ಚಿತ್ರಭಾರತಿ: ಸುತ್ತಿ ಕೊಲ್ಲುವ ಕೋಟೆಯೊಳಗಿನಿಂದ…!- ಭಾರತಿ ಹೆಗಡೆ

 

ಕತೆಗಾರ್ತಿ ವೈದೇಹಿಯವರ ಮೂರು ಕತೆಗಳನ್ನಾಧರಿಸಿದ ಸಿನಿಮಾ “ಅಮ್ಮಚ್ಚಿಯೆಂಬ ನೆನಪು’ ನಿಜಕ್ಕೂ ಮಹಿಳಾ ಶೋಷಣೆಯ ವಿಭಿನ್ನ ಮುಖಗಳನ್ನು ಅನಾವರಣಗೊಳಿಸುತ್ತದೆ. ಸ್ತ್ರೀ ಸ್ವಾತಂತ್ರ್ಯ, ಸಮಾನತೆಯ ಕುರಿತು ತುಂಬ ಅಪರೂಪವಾಗಿ ಕೇಳಿಬರುತ್ತಿದ್ದ ಆ ಕಾಲದಲ್ಲಿಯೇ ಈ ಹೆಣ್ಣುಗಳು ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಂಥವರು. ಹಾಗೆ ಹೆಜ್ಜೆ ಇಡುವ ಸಂದರ್ಭದಲ್ಲಿ ಅವರು ಎದುರಿಸಿದ ಸವಾಲುಗಳು, ಕಷ್ಟ-ಬವಣೆಗಳನ್ನೆಲ್ಲ ತುಂಬ ಸೂಕ್ಷ್ಮವಾಗಿ ನಿರ್ದೇಶಕಿ ಚಂಪಾ ಶೆಟ್ಟಿ ಸೆರೆಹಿಡಿದಿದ್ದಾರೆ.

 

ಕೆಲ ಹೂವ ಹಣೆಬರಹ, ಅರಳಿದೊಡೆ ಬಾಡುವವು. ಶವದ ಮೇಲಿಡಲೆಂದೇ ಕೆಲ ಹೂವುಗಳು.

ಕೆಲ ಹೂಗಳು ಅರಳಿ ಅರಳಿ ಅಲ್ಲೇ ಬಿದ್ದು ಯಾರ್ಯಾರದೋ ಕಾಲ್ತುಳಿತಕ್ಕೆ ಸಿಲುಕುವವು…

ಹಾಗೆ ಕಾಲ್ತುಳಿತಕ್ಕೆ ಸಿಕ್ಕು ನಲುಗಿದ ಹೂವಿನಂಥ ಮೂರು ಹೆಣ್ಣು ಜೀವಗಳ ಕತೆಯಿದು. ಸ್ತ್ರೀ ಶೋಷಣೆಗೆ ಮತ್ತೊಂದು ಪದವಾಗಿ ಹಾಡುವಂಥವರು ಇವರು.

ಅವಳು ಪುಟ್ಟಮ್ಮತ್ತೆ, ಎಲ್ಲ ಕಷ್ಟಗಳನ್ನೂ ಸಹಿಸಿ, ಒಡಲಲ್ಲಿ ಕುದಿವ ಲಾವಾರಸವನ್ನೇ ಇಟ್ಟುಕೊಂಡೂ ಬದುಕನ್ನು ನೂಕುವವಳು. ಕಷ್ಟಗಳ ಜೊತೆಜೊತೆಯಲ್ಲೇ ಬಾಳುತ್ತ ಅದನ್ನೂ ತನ್ನ ಜೀವನದ ಒಂದು ಭಾಗವಾಗಿಸಿಕೊಂಡವಳು. ಅಲ್ಲಿ ಸ್ವಾತಂತ್ರ್ಯಕ್ಕೆ ಜಾಗವಿಲ್ಲ. ಶೋಷಣೆ,  ದಬ್ಬಾಳಿಕೆ ಎಲ್ಲವೂ ತನ್ನ ಬದುಕಿನ ಭಾಗ ಎಂದಂದುಕೊಂಡಿರುವ ಪುಟ್ಟಮ್ಮತ್ತೆಯನ್ನು ನೋಡಿದಾಗ ಸಹಿಸುವಿಕೆಯನ್ನೇ ಹೊದ್ದು ಬದುಕಿದ ನಾವು ಕಂಡ ಅದೆಷ್ಟೋ ಅಮ್ಮಮ್ಮಂದಿರ ಮುಖಗಳು ಕಣ್ಣಮುಂದೆ ಹಾಯದಿರದು.

ಮತ್ತೊಬ್ಬಳು ಅಕ್ಕು. ಮದುವೆಯಾದ ಹೊಸದರಲ್ಲೇ ಗಂಡ ಮನೆಬಿಟ್ಟು ಹೋಗಿದ್ದು, ಅವಳಿಗೆ ಬುದ್ಧಿ ಭ್ರಮಣೆಯಾಗಿ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಮಾತನಾಡಿಬಿಡುವವಳು. ಇತರರಿಗೆ ಇರಿಸುಮುರಿಸಾದರೂ ಅವಳಾಡುವ ಮಾತುಗಳೆಲ್ಲವೂ ವಾಸ್ತವವನ್ನು ತೆರೆದಿಡುವಂಥದ್ದು. ಅಕ್ಕು ಮಗುವಿಗಾಗಿ ಹಂಬಲಿಸುತ್ತಾಳೆ. ಮನೆಯಲ್ಲಿನ ಮದುವೆ ಶಾಸ್ತ್ರಗಳನ್ನೆಲ್ಲ ನೋಡುತ್ತ ತನಗೂ ಮದುವೆ ಮಾಡು ಅಪ್ಪಯ್ಯ ಎಂದು ಅಪ್ಪನನ್ನು ಗೋಗರೆಯುತ್ತಾಳೆ. ಅವೆಲ್ಲವನ್ನೂ ಇತರರು ತಮಾಷೆಯಾಗಿಯೇ ನೋಡುತ್ತಾರೆ. ಆದರೆ ಅವಳಲ್ಲಿ ಅದೆಷ್ಟು ಆಳವಾದ ನೋವಿದೆ ಎಂಬುದು ನೋಡುಗರಿಗೆ ಅರ್ಥವಾಗಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಇನ್ನೊಬ್ಬಳು ಅಮ್ಮಚ್ಚಿ. ಸಂಪೂರ್ಣ ಸ್ವಾತಂತ್ರ್ಯ ಬಯಸುವ, ಮಹಿಳೆಗಾದರೆ ಇದ್ಯಾಕಿಲ್ಲ, ಅದ್ಯಾಕಿಲ್ಲ, ನನಗೆ ಇಷ್ಟವಾಗುವ ರೀತಿ ನಾವ್ಯಾಕೆಬದುಕುವುದಿಲ್ಲ, ನಮಗೆ ಇಷ್ಟವಾಗುವ ಹುಡುಗನನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗ್ಯಾಕಿಲ್ಲ.. ಹೀಗೆ ಅಡಿಗಡಿಗೆ ಪ್ರಶ್ನೆಮಾಡುವವಳು. ನಿಜವಾದ ಸ್ತ್ರೀ ಸಮಾನತೆಯ ಕನಸು ಕಂಡವಳು. ಅವಳ ಈ ಮುಕ್ತ ನಡವಳಿಕೆಯನ್ನು ಪದೇಪದೇ ಹತ್ತಿಕ್ಕುವ ಪ್ರಯತ್ನ ಮನೆಯಲ್ಲೇ ನಡೆಯುತ್ತದೆ. ಹೀಗಿದ್ದೂ ಅವಳು ಅದಕ್ಕೆಲ್ಲ ಸೊಪ್ಪು ಹಾಕದೇ ತನ್ನ ಹಾದಿಯನ್ನು ಸ್ಪಷ್ಟಗೊಳಿಸಿಕೊಂಡು ಅಲ್ಲಿ ಹೆಜ್ಜೆ ಇಡುವವಳು.

ಖ್ಯಾತ ಸಾಹಿತಿ ವೈದೇಹಿಯವರ ಮೂರು ಕತೆಗಳಾದ ಅಕ್ಕು, ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು ಹಾಗೂ ಅಮ್ಮಚ್ಚಿಯೆಂಬ ನೆನಪು ಈ ಮೂರನ್ನೂ ಒಟ್ಟಿಗೇ ಸಂಯೋಜಿಸಿ ತೆರೆಗೆ ತಂದಿದ್ದಾರೆ ನಿರ್ದೇಶಕಿ ಚಂಪಾಶೆಟ್ಟಿ. ಈ ಮೂರೂ ಒಂದೊಂದು ವಿಭಿನ್ನ ದೃಷ್ಟಿಕೋನದ ಪಾತ್ರಗಳು. ಕಷ್ಟಗಳನ್ನು ನುಂಗಿಕೊಂಡು ಅದಕ್ಕೆ ಹೊಂದಿಕೊಂಡು ಬದುಕು ನೂಕುವ ಪಾತ್ರ ಪುಟ್ಟಮ್ಮತ್ತೆಯದ್ದಾದರೆ, ಬುದ್ಧಿಭ್ರಮಣೆಯಾಗಿದ್ದೂ ತುಂಬ ತಮಾಷೆ ಎನಿಸಿದರೂ ವಾಸ್ತವವನ್ನು ಹೇಳುವ ಅಕ್ಕು, ಈ ಎರಡರ ಎರಕ ಹೊಯ್ದಂಥ ಪಾತ್ರ ಅಮ್ಮಚ್ಚಿ. ಬಿಂದಾಸ್ ಹುಡುಗಿ, ಸ್ವತಂತ್ರ ಮನೋಭಾವದವಳು, ತನಗೆ ಅನಿಸಿದ್ದನ್ನು ಹೇಳುತ್ತ, ತನಗೆ ಬೇಕಾದಂತೆ ಬದುಕುವ ಇಚ್ಛೆಯಿರುವ ಹೆಣ್ಣು ಅಮ್ಮಚ್ಚಿ. ಅಮ್ಮಚ್ಚಿ ಒಂದು ಪಾತ್ರವೇ ಸಾಕು, ಹೆಣ್ಣಿನ ಎಲ್ಲ ಕಾಲದ ಒಳತೋಟಿಗಳನ್ನೂ ಹೇಳಿಬಿಡಲು.

ಅಮ್ಮಚ್ಚಿಯ ದಿಟ್ಟತನ, ಸ್ವತಂತ್ರ ಮನೋಭಾವವನ್ನು ಪದೇಪದೆ ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಒಂದು ಆಕೆ ಸ್ವತಂತ್ರ ಮನೋಭಾವದವಳು, ಇನ್ನೊಂದು ಆಕೆ ಬಡವಳು. ಈ ಎರಡು ಕಾರಣಕ್ಕಾಗಿ ಪುರುಷ ಯಜಮಾನಿಕೆಯಿಂದ ಹತ್ತಿಕ್ಕುವ ಪ್ರಯತ್ನಗಳು ನಡೆದರೆ ಸ್ವತಃ ಹೆಂಗಸರಿಂದಲೇ ಅವಳನ್ನು ಒಂದು ಮಿತಿಗೆ ಒಳಪಡಿಸುವ ಹುನ್ನಾರವೂ ನಡೆಯುತ್ತದೆ. ಈ ಎರಡರಿಂದಾಗಿಯೇ ಚೆಂದವಾಗಿ, ತನಗೆ ಬೇಕಾದಂತೆ ಬದುಕಬೇಕೆಂಬ ಹಂಬಲವಿರುವ ಅಮ್ಮಚ್ಚಿಯನ್ನು ಕಟ್ಟಿಹಾಕಲಾಗುತ್ತದೆ ಮದುವೆಯೆಂಬ ಬಂಧನಕ್ಕೆ. ಅದೂ ತಾನೊಲ್ಲದವನೊಟ್ಟಿಗೆ.

ತೀರಾ ಬಡತನದಲ್ಲಿ ಹುಟ್ಟಿರುವ ಸ್ವತಂತ್ರ ಮನೋಭಾವದ ಹೆಣ್ಣು ಅಮ್ಮಚ್ಚಿಗೆ ಪ್ರತಿದಿವಸವೂ ಸವಾಲಾಗಿರುತ್ತವೆ. ಅದಕ್ಕೆ ಪುಟ್ಟಮ್ಮತ್ತೆಗೆ ಶೇಷತ್ತೆ ಹೇಳುತ್ತಾಳೆ, ‘ಪುಟ್ಟಮ್ಮತ್ತೆ, ಹಾಸಿಗೆ ಇದ್ದಷ್ಟೇ ಕಾಲು ಚಾಚ್ಕಬೇಕು, ಅಮ್ಮಚ್ಚಿಯನ್ನು ದೇವಸ್ಥಾನದಲ್ಲಿ ಮದುವೆ ಮಾಡಿಬಿಡುವಾ. ಹೆಂಗೂ ವೆಂಕಪ್ಪಯ್ಯ ಗಂಡು ಇತ್ತಲಾ. ಅದರೊಟ್ಟಿಗೆ, ಒಂದು ಕಾಫಿ, ತಿಂಡಿ ಕೊಟ್ರಾತು ಅಷ್ಟೇಯ. ನಿಂಗೇನು ನೆಂಟರಾ, ಬಳಗ್ವಾ.. ’ ಎಂದು ಸಲೀಸಾಗಿ ಶೇಷಮ್ಮತ್ತೆ ಹೇಳುವಾಗ, ಬಡವರ ಮನೆಯ ಹೆಣ್ಣುಮಕ್ಕಳು ಒಂದೊಳ್ಳೆ ಬದುಕನ್ನು ಕಟ್ಟಿಕೊಳ್ಳಲೂ ಅನರ್ಹರಾ ಎಂದೆನಿಸಿಬಿಡುತ್ತದೆ. ಒಂದೊಮ್ಮೆ ಅವಳಿಗೆ ಒಳ್ಳೆ ಆರ್ಥಿಕತೆಯ ಹಿನ್ನೆಲೆಯಿದ್ದಿದ್ದರೆ ಅವಳೂ ಚೆನ್ನಾಗಿ ಓದಿ, ಒಳ್ಳೆ ಬದುಕು ಕಟ್ಟಿಕೊಳ್ಳುತ್ತಿದ್ದಳಾ ಎಂಬ ಪ್ರಶ್ನೆಯೂ ಕಾಡುತ್ತದೆ.

ಅಂದರೆ ಇಲ್ಲಿ ಈ ಮಹಿಳೆಯರ ಹಕ್ಕುಗಳನ್ನು ಕಸಿಯುವುದು ಪುರುಷ ಪ್ರಧಾನ ವ್ಯವಸ್ಥೆ ಮಾತ್ರವಲ್ಲ, ವರ್ಗ ಸಂಘರ್ಷ ಕೂಡ ಇಲ್ಲಿದೆ. ಬಡವರಾಗಿರುವ ಕಾರಣವೂ ಇಲ್ಲಿ ಸೇರಿಕೊಳ್ಳುತ್ತದೆ. ಅಮ್ಮಚ್ಚಿಗೆ ಒಳ್ಳೆ ಹಿನ್ನೆಲೆ ಇದ್ದು, ಆರ್ಥಿಕವಾಗಿ ಗಟ್ಟಿಯಾಗಿದ್ದಿದ್ದರೆ ಅವಳಿಗೆ ಒಳ್ಳೆಯ ಶಿಕ್ಷಣ ಸಿಗುತ್ತಿತ್ತು, ಚೆನ್ನಾಗಿ ಓದಿದ ವರನೂ ಸಿಗುತ್ತಿದ್ದನೋ ಏನೋ? ಅನಾಥವಾಗಿಯೇ ಬೆಳೆವ ಪುಟ್ಟಮ್ಮತ್ತೆ ಮೊಮ್ಮಗಳ ಜವಾಬ್ದಾರಿ ಹೊತ್ತು , ಸ್ವತಂತ್ರ ಮನೋಭಾವದ ಅಮ್ಮಚ್ಚಿ ಅವಳಿಗೆ ಸೆರಗಲ್ಲಿ ಕಟ್ಟಿಕೊಂಡ ಕೆಂಡ. ಅದಕ್ಕೆ ಆಗಾಗ ಬುದ್ಧಿ ಹೇಳುತ್ತಲೇ ಇರುತ್ತಾಳೆ. ಇವೆಲ್ಲ ನಮಗಲ್ಲ. ನಾವು ಎಷ್ಟರಲ್ಲಿರಬೇಕೋ ಅಷ್ಟರಲ್ಲಿದ್ದರೆ ಚೆಂದ ಎಂದು. ಅಜ್ಜಿಯ ಮಾತನ್ನೇನೋ ಧಿಕ್ಕರಿಸಿ ನಿಲ್ಲುತ್ತಾಳೆ ಅಮ್ಮಚ್ಚಿ. ಆದರೆ ಅವಳ ಇಂಥ ಮನೋಭಾವಕ್ಕೆ, ಅವಳ ಚೆಂದನೆಯ ಕನಸಿಗೆ ಪದೇಪದೆ ಅಡ್ಡಿಪಡಿಸುವವನು ಅವಳ ಮನೆಯಲ್ಲೇ ಇರುವ ವೆಂಕಪ್ಪಯ್ಯ. ಅಮ್ಮಚ್ಚಿ ಫ್ಯಾಷನ್ ಆಗಿ ಬ್ಲೌಸ್ ಹೊಲಿಸಲು ಹೇಳುವುದು, ಅದನ್ನು ವೆಂಕಪ್ಪಯ್ಯ ತಡೆಯುವುದು. ಅದಕ್ಕೆ ಸಿಟ್ಟುಗೊಂಡ ಅಮ್ಮಚ್ಚಿ ಚೀರಾಡುವುದನ್ನು ನೋಡಿದಾಗಲೆಲ್ಲ ಅನಿಸುವುದು ಬಡವರ ಮನೆಯ ಹೆಣ್ಣುಮಕ್ಕಳಿಗೆ ಕನಸುಗಳಿರಬಾರದು. ಇದ್ದರೂ ಅದನ್ನು ಹತ್ತಿಕ್ಕಿಕೊಂಡೇ ಇರಬೇಕು ಎಂಬುದಾಗಿ.

ಇತ್ತ ಎಲ್ಲವೂ ಇದ್ದೂ ಮದುವೆಯಾದವನು ತನ್ನನ್ನು ಸ್ವೀಕರಿಸಲಿಲ್ಲವೆಂಬ ಕಾರಣಕ್ಕಾಗಿ ಬುದ್ಧಿಭ್ರಮಣೆಯಾಗುವ ಅಕ್ಕುವನ್ನು ದನ ಬಡಿದ ಹಾಗೆ ವಾಸು ಬಡಿಯುತ್ತಿದ್ದರೂ ಎಲ್ಲರೂ ಸುಮ್ಮನೇ ಇರುತ್ತಾರೆ. ಇವಳನ್ನಿಲ್ಲಿ ಇಟ್ಟುಕೊಂಡರಾಗುವುದಿಲ್ಲ, ಆಸ್ತಿಪಾಲು ಮಾಡುತ್ತೇವೆಂದು ಹೇಳಿ ಅವಳ ಗಂಡನನ್ನು ಕರೆಸಿ ಅವನೊಟ್ಟಿಗೆ ಅಕ್ಕುವನ್ನು ಕಳಿಸಿಬಿಡಬೇಕೆಂಬ ಆಲೋಚನೆಯಿಂದ ಅವಳ ಗಂಡನನ್ನು ಕರೆಸುತ್ತಾರೆ. ಆಸ್ತಿಗಾಗಿ ಬರುವ ಗಂಡ ಅಳಿಯನ ಗತ್ತಲ್ಲಿ ಕಾಲುಮೇಲೆ ಕಾಲು ಹಾಕಿ ಕೂತಿದ್ದಾಗ ಆ ಮನೆಯ ಪುಟ್ಟ ಹುಡುಗನೊಬ್ಬ ಬಂದು ನಿನ್ನ ಹೆಂಡತಿ ಬಸುರಿ ಎಂದುಬಿಡುತ್ತಾನೆ. ಅದುವರೆಗೆ ತಾನವಳನ್ನು ಬಿಟ್ಟು ಹೋಗಿ ಅವಳಿಗೆ ಗೋಳುಕೊಟ್ಟದ್ದು, ಒಬ್ಬಂಟಿಯಾಗಿ ಅಕ್ಕು ದಿನ ಕಳೆದದ್ದು, ಇವ್ಯಾವುದೂ ಅವನಿಗೆ ನೆನಪೇ ಇರುವುದಿಲ್ಲ. ಈಗ ತಾನಿಲ್ಲದ ಹೊತ್ತಲ್ಲಿ ಅವಳು ಬಸುರಿಯಾಗಿದ್ದಾಳೆಂಬ ಹುಡುಗನ ಮಾತು ಅವನ ಆಕ್ರೋಶಕ್ಕೆ ಕಾರಣವಾಗಿ ಅಲ್ಲಿಂದ ಹೊರಟುಬಿಡುತ್ತಾನೆ. ಆದರೆ ಮನೆಯವರೆಲ್ಲ ತಡೆದು ನಿಲ್ಲಿಸಿ ಅವನನ್ನು ಸಮಾಧಾನಿಸಿದರೂ ಅವನನ್ನು ಸ್ವೀಕರಿಸಲು ಅಕ್ಕು ಮನಸ್ಸು ಮಾಡುವುದಿಲ್ಲ. ರಾತ್ರಿ ಅವಳ ಕೋಣೆಗೆ ಮೆಲ್ಲಗೆ ಹೋದ ಗಂಡನನ್ನು ಸರಿಯಾಗಿ ಹೊಡೆದು ಅಟ್ಟಿಬಿಡುವ ಅಕ್ಕುವನ್ನು ಮನೆ ಮರ್ಯಾದೆ ಕಳೀತ್ಯನೇ ಎಂದು ಹಿಗ್ಗಾಮುಗ್ಗ ಹೊಡೆಯುತ್ತಾನೆ. ಅವನೆಲ್ಲ ಹೊಡೆದು ಮುಗಿದ ಮೇಲೆ, ಕಿಟಕಿಯ ಸರಳುಗಳನ್ನು ಹಿಡಿದುಕೊಂಡ ಅಕ್ಕು ‘ಎನಗ್ ಹೊಡಿತ್ಯನಾ..ಮನೆ ಮರ್ಯಾದೆ ಹೋಗ್ತನಾ ನಿಂಗೆ..ಹಂಗಾದ್ರೆ ನೀನು ಆ ಮನೆಗೆ ಹೋಗ್ತ್ಯಲಾ… ಅವಳು ನಿಂಗೆ ದ್ವಾಸೆ ಮಾಡಿ ಹಾಕ್ತ್ಲನಾ…ಅದಡ್ಡಿಲ್ಯನಾ ನಿಂಗೆ..?’ ಎಂದು ಕೇಳುವಾಗಲೆಲ್ಲ ಇವಳಿಗೆ ಬುದ್ಧಿಇಲ್ಲ ಎಂದದ್ದು ನಿಜವಾ ಎಂದು ಪ್ರಶ್ನೆ ಮಾಡಿಕೊಳ್ಳುವ ಹಾಗಾಗಿಬಿಡುತ್ತದೆ.

ಹಾಗೆಯೇ ವೆಂಕಪ್ಪಯ್ಯನ ಯಜಮಾನಿಕೆ ಬುದ್ಧಿ ಅಮ್ಮಚ್ಚಿಯನ್ನು ಕಟ್ಟಿಹಾಕುತ್ತದೆ. ಅವಳನ್ನೇ ಮದುವೆಯಾಗುವ ಕನಸು ಕಂಡ ವೆಂಕಪ್ಪಯ್ಯ, ಅವನನ್ನು ಕಡೆಗಣ್ಣಲ್ಲಿ ಕಂಡರೂ ಆಗದ ಅಮ್ಮಚ್ಚಿ,  ಅವನನ್ನೇ ಮದುವೆಯಾಗುವ ಅನಿವಾರ್ಯತೆ ಒದಗಿಬಿಡುತ್ತದೆ. ಅಲ್ಲಿಯವರೆಗೆ ಹಕ್ಕಿಯಂತೆ ಹಾರಾಡುತ್ತಿದ್ದ, ತನ್ನ ಬದುಕಿನ ಕುರಿತು, ತಾನು ಮದುವೆಯಾಗುವ ಹುಡುಗನ ಕುರಿತು ಏನೆಲ್ಲ ಕನಸುಗಳನ್ನು ಕಟ್ಟಿಕೊಂಡಿದ್ದ ಅಮ್ಮಚ್ಚಿ ಕಡೆಗೂ ವೆಂಕಪ್ಪಯ್ಯನನ್ನು ಮದುವೆಯಾಗುವುದು, ಸೋತು ಸುಣ್ಣವಾಗಿ ಅವನ ಹಿಂದೆ ತಲೆತಗ್ಗಿಸಿ ನಡೆವ ಅಮ್ಮಚ್ಚಿಯನ್ನು ನೋಡಿದರೆ, ‘ಕೆಲವು ಹೂವುಗಳು ಅಲ್ಲಲ್ಲಿ ಬಿದ್ದು, ಬಿದ್ದಲ್ಲಿಯೇ ಮಣ್ಣಾಗುವವು. ಹೂವಾಗಿ ಹುಟ್ಟಿ ಹೂವಾಗಿ ಬೆಳೆದು ಹೂವಂತೆ ಬಾಳಲಾರವು ಇವು …’ ಎಂಬ ಹಾಡು ನಮ್ಮೆದೆಗೆ ಇರಿಯುತ್ತದೆ.

ಆದರೆ ಕಡೆಯಲ್ಲಿ ಅಮ್ಮಚ್ಚಿ ಒಬ್ಬಳೇ ಬಟ್ಟೆಗಂಟನ್ನು ಹಿಡಿದು, ದಿಟ್ಟ ಹೆಜ್ಜೆಗಳನ್ನಿಟ್ಟು ಮನೆಗೆ ಬಂದವಳನ್ನು ಪುಟ್ಟಮ್ಮತ್ತೆ ‘ಏನು, ಒಬ್ಬಳೇ ಬಂದಿದ್ದೀಯ, ಎಲ್ಲಿ ವೆಂಕಪ್ಪಯ್ಯ’ ಎಂದು ಕೇಳಿದ ಕೂಡಲೇ ಮುಖಕ್ಕೆ ನೀರು ಚಿಮುಕಿಸಿಕೊಂಡ ಅಮ್ಮಚ್ಚಿ ತಿರುಗಿ ‘ವೆಂಕಪ್ಪಯ್ಯ ಸತ್ತ…’ ಎಂದು ಹೇಳುವಾಗ ಅವಳ ಮುಖದಲ್ಲಿರುವ ಗೆಲುವು, ತುಟಿಯಂಚಿನಲ್ಲಿನ ಕಿರುನಗು, ಕಣ್ಣುಗಳಲ್ಲಿರುವ ಹೊಳಪು ಪ್ರೇಕ್ಷಕರ ಎದೆಗೂ ನಾಟಿ, ಒಂದು ಬಿಡುಗಡೆಯ ನಿಟ್ಟುಸಿರು ಅಪ್ರಯತ್ನವಾಗಿ ನಮ್ಮಲ್ಲೂ ಬಂದರೆ ಆಶ್ಚರ್ಯವಿಲ್ಲ.

ಹೀಗೆ ಒಬ್ಬ ಅಮ್ಮಚ್ಚಿ, ಒಬ್ಬ ಅಕ್ಕು ಎಲ್ಲ ಬವಣೆಗಳ ನಡುವೆಯೂ ಅವೆಲ್ಲವನ್ನೂ ಮೆಟ್ಟಿನಿಂತು ಸ್ವತಂತ್ರ ಮನೋಭಾವವನ್ನು ಪ್ರದರ್ಶಿಸುತ್ತಾರಲ್ಲ. ಆ ಕಾರಣಕ್ಕೆ ಈ ಪಾತ್ರಗಳು ಎಲ್ಲ ಕಾಲಕ್ಕೂ ಸಲ್ಲುವಂಥವುಗಳಾಗುತ್ತವೆ. ಕಾಲಾತೀತವಾಗಿ ನಿಲ್ಲುವಂತೆ ಮಾಡುತ್ತವೆ.

ಈ ಮೊದಲು ಇದು ನಾಟಕವಾಗಿ ಸಾಕಷ್ಟು ಜನಮನ್ನಣೆಯನ್ನು ಗಳಿಸಿತ್ತು. ಈಗ ಸಿನಿಮಾ ಆಗಿಸಿದ್ದಾರೆ ಚಂಪಾಶೆಟ್ಟಿಯವರು. ವೈಜಯಂತಿ ಅಡಿಗ, ರಾಜ್‍ ಶೆಟ್ಟಿ, ದೀಪಿಕಾ ಆರಾಧ್ಯ, ವಿಶ್ವನಾಥ ಉರಾಳ್, ಎಲ್ಲರೂ ಪರಸ್ಪರ ಪೈಪೋಟಿಯೆಂಬಂತೆ ಅಭಿನಯಿಸಿದ್ದಾರೆ. ಸಿನಿಮಾಟೋಗ್ರಾಫರ್ ಮತ್ತು ಕಲಾ ನಿರ್ದೇಶಕರು ನಿರ್ದೇಶಕಿ ಚಂಪಾಶೆಟ್ಟಿಯವರಿಗೆ ಕೈಜೋಡಿಸಿದ್ದಾರೆ. ಇದೊಂಥರದಲ್ಲಿ ಕಮರ್ಷಿಯಲ್ ಮತ್ತು ಆರ್ಟ್ ಫಿಲಂಗಳ ಸಂಯೋಜನೆಯಂತಿದೆ. ಕುಂದಾಪುರ ಭಾಷೆಯನ್ನು ಚೆನ್ನಾಗಿ ಬಳಸಿಕೊಂಡಿರುವುದೂ ಚಿತ್ರದ ಮತ್ತೊಂದು ಹೈಲೈಟ್. ಒಟ್ಟಿನಲ್ಲಿ ಕನ್ನಡದ ಭರವಸೆಯ ನಿರ್ದೇಶಕಿ ಎಂಬುದನ್ನು ಚಂಪಾಶೆಟ್ಟಿಯವರು ಈ ಸಿನಿಮಾದ ಮೂಲಕ ನಿರೂಪಿಸಿದ್ದಾರೆನ್ನಲು ಯಾವ ತಕರಾರೂ ಇಲ್ಲ.

ಭಾರತಿ ಹೆಗಡೆ

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *