ಚಿತ್ರಭಾರತಿ / ಒಂದು ಫೋಟೋದ ಹಿಂದಿನ ಕತೆ! – ಭಾರತಿ ಹೆಗಡೆ

ಮಾಧ್ಯಮದ ಅಸೂಕ್ಷ್ಮತೆಯಿಂದ ಆಗುವ ಅನಾಹುತಗಳ ಕುರಿತು ಈಗಾಗಲೇ ಚರ್ಚೆಯಾಗುತ್ತಿದೆ. ಇದು ಇಂಥದ್ದೇ ಕಥಾವಸ್ತು ಹೊಂದಿದಂಥ ಸಿನಿಮಾ. ಅಸೂಕ್ಷ್ಮತೆಯಿಂದ ಫೋಟೋಗ್ರಾಫರ್ ಒಬ್ಬ ಒಬ್ಬ ಮಹಿಳೆ ಮಗುವಿಗೆ ಹಾಲುಣಿಸುತ್ತಿರುವ ತೆರೆದೆದೆಯ ಫೋಟೋ ತೆಗೆದು ಪ್ರಕಟಿಸಿದ ಪರಿಣಾಮ ಹೇಗೆ ಅವಳ ಇಡೀ ಬದುಕು ಮೂರಾಬಟ್ಟೆಯಾಗುತ್ತದೆಂಬುದನ್ನು ಹೇಳುತ್ತದೆ ಗಂಗೂರ್ ಸಿನಿಮಾ. ಇಷ್ಟೇ ಅಲ್ಲದೆ ಮಹಿಳಾ ಶೋಷಣೆಯ ವಿವಿಧ ಮುಖಗಳ ಅನಾವರಣ ಮಾಡುತ್ತದೆ. 

ಅದೊಂದು ಪಶ್ಚಿಮ ಬಂಗಾಳದ ಅತ್ಯಂತ ಹಿಂದುಳಿದ ಹಳ್ಳಿ. ಬುಡಕಟ್ಟು ಸಮುದಾಯ ಹೆಚ್ಚಿರುವಂಥ ಊರು. ಬಡತನ, ಅನಕ್ಷರತೆ ತಾಂಡವವಾಡುತ್ತಿರುವ ಆ ಊರು,  ಅದು ಹೇಗೋ ಮಾಧ್ಯಮದ ಗಮನಕ್ಕೆ ಬಂದು, ಪತ್ರಿಕೆಯೊಂದರ ಛಾಯಾಗ್ರಾಹಕನಿಗೆ ಅಲ್ಲಿಗೆ ಹೋಗಬೇಕೆಂದೆನಿಸಿಬಿಡುತ್ತದೆ.

ಅವನು ಅಲ್ಲಿಗೆ ಬರುವವರೆಗೆ ಬಹುಶಃ ಅಲ್ಲಿ ಎಲ್ಲವೂ ಸರಿಯಾಗಿತ್ತು. ಅತಿಯಾದ ಬಡತನ, ಅಜ್ಞಾನ ಅನಕ್ಷರತೆ ಎಲ್ಲವೂ ಇದ್ದರೂ, ಅದೇ ತಮ್ಮ ಬದುಕು ಎಂದು ನೆಮ್ಮದಿಯಾಗಿಯೇ ಇದ್ದರು. ತಮ್ಮ ಹೊಟ್ಟೆಪಾಡನ್ನು ಮಾತ್ರ ನೋಡಿಕೊಂಡಿದ್ದರು ಅವರೆಲ್ಲ.

ಯುಪಿನ್ ಒಬ್ಬ ಖ್ಯಾತ ಫೋಟೋ ಪತ್ರಕರ್ತ. ಪಶ್ಚಿಮ ಬಂಗಾಳದ ಪುರುಲಿಯಾ ಊರಿನಲ್ಲಿ ಬುಡಕಟ್ಟು ಜನಾಂಗದ ಮಹಿಳೆಯರ ಮೇಲೆ ಆಗುತ್ತಿರುವ ಶೋಷಣೆಯನ್ನು ಕಣ್ಣಾರೆ ಕಂಡು, ಫೋಟೋ  ತೆಗೆದು ಪತ್ರಿಕೆಯಲ್ಲಿ ಪ್ರಕಟಿಸಿ ಅವರಿಗೊಂದಿಷ್ಟು ನ್ಯಾಯ ಒದಗಿಸಬೇಕೆಂಬುದು ಅವನ ಉದ್ದೇಶ. ಇದಕ್ಕಾಗಿ ಆತ ಅಲ್ಲಿನ ಹೆಣ್ಣುಮಕ್ಕಳು ಅನುಭವಿಸುವ ಕಷ್ಟ, ಕೋಟಲೆಗಳನ್ನೆಲ್ಲ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದ. ಅವರನ್ನೆಲ್ಲ ಮಾತನಾಡಿಸುತ್ತ ಇರುವಾಗಲೇ ಗಂಗೂರ್ ಎಂಬ ಹೆಣ್ಣುಮಗಳು ತನ್ನ ಮಗುವಿಗೆ ಎದೆ ಹಾಲು ಕುಡಿಸುತ್ತ ಅಲ್ಲಿಯೇ ಕುಳಿತಿದ್ದಳು. ತೆರೆದೆದೆಯಲ್ಲಿಯೇ ಮಗುವಿಗೆ ಹಾಲು ಕುಡಿಸುತ್ತಿದ್ದ ಆ ದೃಶ್ಯ ಅದುಹೇಗೆ ಅವನಿಗೆ ಅದೊಂದು ಸೆನ್ಸೇಷನಲ್ ನ್ಯೂಸ್ ಆಗುತ್ತದೆಂದುಕೊಂಡನೋ, ಹಾಗೆಯೇ ಅದನ್ನು ಫೋಟೋ ತೆಗೆದುಬಿಟ್ಟ. ಕ್ಯಾಮೆರಾ ಅಂದರೇನು, ಅದರಲ್ಲಿ ಫೋಟೋ ಹೇಗೆ ಬರುತ್ತದೆಂಬುದರ ಕುರಿತು ಸ್ವಲ್ಪವೂ ತಿಳಿವಳಿಕೆಯಿಲ್ಲದ ಗಂಗೂರ್ ನಾಚಿಕೆಯಿಂದ ನಕ್ಕು ಅಲ್ಲಿಂದ ಎದ್ದುಹೋದಳು. ಅವ ತೆಗೆದದ್ದು ತನ್ನದೇ ಫೋಟೋ, ಅದರ ಪರಿಣಾಮ ಏನಾಗಬಹುದೆಂಬ ಯಾವ ಅರಿವೂ ಅವಳಿಗಿರಲಿಲ್ಲ. ಆದರೆ ಸ್ವತಃ ಅವನಿಗೂ ಇದರ ಕಲ್ಪನೆ ಇರಲಿಲ್ಲ.

‘ಸಾಫ್ಟ್ ರೇಪ್’ ಎಂಬ ತಲೆಬರಹದಡಿಯಲ್ಲಿ ಗಂಗೂರ್ ಮಗುವಿಗೆ ಹಾಲು ಕುಡಿಸುತ್ತಿರುವ ತೆರೆದೆದೆಯ ಫೋಟೋ ಬಂಗಾಲಿ ಡೇಲಿಯಲ್ಲಿ ಪ್ರಕಟವಾಯಿತು. ಇದು ಅವರಿಬ್ಬರ ಬದುಕಲ್ಲೂ ದುರಂತದ ತಿರುವು ಪಡೆದುಕೊಳ್ಳುತ್ತದೆ. ಆ ಫೋಟೋವಿರುವ ಆ ಪತ್ರಿಕೆ ಅವರೂರಿಗೆ ಬರುವವರೆಗೂ ಗಂಗೂರಳ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಯಾವಾಗ ಪತ್ರಿಕೆ ಊರಿಗೆ ತಲುಪುತ್ತದೋ, ಅವಳ ಕುರಿತು ಸುದ್ದಿ ಮನೆಮನೆಗೆ ತಲುಪುತ್ತದೆ. ಹಳ್ಳಿಗರೆಲ್ಲ ಅವಳನ್ನು ಕೀಳಾಗಿ ಕಾಣುತ್ತಾರೆ. ಕಟ್ಟಡ ನಿರ್ಮಾಣದಲ್ಲಿ ಕೂಲಿ ಮಾಡುತ್ತಿದ್ದ ಅವಳು ಆ ಕೆಲಸವನ್ನು ಕಳೆದುಕೊಳ್ಳುತ್ತಾಳೆ. ಮನೆಯಿಂದ ಅವಳನ್ನು ಹೊರಹಾಕುತ್ತಾರೆ. ಜೊತೆಗೆ ಈ ಚಿತ್ರ ಸ್ಥಳೀಯ ಪೊಲೀಸರ ಕಣ್ಣಿಗೆ ಬೀಳುತ್ತದೆ. ಅವಳ ಬೆನ್ನು ಬಿದ್ದ ಪೊಲೀಸರು ಅವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುತ್ತಾರೆ. ಅವಳ ಇಡೀ ದೇಹ ಜರ್ಝರಿತವಾಗುತ್ತದೆ. ಮುಂದೆ ಅವಳು ನಿಜವಾಗಿಯೂ ವೇಶ್ಯಾವಾಟಿಕೆಗೆ ನೂಕಲ್ಪಡುತ್ತಾಳೆ.

