ಚಿತ್ರಭಾರತಿ/ ಮಹಿಳೆಯರಿಗೆ ಮತದಾನದ ಹಕ್ಕು…ಇದು ದೇವರ ಆದೇಶವೇ? – ಭಾರತಿ ಹೆಗಡೆ
ಇಂದು ಮಹಿಳೆ ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಮುಂದಿದ್ದಾಳೆ. ಆದರೆ ಒಂದು ಕಾಲದಲ್ಲಿ ಅವಳು ಮತದಾನದ ಹಕ್ಕಿನಿಂದಲೂ ವಂಚಿತಳಾಗಿದ್ದಳು. ಮಹಿಳಾ ಸಮಾನತೆ, ಹಕ್ಕುಗಳ ಕುರಿತು ಹೋರಾಟ ಜಗತ್ತಿನಲ್ಲೆಡೆ ಆದಂತೆಯೇ ಸ್ವಿಸ್ ಸಮಾಜದಲ್ಲೂ ನಡೆದಿತ್ತು. ಧರ್ಮದ ಹೆಸರಿನಲ್ಲಿ ಪುರುಷ ಮಾಡಿದ ಕಾನೂನನ್ನು ಆ ಮಹಿಳೆಯರು ಹೇಗೆ ಮುರಿದರು ಎಂಬುದೇ “ಡಿವೈನ್ ಆರ್ಡರ್’ ಸಿನಿಮಾದ ಕತೆ.
***
ಮಹಿಳೆಗೆ ಮತದಾನದ ಹಕ್ಕಿಲ್ಲ, ಅವಳು ಉದ್ಯೋಗ ಮಾಡುವಂತಿಲ್ಲ. ಅವಳಿಗೆ ಯಾವ ಹಕ್ಕೂ ಇಲ್ಲ. ಇವನ್ನೆಲ್ಲ ಧರ್ಮ ಕೂಡ ಒಪ್ಪುವುದಿಲ್ಲ. ಬೈಬಲ್ ಕೂಡ ಇದನ್ನೇ ಹೇಳುತ್ತಿದೆ. ಇದು ದೇವರ ಆದೇಶ…
ಹೀಗೆಲ್ಲ ಕಾನೂನುಗಳನ್ನು ಅವರ ಮೇಲೆ ಹೇರಿದ ಸಮಯದಲ್ಲೇ ನೋರಾ ಎಂಬ ಗೃಹಿಣಿ ಇದೆಲ್ಲ ನಿಜವಾ ಎಂದು ಕೇಳಿಕೊಳ್ಳುತ್ತಾಳೆ. ಜಗತ್ತು ಬದಲಾವಣೆಗೊಳ್ಳುತ್ತಿದೆ. ಆದರೆ ನಮ್ಮ ಸಣ್ಣ ಹಳ್ಳಿಮಾತ್ರ ಇನ್ನೂ ಹಾಗೆಯೇ ಇದೆ. ಇದ್ಹೇಗೆ ದೇವರ ಆದೇಶವಾಗುತ್ತದೆ…? ಅವಳಲ್ಲಿ ನಿಲ್ಲದ ಪ್ರಶ್ನೆಗಳು.
