ಚಿತ್ರಭಾರತಿ / ಕನಸು ಸೈಕಲ್ಲೇರಿದಾಗ – ಭಾರತಿ ಹೆಗಡೆ

ಸೈಕಲ್ ವಾಹನ ಮಾತ್ರವಾಗಿರದೆ ಅದೊಂದು ಸ್ವಾತಂತ್ರ್ಯದ ಸಂಕೇತವಾಗಿ, ಬಿಡುಗಡೆಯ ವಾಹಕವಾಗಿ ನಿಲ್ಲುತ್ತದೆ. ಇತ್ತೀಚೆಗಷ್ಟೆ ಬಿಡುಗಡೆಯಾಗಿರುವ ‘ಜೀರ್ಜಿಂಬೆ’ ಸಿನಿಮಾದಲ್ಲಿ ಸೈಕಲ್ ಅನ್ನು ತುಂಬ ವಿಭಿನ್ನವಾಗಿ ಬಳಸಿಕೊಳ್ಳಲಾಗಿದೆ. ಇಡೀ ಕತೆ ಓಡುವುದೇ ಸೈಕಲ್ ಮೇಲೆ.  ಮಕ್ಕಳ ತುಂಟಾಟ, ಅವರ ಕನಸುಗಳ ಜೊತೆಗೆ ಹುಡುಗಿಯೊಬ್ಬಳು ಬಾಲ್ಯವಿವಾಹವನ್ನು ತಡೆಗಟ್ಟುವಂಥ ಗಂಭೀರ ವಿಷಯವನ್ನೂ ಇಲ್ಲಿ ಹೇಳಿರುವುದು ಮೆಚ್ಚತಕ್ಕ ವಿಷಯ

‘ನೀನ್ಯಾಕೆ ತಡೆದೆ. ಭಾವ ನನಗೆ ಸೈಕಲ್ ಹೊಡೆಯುವುದನ್ನು ಹೇಳಿಕೊಡುತ್ತಿದ್ದ.. ಯಾಕೆ ತಡೆದೆ’ ಎಂದು ಕೇಳಿದ ಪುಟ್ಟ ಹುಡುಗಿಗೆ ಫಟ್ ಎಂದು ಕೆನ್ನೆಗೆ ಹೊಡೆಯುತ್ತಾಳೆ ಅವಳ ಅಕ್ಕ.  ಅಕ್ಕನಿಗೆ ಗೊತ್ತು, ಈ ಭಾವ ಯಾವ ಉದ್ದೇಶದಿಂದ ತಂಗಿಗೆ ಸೈಕಲ್ ಹೇಳಿಕೊಡಲು ಬಂದಿದ್ದಾನೆಂಬುದು.

ತಂಗಿ ರುದ್ರಿಗೆ ಸೈಕಲ್ ಕಲಿಯಬೇಕೆಂಬುದು ಆಸೆ ಮಾತ್ರವಲ್ಲ. ಅದು ಅವಳ ಹಠ. ಸ್ವಾಭಿಮಾನದ ಪ್ರಶ್ನೆ ಕೂಡ. ಶಾಲೆಯಲ್ಲಿ ಸರ್ಕಾರದಿಂದ 8ನೇ ತರಗತಿಗೆ ಮಾತ್ರ ಸೈಕಲ್ ಕೊಟ್ಟ ಕಾರಣಕ್ಕಾಗಿ ಅವಳಿಗೂ ಬಂದಿತ್ತು. ಆದರೆ ಸೈಕಲ್ ಓಡಿಸಲು ಮಾತ್ರ ಬರುವುದಿಲ್ಲ. ದಿನಾ ಮೈಲುಗಟ್ಟಲೆ ದೂರದ ತನ್ನ ಹಳ್ಳಿಯಿಂದ ಶಾಲೆಗೆ ಅವಳು ಸೈಕಲ್ ಅನ್ನು ತಳ್ಳಿಕೊಂಡೇ ಹೋಗುತ್ತಾಳೆ.

ಮನೆಯಲ್ಲಿ ಚಿಕ್ಕವಯಸ್ಸಿಗೇ ಮದುವೆಯಾಗಿ ಹಲವಾರು ಸಲ ಅಬಾರ್ಷನ್ ಆಗಿ ಕಾಯಿಲೆಗೆ ಬಿದ್ದ ಅವಳ ಅಕ್ಕ, ಸೋಮಾರಿ ಭಾವ, ತಮ್ಮ, ಅಪ್ಪಅಮ್ಮ ಎಲ್ಲ ಇರುತ್ತಾರೆ. ಭಾವನಿಗೆ ರುದ್ರಿಯ ಸೈಕಲ್ ಮೇಲೆ ಕಣ್ಣು. ಜೊತೆಯಲ್ಲಿ ಅವಳ ಮೇಲೂ. ಅದಕ್ಕೆ ಸೈಕಲ್ ಹೇಳಿಕೊಡುವ ನೆವದಲ್ಲಿ ಅವಳನ್ನು ತೋಟಕ್ಕೆ ಕರೆದುಕೊಂಡು ಹೋಗುತ್ತಾನೆ. ಅದು ಅಕ್ಕನಿಗೆ ತಿಳಿದು ಅವಳೂ ಇಬ್ಬರನ್ನೂ ಹಿಂಬಾಲಿಸಿ ತಂಗಿಗೆ ಎದುರಾಗಬಹುದಾಗಿದ್ದ ಒಂದು ಗಂಡಾಂತರವನ್ನು ತಪ್ಪಿಸುತ್ತಾಳೆ. ಆದರೆ ಆ ಸೂಕ್ಷ್ಮಗಳೆಲ್ಲ ತಿಳಿಯುವ ವಯಸ್ಸು ತಂಗಿ ರುದ್ರಿಯದ್ದಲ್ಲ. ಈ ಒಂದು ಘಟನೆಯನ್ನು ತುಂಬ ಸೂಕ್ಷ್ಮವಾಗಿ ತೆರೆಯ ಮೇಲೆ ತಂದು ಪ್ರೇಕ್ಷಕರಿಗೆ ದಾಟಿಸುವಲ್ಲಿ ಯಶಸ್ವಿಯಾಗುತ್ತಾರೆ ನಿರ್ದೇಶಕರು.

ಇದು ಇತ್ತೀಚೆಗಷ್ಟೆ ಬಿಡುಗಡೆಯಾದ ‘ಜೀರ್ಜಿಂಬೆ’ ಚಿತ್ರದಲ್ಲಿ ಬರುವ ಘಟನೆ. ಸೈಕಲ್‍ ಅನ್ನು ಅವಳ ಸ್ವಾಭಿಮಾನದ ಸಂಕೇತವಾಗಿ, ಅವಳಿಗೊಂದು ಬಿಡುಗಡೆಯ ಸಂಕೇತವಾಗಿ ಇಲ್ಲಿ ಬಳಸಿಕೊಳ್ಳಲಾಗಿದೆ. ಸಿರಿ ವಾನಳ್ಳಿ, ಲಾವಣ್ಯ ನಟನಾ, ಸುಮನ್ ನಗರ್‍ಕರ್ ನಟಿಸಿರುವ ಈ ಸಿನಿಮಾವನ್ನು ಪುಷ್ಕರ್ ಫಿಲಂಸ್ ಅರ್ಪಿಸಿದೆ. ಕಾರ್ತಿಕ್ ಸರಗೂರು ನಿರ್ದೇಶನದ ಈ ಸಿನಿಮಾ ಈಗಾಗಲೇ 29ಕ್ಕೂ ಅಧಿಕ ಅಂತರ ರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ನಾಲ್ಕು ವಿಭಾಗದಲ್ಲಿ ರಾಜ್ಯ ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದೆ.