ಅದೇ ಹೊತ್ತಿಗೆ ಯುಪಿನ್ ಚಿತ್ರದ ಕುರಿತು ವ್ಯಾಪಕವಾದ ಟೀಕೆ ವ್ಯಕ್ತವಾಗುತ್ತದೆ. ಸ್ವತಃ ಅವನಿಗೂ ಇದು ಅರಿವಾಗುತ್ತದೆ. ತನ್ನಿಂದಾದ ತಪ್ಪಿನಿಂದಾಗಿ ಗಂಗೂರ್‍ ಬದುಕನ್ನು ಊಹಿಸಿ ಅವಳನ್ನು ಹುಡುಕಿಕೊಂಡು ಅಲ್ಲಿಗೆ ಹೋಗುತ್ತಾನೆ. ಆದರೆ ಅಲ್ಲಿ ಅವಳಿರುವುದೇ ಇಲ್ಲ. ಇಡೀ ಹಳ್ಳಿಯಲ್ಲಿ ಒಬ್ಬರೇ ಒಬ್ಬರೂ ಅವಳೆಲ್ಲಿದ್ದಾಳೆ, ಏನು ಮಾಡುತ್ತಿದ್ದಾಳೆಂದು ಹೇಳುವುದಿಲ್ಲ. ಸ್ವತಃ ಅವಳ ಗಂಡ, ಅತ್ತೆ ಕೂಡ ಬಾಯಿಬಿಡುವುದಿಲ್ಲ. ಯುಪಿನ್ ಇಡೀ ಹಳ್ಳಿಯನ್ನು ಓಡಾಡುತ್ತಾನೆ. ಕಡೆಗೆ ಪೊಲೀಸ್ ಠಾಣೆಯಲ್ಲಿ ಕೂಡ ವಿಚಾರಿಸುತ್ತಾನೆ. ಪೊಲೀಸ್ ಇನ್ಸ್‍ಪೆಕ್ಟರ್ ಮೊದಲು ಹೇಳಲು ನಿರಾಕರಿಸಿದರೂ, ಕಡೆಗೆ ಗಂಗೂರ್ ಕತೆಯನ್ನು ಹೇಳುತ್ತಾನೆ. ಈಗ ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳಲ್ಪಟ್ಟಿದ್ದಾಳೆಂದು ತಿಳಿಯುತ್ತದೆ.

ಪಶ್ಚಾತ್ತಾಪದಿಂದ ಕುಗ್ಗಿಹೋದ ಯುಪಿನ್ ಒಂದು ರಾತ್ರಿ ಅವಳನ್ನು ಭೇಟಿಯಾಗುತ್ತಾನೆ ಕೂಡ. ಇವನನ್ನು ನೋಡಿದವಳೇ ಗಂಗೂರ್, ಓ..ನೀನು ನನ್ನ ಚಿತ್ರವನ್ನು ತೆಗೆದು ಪ್ರಕಟಿಸಿದವನಲ್ಲವಾ? ಮಹದುಪಕಾರ ಮಾಡಿದೆ ಎಂದು ವ್ಯಂಗ್ಯವಾಗಿ ಹೇಳಿದ್ದಲ್ಲದೆ, ದುಃಖ ಮತ್ತು ಕೋಪದಿಂದ, ಬ್ಲೌಸ್ ತೆಗೆದು ಪೊಲೀಸರಿಂದ ತನ್ನ ಎದೆಯ ಮೇಲಾದ ಆಳವಾದ ಗಾಯಗಳನ್ನು ತೋರಿಸುತ್ತಾಳೆ. ಅವನನ್ನೇ ನೋಡುತ್ತ ಕೇಳಿದ ಅವಳ ಕಣ್ಣುಗಳಲ್ಲಿ ನೀನೇನನ್ನು ಸಾಧಿಸಿದೆ ಎಂಬ ಪ್ರಶ್ನೆ ಗಾಢವಾಗಿರುತ್ತದೆ. ಗಾಯಗಳಾದ ಎದೆಯ ಫೋಟೋವನ್ನೂ ತೆಗೆದು ಪೇಪರ್ ನಲ್ಲಿ  ಪ್ರಕಟಿಸು ಬೇಕಿದ್ದರೆ ಎಂದು ವ್ಯಂಗ್ಯವಾಡುತ್ತಾಳೆ.

ಯುಪಿನ್  ಅದನ್ನು ನೋಡಿ ಆಘಾತಕ್ಕೊಳಗಾಗುತ್ತಾನೆ. ನಂತರ ಆ ಸುದ್ದಿ ಮಾಧ್ಯಮದಲ್ಲಿ ಬರುತ್ತದೆ. ಯಾವಾಗ ಮಾಧ್ಯಮದ ಮುಂದೆ ಈ ಪ್ರಕರಣ ಬರುತ್ತದೋ ಆಗ ಇದು ಕೋರ್ಟ್ ಮೆಟ್ಟಿಲೇರುತ್ತದೆ. ಸಾಮಾಜಿಕ ಕಾರ್ಯಕರ್ತೆ ಮೇಧಾ, ಗಂಗೂರ್ ಪರವಾಗಿ ನಿಂತು, ಪೊಲೀಸರಿಂದ ಕ್ರೌರ್ಯದ ವಿರುದ್ಧ ವಾದಮಾಡುತ್ತಾಳೆ. ಕಡೆಯಲ್ಲಿ ಮಹಿಳೆಯರೆಲ್ಲ ಸೇರಿ ಅವರವರ ಬ್ಲೌಸ್ ತೆಗೆದು ಇಂಥ ಸಾಮಾಜಿಕವಾದ ಅಸಹ್ಯಕರ ಅಪರಾಧವಾದ ಅತ್ಯಾಚಾರವನ್ನು ಪ್ರತಿಭಟಿಸುತ್ತಾರೆ. ಅಲ್ಲಿಗೆ ಸಿನಿಮಾ ಕೊನೆಗೊಳ್ಳುತ್ತದೆ.

ಪ್ರಸಿದ್ಧ ಬಂಗಾಲಿ ಕತೆಗಾರ್ತಿ ಮಹಾಶ್ವೇತಾ ದೇವಿಯವರ ಮೂಲ ಕತೆಯಾದ ಚೋಲಿ ಕೆ ಪೀಚೆಯ ಆಧಾರವಾಗಿರಿಸಿಕೊಂಡ ಈ ಸಿನಿಮಾ 2010ರಲ್ಲಿ ನಿರ್ಮಾಣವಾಯಿತು. ಇಟಾಲೋ ಸ್ಪೈನೆಲಿ ನಿರ್ದೇಶನದ ಬಂಗಾಲಿ ಸಿನಿಮಾವಿದು. 5ನೇ ರೋಮ್ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಉತ್ತಮ ಸಿನಿಮಾ, ಉತ್ತಮ ನಿರ್ದೇಶನ, ನಟ, ನಟಿ ಹೀಗೆ ಎಲ್ಲ ಪ್ರಶಸ್ತಿಗಳನ್ನೂ ದಕ್ಷಿಣ ಏಷ್ಯಾ ಸಿನಿಮೋತ್ಸವದಲ್ಲಿ ಪಡೆದುಕೊಂಡ ಸಿನಿಮಾವಿದು. ಅಲ್ಲದೆ ಫಿಲಿಪ್ಪೀನ್ಸ್ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮಾ ಉತ್ಸವದಲ್ಲೂ ಇದು ಪ್ರಶಸ್ತಿ ಪಡೆಯಿತು.

ಹೀಗೆ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಗಂಗೂರ್ ಒಳ್ಳೆ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ. ಗಂಗೂರ್ ಪಾತ್ರದಲ್ಲಿ ಕಾಣಿಸಿಕೊಂಡ ಪ್ರಿಯಾಂಕ ಬೋಸ್ ತನ್ನ ಮುಗ್ಧ ನಟನೆಯಿಂದ ಎಲ್ಲರ ಗಮನ ಸೆಳೆದಿದ್ದಾಳೆ. ಆದರೆ ಅಷ್ಟು ಕರುಣಾಪೂರಿತವಾದ ಆ ಪಾತ್ರಕ್ಕೆ ಬಂದ ವಿಮರ್ಶೆಯೆಂದರೆ ತುಂಬ ಬೋಲ್ಡ್ ಆಗಿ, ಹಾಟ್ ಆಗಿ ಅಭಿನಯಿಸಿದ ಪ್ರಿಯಾಂಕ ಬೋಸ್ ಎಂಬುದು ಮಾತ್ರ ದಂಗುಬಡಿಸುವಂಥದ್ದು. ಮಹಿಳೆಯೊಬ್ಬಳು ಬೋಲ್ಡ್ ಆಗಿ ನಟಿಸುತ್ತಾಳೆ, ಎಂದರೆ ಅವಳು ಎಕ್ಸ್‍ಪೋಸ್  ಆಗಿದ್ದಾಳೆಂದು ಅರ್ಥೈಸುವುದು, ಅವಳು ಬೋಲ್ಡ್ ಆಗಿ ಬರೆಯುತ್ತಾಳೆ ಎಂದರೆ ಸೆಕ್ಸ್ ಕುರಿತು ಬರೆದರೆ ಮಾತ್ರ ಎಂದು ಬಿಂಬಿಸುವುದು ನಿಜಕ್ಕೂ ವಿಪರ್ಯಾಸ. ಈ ಬೋಲ್ಡ್ ಎಂಬುದು ಪುರುಷನ ನಟನೆಗೆ, ಬರಹಗಳಿಗೆ ಅನ್ವಯಿಸುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಆದರೆ ಈ ಸಿನಿಮಾ ಅನೇಕ ಪ್ರಶ್ನೆಗಳನ್ನು ಎತ್ತುತ್ತವೆ. ತನ್ನದಲ್ಲದ ತಪ್ಪಿಗೆ ಅತ್ಯಾಚಾರಕ್ಕೊಳಗಾಗುವ ಮಹಿಳೆಯೊಬ್ಬಳಿಗೆ ವೇಶ್ಯಾವಾಟಿಕೆಯೇ ಗತಿಯೇ? ಅದೇ ಅಂತಿಮ ಪರಿಹಾರವೇ? ರಕ್ಷಕರಾಗಬೇಕಿದ್ದ  ಪೊಲೀಸ್ ರಿಂದಲೇ  ನಡೆಯುವ ಅತ್ಯಾಚಾರ ಪ್ರಕರಣಗಳು ಈ ನೆಲದಲ್ಲಿ ಮಾಮೂಲು ಎಂಬುದನ್ನೂ ಸಿನಿಮಾ ರಂಗ ಮತ್ತೆಮತ್ತೆ ಸಾಬೀತುಪಡಿಸುತ್ತಲೇ ಇದೆ. ಹಾಗಿದ್ದರೆ ಅವಳಿಗೆ ಸಿಕ್ಕ ನ್ಯಾಯವೇನು?

ಇದರ ಜೊತೆಗೆ ಮತ್ತೆ ಮತ್ತೆ ಕಾಡುವ ಪ್ರಶ್ನೆಯೆಂದರೆ ಹೆಣ್ಣೊಬ್ಬಳು ಮಗುವಿಗೆ ಹಾಲು ಕುಡಿಸುವ ದೃಶ್ಯವೊಂದು ಸೆನ್ಸೇಷನಲ್ ನ್ಯೂಸ್ ಆಗುತ್ತದೆಂಬುದು ಆ ಪತ್ರಕರ್ತನಿಗೆ ಹೊಳೆದದ್ದಾದರೂ ಹೇಗೆ? ಅಂಥ ಅಸೂಕ್ಷ್ಮತೆಯಿಂದಲೇ ಇಂದಿಗೂ ಮಹಿಳೆ ಮಾಧ್ಯಮದಲ್ಲಿ ಸರಿಯಾದ ರೀತಿಯಲ್ಲಿ ಬಿಂಬಿತವಾಗುತ್ತಿಲ್ಲ ಎಂಬ ಆರೋಪಗಳಿವೆ.

ಹಾಗೆ ನೋಡಿದರೆ ಇಂಥ ದೃಶ್ಯಗಳು ಭಾರತೀಯ ಸಿನಿಮಾರಂಗದಲ್ಲಿ ಅಪರೂಪವೇನಲ್ಲ. ಈ ಮೊದಲು ರಾಜ್ ಕಪೂರ್ ಎಂಬ ಮಹಾನ್ ಕಲಾಕಾರ ರಾಮ್ ತೇರಿ ಗಂಗಾಮೈಲಿ ಸಿನಿಮಾದಲ್ಲಿ ಬಾಣಂತಿಯನ್ನು, ಮಗುವಿಗೆ ಹಾಲು ಕುಡಿಸುವ ದೃಶ್ಯವನ್ನು ಗ್ಲಾಮರೈಸ್ ಮಾಡಿ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದ್ದಾಗಿದೆ. ಮಗುವಿಗೆ ತಾಯಿಯೊಬ್ಬಳು ಹಾಲು ಕುಡಿಸುವ ದೃಶ್ಯವನ್ನು ಗ್ಲಾಮರೈಸ್ ಮಾಡಿದ್ದು ಸರಿಯಲ್ಲವೆಂದು ಅನೇಕರು ಆಕ್ಷೇಪಣೆ ಎತ್ತಿದಾಗ್ಯೂ, ಭಾರತೀಯ ಪ್ರೇಕ್ಷಕ ಪ್ರಭು ಅದನ್ನು ನೋಡಿ ಎಂಜಾಯ್ ಮಾಡಿದ್ದು ಈಗ ಇತಿಹಾಸ.

ತಾಯ್ತನವೆಂಬುದು ಭಾವುಕವಾಗಿಯೇ ನೋಡಬೇಕೆಂದೇನೂ ಇಲ್ಲ ನಿಜ. ಆದರೆ ತಾಯ್ತನವೆಂಬುದು ಹೆಣ್ಣೊಬ್ಬಳ ಘನತೆ ಕೂಡ. ಹೀಗೆ ಚಿತ್ರಿಸುವುದರಿಂದ ಅವಳ ಘನತೆಗೆ ಕುಂದು ಎಂಬುದು ನಮ್ಮ ಸಿನಿಮಾರಂಗಕ್ಕೆ ಅನಿಸಲೇ ಇಲ್ಲ. ಜೊತೆಗೆ ತಾಯ್ತನವೆಂಬುದು, ತಾಯೊಬ್ಬಳು ಮಗುವಿಗೆ ಹಾಲು ಕುಡಿಸುವುದೊಂದು ಗ್ಲಾಮರೈಸ್ ಮಾಡಬೇಕೆಂದು ನಮ್ಮಸಿನಿಮಾ ಜನಗಳಿಗೆ ಅನಿಸುತ್ತದೆ ಮತ್ತು ಇವನ್ನೆಲ್ಲ ಪ್ರಶ್ನಿಸುವ ಗೋಜಿಗೆ ನಮ್ಮ ಘನವೆತ್ತ ಸಮಾಜವೂ ಹೋಗದಿರುವುದಕ್ಕೆ ವಿಷಾದವಲ್ಲದೆ ಬೇರೇನು ಹೇಳಲು ಸಾಧ್ಯ?

ಇದು ಕೇವಲ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿಲ್ಲ. ಕೆಲವು ವರ್ಷಗಳ ಹಿಂದೆ ಮಲಯಾಳಂನ ಗೃಹಲಕ್ಷ್ಮೀ ಮ್ಯಾಗಜೈನ್  ಮುಖಪುಟದಲ್ಲಿ ಹಾಲು ಕುಡಿಸುತ್ತಿರುವ ರೂಪದರ್ಶಿಯೊಬ್ಬಳ ಪೋಟೋ ಪ್ರಕಟವಾಗಿತ್ತು. ಅದು ಎಲ್ಲೆಡೆ ವೈರಲ್ ಆಗಿತ್ತು ಕೂಡ. ಈ ಕುರಿತು ಪರ-ವಿರೋಧಗಳೆರಡೂ ವ್ಯಕ್ತವಾಗಿತ್ತು. ಮೊಡೆಲ್ ಜಿಲು ಜೋಸೆಫ್ ಇನ್ನೂ ಮದುವೆಯಾಗಿಲ್ಲ. ಅವಳು ತಾಯಿಯಾಗದೇ ಅದುಹೇಗೆ ಹಾಲು ಕುಡಿಸುತ್ತಿರುವ ಫೋಟೋ ಸಾದ್ಯ ಎಂಬುದು ವ್ಯಾಪಕವಾದ ಟೀಕೆಗೊಳಗಾಗಿತ್ತು. ಮಗುವಿಗೆ ತಾಯಿ ಎದೆಹಾಲು ಕುಡಿಸುವುದು ಅವಳ ಹಕ್ಕು. ಇದನ್ನು ಮುಚ್ಚಿ ಇಡಬೇಕಾದ್ದಿಲ್ಲ. ಸಾರ್ವಜನಿಕವಾಗಿ ಅವಳು ಹಾಲು ಕುಡಿಸಲು ಮಾಡುವ ಆಂದೋಲನ ಇದು ಎಂದು ಹೇಳಿತ್ತು. ತಾಯೊಬ್ಬಳು ಮಗುವಿಗೆ ಹಾಲೂಡಿಸುವುದು ಸಾರ್ವಜನಿಕ ಸ್ಥಳದಲ್ಲಿ ಹಾಲೂಡಿಸುವುದು ಇಂದಿಗೂ ಕಷ್ಟ. ಕದ್ದುಮುಚ್ಚಿ ಅವಳು ಕುಡಿಸುತ್ತಾಳೆ. ಇದು ಮಹಿಳೆಯ ಹಕ್ಕು, ಇದರಲ್ಲೊಂದು ಸಾಮಾಜಿಕವಾದ ಕಾಳಜಿ ಇದೆ. ಹಾಗಾಗಿ ಇದು ಸರಿ ಎಂದು ಸ್ವತಃ ಜಿಲು ಜೋಸೆಫ್ ಕೂಡ ಸಮರ್ಥಿಸಿಕೊಂಡಿದ್ದಳು. ಆದರೆ ಪ್ರಶ್ನೆ ಇರುವುದು ಇದಲ್ಲ. ಇಲ್ಲೊಬ್ಬ ರೂಪದರ್ಶಿ ಈ ಫೋಟೋಕ್ಕೆ ಮಾಡಲ್ ಆಗಿರುವುದಕ್ಕೆ ಇದು ಸಮಸ್ಯೆಯಾಗಲಿಲ್ಲ. ಆದರೆ ಇಂದಿಗೂ ಬಡ ಸಮುದಾಯದ ಹೆಣ್ಣುಮಗಳೊಬ್ಬಳು ಇಂಥದ್ದಕ್ಕೆ ಒಡ್ಡಿಕೊಂಡರೆ ಅವಳ ಬದುಕೂ ಗಂಗೂರ್ ಳಿಗಿಂತ ಭಿನ್ನವಾಗಿರುತ್ತದೆ ಎಂದು ಅನಿಸುವುದಿಲ್ಲ. ಜಾತಿ, ವರ್ಗ ವ್ಯವಸ್ಥೆ ಇಂದಿಗೂ ಬಲವಾಗಿ ಬೇರೂರಿರುವಂಥ ಭಾರತದಂಥ ದೇಶದಲ್ಲಿ ಮಹಿಳೆಯ ಕುರಿತಾದ ‘ಬೋಲ್ಡ್ ಸ್ಟೆಪ್’ಎನ್ನುವುದು ಯಾವರೀತಿ ಬೇಕಾದರೂ ತೆಗೆದುಕೊಳ್ಳಬಹುದು.

– ಭಾರತಿ ಹೆಗಡೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *