Uncategorizedಚಾವಡಿಚಿಂತನೆ

ಚಿಂತನೆ/ ಹಿರಿಯರ ಮೇಲಿನ ದೌರ್ಜನ್ಯಗಳನ್ನು ಕ್ಷಮಿಸಲಾಗದು- ಮಾಲತಿ ಪಟ್ಟಣಶೆಟ್ಟಿ

ಹಿರಿಯರ ಮೇಲಿನ ದೌರ್ಜನ್ಯಗಳ ಕಥೆಗಳು ಮನೆಮನೆಗಳಲ್ಲಿ ಇರಬಹುದು. ಅಪ್ಪ-ಅಮ್ಮ ಮತ್ತು ಮಕ್ಕಳು, ಅತ್ತೆ- ಸೊಸೆ ಹೀಗೆ ಕುಟುಂಬಗಳಲ್ಲಿ ತಲೆಮಾರುಗಳ ಸೌಹಾರ್ದವನ್ನು ಕಾಪಾಡಿಕೊಳ್ಳುವುದು ಅತ್ಯಂತ ಗಂಭೀರವಾದ ಸವಾಲೇ ಆಗಿಬಿಡುತ್ತದೆ. ಆದರೆ ಹಿರಿಯರ ಮನಸ್ಸನ್ನು ಕಿರಿಯರು ಅರ್ಥ ಮಾಡಿಕೊಳ್ಳುವುದು, ಕಿರಿಯರ ಅಭಿಪ್ರಾಯಗಳಿಗೆ ಹಿರಿಯರು ಮನ್ನಣೆ ನೀಡುವುದು – ಇವೆಲ್ಲ ಇಬ್ಬರೂ ಪ್ರಜ್ಞಾಪೂರ್ವಕವಾಗಿ ನಿರ್ವಹಿಸಬೇಕಾದ ಜವಾಬ್ದಾರಿಗಳು. ಮನೆಯೊಳಗಿನ ಸೌಹಾರ್ದ ಎನ್ನುವುದು ಎಲ್ಲರ ಪ್ರಯತ್ನದ ಫಲವೇ ಹೊರತು ಕೇವಲ ಒಬ್ಬರಿಂದ ಸಾಧ್ಯವಾಗುವುದಿಲ್ಲ.

ಪ್ರತಿವರ್ಷ ಜೂನ್ 15 ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿರಿಯರ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸುವ ದಿನ ಎಂದು ಆಚರಿಸಲಾಗುತ್ತದೆ. ಹಿರಿಯರ ಮೇಲೆ ದೌರ್ಜನ್ಯ ನಡೆದಿದೆ ಎಂದು ಓದಿಕೊಂಡಾಗಲೇ ನನಗೆ ಅತೀವ ದು:ಖವಾಗುತ್ತದೆ. ವಯಸ್ಸಾದಂತೆ ದೇಹದ ಅಂಗಾಂಗಗಳ ಕಾರ್ಯಕ್ಷಮತೆಯು ಕಡಿಮೆಯಾಗುತ್ತದೆ, ದೇಹವು ಅಶಕ್ತವಾಗುತ್ತದೆ. ವೃದ್ಧಾಪ್ಯದ ಕಾಲವು ವಿಶ್ರಾಂತಿಯ ಕಾಲ. ಹಿರಿಯರ ಮೇಲಾಗುತ್ತಿರುವ ದೌರ್ಜನ್ಯವು ಯಾರಿಂದ ಎಂದು ಸುತ್ತಮುತ್ತಲಿನ ಜಗತ್ತನ್ನು ನೋಡಿದಾಗ, ಮನಸ್ಸಿಟ್ಟು ಕೇಳಿದಾಗ ಈ ದೌರ್ಜನ್ಯದ ಸ್ವರೂಪವು ತಿಳಿಯುತ್ತದೆ. ಎಷ್ಟೋ ಸಲ ಹಿರಿಯರಾಗಲಿ, ಕಿರಿಯರಾಗಲಿ ತಾವು ಸಹಿಸಿದ ದೌರ್ಜನ್ಯವನ್ನು ಮುಚ್ಚಿಡುತ್ತಾರೆ. ಭೂಗರ್ಭದಲ್ಲಿರುವ ಲಾವಾರಸದಂತೆ ನೋವು, ಅವಮಾನ, ದು:ಖಗಳೆಲ್ಲ ಮನಸ್ಸಿನಲ್ಲಿ ಕೊತಕೊತ ಕುದಿಯುತ್ತಿರುತ್ತವೆ! ತನ್ನವರೇ ದೌರ್ಜನ್ಯ ನಡೆಸಿದಾಗ ಹೊರಗಿನ ಯಾರಿಗೆ ಇದನ್ನು ಹೇಳಬೇಕು? ದೇವರನ್ನು ಹಳಿಯಬೇಕು ಇಲ್ಲವೆ ಪಾಲಿನ ಹಣೆಬರಹವೆಂದು ತಮ್ಮನ್ನು ತಾವೇ ಹಳಿದುಕೊಳ್ಳಬೇಕು!

