಮ್ಮ ಪ್ರೇಕ್ಷಕ ಪ್ರಭುಗಳಿಗೂ ಹೆಣ್ಣಿನ ಸೊಕ್ಕು ಮುರಿದು, ಅವಳನ್ನು ಪಳಗಿಸುವುದರಲ್ಲಿ ಒಂಥರದ ಖುಷಿ ಇದೆ. ಹಾಗಾಗಿಯೇ ಶೇಕ್ಸ್‌ಪಿಯರ್‌ನ ಟೇಮಿಂಗ್‍ ಆಫ್‍ ದ ಶ್ರೂ ನಾಟಕದಿಂದ ಹಿಡಿದು ಇಂದಿನ ನಂಜುಂಡಿ ಕಲ್ಯಾಣದವರೆಗೂ ಬೇರೆ ಭಾಷೆಗಳ, ಬೇರೆ ದೇಶಗಳ ನೆಲದಲ್ಲೂ ಹೆಣ್ಣನ್ನು ಪಳಗಿಸುವಂಥ ಸಿನಿಮಾಗಳು, ನಾಟಕಗಳು ಪ್ರಸಿದ್ಧಿ ಪಡೆದಿವೆ. ಇವೆಲ್ಲ ಯಶಸ್ವಿಯೂ ಆಗಿವೆ.

ಇದನ್ನೇ  ಸ್ವಲ್ಪ ಉಲ್ಟಾ ಮಾಡಿ ನೋಡಿದರೆ ನಾಯಕಿ ನಾಯಕನ ಅಹಂಕಾರವನ್ನು ಮುರಿಯುವಂಥ ಸಿನಿಮಾಗಳೇ ನಮ್ಮಲ್ಲಿ ಅಪರೂಪ. ಬಂದರೂ ಅವೆಲ್ಲ ಅಷ್ಟು ಯಶಸ್ಸನ್ನೂ ಕಾಣಲಿಲ್ಲ. ಜೊತೆಗೆ ಅದನ್ನೊಂದು ಕರುಣಾಪೂರಿತವಾಗಿ ಚಿತ್ರಿಸಲಾಗುತ್ತದೆಯೇ ಹೊರತುಎಲ್ಲಿಯೂ ನಾಯಕಿಯ ಸೊಕ್ಕನ್ನು ಮುರಿಯುವುದು ತನ್ನ ಹಕ್ಕು ಎಂದು ನಾಯಕ ಅಂದು ಕೊಂಡಂತೆ, ಇವರು ಅಂದುಕೊಳ್ಳುವುದಿಲ್ಲ.  ಹೀಗೆ ಸೊಕ್ಕನ್ನು ಮುರಿಯುವಲ್ಲಿಇವರು ಕಾನೂನನ್ನೂ ಮುರಿಯುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಅವಳ ಅನುಮತಿ ಇಲ್ಲದೆ ಅವಳ ದೇಹದ ಮೇಲೆ ಪ್ರಭುತ್ವ ಸಾಧಿಸುವುದು. ಇದನ್ನಂತೂ ಅದೆಷ್ಟು ಸಹಜ ಎಂಬಂತೆ ನಮ್ಮ ಸಿನಿಮಾಗಳಲ್ಲಿ ಚಿತ್ರಿಸಲಾಗುತ್ತದೆ ಎಂದರೆ ಈ ಕುರಿತು, ನಿರ್ದೇಶಕರು, ನಟರು, ನಟಿಯರು, ಕಡೆಗೆ ಪ್ರೇಕ್ಷಕರು ಕೂಡ ಪ್ರಶ್ನಿಸುವುದಿಲ್ಲ. ಅದಕ್ಕೆ ಚೊಕ್ಕ ಉದಾಹರಣೆ ಬಾಹುಬಲಿ ಸಿನಿಮಾ.

ಬಹುಕೋಟಿ ನಿರ್ಮಾಣದ ಬಾಹುಬಲಿ ಸಿನಿಮಾ ಕೋಟಿಗಟ್ಟಲೆ ಹಣವನ್ನು ಬಾಚಿದ್ದು ಈಗ ಹೊಸ ವಿಷಯವಲ್ಲ. ಅದರಲ್ಲಿ ನಾಯಕಿ ಆವಂತಿಕಾ (ತಮನ್ನಾ) ತನ್ನ ಪಾಡಿಗೆ ತಾನು ನೀರಿನಲ್ಲಿ ಕೈ ಇಳಿಬಿಟ್ಟು ಯಾವುದೋ ಯೋಚನೆಯಲ್ಲಿ ಮಗ್ನಳಾಗಿರುತ್ತಾಳೆ. ಆಗ ಅವಳಿಗೆ ಅರಿವಿಲ್ಲದೆಯೇ ಅವಳ ಕೈ ಮೇಲೆ ಒಂದು ಕೈ ಚಿತ್ರ ಬಿಡಿಸುತ್ತದೆ. ಅದೇ ರೀತಿ ಅವಳು ಮರದ ಮೇಲೆ ನಿಂತಾಗಲೂ ಅವಳ ಕೈ , ಭುಜದ ಮೇಲೆ ಹೀಗೆಯೇ ಚಿತ್ರ ಬಿಡಿಸಿರಲಾಗುತ್ತದೆ. ಯಾರೆಂಬುದು ಅವಳಿಗೆ ಆಶ್ಚರ್ಯವಾಗುತ್ತದೆ. ಅಲ್ಲಿಯವರೆಗೆ ಅವಳೊಂದು ಉದ್ದೇಶಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟವಳು. ಮಾಹಿಷ್ಮತಿ ರಾಜ್ಯದಲ್ಲಿ ಬಂಧಿಯಾಗಿದ್ದ ದೇವಸೇನಾಳನ್ನು ಬಿಡಿಸುವುದಕ್ಕಾಗಿರುವಂಥ ಗುಂಪಿನಲ್ಲಿ ಅವಳು ತರಬೇತಿ ಪಡೆಯುತ್ತಿರುವವಳು. ಯುದ್ಧ ಕೌಶಲಗಳನ್ನೆಲ್ಲ ಕಲಿತಿರುವವಳು. ಅವಳನ್ನು ನಂಬಿ ಅವಳ ಮುಖಂಡ ಅವಳಿಗೆ ಸಾಕಷ್ಟು ಜವಾಬ್ದಾರಿಯನ್ನು ಹೊರಿಸಿರುತ್ತಾನೆ. ಆದರೆ ನಾಯಕ ಅವಳ ಸೌಂದರ್ಯವನ್ನು ನೋಡಿ ಮರುಳಾಗಿ ಅವಳ ಹಿಂದೆಅಲೆಯುತ್ತ ಹೀಗೆ ಚಿತ್ರ ಬಿಡಿಸುತ್ತಾನೆ.

ಒಮ್ಮೆ ಅವಳನ್ನು ಶತ್ರುಗಳ ಹಿಡಿತದಿಂದ ರಕ್ಷಿಸುತ್ತಾನೆ ಕೂಡ. ಅದುವರೆಗೆ ಅವಳು ತಾನೇ ನಿಂತು ಯುದ್ಧಮಾಡುತ್ತಾಳೆ. ಕತ್ತಿವರೆಸೆ, ಗುರಿಯಿಟ್ಟು ಬಾಣ ಹೊಡೆಯುವವಳು, ಯುದ್ಧ ತಂತ್ರಗಳನ್ನೆಲ್ಲ ಬಲ್ಲವಳು, ಆದರೆ ಯಾವಾಗ ನಾಯಕನ ಪ್ರವೇಶ ಅಲ್ಲಾಗುತ್ತದೆ, ನಾಯಕ ಅವಳನ್ನು ನೋಡುತ್ತಾನೆ, ಅದರ ಮುಂದೆಲ್ಲ ಅವಳ ವೀರತ್ವ ನಶಿಸಿಹೋಗುತ್ತದೆ, ಅವಳು ಸುಕೋಮಲೆಯಾಗುತ್ತಾಳೆ. ಆಗ ಅವಳನ್ನು ರಕ್ಷಿಸುವ ಹೊಣೆ ನಾಯಕನದ್ದು, ತನ್ನನ್ನುತಾನೇ ರಕ್ಷಿಸಿಕೊಳ್ಳಬಲ್ಲವಳು ನಂತರ ಅವನು ರಕ್ಷಿಸುವಂತೆ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗುತ್ತಾರೆ. ಅಷ್ಟೇ ಅಲ್ಲ, ಅವಳೊಂದು ಹೆಣ್ಣು, ಅವಳಲ್ಲಿನ ಮೃದುತ್ವ, ಹೆಣ್ತನ ಜಾಗೃತವಾಗುವಂತೆ ಮಾಡುತ್ತಾನೆ. ಅವಳ ತುಟಿಗೆ, ಕೆನ್ನೆಗೆಲ್ಲ ಹಣ್ಣಿನ, ಹೂವುಗಳ ರಸವನ್ನು ಹಚ್ಚಿ ಸುಂದರಗೊಳಿಸುತ್ತಾನೆ. ನೀರಿನ ಬಿಂಬದಲ್ಲಿ ತನ್ನ ಸುಂದರ ತುಟಿಗಳು, ತನ್ನ ಸುಂದರ ಮುಖ, ಕೆಂಪನೆಯ ಕೆನ್ನೆ ಎಲ್ಲವನ್ನೂ ನೋಡಿದ ಆವಂತಿಕಾ ತನ್ನ ಮೇಲೆ  ತಾನೇ ಮೋಹಗೊಳ್ಳುತ್ತಾಳೆ. ನಂತರದ ದೃಶ್ಯಗಳೆಲ್ಲ ಅವಳು ಬಾಹುಬಲಿ ಹೇಳಿದಂತೆ ಕೇಳುವವಳು. ಪ್ರೀತಿಗಾಗಿ, ಪ್ರೇಮಕ್ಕಾಗಿ ಅವನು ಹೇಳಿದಂತೆ ಅವಳೂ, ಅವಳು ಹೇಳಿದಂತೆ ಅವನೂ ಕೇಳಿದರೆ ಖಂಡಿತ ಅದರಲ್ಲಿ ಯಾವುದೇ ತಪ್ಪಿಲ್ಲ.  ಆದರೆ ಅವಳೆಷ್ಟೇ ಶೂರಳಾಗಿರಲಿ, ಅವಳೊಬ್ಬಳು ಸುಕೋಮಲೆ, ರಕ್ಷಿಸಲ್ಪಡುವವಳು ಎಂಬುದನ್ನುತೋರಿಸುವಲ್ಲಿಯೇ ನಮ್ಮ ನಿರ್ದೇಶಕರಿಗೆ ಹೆಚ್ಚು ಪ್ರೀತಿ.

ಹೀಗೆ ಅವಳ ಅನುಮತಿ ಇಲ್ಲದೆಯೇ ಅವಳ ದೇಹದ ಮೇಲೆ ಅಧಿಕಾರ ಚಲಾಯಿಸುವುದಿರಲಿ, ಮಹಿಳೆಯರಿಗಾಗಿ ಮೀಸಲಾಗಿರುವ ಈಜುಕೊಳದಲ್ಲಿ  ಪುರುಷನೊಬ್ಬ ಅನುಮತಿ  ಇಲ್ಲದೆಯೇ ನುಗ್ಗುವುದೆಲ್ಲವನ್ನೂ ನಮ್ಮ ನಿರ್ದೇಶಕರು, ನಟರು, ನಟಿಯರು ಮತ್ತು ನಮ್ಮ ಸಮಾಜ, ಎಲ್ಲವೂ ತುಂಬ ಸಹಜವಾಗಿ ನೋಡುತ್ತಿದೆ. ಇದನ್ನು ತಪ್ಪು ಎಂದು ಯಾರೂ ಪರಿಗಣಿಸದಿರುವುದೇ ಆಶ್ಚರ್ಯ.
ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಧೂಮಪಾನ, ಮದ್ಯಪಾನದ ದೃಶ್ಯಗಳು ಬಂದಾಗ ಶಾಸನಬದ್ಧ ಎಚ್ಚರಿಕೆ ಎಂಬ ಡಿಸ್‍ಕ್ಲೈಮರ್‌ ಹಾಕಲಾಗುತ್ತದೆ. ಪ್ರಾಣಿಗಳ ಮೇಲಿನ ಹಿಂಸೆ ದೃಶ್ಯ ಬಂದಾಗ ಪ್ರಾಣಿಗಳನ್ನು ಹಿಂಸಿಸಿದರೆ ಇಂತಿಂಥ ಶಿಕ್ಷೆ ಇದೆ ಎಂಬ ಎಚ್ಚರಿಕೆಯೂ ಅಲ್ಲಿ ಬರುತ್ತದೆ.  ಹಾಗಿದ್ದರೆ ಒಂದೊಮ್ಮೆ ಕತೆಗೆ ಪೂರಕವಾಗಿದ್ದು, ಅಗತ್ಯವಿದೆ ಎಂಬಂಥ ಸಂದರ್ಭದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ದೃಶ್ಯ ಬಂದಾಗ, ಈಜುಕೊಳಕ್ಕೆ ನುಗ್ಗುವ ದೃಶ್ಯ ಬಂದಾಗ, ಇದಕ್ಕೆ ಸಂಬಂಧಿಸಿದ ಕಾನೂನು ಮತ್ತು, ಶಿಕ್ಷೆ ಇವೆರಡನ್ನೂಅಲ್ಲಿ ಪ್ರಕಟಿಸಲು ಸಾಧ್ಯವಿಲ್ಲವೇ? ಈ ನಿಟ್ಟಿನಲ್ಲಿ ಸರ್ಕಾರ, ಮಹಿಳಾ ಮನಸ್ಸುಗಳೆಲ್ಲವೂ ಚಿಂತಿಸಬೇಕಾಗಿದೆಯಲ್ಲವೇ?

ಭಾರತಿ ಹೆಗಡೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *