ಚಿತ್ರಭಾರತಿ/ ಸಾವು ಅವಳ ಮುಂದೆ ಕಾಲೂರಿ ಕುಳಿತಿತ್ತು…! – ಭಾರತಿ ಹೆಗಡೆ

ನಾನು ಬದುಕಬೇಕಿರುವುದು ನನ್ನ ಇಬ್ಬರು ಪುಟ್ಟ ಮಕ್ಕಳಿಗಾಗಿ, ದಯವಿಟ್ಟು ಬದುಕಲು ಅವಕಾಶ ನೀಡಿ…
ಹೀಗೆಂದು ಅವಳು ಪತ್ರ ಬರೆದದ್ದು ಆ ದೇಶದ ಅಧ್ಯಕ್ಷರಿಗೆ. ಅವಳೊಬ್ಬಳು ಮರಣದಂಡನೆಗೊಳಗಾದ ಕೈದಿ. ಕ್ಷಮಾ ಭಿಕ್ಷೆಯನ್ನು ಬೇಡಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾಳೆ. ಆದರೆ ವ್ಯವಸ್ಥೆ ಸಂಪೂರ್ಣವಾಗಿ ಅವಳ ವಿರುದ್ಧ ನಿಂತಿದೆ. ಮಹಿಳೆಯೊಬ್ಬಳು ನ್ಯಾಯದ ಪರ ಇರುವಾಗ ಇಡೀ ಸಮಾಜ, ಕಡೆಗೆ ಅವಳ ಕುಟುಂಬ ಕೂಡ ಅವಳ ಪರವಾಗಿ ನಿಲ್ಲುವುದಿಲ್ಲ ಎಂಬುದನ್ನು ಒತ್ತಿ ಹೇಳುವ ಸಿನಿಮಾ  (A letter to the President) 2017ರಲ್ಲಿ ತೆರೆಕಂಡ ರೋಯಾ ಸಾದತ್ ನಿರ್ದೇಶನದ ಅಪ್ಘನ್ ಸಿನಿಮಾ, ಅಪ್ಘಾನಿಸ್ತಾನದ ಅಕಾಡೆಮಿಯ ವಿದೇಶಿ ಭಾಷೆಯ ಸಿನಿಮಾ ವಿಭಾಗದ ಪ್ರಶಸ್ತಿಗೆ ಪ್ರವೇಶ ಪಡೆದಿತ್ತು. ಆಸ್ಕರ್‌ಗೆ ಕೂಡ ಈ ಸಿನಿಮಾ ನಾಮ ನಿರ್ದೇಶನಗೊಂಡಿತ್ತು. 2018ರಲ್ಲಿ ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.

ಅಪ್ಘಾನಿಸ್ತಾನದ ಯುವ ನಿರ್ದೇಶಕಿ ಸಾದತ್, ಆತ್ಮಹತ್ಯಾ ಬಾಂಬ್‍ಗಳು ಮತ್ತು ಯುದ್ಧಪೀಳಿಗೆಯಿಂದ ಜರ್ಝರಿತವಾದ ದೇಶವೊಂದರ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯೊಬ್ಬಳಿಗಾದ ಅನ್ಯಾಯವನ್ನು ತುಂಬ ದಿಟ್ಟವಾಗಿ ಪ್ರಶ್ನಿಸುತ್ತಾರೆ. ಗಂಡು ಪ್ರಾಬಲ್ಯದ ಸಂಸ್ಕೃತಿಯ ಕ್ರೂರ ದಬ್ಬಾಳಿಕೆಗೆ ಮಹಿಳೆಯೊಬ್ಬಳು ನಿಷ್ಕಾರಣವಾಗಿ ಹೇಗೆ ಬಲಿಯಾಗಬೇಕಾಗುತ್ತದೆಂಬುದನ್ನು ಹೇಳುತ್ತದೆ ಈ ಸಿನಿಮಾ.
ಸರೈಯಾ ಇಬ್ಬರು ಮಕ್ಕಳ ತಾಯಿ. ಕಾಬೂಲ್ ಕ್ರೈಮ್ ವಿಭಾಗದ ಮುಖ್ಯಸ್ಥೆ. ಈ ಉದ್ಯೋಗ ಅತಿ ಸಮಯವನ್ನು ಬೇಡುವಂಥದ್ದು. ಇದರಿಂದಾಗಿ ಅವಳು ಮನೆ, ಗಂಡ, ಮಕ್ಕಳಿಗೆ ಮತ್ತು ಅವಳ ಮಾವನಿಗೆ ಸಮಯ ಕೊಡಲಾಗುವುದಿಲ್ಲ. ಗಂಡ ಕರೀಮ್ ಮತ್ತು ಮಾವ ಇಬ್ಬರೂ ಅವಳು ಕೆಲಸ ಮಾಡುವುದು ಅವಮಾನ ಎಂದೇ ಭಾವಿಸುತ್ತಾರೆ. ಕರೀಮ್‍ನ ಹಿಂಸಾತ್ಮಕ ನಡೆಗೆ ಸರೈಯಾ ಪ್ರತಿರೋಧ ಒಡ್ಡುತ್ತಲೇ ಇರುತ್ತಾಳೆ. ಒಮ್ಮೆ ಅವಳು ಅವನಿಗೆ ತಿರುಗಿ ಹೊಡೆಯುತ್ತಾಳೆ. ಅದು ತನ್ನ ಬದುಕಲ್ಲೇ ಬಹುದೊಡ್ಡ ಬೆಲೆ ತೆರೆಬೇಕಾಗಿ ಬರಬಹುದೆಂಬ ಅರಿವು ಸ್ವತಃ ಅವಳಿಗೇ ಇರಲಿಲ್ಲ.

ಸರೈಯಾ ಪೊಲೀಸ್ ತನಿಖಾಧಿಕಾರಿಯಾಗಿ ತುಂಬ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುತ್ತಾಳೆ. ಒಮ್ಮೆ ಕಾಬೂಲ್‍ನ ಹಳ್ಳಿಯ ಮುಖಂಡನೊಬ್ಬ ತನ್ನ ಹರೆಯದ ಹೆಂಡತಿಯನ್ನು ಸಂಶಯಿಸಿ ಅವಳನ್ನು ಕೊಲ್ಲಲು ಹೊರಟಾಗ ಅದನ್ನು ಸರೈಯಾ ತಡೆಯುತ್ತಾಳೆ. ಈ ಗಲಾಟೆಯಲ್ಲಿ ಅವಳ ಮಾವನೂ ಭಾಗಿ. ಅದಾಗಲೇ ಅವಳ ಮನೆಯಲ್ಲಿ ಸಂಬಂಧ ಹಳಸಿರುತ್ತದೆ. ಈಗ ಇದೂ ಸೇರಿ ಅವರ ಮನೆ ಕುರುಕ್ಷೇತ್ರವಾಗಿಬಿಡುತ್ತದೆ. ಅವಳ ಮಾವ ಮತ್ತು ಗಂಡ ಕರೀಮ್ ಇಬ್ಬರೂ ಆ ಕೇಸನ್ನು ವಾಪಾಸು ಪಡೆಯಲು ಒತ್ತಡ ಹೇರುತ್ತಿರುತ್ತಾರೆ. ಆದರೆ ಸರೈಯಾ ಒಪ್ಪುವುದಿಲ್ಲ. ಅವಳ ಪ್ರಾಮಾಣಿಕ ನಡೆಗೆ ಅಡಿಗಡಿಗೆ ಅಡ್ಡಿ ಆತಂಕಗಳು ಬರುತ್ತಲೇ ಇರುತ್ತದೆ.

ಅವತ್ತು ಆಗಿದ್ದೂ ಹೀಗೆಯೇ. ಗಂಡ ಕುಡಿದ ಮತ್ತಲ್ಲಿ ಹೆಂಡತಿಯೊಂದಿಗೆ ತಗಾದೆ ತೆಗೆದು ಅದೇ ಮತ್ತಲ್ಲಿ ಹೆಂಡತಿಗೆ ಹೊಡೆಯುತ್ತಾನೆ. ನೋವು ತಡೆಯಲಾರದ ಸರೈಯಾ ಕೂಡ ತಿರುಗಿ ಹೊಡೆಯುತ್ತಾಳೆ. ಮೊದಲೇ ಕುಡಿದು ತೂರಾಡುತ್ತಿದ್ದ ಕರೀಮ್ ಇವಳ ಹೊಡೆತಕ್ಕೆ ಜೋಲಿ ತಪ್ಪಿ ಹಿಂದಕ್ಕೆ ಗಾಜಿನ ಕಿಟಕಿಯ ಮೇಲೆಬಿದ್ದು ಸಾಯುತ್ತಾನೆ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಅವಳ ಮಾವ ಕೊಲೆ ಕೊಲೆ ಎಂದು ಕಿರುಚಿ, ಗಂಡನನ್ನೇ ಕೊಂದುಬಿಟ್ಟಳು ಎಂದು ಆರೋಪ ಹೊರಿಸಿ ಪೊಲೀಸ್‍ಗೆ ದೂರು ನೀಡುತ್ತಾನೆ. ಆಕಸ್ಮಿಕವಾಗಿ ನಡೆದು ಹೋದ ಒಂದು ಕೊಲೆ ಅವಳ ಕೊರಳಿಗೆ ನೇಣಾಗಿ ಸುತ್ತಿಕೊಳ್ಳುತ್ತದೆ. ಗಂಡನನ್ನು ಕೊಂದವಳಿಗೆ ಮರಣ ದಂಡನೆಯಲ್ಲದೇ ಮತ್ಯಾವ ಶಿಕ್ಷೆ? ಪ್ರತಿದಿನ ಅವನಿಂದ ಸತ್ತು ಸತ್ತು ಬದುಕುತ್ತಿದ್ದ ಸರೈಯಾಳ ಪರವಾಗಿ ಮನುಷ್ಯರು ನಿರ್ಮಿಸಿದ ನ್ಯಾಯ ವ್ಯವಸ್ಥೆ ಇರುವುದಿಲ್ಲ.

ಕೋರ್ಟ್‍ನಲ್ಲಿ ಅವಳ ವಿಚಾರಣೆ ಇರುವ ಸಂದರ್ಭದಲ್ಲಿ ಅವಳ ಪುಟ್ಟ ಮಕ್ಕಳಿಬ್ಬರೂ ಅಮ್ಮನನ್ನು ನೋಡಿದವರೇ ಓಡುತ್ತಾರೆ. ಅವಳೂ ಮಕ್ಕಳನ್ನು ತಬ್ಬಿ ಮುತ್ತಿಕ್ಕಬೇಕು ಎನ್ನುವಷ್ಟರಲ್ಲಿ ಅವಳ ಮಾವ ಇಬ್ಬರು ಮಕ್ಕಳನ್ನು ಎಳೆದು, “ಗಂಡನನ್ನು ಕೊಂದವಳು ಅವಳು. ಅವಳನ್ನು ಅಮ್ಮಾ ಎಂದು ಕರೀಬೇಡಿ” ಎಂದು ನಿರ್ದಾಕ್ಷಿಣ್ಯವಾಗಿ ಈ ಕಡೆ ಎಳೆಯುವಾಗ, ಮಕ್ಕಳು ಮತ್ತು ಆ ತಾಯಿಯನ್ನು ನೋಡಿ ಅದೆಂಥ ಕ್ರೂರ ವ್ಯವಸ್ಥೆ ಎಂದು ಅವುಡುಗಚ್ಚುವಷ್ಟು ರೋಷ ನಮ್ಮಲ್ಲೂ ಉಕ್ಕುತ್ತದೆ. ಅವಳ ಮರಣದಂಡನೆ ಕಾಯಂ ಆಗುತ್ತದೆ.

ಮಕ್ಕಳಿಗಾಗಿ ತುಯ್ದಾಡುವ ಅವಳ ಮನಸ್ಸು ಸದಾ ಬಿಡುಗಡೆಯತ್ತಲೇ ಯೋಚಿಸುತ್ತಿರುತ್ತದೆ. “ಅಮ್ಮಾ…ದೊಡ್ಡವನಾದ ಮೇಲೆ ನಾನು ಏರೋಪ್ಲೇನ್ ಓಡಿಸ್ತೇನೆ. ಅಪ್ಪನ ಹಾಗೇ ಸುಯ್.. ಎಂದು ಕಾರು ಓಡಿಸ್ತೇನೆ…’ ಅವಳ ಪುಟ್ಟ ಮಗ ಕೈಯಲ್ಲಿ ಆಟಿಕೆಯ ಕಾರನ್ನು ಹಿಡಿದು ತೋರಿಸುತ್ತಾನೆ. ಪುಟ್ಟ ಮಗನ ಕನಸು ಕೇಳಿ ಮುದ್ದುಮಾಡುತ್ತಾಳೆ ಸರೈಯಾ. ಅವನಿಗಿಂತ ಸ್ವಲ್ಪ ದೊಡ್ಡವಳಾದ ಮಗಳೂ ತಮ್ಮನೊಂದಿಗೆ ಆಟವಾಡುತ್ತಿದ್ದುದೆಲ್ಲ ನೆನಪಾಗಿ ಕಣ್ಣು ಒದ್ದೆಯಾಗುತ್ತದೆ. ಕೊನೆಯ ಭರವಸೆಯ ತುಣುಕೆಂಬಂತೆ ಅವಳು, ‘ನನ್ನ ಧ್ವನಿಯನ್ನು ಅಡಗಿಸಲಾಯಿತು. ದಯವಿಟ್ಟು ನಿಮ್ಮ ಆತ್ಮಸಾಕ್ಷಿಯನ್ನೇ ಕೇಳಿರಿ. ನನ್ನ ತಪ್ಪಿಲ್ಲ ಇದರಲ್ಲಿ. ನಾನು ನನ್ನ ಮಕ್ಕಳಿಗಾಗಿಯಾದರೂ ಬದುಕಬೇಕು. ನನ್ನ ಮಕ್ಕಳಿನ್ನೂ ಚಿಕ್ಕವರು, ಒಬ್ಬ ತಾಯಿಯನ್ನು ಬದುಕಿಸಿ…’ ಎಂದು ಅಪ್ಘಾನಿಸ್ತಾನದ ಅಧ್ಯಕ್ಷರಿಗೆ ಪತ್ರ ಬರೆಯುತ್ತಾಳೆ. ಆದರೆ ಅವಳ ವಿರುದ್ಧದ ಮಾತುಗಳೇ ಇರುತ್ತವೆ. ಗಂಡನನ್ನೇ ಕೊಂದವಳು ಎಂಬ ಹಣೆಪಟ್ಟಿಯೇ ಜೋರಾಗಿರುತ್ತದೆ. ಜೊತೆಗೆ ಅವಳೊಬ್ಬಳು ಮಹಾ ಕುಡುಕಿ. ಕುಡಿದ ಮತ್ತಲ್ಲಿ ವಿವೇಚನೆ ಕಳೆದುಕೊಂಡು ಗಂಡನನ್ನೇ ಕೊಲೆ ಮಾಡಿದಳು ಎಂಬ ಅಪವಾದ. ಇದನ್ನು ನಂಬುವಂತೆ ಮಾಡುವುದು ಅವಳ ಪರವಾಗಿ ಚಿತ್ರಕಾರನೊಬ್ಬ ಬಿಡಿಸಿದ ಪೇಂಟಿಂಗ್. ಅದರಲ್ಲಿ ಮದ್ಯದ ಬಾಟಲಿಗಳ ಮೇಲೆ ಅವಳ ಚಿತ್ರವಿರುತ್ತದೆ. ಹೀಗೆ ಎಲ್ಲವೂ ಅವಳ ವಿರುದ್ಧವೇ ಸುತ್ತಿಕೊಳ್ಳುತ್ತದೆ.

ನಾಳೆ ಬೆಳಗಾದರೆ ಅವಳು ಗಲ್ಲಿಗೇರುವವಳು. ಸಾವು ಅವಳ ಮುಂದೆ ಕಾಲೂರಿ ಕೂತಿದೆ.. ಎದುರಿಗೆ ಇಬ್ಬರು ಪುಟ್ಟ ಮಕ್ಕಳ ಕನಸುಗಳು. ಒಬ್ಬ ತಾಯಿ ಹೃದಯ ಚಡಪಡಿಸುತ್ತಿದೆ. ಆ ಮಕ್ಕಳಿಗಾಗಿ ಸಾವು ಒಂದಿಂಚೂ ಕದಲೊಲ್ಲದು. ಆ ರಾತ್ರಿ ಅವಳು ಭೂಮಿಯನ್ನೇ ಮಕ್ಕಳೆಂಬಂತೆ ತಟ್ಟುತ್ತ ಲಾಲಿ ಹಾಡುತ್ತಾಳೆ. ಹಾಡುತ್ತ ಹಾಡುತ್ತ ನಿದ್ದೆ ಹೋಗುತ್ತಾಳೆ. ಮಾರನೇ ದಿನ ನೇಣು ಕುಣಿಕೆಯ ಬಳಿ ಅವಳನ್ನು ಕರೆತರಲಾಗುತ್ತದೆ. ಆಗಲೂ ಅವಳಿಗೆ ಮಕ್ಕಳ ಮಾತುಬಿಟ್ಟರೆ ಬೇರೇನೂ ಕೇಳಿಸುವುದಿಲ್ಲ.

ಅಮ್ಮಾ…ನಾನು ದೊಡ್ಡವನಾದ ಮೇಲೆ ಕಾರನ್ನು ಜೋರಾಗಿ ಓಡಿಸ್ತೀನಿ ಅಪ್ಪನ ಹಾಗೆ. ನಾನು ವಿಮಾನವನ್ನು ಓಡಿಸ್ತೀನೆ.. ಹ..ಹ..ಹಾ…ಮಕ್ಕಳ ಕಿಲಕಿಲ ನಗು, ಮಾತುಗಳೆಲ್ಲವೂ ತುಂಬ ಆಳದಿಂದ ನಿಧಾನವಾಗಿ ಮೇಲೇರುತ್ತ ಆಕಾಶವನ್ನು ತಲುಪುತ್ತದೆ… ಎಲ್ಲಿಯೂ ಅವಳ ಸಾವನ್ನು ವೈಭವೀಕರಿಸದೆ, ಸರೈಯಾ ಸಾಯುತ್ತಾಳೆಂಬುದನ್ನು ಸೂಚ್ಯವಾಗಿ ತೋರಿಸಿರುವ ನಿರ್ದೇಶಕರ ಜಾಣ್ಮೆ ಮೆಚ್ಚುವಂಥದ್ದು. ಈ ಸಿನಿಮಾ ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ 2008ರಲ್ಲಿ ತೆರೆಕಂಡ ’ಸ್ಟೋನಿಂಗ್ ಆಫ್ ಸೊರಯಾ’ ಸಿನಿಮಾವನ್ನು ಹೋಲುತ್ತದೆ. ಅದರಲ್ಲೂ ಅವಳದಲ್ಲದ ತಪ್ಪಿಗಾಗಿ ಅವಳ ಗಂಡ ಮತ್ತು ಊರಿನ ಮುಲ್ಲಾ ಸೇರಿ ಪಿತೂರಿ ಮಾಡಿ ಅವಳನ್ನು ಕಲ್ಲಲ್ಲಿ ಹೊಡೆದು ಸಾಯಿಸುತ್ತಾರೆ. ಇದರಲ್ಲೂ ಅವಳದಲ್ಲದ ತಪ್ಪಿಗೆ ಮಾವನ ಪಿತೂರಿಯಿಂದಾಗಿ ಅವಳು ಮರಣದಂಡನೆ ಶಿಕ್ಷೆಗೊಳಗಾಗಬೇಕಾಯಿತು.  ಸ್ವಲ್ಪ ಮಟ್ಟಿಗೆ ನಮ್ಮ ದಾಮಿನಿ ಸಿನಿಮಾ ಕೂಡ ಹೋಲುತ್ತದೆ. ಅತ್ಯಾಚಾರಕ್ಕೊಳಗಾದ ಮನೆಗೆಲಸದಾಕೆಯ ಬೆಂಬಲಕ್ಕೆ ನಿಲ್ಲುವ ದಾಮಿನಿ, ಮನೆಯವರ ವಿರೋಧವನ್ನು ಕಟ್ಟಿಕೊಳ್ಳುತ್ತಾಳೆ. ಆದರೆ ಕಡೆಯಲ್ಲಿ ನ್ಯಾಯದ ಪರವಾಗಿ ನಿಲ್ಲಲು ದಾಮಿನಿ ಯಶಸ್ವಿಯಾಗುತ್ತಾಳೆ, ಸರೈಯಾ ಸೋಲುತ್ತಾಳೆ.  ಅಪ್ಘನ್ ಸಮಾಜದಲ್ಲಿನ ದಮನಿತರಾದ ಮಹಿಳೆಯರ ಮೌನವನ್ನು ಮುರಿಯುವುದು ಈ ಸಿನಿಮಾದ ಉದ್ದೇಶ ಎಂದು ನಿರ್ದೇಶಕಿ ಸಾದತ್ ಹೇಳಿದ್ದಾರೆ. ಒಟ್ಟಿನಲ್ಲಿ ಪುರುಷಾಧಿಪತ್ಯ ಮತ್ತು ಸಂಪ್ರದಾಯಗಳ ನಡುವೆ ನಲುಗುವ ಮಹಿಳೆಯೊಬ್ಬಳ ವೇದನೆಯನ್ನು ಹೇಳುವಲ್ಲಿ ಸಿನಿಮಾ ಯಶಸ್ವಿಯಾಗಿದೆ.

ಭಾರತಿ ಹೆಗಡೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

3 thoughts on “ಚಿತ್ರಭಾರತಿ/ ಸಾವು ಅವಳ ಮುಂದೆ ಕಾಲೂರಿ ಕುಳಿತಿತ್ತು…! – ಭಾರತಿ ಹೆಗಡೆ

 • August 8, 2018 at 2:17 pm
  Permalink

  “Chitra Bharathi ”
  Wonderful Bharathi!!!!
  Saraiyya’s story is a story of introspection.
  I will watch that movie.
  Congratulations. Your work is amazing !!!
  Susheela

  Reply
  • August 23, 2018 at 4:20 am
   Permalink

   Thanks madam

   Reply
 • August 23, 2018 at 4:22 am
  Permalink

  Thanks madam

  Reply

Leave a Reply

Your email address will not be published. Required fields are marked *