ದೌರ್ಜನ್ಯದ ಕತೆಗಳು ಮನೆ ಮನೆಗಳಲ್ಲಿವೆ. ಇವು ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೇ ಸುಡುತ್ತಿರುತ್ತವೆ. ಅತ್ತೆ-ಸೊಸೆಯಂದಿರ ಸಂಬಂಧಗಳು ಅನಾದಿಕಾಲದಿಂದ ಅಸಹನೀಯವಾದವುಗಳೇ. ಸುಶಿಕ್ಷಿತರಿರಲಿ ಅಶಿಕ್ಷಿತರಿರಲಿ, ಬಡವರಿರಲಿ ಶ್ರೀಮಂತರಿರಲಿ, ಹೆಣ್ಣಿರಲಿ ಗಂಡಿರಲಿ, ಉಚ್ಚವರ್ಗದವರಿರಲಿ ಕೆಳವರ್ಗದವರಿರಲಿ ಹೊಂದಿಕೊಂಡು ಇರಲಾಗದ ಸಂಬಂಧಗಳು ಇವು. ಅತ್ತೆ ಸೊಸೆಯಂದಿರ ಸಂಬಂಧಗಳು ಎಂದಿಗೂ ಸರಿಯಾಗಿರುವುದಿಲ್ಲ ಎಂಬ ಅನಿಸಿಕೆಯಿದೆ. ಅಷ್ಟರಲ್ಲಿಯೇ ಸೊಸೆಗೆ ಮಾವನ ಮೇಲೆ ಕಂಪ್ಲೇಂಟ್ ಇರುವ ಉದಾಹರಣೆಗಳು ಬಹಳ ಕಡಿಮೆ. ತಾಯಿ-ತಂದೆಗಳ ಮೇಲೆಯೂ ಮಕ್ಕಳ ದೌರ್ಜನ್ಯವು ನಡೆಯುತ್ತಲೇ ಇರುತ್ತದೆ. ಇದು ಎದೆಯಲ್ಲಿ ಚೂರಿ ಇರಿದ ಮೋಸದ ನೋವು! ಮುಪ್ಪಿನ ಅಣ್ಣ, ಅಕ್ಕಂದಿರನ್ನು ಸೋದರ ಸಂಬಂಧಿಗಳು ವೈರಿಗಳಂತೆ ವರ್ತಿಸಿದಾಗಲೆಲ್ಲ ಬೆನ್ನಿಗೆ ಬಿದ್ದವರೇ ಬೆನ್ನಿಗೆ ಗುಂಡು ಹಾಕಿದ ಆಘಾತವಾಗುತ್ತದೆ!

ಇನ್ನು ಮನೆಯಿಂದ ಹೊರಗೆ ಬಂದರೆ ಮುಪ್ಪಿನವರನ್ನು ಓಣಿಯ ತರುಣ ತರುಣಿಯರು ಮಾತನಾಡಿಸುತ್ತಾರೆಯೇ? ಇನ್ನು ಸಾರ್ವಜನಿಕ ಸ್ಥಳಗಳಲ್ಲೂ ಹಿರಿಯರನ್ನು ನಿರ್ಲಕ್ಷಿಸಲಗುತ್ತದೆ. ದೌರ್ಜನ್ಯವೆಂದರೆ ದೈಹಿಕವಾಗಿ ಹೊಡೆಯುವುದು, ಬಡಿಯುವುದಷ್ಟೇ ಅಲ್ಲ. ಅದಕ್ಕಿಂತ ಕ್ರೂರವಾದದ್ದು ಹಿರಿಯರನ್ನು ನಿರ್ಲಕ್ಷಿಸುವುದು, ಅವರನ್ನು ಗೌರವಿಸದಿರುವುದು, ಅವರನ್ನು ನಿರುಪಯೋಗಿ ಎಂಬಂತೆ ನಡೆದುಕೊಳ್ಳುವುದು, ಅವರ ಮಾತನ್ನು ಕೇಳದೇ ಇರುವುದು, ಅವರು ಏನು ಹೇಳಿದರೂ “ನಿಮಗೇನ ಗೊತ್ತದ ಸುಮ್ಮನ ಕೂಡ್ರಿ” ಅನ್ನುವುದು–ಇವೆಲ್ಲ ದೌರ್ಜನ್ಯದ ಬೇರೆ ಬೇರೆ ಮುಖಗಳೇ.

ಅತ್ತೆ ಸೊಸೆ

ಅತ್ತೆ ಸೊಸೆಯಂದಿರ ನಡೆ ನುಡಿಯಲ್ಲಿಯ ದೌರ್ಜನ್ಯದ ಬಗೆಗೆ ಗಮನ ಹರಿಸೋಣ. ಈ ಸಂಬಂಧವು ಬಹುಶ: ಕೆಟ್ಟದ್ದೇ ಇರುತ್ತದೆ. ಇದರ ಹಿಂದೆ ಮನೋವೈಜ್ಞಾನಿಕ ಕಾರಣವಿದೆ. ತಾಯಿ ಮಗನನ್ನು ಪ್ರೀತಿಸಿದರೆ ಹೆಂಡತಿಗೆ ಹೊಟ್ಟೆಕಿಚ್ಚು. ಸೊಸೆಯು ಗಂಡನನ್ನು ಪ್ರೀತಿಸಿದರೆ ತಾಯಿಗೆ ಹೊಟ್ಟೆಬೇನೆಯಾಗುತ್ತದೆ. ಇಬ್ಬರೂ ಪೊಸೆಸ್ಸಿವ್ (Possessive) ಆದರೆ ವೈಮನಸ್ಸು ಹುಟ್ಟದೇ ಇರುತ್ತದೆಯೇ? ತಾಯಿಯಾದವಳಿಗೆ ಮಗನ ಮೇಲೆ ಪ್ರೀತಿ ವಿಶ್ವಾಸ ಇದ್ದರೆ ಅವನು ತನ್ನ ಹೆಂಡತಿಯೊಂದಿಗೆ ಪ್ರೀತಿಯಿಂದಿರಲಿ ಎಂದು ಬಿಟ್ಟು ಬಿಡಬೇಕು. ಸೊಸೆಯಾದವಳು ತಿಳಿಯಬೇಕಾದದ್ದು ತಾಯಿಯ ಪ್ರೀತಿ ತನ್ನ ಗಂಡನಿಗೂ ಬೇಕು ಎಂಬುದಾಗಿ. ವೈಮನಸ್ಯಕ್ಕೆ ಇನ್ನೊಂದು ಮುಖ್ಯಕಾರಣವೆಂದರೆ ಅತ್ತೆ, ಮಾವಂದಿರು ತಮ್ಮ ಕೆಲಸಗಳಲ್ಲಿ ಕೈಗೂಡುವದಿಲ್ಲ ಎಂಬುದು, ಆದರೆ ಅವರು ವಯಸ್ಸಾದವರು, ಇಷ್ಟು ದಿನ ದುಡಿದವರು, ಅವರಿಗೆ ವಿಶ್ರಾಂತಿ ಬೇಕು ಎಂಬುದನ್ನು ಸೊಸೆ ಅರಿತುಕೊಳ್ಳಲು ಸಿದ್ಧಳಿಲ್ಲ. ವೃದ್ಧಾಪ್ಯವೆಂದರೆ, ಜಡ್ಡುಜಾಪತ್ರಿ ದವಾಖಾನೆ, ಆಸ್ಪತ್ರೆ, ಔಷಧಿ ಅಂತ ಖರ್ಚು ಇದ್ದೇ ಇರುತ್ತದೆ. ಇದು ಸೊಸೆ ದೃಷ್ಟಿಯಲ್ಲಿ ಬೇಡವಾದ ಖರ್ಚು, ಸ್ವತ: ಮಗ ಅಥವಾ ಮಗಳೂ ಸಹ ಈ ಖರ್ಚಿಗಾಗಿ ಗೊಣಗುವಂಥ ಕೃತಘ್ನರು!

ಮುದುಕರೆಂದರೆ ಅವರು ಜೀವನವಿಡೀ ಮನೆಯಲ್ಲಿಯೇ ಇರಬೇಕು ಎಂದೇನೂ ಇಲ್ಲ. ತಾವು ವಾಕಿಂಗ್ ಹೋಗುವಾಗ ಮಗ, ಸೊಸೆ ಕರೆದೊಯ್ಯುವುದಿಲ್ಲ, ತಾವಾದರೆ ತಿಂಗಳೊಳಗೆ ಎರಡು ಸಲ ಆ ಈ ಪಿಕ್ನಿಕ್ ಮಾಡಿ ಬರುತ್ತಾರೆ. ಆದರೆ ಮನೆಯಲ್ಲಿ ಇದ್ದುಇದ್ದು ಬೇಸತ್ತ ಅತ್ತೆ ಮಾವಂದಿರುನು ‘ಬರ್ರಿ’ ಅಂತ ಕರೆಯುವುದಿಲ್ಲ. ಪರಊರಿಗೆ ಹೊರಟು ನಿಂತಾಗ “ಎಲ್ಲಾ ಜೋಕೆಯಿಂದಿರ್ರಿ, ಕಿಡಕಿ ಬಾಗಿಲು ಎಲ್ಲಾ ಮುಚ್ಚಿಕೊಂಡಿರ್ರಿ” ಅಂತ ವಾರ್ನಿಂಗ್ ಮಾಡುವುದನ್ನು ಮರೆಯಲಾರರು.
ಎಷ್ಟೋ ಮನೆಗಳಲ್ಲಿ ಹಿರಿಯರ ಊಟ ಮೊದಲಿಗಲ್ಲ ಎಲ್ಲರದಾದ ಮೇಲೆ! ತದ್ವಿರುದ್ಧವಾಗಿ ಹಿರಿಯರನ್ನು ಮೊದಲು ಉಣ್ಣಿಸಬೇಕಲ್ಲವೇ? ಅವರು ಉಳಿದವರಂತೆ ಆಗಾಗ ಬಾಯಿಡಿಸುವುದಿಲ್ಲ. ಅವರ ಊಟ ಎರಡೇಎರಡು ಹೊತ್ತು! ಇನ್ನು ಬಟ್ಟೆ ವಿಚಾರಕ್ಕೆ ಬರೋಣ. ಅಪ್ಪನ ಧೋತ್ರ ಹರಿದು ವರ್ಷ ಆಗಿರುತ್ತದೆ. ಅವ್ವನ ಸೀರೆ ಜಾಳಾಗಿ ಮೈ ಕಾಣಿಸುತ್ತಿದ್ದರೂ ಇವರ ಹೊಟ್ಟೆಯಿಂದ ಹುಟ್ಟಿದ ಮಗನು ವರುಷಕ್ಕೆ ಅವ್ವನಿಗೆ ದಿನಬಳಕೆಗಾಗಿ ನೂಲಿನ ಎರಡು ಸೀರೆ ತರುವುದಿಲ್ಲ, ಅಪ್ಪನಿಗೆ ಬಟ್ಟೆತರುವುದಿಲ್ಲ. ಇನ್ನು ಪಾದರಕ್ಷೆಗಳ ಮಾತಿನ್ನೇನು ಹೇಳಲಿ? ಅವರು ಸಾಯುವತನಕ ಒಂದೇಒಂದು ಜೋಡು ಮೆಟ್ಟಬೇಕು. “ಅವರಿಗೇಕೆ ಚಪ್ಪಲ್ ಬೇಕು ಅವರು ಎಲ್ಲಿಯೂ ಹೋಗುವುದಿಲ್ಲ ಬರುವುದಿಲ್ಲ” ಎಂದು ಬಾಯಿಬಿಟು ್ಟಹೇಳುತ್ತಾರೆ.

ಅವ್ವನ ತವರಿನವರು, ಅಪ್ಪನ ಅಣ್ಣನೋ, ಅಕ್ಕತಂಗಿಯರು ಬಂದರೆ ಸೊಸೆಗೆ, ಮಗನಿಗೂ ಸೇರುವುದಿಲ್ಲ. ಅವರು ಮಾರನೇ ದಿನ ಹೊರಟು ನಿಂತಾಗ “ಇನ್ನೆರಡು ದಿನ ಇರ್ರಿ” ಎಂಬ ಪ್ರೀತಿಯ ಮಾತುಗಳೂ ಬರುವುದಿಲ್ಲ. ಸೊಸೆಯ ತವರಿನವರು ಬಂದರೆ, ಆಕೆಯ ಆಫೀಸಿನವರು, ಗೆಳತಿಯರು ಬಂದರೆ, ಮಗನ ಗೆಳೆಯರು ಬಂದರೆ “ಇವರು ನಮ್ಮ ಅತ್ತೆ, ಇವರು ನಮ್ಮ ಮಾವ, ಇವರು ನಮ್ಮ ಅವ್ವಅಪ್ಪ” ಅಂತಕೂಡ ಪರಿಚಯಿಸುವುದಿಲ್ಲ. ತಾವೆಲ್ಲ ಸೇರಿ ಚಹ ಕುಡಿಯುವಾಗ ಆಗಲಿ, ಊಟ ಮಾಡುವಾಗ ಆಗಲಿ ಕರೆಯುವುದೇ ಇಲ್ಲ. ಇವರೆಲ್ಲರ ಪಾರ್ಟಿ ಮುಗಿದ ಮೇಲೆ ಖಿನ್ನ ಮನಸ್ಸಿನಿಂದ ತಂದೆ-ತಾಯಿ ಕಣ್ಣೀರಕೂಳನ್ನು ತಿನ್ನಬೇಕು!

ಹೊರಜಗತ್ತಿನಲ್ಲೂ ಹಿರಿಯರಿಗೆ ಕಿಮ್ಮತ್ತಿಲ್ಲ. ಪೇಟೆಗೆ ಏನಾದರೂ ಖರೀದಿಸಲು ಹೋದಾಗ ಕಡಿಮೆ ರೇಟಿಗೆ ಕೇಳುವುದೊಂದೆ ತಡ ಅಂಗಡಿಯವ “ಅಜ್ಜಾ ಅವರ, ಇದು ನಿಮ್ಮ ಕಾಲ ಅಲ್ಲರಿ, ಇನ್ನೂ ಯಾವ ಜಗತ್ತಿನ್ಯಾಗಿದ್ದಿರಿ? ಎಲ್ಲಾ ರೇಟು ಹೆಚ್ಚಾಗ್ಯಾವ, ನಿಮಗ ವ್ಯಾಪಾರ ಗೊತ್ತ ಆಗುವುದಿಲ್ಲ, ನಿಮ್ಮ ಮಕ್ಕಳನ್ನ ಕಳಸರಿ” ಅಂತ ಮುಖದ ಮೇಲೆ ಕಲ್ಲುತೂರಿದಂತೆ ಮಾತಾಡುತ್ತಾರೆ. ಆಗ ವ್ಯವಹರಿಸಲು ನಿಂತ ಹಿರಿಯರು ಪಿಟ್ಟೆನ್ನದೆ, ತಮ್ಮ ಕಾಲದ ವ್ಯವಹಾರ ಈಗ ಇಲ್ಲ, ತಮಗೆ ಏನೂ ತಿಳಿಯದು ಎಂದು ಒಪ್ಪಿಕೊಂಡು ಮೆಲ್ಲನೆ ನಡೆದುಬಿಡುತ್ತಾರೆ.

ಓಣಿಯಲ್ಲಿದ್ದ ಪರಿಚಯದ ತರುಣ ತರುಣಿಯರು ಹಿರಿಯರು ವಾಕಿಂಗ್‍ಗೆ ನಡೆದಾಗ ಮಾತಾಡದೇ ದಾಟಿ ಬಿಡುತ್ತಾರೆ. ಪರಿಚಯಸ್ಥರು ಸುಮ್ಮನೆ ಮುಂದೆ ಹೋಗುತ್ತಾರೆ. ಇದಕ್ಕೆ ಹಿರಿಯರು ಅಂದುಕೊಳ್ಳುತ್ತಾರೆ “ಇವರೆಲ್ಲ ಆಧುನಿಕ ಯುಗದವರು, ನಾವು ಹಳೆಯ ಮಂದಿ, ಅಶಕ್ತರು, ವಯಸ್ಸಾದವರು, ನಮ್ಮಿಂದ ಇವರಿಗೇನು ಪ್ರಯೋಜನ? ಅವರು ಮಾತನಾಡದಿದ್ದುದಕ್ಕೆ ಕಾರಣಗಳಿರಬಹುದು” ಎಂದು ತಮ್ಮೊಳಗೆ ತಾವೇ ಸಮಜಾಯಿಸಿ ನೀಡಿಕೊಳ್ಳುತ್ತ ಸುಮ್ಮನಾಗುತ್ತಾರೆ!

ಒಂದು ನಾಣ್ಯಕ್ಕೆ ಎರಡು ಮುಖಗಳಿದ್ದಂತೆ. ಹಿರಿಯರ ನಡೆ-ನುಡಿಯಲ್ಲಿ ತಪ್ಪುಇಲ ್ಲಎಂದು ಹೇಳಲಾರೆ. ಮುಖ್ಯವಾಗಿ ಹಿರಿಯರಿಗೆ ತಮ್ಮ ಮಾತೇ ನಡೆಯಬೇಕು ಎಂಬ ಹಟ ಇರುತ್ತದೆ.ಅದು ಈಗ ನಡೆಯುವುದಿಲ್ಲ. ಕಾಲ ಬದಲಾದಂತೆ ಹೊಸ ಪೀಳಿಗೆಯವರ ಇರುವಿಕೆ, ರೀತಿ, ನೀತಿ, ಎಲ್ಲವೂ ಬದಲಾಗುತ್ತವೆ. ಹಿರಿಯರು ತಾವು ನಡೆದಂತೆಯೇ ಎಲ್ಲರೂ ನಡೆಯಬೇಕೆಂಬ ಕಟ್ಟಳೆ ಹಾಕುವುದು ಸರಿಯಾದದ್ದಲ್ಲ. ಇಲ್ಲಿ ಕಿರಿಯರಿಗೆ ಬೇಕಾದಂತ ಸ್ವಾತಂತ್ರ್ಯವನ್ನು ಕೊಡಬೇಕು, ಹಿರಿಯರು ಸಲಹೆಯನ್ನು ಕೊಡುವಾಗ “ಇದು ನನ್ನ ವಿಚಾರ, ನಿನಗೆ ಸರಿಕಂಡದ್ದನ್ನು ನೀನು ಮಾಡು” ಎನ್ನಬೇಕು.

ಹಿರಿಯರಿಗೆ ತಮ್ಮ ಅಧಿಕಾರ ಚಲಾವಣೆಯ ಪ್ರೀತಿ ಇರುತ್ತದೆ. ಚಹಾಕ್ಕೆ, ಊಟಕ್ಕೆ ಅಥವಾ ಅತಿಥಿಗಳೊಂದಿಗೆ ಮಾತನಾಡಲು ಕರೆದಾಗ “ಆಮೇಲೆ ಬರತೇನಿ” ಅನ್ನುವ ಅಸಂಬದ್ಧ ಉತ್ತರ ಕೊಟ್ಟು ತಮ್ಮ ಅಧಿಕಾರ, ಅಹಂಗಳನ್ನು ತೋರುತ್ತಾರೆ. ಮೊಮ್ಮಕ್ಕಳು ಗಲಾಟೆ ಮಾಡಿದಾಗ, ತಪ್ಪು ಕೆಲಸ ಮಾಡಿದಾಗ ಅತಿಯಾಗಿ ಬೈಯ್ಯುವುದರಿಂದ ಮಕ್ಕಳು ಅವರ ಹತ್ತಿರ ಬರುವುದಿಲ್ಲ. ಸಾಮಾನ್ಯವಾಗಿ ಅಜ್ಜಅಜ್ಜಿಯರಿಗೆ ಮೊಮ್ಮಕ್ಕಳ ಮೇಲೆ ಅತಿಯಾದ ಪ್ರೀತಿ ಇರುತ್ತದೆ. ಹಾಗಾಗಿ ಹಿರಿಯರ ಮೊಮ್ಮಕ್ಕಳ ನಡುವೆ ಅಂಥ ವೈಮಸ್ಯದ ಉದಾಹರಣೆ ಇರುವುದು ಕಡಿಮೆಯೇ! ಸೊಸೆ, ಮಗ ಕೆಲಸದಲ್ಲಿ ಇದ್ದರೆ ಅತ್ತೆ, ಮಾವ ಅವರ ಅವಸರವನ್ನು ತಿಳಿದು “ಅಡುಗೆ ಮಾಡಿಟ್ಟು ಹೋಗು, ನನ್ನ ಕಡೆಯಿಂದ ಆಗುವುದಿಲ್ಲ” ಎಂದು ಅನ್ನದೆ “ನೀನು ಹೋಗವ್ವಾ ಮನೆ ಕೆಲಸ ನಮ್ಮ ಮೇಲೆ ಬಿಟ್ಟುಬಿಡು” ಅನ್ನಬೇಕಾಗುತ್ತದೆ. ಸೊಸೆಯ ತವರಿನವರು ಬಂದರೆ ಅವರನ್ನು ಗೌರವದಿಂದ ಹಿರಿಯರು ಕಾಣದೇ ಇರುವ ಉದಾಹರಣೆಗಳಿವೆ. ಮನೆಗೆ ಬಂದ ಯಾವುದೇ ಅತಿಥಿಯನ್ನು ಹಿರಿಯರು ಆದರಿಸಿ ಅವರನ್ನು ಕರೆದು ಮಾತನಾಡಿಸಿ ಉಪಚರಿಸುವುದು ಅವರ ಧರ್ಮ ಮತ್ತು ಹಿರಿತನದ ಲಕ್ಷಣವೂ ಸಹ.

ಬೇರು ಇಲ್ಲದೆ ವೃಕ್ಷ ಬದುಕೀತೆ? ತಳಪಾಯವಿಲ್ಲದೆ ಮನೆಯ ಕಟ್ಟಡ ನಿಂತೀತೆ? ಮನೆಯಲ್ಲಾಗಲಿ, ಯಾವುದೇ ಸಂಸ್ಥೆಯಲ್ಲಾಗಲಿ ಅನುಭವಿ ಮುಖ್ಯಸ್ಥರು ಇರುವುದಿಲ್ಲವೇ? ತಂದೆ-ತಾಯಿಗಳ, ಗುರುಗಳ, ಮಾರ್ಗದರ್ಶನವಿಲ್ಲದೆ ನಮಗೆ ಬಾಳದೀಕ್ಷೆ ಹೇಗೆ ಸಿಕ್ಕೀತು? ಮನೆಗೆ ಹಿರಿಯರು ಬೇಕು, ಸರ್ವಜ್ಞ ಅನ್ನುವ ಮಾತು ಸರ್ವಕಾಲಿಕ ಸತ್ಯದ ನುಡಿ! ಹಿರಿಯರಿಲ್ಲದ ಮನೆ, ದೇವರಿಲ್ಲದ ಗುಡಿ, ಗುರುವಿಲ್ಲದ ಮಠ ಇದ್ದರೂ ಎಲ್ಲ ನಿರರ್ಥಕ! ಹಿಂದಿನ ಕಾಲದಲ್ಲಾಗಲಿ ಇಂದಿನ ಕಾಲದಲ್ಲಾಗಲಿ, ದೇಶಗಳಲ್ಲಾಗಲಿ ಆಡಳಿತವನ್ನು ನಡೆಸುವಾಗ ತಮ್ಮ ಆಸ್ಥಾನಗಳಲ್ಲಿ, ತಮ್ಮ ಪಾರ್ಲಿಮೆಂಟುಗಳಲ್ಲಿ ಗುರು ಹಿರಿಯರಿಗೆ ಸ್ಥಾನಮಾನ ಕೊಡುತ್ತಿದ್ದರು. ಇದು ಏಕೆಂದರೆ ಅವರಿಂದ ಅನುಭವದ ನುಡಿಗಳು ಸಿಗಲಿ ಎಂದು. ಹಾಗೆಯೇ ನಮ್ಮ ಮನೆಗಳಲ್ಲಿ ಹಿರಿಯರಿರಲಿ, ಅವರ ಪ್ರೀತಿ ವಿಶ್ವಾಸದ ನೆರಳೂ ನಮ್ಮ ನೆತ್ತಿಗಿರಲಿ. ಹಿರಿಯರು ನೋಡಿದಂಥ ಜಗತ್ತು ದೊಡ್ಡದಾಗಿರುತ್ತದೆ. ಆದ್ದರಿಂದ ಅವರ ಮಾತುಗಳನ್ನು ಗೌರವಿಸಬೇಕಾಗುತ್ತದೆ. ಇದರಂತೆ ಮನೆಗಳಲ್ಲಿ ಚೈತನ್ಯ ತುಂಬಲು ಕಿರಿಯರೂ ಬೇಕು, ಹಿರಿಯರು ಕಿರಿಯರ ಭಿನ್ನ ವಿಚಾರಗಳಿಗೆ ಅವಕಾಶ ಕೊಟ್ಟು ಅವರಿಗೆ ತಮ್ಮದೇ ಆದ ಆಚಾರ, ವಿಚಾರಗಳ ಸ್ವಾತಂತ್ರ್ಯಗಳನ್ನು ಕೊಟ್ಟಾಗ ನಮ್ಮ ಬದುಕೆಂಬ ರೈಲು ಬಂಡಿಯು ಭರದಿಂದ ಓಡುತ್ತದೆ ಹಿರಿಯರನ್ನು ಕಿರಿಯರು ವೃದ್ಧಾಶ್ರಮಕ್ಕೆ ಅಟ್ಟದೆ ಅವರೊಂದಿಗಿನ ಹೊಂದಾಣಿಕೆಯು ಇಲ್ಲದಾಗ ಪ್ರತ್ಯೇಕ ವಾಸ್ತವ್ಯದ ವ್ಯವಸ್ಥೆ ಮಾಡಿ ಅವರು ಗೌರವದ ಜೀವನವನ್ನು ನಡೆಸುವಂತೆ ನೋಡಿಕೊಳ್ಳಬೇಕು,

ಎರಡು ಕೈ ಕೂಡಿದರೆ ಚಪ್ಪಾಳೆ, ಹಿರಿಯರು, ಕಿರಿಯರು ಒಬ್ಬರನ್ನೊಬ್ಬರು ಪ್ರೀತಿಸುತ್ತ ಗೌರವಿಸುತ್ತ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡುತ್ತ ಹೊಂದಿಕೊಂಡು ಬಾಳಿದರೆ ಮನೆಗಳೂ ನಿಲ್ಲತ್ತವೆ, ಸರಕಾರಗಳೂ ನಿಲ್ಲುತ್ತವೆ, ಮಾನವಕೋಟಿಯೂ ಸುಸ್ಥಿರವಾಗಿ ಬಾಳುತ್ತ ಮುನ್ನಡೆಯುತ್ತದೆ.

  • ಮಾಲತಿ ಪಟ್ಟಣಶೆಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *