ಚಿತ್ರಭಾರತಿ/ ಅವರೆಲ್ಲ ಸಾಯುವುದಕ್ಕಾಗಿಯೇ ಇರುವವರೇ..? – ಭಾರತಿ ಹೆಗಡೆ

ಸಾಮಾಜಿಕ ಪಿಡುಗಾದ ದೇವದಾಸಿ ಪದ್ಧತಿಯನ್ನು 60ರ ದಶಕದಲ್ಲೇ ಪ್ರಶ್ನಿಸಿ ಕಾದಂಬರಿ ಬರೆದರು ಎಂ.ಕೆ.ಇಂದಿರಾ. ನಂತರ ಅದನ್ನು ಸಿನಿಮಾ ಮಾಡಿದವರು ಖ್ಯಾತ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್. ಆ ಕಾಲದಿಂದ ಈ ಕಾಲದವರೆಗೂ ದೇವದಾಸಿ ಎಂದರೆ, ತನ್ನದಲ್ಲದ ತಪ್ಪಿಗೆ ಅತ್ಯಾಚಾರಕ್ಕೊಳಗಾದರೆ, ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿದರೆ ಅಂಥ ಮಹಿಳೆಯರಿಗೆ ಸಾವೇ ಗತಿಯೇ..? 

ಅವಳು ತೊಟ್ಟಿಲಲ್ಲಿರುವಾಗಲೇ ಕೇಳಿದ್ದು ಗೆಜ್ಜೆ ಶಬ್ದ. ಅವಳಿಗೆ ಲಾಲಿ ಹಾಡೆಂದರೆ ಗೆಜ್ಜೆಗಳ ನಿನಾದ. ಅವಳಜ್ಜಿ ತೊಟ್ಟಿಲ ಬಳಿ ಬಂದು ಹೆಣ್ಣುಮಗುವೆಂದು ಗೆಜ್ಜೆ ತಟ್ಟಿ ಸಂಭ್ರಮಿಸಿದರೆ, ಅಮ್ಮ ಮಾತ್ರ ಯಾವುದೋ ಕರ್ಕಶ ಶಬ್ದ ಕೇಳಿದಂತೆ ಬೆಚ್ಚಿ ಬೀಳುತ್ತಾಳೆ. ಅಮ್ಮ ನಿಲ್ಲಿಸುವಂತೆ ತಡೆದರೆ, ಅಜ್ಜಿಗೆ ಗೆಜ್ಜೆ ಶಬ್ದ ಕರ್ಣಾನಂದವಾದದ್ದು. ಅಂಥ ಕರ್ಕಶ ಶಬ್ದವನ್ನು ಕೇಳುತ್ತಲೇ ಬೆಳೆದ ಅಪರ್ಣಾಳಿಗೆ ಅದು ಇಷ್ಟವಿಲ್ಲದ ವೃತ್ತಿ. ಸಮಾಜದ ಒತ್ತಡಕ್ಕೆ ಸಿಲುಕುತ್ತಾಳೆ. ಗೆಜ್ಜೆ ಕಟ್ಟಿಸಿಕೊಳ್ಳುತ್ತಾಳೆ. ಮಗಳು ಚಂದ್ರಾಳಿಗೂ ಗೆಜ್ಜೆ ಕಟ್ಟಿಸುವ ಆಲೋಚನೆ ಅಜ್ಜಿಗೆ, ಆದರೆ ಅಮ್ಮನಿಗೆ ಮಗಳನ್ನು ಸಂಸಾರಿಯಾಗಿಸುವ ಚಿಂತೆ. ಮಗಳು ಈ ಗೆಜ್ಜೆ, ಸಂಸಾರ ಯಾವುದೂ ದಕ್ಕದೆ ದೊಡ್ಡವಳಾಗುತ್ತಾಳೆ. ಓದುತ್ತಾಳೆ. ಪ್ರೇಮಿಸುತ್ತಾಳೆ.