ರುದ್ರಿ ಮತ್ತು ದಾಕ್ಷಾಯಿಣಿ ಇಬ್ಬರೂ ಬಾಲ್ಯದ ಗೆಳತಿಯರು. ಒಟ್ಟಿಗೆ ಮೈಲುಗಟ್ಟಲೆ ನಡೆದು ಶಾಲೆಗೆ ಹೋಗಿ-ಬಂದು ಮಾಡುತ್ತಾರೆ. ಅವರಿಬ್ಬರ ಗೆಳೆತನ ಒಡೆಯುವುದು ಸೈಕಲ್‍ನಿಂದ. 8ನೇ ತರಗತಿಯವರಿಗೆ ಮಾತ್ರ ಸರ್ಕಾರದವರು ಸೈಕಲ್ ಕೊಟ್ಟಿರುವುದು, ಮತ್ತು 9-10ನೇ ತರಗತಿಯವರಿಗೆ ಸೈಕಲ್ ಕೊಡದಿರುವುದು ಶಾಲೆಯಲ್ಲಿ ಮಕ್ಕಳ ನಡುವೆ ಕಲಹಕ್ಕೆ ಕಾರಣವಾಗುತ್ತದೆ. ಹಾಗೆಯೇ ಈ ಇಬ್ಬರು ಗೆಳತಿಯರೂ ದೂರವಾಗುತ್ತಾರೆ. ಅದೇ ಸಮಯದಲ್ಲಿ ಹೇಗೋ ಮಾಡಿ ರುದ್ರಿ ಸೈಕಲ್ ಕಲಿತುಬಿಡುತ್ತಾಳೆ. ಸೈಕಲ್ ಓಡಿಸಲು ಬಂದ ದಿವಸ ಅವಳಿಗೆ ಪ್ರಪಂಚವೇ ಗೆದ್ದಷ್ಟು ಸಂತೋಷ. ಮಾರನೇ ದಿನ ಸೈಕಲ್ ಓಡಿಸುತ್ತ ದೂರವಾದ ತನ್ನ ಗೆಳತಿ ದಾಕ್ಷಾಯಿಣಿ ಪಕ್ಕದಲ್ಲಿ ಗೆಲುವಿನ ನಗೆ ಬೀರುತ್ತ ಸೈಕಲ್ ಓಡಿಸಿಕೊಂಡು ಹೋಗುತ್ತಿದ್ದರೆ ದಾಕ್ಷಾಯಿಣಿ ಸಪ್ಪೆ ಮುಖ ಮಾಡಿಕೊಂಡು ನಡೆದುಕೊಂಡು ಬರುತ್ತಿರುತ್ತಾಳೆ. ಅದರ ಮಾರನೇ ದಿನ ಮತ್ತದೇ ಗೆಲುವಿನ ನಗೆಯಲ್ಲಿ ರುದ್ರಿ ಹೋಗುತ್ತಿದ್ದರೆ ದಾಕ್ಷಾಯಿಣಿ ಕಾರಲ್ಲಿ ಹೋಗುತ್ತಿರುತ್ತಾಳೆ ಮತ್ತೂ ಗೆಲುವಿನ ನಗೆಯಲ್ಲಿ. ಕಿಟಕಿಯಲ್ಲಿ ಮುಖ ತೋರಿಸಿಕೊಂಡು ನಗುತ್ತ ಹೋದಾಗ ರುದ್ರಿಗೆ ಅವಳ ಕಾರಿನ ಮುಂದೆ ತನ್ನ ಸೈಕಲ್ ತುಂಬ ಸಣ್ಣದಾಗಿ ಅನಿಸಿಬಿಡುತ್ತದೆ. ಎಲ್ಲರಿಗೂ ಕಾರು ಕೊಡುತ್ತಿದ್ದಾರೆ ಎಂದು ಭಾವಿಸುತ್ತಾಳೆ.

ಆದರೆ ಐಟಿ ಉದ್ಯಮಿಯಾದ ನಿವೇದಿತಾ ಹಳ್ಳಿಯ ಶಾಲೆಯಲ್ಲಿ ಎಲ್ಲರಿಗೂ ಇಂಗ್ಲಿಷ್ ಕಲಿಸಲು ಬಂದಿರುತ್ತಾರೆ. ನಿಧಾನಕ್ಕೆ ನಿವೇದಿತಾರ ಸ್ನೇಹವನ್ನೂ ರುದ್ರಿ ಸಂಪಾದಿಸುತ್ತಾಳೆ. ಹೀಗೆ ಇರುವಾಗ ಒಂದಿನ 10ನೇ ತರಗತಿಯ ಹುಡುಗಿಯೊಬ್ಬಳಿಗೆ ಮದುವೆಯಾಗಿರುವ ವಿಷಯ ತಿಳಿದು ರುದ್ರಿಯೂ ಸೇರಿದಂತೆ ಎಲ್ಲರೂ ಗೇಲಿ ಮಾಡುತ್ತಾರೆ. ಆಗ ನಿವೇದಿತಾ, ‘13 ವರ್ಷದ ಹುಡುಗಿಯೊಬ್ಬಳಿಗೆ ಮದುವೆಯಾಗಿರುವ ವಿಷಯವನ್ನು ಸ್ವಲ್ಪ ಯೋಚಿಸಿ ನೋಡಿ ಅವಳ ಸ್ಥಿತಿಯನ್ನು’ ಎಂದು ಹೇಳಿದ್ದಲ್ಲದೇ, ಬಾಲ್ಯವಿವಾಹದಿಂದ ಆಗುವ ಸಮಸ್ಯೆಗಳ ಕುರಿತು ಒಂದು ಬೀದಿ ನಾಟಕವನ್ನಾಡಿಸುತ್ತಾರೆ. ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎಂದು ಹೇಳುವುದಲ್ಲದೆ ಕನಸು ಯಾರೊಬ್ಬರ ಸೊತ್ತೂ ಅಲ್ಲ… ಎಲ್ಲರಿಗೂ ಬದುಕಿದೆ ಎಂದು ನಾಟಕದಲ್ಲಿ ಹೇಳಲಾಗುತ್ತದೆ. ಇದು ರುದ್ರಿಯ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ನಾಟಕ ನೋಡುತ್ತಿದ್ದಂತೆ ಅವಳಿಗೆ ಮನೆಯಲ್ಲಿನ ಅವಳ ಅಕ್ಕನ ಅನಾರೋಗ್ಯ ಕಣ್ಣಮುಂದೆ ಬರುತ್ತದೆ. ಅವಳು ಮತ್ತೆಮತ್ತೆ ಹೇಳಿಕೊಳ್ಳುತ್ತಾಳೆ ಕನಸು ಯಾರೊಬ್ಬರ ಸೊತ್ತೂ ಅಲ್ಲ…
ಅಲ್ಲಿಂದ ಮುಂದೆ ಅವಳು ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಹೋರಾಡುತ್ತಾಳೆ.

ಗೆಳತಿ ದಾಕ್ಷಾಯಣಿಯ ಅಪ್ಪ ವೀರಗಾಸೆ ನೃತ್ಯಕಲಾವಿದರು. ಆ ಪ್ರಭಾವ ದಾಕ್ಷಾಯಣಿಯ ಮೇಲೂ ಆಗಿರುತ್ತದೆ. ಅವಳು ಆಗಾಗ ದೇವರ ಮುಂದೆ ನಿಂತು ವೀರಗಾಸೆ ಕುಣಿಯುತ್ತಿದ್ದರೆ, ಹೆಣ್ಣುಮಕ್ಕಳು ಹೀಗೆಲ್ಲ ಕುಣಿಯಬಾರದೆಂದು ಹೆದರಿಸುತ್ತಾನೆ. ಹೀಗಿರುವಾಗಲೇ ದಾಕ್ಷಾಯಿಣಿಗೆ ಮದುವೆ ನಿಗದಿಯಾಗುತ್ತದೆ. ರುದ್ರಿ ಅದನ್ನು ಪೊಲೀಸರಿಗೆ ಹೇಳಿ ಆ ಮದುವೆಯನ್ನು ನಿಲ್ಲಿಸುತ್ತಾಳೆ. ಇದರಿಂದ ರೊಚ್ಚಿಗೆದ್ದ ದಾಕ್ಷಾಯಿಣಿಯ ಅಪ್ಪ ರುದ್ರಿಯ ಅಪ್ಪ-ಅಮ್ಮನಿಗೆ ಹೇಳಿ ‘ನಿಮ್ಮ ಮಗಳಿಗೆ ಬೇಗ ಮದುವೆ ಮಾಡದಿದ್ದರೆ ಮನೆಯಲ್ಲಿ ತೊಂದರೆಯಾಗುತ್ತದೆ’ ಎಂದು ಶಕುನ ಹೇಳಿ ಹೆದರಿಸುತ್ತಾನೆ. ಅದಕ್ಕೆ ರುದ್ರಿಯನ್ನು ತೋಟದ ಮನೆಯಲ್ಲಿ ಕೂಡಿ ಹಾಕುತ್ತಾರೆ. ಅದರ ಸುತ್ತ ಅವಳ ತಮ್ಮ ಸೈಕಲ್ ಓಡಿಸುತ್ತ ಅಣಕಿಸುತ್ತಾನೆ. ಆದರೆ ಅಲ್ಲಿಂದ ಅವಳನ್ನು ಪಾರುಮಾಡುವುದು ಮತ್ತೆ ಅದೇ ಅವಳ ಅಕ್ಕ ಮತ್ತು ಅದೇ ಸೈಕಲ್.

ಬೀಗ ತೆಗೆದು ಸೈಕಲ್ ಕೊಟ್ಟು ನಡಿ ನೀನು ಇಲ್ಲಿಂದ. ನಿನ್ನ ಕನಸಿನಂತೆ ಬದುಕು ಎಂದು ಅಕ್ಕ ಕಳಿಸುತ್ತಾಳೆ. ನಿಜಕ್ಕೂ ಆ ಹೊತ್ತು ಆ ಸೈಕಲ್ ಅವಳ ಪಾಲಿಗೆ ಬಿಡುಗಡೆಯ ಸಂಕೇತವಾಗಿ ಅವಳೆದುರು ನಿಂತು ಬಿಡುತ್ತದೆ. ಸೈಕಲ್ ತುಳಿಯುತ್ತ ಅವಳು ರಾತ್ರೋರಾತ್ರಿ ಬೆಂಗಳೂರಿಗೆ ಬಂದು ವಿಧಾನಸೌಧದ ಮುಂದೆ ನಿಲ್ಲುತ್ತಾಳೆ. ಪೊಲೀಸನೊಬ್ಬ ಬಂದು ಅವಳನ್ನು ಬೆದರಿಸಿದಾಗ ನಾನು ಮುಖ್ಯಮಂತ್ರಿಯನ್ನು ನೋಡಬೇಕೆಂದು ಕೂರುತ್ತಾಳೆ. ಆಗ ಅಲ್ಲಿಯೇ ಇದ್ದ ಟಿವಿ ವರದಿಗಾರನೊಬ್ಬನಿಗೆ ಅವಳು ಸಿಕ್ಕು, ಅವಳನ್ನು ಟಿವಿ ಸ್ಟೇಷನ್‍ಗೆ ಕರೆದೊಯುತ್ತಾರೆ. ಅಲ್ಲಿ ಅವಳು ತನ್ನ ಊರಿನಲ್ಲಾಗುತ್ತಿದ್ದ ಅನ್ಯಾಯಗಳು, ಬಾಲ್ಯವಿವಾಹ, ತಾನು ಅಲ್ಲಿಂದ ತಪ್ಪಿಸಿಕೊಂಡು ಬಂದದ್ದು ಎಲ್ಲವನ್ನೂ ಬಿಡಿಸಿಬಿಡಿಸಿ ಹೇಳುತ್ತಾಳೆ. ಅದು ರಾಜ್ಯಾದ್ಯಂತ ಪ್ರಸಾರವಾಗುತ್ತದೆ. ಇದನ್ನು ಅವಳ ಅಪ್ಪಅಮ್ಮನೂ ನೋಡುತ್ತಾರೆ. ಮುಂದೆ ಮನೆಯಲ್ಲಿ ಅವಳನ್ನು ಓದಿಸುತ್ತಾರೆ. ದಾಕ್ಷಾಯಿಣಿಯ ಅಪ್ಪ ಅವಳಿಗೆ ವೀರಗಾಸೆಯನ್ನು ಹೇಳಿಕೊಡುತ್ತಾನೆ.

ಸಿನಿಮಾ ಮುಗಿದ ಮೇಲೂ ಸೈಕಲ್‍ನಿಂದ ಅವಳು ತನ್ನ ಕನಸನ್ನು ನನಸು ಮಾಡಿಕೊಂಡಿರುವುದಕ್ಕೆ ಖುಷಿ ಎನಿಸಿದರೂ, ಅವಳು ರಾತ್ರೋರಾತ್ರಿ ಸೈಕಲ್ ತುಳಿದುಕೊಂಡೇ ದೂರದ ಬೆಂಗಳೂರಿಗೆ ಬರುವುದು, ಅಲ್ಲಿ ಟಿವಿ ಸ್ಟೇಷನ್‍ಗೆ ಹೋಗಿ ಮಾತನಾಡುವುದು ಇವೆಲ್ಲ ಸ್ವಲ್ಪ ಫಿಲ್ಮೀ – ಸಿನಿಮಾಟಿಕ್ ಆಗಿಬಿಡುತ್ತದೆ, ಇವೆಲ್ಲ ಇಷ್ಟು ಸುಲಭವಾ ಎಂದೆನಿಸಿದರೂ, ಚಿಕ್ಕ ಹುಡುಗಿಯೊಬ್ಬಳು ತಾನು ಮತ್ತು ತನ್ನಂಥ ಅನೇಕ ಗೆಳತಿಯರ ಬಾಲ್ಯವಿವಾಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ಧೈರ್ಯದಿಂದ ಪ್ರಶ್ನೆ ಮಾಡಿ, ಅದರ ವಿರುದ್ಧ ಹೋರಾಡಿದ್ದು ಮೆಚ್ಚುವಂಥದ್ದು, ರುದ್ರಿಯ ಈ ಹೋರಾಟ, ಅನೇಕ ಹುಡುಗಿಯರಿಗೆ ಸ್ಫೂರ್ತಿಯಾಗುವಲ್ಲಿ ಯಶಸ್ವಿಯಾಗಬಲ್ಲದು.

ಹುಡುಗಾಟಿಕೆ ಹುಡುಗಿಯಾಗಿ, ಎಲ್ಲರೊಂದಿಗೆ ಕಾಲುಕೆದರಿಕೊಂಡು ಜಗಳ ಮಾಡುವುದು, ಬಾಲ್ಯದ ತುಂಟಾಟ ಮಾಡುವ ರುದ್ರಿಯಾಗಿ ಸಿರಿ ವಾನಳ್ಳಿಯ ನಟನೆ, ದಾಕ್ಷಾಯಣಿಯಾಗಿ ಲಾವಣ್ಯಳ ನಟನೆ ತುಂಬ ಸಹಜವಾಗಿದೆ. ಹಾಗೆಯೇ ಸೈಕಲ್ ಎಂಬುದನ್ನು ಬಾಲ್ಯವಿವಾಹದ ವಿರುದ್ಧ ಹೋರಾಟಕ್ಕಷ್ಟಕ್ಕೇ ಅಲ್ಲ, ಒಬ್ಬ ಚಿಕ್ಕ ಹುಡುಗಿಯ ಆತ್ಮವಿಶ್ವಾಸದ ಸಂಕೇತವಾಗಿ ಇಲ್ಲಿ ಬಳಸಿಕೊಂಡಿರುವುದು ನಿಜಕ್ಕೂ ಮೆಚ್ಚತಕ್ಕ ವಿಷಯ.

‘ಜೀರ್ಜಿಂಬೆ’ ಸಿನಿಮಾ ನೋಡುತ್ತಿದ್ದಂತೆ 2015ರಲ್ಲಿ ನಿರ್ಮಿಸಲಾದ ಟರ್ಕಿ ಸಿನಿಮಾ ‘ಮಸ್ತಂಗ್’ ನೆನಪಿಗೆ ಬರುತ್ತದೆ. ಟರ್ಕಿಯ ಕುಗ್ರಾಮದಲ್ಲಿರುವ ಒಂದೇ ಕುಟುಂಬದ ಐವರು ಹುಡುಗಿಯರ ಸುತ್ತ ಸುತ್ತುವ ಕತೆಯಿದು. ಇದರಲ್ಲಿಯೂ ಹುಡುಗಿಯೊಬ್ಬಳು ತಮ್ಮ ಮೇಲೆ ಹೇರಿರುವ ಕಟ್ಟುಪಾಡುಗಳನ್ನು ಕಿತ್ತೊಗೆದು ಹೊರಡುತ್ತಾಳೆ. ಟರ್ಕಿಶ್ – ಫ್ರೆಂಚ್ ಸಿನಿಮಾ ನಿರ್ದೇಶಕ ಡೆನಿಝ್ ಗೇಮಝೆ ಇರುಗ್ವೆನ್ ನಿರ್ದೇಶನದ ಈ ಸಿನಿಮಾದಲ್ಲಿ ತನ್ನ ನಾಲ್ವರು ಅಕ್ಕಂದಿರ ಮದುವೆ, ನಂತರ ಅವರು ಪಡುವ ಪಾಡುಗಳನ್ನೆಲ್ಲ ಕಣ್ಣಾರೆ ಕಂಡ ಲೇಲೇ ಎಂಬ ಪುಟ್ಟ ಹುಡುಗಿಗೆ ಕಾರು ಓಡಿಸುವ ಹುಚ್ಚು. ಕಡೆಗೆ ಮನೆಯಿಂದ ತಪ್ಪಿಸಿಕೊಂಡು ಮದುವೆಯಾಗಬೇಕಿರುವ ತನ್ನೊಬ್ಬಳು ಅಕ್ಕನನ್ನೂ ಕರೆದುಕೊಂಡು ಅವಳು ಕಾರನ್ನು ಓಡಿಸಿಕೊಂಡು ದೂರದ ಇಸ್ತಾಂಬುಲ್‍ಗೆ ಬರುವ ಮೂಲಕ ಎಲ್ಲ ಸಂಪ್ರದಾಯಗಳನ್ನು ಕಡಿದುಕೊಂಡು ಸ್ವಚ್ಛಂದವಾಗಿ ಹಾರಾಡುತ್ತ ಬರುತ್ತಾಳೆ.

‘ಜೀರ್ಜಿಂಬೆ’ಯಲ್ಲಿ ಸೈಕಲ್ ಸ್ವಾತಂತ್ರ್ಯದ ಸಂಕೇತವಾದರೆ, ‘ಮಸ್ತಂಗ್’ ಸಿನಿಮಾದಲ್ಲಿ ಕಾರು ಬಿಡುಗಡೆಯ ಸಂಕೇತವಾಗಿ ನಿಲ್ಲುತ್ತದೆ. ‘ಮಸ್ತಂಗ್’ ಸಿನಿಮಾದಲ್ಲಿ ಸಂಪ್ರದಾಯದ ಕಟ್ಟುಪಾಡುಗಳ ವಿರುದ್ಧ ಲೇಲೆ ನಿಂತರೆ, ‘ಜೀರ್ಜಿಂಬೆ’ಯಲ್ಲಿ ಬಾಲ್ಯವಿವಾಹದಂಥ ಸಾಮಾಜಿಕ ಪಿಡುಗಿನ ವಿರುದ್ಧ ನಿಲ್ಲುತ್ತಾಳೆ ದುರ್ಗಿ. ಒಟ್ಟಿನಲ್ಲಿ ಎರಡೂ ಸಿನಿಮಾ ಸಂಪ್ರದಾಯದ ಹೆಸರಿನಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯವನ್ನು ಧಿಕ್ಕರಿಸುವ ನಿಟ್ಟಿನಲ್ಲಿರುವುದು ಗಮನಾರ್ಹವಾದದ್ದು.

ಭಾರತಿ ಹೆಗಡೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *