ಚಿತ್ರಭಾರತಿ / ರಾಮಕ್ಕ ಈಗ ಹೆಬ್ಬೆಟ್ಟು ಅಲ್ಲ…! -ಭಾರತಿ ಹೆಗಡೆ

ರಾಜಕೀಯದಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ಇಂದಿಗೂ ಮರೀಚಿಕೆ ಎಂಬಂಥ ಸ್ಥಿತಿಯಲ್ಲಿರುವಾಗಲೇ ಪಂಚಾಯತ್ ವ್ಯವಸ್ಥೆಯು ಸ್ಥಳೀಯ ಸಂಸ್ಥೆಗಳಲ್ಲಿ ಅತಿಹೆಚ್ಚು ಮಹಿಳೆಯರನ್ನು ಒಳಗೊಂಡಿದೆ. ಆದರೆ ಮಹಿಳಾ ಮೀಸಲಾತಿ ಎನ್ನುವುದು ಅವರ ಗಂಡಂದಿರ ಪಾಲಾಗಿದೆ ಎನ್ನುವ ದೂರುಗಳೂ ಸಾಕಷ್ಟಿವೆ. ಇಂಥ ಸಂದರ್ಭದಲ್ಲಿ ಓದು ಬರಹ ಬಾರದ ಅನಕ್ಷರಸ್ಥ ಮಹಿಳೆಯರು ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರಾಗಿ, ಭ್ರಷ್ಟಾಚಾರ, ಅಕ್ರಮಗಳು ನಡೆದಾಗ ಅಂಥವನ್ನು ಪ್ರತಿಭಟಿಸಿ ನಿಂತಾಗ ಪ್ರಜಾಪ್ರಭುತ್ವದ ಬಗ್ಗೆ ಭರವಸೆ ಹುಟ್ಟುತ್ತದೆ.

ರಾಜಕೀಯದಲ್ಲಿ ಶೇ. 33 ಮೀಸಲಾತಿ ಮಹಿಳೆಯರಿಗೆ ನೀಡಬೇಕೆಂಬುದು ಸದಾಕಾಲ ಚುನಾವಣಾ ಘೋಷಣೆಯಾಗಿಯೇ ಉಳಿಯುತ್ತಿದೆ. ಪ್ರತಿಬಾರಿಯೂ, ಪ್ರತಿ ಪಕ್ಷವೂ ಇದನ್ನು ಹೇಳಿ ಮತ್ತೆ ಅಲ್ಲಿಗೇ ಕೈಬಿಡುತ್ತವೆ. ಶೇ. 33 ಅಲ್ಲ, ಅದರಲ್ಲಿ ಅರ್ಧದಷ್ಟನ್ನು ಕೊಡುವುದೂ ಕಷ್ಟ ಎಂಬಂಥ ಪರಿಸ್ಥಿತಿ ಇದೆ. ಮೀಸಲಾತಿಯ ಬಗ್ಗೆ ಮಾತನಾಡಿದರೆ, `ಸ್ಥಳೀಯ ಸಂಸ್ಥೆಗಳಲ್ಲಿ ಶೇ. 50 ರಷ್ಟು ಮೀಸಲಾತಿ ಕೊಟ್ಟಿದ್ದೀವಲ್ರೀ…’ ಎಂದು ಸಮಜಾಯಿಷಿ ನೀಡುತ್ತಾರೆ ನಮ್ಮ ರಾಜಕೀಯ ಧುರೀಣರು. ಕೊಟ್ಟಿದ್ದಾರೆ ನಿಜ. ಆದರೆ ಅದೆಷ್ಟು ಅಧಿಕಾರ ಅವರ ಕೈಯ್ಯಲ್ಲಿರುತ್ತದೆ ಎಂಬುದು ಇಲ್ಲಿ ಮುಖ್ಯವಾದ ಪ್ರಶ್ನೆ. ಎಲ್ಲಿ ಹಣ, ಅಧಿಕಾರ ಇರುತ್ತದೆ, ಅಲ್ಲೆಲ್ಲ ಮಹಿಳೆಯರನ್ನು ದೂರ ಇಡುವಂಥ ಹುನ್ನಾರವೇ ನಡೆಯುತ್ತಿದೆ. ಚುನಾವಣಾ ಪ್ರಚಾರಕ್ಕೆ ಮಹಿಳೆಯರನ್ನು ಧಾರಾಳವಾಗಿ ಬಳಸಿಕೊಳ್ಳಲಾಗುತ್ತದೆ. ಆದರೆ ಟಿಕೆಟ್ ಹಂಚಿಕೆ ಬಂದಾಗ ಮಹಿಳೆಯರಿಗೆ ಅನ್ಯಾಯ ಆಗುವುದೇ ಹೆಚ್ಚು. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅತಿಹೆಚ್ಚು ಮಹಿಳೆಯರನ್ನು ಒಳಗೊಳ್ಳಲಾಗಿದೆ ಎಂಬುದು ನಿಜ. ಆದರೆ ಮಹಿಳೆಯ ಹೆಸರಿನಲ್ಲಿ ತಂದೆ, ಸಹೋದರ, ಗಂಡ ಅಥವಾ ಮಾವನೇ ಅಧಿಕಾರ ಚಲಾಯಿಸುತ್ತಾರೆ ಎಂಬ ದೂರುಗಳು ಸರ್ವೇಸಾಮಾನ್ಯ.
`ಹೆಬ್ಬೆಟ್ ರಾಮಕ್ಕ’ ಈಗ ಇಂಥದ್ದೇ ಕಥಾವಸ್ತುವನ್ನು ಇಟ್ಟುಕೊಂಡು ನಿರ್ಮಿಸಲಾಗಿರುವ ಸಿನಿಮಾ. 2018ರಲ್ಲಿ ಬಿಡುಗಡೆಯಾದ ಈ ಸಿನಿಮಾ ಕೇಂದ್ರ ಸರ್ಕಾರ ನೀಡುವ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ನಟಿ ಎಂದು ತಾರಾ ಅನೂರಾಧಾ ಅವರಿಗೆ ರಾಜ್ಯಪ್ರಶಸ್ತಿ ಕೂಡ ಲಭಿಸಿದೆ. 2018ರ ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರದರ್ಶಿತಗೊಂಡಿದೆ. ಎನ್.ಆರ್. ನಂಜುಂಡೇಗೌಡ ನಿರ್ದೇಶನದ ಈ ಸಿನಿಮಾಕ್ಕೆ ಎಸ್.ಜಿ. ಸಿದ್ದರಾಮಯ್ಯನವರ ಸಂಭಾಷಣೆ ಇದೆ. ಹಿರಿಯ ನಟಿ ತಾರಾ ಅನುರಾಧ ಮತ್ತು ದೇವರಾಜ್ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾ ಒಂದು ಕತೆಯಾಗಿ ಉಳಿಯದೇ ವರ್ತಮಾನದ ವಿದ್ಯಮಾನಗಳಿಗೆ ಹಿಡಿದ ಕನ್ನಡಿಯಂತಿದೆ. ಮಹಿಳಾ ಮೀಸಲಾತಿಯ ದುರುಪಯೋಗ ಯಾವ ರೀತಿ ಆಗುತ್ತಿದೆ ಮತ್ತು ಒಬ್ಬ ಮಹಿಳಾ ರಾಜಕಾರಣಿ ಅದನ್ನು ಹೇಗೆ ಮೆಟ್ಟಿನಿಂತು ಬೆಳೆಯುತ್ತಾಳೆ ಎಂಬುದು ಚಿತ್ರದ ಕಥಾವಸ್ತು.
ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಎನ್ನುವುದು ಬರೀ ತೋರಿಕೆ ಆಗಿದೆ. ಪತ್ನಿಯ ಹೆಸರಲ್ಲಿ ಪತಿಯೇ ಅಧಿಕಾರ ನಡೆಸುತ್ತಾನೆ ಎಂಬ ದೂರುಗಳು ಇವೆ. ಇಂಥ ಸಂದರ್ಭದಲ್ಲಿ ಓದು ಬರಹ ಬಾರದ ಅನಕ್ಷರಸ್ಥ ಮಹಿಳೆಯರು ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರಾದ ಉದಾಹರಣೆಗಳು ಸಾಕಷ್ಟಿವೆ. ಆದರೆ ಮೋಸ ನಡೆಯುತ್ತದೆ ಎಂಬುದು ತಿಳಿದಾಗ ಎಚ್ಚೆತ್ತ ಮಹಿಳೆಯರೂ ಇದ್ದಾರೆ. ಹಾಗೆ ಗಂಡನಿಂದಲೇ ಮೋಸವಾಗುತ್ತಿದೆ ಎಂದು ತಿಳಿದು ಎಚ್ಚೆತ್ತುಕೊಂಡವಳು ರಾಮಕ್ಕ. ತನ್ನ ಸಹಾಯಕನಿಂದಲೇ ಅಕ್ಷರ ಕಲಿತು, ಆಡಳಿತ ನಡೆಸುವಷ್ಟು ಓದು ಬರಹ ಕಲಿತು ಎಲ್ಲರೂ ಅಚ್ಚರಿ ಪಡುವಂತೆ ಮಾಡಿದ್ದಲ್ಲದೆ, ಗಂಡನ ಅಕ್ರಮಗಳನ್ನು ತಡೆಯಲು ಯತ್ನಿಸುತ್ತಾಳೆ.

ರಾಮಕ್ಕ ಹಳ್ಳಿಯ ಹೆಂಗಸು. ಮನೆಗೆಲಸ ಮಾಡಿಕೊಂಡು, ಗಂಡ ಮಕ್ಕಳನ್ನು ನೋಡಿಕೊಂಡು, ಕೊಟ್ಟಿಗೆಯಲ್ಲಿನ ಹಸುಗಳನ್ನೂ ಮಕ್ಕಳಂತೆ ನೋಡಿಕೊಂಡು, ಇಡೀ ಮನೆಯನ್ನು ನಿಭಾಯಿಸಿಕೊಂಡು ಹೋಗುವ ಅಪ್ಪಟ ಗೃಹಿಣಿ. ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಹೊಂದಿರದ ಸಣ್ಣಪುಟ್ಟ ಕಾಂಟ್ರಾಕ್ಟ್ ಮಾಡಿಕೊಂಡಿರುವ ಅವಳ ಗಂಡ ಕಲ್ಲೇಶಿ, ಊರಿನ ಮಿನಿ ಪುಢಾರಿ ಕೂಡ. ಅವಿದ್ಯಾವಂತ ಹೆಂಡತಿ ರಾಮಕ್ಕ ಜಮೀನು, ಮನೆ, ಕೊಟ್ಟಿಗೆ ಎಲ್ಲವನ್ನೂ ನಿಭಾಯಿಸುತ್ತಿರುತ್ತಾಳೆ. ಇದೇ ಹೊತ್ತಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆ ಬಂದು, ಅಕಸ್ಮಾತ್ತಾಗಿ ರಾಮಕ್ಕನನ್ನು ಚುನಾವಣೆಗೆ ನಿಲ್ಲಿಸುವ ಸಂದರ್ಭ ಬಂದೊದಗಿಬಿಡುತ್ತದೆ. ‘ಹೇಳಿಕೇಳಿ ಹಳ್ಳಿಮುಕ್ಕಿ ನಾನು. ನಂಗೆಂತ ತಿಳಿತದೇ ಈ ರಾಜಕೀಯ ಎಲ್ಲ. ಬ್ಯಾಡ, ನಾ ನಿಂತ್ಕಳಾಕಿಲ್ಲ’ ಎಂದವಳು ಎಷ್ಟು ಹೇಳಿದರೂ ಕೇಳದೆ, ‘ನಿಲ್ಲೋದಷ್ಟೇ ನಿನ್ನ ಕೆಲಸ. ಆಮೇಲೆ ನಾ ಹೇಳಿದ್ದಕ್ಕೆಲ್ಲ ನೀ ಹೆಬ್ಬೆಟ್ಟು ಒತ್ತು ಸಾಕು’ ಎಂದು ಹೇಳಿ ಗಂಡ ಕಲ್ಲೇಶಿ ಅವಳನ್ನು ಆ ಸಲದ ಇಲೆಕ್ಷನ್‍ಗೆ ನಿಲ್ಲಿಸಿಯೇ ಬಿಡುತ್ತಾನೆ ಮತ್ತು ಅವಳು ಗೆದ್ದೂ ಬಿಡುತ್ತಾಳೆ. ನಾಲ್ಕು ಜನರೆದುರಿಗೆ ಸರಿಯಾಗಿ ಮಾತೂ ಆಡಲು ಬರದ, ಶಾಲೆಯ ಮುಖವನ್ನೇ ಕಂಡಿರದ, ಓದು-ಬರಹ ಬಾರದ ರಾಮಕ್ಕನಿಗೆ ಮೊದಲ ಬಾರಿಗೆ ಚುನಾವಣೆ ಗೆದ್ದು, ಪಂಚಾಯ್ತಿಯಲ್ಲಿ ಎಲ್ಲರೆದುರು ಬಂದು ನಿಂತದ್ದೇ ದೊಡ್ಡ ವಿಚಾರವಾಗಿ, ಹೆದರಿಕೊಂಡು ಗಂಡನ ಹಿಂದೇ ನಿಲ್ಲುತ್ತಾಳೆ. ಕಲ್ಲೇಶಿಯೇ ಎಲ್ಲವನ್ನೂ ನಿಭಾಯಿಸುತ್ತಿರುತ್ತಾನೆ. ಎಲ್ಲ ವ್ಯವಹಾರಗಳನ್ನು ಅವನೇ ನೋಡಿಕೊಳ್ಳುತ್ತಾನೆ. ಒಂದು ಸಭೆ ನಡೆಸುವುದರಿಂದ ಹಿಡಿದು, ಯಾವುದೇ ಕಾಮಗಾರಿ ನಡೆಸುವುದಿದ್ದರೂ, ಟೆಂಡರ್ ಕರೆಯುವುದಿದ್ದರೂ ಪ್ರತಿಯೊಂದನ್ನೂ ಕಲ್ಲೇಶಿಯೇ ನೊಡಿಕೊಂಡು, ಅವನು ಹೇಳಿದ ಕಡೆಯಲ್ಲೆಲ್ಲ ಹೆಬ್ಬೆಟ್ಟು ಒತ್ತೋದಷ್ಟೇ ಅವಳ ಕೆಲಸವಾಗಿರುತ್ತದೆ. ಹಾಗಾಗಿಯೇ ಅವಳಿಗೆ ಹೆಬ್ಬೆಟ್ ರಾಮಕ್ಕನೆಂಬ ಹೆಸರು.
ಆದರೆ ಇವೆಲ್ಲ ಎಷ್ಟು ದಿವಸ…?
ತನ್ನ ಅನಕ್ಷರತೆಯ ಲಾಭ ಪಡೆಯ ಹೊರಟ ಗಂಡ, ಅಧಿಕಾರಿಗಳು, ಜನಪ್ರತಿನಿಧಿಗಳು, ಇವುಗಳನ್ನೆಲ್ಲ ನಿಧಾನವಾಗಿ ಅರ್ಥಮಾಡಿಕೊಳ್ಳುತ್ತಾ ಈ ಎಲ್ಲಾ ಸಮಸ್ಯೆಗಳಿಗೆ ಸಾಕ್ಷರತೆಯೇ ಸಮರ್ಥ ಪರಿಹಾರವೆಂದು ಕಂಡುಕೊಂಡವಳು ರಾಮಕ್ಕ. ಅಕ್ಷರ ಕಲಿಯುತ್ತಾಳೆ. ಸಹಿಮಾಡುವುದು ಕಲಿಯುತ್ತಾಳೆ. ಹೆಬ್ಬೆಟ್ಟು ಹೋಗಿ ಸಹಿ ಮಾಡುವುದನ್ನು ಸ್ವತಃ ಗಂಡನೇ ಆಶ್ಚರ್ಯದಿಂದ ನೋಡುತ್ತಾನೆ.
ಅವಕಾಶ ನೀಡಿದರೆ ಮಹಿಳೆಯರೂ ಸಮರ್ಥವಾಗಿ ರಾಜಕೀಯದಲ್ಲಿ ಆಡಳಿತ ನಡೆಸುವರು ಎಂಬುದಕ್ಕೆ ರಾಮಕ್ಕ ನಿದರ್ಶನವಾಗುತ್ತಾಳೆ.
ಅನಕ್ಷರಸ್ಥ ಮಹಿಳೆಯಾಗಿ ನಂತರ ಪಂಚಾಯ್ತಿ ಅಧ್ಯಕ್ಷೆಯಾದ ಮೇಲೆ ಎಲ್ಲರ ಅವಮಾನ, ಕೊಂಕುನುಡಿಗಳನ್ನೂ ತುಂಬ ಸಹಜವಾಗಿಯೇ ಸ್ವೀಕರಿಸಿ, ಅದನ್ನು ಎದುರಿಸಿ, ಅಕ್ಷರ ಕಲಿತೂ ಎಲ್ಲಿಯೂ ಅಹಂಕಾರ ತೋರಿಸದೆ ತುಂಬ ಪ್ರಾಮಾಣಿಕವಾಗಿ ಕೆಲಸಮಾಡುವ ರಾಮಕ್ಕನಾಗಿ ತಾರಾ ಅನುರಾಧಾ ಅವರ ಅಭಿನಯ ತುಂಬ ಸಹಜವಾಗಿದೆ. ಅಷ್ಟೇ ಸಹಜ ಅಭಿನಯ ದೇವರಾಜ್ ಅವರದ್ದೂ ಕೂಡ.
ಪಂಚಾಯ್ತಿಯಲ್ಲಿ ಅನಕ್ಷರಸ್ಥ ಹೆಣ್ಣುಮಗಳೊಬ್ಬಳ ಹರಸಾಹಸವನ್ನು ಚಿತ್ರಿಸುವಾಗ ಎಲ್ಲಿಯೂ ಇದೊಂದು ಡಾಕ್ಯುಮೆಂಟರಿ ಹಾದಿ ಹಿಡಿಯುವುದಿಲ್ಲ. ಒಳ್ಳೆಯ ಸಂಗೀತವನ್ನು ಬಳಸಿಕೊಂಡು ಮನಮುಟ್ಟುವ ಹಾಗೆ ಚಿತ್ರಿಸಿದ್ದು ಮೆಚ್ಚತಕ್ಕ ಸಂಗತಿ.
ಆದರೂ ಸಿನಿಮಾವೊಂದು ದೃಶ್ಯಮಾಧ್ಯಮ ಎಂದಾದಾಗ ಇಲ್ಲಿ ಕ್ಯಾಮರಾವೇ ಹೆಚ್ಚು ಮಾತನಾಡಬೇಕಿತ್ತು. ಆದರೆ ಸಂಭಾಷಣೆಯೇ ಜಾಸ್ತಿಯಾಗಿ, ಸ್ವಲ್ಪ ನಾಟಕದ ಜಾಡು ಹಿಡಿದಂತೆ ಅನಿಸಿದರೂ, ಅತಿ ಕಡಿಮೆ ಅವಧಿಯಲ್ಲಿ ಯಾರಿಗೂ ತಿಳಿಯದಂತೆ ಓದುಬರಹ ಕಲಿತು ವ್ಯವಹಾರವನ್ನೆಲ್ಲ ಸಮರ್ಥವಾಗಿ ನಿಭಾಯಿಸುವುದು, ಎಲ್ಲರನ್ನೂ ತರಾಟೆಗೆ ತೆಗೆದುಕೊಳ್ಳುವುದು ಇವೆಲ್ಲ ಸ್ವಲ್ಪ ಅಸಹಜ ಎನಿಸಿದರೂ, ಅನಕ್ಷರಸ್ಥ ಮಹಿಳೆಯರಿಗೆ ರಾಮಕ್ಕ ಸ್ಫೂರ್ತಿ ತುಂಬಬಲ್ಲಳು ಎಂಬುದಂತೂ ಸುಳ್ಳಲ್ಲ.

ಭಾರತಿ ಹೆಗಡೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *