Uncategorizedಚಾವಡಿಚಿಂತನೆ

ಚಿಂತನೆ/ ಸ್ತ್ರೀವಾದ: ಮರುನಿರ್ವಚನದ ಸವಾಲು – ವಿನಯಾ

ಸ್ತ್ರೀವಾದದ ತಾತ್ತ್ವಿಕತೆಯು ಹೆಣ್ಣಿನ ಅಸ್ಮಿತೆಯನ್ನು ಶೋಧಿಸಿಕೊಳ್ಳಲು ಇರುವ ಅಡೆತಡೆಗಳನ್ನು ಪ್ರಶ್ನಿಸುತ್ತದೆ ಮತ್ತು ಸಾಮಾಜಿಕ ವಿದ್ಯಮಾನಗಳೊಂದಿಗಿನ ನಿರಂತರ ಸಂಘರ್ಷದಲ್ಲಿ ಹೆಣ್ಣಿನ ಚಹರೆಯು ರೂಪುಗೊಳ್ಳುವುದನ್ನು ತಿಳಿಸುತ್ತದೆ. ವಿದ್ಯಾವಂತ ಮಹಿಳೆ ತಾನು ನಿಭಾಯಿಸಬೇಕಿರುವ ಸಾಮಾಜಿಕ ಜವಾಬ್ದಾರಿಯನ್ನು ಮರೆತರೆ ಅಲ್ಲಿಗೆ ಸ್ತ್ರೀವಾದವು ಪಾರ್ಶ್ವಿಕವಾಗಿ ಮೃತವಾದಂತೆ. ಹಾಗಾಗದಂತೆ ಹೆಜ್ಜೆಯಿಡಬೇಕು. ಭಾರತೀಯ ಸ್ತ್ರೀವಾದ ತನ್ನೆದುರಿರುವ ಈ ಸಾಂವಿಧಾನಿಕ ಸವಾಲನ್ನು ಎದುರಿಸಬೇಕು.

ಜಗತ್ತಿನ ಚರಿತ್ರೆಯಲ್ಲಿ ಮಹಿಳೆಯರು ನಿರ್ವಹಿಸಿದ ಸಾಮಾಜಿಕ ಜವಾಬ್ದಾರಿಯು ಸ್ತ್ರೀವಾದದ ತಾತ್ತ್ವಿಕತೆಯನ್ನು ಅಂತರ್ಗತಗೊಳಿಸಿಕೊಂಡಿದೆ. ಅಲ್ಲಿ, ಕಾರ್ಖಾನೆಗಳಿಂದ ಹೊರಬಂದು ಸಮಾನ ವೇತನಕ್ಕಾಗಿ ಬೀದಿಗಿಳಿದ ಮಹಿಳೆಯರ ಕಥನಗಳಿವೆ. ಹಿಟ್ಲರನ ನಾಝಿಪಡೆಯ ಹಿಂಸೋನ್ಮಾದವನ್ನು ವಿರೋಧಿಸಿ, ಜರ್ಮನಿಯ ಬೀದಿಗಳಲ್ಲಿ ಹಠಾತ್ತನೇ ಉದ್ಭವಗೊಂಡವರಂತೆ ಪ್ರತಿಭಟನೆಗಿಳಿಯುತ್ತಿದ್ದ ಹೆಣ್ಣುಗಳ ಸ್ಮೃತಿಗಳಿವೆ. ಎಲ್ಲೆಲ್ಲಿ ಮನುಷ್ಯನ ಬದುಕು ಅಮಾನವೀಯ ಹಲ್ಲೆಗೊಳಗಾಗಿ ನಲುಗಿ ಹೋಗಿದೆಯೋ ಅಲ್ಲೆಲ್ಲ ಹೆಣ್ಣುಗಳ ಪ್ರತಿರೋಧದ ಹೆಜ್ಜೆ ಗುರುತುಗಳು ಮೂಡಿವೆ. ಸ್ತ್ರೀವಾದದ ತಾತ್ತ್ವಿಕತೆಯು ಈ ತ್ರಾಣವನ್ನು ಹೀರಿಕೊಂಡಿದೆ. ಸದ್ಯದ ಭಾರತ, ಜಗತ್ತಿನ ಚರಿತ್ರೆಯಲ್ಲಿ ಹಿಂದೆಂದೂ ಕಾಣದ ತೀವ್ರ ಸಂಘರ್ಷವನ್ನು ಎದುರಿಸುತ್ತಿದೆ. ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿಯ ಮಹಿಳಾ ಪಾಲುದಾರಿಕೆಯು ಸ್ಪಷ್ಟ ಉದ್ದೇಶದ, ನಿರ್ಣಾಯಕ ನಾಯಕತ್ವದಲ್ಲಿ ಮುನ್ನಡೆದಿತ್ತು. ಸಿದ್ಧ ಹಾದಿಯಲ್ಲಿ ನಮ್ಮ ಹೆಜ್ಜೆಗಳು ಎಷ್ಟು ದೂರ ಕ್ರಮಿಸಿಯಾವು ಎಂಬುದೇ ಹೆಣ್ಣುಗಳ ಸವಾಲಾಗಿತ್ತು. ಕೌಟುಂಬಿಕ ಅಡೆತಡೆಗಳನ್ನು ದಾಟುವುದು ಸಮಸ್ಯೆಯಾಗಿತ್ತು. ಹೆಣ್ಣುಗಳೆಂಬ ಅತಿಗೌರವದ ಹೇವರಿಕೆಯನ್ನು ವಿರೋಧಿಸಿ, ಕರ್ತವ್ಯ ನಿಭಾಯಿಸುವ ಹಕ್ಕೊತ್ತಾಯವನ್ನು ಮಂಡಿಸಬೇಕಾಗುತ್ತಿತ್ತು. ಬಾಪೂಜಿಯೊಂದಿಗೆ ವಾದಿಸಿದ ಮಹಿಳೆಯರು ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಹೆಣ್ಣುಮಕ್ಕಳೂ ಪಾಲ್ಗೊಳ್ಳುವಂತೆ ಮಾಡಿದ ಚಾರಿತ್ರಿಕ ಘಟನೆಯನ್ನೂ ನೆನಪಿಸಿಕೊಳ್ಳಬಹುದು.

ಸ್ತ್ರೀವಾದವು ಚಿಂತನಧಾರೆಯಾಗಿ ಪ್ರವೇಶಿಸದ ಆ ಸಂದರ್ಭಕ್ಕೂ ಇಂದಿನ ಸಂದರ್ಭಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಎಂತಹ ಬಿಕ್ಕಟ್ಟುಗಳಲ್ಲಿಯೂ ಇಂದಿನ ಮಹಿಳೆಯರ ಎದುರು ವಿಸ್ತಾರವಾದ ಭೂಗೋಲವಿದೆ. ಹೆಣ್ಣುಮಕ್ಕಳನ್ನು ಸದರವಾಗಿ ಕಾಣುವುದು ತಪ್ಪು ಎಂಬ ಸಾಮಾಜಿಕ ಎಚ್ಚರವು ಸಣ್ಣಗೆ ಬೆರೆಯುತ್ತಿದೆ. ಆದರೆ, ಇಂತಹ ಅಧಿಕಾರ ವಿಕೇಂದ್ರೀಕರಣದ ಕಾರಣವಾಗಿಯೇ ಪಿತೃತ್ವವು ದಿಗಿಲುಗೊಂಡಿದೆ. ದಿಗಿಲು ಭಯವಾಗಿ, ವಿಕೃತಿಯಾಗಿ, ದಬಾವಣೆಯಾಗಿ ಕಾರ್ಯರೂಪಕ್ಕಿಳಿಯುತ್ತಿದೆ. ದೇಶದ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು ಪ್ರಕಟಪಡಿಸುತ್ತಿರುವ ಅಂಕಿಅಂಶಗಳೇ, ಈ ದೇಶ ಹೆಣ್ಣಿಗೆ ಸುರಕ್ಷಿತವಲ್ಲ ಎಂದು ಹೇಳುತ್ತಿದೆ. ಕ್ಷಣಕ್ಷಣಕ್ಕೂಏರಿಕೆಯಾಗುತ್ತಿರುವ ಮಹಿಳಾ ದೌರ್ಜನ್ಯ, ಕುಸಿಯುತ್ತಿರುವ ಲಿಂಗಾನುಪಾತಗಳಂತಹ ಸಂಗತಿಗಳು ಹೆಣ್ಣಿನ ಬಗ್ಗೆ ಸಾಮಾಜಿಕ ಅಂತಃಕರಣವಿಲ್ಲದ ನಿರ್ಲಜ್ಜ ನಡೆಯಾಗಿ ಕಾಣುತ್ತಿದೆ. ನಾಗರಿಕ ಸಮುದಾಯದ ಬೇಜವಾಬ್ದಾರಿ ನಡವಳಿಕೆಯು ಭೂಮಿಯ ಜೀವವಲಯವನ್ನು ಉಪೇಕ್ಷಿಸುವಷ್ಟೇ ಸಹಜವಾಗಿ, ಜೀವಸಾಂಗತ್ಯವನ್ನೂ ಉಪೇಕ್ಷಿಸತೊಡಗಿವೆ. ಬದಲಾಗುತ್ತಿರುವ ಸಂದರ್ಭಗಳಲ್ಲಿ ಸ್ತ್ರೀ ಕೇಂದ್ರಿತವಾದ ಹಳೆಯ ಸಮಸ್ಯೆಗಳು, ಮಾಯದ ಗಾಯದ ಹಾಗೆ ಉಲ್ಬಣಗೊಂಡು ಕೀವುಗಟ್ಟಿವೆ. ರೂಪ ಬದಲಿಸಿವೆ. ಯಾತನೆಯನ್ನು ಹೆಚ್ಚಿಸಿವೆ. ಜೊತೆಗೆ ರಾಜಕೀಯ, ಸಾಮಾಜಿಕ ಲಾಭಕೋರತನವು ಮಹಿಳಾ ಪ್ರಶ್ನೆಯನ್ನು ವಿಭಜಿಸಿಡುವುದರಿಂದ, ಅದನ್ನುಇಡಿಯಾಗಿ ಗ್ರಹಿಸಿಕೊಳ್ಳಲಾಗದೆ, ತಾತ್ತ್ವಿಕ ಗೊಂದಲಗಳು ಉಂಟಾಗುತ್ತಿವೆ.

ನ್ಯಾಯದಾನದ ಹಕ್ಕೊತ್ತಾಯ : ಅತ್ಯಾಚಾರ ವಿರೋಧದ ಸಂದರ್ಭವನ್ನು ಈ ಕಾರಣಗಳಿಂದಾಗಿ ಮರುಪರಿಶೀಲನೆಗೆ ಒಡ್ಡಿಕೊಳ್ಳಬೇಕಿದೆ. ಲೈಂಗಿಕ ಅತ್ಯಾಚಾರವು ಅಕ್ಷಮ್ಯ ಪಾಶವೀ ಕ್ರೌರ್ಯ. ಹೆಣ್ಣಿನ ದೇಹವನ್ನು ವಿರೂಪಗೊಳಿಸುವ, ಬೆತ್ತಲುಗೊಳಿಸುವ, ಸಾರ್ವಜನಿಕ ಪ್ರದರ್ಶನವಾಗಿಸಿ ಅಪಮಾನಿಸುವ, ಭೋಗದ ಸರಕಾಗಿ ಅಡವಿಟ್ಟುಕೊಳ್ಳುವ ಇಂತಹ ಹಲವು ವಿರೂಪದ ಸೀಳುಗಳಿವೆ. ಇದಕ್ಕೆ ಪರಂಪರೆಯಿದೆ, ವರ್ತಮಾನದ ಅಸಂಖ್ಯ ಪದರುಗಳಿವೆ. ಹೆಣ್ಣಿನ ಮೂಗು ಮೊಲೆ ಕೊಯ್ದ ಕೊಲೆಗತ್ತಿಯಿಂದ ‘ಚಪಾಕ್’ವರೆಗೆ ಮತ್ತು ಆನಂತರವೂ ಬೆಳೆಯುತ್ತಲೇ ಇರುವ ಯಾತನೆಯ ಸರಣಿಯಿದು. ಸ್ತ್ರೀವಾದದ ಸೈದ್ಧಾಂತಿಕ ಅರಿವು ಬಿತ್ತನೆಗೊಂಡ ಎಪ್ಪತ್ತರ ದಶಕದಲ್ಲಿ ದೇಶದ ಸಂವೇದನಾಶೀಲ ಮನಸ್ಸುಗಳು ಮಥುರಾ ಪ್ರಕರಣವನ್ನು, ನಂತರದಲ್ಲಿ ಭಾನ್ವರಿದೇವಿ ಪ್ರಕರಣವನ್ನು ನಿಭಾಯಿಸಿದ ಬಗೆ ಚಾರಿತ್ರಿಕವಾದದ್ದು. ಮಥುರಾ ಎಂಬ 16 ವರ್ಷದ ಆದಿವಾಸಿ ಬಾಲಕಿಯನ್ನು ಮಹಾರಾಷ್ಟ್ರದ ಗುಂಜ್ ಪೋಲಿಸ್ ಠಾಣೆಯಲ್ಲಿ ಅತ್ಯಾಚಾರ ಎಸಗಿದ ಘಟನೆ ಮತ್ತು ನ್ಯಾಯಾಲಯವು ಅದಕ್ಕೆ ನೀಡಿದ ಅಮಾನುಷ ತೀರ್ಪನ್ನು ವಿರೋಧಿಸುತ್ತಲೇ ಸ್ತ್ರೀವಾದದ ತಾತ್ವಿಕತೆಯು ಸಾಮಾಜಿಕವಾಗಿ ಬೇರೂರತೊಡಗಿತ್ತು. ರಾಜಸ್ಥಾನದ ಭಾನ್ವರಿದೇವಿ ಪ್ರಕರಣವು, ಕೆಳಜಾತಿ-ವರ್ಗದ ಮಹಿಳೆಯು ಜಮೀನ್ದಾರೀ ಕ್ರೌರ್ಯದಿಂದ ನಲುಗುವ ಅವಸ್ಥೆಯನ್ನು ಮತ್ತು ದೇಶದ ನ್ಯಾಯಾಂಗವು ಅಸಂಗತ ತೀರ್ಪು ಕೊಟ್ಟ ಉದ್ಧಟತನವನ್ನು ಪ್ರಶ್ನಿಸುವಂತೆ ಮಾಡಿತ್ತು. ಹೆಣ್ಣು ಜೀವದ ಬದುಕಿನ ಹಕ್ಕು ಮತ್ತು ಗೌರವದ ಹಕ್ಕಿನ ಕುರಿತಂತೆ ಬಹು ವಿಧವಾದ ಕಾರ್ಯಕ್ರಮಗಳು, ಕಾರ್ಯಯೋಜನೆಗಳು ನಡೆದವು. ಇದರ ಪರಿಣಾಮವಾಗಿ ಮಹಿಳಾ ದೌರ್ಜನ್ಯ ಪ್ರಕರಣಗಳು ಸಾರ್ವಜನಿಕವಾಗಿ ದಾಖಲಾಗುತ್ತ, ನ್ಯಾಯದಾನದ ಹಕ್ಕೊತ್ತಾಯವನ್ನು ಸಲ್ಲಿಸತೊಡಗಿದವು. ಆಸ್ಪತ್ರೆಯ ಸ್ವೀಪರ್ ಹುಡುಗನಿಂದ ಅತ್ಯಾಚಾರಕ್ಕೊಳಗಾಗಿ ಅಜೀವಪರ್ಯಂತ ಕೋಮಾ ಸ್ಥಿತಿ ತಲುಪಿ, ದಯಾ ಮರಣಕ್ಕೆ ಸಂದುಹೋದ ನರ್ಸ್ ಅರುಣಾ ಶ್ಯಾನಭಾಗ ಪ್ರಕರಣದ ಮರು ಎಚ್ಚರ ಪ್ರಾರಂಭವಾದದ್ದೂ ಈ ಸುಮಾರಿನಲ್ಲಿಯೇ.

ಸ್ವತಂತ್ರ ಭಾರತದಲ್ಲಿ ಮಹಿಳೆಯು ಅತ್ಯಾಚಾರದಂತಹ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದ ಪ್ರಮಾಣವು ಪ್ರತಿಗಂಟೆಗೆ ಮೂರರ ಸರಾಸರಿಗಿಂತಲೂ ಕಡಿಮೆಯಾಗಲೇ ಇಲ್ಲ. ದೇಶವು ಮುಕ್ತ ಬಂಡವಾಳದ ಹರವಿಗೆ ಸಿಲುಕಿದ ಕಾಲು ಶತಮಾನದಲ್ಲಿ ಉಲ್ಬಣಿಸಿದ ಛಿದ್ರ ಸಾಮಾಜಿಕತೆಯ ಕ್ರೌರ್ಯ ಮಹಿಳೆಯನ್ನು ದಮನಕಾರೀ ಘಟಕವಾಗಿ ಪರಿಗಣಿಸಿತು. 2012 ರ ನಿರ್ಭಯಾ ಪ್ರಕರಣ ಮತ್ತು 2019ರ ಹೈದ್ರಾಬಾದ್‍ನ ವೈದ್ಯೆಯ ಪ್ರಕರಣಗಳು ಈ ವಾಸ್ತವದ ಎರಡು ಸಾಕ್ಷಿಗಳು. ಅತ್ಯಾಚಾರದ ಹೇಯ ಬರ್ಬರತೆಯು, ಅಪರಾಧಿಗಳಿಗೆ ಮರಣದಂಡನೆ ಮತ್ತು ತೀವ್ರ ಶಿಕ್ಷೆಯನ್ನು ಒತ್ತಾಯಿಸಿತು. ದೇಶದಾದ್ಯಂತ ನಾಗರೀಕರ ಆಕ್ರೋಶವು ಭುಗಿಲೆದ್ದಿತು. ಮಹಿಳೆಯರ ಪಾಲುದಾರಿಕೆಯೂ ದೊಡ್ಡ ಪ್ರಮಾಣದಲ್ಲಿತ್ತು. 2012ರ ಪ್ರಕರಣಕ್ಕೆ 2013 ರಲ್ಲಿಯೇ ಸುಪ್ರಿಂ ಕೋರ್ಟ್ ಮರಣದಂಡನೆಯನ್ನು ಘೋಷಿಸಿತು. ಆರೋಪಿಗಳು ಮರು ಪರಿಶೀಲನೆಯ ಅರ್ಜಿ ಹಾಕಿದರು. ಹಾಕಿಯೇ ಹಾಕಿದರು. ಅಂತೂ ಕೊನೆಗೆ ಮಾರ್ಚ್ ೨೦ರಂದು ಅತ್ಯಾಚಾರದ ಅಪರಾಧಿಗಳಿಗೆ ಗಲ್ಲುಶಿಕ್ಷೆಯಾಯಿತು.

ಈಗ ಉಳಿದಿರುವುದು ಅತ್ಯಾಚಾರವನ್ನು ಕ್ರೂರ ಶಿಕ್ಷೆಯ ಭಯದಿಂದ ತಡೆಯಬಹುದೇ ಎಂಬ ಪ್ರಶ್ನೆಯೊಂದೇ. ಹೈದ್ರಾಬಾದ್‍ನಲ್ಲಿ ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳಾದವರನ್ನು ಪೋಲಿಸರು ಸ್ಥಳ ಮಹಜರಿನ ಸಂದರ್ಭದಲ್ಲಿ ಎನ್‍ಕೌಂಟರ್ ಮಾಡಿದರು. ಆರೋಪಿಗಳ ಕುರಿತು ಪೋಲಿಸ್ ಕಮೀಷನರ್‍ ಅವರು ಮಾಧ್ಯಮಕ್ಕೆ ಹೇಳಿದ ಹೇಳಿಕೆ ಸುಳ್ಳು ಎನ್ನುವುದಂತೂ ಕಣ್ಣಿಗೆ ರಾಚುವಂತಿತ್ತು. ಆದರೆ, ಬಾಳಿ ಬದುಕಬೇಕಾದ ಜೀವವನ್ನು ಹೆಣ್ಣು ಎಂಬ ಕಾರಣಕ್ಕಾಗಿ ರೇಪ್ ಮಾಡಿ ಸುಟ್ಟ ಬರ್ಬರತೆಯೆದುರು ಎನ್‍ಕೌಂಟರ್ ಸರಿಯೇ? ಎಂಬ ಪ್ರಶ್ನೆಯೂ ಕಾಡದಂತೆ ಜನ ಸಂಭ್ರಮಿಸಿದರು. ಪೋಲಿಸ್ ಆಫೀಸರ್ ಗಳನ್ನು ಹೀರೋಗಳಾಗಿ ಮೆರೆಸಿದರು. ಕಾವು ತಣಿದ ಈ ಹೊತ್ತಿನಲ್ಲಾದರೂ ಈ ಘಟನೆಗಳನ್ನು ಸ್ತ್ರೀವಾದಿ ತಾತ್ತ್ವಿಕತೆಯ ನಿಕಶಕ್ಕೆ ಒಡ್ಡಿಕೊಳ್ಳಬೇಕಿದೆ.

ಜಾಹೀರಾತಿನ ಪರಿಭಾಷೆ: ಯಾಕೆಂದರೆ ಜಾಗತಿಕ ಬಂಡವಾಳೋದ್ಯಮವು ಸ್ತ್ರೀವಾದವನ್ನೂ ತನ್ನ ಜಾಹೀರಾತಿನ ಪರಿಭಾಷೆಯಾಗಿ ಬಳಸಿಕೊಳ್ಳುತ್ತ ಜನಪ್ರಿಯಗೊಳಿಸಿತು ಮತ್ತು ಆ ತಾತ್ತ್ವಿಕ ಅಂತಃಸತ್ವವನ್ನು ಸಡಿಲಗೊಳಿಸಿತು. ಸ್ತ್ರೀವಾದ ಎನ್ನುವುದು ಮಹಿಳೆಯ ಪರವಾದ, ಮಹಿಳೆಯನ್ನು ಉದ್ಧೇಶಿತವಾಗಿಸಿಕೊಂಡ ಎಲ್ಲವೂ ಎಂಬ ಸರಳ- ತಪ್ಪು ವ್ಯಾಖ್ಯಾನಕ್ಕೆ ಒಳಗಾಯಿತು. ಸ್ತ್ರೀವಾದವು ಮಹಿಳೆಯ ಮಾತ್ರವಲ್ಲ ಒಟ್ಟೂ ಮನುಷ್ಯಕುಲದ ಹಿತಾಕಾಂಕ್ಷಿಯಾದದ್ದು ಎಂಬ ವಿಸ್ತರಣೆ ನಿಲುಕಲಾರದಾಯಿತು. ಸ್ತ್ರೀಪರತೆ ಎನ್ನುವುದನ್ನು ಸರಳೀಕರಣಗೊಳಿಸುತ್ತ ಮುನ್ನಡೆದರೆ, ಕೋಮುವಾದಿ- ಬಂಡವಾಳಶಾಹಿ ಪ್ರಭುತ್ವದ ಆಟಕ್ಕೊಂದು ಹೊಸ ಅಂಗಳ ಸಿದ್ಧವಾದಂತಾಗುತ್ತದೆ, ಅಷ್ಟೇ. ಬಹು ಜತನದಿಂದ ಜವಾಬ್ದಾರಿಯಿಂದ ರೂಪಿಸಿಕೊಂಡು ಬಂದ ಸ್ತ್ರೀವಾದ ಪಳೆಯುಳಿಕೆಯಾಗುತ್ತದೆ.

ಹೈದ್ರಾಬಾದ್‍ನ ಎನ್‍ಕೌಂಟರ್ ಘಟನೆಯನ್ನು ಸ್ತ್ರೀವಾದ ಸಮರ್ಥಿಸುತ್ತದೆಯೇ? ಆರೋಪಿಗಳು ಬಡವರ್ಗದವರು ಎಂಬುದರಿಂದ ಪೋಲಿಸರು ಅಸಾಂವಿಧಾನಿಕವಾಗಿ ನಡೆದುಕೊಂಡರಲ್ಲವೇ? ನಾಲ್ವರು ಆರೋಪಿಗಳೂ ಸಮಾನ ಆರೋಪಿಗಳೇ? ಯಾರಾದರೂ ಒಬ್ಬಿಬ್ಬರು ಅಪರಾಧದಲ್ಲಿ ನೇರ ಪಾಲುದಾರರಾಗಿರದ ಸಾಧ್ಯತೆಯಿರಬಹುದಲ್ಲವೇ? ಆರೋಪಿಗಳು ಅಪೀಲು ಸಲ್ಲಿಸಲೂ ಅವಕಾಶವನ್ನು ಕೊಡದಂತಿರುವುದು ಸರಿಯೇ? ಅವರಿಗೆ ಅವಲಂಬಿತರಾಗಿರುವ ಕುಟುಂಬಕ್ಕೆ ನ್ಯಾಯವೇನು? “ದೇಶದಲ್ಲಿರುವ ಎಲ್ಲ ಅತ್ಯಾಚಾರದ ಆರೋಪಿಗಳನ್ನು ಎನ್‍ಕೌಂಟರ್ ಮಾಡಿ ಆಗ ನನ್ನ ಗಂಡನ ಹತ್ಯೆಯನ್ನು ಒಪ್ಪಿಕೊಳ್ಳುತ್ತೇನೆ”- ಎನ್ನುವ ಆರೋಪಿಯೊಬ್ಬನ ಪತ್ನಿ ಅದೇನು ಕೇಳುತ್ತಿದ್ದಾಳೆ? ಇದೇ ಸುಮಾರಿಗೆ ಉನ್ನಾವ್‍ದ ಅತ್ಯಾಚಾರದ ಸಂತ್ರಸ್ತೆಯನ್ನು ಸುಟ್ಟು, ಅವಳು ಭಯಾನಕ ಯಾತನೆಯಿಂದ ನರಳಿ ಸಾಯುವಂತೆ ಮಾಡಲಾಯಿತಲ್ಲ, ಅಲ್ಲಿ ಆರೋಪಿಗಳು ಪ್ರಭಾವಿಗಳು. ಜಾಮೀನಿನ ಮೇಲೆ ಬಿಡುಗಡೆಯಾದವರು. ಏಳು ವರ್ಷಗಳ ಹಿಂದೆ ಇದೇ ಉನ್ನಾವ್‍ದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಎಂಬುವನಿಂದ ದೈಹಿಕ ಬಳಕೆಗೆ ಮರಮರಳಿ ಒಳಗಾದ 18 ವರ್ಷದ ಯುವತಿ, ಕಂಪ್ಲೇಟ್ ದಾಖಲಿಸಿದ್ದೇ ಸಾಹಸವಾಗಿತ್ತು. ಯುವತಿಯ ತಂದೆಯ ಅನುಮಾನಾಸ್ಪದ ಸಾವು, ಅವಳು ಮತ್ತು ಅವಳ ಕುಟುಂಬ ಎದುರಿಸಿದ ಬೆದರಿಕೆಗಳು, ಕೋರ್ಟ ಮುಗಿಸಿ ಬರುವಾಗ ಅವಳು ಮತ್ತು ಕುಟುಂಬವಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು- ಎಲ್ಲವೂ ಆಕಸ್ಮಿಕವೆಂದು ದಾಟಲು ಸಾಧ್ಯವಿಲ್ಲ. ಅಂತಹ ಅನುಮಾನಾಸ್ಪದ ಮಾತುಗಳನ್ನು ಆರೋಪಿಗಳು ಬಹಿರಂಗವಾಗಿಯೇ ಹೇಳಿದ್ದರು.

ಕಥುವಾದಲ್ಲಿ ಎಂಟರ ಮುದ್ದುಬಾಲೆಯನ್ನು, ಅವಳು ಅಲೆಮಾರಿ ಮುಸ್ಲಿಂ ಸಮುದಾಯಕ್ಕೆ ಸೇರಿದವಳೆಂಬ ಕಾರಣಕ್ಕಾಗಿ, ದೇವಸ್ಥಾನದಲ್ಲಿ ಕೂಡಿಹಾಕಿ ಅತ್ಯಾಚಾರ ಎಸಗಿ, ಕೊಂದುಹಾಕಿದವರ ವಿರುದ್ಧ ದೇಶದಾದ್ಯಂತ ಪ್ರತಿರೋಧ ಭುಗಿಲೇಳಲಿಲ್ಲ ಏಕೆ? ಆರೋಪಿಗಳನ್ನು ಬಂಧಿಸಬಾರದು ಎಂಬ ಕೂಗಿನಲ್ಲಿ ಮಹಿಳೆಯರ ಧ್ವನಿಯೂ ಸೇರಿಕೊಂಡಿದ್ದು ಹೇಗೆ? ದೇಶದ ವಿದ್ಯಾವಂತ ಮಹಿಳೆಯರನ್ನು ಜಾತಿ, ಧರ್ಮ, ಕುಲಗಳ ನೆಲೆಯಿಂದ ಗುರುತುಪಟ್ಟಿಗೆ ಲಗತ್ತಿಸಿರುವ ಕಾರಣಕ್ಕಾಗಿ ಈ ಅಬದ್ಧಗಳು ನಡೆಯುತ್ತಿವೆಯಲ್ಲವೇ? ಜನಾಭಿಪ್ರಾಯವನ್ನು ರೂಪಿಸುವ ಪ್ರಜಾಸತ್ತೀಯ ಅನುಕೂಲತೆಯಿದ್ದರೂ ಮಾಧ್ಯಮಗಳು ರಾಜಕೀಯ ಪಕ್ಷ- ಪ್ರಭುತ್ವದ ಮುಖವಾಣಿಯಾಗುತ್ತಿರುವದರಿಂದ ಸಂಭವಿಸುತ್ತಿರುವ ತಾರತಮ್ಯವನ್ನು ವಿದ್ಯಾವಂತ ಮಹಿಳೆಯರು ಅರಿವಾಗಿಸಿಕೊಳ್ಳುತ್ತಿಲ್ಲವೇ? ನಾಗರಿಕ ಅವಕಾಶ, ಮಾಹಿತಿ ಸೌಲಭ್ಯಗಳಿದ್ದಾಗಲೂ ಜಾತಿಯ- ಧರ್ಮದ ರೇಪಿಸ್ಟರನ್ನು ಭ್ರಷ್ಟರನ್ನು, ಕ್ರಿಮಿನಲ್ ಗಳನ್ನು ರಕ್ಷಿಸುವ ರಕ್ಷಣಾಗೋಡೆಯಾಗಿ ಮಹಿಳೆಯರು ವರ್ತಿಸುವುದು ಹೇಗೆ ಸಾಧ್ಯವಾಯಿತು. ಇಂದಿನ ಭಾರತದಲ್ಲಿ ಬಹುತೇಕ ಮಹಿಳಾ ದೌರ್ಜನ್ಯಗಳು ಅವಳು ಮಹಿಳೆ ಎಂಬ ಕಾರಣಕ್ಕಾಗಿ ನಡೆಯುತ್ತಿವೆಯಾದರೂ ಅದರ ಹಿಂದಿನ ಪ್ರೇರಣೆಗಳು ಕೋಮುವಾದಿ, ಅಧಿಕಾರಶಾಹಿ ರಾಜಕೀಯದಲ್ಲಿರುತ್ತವೆ.

ಇಂದು ಸ್ತ್ರೀವಾದದ ತಾತ್ತ್ವಿಕ ಅನುಸಂಧಾನವು ಈ ಮರುಪರಿಶೀಲನೆಯ ಕಡೆ ಸಾಗಬೇಕಿದೆ. ಮಹಿಳೆಯರು ತಮ್ಮ ನಾಗರಿಕ ಚಹರೆಯನ್ನು ನಿರ್ವಹಿಸುತ್ತಿರುವ ಬಗೆ ಸ್ವಾಯತ್ತ ತಿಳುವಳಿಕೆಯದೇ ಅಥವಾ ಪುರುಷಶಾಹಿಯ ಸಿದ್ಧ ಮಾದರಿಯದೇ? ಸ್ತ್ರೀವಾದದ ಚಿಂತನೆಯು ಒಳಗೊಳ್ಳುವ, ಹೊರಗಿಡುವ ಪ್ರಕ್ರಿಯೆಗೆ ತಾತ್ತ್ವಿಕತೆಯು ಮಾನದಂಡವೇ? ಜೈವಿಕತೆ ಮಾನದಂಡವೇ? ಇದು ಪ್ರಾಥಮಿಕ ಪಾಠವೇ ಇದ್ದೀತು. ಆದರೆ ಮರುಚಿಂತನೆಯ ಅಗತ್ಯವಿದೆ. ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರದೇವತಾಃ’ ಎಂಬ ಸೂಕ್ತಿಗೂ, ‘ಬೇಟಿ ಬಚಾವೋ ಬೇಟಿ ಪಢಾವೋ’- ಎಂಬ ಮಾತಿಗೂ ಮೂಲಭೂತ ವ್ಯತ್ಯಾಸವಿಲ್ಲ. ಇವು ಹೊರತೋರಿಕೆಯ ಆದರ್ಶಕ್ಕೂ ಒಳಗಿನ ಪೊಳ್ಳೂತನಕ್ಕೂ ಸಾಕ್ಷೀಭೂತವಾಗಿವೆ. ಮಹಿಳಾ ವಿಷಯಗಳು ಪ್ರಭುತ್ವದ ಹಿತಾಸಕ್ತಿಯನ್ನು ಆಗುಮಾಡುವ ಮಸೆಕಲ್ಲುಗಳಾಗಿವೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಳ್ಳುವ ಕೇಂದ್ರ ಸರ್ಕಾರವು, ಈ ಕಾಯ್ದೆಯು ‘ಒಂದು ಧರ್ಮದ ಮಹಿಳೆಯರ’ ‘ಇಜ್ಜತ್’ನ್ನು ರಕ್ಷಿಸಲು, ಉಗ್ರಗಾಮಿಗಳನ್ನು ನಿಗ್ರಹಿಸಲು ತರಲಾಗಿದೆ’- ಎಂದು ಸಮರ್ಥಿಸ ಹೊರಟಿದ್ದನ್ನು ಅರ್ಥಮಾಡಿಕೊಳ್ಳಬೇಕಿದೆ. ಮಹಿಳೆಯರನ್ನು ಜಾತಿ-ಧರ್ಮ-ವರ್ಗದ ನೆಲೆಯಿಂದ ವಿಭಜಿಸಿ ನೋಡುವ ಪ್ರಭುತ್ವದ ಆಸಕ್ತಿಯಿರುವುದೇ ಸ್ತ್ರೀವಾದಿ ಚಿಂತನೆಯ ಬೇರುಗಳನ್ನು ಕತ್ತರಿಸುವುದಾಗಿರುತ್ತದೆ. ಪ್ರವಾಹ ಪೀಡಿತ ಜನರ ಅಗತ್ಯಗಳ ಪೂರೈಕೆಯಲ್ಲಿ ಸರ್ಕಾರಗಳು ತೋರಿದ ‘ಅಂತಃಕರಣ’ವನ್ನು ಪ್ರಭುತ್ವವು ಸಾರಿದ ಯುದ್ಧವಾಗಿಯೇ ಕಾಣಬೇಕಲ್ಲವೇ? ಇತ್ತೀಚೆಗೆ ಬೆಂಗಳೂರಿನ ಬೆಳ್ಳಂದೂರು ಮತ್ತು ಕರಿಯಮ್ಮನ ಅಗ್ರಹಾರದಲ್ಲಿ ನಡೆಸಿದ ಬಾಂಗ್ಲಾ ವಲಸಿಗರ ವಿರುದ್ಧದ ಕಾರ್ಯಾಚರಣೆಯಲ್ಲಿ ಬಡವರು ಬೀದಿಗೆ ಬಿದ್ದರು. ಇವರಲ್ಲಿ ಬಹುತೇಕರು ಉತ್ತರ ಕರ್ನಾಟಕದಿಂದ, ಈಶಾನ್ಯ ಭಾರತದಿಂದ ಪ್ರಾಕೃತಿಕ ವಿಕೋಪಗಳಿಗೆ ಕಂಗಾಲಾಗಿ ಬಂದವರಿದ್ದರು. ಅವರ ಬಳಿ ಆಧಾರಕಾರ್ಡ್, ರೇಷನ್‍ ಕಾರ್ಡ್ ಗಳಿದ್ದವು. ಈ ಕಾರ್ಯಾಚರಣೆಯಲ್ಲಿ ಬಾಂಗ್ಲಾ ಅಕ್ರಮ ವಲಸಿಗರ್ಯಾರೂ ಪತ್ತೆಯಾಗಲೂ ಇಲ್ಲ. ಬಹುಶಃ ಸರ್ಕಾರ ನಿರಂಬಳವಾಗಿರುವುದು, ಬಡ ಹೆಣ್ಣುಗಳ ಪ್ರಶ್ನೆ, ಸೈದ್ಧಾಂತಿಕ ಚರ್ಚೆಯ ವ್ಯಾಪಕತೆಯನ್ನು ಪಡೆಯದು ಎಂಬ ಭರವಸೆಯಿಂದ.

ನಾಡಿನ ಹಳ್ಳಿ ಹಳ್ಳಿಯಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಬಿಸಿಯೂಟದ ನೌಕರರು ರಾಜಧಾನಿಗೆ ಬರುತ್ತಾರೆ. ಸಂಬಳಕ್ಕಾಗಿ, ಉದ್ಯೋಗ ಭರವಸೆಗಾಗಿ, ಕಿಂಚಿತ್ ಸೌಲಭ್ಯಗಳಿಗಾಗಿ ಬೇಡುತ್ತಾರೆ. ಅವರನ್ನು ಬಂಧಿಸಲಾಗುತ್ತದೆ, ಬೆದರಿಸಲಾಗುತ್ತದೆ. ಒಂದು ದಿನ ಮಾಧ್ಯಮಗಳಿಗೆ ವಿಷಯವಾಗುತ್ತದೆ. ಅಧಿಕಾರ ಕೇಂದ್ರದಲ್ಲಿರುವವರಿಗೆ ಅವರ ಅಪೀಲು ಕೇಳುವ ವ್ಯವಧಾನವೂ ಇರುವುದಿಲ್ಲ. ಮಹಿಳೆಯರ ಉದ್ಯೋಗ ವಲಯವು ಸಂಕುಚಿತವೂ ಅಸಂಘಟಿತವೂ ಆಗುತ್ತಿದೆ. ಖಾಸಗೀಕರಣದ ಉದ್ಯೋಗ ಅಸುರಕ್ಷಿತ ಸ್ಥಿತಿಯನ್ನು ಉಂಟುಮಾಡಿದೆ. ಭಾರತೀಯ ಮಹಿಳೆಯರು ಶಿಕ್ಷಣ ವ್ಯವಸ್ಥೆಯೊಳಗೆ ಪ್ರವೇಶಿಸುತ್ತಿರುವ ಈ ದಿನಗಳಲ್ಲಿ ಅವರೆದುರಿರುವ ನಿರ್ವಾತ ಭಯಂಕರವಾಗಿದೆ. ಸ್ತ್ರೀವಾದಿ ತಾತ್ತ್ವಿಕತೆಯ ಜಿಜ್ಞಾಸೆಯಲ್ಲಿ ತೊಡಗಿಸಿಕೊಳ್ಳುವ ನನ್ನಂಥವರಿಗೆ, ಮಹಿಳಾ ಹೋರಾಟದ ಈ ಆಯಾಮಗಳು ಮುಖ್ಯವಾಗಬೇಕಿದೆ. ತಾತ್ತ್ವಿಕತೆ ಮತ್ತು ಚಳುವಳಿಗಳೆರಡೂ ಒಂದು ನಡಿಗೆಯ ಎರಡು ಪಾದಗಳೆಂಬುದಷ್ಟೇ ಇಂದು ಸಾಕಾಗುತ್ತಿಲ್ಲ. ಈ ಎರಡೂ ಒಂದೊಂದು ಹೆಜ್ಜೆಯಲ್ಲೂ ಜೀವವಾಗಿ ಬೆಸೆಯಬೇಕಿದೆ.

70ರ ದಶಕದಲ್ಲಿ ಸ್ತ್ರೀವಾದ ನಮ್ಮ ಜ್ಞಾನಮೀಮಾಂಸೆಯಲ್ಲಿ ಬೆರೆವ ಕಾಲದಿಂದಲೂ ಈ ದೂರ-ಸಮೀಪಗಳು ಚರ್ಚೆಯಲ್ಲಿವೆ. ಆದರೆ ನಾವಿಂದು ಎದುರಿಸುತ್ತಿರುವುದು ಸಂಕೀರ್ಣ ವಾಸ್ತವವನ್ನು, ಪೌರತ್ವ ಮಸೂದೆಯ ತಿದ್ದುಪಡಿಯನ್ನು ವಿರೋಧಿಸುತ್ತ, ದೇಶದಾದ್ಯಂತ ನಡೆಯುತ್ತಿರುವ ಚಳುವಳಿಯಲ್ಲಿ ಮಹಿಳೆಯರು ಮುಂದಾಳತ್ವ ವಹಿಸಿದ್ದಾರೆ. ಶಾಹಿನ್‍ಬಾಗ್ ಆತ್ಯಂತಿಕ ರೂಪಕ. ಎಳೆಕೂಸುಗಳನ್ನು ಕಟ್ಟಿಕೊಂಡು ಚಳಿ ಬಿಸಿಲೆನ್ನದೆ ಕೂತಿರುವ ಸಾವಿರಾರು ಸಂಖ್ಯೆಯ ಹೆಣ್ಣುಗಳ ಪ್ರತಿಭಟನೆಯ ಪೆಂಡಾಲುಗಳು, ಸ್ವಾತಂತ್ರ್ಯ ಹೋರಾಟಕಾಲದಲ್ಲಿ ಬ್ರಿಟೀಷರನ್ನು ಎದುರಿಸಿ ಮಡಲು ಚಪ್ಪರ ಕಟ್ಟಿ ಬದುಕಿದ ಆ ಹೆಂಗಸರನ್ನು ನೆನಪಿಸುತ್ತಿದೆ. ಸ್ವಾತಂತ್ರ್ಯಾನಂತರದ ಭಾರತ ಈ ಬಗೆಯ ಮಹಿಳಾ ಪ್ರತಿರೋಧವನ್ನು ಕಂಡಿರಲಿಲ್ಲ. ಹೋರಾಟಗಾರರನ್ನು ಬೆಂಬಲಿಸುವ ಬರಹಗಾರರು, ಕಲಾವಿದರು, ಸೆಲಿಬ್ರಿಟಿಗಳನ್ನು ಎಣಿಸಿ ಎಣಿಸಿ ಲೆಕ್ಕ ಚುಕ್ತಾ ಮಾಡುತ್ತೇವೆಂದು, ಶಾಸಕರು-ಸಂಸದರು ಬೇಶರಮ್ ಹೇಳಿಕೆ ಕೊಡುತ್ತಿದ್ದಾರೆ. ಶಾಹಿನ್‍ಬಾಗ್‍ನ ಹೆಂಗಸರ ಹೋರಾಟಕ್ಕೆ ಒಂದು ಸೋಶಿಯಲ್ ಎಥಿಕ್ ಕಾರಣವೆಂದು ಹೇಳಲಾಗುತ್ತಿದೆ. ಪ್ರಪಂಚದ ಗಡಿಗಳಿಂದ ನಿರಾಶ್ರಿತರಾಗಿ ಬಂದ ರೊಹಿಂಗ್ಯಾ ಮುಸ್ಲಿಮರು ಇಲ್ಲಿ ಸಣ್ಣ ಪ್ರಮಾಣದಲ್ಲಾದರೂ ಇದ್ದಾರೆ. ಅವರನ್ನು ಅನಾಥರಾಗಿ ಹೊರದೂಡಲಾರದ ಮಾನವೀಯ ಬೆಸುಗೆ ಈ ಜನಸಾಮಾನ್ಯರದೆಂದು ಹೇಳಲಾಗುತ್ತಿದೆ. ಪುಟ್ಟ ನಕ್ಷತ್ರದಂತಹ ಮಗು ಈ ಪೆಂಡಾಲ್‍ನಲ್ಲಿಯೇ ಪ್ರಾಣತ್ಯಜಿಸಿದೆ. ಆ ಮಗುವಿನ ತಾಯಿ, ತಾನು ಮನೆಗೆ ಮರಳಲಾರೆ ಚಳುವಳಿ ಕೈಬಿಡಲಾರೆ ಎಂದು ಹೇಳುತ್ತಿದ್ದಾಳೆ. ಈ ಸ್ಥಿತಿ, ಸ್ತ್ರೀವಾದವು ನಿರ್ವಚಿಸುವ ತಾಯ್ತನದ್ದಾಗಿದೆ. ಎಲ್ಲವನ್ನೂ ಒಳಗೊಳ್ಳುವ ಸ್ತ್ರೀವಾದದ ಸಿದ್ಧಾಂತವು, ಪಿತೃತ್ವವು ವ್ಯಾಖ್ಯಾನಿಸುವ ಜೈವಿಕ ತಾಯ್ತನದ ಪರಿಭಾಷೆಯನ್ನು ಮೀರಿದ್ದು, ಅದನ್ನು ವಿಸ್ತರಿಸುವಂಥದ್ದು.

ಈ ತುರ್ತುಸ್ಥಿತಿಯಲ್ಲಿ ಸ್ತ್ರೀವಾದಿ ಚಿಂತನೆಯ ಬಿತ್ತನೆಯನ್ನು ಅತ್ಯಂತ ಎಚ್ಚರದಿಂದ ನಿರ್ವಹಿಸಬೇಕಿದೆ. ಸ್ತ್ರೀ-ಪುರುಷ ವಿರೋಧದ ಪ್ರಾಥಮಿಕ ಹಂತವನ್ನು ದಾಟಿ, ಸ್ತ್ರೀವಾದಿ ತಾತ್ತ್ವಿಕತೆಯು ಕೋಮುವಾದ-ಬಂಡವಾಳವಾದಗಳ ಮುಳ್ಳು ತಂತಿಯನ್ನು ಸುತ್ತಿ ಪ್ರಭುತ್ವದ ಅಧಿಕಾರ ರಾಜಕಾರಣವನ್ನು ಎದುರಿಸಬೇಕಿದೆ. ಇದು ಎಂತಹ ಇಕ್ಕಟ್ಟಿನ ಸ್ಥಿತಿಯೆಂದರೆ, ಮಹಿಳೆಯರ ತಾತ್ತ್ವಿಕ ಅಸ್ಪಷ್ಟತೆಯನ್ನು, ರಾಜಕೀಯ ಮುಗ್ಧತೆಯನ್ನು ತನ್ನ ಕೈವಸ್ತ್ರವಾಗಿಸಿಕೊಳ್ಳುವ ಪ್ರಾವೀಣ್ಯತೆ ಪ್ರಭುತ್ವಕ್ಕಿರುತ್ತದೆ. ನಿನ್ನೆಗಳಲ್ಲದಕ್ಕೆ ಅಗಣಿತ ಪುರಾವೆಗಳಿವೆ. ಸ್ವಘೋಷಿತ ದೇವಮಾನವರನ್ನು, ರೇಪಿಸ್ಟ ಸ್ವಾಮಿಗಳನ್ನು ಕಾನೂನಿನ ಕಕ್ಷೆಗೆ ಒಳಪಡದಂತೆ ಕಾದವರು, ಶಬರಿಮಲೆಗೆ ಪ್ರವೇಶ ಬೇಡವೆಂದು ‘ಧರ್ಮ’ ರಕ್ಷಣೆಗೆ ನಿಂತವರು- ಮಹಿಳೆಯರೇ. ಬಡಮಹಿಳೆಯರಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡವರು, ವಿಚಾರಕ್ಕಿಂತಲೂ ಮಠಮಾನ್ಯಗಳು, ಸಾಂಪ್ರದಾಯಿಕ ಆಚರಣೆಗಳು ಒಪ್ಪಿತವೆಂದು ಬಾಳುವವರೂ ಮಹಿಳೆಯರೇ. ಪ್ರಭುತ್ವವು, ಮಹಿಳಾ ಹೋರಾಟವನ್ನು ಮುರಿಯಲು ಮಹಿಳೆಯರನ್ನೇ ಬಳಸಿಕೊಳ್ಳುತ್ತದೆ. ಆ ಪ್ರಯತ್ನ ಜಾರಿಯಲ್ಲಿರುವುದೂ ಸತ್ಯ. ವಿದ್ಯಾವಂತ ಮಹಿಳೆ ತಾನು ನಿಭಾಯಿಸಬೇಕಿರುವ ಸಾಮಾಜಿಕ ಜವಾಬ್ದಾರಿಯನ್ನು ಮರೆತರೆ ಅಲ್ಲಿಗೆ ಸ್ತ್ರೀವಾದವು ಪಾರ್ಶ್ವಿಕವಾಗಿ ಮೃತವಾದಂತೆ. ಹಾಗಾಗದಂತೆ ಹೆಜ್ಜೆಯಿಡಬೇಕು. ಭಾರತೀಯ ಸ್ತ್ರೀವಾದ ತನ್ನೆದುರಿರುವ ಈ ಸಾಂವಿಧಾನಿಕ ಸವಾಲನ್ನು ಎದುರಿಸಬೇಕು.

ವಿನಯಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಚಿಂತನೆ/ ಸ್ತ್ರೀವಾದ: ಮರುನಿರ್ವಚನದ ಸವಾಲು – ವಿನಯಾ

  • Shadakshary

    Thanks for the article

    Reply

Leave a Reply

Your email address will not be published. Required fields are marked *