ಚಿತ್ರಕಾರ
ತನ್ನ ಕುಂಚದ ತುದಿಗಳನ್ನು
ನಾಜೂಕಾಗಿ ಸವರುತ್ತಾನೆ, ಒರಟು ಕಾನ್ವಾಸಿನಮೇಲೆ
ಮೃದು ಪ್ರಕೃತಿ ತತ್ವವನ್ನು, ಜೀವನದ ಕಾಠಿಣ್ಯವನ್ನು ಒಂದುಸಿರಿನನಲ್ಲಿ ನಿನಗೆ ತಿಳಿಸಲೆಂದು
ಆ ಬಣ್ಣಗಳ ಮೇಳೈಸುವಿಕೆ, ನೆಳಲು ಬೆಳಕುಗಳ ಕಣ್ಣಾಮುಚ್ಚಾಲೆ-ಎಲ್ಲ ನಿನಗಾಗಿಯೇ
ನಿನ್ನ ಬೆರಳುಗಳ ನಡುವಿನಿಂದ ನಿತ್ಯವೂ ಜಾರಿಹೋಗುತ್ತಿರುವ-
ಕ್ಷಣಗಳನ್ನು ನಿನಗೊಪ್ಪಿಸಲೆಂದೇ ಆತ ಪರಿತಪಿಸಿದ್ದಾನೆ
ಅಲೆಗಳ ಅಂಚಿನಲ್ಲಿ ಮಿನುಗುವ ಹೊನ್ನ ಹೊಳಪುಗಳ ಸಂಧ್ಯೆಯನ್ನು ಶಾಶ್ವತವಾಗಿ ನಿನಗೆ ಅರ್ಪಿಸಲೆಂದು
ಆತ ಇಡೀ ಜೀವನಕಾಲ ಹಂಬಲಿಸಿದ್ದಾನೆ
ಒಂದು ಬೇಸಿಗೆಯ ಮಧ್ಯಾಹ್ನ ಸುಖಾಸುಮ್ಮನೆ ಬೀಸಿದ ಮಾವಿನಹೂಗಳನ್ನು ಹೊತ್ತ ಹುಚ್ಚುಗಾಳಿ ನಿನ್ನ ಸೋಕಲೆಂದೂ ಸಹ
ಚಳಿಗಾಲದ ಹಬೆ ಮಂಜನ್ನು ಸೀಳಿ ಇಳಿಜಾರಿನ ಕಿರಣಗಳ ಬೆಳಗುಗಳಲ್ಲಿ
ಜಾಜಿ ಹೂಗಳ ನಡುವೆ ಅರಳಿದ ರಥ ರಂಗೋಲೆಯನ್ನು
ಜರತಾರಿ ಲಂಗಾದಾವಣಿಯ ಗರ ಗರ ಸದ್ದಿನ ನಗುವನ್ನು
ನೀನು ನೆನಪಿಟ್ಟುಕೊಳ್ಳುವುದಿಲ್ಲವೇನೋ ಎನ್ನುವುದು ಆತನ ಕಳವಳ
ಬೆಳದಿಂಗಳ ರಾತ್ರಿಯಲ್ಲಿ ಗುಟ್ಟಾಗಿ ಕದಲುವ ತೆಂಗಿನ ಗರಿಗಳ ಸದ್ದನ್ನು ನಿನಗೆ ಕೇಳಿಸಲೆಂದು
ಒಟ್ಟುಗೂಡಿಸಿದ ಆಲದ ಹಣ್ಣೆಲೆಗಳನ್ನು ಜೋಪಾನವಾಗಿ ನಿನಗೆ ನೀಡಬೇಕೆಂದು
ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ಬಣ್ಣಗಳ ಪ್ರಪಂಚವನ್ನು ನೀನು ಸಂಪೂರ್ಣವಾಗಿ ಮರೆಯುವಷ್ಟರಲ್ಲಿ
ಮುಂಚಿತವಾಗಿಯೇ ನಿನಗೆ ಹಿಂದಿರುಗಿಸಬೇಕೆಂದು
ಆತ ಕನಸುಗಳ ಕಾಣುತ್ತಾ ಕಣ್ಮರೆಯಾದ!
ತೆಲುಗು ಮೂಲ : ಉಣುದುರ್ತಿ ಸುಧಾಕರ್
ಅನುವಾದ : ರೋಹಿಣಿಸತ್ಯ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.