ಅದು 1971ರ ಸಮಯ. ಮಹಿಳಾ ಸ್ವಾತಂತ್ರ್ಯವೆಂಬುದು ತುಂಬ ಚರ್ಚೆಗೊಳ್ಳುತ್ತಿದ್ದ ಕಾಲ. ಆಗ ಸ್ವಿಟ್ಜರ್ಲೆಂಡ್‍ನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಅಷ್ಟೇ ಏಕೆ, ಮಹಿಳೆಯರು ಉದ್ಯೋಗ ಮಾಡಬೇಕೆಂದರೂ ಗಂಡನ ಅನುಮತಿ ಪಡೆಯಬೇಕಿತ್ತು. ಬದಲಾವಣೆಯ ಗಾಳಿ ಎಲ್ಲೆಡೆ ಬೀಸುತ್ತಿರುವ ಸಮಯದಲ್ಲಿ, ಮನೆಯಲ್ಲಿ ಮಾತ್ರ ಮಹಿಳೆ ಅದೇ ಗುಡಿಸಿ, ತಿಕ್ಕಿ, ಸಾರಿಸುವ ಮನೆಗೆಲಸದಲ್ಲಿರುತ್ತಾಳೆಂದು ಬೇಸರದಿಂದ ಹೇಳಿಕೊಳ್ಳುವ ಇಬ್ಬರು ಮಕ್ಕಳ ತಾಯಿ ನೋರಾ ಎಂಬ ಸ್ವಿಸ್ ಮಹಿಳೆಯ ಹೋರಾಟದ ಕತೆಯಿದು.
2017ರಲ್ಲಿ ತೆರೆಕಂಡ ಪೆಟ್ರಾ ವೋಲ್ಪೆ ನಿರ್ದೇಶನದ ಸ್ವಿಸ್ ಸಿನಿಮಾ “ಡಿವೈನ್ ಆರ್ಡರ್’ ಮಹಿಳಾ ಸಮಾನತೆ ಮತ್ತು ಹೋರಾಟದ ಕುರಿತು ಹೇಳುತ್ತದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನೂ ಪಡೆದಿದೆ. ಇದು ಆಸ್ಕರ್‌ಗೆ ಪ್ರವೇಶ ಪಡೆದಿತ್ತು.
ಈ ಸಿನಿಮಾ ಸ್ವಿಸ್‍ನ ಒಂದು ಸಣ್ಣ ಹಳ್ಳಿಯಲ್ಲಿ ನಡೆಯುತ್ತದೆ. ಜಗತ್ತಿನ ಇತರೆಡೆಗಳಲ್ಲಿರುವಂತೆಯೇ ರಾಜಕೀಯ ಮತ್ತು ಲೈಂಗಿಕ ಕ್ರಾಂತಿಯ ಗಾಳಿ ಬೀಸುತ್ತಿರುವ ದೇಶ ಸ್ವಿಟ್ಜರ್ಲೆಂಡ್. ಆ ದೇಶದ ಸಣ್ಣ ಹಳ್ಳಿಯೊಂದರ ಯುವ ಗೃಹಿಣಿ ನೋರಾ (ಮೇರಿ ಲುಯಾನ್ ಬರ್ಗರ್) ಅದೇ ತಿಕ್ಕಿ ತೊಳೆಯುವ, ಅಡುಗೆ, ತಿಂಡಿ ಮಾಡುವ, ಮಾವ, ಗಂಡನ ಸೇವೆ ಕೆಲಸ ಇವಿಷ್ಟೇ ಕೆಲಸಗಳಲ್ಲಿ ಸುಸ್ತಾಗಿ ಹೋಗಿದ್ದಾಳೆ. ಈ ಏಕತಾನತೆಯಿಂದ ತಪ್ಪಿಸಿಕೊಳ್ಳುವ ತುಡಿತ ಅವಳನ್ನು ದೊಡ್ಡ ಹೋರಾಟಕ್ಕೆ ನಾಂದಿಯಾಗಿಸುತ್ತದೆಂದು ಸ್ವತಃ ಅವಳಿಗೇ ಗೊತ್ತಿರಲಿಲ್ಲ. ಅವಳು ಉದ್ಯೋಗ ಮಾಡುವ ನಿರ್ಧಾರ ಮಾಡಿದಾಗಲೇ ಅಲ್ಲಿ ಮಹಿಳಾ ಸಮಾನತೆಯ ಹೋರಾಟದ ಕತೆ ಬಿಚ್ಚಿಕೊಳ್ಳುತ್ತದೆ.
ಇದಕ್ಕೂ ಮೊದಲು ಮಹಿಳಾ ಸ್ವಾತಂತ್ರ್ಯ ಕುರಿತು ಅದೇ ಹಳ್ಳಿಯ ಮಹಿಳೆಯೊಬ್ಬಳಲ್ಲಿ ಹೇಳಿದಾಗ, ’ನನಗೆ ಸ್ವಾತಂತ್ರ್ಯ ಬೇಕಾಗಿಲ್ಲ. ನಿನ್ನ ಥರ ಇರುವಂಥವರು ಯಾರೂ ಮುಂದೆ ಬಂದಿಲ್ಲ’ ಎಂದು ಜರಿದು ಹೋಗಿದ್ದಳು. ಅಂದರೆ ಪುರಾಷಿಧಿಪತ್ಯವೆಂಬುದು ಪುರುಷ ಅಷ್ಟೇ ಅಲ್ಲ, ಮಹಿಳೆ ಕೂಡ ಎಷ್ಟು ಢಾಳಾಗಿ ಒಪ್ಪಿಕೊಂಡಿದ್ದಳೆಂಬುದಕ್ಕೆ ಸಾಕ್ಷಿಯಾಗಿತ್ತು ಅವಳ ಮಾತು. ಅದೇ ಹೊತ್ತಿನಲ್ಲಿ ಮನೆಯಲ್ಲಿ ನೋರಾ, “ನಾನು ಕೆಲಸಕ್ಕೆ ಹೋದರೇನಾಗುತ್ತದೆ…’ ಅವಳು ನಗುತ್ತಲೇ ಗಂಡನನ್ನು ಕೇಳಿದಳು. “ನಮ್ಮ ಕುಟುಂಬವನ್ನು ನೋಡಿಕೊಳ್ಳುವುದಕ್ಕಿಂತಲೂ ನಿನ್ನ ಉದ್ಯೋಗ ಹೆಚ್ಚಿನದ್ದಾ…? ನೀನು ನನ್ನ ಅನುಮತಿ ಇಲ್ಲದೆ ಕೆಲಸಕ್ಕೆ ಹೋಗುವಂತಿಲ್ಲ. ಇದು ಕಾನೂನಿಗೆ ವಿರುದ್ಧ.’ ಎಂದು ಜೋರು ಮಾಡಿ ಹೋಗುತ್ತಾನೆ ಗಂಡ. ’ಮನೆಗೆಲಸ ಬಿಟ್ಟು ಹೆಂಗಸರಿಗೆ ಬೇರೇನು ಕೆಲ’ ಎಂದು ಅವಳ ಮಾವನೂ ಜರೆಯುತ್ತಾನೆ. ಅವಳ ಮಾವ ಹೇಗೆಂದರೆ ಪೋರ್ನ್ ಮ್ಯಾಗಜೈನ್ ಅಡಗಿಸಿಟ್ಟು ಓದುವವ. ಆದರೆ ಸೊಸೆ ಮಾತ್ರ ಹೊಸ್ತಿಲು ದಾಟಬಾರದೆಂದು ಕಾನೂನು ಮಾತಾಡುವವ. ನೋರಾ ಪುರುಷರು ಸಣ್ಣಸಣ್ಣ ಸಂಗತಿಯಿಂದಲೂ ಮಹಿಳೆಯರ ಬದುಕನ್ನು ಹೇಗೆ ಹತೋಟಿಯಲ್ಲಿಡುತ್ತಾರೆಂಬುದನ್ನು ಗಮನಿಸುತ್ತಾಳೆ. ಆಗ ಅವಳಿಗೆ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ, ಶಿಕ್ಷಣದ ಹಕ್ಕು ಮುಖ್ಯವಾಗಿ ಮತದಾನದ ಹಕ್ಕುಗಳ ಕುರಿತು ಹೋರಾಟವನ್ನು ಹೆಚ್ಚಿಸಬೇಕೆಂಬುದರ ಅಗತ್ಯ ಇನ್ನಷ್ಟು ಹೆಚ್ಚುತ್ತದೆ. ಅದೇ ಸಮಯದಲ್ಲಿ ಮಹಿಳಾ ಸಮಾನತೆಗಾಗಿ ಹೋರಾಡುವ ಒಂದು ಗುಂಪೇ ಅವಳ ಜೊತೆ ನಿಲ್ಲುತ್ತದೆ. ಹಾಗಾಗಿ ಗಂಡನ ಮಾತನ್ನು ಧಿಕ್ಕರಿಸಿ ಅವಳು ಕೆಲಸಕ್ಕೆ ಹೋಗುತ್ತಾಳೆ. ಅಷ್ಟೇ ಅಲ್ಲ, ಸ್ಥಳೀಯ ಮಹಿಳಾ ಸಂಘಟನೆಯೊಂದಕ್ಕೆ ಸೇರಿಕೊಳ್ಳುತ್ತಾಳೆ. ಅಲ್ಲಿ ಅವಳ ಹಾಗೆ ಮಹಿಳಾ ವಿಮೋಚನೆಯ ಕುರಿತು ಕನಸು ಕಾಣುವ, ಹೋರಾಡುವ ಮನಸ್ಸುಳ್ಳ ಹಲವಾರು ಗೆಳತಿಯರ ಪರಿಚಯವಾಗುತ್ತದೆ.
1971ರವರೆಗೂ ಸ್ವಿಟ್ಜರ್ಲೆಂಡ್‍ಲ್ಲಿ ಮತ ಚಲಾಯಿಸುವ ಹಕ್ಕು ಮಹಿಳೆಯರಿಗಿರಲಿಲ್ಲ. 1981ರಲ್ಲಿ ಸ್ವಿಸ್ ಮತದಾರರು ಸಂವಿಧಾನದ ಸಮಾನ ಹಕ್ಕುಗಳ ತಿದ್ದುಪಡಿಯನ್ನು ಅನುಮೋದಿಸಿದರು. ಇದಲ್ಲದೆ 1985ರವರೆಗೂ ಮಹಿಳೆಯರು ಉದ್ಯೋಗ ಮಾಡಬಯಸಿದರೆ ಕಾನುನುಬದ್ಧವಾಗಿ ಅವರ ಗಂಡನ ಒಪ್ಪಿಗೆಯನ್ನು ಪಡೆಯಬೇಕಾಗಿತ್ತು. ಇಷ್ಟೆಲ್ಲ ನಿರ್ಬಂಧಗಳ ನಡುವೆ ಮಹಿಳೆಯರು ಮಾಡಿದ ಹೋರಾಟ ಅನನ್ಯವಾಗಿತ್ತು. ಸ್ವಿಸ್ ಮಹಿಳಾ ಮತದಾನದ ಹಕ್ಕಿನ ಕತೆ ಎಲ್ಲ ದೇಶಗಳಲ್ಲೂ ಇತ್ತು. ಹಾಗೆ ನೋಡಿದರೆ ಮುಂದುವರಿದ ದೇಶಗಳಲ್ಲಿ ಕೂಡ ಮಹಿಳೆಯರು ಮತ ಚಲಾಯಿಸುವುದು ಕದ್ದುಮುಚ್ಚಿಯೇ ನಡೆಯುತ್ತಿದ್ದವೇ ಹೊರತೂ ಬಹಿರಂಗವಾಗಿ ಆಗುತ್ತಿರಲಿಲ್ಲ. ಹಾಗಾಗಿ ಮಹಿಳೆಯರ ಹಕ್ಕಿನ ಹೋರಾಟದ ಕುರಿತು ಸಿನಿಮಾ ಮಾಡಲು ನಿರ್ಧರಿಸಿದೆ ಎನ್ನುತ್ತಾರೆ ನಿರ್ದೇಶಕಿ ಪೆಟ್ರಾ ವೋಲ್ಪೆ.
ನೋರಾ ಎಂಬ ಸಂಕೋಚ ಸ್ವಭಾವದ ಹೆಣ್ಣು ಮಹಿಳಾ ಹೋರಾಟಕ್ಕೆ ಮುಂಚೂಣಿಯಲ್ಲಿ ನಿಂತದ್ದು ಎಲ್ಲರ ಗಮನ ಅತ್ತ ಸೆಳೆಯುವಂತಾಗಿ, ಕಡೆಗೆ ಹೇಗೆ ಅವಳ ಹೋರಾಟವನ್ನು ಹತ್ತಿಕ್ಕಲಾಗುತ್ತದೆ ಎಂಬುದನ್ನು ತುಂಬ ಮನೋಜ್ಞವಾಗಿ ಹಿಡಿದಿಟ್ಟಿದ್ದಾರೆ ನಿರ್ದೇಶಕಿ. ನೋರಾ ಅವಳ ಹಳ್ಳಿಯ ಮಹಿಳಾ ಸಂಘಟನೆಯ ನಾಯಕಿಯಾಗಿರುತ್ತಾಳೆ. ಆದರೆ ಯಾರೊಬ್ಬ ಮಹಿಳೆಯೂ ಅವರವರ ಗಂಡಂದಿರನ್ನು ವಿರೋಧಿಸಿ ಅವಳ ಹೋರಾಟಕ್ಕೆ ಬೆಂಬಲ ನೀಡುವುದಿಲ್ಲ. ಆದರೂ ನೋರಾ ತನ್ನ ಕನಸಿನಿಂದ ಸ್ವಲ್ಪವೂ ಹಿಂದೆಗೆಯುವುದಿಲ್ಲ. ಒಮ್ಮೆ ಮಹಿಳೆಯರೆಲ್ಲ ಸೇರಿ ಪಾರ್ಟಿ ಮಾಡುತ್ತಿರುತ್ತಾರೆ. ಅದಕ್ಕೆ ಕೆಲವು ಪುರುಷರು ಸೇರಿ ಕಲ್ಲು ಹೊಡೆಯುತ್ತಾರೆ. ಹಾಗೆ ಬಿದ್ದ ಒಂದು ಕಲ್ಲನ್ನು ಹಿಡಿದುಕೊಂಡ ನೋರಾ ಹತ್ತಿಕ್ಕುವವರ ವಿರುದ್ಧ ನಿಲ್ಲಲು ಇದು ಪ್ರಾರಂಭ. ಈಗ ನಮ್ಮ ಹೋರಾಟ ಶುರುವಾಗುತ್ತದೆ ಎಂದು ಮನದಲ್ಲೇ ಹೇಳಿಕೊಳ್ಳುತ್ತಾಳೆ.
ಒಮ್ಮೆ ಸಂಘಟನೆಯಲ್ಲಿ ಅದರ ನಾಯಕಿ, ಮಹಿಳೆಯರಿಗೆ ಮತದಾನದ ಹಕ್ಕು ನೀಡಬಾರದೆಂಬುದು ದೇವರ ಆದೇಶ ಎಂದೆನಿಸುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ನೋರಾ “ಇಲ್ಲ, ಇದು ಪುರುಷರೇ ಮಾಡಿದ ಕಾನೂನು, ಮಹಿಳೆಯರ ಹಕ್ಕುಗಳ ಕುರಿತು ಹೋರಾಟ ಇನ್ನಷ್ಟು ತೀವ್ರವಾಗುವ ಅಗತ್ಯವಿದೆ’ ಎಂದೂ ಹೇಳುತ್ತಾಳೆ. ಆದರೆ ದುರದೃಷ್ಟವಶಾತ್ ನಿನ್ನ ಅಭಿಪ್ರಾಯವನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎನ್ನುತ್ತಾರೆ. ಇಟಲಿಯಲ್ಲಿ ತಮಗೆ ಬೇಕಾದ್ದನ್ನು ಪಡೆಯಬೇಕೆಂದರೆ ಮಹಿಳೆಯರು ಧರಣಿ ಹೂಡುತ್ತಾರೆ. ಹಾಗೆ ಇಲ್ಲಿಯೂ ಧರಣಿ ಮಾಡಲೇಬೇಕೆಂದು ಆ ಮಹಿಳೆಯರು ನಿರ್ಧರಿಸುತ್ತಾರೆ. ಬದಲಾವಣೆಯ ಸಣ್ಣ ದ್ಯೋತಕವಾಗಿ ನೋರಾ ಕೂದಲನ್ನು ಕತ್ತರಿಸಿಕೊಂಡು ಸ್ಟೈಲ್ ಆಗಿ ಮನೆಗೆ ಹೋಗುತ್ತಾಳೆ. ಅವಳ ಧರಣಿ, ಹೋರಾಟಗಳೆಲ್ಲ ಸುದ್ದಿಯಾಗಿ ಗಂಡನ ಕಿವಿಗೆ ಬಿದ್ದು, ನೀ ನನ್ನ ಮರ್ಯಾದೆ ತೆಗೆಯುತ್ತಿದ್ದೀಯ ಎಂದು ಬಯ್ಯುವ ಗಂಡ, ನಿನ್ನ ಅಮ್ಮ ಮನೆ ನೋಡಿಕೊಳ್ಳುವುದು ಬಿಟ್ಟು ಬೀದಿಯಲ್ಲಿ ಹೋರಾಡುತ್ತಿದ್ದಾಳೆಂದು ಮೂದಲಿಸಿಕೊಂಡು ಶಾಲೆಯಿಂದ ಬಂದ ಮಕ್ಕಳು, ಈ ಕಾರಣಕ್ಕಾಗಿಯೇ ಯಾರೊಬ್ಬರೂ ತಮ್ಮನ್ನು ಆಟಕ್ಕೂ ಸೇರಿಸಿಕೊಳ್ಳುವುದಿಲ್ಲ ಎಂದು ಅಳುತ್ತಾ ಹೇಳುವ ಮಕ್ಕಳು, ಇವೆಲ್ಲವನ್ನೂ ಎದುರಿಸಿ ನೋರಾ ಆ ಮಹಿಳಾ ಸಂಘಟನೆಯಲ್ಲಿ ಭಾಷಣ ಮಾಡುತ್ತಾಳೆ. ಸಮಾಜದಲ್ಲಿ ಮಹಿಳೆ ಮೌನವಾಗಿರಬೇಕೆಂದು ಬೈಬಲ್ ಕೂಡಾ ಹೇಳುತ್ತದೆಂದು ಹೇಳುತ್ತಾರೆ. ಆದರೆ ಧರ್ಮದ ಹೆಸರಿನಲ್ಲಿ ಪುರುಷರು ಮಾಡಿದ ಈ ಕಾನೂನು ನಮ್ಮನ್ನು ನಿರ್ಬಂಧಿಸುತ್ತಿದೆ. ಇದನ್ನು ಕಿತ್ತೊಗೆಯಲೇ ಬೇಕೆಂದು ಮಾಡಿದ ಭಾಷಣ ಬಹುದೊಡ್ಡ ಸುದ್ದಿಯಾಗಿ ಅವಳನ್ನು ವಿರೋಧಿಸುವ ಗುಂಪು ದೊಡ್ಡದಾಗುತ್ತದೆ.
ಇಷ್ಟೆಲ್ಲ ಹೋರಾಟ ಮಾಡಿದಾಗಲೂ ಅವರ ಕನಸು ಈಡೇರುವುದಿಲ್ಲ. ಮತದಾನದ ಹಕ್ಕು ಅಷ್ಟು ಸುಲಭವಾಗಿ ಅವರಿಗೆ ಸಿಗುವುದಿಲ್ಲ. ಆದರೆ ಕಾಲ ಹೀಗೆಯೇ ಇರಲಿಲ್ಲ. ನೋರಾಳಂತಹ ಸಾಕಷ್ಟು ಮಹಿಳೆಯರ ಹೋರಾಟದ ಫಲವೋ ಅಥವಾ ರಾಜಕೀಯವೋ…ಒಟ್ಟಿನಲ್ಲಿ ಅವರಿಗೆ ಜಯ ಸಿಗುತ್ತದೆ. ಅದು ಹೇಗೆಂದರೆ, ಅಲ್ಲಿ ಚುನಾವಣೆ ಶುರುವಾಗುತ್ತದೆ. ಆಗ ರಾಜಕೀಯ ನೇತಾರರು ಎನಿಸಿಕೊಂಡವರಿಂದಲೇ ನಮ್ಮ ಸಮಾಜದ ಅರ್ಧದಷ್ಟು ಇರುವ ಮಹಿಳೆಯರಿಗೆ, ಮತದಾನದ ಹಕ್ಕು ಕೊಡಬೇಕು ಎಂಬ ಆದೇಶ ಹೊರಬರುತ್ತದೆ. ಆ ಸುದ್ದಿ ಕೇಳಿದ ಕೂಡಲೇ ನೋರಾ ಮತ್ತವಳ ಗೆಳತಿಯರ ಗುಂಪಲ್ಲಿ ಸಂತೋಷದ ಅಲೆ ತೇಲಾಡುತ್ತದೆ. ಆದರೆ ಹಾಗೆ ಮತದಾನದ ಹಕ್ಕನ್ನು ನೀಡಿದ್ದರ ಹಿಂದೆ ಅತಿಹೆಚ್ಚು ಮತಗಳನ್ನು ಬಾಚಬಹುದೆಂಬ ದುರುದೇಶವಿತ್ತೇ ಹೊರತು ಎಲ್ಲೂ ಮಹಿಳೆಯರ ಏಳ್ಗೆಗಾಗಿ ಅಲ್ಲ ಎಂಬ ವಾದವೂ ಇದೆ. ಏನೇ ಇರಲಿ, ಅದೊಂದು ಮಹಿಳೆಯರಿಗೆ ಸಿಕ್ಕ ಬಹುದೊಡ್ಡ ಅವಕಾಶ ಎಂಬುದನ್ನು ಮಾತ್ರ ಅಲ್ಲಗಳೆಯುವಂತಿಲ್ಲ.
ಈ ಸಿನಿಮಾವನ್ನು ನಿರ್ಮಿಸಲು ಇತಿಹಾಸದಲ್ಲಿ ನಿಮಗೆ ಸಿಕ್ಕ ಪ್ರೇರಣೆ ಏನು ಎಂದು ಪತ್ರಕರ್ತೆಯೊಬ್ಬಳು ನಿರ್ದೇಶಕಿಗೆ ಕೇಳಿದ ಪ್ರಶ್ನೆಗೆ, ಒಬ್ಬ ಮಹಿಳೆಯಾಗಿ, ತಾಯಿ ಮತ್ತು ಅಜ್ಜಿಯನ್ನು ಚಿಕ್ಕಂದಿನಿಂದಲೂ ನೋಡುತ್ತ ಬೆಳೆದ ನನಗೆ, ಸಮಾನತೆ ಮತ್ತು ಲಿಂಗಸಮಾನತೆ ಎಂಬುದು ಸದಾ ನನ್ನ ಜೀವನದಲ್ಲಿ ಪ್ರಶ್ನೆಯಾಗಿಯೇ ಕಾಡುತ್ತಿತ್ತು. ನನ್ನ ಅಮ್ಮ ಮತ್ತು ಅಜ್ಜಿ ಇಬ್ಬರೂ ಮಹಿಳೆಯಾಗಿರುವ ಕಾರಣಕ್ಕಾಗಿಯೇ ಸಮಾಜದಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿದವರು. ಮಹಿಳಾ ಸ್ವಾತಂತ್ರ್ಯದ ವಿಷಯದ ಕುರಿತೇ ಈಗಾಗಲೇ ಎರಡು ಸಿನಿಮಾಗಳನ್ನು ನಿರ್ಮಿಸಿದ್ದೇನೆ. ಬಹುಶಃ ನಾನು ನನ್ನ ತಾಯಿಯನ್ನು ಸ್ವತಂತ್ರಗೊಳಿಸಲು ಬಯಸಿದ್ದೆ ಅನಿಸುತ್ತದೆ. ಆದರೆ, ಅವಳು ಬಯಸಿದಂತೆ ಅವಳಿಗೆಂದೂ ಸ್ವತಂತ್ರವಾಗಿರಲು ಸಾಧ್ಯವಾಗಲೇ ಇಲ್ಲ. ಆದರೆ, ಅವಳಂಥ ನೂರಾರು ಮಹಿಳೆಯರಿಗೆ ಈ ಸಿನಿಮಾ ಆತ್ಮವಿಶ್ವಾಸವನ್ನು ತಂದುಕೊಡಲಿ ಎಂಬುದು ನನ್ನ ಆಶಯವಾಗಿತ್ತು. ಇದುವರೆಗೂ ಸ್ವಿಟ್ಜರ್ಲೆಂಡಿನ ಮತದಾನದ ಹಕ್ಕು ವಂಚಿತ ಮಹಿಳೆಯರ ಕುರಿತು ಯಾರೂ ಸಿನಿಮಾ ಮಾಡಲಿಲ್ಲ. ಹಾಗಾಗಿ ಈ ಕುರಿತು ಸಿನಿಮಾ ಮಾಡಿದರೆ ಇದೊಂದು ಇತಿಹಾಸದಲ್ಲಿ ದಾಖಲಾಗಿ ನಿಲ್ಲುತ್ತದೆ. ಮಹಿಳಾ ಹೋರಾಟಕ್ಕೇ ಇದೊಂದು ಹೊಸ ಇತಿಹಾಸ ಬರೆಯುವಂತಾಗುತ್ತದೆ ಎಂದು ನಿರ್ಮಾಪಕರು ಹೇಳಿದ್ದರು. ಹಾಗೆ ಪ್ರೇರೇಪಿತವಾಗಿ ಸಿನಿಮಾ ಮಾಡಿದ್ದಿದು. ಆದರೆ, ಸಿನಿಮಾ ಮಾಡುವಾಗ ಎದುರಾದ ಸವಾಲುಗಳು ಸಾಕಷ್ಟು. ಈ ಕುರಿತು ನಮಗೆ ಯಾವುದೇ ರೀತಿಯ ಪುಸ್ತಕಗಳೂ ಸಿಗಲಿಲ್ಲ. ಮುಖ್ಯವಾಗಿ ಶಾಲಾ ಪುಸ್ತಕಗಳಂತೂ ಇರಲೇ ಇಲ್ಲ. ಯವುದೇ ಕಾನೂನು ಹಕ್ಕುಗಳ ಕುರಿತೂ ಬರೆದದ್ದೆಲ್ಲ ಪುರುಷ ದೃಷ್ಟಿಕೋನದಲ್ಲಾಗಿತ್ತು. ಹಾಗಾಗಿ ಮಹಿಳಾ ದೃಷ್ಟಿಕೋನದಲ್ಲಿ ಮಾಡುವಾಗ ಇತರ ಸಿನಿಮಾ ಮಾಡಿದ್ದಕ್ಕಿಂತಲೂ ಹೆಚ್ಚಿನ ಅಧ್ಯಯನ, ಕೆಲಸ ಇದಕ್ಕೆ ಬೇಕಾಯಿತು ಎಂದು ವಿವರಿಸುತ್ತಾರೆ ನಿರ್ದೇಶಕಿ.
ಭಾರತಿ ಹೆಗಡೆ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.