ಚಿತ್ರಭಾರತಿ / ಇದು ಪದ್ಮಾವತ್ ಅಲ್ಲ, ಅಲ್ಲಾವುದ್ದೀನ್ ಖಿಲ್ಜಿ – ಭಾರತಿ ಹೆಗಡೆ

 

ಬಿಡುಗಡೆಗೂ ಮುನ್ನವೇ ಪದ್ಮಾವತ್ ಸಿನಿಮಾ ಸಾಕಷ್ಟು ಚರ್ಚೆಗೊಳಗಾಗಿತ್ತು. ಅನೇಕ ವಿರೋಧಗಳನ್ನು ಎದುರಿಸಿ ಕಡೆಗೂ ಪ್ರದರ್ಶನಗೊಂಡ ಪದ್ಮಾವತ್ ಸಿನಿಮಾ ಸಂಪೂರ್ಣವಾಗಿ ಅಲ್ಲಾವುದ್ದೀನ್ ಖಿಲ್ಕಿಮಯವಾಗಿ ಅನಿಸಿದರೆ ಆಶ್ಚರ್ಯವಿಲ್ಲ.

ರಾಣಿ ಪದ್ಮಾವತಿ. ಅಪ್ರತಿಮ ಸೌಂದರ್ಯವತಿ. ಚರಿತ್ರೆಯ ತುಂಬಾ ಅವಳ ಸೌಂದರ್ಯ ಮತ್ತು ಅವಳು ಜೋಹರ್ ಹೋದ ಕುರಿತೇ ಹೆಚ್ಚು ಚರ್ಚೆಯಾಗಿದೆ. ಅವಳ ಸೌಂದರ್ಯವನ್ನು ಮೆಚ್ಚಿಯೇ ಮೇವಾಡದ ರಾಜ ರತನ್‍ಸಿಂಗ್ ಬಯಸಿ ಮದುವೆಯಾದದ್ದು. ನಂತರ ಯುದ್ಧದಲ್ಲಿ ಗಂಡ ತೀರಿಕೊಂಡಾಗ ಶತ್ರುಗಳ ಕೈಗೆ ಸಿಗಕೂಡದೆಂದು ತನ್ನನ್ನೇ ಆಗ್ನಿಗೆ ಆಹುತಿ ಮಾಡಿಕೊಂಡವಳು. ಈ ಕಾರಣಕ್ಕಾಗಿಯೇ ಈ ದೇಶದ ಇತಿಹಾಸದಲ್ಲಿ ತನ್ನದೇ ಆದ ಭಾವುಕ ಸ್ಥಾನವನ್ನು ಪಡೆದುಕೊಂಡವಳು ಪದ್ಮಾವತಿ.

ಹಾಗಾಗಿ ಎಂಥವರಿಗೂ ಪದ್ಮಾವತಿಯೆಂದರೆ ಥಟ್ಟನೆ ನೆನಪಾಗುವುದು ಒಂದು ಅವಳ ಸೌಂದರ್ಯ, ಮತ್ತೊಂದು ಅವಳ ಆತ್ಮಾಹುತಿ. ಇದೇ ಕತೆಯಾಧಾರಿತ ಕಳೆದ ವರ್ಷ ಬಿಡುಗಡೆಯಾದ ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತ್ ಬಿಡುಗಡೆಗೂ ಮುನ್ನವೇ ಸಾಕಷ್ಟು ವಿರೋಧ ಎದುರಿಸಬೇಕಾಗಿ ಬಂತು. ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಪದ್ಮಾವತಿಯ ರೋಮ್ಯಾಂಟಿಕ್ ದೃಶ್ಯಗಳಿವೆ. ಹಾಗಾಗಿ ಸಿನಿಮಾ ಪ್ರದರ್ಶನವನ್ನು ನಿಷೇಧಿಸಬೇಕು, ಇದು ರಜಪೂತರಿಗೆ ಅವಮಾನಿಸುವಹಾಗಿದೆ,  ಎಂದೆಲ್ಲ ಪ್ರತಿಭಟನೆಗಳು ಎದ್ದವು. ಒಂದು ಸಂಘಟನೆಯಂತೂ ಪದ್ಮಾವತಿ ಪಾತ್ರಧಾರಿ ದೀಪಿಕಾ ಪಡುಕೋಣೆಯ ಮೂಗು ಕತ್ತರಿಸಬೇಕೆಂದೂ ಹೇಳಿಕೆ ನೀಡಿತು.

ಇದರಲ್ಲಿ ಅಂಥ ಯಾವ ದೃಶ್ಯಗಳೂ ಇಲ್ಲ ಎಂದು ಸ್ವತಃ ನಿರ್ದೇಶಕ, ನಾಯಕ, ನಾಯಕಿಯರಾದ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಸೇರಿದಂತೆ ಅನೇಕರು ಇದಕ್ಕೆ ಸಮಜಾಯಿಷಿ ನೀಡಿದರು. ಅಂತೂ ಇದು ಪ್ರದರ್ಶನಗೊಂಡಾಗ ಇದರ ವಿವಾದಕ್ಕಾಗಿಯೇ ಈ ಸಿನಿಮಾವನ್ನು ನೋಡಿದವರು ಸಾಕಷ್ಟು ಮಂದಿ.

ಸಿನಿಮಾ ನೋಡಿದ ಮೇಲೆ ಅನಿಸಿದ್ದು, ಈ ಸಿನಿಮಾಕ್ಕೆ ಪದ್ಮಾವತ್ ಎಂದು ಹೆಸರಿಡುವುದರ ಬದಲು ಅಲ್ಲಾವುದ್ದೀನ್ ಖಿಲ್ಜಿ ಎಂದೇ ಇಡಬಹುದಿತ್ತು ಎಂದು.

ಅಷ್ಟರ ಮಟ್ಟಿಗೆ ಇಡೀ ಸಿನಿಮಾವನ್ನು ಅಲ್ಲಾವುದ್ದೀನ್ ಖಿಲ್ಜಿ ಪಾತ್ರಧಾರಿ ರಣವೀರ್ ಸಿಂಗ್ ಆವರಿಸಿಕೊಳ್ಳುತ್ತಾರೆ. ಎಷ್ಟೆಂದರೆ ಸಿನಿಮಾದ ನಾಯಕ ರತನ್ ಸಿಂಗ್ ಮತ್ತು ನಾಯಕಿ ಪದ್ಮಾವತಿ ಇವರ ನೆನಪಿಗಿಂತಲೂ ಖಿಲ್ಜಿಯೇ ನೆನಪಿನಲ್ಲುಳಿಯುತ್ತಾರೆ. ಅದಕ್ಕೆ ಪದ್ಮಾವತ್‍ ಎನ್ನುವುದರ ಬದಲು ಅಲ್ಲಾವುದ್ದೀನ್ ಖಿಲ್ಜಿ ಎಂದೇ ಹೆಸರಿಡಬಹುದಿತ್ತು ಎನ್ನುವಷ್ಟರ ಮಟ್ಟಿಗೆ ಅವರು ವಿಜೃಂಭಿಸಿದ್ದಾರೆ. ಸಮಯ ಸಾಧಕತನ, ಮೋಸ, ಧಗ, ಕಾಮ ತೃಷೆ, ಸಲಿಂಗ ಕಾಮ…ಎಲ್ಲವನ್ನೂ ರಣವೀರ್ ಸಿಂಗ್ ನೈಜವಾಗಿ ನಟಿಸಿದ್ದಾರೆ. ಅವರ ಮುಂದೆ ರತನ್‍ಸಿಂಗ್ ಪೇಲವ ಅನಿಸಿಬಿಡುತ್ತಾರೆ. ಅಷ್ಟೇ ಏಕೆ ಪದ್ಮಾವತಿಯಂಥ ಪದ್ಮಾವತಿಯೂ ಅವನ ಕ್ರೌರ್ಯದ ಮುಂದೆ ಪೇಲವ ಅನಿಸಿಬಿಡುತ್ತಾಳೆ.

ಜಲಾಲುದ್ದೀನ್ ಆಸ್ತಾನಕ್ಕೆ ಆಸ್ಟ್ರಿಚ್ ಪಕ್ಷಿಯೊಂದನ್ನು ಕರೆತರುವ ಮೂಲಕ ಅಲ್ಲಾವುದ್ದೀನ್ ಖಿಲ್ಜಿಯ ಪ್ರವೇಶವಾಗುತ್ತದೆ. ಅವನ ಪರಾಕ್ರಮ, ಧೈರ್ಯ, ಸಾಹಸವನ್ನು ಮೆಚ್ಚಿ ತನ್ನ ಆಸ್ಥಾನದಲ್ಲಿರಿಸಿಕೊಳ್ಳುವ ಬಹುದೊಡ್ಡ ತಪ್ಪು ಮಾಡಿದ್ದಕ್ಕೆ ಮುಂದೆ ಜಲಾಲುದ್ದೀನ್ ತೆರಬೇಕಾಗಿದ್ದು ತನ್ನದೇ ಪ್ರಾಣವನ್ನು. ಆಲಾಲುದ್ದೀನ್‍ನ್ನು ಕೊಂದು ಸಿಂಹಾಸನವನ್ನೇರುವ ಅಲ್ಲಾವುದ್ದೀನ್ ಖಿಲ್ಜಿಗೆ ಪ್ರಪಂಚವನ್ನು ಗೆಲ್ಲುವ ಬಯಕೆ.

ಆದರೆ ಅಲ್ಲಾವುದ್ದೀನ್ ಅಷ್ಟೇ ಕ್ರೂರಿ, ಕಾಮಾಂಧ. ಹೆಣ್ಣು ಗಂಡುಗಳೆಂಬ ವ್ಯತ್ಯಾಸವೇ ಗೊತ್ತಿಲ್ಲದ ಅವನಿಗೆ ಕಾಮ ತೃಷೆ ತೀರಿಸಿಕೊಳ್ಳಲು ಯಾರಾದರೂ ಆದೀತು. ಈ ಕಾಮಕ್ಕೆ ಬಲಿಯಾದವರೆಷ್ಟೋ. ಸ್ವತಃ ಅವನ ಹೆಂಡತಿಯೇ ಬಲಿಯಾದವಳು. ಅವನ ಮಾವನ ಮನೆಯ ಸಮಾರಂಭ ಕೂಟದಲ್ಲಿ ಹೆಣ್ಣೊಬ್ಬಳನ್ನು ಭೋಗಿಸುತ್ತಿರುವ ಸಮಯದಲ್ಲಿ ರಾಜ ಜಲಾಲುದ್ದೀನ್ ಕರೆಯುತ್ತಿದ್ದಾನೆಂದು ಸಂದೇಶ ತಂದ ದೂತನನ್ನೇ ಸಾಯಿಸಿ, ಜೊತೆಯಲ್ಲಿದ್ದ ಹೆಣ್ಣನ್ನೂ ಭೋಗಿಸಿ, ನಂತರ ಸಾಯಿಸುತ್ತಾನೆ. ಇಂಥ ಕ್ರೂರಿ, ಕಾಮಾಂಧ ಖಿಲ್ಜಿ ಎದುರು ಹಿಂದೂಸ್ತಾನದ ರಾಣಿ ಪದ್ಮಾವತಿಯ ಅಪ್ರತಿಮ ಸೌಂದರ್ಯವನ್ನು ವರ್ಣಿಸಿ ಹೇಳಲಾಗುತ್ತದೆ. ಅದೂ ಮೇವಾಡದ ರಾಜ ರತನ್‍ಸಿಂಗ್‍ನ ಆಸ್ಥಾನದಲ್ಲಿದ್ದ ಪುರೋಹಿತನೊಬ್ಬ ಪದ್ಮಾವತಿಯ ಮೇಲೆ ಕಣ್ಣು ಹಾಕಿ, ಅವಳಿಂದ ಅವಮಾನಿತನಾಗಿ ಖಿಲ್ಜಿಯ ಪಾಳ್ಯದಲ್ಲಿ ಸೇರಿಕೊಂಡು ಎಷ್ಟು ಗೆದ್ದರೇನು, ಸಾಮ್ರಾಜ್ಯ ವಿಸ್ತರಿಸಿದರೇನು, ಒಬ್ಬ ಪದ್ಮಾವತಿಯನ್ನು ಪಡೆಯದಿದ್ದರೆ ನಿನ್ನೆಲ್ಲ ವಿಜಯವೂ ವ್ಯರ್ಥ ಎಂಬಂತೆ ಅವಳ ಸೌಂದರ್ಯವನ್ನು ವರ್ಣಿಸುತ್ತಾನೆ.

ಮೊದಲೇ ಕಾಮಾಂಧ, ಇಷ್ಟೆಲ್ಲ ವರ್ಣಿಸಿದ ಮೇಲೆ ಖಿಲ್ಜಿಗೆ ಪದ್ಮಾವತಿಯನ್ನು ನೋಡದೆಯೇ ಅವಳ ಮೇಲೆ ಮೋಹ ಬೆಳೆಯುತ್ತದೆ. ಅದಕ್ಕಾಗಿಯೇ ಒಮ್ಮೆಯಾದರೂ ಪದ್ಮಾವತಿಯನ್ನು ತೋರಿಸು ಎಂದು ರಾಜಾ ರತನ್‍ಸಿಂಗ್‍ಗೆ ಸಂದೇಶ ಕಳಿಸುತ್ತಾನೆ. ಕೇಳಿದ್ದು ದೆಹಲಿಯ ದೊರೆ. ಕೇಳಿದ್ದು ಹೆಂಡತಿಯನ್ನು. ಈ ಸಂದಿಗ್ಧತೆಯಲ್ಲಿ ಕೊನೆಗೂ ಒಪ್ಪಿಗೆ ಸೂಚಿಸಿ ಖಿಲ್ಜಿಯನ್ನು ಬರಮಾಡಿಕೊಂಡು, ಪದ್ಮಿನಿಯನ್ನು ಕನ್ನಡಿಯಲ್ಲಿ ಪ್ರತಿಬಿಂಬವನ್ನು ಒಂದು ಕ್ಷಣವಷ್ಟೇ ತೋರಿಸುತ್ತಾನೆ. ಆ ಕ್ಷಣಮಾತ್ರದ ದೃಶ್ಯದಿಂದಲೇ ಅವಳ ಸೌಂದರ್ಯವನ್ನು ನೋಡಿದ ಖಿಲ್ಜಿ, ಪದ್ಮಾವತಿಯನ್ನು ಪಡೆಯಲೇಬೇಕೆಂಬ ಹಠಕ್ಕೆ ಬಿದ್ದುಬಿಟ್ಟ. ರತನ್‍ಸಿಂಗ್‍ನನ್ನು ಸೆರೆಯಲ್ಲಿಟ್ಟು, ಪದ್ಮಾವತಿ ತನ್ನವಳಾಗದಿದ್ದರೆ ರತ್ನಸಿಂಗ್‍ನ ತಲೆ ಕಡಿಯುವುದಾಗಿ ಹೇಳಿ ಕಳಿಸುತ್ತಾನೆ. ಇಲ್ಲಿ ಪದ್ಮಾವತಿ ಒಂದು ತಂತ್ರವನ್ನು ರೂಪಿಸಿದಳು. ತಾನೊಬ್ಬಳೇ ಅಲ್ಲ, ತನ್ನ 700 ಸಖಿಯರೊಂದಿಗೆ ಬರುತ್ತೇನೆಂದು ಹೇಳಿಕಳಿಸಿದಳು. ಆದರೆ ಅಲ್ಲಿ ಸೈನಿಕರ ಕಾವಲಿರಕೂಡದೆಂದು ಷರತ್ತು ವಿಧಿಸುತ್ತಾಳೆ. ಅವಳ ಮೋಹದ ಬಲೆಯಲ್ಲಿದ್ದ ಖಿಲ್ಜಿ ಪದ್ಮಾವತಿಯ ಷರತ್ತುಗಳಿಗೆ ಒಪ್ಪುತ್ತಾನೆ. ಆದರೆ ಪದ್ಮಾವತಿ ಎಲ್ಲ ಪಲ್ಲಕ್ಕಿಯಲ್ಲೂ ಒಬ್ಬೊಬ್ಬ ಸೈನಿಕರನ್ನಿರಿಸಿ ಕಳಿಸಿದಳು. ಕಡೆಗೂ ರತನ್‍ಸಿಂಗ್‍ನನ್ನು ಬಿಡಿಸಿ ತರುವಲ್ಲಿ ಯಶಸ್ವಿಯಾಗುತ್ತಾಳೆ.

ಇದರಿಂದ ಅವಮಾನಿತನಾದ ಖಿಲ್ಜಿ ಮೇವಾಡದ ಮೇಲೆ ದಂಡೆತ್ತಿ ಬರುತ್ತಾನೆ. ಮೇವಾಡದ ಚಿತ್ತೋರ್‍ಘಡ್‍ನ ಕೋಟೆಯ ಒಳಗಿಂದಲೇ ಸಾಕಷ್ಟು ಕಾಲ ಯುದ್ಧ ಮಾಡಿದರೂ ರತನ್‍ಸಿಂಗ್‍ನ ಸಹಾಯಕ್ಕೆ ಯಾರೊಬ್ಬ ರಾಜರೂ ಬಾರದೆ ಕಡೆಗೆ ಮಡಿಯಬೇಕಾಗುತ್ತದೆ. ಅವ ಮಡಿದ ಸುದ್ದಿ ತಿಳಿದಕೂಡಲೇ ಕೋಟೆಯೊಳಗೆ ಇದ್ದ ಪದ್ಮಿನಿ ಮತ್ತವಳ ಸಖಿಯರು ವಿಶಾಲವಾದ ಅಗ್ನಿಕುಂಡಕ್ಕೆ ಧುಮುಕಿ ಜೋಹರ್ ಅನುಸರಿಸುತ್ತಾರೆ. ಕೋಟೆಯನ್ನು ಗೆದ್ದ ವಿಜಯೋತ್ಸಾಹದಲ್ಲಿ ಪದ್ಮಾವತಿಯನ್ನು ಇನ್ನೇನು ಪಡೆದೇಬಿಟ್ಟೆ ಎಂಬ ಹಮ್ಮಿನಲ್ಲಿ ಕೋಟೆಯೊಳಕ್ಕೆ ನುಗ್ಗಿದರೆ ಖಿಲ್ಜಿಗೆ ಸಿಕ್ಕಿದ್ದು ಬರೀ ಬೂದಿಯಷ್ಟೇ.

ಈ ಸಿನಿಮಾ ನೋಡುವುದಕ್ಕಿಂತ ಮುಂಚೆ ಶತ್ರುಗಳ ಕೈಗೆ ಸಿಲುಕಬಾರದೆಂದು ಪದ್ಮಾವತಿ ಜೋಹರ್ ಅನುಸರಿಸಿದರೂ, ಎಲ್ಲೋ ಒಂದು ಕಡೆ ಛೇ..ಅವಳು ಹಾಗೆಲ್ಲ ಸಾಯಬಾರದಿತ್ತು, ಆಗಿನ ಕಾಲದ ಅರಮನೆಯ ಸ್ತ್ರೀಯರ ಸಂಕಟಗಳು ಏನೆಲ್ಲ ಇದ್ದವಪ್ಪಾ ಎಂಬ ನಿಟ್ಟುಸಿರು ಹೊರಬರುತ್ತಿತ್ತು. ಆದರೆ ಈ ಸಿನಿಮಾ ನೋಡಿದ ಮೇಲೆ, ಅಲ್ಲಾವುದ್ದೀನ್ ಖಿಲ್ಜಿಯ ಅತಿಭಯಂಕರ ಕ್ರೌರ್ಯ, ಆ ಕಾಮಾಂಧತೆ, ಕೊಲೆಗಡುಕತನ ಇವೆಲ್ಲವನ್ನೂ ನೋಡಿದಾಗ, ಸಿನಿಮಾದ ಪ್ರತಿ ಹಂತದಲ್ಲೂ ಇವನ ಕೈಗೆ ಪದ್ಮಾವತಿ ಸಿಗದೇ ಇರಲಿ ಎಂದೇ ಕೇಳಿಕೊಳ್ಳುತ್ತೇವೆ. ಅಷ್ಟೇ ಅಲ್ಲ ಇನ್ನೇನು ಪದ್ಮಾವತಿಯನ್ನು ಗೆದ್ದೇಬಿಟ್ಟೆ ಎಂಬ ಹಮ್ಮಿನಲ್ಲಿ ಓಡಿಬರುವ ಅವನಿಗೆ ಪದ್ಮಾವತಿಯ ಆಹುತಿ ತಡೆಯಲಾರದೆ ಕಿರುಚುತ್ತಾ ಬಾಗಿಲಿಗೆ ಕೈಯ್ಯನ್ನು ಕುಟ್ಟುವಾಗ, ಸರಿಯಾಯಿತು ಇವನಿಗೆ, ಪದ್ಮಾವತಿ ಮಾಡಿದ್ದು ಸರಿಯೇ ಎಂದೆನಿಸಿಬಿಡುತ್ತದೆ.

ಅಂದರೆ ಇಡೀ ಸಿನಿಮಾದಲ್ಲಿ ಆ ಮಟ್ಟಿಗೆ ಖಿಲ್ಜಿಯ ಕ್ರೌರ್ಯದ ಅಟ್ಟಹಾಸ ಮೆರೆಯುತ್ತದೆ. ಅವನ ಆ ಅಟ್ಟಹಾಸದ ಮುಂದೆ, ಆ ಅಭಿನಯದ ಮುಂದೆ ಉಳಿದೆಲ್ಲವೂ ಪಕ್ಕಕ್ಕೆ ಸರಿದುಬಿಡುತ್ತದೆ. ಹಾಗಾಗಿಯೇ ಈ ಚಿತ್ರಕ್ಕೆ ಪದ್ಮಾವತ್ ಬದಲು, ‘ಅಲ್ಲಾವುದ್ದೀನ್ ಖಿಲ್ಜಿ’ ಎಂಬ ಹೆಸರೇ ಹೆಚ್ಚು ಸೂಕ್ತವಾಗುತ್ತಿತ್ತು.

ಇನ್ನು 2018ರಲ್ಲಿ ಬಿಡುಗಡೆಯಾದ ಪದ್ಮಾವತ್ ಸಿನಿಮಾಕ್ಕೂ, 1986ರಲ್ಲಿ ಬಿಡುಗಡೆಯಾದ ಕೇತನ್‍ಮೆಹ್ತಾ ಅವರ ಮಿರ್ಚ್ ಮಸಾಲಾ ಸಿನಿಮಾಕ್ಕೂ ಕೆಲವು ಅಂಶಗಳಲ್ಲಿ ಸಾಮ್ಯ ಇದೆ ಎಂಬ ವಿಮರ್ಶೆಯೂ ಕೇಳಿಬರುತ್ತಿದೆ.

16ನೇ ಶತಮಾನದ ಸೂಫಿ ಕವಿತೆಯನ್ನು ಆಧರಿಸಿದ ‘ಪದ್ಮಾವತ್’,  ಅನೇಕ ಸಂಘರ್ಷಗಳಿಗೆ ಕಾರಣವಾಗಿತ್ತು.

ಮೇವಾರ್‍ನ ರಜಪೂತ ರಾಜ ರತನ್‍ಸಿಂಗ್‍ನನ್ನ ಸಿಂಘಾಲ್ ರಾಜಕುಮಾರಿ ಪದ್ಮಾವತಿ ಪ್ರೀತಿಸಿ ಮದುವೆಯಾದ ಕತೆಯನ್ನು ಪದ್ಮಾವತಿ ಹೇಳುತ್ತದೆ. ಅವಳ ಸೌಂದರ್ಯಕ್ಕೆ ಮರುಳಾಗಿ ಈಗಾಗಲೇ ಮದುವೆಯಾಗಿದ್ದರೂ ಮತ್ತೊಂದು ಮಾತನಾಡದೇ ಪದ್ಮಾವತಿಯನ್ನು ಮದುವೆಯಾಗುತ್ತಾನೆ. ಆದರೆ ಪದ್ಮಾವತಿಯ ಆತ್ಮಾಹುತಿ ಎಂಬುದು ರಜಪೂತರ ದೊಡ್ಡ ಗೆಲವು ಎಂದು ಇತಿಹಾಸದುದ್ದಕ್ಕೂ ವೈಭವೀಕರಿಸಿ ಹೇಳಲಾಗುತ್ತದೆ.

ಆದರೆ ‘ಮಿರ್ಚ್‍ಮಸಾಲಾ’ ಸ್ವಾತಂತ್ರ್ಯಪೂರ್ವದ ಗುಜರಾತ್‍ನ ಹಳ್ಳಿಯೊಂದರ ಕತೆಯಾಗಿದ್ದು, ಬ್ರಿಟಿಶ್ ಅಧಿಕಾರಿಯ ದೌರ್ಜನ್ಯಕ್ಕೆ ಒಳಗಾಗಿ ಅದರಿಂದ ತಪ್ಪಿಸಿಕೊಳ್ಳುವ ಹೆಣ್ಣೊಬ್ಬಳ ಕತೆ. ತೆರಿಗೆ ಸಂಗ್ರಹಿಸುವ ಸುಬೇದಾರ್ ಕ್ರೂರಿ. ಅವನ ಕಣ್ಣು ಸೋನೂಬಾಯಿ ಎಂಬ ಮಹಿಳೆಯ ಮೇಲೆ ಬೀಳುತ್ತದೆ. ಮೆಣಸಿನ ಕಾಯಿ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸೋನೂಬಾಯಿ ಅನಕ್ಷರಸ್ಥೆಯಾದರೂ ದಿಟ್ಟ ಹೆಣ್ಣು.  ಅವನ ಯಾವ ಆಮಿಷಕ್ಕೂ ಬಲಿಯಾಗದೆ, ಅಟ್ಟಿಸಿಕೊಂಡು ಬರುವ ಅವನ ಸೈನಿಕರಿಂದ ತಪ್ಪಿಸಿಕೊಂಡ ಸೋನುಬಾಯಿ ಸೀದಾ ಕಾರ್ಖಾನೆಗೆ ಹೋಗಿ ಅಡಗುತ್ತಾಳೆ. ಕಡೆಯಲ್ಲಿ ಸುಬೇದಾರ್‍ನಿಗೆ ಅಲ್ಲಿರುವ ಹೆಣ್ಣುಮಕ್ಕಳೆಲ್ಲ ಮೆಣಸಿನ ಪುಡಿಯನ್ನು ಎರಚಿ, ಅವ ಉರಿ ತಡೆಯಲಾರದೆ ಸಾಯುತ್ತಾನೆ. ಸೋನುಬಾಯಿ ಗೆಲ್ಲುತ್ತಾಳೆ.

ಪದ್ಮಾವತಿಯಾಗಲಿ, ಮಿರ್ಚ್‍ಮಸಾಲಾ ಆಗಲಿ, ಎರಡರಲ್ಲೂ ಇರುವುದು ಒಂದೇ ಎಳೆ. ಎರಡರಲ್ಲೂ ಆಳವಾಗಿ ಬೇರೂರಿರುವ ಪಿತೃಪ್ರಧಾನ ವ್ಯವಸ್ಥೆಯ ವಿರುದ್ಧ ಇರುವ ಧ್ವನಿ ಇದೆ ಎಂದು ಹೇಳಲಾಗುತ್ತದೆ. ಸೌಂದರ್ಯವನ್ನು ರಹಸ್ಯವಾಗಿಡಬೇಕು ಮತ್ತು ಗೌರವದ ಹೆಸರಿನಲ್ಲಿ, ಸಂಸ್ಕೃತಿಯ ಹೆಸರಿನಲ್ಲಿ ಹೇಗೆ ರಜಪೂತರು ಮಹಿಳೆಯರನ್ನು ತಮ್ಮ  ಹತೋಟಿಯಲ್ಲಿಟ್ಟುಕೊಳ್ಳುತ್ತಾರೆ ಎಂಬುದರ ಕುರಿತು ಪದ್ಮಾವತ್ ಹೇಳಿದರೆ, ಮಿರ್ಚ್ ಮಸಾಲಾದಲ್ಲಿ ನೇರವಾಗಿ ಅವಳೊಂದಿಗೆ ಲೈಂಗಿಕತೆಯ ಬಯಕೆಯನ್ನು ಈಡೇರಿಸಿಕೊಳ್ಳಲು ಹೊರಡುವ ಸುಬೇದಾರನಿಗೆ ಕಡೆಗೂ ಅವಳು ದಕ್ಕುವುದಿಲ್ಲ.  ಅಷ್ಟೇ ಅಲ್ಲ, ಇಡೀ ಸಿನಿಮಾದಲ್ಲಿ ಹೆಣ್ಣಿನ ಶೋಷಣೆಯ ವಿರುದ್ಧ ನಿಲ್ಲುವ ಮಹಿಳೆಯೊಬ್ಬಳ ದಿಟ್ಟತನ ಕಂಡರೆ, ಜೊತೆಯಲ್ಲಿ ಮಹಿಳಾ ಶಿಕ್ಷಣದ ಕುರಿತು ಸಿನಿಮಾದಲ್ಲಿ ಪ್ರಸ್ತಾಪಿಸಲಾಗಿದೆ.

ಆದರೆ ಪದ್ಮಾವತ್‍ನಲ್ಲಿನ ಹಿಂಸೆಯ ವೈಭವೀಕರಣ ಎಷ್ಟಿದೆಯೆಂದರೆ ಪದ್ಮಾವತಿಯ ಜೋಹರ್‍ಗಿಂತಲೂ ಖಿಲ್ಜಿಯ ಹಿಂಸೆಯೇ ನೆನಪಿನಲ್ಲುಳಿಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಆ ಕೈಗೆ ಸಿಕ್ಕ ಶತ್ರುರಾಜರ ಮಡದಿಯರನ್ನು ಯಾವರೀತಿ ನಡೆಸಿಕೊಳ್ಳುತ್ತಿದ್ದರು ಎಂಬುದನ್ನು ನೆನೆಸಿಕೊಂಡರೇ ಮೈ ಝಂ ಎನಿಸುತ್ತದೆ.

ಸಿನಿಮಾದಲ್ಲಿ ರತನ್‍ಸಿಂಗ್ ಹೀರೋ, ಪದ್ಮಾವತಿ ಹೀರೋಯಿನ್ ಮತ್ತು ಅಲ್ಲಾವುದ್ದೀನ್ ಖಿಲ್ಜಿ ವಿಲನ್. ಆದರೆ ಅದು ಹಾಗಾಗಿಲ್ಲ. ಇಡೀ ಸಿನಿಮಾವನ್ನು ಖಿಲ್ಜಿಯೇ ಆವರಿಸಿಕೊಂಡುಬಿಡುತ್ತಾನೆ.

ಆದರೆ ಈ ಸಿನಿಮಾ ತುಂಬ ಸೂಕ್ಷ್ಮವಾದದ್ದು. ರಾಣಿ ಪದ್ಮಿನಿ ಭಾರತೀಯರ ಹೃದಯದಲ್ಲಿ ನೆಲೆಸಿದವಳು. ಈ ಸಂಸ್ಕೃತಿಯ ಪ್ರತೀಕವೆಂಬಂತೆ ಬಿಂಬಿತವಾದವಳು. ಒಬ್ಬ ಮುಸ್ಲಿಂ ರಾಜ, ಮತ್ತು ಪದ್ಮಿನಿಯ ಕತೆಯನ್ನು ತರುವಾಗ ಎಲ್ಲಿಯೂ ಇತಿಹಾಸಕ್ಕೆ ಧಕ್ಕೆಯಾಗದಂತೆ, ಎಲ್ಲಿಯೂ ಯಾರಿಗೂ ನೋವಾಗದಂತೆ ತರುವುದು ದೊಡ್ಡ ಸವಾಲು. ಆ ಸವಾಲನ್ನು ಬನ್ಸಾಲಿ ಸಮರ್ಥವಾಗಿ ಎದುರಿಸಿದ್ದಾರೆಂಬುದರಲ್ಲಿ ಅನುಮಾನವಿಲ್ಲ. ತುಂಬ ಸೂಕ್ಷ್ಮವಾಗಿ ತಂದಿದ್ದಾರೆ. ಈ ಕತೆಯಲ್ಲಿ ಯಾವುದೇ ರೀತಿಯ ಆಧುನಿಕ ಹೊಳಹುಗಳನ್ನು ತರಲು ಸಾಧ್ಯವಿಲ್ಲ. ಏನೂ ಇಲ್ಲದಿದ್ದರೂ ಬಿಡುಗಡೆಗೆ ಅಪಾರ ವಿರೋಧ ವ್ಯಕ್ತವಾಗಿತ್ತು. ಆದರೆ ಅಷ್ಟೊಂದು ಹಿಂಸೆಯ ವೈಭವೀಕರಣವೂ ಬೇಡವಿತ್ತೇನೋ…? ಎಂದೆನಿಸದೇ ಇರದು.

ಭಾರತಿ ಹೆಗಡೆ

 

 

 

 

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *