ಚಿತ್ರಭಾರತಿ/ ಮನದ ಕರೆಯು ನಿನಗೆ ಕೇಳದೇನು ? – ಭಾರತಿ ಹೆಗಡೆ

ಮದುವೆಯಾದ ಮೇಲೂ ಹೆಣ್ಣೊಬ್ಬಳು ಇನ್ನೊಂದು ಗಂಡಿನ ಸಂಬಂಧವನ್ನು ಬಯಸಬಹುದೇ? ಹಾಗೆ ಅವಳು ಮಾಡುವುದು ಸರಿಯೇ? ಮದುವೆಯೆಂಬ ಚೌಕಟ್ಟಿನಲ್ಲಿರುವ ತಾನು ಹೀಗೆಲ್ಲ ಯೋಚಿಸುವುದಾದರೂ ಸರಿಯೇ..? ಹೀಗೆ ಸದಾ ತೂಗುಯ್ಯಾಲೆಯಲ್ಲೆ ತೂಗಾಡುವ ಉಯ್ಯಾಲೆ ಸಿನಿಮಾ ಆಗಿನಿಂದ ಈಗಿನವರೆಗೂ ಹೆಣ್ಣು ನಿಲ್ಲಬೇಕಾದ, ವಹಿಸಬೇಕಾದ ಪಾತ್ರಗಳ ಬಗ್ಗೆ ತುಂಬ ಸೂಕ್ಷ್ಮವಾಗಿ ಹೇಳುತ್ತದೆ

ಇಡೀ ಸ್ತ್ರೀ ವರ್ಗವೇ ಒಂದು ಉಯ್ಯಾಲೆ. ನಾನೇ ಒಂದು ಉಯ್ಯಾಲೆ. ನನ್ನ ಮನಸ್ಸು ಅತ್ತ ಇತ್ತ ಎರಡು ದಂಡೆಯಲ್ಲಿ ತುಯ್ದಾಡುತ್ತಿದೆ. ಒಂದು ದಂಡೆಯಲ್ಲಿ ವೈವಾಹಿಕ ಜೀವನದ ಮಡಿವಂತಿಕೆ, ಗೌರವದ ಪ್ರತಿಷ್ಠೆ. ಇನ್ನೊಂದರಲ್ಲಿ ವಿವಾಹದ ಹೊರಗೆ ಕಣ್ಣು ಮಿಟುಕಿಸುವ ಆಕರ್ಷಣೆ ಪ್ರೇಮ. ಒಂದು ದಂಡೆಯಲ್ಲಿ ವೈವಾಹಿಕ ಜೀವನದ ಆದರ್ಶದ ದಂಪತಿ ರಾಮ-ಸೀತೆ, ಇನ್ನೊಂದರಲ್ಲಿ ಅವಿವಾಹಿತ ಅನುರಾಗದ ಅಮರ ಸಂಕೇತ ರಾಧಾ -ಕೃಷ್ಣ. ಒಂದು ಪರಂಪರೆಯೊಡನೆ ಹೊಂದಾಣಿಕೆ, ಇನ್ನೊಂದು ಪರಂಪರೆಯ ವಿರುದ್ಧ ಎತ್ತಿದ ದಂಗೆ. ಇಂದು ಗಂಡು ಹೆಣ್ಣನ್ನು ಹಿಡಿದು ನಿಲ್ಲಿಸಿರುವುದು  ಪರಸ್ಪರ ಒಂದಾಗುವ ಅನುರಾಗವಲ್ಲ. ನೈಸರ್ಗಿಕವಾಗಿ ಹೆಣ್ಣು ಬಯಸುವುದು ಸುಭದ್ರತೆ…ಸುಭದ್ರತೆ…

ಹೀಗೆ ಅವಳು ಉಯ್ಯಾಲೆಯಲ್ಲಿ ಕುಳಿತೇ ಅತ್ತಿತ್ತ ತುಯ್ದಾಡುತ್ತ ಹೇಳಿಕೊಳ್ಳುತ್ತಾಳೆ. ಹಾಗೆ ಅವಳ ಮನಸ್ಸು ಅವಳಂತೆಯೇ ತೂಗುಯ್ಯಾಲೆಯಾಗಿರುತ್ತದೆ. ಈ ಒಂದು ಮಾತು ಇಡೀ ಸಿನಿಮಾದ ಅಂತಃಸತ್ವವನ್ನು ಹಿಡಿದಿಟ್ಟುಕೊಂಡು ಬಿಡುತ್ತದೆ. ಈ ಮಾತು ಯಾಕೆ ಮುಖ್ಯವಾಗುತ್ತದೆಂದು ಕೇಳಿದರೆ ಈ ಸಿನಿಮಾ ಬಂದ ಕಾಲದ್ದು.

ನಿಜ, ಮದುವೆ ಎಂಬ ವ್ಯವಸ್ಥೆಯಲ್ಲಿ ಗಂಡಿಗಿರುವ ಮೊದಲ ಆದ್ಯತೆ ಸೆಕ್ಸ್ ಆದರೆ ಹೆಣ್ಣಿನ ಮೊದಲ ಆದ್ಯತೆ ಸುಭದ್ರತೆ. ತನ್ನ ಸುರಕ್ಷತೆ ದೃಷ್ಟಿಯಿಂದಲೇ ಅವಳಿರುತ್ತಾಳೆಂದು ಭಾರತೀಯ ವಿವಾಹ ವ್ಯವಸ್ಥೆಯ ಕುರಿತಾದ ಸಮೀಕ್ಷೆಯೊಂದು ಹೇಳುತ್ತದೆ. ಇಂಥದ್ದೇ ಕಥಾವಸ್ತುವನ್ನಿಟ್ಟುಕೊಂಡ 1969ರಲ್ಲಿ ತೆರೆಕಂಡ ಎನ್.ಲಕ್ಷ್ಮೀ ನಾರಾಯಣ ನಿರ್ದೇಶನದ ಉಯ್ಯಾಲೆ ಸಿನಿಮಾ ಗಂಡು-ಹೆಣ್ಣಿನ ನಡುವಿನ ಸೂಕ್ಷ್ಮ ಸಂಬಂಧವನ್ನು ಅಷ್ಟೇ ಸೂಕ್ಷ್ಮವಾಗಿ ಬಿಡಿಸಿಡುತ್ತದೆ.  ಮದುವೆಯಾದ ಹೆಣ್ಣೊಬ್ಬಳು ಗಂಡನ ಸ್ನೇಹಿತನನ್ನು ಇಷ್ಟಪಡುವಂಥ ಕಥಾ ವಸ್ತುವನ್ನು ಆಯ್ಕೆಮಾಡಿ ಸಿನಿಮಾ ಗೆದ್ದದ್ದು ಆ ಕಾಲಕ್ಕೆ ನಿಜಕ್ಕೂ ಒಂದು ಕ್ರಾಂತಿಕಾರಕ ವಿಷಯವೇ ಆಗಿತ್ತು.

ಕನ್ನಡದ ಖ್ಯಾತ ಕತೆಗಾರ, ಕಾದಂಬರಿಕಾರರಾದ ಚದುರಂಗರ ಕಾದಂಬರಿಯಲ್ಲೊಂದಾದ ಉಯ್ಯಾಲೆ ಸಿನಿಮಾದಲ್ಲಿ ರಾಜ್‍ಕುಮಾರ್, ಕಲ್ಪನಾ, ಅಶ್ವತ್ಥ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಸಿನಿಮಾಕ್ಕೆ ಸಂಭಾಷಣೆಯನ್ನು ಚದುರಂಗ ಅವರೇ ಬರೆದಿದ್ದಾರೆ.

ಇದರ ಸಂಭಾಷಣೆಗಾಗಿ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಸಿನಿಮಾ ರಾಜ್ಯಪ್ರಶಸ್ತಿ ಈ ಸಿನಿಮಾಕ್ಕೆ ಬಂದಿದೆ. ಇಷ್ಟಲ್ಲದೆ ಫ್ರಾಂಕ್‍ಫರ್ಟ್‍ನಲ್ಲಿನ ಏಷ್ಯನ್ ಚಿತ್ರೋತ್ಸವ ಹಾಗೂ ರಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾದ ಸಿನಿಮಾವಿದು. ಸದಾ ವಿಷಾದದ ಛಾಯೆಹೊತ್ತ ಮನೆಯ ಗೃಹಿಣಿಯೊಬ್ಬಳ ಭಾವತುಮುಲಗಳ ಅನಾವರಣವಿದು.

ಶೇಷಗಿರಿ ಕಾಲೇಜು ಪ್ರಾಧ್ಯಾಪಕ. ಸದಾ ತನ್ನ ಓದು, ಕೆಲಸ ಇವುಗಳಲ್ಲೇ ಮುಳುಗಿರುವವನು. ಎಷ್ಟೆಂದರೆ ಮನೆಯಲ್ಲೊಬ್ಬಳು ಹೆಂಡತಿ ಎಂಬ ಜೀವವಿದೆ ಎಂದು ಕೂಡ ನೆನಪಿಗೆ ಬಾರದಷ್ಟು. ಗಂಡ ಮನೆಗೆ ಬಂದಕೂಡಲೇ ಬಾಗಿಲು ತೆಗೆಯುವುದು, ಅವನಿಗೆ ಕಾಫಿ, ತಿಂಡಿ ಮಾಡಿ ಅವನ ಕೈಗಿಡುವುದು, ಅಡುಗೆ ಮಾಡಿ ಬಡಿಸುವುದು ಇವಿಷ್ಟೇ ಅವಳ ಬದುಕು.  ತುಂಬ ಯಾಂತ್ರಿಕವಾಗಿ ನಡೆಯುವ ಅವಳ ದಿನನಿತ್ಯದ ಬದುಕಲ್ಲಿ ಹೊಸರಾಗ ಪಲ್ಲವಿಸಿದ್ದು ಗಂಡನ ಗೆಳೆಯ ಕೃಷ್ಣೇ ಗೌಡನ ಆಗಮನವಾದಾಗ. ಕೃಷ್ಣೇಗೌಡನ ಆತ್ಮೀಯ ನಡವಳಿಕೆ, ಮನೆಯ ಪ್ರತಿ ಆಗುಹೋಗುಗಳಿಗೆ ಅವನು ಸ್ಪಂದಿಸುವ ರೀತಿ, ಅವಳಿಗೆ ತಾನು ಇದುವರೆಗೆ ಏನೆಲ್ಲ ಕಳೆದುಕೊಂಡಿದ್ದೇನೆ ಎಂಬುದರ ಅರಿವಾಗುತ್ತ ಹೋಗುತ್ತದೆ.

ಅದುವರೆಗೆ ರಾಧಾಳಿಗೆ ತನ್ನ ಬೇಜಾರನ್ನು ಮರೆಯುವ ಏಕೈಕ ಸಾಧನವೆಂದರೆ ಸಿತಾರ್. ಗಂಡನಿಗೆ ತಿಂಡಿ, ಕಾಫಿ ಮಾಡಿಕೊಟ್ಟು ತನ್ನ ಹೆಂಡತಿ ಎಂಬ ಪಾತ್ರದ ಕರ್ತವ್ಯ ಮುಗಿದ ಮೇಲೆ ತನ್ನಪಾಡಿಗೆ ತಾನು ಸಿತಾರ್ ನುಡಿಸುತ್ತಿರುತ್ತಾಳೆ. ತನ್ನೆಲ್ಲ ವಿಷಾದವೂ ಅದರೊಳಗೇ ಲೀನವಾಗಿ ಹೋಗಿದೆಯೆಂಬಂತೆ. ಆ ಸಿತಾರ್ ಸಂಗೀತ ಓದುತ್ತ ಕುಳಿತ ಅವಳ ಗಂಡನಿಗೆ ಕಿರಿಕಿರಿ ಎನಿಸಿ, “ಸ್ವಲ್ಪ ನಿಲ್ಲಿಸಬಾರದಾ ನಿನ್ನ ಸಂಗೀತವನ್ನು, ನಾನು ಕಾಲೇಜಿಗೆ ಹೋದಮೇಲೆ ನಿನ್ನ ಸಂಗೀತವಿಟ್ಟುಕೊ’  ಎಂದು ಬೈಯ್ದು ಹೋಗುತ್ತಾನೆ. ನನ್ನಪಾಡಿಗೆ ನಾನು ಸಿತಾರನ್ನು ನುಡಿಸುವುದಕ್ಕೂ ಇಲ್ಲವಾ..ಎಂದು ಕೇಳಿಕೊಳ್ಳುವ ರಾಧಾ ನಿಧಾನಕ್ಕೆ ಸಿತಾರನ್ನು ಒಂದು ಮೂಲೆಯಲ್ಲಿಟ್ಟು, ಅದರ ಪಕ್ಕದಲ್ಲಿ ತಾನೂ ಯೋಚಿಸುತ್ತ ನಿಲ್ಲುತ್ತಾಳೆ. ಹೇಗೆ ಸಿತಾರ ಮೂಲೆಗುಂಪಾಯಿತೋ ಹಾಗೆ ಅವಳು ಕೂಡ ಎಂಬುದನ್ನು ಸೂಚ್ಯವಾಗಿ ಹೇಳುವಂತಿದೆ ಆ ದೃಶ್ಯ.

ನಂತರ ಕೃಷ್ಣೇ ಗೌಡ ಆ ಮನೆಗೆ ಬಂದಮೇಲೆ ಅವಳು ಮೂಲೆಗುಂಪಾಗುವುದರ ಬದಲು ಮನೆಯ ನಡುವೆ ಬರುತ್ತಾಳೆ. ಈ ನಡುವೆ ಅವಳ ಮಗಳು ಪ್ರಭಾಳಿಗೆ ತುಂಬ ಹುಷಾರಿಲ್ಲದಾಗ ಗಂಡನ ನಿರ್ಲಕ್ಷ್ಯದಿಂದ ಅವಳು ಸಾಯುತ್ತಾಳೆ. ಆ ಸಮಯದಲ್ಲಿ ಕೃಷ್ಣೇಗೌಡ ಮತ್ತಷ್ಟು ಆಪ್ತವಾಗುತ್ತಾನೆ ರಾಧಾಳಿಗೆ.

ಒಮ್ಮೆ ಕೃಷ್ಣ ಒಂದು ಪದ್ಯದ ಪುಸ್ತಕವನ್ನು ಹಿಡಿದು ದೊಡ್ಡದಾಗಿ ಹಾಡುತ್ತಿರುತ್ತಾನೆ.

ದೋಣಿಯೊಳಗೆ ನೀನು, ಕರೆಯ ಮೇಲೆ ನಾನು..

ಈ ಮನದ ಕರೆಯು ನಿನಗೆ ಕೇಳದೇನು?

ಆ ಹಾಡನ್ನು ಕೇಳುತ್ತ ಕೇಳುತ್ತ ರಾಧಾ ಭಾವಪರವಶಳಾಗುತ್ತಾಳೆ, ಅದು ತನಗಾಗಿಯೇ ಹಾಡುತ್ತಿದ್ದಾನೆ ಎಂಬಷ್ಟು . ನಿಧಾನಕ್ಕೆ ಬಂದು ಅವನ ಹಿಂದೆ ನಿಂತು ಅವನ ಭುಜದ ಮೇಲೆ ಕೈ ಇಟ್ಟು ಅವನ ಹಾಡಿಗೆ ತಾಳದಂತೆ ತಟ್ಟುತ್ತಾಳೆ ಅವಳಿಗರಿವಿಲ್ಲದಂತೆ. ಆದರೆ ಇದನ್ನು ಸೂಕ್ಷ್ಮವಾಗಿ ಗಮನಿಸಿದ ಕೃಷ್ಣೇಗೌಡನಿಗೆ ಅವಳ ಅಂತರಾಳ ಆ ಕ್ಷಣಕ್ಕೇ ಅರ್ಥವಾಗಿಬಿಡುತ್ತದೆ. ಅವಳ ಒಂಟಿ ಬದುಕಿನ ಬೇಗುದಿಯನ್ನು ಅವನಾಗಲೇ ಅರ್ಥಮಾಡಿಕೊಂಡಿದ್ದ. ಎಲ್ಲಿಯೂ ಅವಳ ಬಗ್ಗೆ ತಪ್ಪು ತಿಳಿಯದೇ, ಅವಳನ್ನು ಕೆಟ್ಟದಾಗಿ ಬಳಸಿಕೊಳ್ಳಲೂ ಯೋಚಿಸದೇ ಅವನು ಯೋಚಿಸಿದ್ದು, ಪ್ರಾಣ ಸ್ನೇಹಿತನ ಹೆಂಡತಿಗೆ ತನ್ನ ಮೇಲೆ ಅನುರಾಗ ಮೂಡುತ್ತಿದೆ. ನನಗೂ ಅವಳು ಬೇಕೆನಿಸುತ್ತಿದೆ. ಇದರಿಂದ ಹೊರಬರಬೇಕೆಂದರೆ ಅವಳಿಗೆ ತನ್ನ ಮೇಲೆ ತಪ್ಪಭಿಪ್ರಾಯ ಬರುವಂತೆ ಮಾಡಬೇಕು ಎಂದು ಕಾಲೇಜಿನಲ್ಲಿರುವ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿರುವಂತೆ ನಟಿಸುತ್ತಾನೆ. ಆದರೆ ಕೆಲವೇ ದಿನಗಳಲ್ಲಿ ಆ ಹುಡುಗಿ ಕೃಷ್ಣನಿಗೆ ಬರೆದ ಪತ್ರವೊಂದು ರಾಧೆಗೆ ಸಿಕ್ಕಿ ಅವಳು ಓದುತ್ತಾಳೆ. ಅದರಲ್ಲಿ “ನೀನು ನನ್ನನ್ನು ಪ್ರೀತಿಸಿದಂತೆ ನಟಿಸುತ್ತಿದ್ದೀಯಾ ಅಷ್ಟೆ, ನಿನಗೆ ಯಾವುದೋ ಹೆಂಗಸಿನ ಮೇಲೆ ಪ್ರೀತಿ ಇರುವಂತೆ ಅನಿಸುತ್ತದೆ’ ಎಂದು ಕಟುವಾಗಿ ಬರೆದಿರುತ್ತಾಳೆ. ಅದನ್ನು ಓದುತ್ತಿರುವಂತೆ ರಾಧೆಯ ತುಟಿಯಂಚಿನಲ್ಲಿ ಒಂದು ಸಣ್ಣ ಕಿರುನಗು ಹಾದುಹೋಗುತ್ತದೆ.

ರಾಧೆಗೆ ಅವ ಬೇಕು. ಕೃಷ್ಣನೂ ಅವಳನ್ನು ಬಿಟ್ಟಿರಲಾರ. ಆದರೆ ಮದುವೆಯೆಂಬ ಗೋಡೆ, ಶೇಷಗಿರಿ ಎಂಬ ಅಡ್ಡಗೋಡೆ ಅಲ್ಲಿ ನಿಲ್ಲುತ್ತದೆ. ಆದರೆ ಶೇಷಗಿರಿಯ ಮೇಲೆ ಕಿಂಚಿತ್ತೂ ಗೌರವ ಕಳೆದುಕೊಳ್ಳದ ಆ ಪಾತ್ರಗಳು, ತಮ್ಮತಮ್ಮ ನೆಲೆಗಟ್ಟಿನಲ್ಲಿ ತೊಳಲಾಡುತ್ತವೆಯೇ  ಹೊರತು ಯಾರ ಮೇಲೂ ದೋಷಾರೋಪಣೆ ಇರುವುದಿಲ್ಲ.

ಒಮ್ಮೆ, ಗಂಡ ಮಲಗಿರುವ ಹೊತ್ತಲ್ಲಿ ಇವಳು ದಾಹದಿಂದ ನೀರು ಕುಡಿಯಲು ಅಡುಗೆ ಮನೆಗೆ ಬಂದವಳು ಎದುರಿಗಿನ ಕೃಷ್ಣೇಗೌಡನ ರೂಮಿನಲ್ಲಿನ್ನೂ ದೀಪ ಉರಿಯುತ್ತಿರುವುದನ್ನು, ಅವನು ಅತ್ತಿತ್ತ ಶತಪಥ ತಿರುಗುತ್ತಿರುವುದನ್ನು ನೋಡಿ ಅವನ ರೂಮಿನ ಬಾಗಿಲ ಬಳಿ ನಿಂತು ನಡುಗುವ ಕೈಗಳಿಂದ ಬಾಗಿಲು ತಟ್ಟುತ್ತಾಳೆ. ಹಾಗೆ ತಟ್ಟಿದವಳು ಅವಳೇ ಎಂಬುದು ಇವನಿಗೂ ಗೊತ್ತಾಗಿ ಇವನೂ ಬೆವರುತ್ತಾನೆ. ಹೀಗೆಯೇ ಸ್ವಲ್ಪ ಹೊತ್ತು ಹೊಯ್ದಾಟಗಳು ನಡೆದು  ಇನ್ನು ತಡೆಯಲಾರದೆ ಅವನು ಬಾಗಿಲು ತೆಗೆಯುವುದಕ್ಕೆ ಮುನ್ನವೇ ಅವಳು ಓಡಿ ಹೋಗಿ ತನ್ನ ರೂಮಿನ ಬಾಗಿಲು ಹಾಕಿಕೊಳ್ಳುತ್ತಾಳೆ. ಅಲ್ಲಿ ಅವಳ ನೆರಳಿನ ಹೊಯ್ದಾಟಗಳು ಕಾಣಿಸುತ್ತವೆ. ಹೀಗೆ ಪರಸ್ಪರರ ಹೊಯ್ದಾಟಗಳನ್ನು ತುಂಬ ಪರಿಣಾಮಕಾರಿಯಾಗಿ ತಲುಪಿಸಲು ಯಶಸ್ವಿಯಾಗಿದ್ದಾರೆ ನಿರ್ದೇಶಕರು.

ಕಡೆಗೂ ತಾನಿಲ್ಲಿ ನಿಲ್ಲುವುದು ಅಪಾಯಕಾರಿ ಎಂದು ಯಾರಿಗೂ ಹೇಳದೇ ಪತ್ರವೊಂದನ್ನಿಟ್ಟು ನಡೆಯುತ್ತಾನೆ ಕೃಷ್ಣೆಗೌಡ. ಅವನ ಪತ್ರವನ್ನು ನೋಡಿದ ಶೇಷಗಿರಿ ಹೆಂಡತಿಗೆ ಹೇಳಿ ಇನ್ನೂ ರೈಲು ಹೋಗಿಲ್ಲ. ನಾವೂ ಹೋಗೋಣ ಎಂದು ಇಬ್ಬರೂ ಹೊರಡುತ್ತಾರೆ. ಹಾಗೆ  ನಡೆಯುತ್ತಿದ್ದಂತೆ ಅವಳ ನಡಿಗೆ ಬಿರುಸಾಗುತ್ತದೆ. ರೈಲು ಸದ್ದು ಕೇಳುತ್ತಿದ್ದಂತೆ ಅವಳ ಹೆಜ್ಜೆ ಇನ್ನಷ್ಟು ವೇಗಪಡೆಯುತ್ತದೆ. ಗಂಡನನ್ನೂ ಬಿಟ್ಟು ಮುಂದೆ ಮುಂದೆ ಸಾಗುತ್ತಿದ್ದವಳು ನಂತರ ಓಡಲು ಶುರುಮಾಡುತ್ತಾಳೆ. ಓಡಿ ಹೋಗಿ ರೈಲನ್ನು ನಿಲ್ಲಿಸುವ ತವಕ, ಅಂದರೆ ಅವನನ್ನು ಸೇರುವ, ಅವನನ್ನು ನಿಲ್ಲಿಸುವ ತವಕ..ಹಾಗೆ ಓಡುತ್ತಿರುವಾಗಲೇ ಅವಳ ಮುಂದೆ ರೈಲು ಹಾದುಹೋಗುತ್ತದೆ. ಹಾದು ಹೋಗುವ ರೈಲನ್ನು ನೋಡತ್ತ ಮತ್ತದೇ ವಿಷಾದದಿಂದ ನೋಡುತ್ತ ನಿಲ್ಲುತ್ತಾಳೆ. ಹಿಂದುಗಡೆಯಿಂದ ಬಂದ ಗಂಡ ನಿನ್ನ ದುಃಖ ನನಗೆ ಅರ್ಥವಾಗುತ್ತೆ ಕಣೇ…ಮಗಳನ್ನು ಕಳೆದುಕೊಂಡೆ. ಅಷ್ಟೇ ನಿರ್ವಾಜ್ಯ ಸ್ನೇಹದಿಂದ ಇದ್ದ ಕೃಷ್ಣನೂ ಹೋದದ್ದು ನಿನಗೆ ಬೇಜಾರಾಗುತ್ತಿದೆ ಅಲ್ಲವಾ ಎಂದು ಸಮಾಧಾನಿಸುತ್ತಾನೆ.  ಅದಕ್ಕೂ ಅವಳದ್ದು ಅದೇ ಅದೇ ವಿಷಾದದ ನೋಟ. ಭಾರವಾದ ಹೆಜ್ಜೆಯನ್ನು ಹಿಂದಕ್ಕೆ ಇರಿಸಿ ನಡೆಯುತ್ತಾಳೆ.

ತನ್ನೊಡನೆ ಅವನಿರಬೇಕಿತ್ತೆಂಬ ಹಂಬಲ ಅವಳದ್ದಾದರೂ ತನ್ನೊಡನೆಯೇ ಇದ್ದುಬಿಟ್ಟರೆ…ಎಂಬ ಭಯವೂ ಅವಳನ್ನು ಕಾಡತೊಡಗುತ್ತದೆ. ಅದೇ ರೀತಿ ಅವಳು ಬೇಕು ಎಂದೆನಿಸಿದರೂ ಅವಳು ತನ್ನ ಸ್ನೇಹಿತನ ಹೆಂಡತಿ ಎಂಬುದು ಅವನನ್ನು ತಡೆಯುತ್ತದೆ. ಚಿತ್ರದುದ್ದಕ್ಕೂ ನಾನು ಹೀಗೆ ಮಾಡಲೇ ಎಂಬ ಪ್ರಶ್ನೆಗಳು, ಹೀಗೆ ಮಾಡಿದರೆ ತಪ್ಪಾದೀತಾ ಎಂಬ ಗೊಂದಲಗಳನ್ನು ಕಾಣುತ್ತೇವೆಯೇ ಹೊರತು ಎಲ್ಲಿಯೂ ಹೀಗೆಯೇ ಮಾಡುತ್ತೇನೆಂಬ ನಿರ್ಧಾರವಾಗಲಿ, ತೀರ್ಮಾನವಾಗಲಿ ಹೇಳುವುದಿಲ್ಲ. ಈ ಥರದ ಭಾವನೆಗಳು ಹೇಗೆ ಮೂಡುತ್ತವೆ, ಹೇಗೆ ಬೆಳೆಯುತ್ತ ಹೋಗುತ್ತದೆ. ಅದನ್ನು ದೃಶ್ಯಗಳ ಮೂಲಕ ತೋರಿಸುವ ರೀತಿ ಅನನ್ಯವಾದದ್ದು.

ಪ್ರತಿ ದೃಶ್ಯವನ್ನೂ ಮುತುವರ್ಜಿಯಿಂದ ಕೆತ್ತಿ ಕಡೆದಿಟ್ಟ ಶಿಲ್ಪದಹಾಗೆ ಸಂಯೋಜಿಸಿದ್ದು ನಿರ್ದೇಶಕರ ಸೃಜನಶೀಲತೆಯಾದರೆ, ನಟ-ನಟಿಯರನ್ನು ಸಂಯಮದ ಅಭಿನಯಕ್ಕೆ ಪಕ್ಕಾಗಿಸಿದ್ದು ಲಕ್ಷ್ಮೀನಾರಾಯಣ್ ಅವರ ಜಾಣ್ಮೆಗೆ ಅವರೇ ಸಾಟಿ ಎಂಬಂತಿದೆ. ಯಾಕೆಂದರೆ ಎಲ್ಲಿಯೂ ಸಹಜತೆಯನ್ನು ಮೀರದ, ಮೆಲೋಡ್ರಾಮಾಕ್ಕೆ ಅವಕಾಶ ಮಾಡಿಕೊಡದೆ ಕಲ್ಪನಾರ ಒಳಗಿನ ಸಹಜ ಅಭಿನೇತ್ರಿ ಹೊರಬರಲು ಅನುವು ಮಾಡಿಕೊಟ್ಟವರು.

ನಿಜ. ಒಂದು ಪಾತ್ರ ರೂಪುಗೊಳ್ಳಲು ನಿರ್ದೇಶಕನ ಜಾಣ್ಮೆ, ಸೃಜನಶೀಲತೆ ಎಷ್ಟು ಮುಖ್ಯವಾದದ್ದು ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುವುದು ಕನ್ನಡದ ಎರಡು ಶ್ರೇಷ್ಠ ಚಲನಚಿತ್ರಗಳು. ಉಯ್ಯಾಲೆ ಮತ್ತು ಪುಟ್ಟಣ್ಣ ಕಣಗಾಲ್ ಅವರ ಶರಪಂಜರ. ಈ ಎರಡೂ ಸಿನಿಮಾಗಳ ನಾಯಕಿ ಮಿನುಗುತಾರೆ ಕಲ್ಪನಾ. ಈ ಎರಡೂ ಸಿನಿಮಾಗಳಲ್ಲಿ ಒಬ್ಬರೇ ನಟಿಸಿದರೂ ಅಭಿನಯದಲ್ಲಿ ತುಂಬ ವ್ಯತ್ಯಾಸವಿದೆ. ಉಯ್ಯಾಲೆಯಲ್ಲಿ ಅದೆಷ್ಟು ಸಂಯಮದ ಅಭಿನಯವೆಂದರೆ ಶರಪಂಜರ ನೋಡಿದ ಯಾರಿಗೂ ಇದು ಕಲ್ಪನಾರಿಂದ ಸಾಧ್ಯವಾ ಎಂದು ಅನುಮಾನ ಹುಟ್ಟಿಸುವಷ್ಟು. ಶರಪಂಜರದಲ್ಲಿ ಮೆಲೋಡ್ರಾಮದ ರೀತಿಯಲ್ಲಿ ಅತಿಯಾಗಿ ಕೂಗಿ, ಕೊಬ್ಬರಿದ ಕಲ್ಪನಾ ಅದಕ್ಕೂ ಮುಂಚೆಯೇ ಉಯ್ಯಾಲೆಯಲ್ಲಿ ಎಲ್ಲಿಯೂ ಆವೇಶಕ್ಕೊಳಗಾಗದೆ ಸಹಜ ಅಭಿನಯದಿಂದ ಪಾತ್ರಕ್ಕೆ ಜೀವತುಂಬಿದರು. ಅದೆಷ್ಟು ಸಹಜವಾಗಿತ್ತು ಅವರ ನಟನೆ ಎಂದರೆ ನಮ್ಮ ಮನೆಯಲ್ಲೊಬ್ಬಳಲ್ಲಿ ನಡೆದು ಹೋಗಬಹುದಾದ ಘಟನೆಯೊಂದಕ್ಕೆ ನಾವು ಸ್ಪಂದಿಸುವ ಹಾಗೆ, ನಮ್ಮ ಮನೆಯ ಮಗಳೊಬ್ಬಳ ತುಮುಲಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕಿತ್ತು ಎಂಬಷ್ಟರ ಮಟ್ಟಿಗೆ.

ಎಲ್ಲಿಯೂ ಭಾವಾವೇಶಕ್ಕೊಳಗಾಗದೆ ಸಂದರ್ಭವನ್ನು ತುಂಬ ವಿವೇಚನೆಯಿಂದ ನಿರ್ವಹಿಸಿದ್ದಾರೆ. ಹೀಗೆ ಗಂಡು-ಹೆಣ್ಣಿನ ಸಂಬಂಧದ ಸೂಕ್ಷ್ಮ ಎಳೆಯನ್ನು ನೈಜವಾಗಿ ನವಿರಾಗಿ ಹೇಳುವ ಈ ಸಿನಿಮಾ ನಿಜಕ್ಕೂ ಹೆಣ್ಣಿನ ಅಂತರಂಗವನ್ನು ಬಗೆದು, ಕಡೆದು ನಿಲ್ಲಿಸಿದ್ದ ಕ್ರಮಕ್ಕೆ  ಈಗಲೂ ಪ್ರಸ್ತುತ ಎಂದೆನಿಸಿದರೆ ಆಶ್ಚರ್ಯವಿಲ್ಲ.

 

 

 

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಚಿತ್ರಭಾರತಿ/ ಮನದ ಕರೆಯು ನಿನಗೆ ಕೇಳದೇನು ? – ಭಾರತಿ ಹೆಗಡೆ

  • August 23, 2018 at 11:23 am
    Permalink

    ತುಂಬ ಸೂಕ್ಷ್ಮವಾದ ವಿಷಯವನ್ನು ಕುರಿತ ಸಿನೆಮಾ ಬಗ್ಗೆ ಅಷ್ಟೇ ಸೂಕ್ಷ್ಮ ವಾಗಿ ಬರೆದೊದ್ದೀರಿ ಭಾರತಿ.

    Reply

Leave a Reply

Your email address will not be published. Required fields are marked *