ಖ್ಯಾತ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ ಅವರ ಗೆಜ್ಜೆಪೂಜೆ ಕಾದಂಬರಿಯನ್ನು ಸಿನಿಮಾ ಮಾಡಿದ್ದು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್. 1969ರಲ್ಲಿ ತೆರೆಕಂಡ ಈ ಸಿನಿಮಾ ತಮಿಳು, ತೆಲಗು, ಹಿಂದಿ ಭಾಷೆಗಳಲ್ಲೂ ತೆರೆಕಾಣಲು ಪ್ರೇರೇಪಿಸಿತು. ಬಹು ಚರ್ಚಿತವಾದ ಸಿನಿಮಾ ಕೂಡ. ಅಷ್ಟಲ್ಲದೆ ರಾಷ್ಟ್ರ, ರಾಜ್ಯ ಪ್ರಶಸ್ತಿಗಳೆಲ್ಲವನ್ನೂ ಪಡೆದುಕೊಂಡ ಸಿನಿಮಾ.

60 -70ರ ದಶಕದಲ್ಲಿ ದೇವದಾಸಿಗಳ ಬದುಕನ್ನು ಬಿಚ್ಚಿಡುವಂಥ ಪ್ರಯತ್ನವೇ ಕ್ರಾಂತಿಕಾರಕವಾಗಿತ್ತು. ಹಿರಿಯ ನಟಿ ಲೀಲಾವತಿ ಅಮ್ಮನಾಗಿ ಮಾಡಿದ ಮೊದಲ ಸಿನಿಮಾ ಕೂಡ ಇದು. ಅಷ್ಟೊತ್ತಿಗೆ ಲೀಲಾವತಿ ನಾಯಕಿ ಆಗಿ ಅಭಿನಯಿಸಿ ಚಿತ್ರರಂಗದಲ್ಲಿ ಮೂಲೆಗುಂಪಾಗಿದ್ದರು. ಆಗ ಅವರು ನಿಜವಾಗಿಯೂ ತಾಯಿ ಕೂಡ ಆಗಿದ್ದರು. “ಹೇಗೂ ತಾಯಿ ಆಗಿದ್ದೀರ. ಈಗ ತಾಯಿ ಪಾತ್ರವನ್ನೇ ಅಭಿನಯಿಸಿ’ ಎಂದು ಪುಟ್ಟಣ್ಣ ಅವರಿಂದ ಬಂದ ಆಹ್ವಾನವನ್ನು ತಿರಸ್ಕರಿಸುವ ಪರಿಸ್ಥಿತಿಯಲ್ಲಿ ಅಂದು ಲೀಲಾವತಿ ಇರಲಿಲ್ಲ. ಅಲ್ಲಿಂದ ಅವರು ಕಾಯಂ ಆಗಿ ಚಿತ್ರರಂಗದಲ್ಲಿ ಅಮ್ಮನೇ ಆಗಿಹೋದರು.

ಈ ಸಿನಿಮಾದಲ್ಲಿ ಲೀಲಾವತಿ ಅವರ ಅಭಿನಯಕ್ಕೆ ಅವರೇ ಸರಿಸಾಟಿಯಾಗಿ ನಿಲ್ಲಬಲ್ಲರು. ಅದಕ್ಕಾಗಿ ಅವರಿಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಕೂಡ ಲಭಿಸಿದೆ. ಸದಾ ವಿಷಾದದ ಛಾಯೆ ಹೊತ್ತಮುಖ, ವಿಷಾದದ ಧ್ವನಿ ಹೊರಡಿಸುವ ಪಿಟೀಲು, ಮಗಳುಚಂದ್ರಾ… ಇವಿಷ್ಟೇ ಅವಳ ಪ್ರಪಂಚ.

ಸಿನಿಮಾದ ಪ್ರಾರಂಭವೇ ತೊಟ್ಟಿಲಲ್ಲಿ ಮಲಗಿದ ಮಗು, ಮೇಲೆ ಗೆಜ್ಜೆ ಶಬ್ದ..ಅದೊಂದು ದೃಶ್ಯವೇ ಸಾಕು ಅದರ ಕತೆ ಏನೆಂಬುದು. ವಿಷಾದದಿಂದ ಪಿಟೀಲು ನುಡಿಸುವ ಅಪರ್ಣಾ ಸದಾ ಪ್ರಿಯಕರನಿಗಾಗಿ ಕಾಯುತ್ತಾಳೆ. ಬಾರದಿರುವಾಗ, ಅವರ ಬದುಕು ದುಸ್ತರವಾಗಿ ಅಪರ್ಣ ಅನಿವಾರ್ಯವಾಗಿ ಗೆಜ್ಜೆಕಟ್ಟಿಸಿಕೊಳ್ಳುತ್ತಾಳೆ. ಅವಳಿಗೆ ಮುತ್ತುಕಟ್ಟಿದ ಆ ಗಂಡಸೆಂಬುವವ ಮಹಡಿ ಮೇಲಿನ ಮೆಟ್ಟಿಲು ಹತ್ತುವುದು, ಇಳಿಯುವುದು,, ಈ ಎರಡನ್ನು ತೋರಿಸುವುದರಲ್ಲಿಯೇ ನಿರ್ದೇಶಕರ ಜಾಣ್ಮೆಯಿದೆ. ಅದೊಂದೇ ಹೇಳುತ್ತದೆ ಅವ ದಿನಾ ಬರುತ್ತಾನೆಂದು.

ಅವನನ್ನೇ ಅಪ್ಪ ಎಂದು ನಂಬಿ ಬೆಳೆದ ಚಂದ್ರಾ ತಾನು ಕಾಲೇಜಿನಲ್ಲಿ ಚೆನ್ನಾಗಿ ಮಾಕ್ರ್ಸ್ ಪಡೆದದ್ದನ್ನು ಅಪ್ಪನ ಬಳಿ ಹೇಳಿದರೆ, ಒಂದೂ ಮಾತನಾಡದೆ ಅವ ಹೋಗುತ್ತಾನೆ. ಆ ಒಂದು ದೃಶ್ಯದಲ್ಲಿ, “ಅಮ್ಮಾ…ಅಪ್ಪ ಯಾಕಮ್ಮ ಹಾಗೆ ಹೋದರು. ನಾನು ಓದೋದು ಅವರಿಗಿಷ್ಟವಿಲ್ಲವೇನಮ್ಮ’ ಎಂದು ಚಂದ್ರ ಕೇಳಿದ್ದಕ್ಕೆ ತಕ್ಷಣ ಮುಖ ತಿರುಗಿಸಿ ನಿಲ್ಲುತ್ತಾರೆ ಲೀಲಾವತಿ. ‘ಆ ಹೊತ್ತಿಗೆ ನಿಮ್ಮ ಬೆನ್ನೇ ಮಾತನಾಡಬೇಕು ಲೀಲಾವತಿ’ ಎಂದು ನಿರ್ದೇಶಕ ಪುಟ್ಟಣ್ಣ ಹೇಳಿದ್ದರು. ಹಾಗೆಯೇ ಅಭಿನಯಿಸಿದ್ದಾರೆ ಕೂಡ. ಹಾಗಾಗಿ ಇಡೀ ಚಿತ್ರದಲ್ಲಿ ಕಲ್ಪನಾ ಹೇಗೆ ಇಡೀ ಚಿತ್ರವನ್ನು ಆವರಿಸಿಕೊಳ್ಳುತ್ತಾರೋ ಅದೇ ರೀತಿ ಲೀಲಾವತಿಯೂ ಆವರಿಸಿಕೊಳ್ಳುತ್ತಾರೆ

ಎದುರು ಮನೆಯ ಸೋಮುವನ್ನು ಜೀವದಂತೆ ಪ್ರೀತಿಸುವ ಚಂದ್ರಾ ಅವನನ್ನೇ ಮದುವೆಯಾಗಿ ಸಂಸಾರಿಯಾಗುವ ಕನಸುಕಾಣುತ್ತಾಳೆ. ಅವನ ತಂಗಿಯ ಮದುವೆಯಲ್ಲಿ ಧರ್ಮೇಚ, ಅರ್ಥೇಚ, ಕಾಮೇಚ ನಾತಿ ಚರಾಮಿ..ನಾತಿಚರಾಮಿ..ಹೇಳಿಸುವುದರ ಅರ್ಥ ಕೇಳಿ, ಸೋಮುವಿನ ಹತ್ತಿರ ಇವೆನ್ನೆಲ್ಲ ಹೇಳಿಸಿ ಗಗನದೆತ್ತರದಷ್ಟು ಖುಷಿಯನ್ನು ಅನುಭವಿಸುತ್ತಾಳೆ, ತನ್ನ ಮದುವೆಯೇ ನಡೆದುಹೋಗಿದೆಯೆಂಬಂತೆ.

ಇದೇ ಸಂದರ್ಭದಲ್ಲಿ ಸಿಕ್ಕ ಅವಳ ಹುಟ್ಟಿಗೆ ಕಾರಣನಾದ ಅಪ್ಪನೊಂದಿಗೆ, “ಅಪ್ಪಾಜಿ, ನನ್ನಮ್ಮ ಎಷ್ಟೇ ಒಳ್ಳೆಯವಳಾಗಿದ್ದರೂ ವೇಶ್ಯೆ ಎಂಬ ಪಟ್ಟದಿಂದ ಹೊರಬರಲಾಗಲಿಲ್ಲ. ನನ್ನನ್ನೂ ವೇಶ್ಯೆಯ ಮಗಳು ಎಂದೇ ಕರೀತಾರೆ. ಸಂಗಜ್ಜಿ ಈ ಸುಳಿಗೆ ಸಿಲಿಕಿಸೋಕೆ ತುಂಬ ಪ್ರಯತ್ನ ಪಡ್ತಾ ಇದ್ದಾಳೆ. ನಾನು ಈ ಸುಳಿಗೆ ಸಿಕ್ಕಲಾರೆ…’ ಎಂದು ಆ ಕ್ಷಣದ ಭರವಸೆಯ ತುಣುಕೆಂಬಂತೆ ಅವನನ್ನೇ ನೋಡುತ್ತಾ ಕೇಳುತ್ತಾಳೆ. ಆದರೆ ಅಪ್ಪ ಎನಿಸಿಕೊಂಡಿರುವ ಇವನೂ ಏನೂ ಮಾತನಾಡದೆ ಹೊರಡುತ್ತಾನೆ.

ಅಷ್ಟೆಲ್ಲ ಪ್ರೀತಿಸುವ ಸೋಮು, ನಿನ್ನ ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲವೆಂದು ಮಾತುಕೊಟ್ಟಿರುವವ, ಒಮ್ಮೆ ಚಂದ್ರಾಳ ಮನೆಯ ಮಹಡಿಯ ಮೇಲಿನ ಕಿಟಕಿಯಲ್ಲಿ ನೋಡಿದ ದೃಶ್ಯದಿಂದಲೇ ಅವಳನ್ನು ದೂರಮಾಡುತ್ತಾನೆ. ಅಲ್ಲಿ ಅವಳು ಅವಳ ತಂದೆಯನ್ನೇ ಅಪ್ಪಿಕೊಂಡರೂ ಇವನಿಗೆ ಅದು ಬೇರೆ ಯಾರೋ ಗಂಡಸರನ್ನು ಅಪ್ಪಿಕೊಂಡಂತೆನಿಸಿ ತಕ್ಷಣವೇ ಅವನ ಎದೆ ಒಡೆದುಹೋಗುತ್ತದೆ. ಅದಕ್ಕೆ ಅವಳನ್ನು ಸೂಳೆಯ ಮಗಳೆಂದೂ ಸೂಳೆಯೇ ಎಂದು ಜರಿದು ಹೊರಡುತ್ತಾನೆ. ಸೋಮು…ಸೋಮು…ಎಂದು ಕಿರುಚುತ್ತಾ ಕುಸಿಯುತ್ತಾಳೆ ಚಂದ್ರಾ. ಅಲ್ಲಿಂದ ಬಂದವಳಿಗೆ ಜಗತ್ತೇ ನೀರಸವೆನಿಸಿಬಿಡುತ್ತದೆ. ಅತ್ತ ಸೋಮುವಿನ ಮದುವೆಯೂ ಆಗಿಬಿಡುತ್ತದೆ. ಜೀವಕ್ಕೆ ಜೀವವಾಗಿ ಪ್ರೀತಿಸಿದವನ ಮದುವೆ ಬೇರೊಬ್ಬಳೊಂದಿಗೆ ಆದಾಗ, ಈ ಜಗತ್ತಿನಲ್ಲಿ ತನಗ್ಯಾರೂ ಇಲ್ಲವೆಂಬ ಭಾವನೆ ಬರುವುದು ಸಹಜವೇ. ಆದರೆ ಅದಕ್ಕಾಗಿ ಅವಳು ಸಂಗಜ್ಜಿ ಬಳಿ ಗೆಜ್ಜೆಕಟ್ಟುವ ಶಾಸ್ತ್ರ ಮಾಡು ಅಜ್ಜೀ ಎಂದೇಕೆ ಹೇಳುತ್ತಾಳೆ? ಅವಳು ವಿಷ ಕುಡಿದು ಸಾಯಬೇಕೆಂಬುದರ ಮುನ್ಸೂಚನೆಯಾಗಿ ಅದನ್ನು ತರಲಾಗಿದೆಯೇ ಎಂಬ ಅನುಮಾನವೂ ಕಾಡದಿರದು. ಎಲ್ಲಕ್ಕಿಂತ ಮುಖ್ಯವಾಗಿ ಚಂದ್ರಾ ಓದಿದವಳು. ದೇವದಾಸಿಯ ಮಗಳೊಬ್ಬಳು ಆ ಕಾಲಕ್ಕೆ ವಿದ್ಯೆ ಕಲಿಯುತ್ತಾಳೆಂಬುದೇ ಬಹುದೊಡ್ಡ ಕ್ರಾಂತಿಕಾರಕ ವಿಷಯ. ಅಂಥದ್ದರಲ್ಲಿ ತಾನು ಕಲಿತ ವಿದ್ಯೆ ಇತ್ತು. ಅದರಿಂದಲೇ ಬದುಕುತ್ತೇನೆಂಬ ಸಣ್ಣ ಆಲೋಚನೆ ಅವಳಿಗೆ ಬಂದರೂ ಆಗುತ್ತಿತ್ತಲ್ಲವೇ? ಅಲ್ಲಿ ಆ ಕೂಪದಿಂದ ಹೊರಬರುವ ಎಲ್ಲ ಅವಕಾಶಗಳೂ ಇದ್ದವು. ಅವಳನ್ನು ಕಟ್ಟಿ ಹಾಕಿ, ಬಲವಂತವಾಗಿ ತಳ್ಳುವವರು ಯಾರೂ ಇರಲಿಲ್ಲ. ಇದ್ದದ್ದು ಅವಳಮ್ಮ, ಅವಳಜ್ಜಿ ಇಬ್ಬರೇ. ಅಮ್ಮನಿಗಂತೂ ಹೇಗೂ ಇಷ್ಟವಿರಲೇ ಇಲ್ಲ. ಅಜ್ಜಿಯನ್ನು ಹೇಗೋ ನಿಭಾಯಿಸಬಹುದಿತ್ತು. ಕಥಾ ದೃಷ್ಟಿಯಿಂದ ನೋಡಿದರೆ ಅವಳು ಈ ಕೂಪದಿಂದ ಹೊರಬರಲು ಸಾಕಷ್ಟು ರೀತಿಯ ಅವಕಾಶಗಳಿದ್ದವು. ಇದು ಸಿನಿಮಾವನ್ನು ದುರಂತವಾಗಿಸುವ ಸಲುವಾಗಿಯೇ ಮಾಡಿದ್ದಾರೆಂಬ ಅನುಮಾನ ಬಾರದಿರದು. ನಾನು ಕಾದಂಬರಿಯನ್ನು ಓದಿಲ್ಲ. ಅದರಲ್ಲಿ ಕೊನೆ ಹೇಗೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಒಂದೊಮ್ಮೆ ಕಾದಂಬರಿಯಲ್ಲೂ ಹಾಗೆಯೇ ಇದ್ದರೆ, ಸಿನಿಮಾ ಮಾಡುವಾಗ ಅದನ್ನು ಬದಲಾಯಿಸುವ ಎಲ್ಲ ಸ್ವಾತಂತ್ರ್ಯವೂ ನಿರ್ದೇಶಕನಿಗಿರುತ್ತದೆ. ಇಲ್ಲೂ ಪುಟ್ಟಣ್ಣ ಆ ಸ್ವಾತಂತ್ರ್ಯವನ್ನು ಬಳಸಿಕೊಳ್ಳಬಹುದಿತ್ತು. ದುರಂತದಲ್ಲಿ ಕೊನೆಯಾದರೆ ಸಿನಿಮಾ ಸಕ್ಸಸ್ ಆಗಲ್ಲ ಎಂಬ ಭಯ ಏನಾದ್ರೂ ನಿರ್ದೇಶಕರಿಗಿತ್ತಾ?

ಅಷ್ಟರ ನಂತರವೂ ಇಂಥ ಕಥಾನಕವುಳ್ಳ ಸಾಕಷ್ಟು ಸಿನಿಮಾಗಳು ಬಂದಿವೆ. ಬೇಸರವಾಗುವುದು ಹೆಣ್ಣೊಬ್ಬಳು ಕಷ್ಟದಲ್ಲಿದ್ದಾಳೆಂದರೆ ಅವಳಿಗೆ ವೇಶ್ಯಾವಾಟಿಕೆಯೇ ಗತಿ ಎಂಬಂತೆ ಕಥಾನಕವುಳ್ಳ ಸಿನಿಮಾಗಳು ಅಪರೂಪವೇನಲ್ಲ. ಈ ಹಿಂದೆ ಬೆಳ್ಳಿಬೆಟ್ಟದಂತಹ ಒಂದು ಸಿನಿಮಾದಲ್ಲಿ ನಾಯಕಿ ಎಲ್ಲರನ್ನೂ ಕಳೆದುಕೊಂಡು ನಂತರ ವೇಶ್ಯಾವಾಟಿಕೆಗೆ ಇಳಿಯುತ್ತಾಳೆ.

ಈಗ ಮೊನ್ನೆಮೊನ್ನೆ ಬಿಡುಗಡೆಯಾದ ಕೆಂಗುಲಾಬಿ ಎಂಬ ಸಿನಿಮಾ ಕೂಡ ಅದೇ ಜಾಡಿನಲ್ಲಿ ಬರುವಂಥದ್ದು. ಅವಳನ್ನು ಮುದುಕನೊಬ್ಬನಿಗೆ ಮದುವೆ ಮಾಡಿಕೊಡಲಾಗುತ್ತದೆ. ಆದರೆ ಆತ ಅವಳನ್ನು ಮಾರಿ ಬಿಡುತ್ತಾನೆ. ಮುಂದೆ ಅವಳು ಸಂಪೂರ್ಣವಾಗಿ ವೇಶ್ಯಾವಾಟಿಕೆಯ ಬಲೆಗೆ ಬೀಳುತ್ತಾಳೆ. ಅದ್ಹೇಗೋ ಪ್ರೀತಿಸಿದ ಹುಡುಗನಿಗೆ ಅವಳು ಸಿಗುತ್ತಾಳೆ. ಅವನು ಆ ಕೂಪದಿಂದ ಬಚಾವು ಮಾಡಿ ಅವಳಿಗೊಂದು ಕೆಲಸವನ್ನೂ ಕೊಡಿಸುತ್ತಾನೆ. ಕೆಲಸ ಹಿಡಿದ ಅವಳು ಆತ್ಮವಿಶ್ವಾಸದಿಂದ ಇರುತ್ತಾಳೆ ಎಂದು ನಾವಂದುಕೊಂಡರೆ ಅಲ್ಲಿ ಆಗುವುದೇ ಬೇರೆ. ಅವಳ ಮಗಳ ಮೇಲೆ ಅತ್ಯಾಚಾರವಾಗುತ್ತದೆ. ಇದರಿಂದ ರೋಸಿ ಹೋದ ಅವಳು ಸಾವಿಗೆ ಶರಣಾಗುತ್ತಾಳೆ. ಹೀಗೆ ಆ ಕಾಲದಿಂದ ಈ ಕಾಲದವರೆಗೂ ಸಿನಿಮಾಗಳಲ್ಲಿ ದೇವದಾಸಿ, ವೇಶ್ಯಾವಾಟಿಕೆಗೆ ಸಿಲುಕಿರುವ, ಅತ್ಯಾಚಾರಕ್ಕೆ ಒಳಗಾಗಿರುವಂಥ ಮಹಿಳೆಯರು ಸಾಯುವುದಕ್ಕೇ ಲಾಯಕ್ಕು ಎಂಬಂತೆಯೇ ತೋರಿಸಲಾಗುತ್ತದೆ. ಆಗ ಗೆಜ್ಜೆಪೂಜೆಯ ಚಂದ್ರಾ, ಈಗ ಕೆಂಗುಲಾಬಿಯ ನಾಯಕಿ, ಒಟ್ಟಿನಲ್ಲಿ ಎಲ್ಲ ಸಾಯುವುದಕ್ಕಾಗಿಯೇ ಇರುವವರೇ…?

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಚಿತ್ರಭಾರತಿ/ ಅವರೆಲ್ಲ ಸಾಯುವುದಕ್ಕಾಗಿಯೇ ಇರುವವರೇ..? – ಭಾರತಿ ಹೆಗಡೆ

  • July 27, 2018 at 5:20 am
    Permalink

    One of the best work keep it up hitaishini

    Reply

Leave a Reply

Your email address will not be published. Required fields are marked *