Uncategorizedಚಿಂತನೆ

ಚಿಂತನೆ/ ಶಾಲೆ ಊಟ ಮುಟ್ಟಿದ ಮುಟ್ಟಿನ ಕಬಂಧಬಾಹು – ರೇಣುಕಾ ರಮಾನಂದ

ಪ್ರತಿವರ್ಷ ಮೇ 28 ರಂದು “World Menstrual Hygiene Day” (ವಿಶ್ವ ಮುಟ್ಟಿನ ಸಮಯದ ಸ್ವಚ್ಛತಾ ದಿನ) ಆಚರಿಸಲಾಗುತ್ತದೆ. ಹೆಣ್ಣು ಮುಟ್ಟಿನ ದಿನಗಳಲ್ಲಿ ಅನುಸರಿಸಬೇಕಾದ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವುದು ಮತ್ತು ಮುಟ್ಟನ್ನು ಕುರಿತ ಮೂಢನಂಬಿಕೆಗಳನ್ನು ನಿವಾರಿಸುವುದು ಈ ದಿನಾಚರಣೆಯ ಆಶಯ. ಆದರೆ ಭಾರತೀಯ ಸಮಾಜದಲ್ಲಿ ಮುಟ್ಟು ಕುರಿತು ಆಳವಾಗಿ ಬೇರುಬಿಟ್ಟಿರುವ ನಕಾರಾತ್ಮಕ ಆಲೋಚನೆ ಈಗ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಮಕ್ಕಳ ಊಟಕ್ಕೂ ಹರಡಿದೆ. ಬಿಸಿಅಡುಗೆ ಮಾಡುವ ಮಹಿಳೆಯರು ಮುಟ್ಟಿನ ದಿನಗಳಲ್ಲಿ ಶಾಲೆಗೆ ಬಂದು ಅಡುಗೆ ಮಾಡಬಾರದು ಎಂದು ಹಳ್ಳಿಗಳಲ್ಲಿ ಮಕ್ಕಳ ತಾಯಂದಿರು ಆಕ್ಷೇಪ ಎತ್ತುತ್ತಿದ್ದಾರೆ. ಈ ಮೂಢನಂಬಿಕೆಗೆ ಕುಮ್ಮಕ್ಕು ಕೊಡುತ್ತಿರುವುದು ಮಠದ ಸ್ವಾಮಿಗಳು! ಸರ್ಕಾರಿ ಶಾಲೆಗೆ ಬಂದು ಅಡುಗೆ ಮಾಡುತ್ತೀರಾ ಎಂದು ಈಗ ಅವರನ್ನು ಕೇಳಬೇಕಾಗಿದೆ.

ಹೆಂಗಸರು ಮುಟ್ಟಿನ ದಿನಗಳಲ್ಲಿ ಅಡುಗೆ ಮಾಡಬಾರದು, ಮಾಡಿದರೆ ಅದನ್ನು ತಿನ್ನಬಾರದು ಎಂದು ಮಠದ ಸ್ವಾಮಿಗಳೊಬ್ಬರು ಇತ್ತೀಚೆಗೆ ಅಪ್ಪಣೆ ಕೊಡಿಸಿದರು.

ಇಂತಹ ಸ್ವಾಮಿಗಳಿರೋದ್ರಿಂದನೇ ಅನಕ್ಷರಸ್ಥ ಜನರೊಂದಿಗೆ ಅಕ್ಷರಸ್ಥರೂ ಮೂಢನಂಬಿಕೆ ಕಂದಾಚಾರ ಆಚರಣೆಗಳಿಗೆ ಜೋತುಬೀಳ್ತಿರೋದು… ದಿನದಿನಕ್ಕೆ ಬಿಡಬೇಕಾದಂತಹ ಪದ್ಧತಿಗಳನ್ನು ಇನ್ನಷ್ಟು ಗಟ್ಟಿಮಾಡಿ ಮುಂದಿನ ಪೀಳಿಗೆಗೂ ದಾಟಿಸ್ತಿರೋದು. ನೂರಕ್ಕೆ ಹತ್ತರಷ್ಟು ಸರ್ಕಾರಿ ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿ ಮೀಟಿಂಗ್ ಕರೆದಾಗ ತಾಯಂದಿರು ಶಿಕ್ಷಕಿಯರನ್ನು ಬದಿಗೆ ಕರೆದು ಮೊದಲು ಪ್ರಸ್ತಾಪಿಸೋದೇ ಬಿಸಿಯೂಟದ ಅಡಿಗೆಯವರು ಮುಟ್ಟಾದಾಗ ಅವರ ಹತ್ರ ಅಡುಗೆ ಮಾಡಿಸಬೇಡಿ ಮೂರು ದಿನ ಅಂತ… ಎಷ್ಟು ತಿಳಿವಳಿಕೆ ಹೇಳಿದರೂ ಅವರು ಕೇಳಿಸಿಕೊಳ್ಳಲ್ಲ. ಸ್ವತಃ ನಾವೇ ಅವರ ಕೈ ಅಡುಗೆ ಊಟ ಮಾಡ್ತೇವೆ ಏನೂ ಆಗಲ್ಲ ಅಂದರೂ ಒಪ್ಪಿಕೊಳ್ಳಲ್ಲ.

“ನೀವು ಹಾಗೆ ಜಬರದಸ್ತಿ ಅಡುಗೆ ಮಾಡಿಸಿದರೆ ನೀವೇ ಊಟಮಾಡಿ. ನಾವು ಮನೆಯಲ್ಲಿ ದೇವರು ದಿಂಡ್ರು ಇರೋರು.. ನಮ್ಮ ಮಕ್ಕಳು ಮುಟ್ಟುಚಿಟ್ಟಾಗಿ ಪದೇಪದೇ ಆರಾಮಿಲ್ದೇ ಬೀಳ್ತಾರೆ.. ಗಾಣಿಗರಿದ್ರಲ್ಲಿ ನೋಡಿಸಲು ಹೋದ್ರೆ ಮಕ್ಕಳಿಗೆ ಮುಟ್ಟುದೋಷ ಅಂತಾರೆ. ಯಾರು ಬರ್ತಾರೆ ಆಗ ನಮ್ಮ ಮಕ್ಕಳನ್ನು ಗುಣ ಮಾಡೋಕೆ..? ಊಟಕ್ಕೆ ಮೂರುದಿನ ಮಕ್ಕಳನ್ನ ಮನೆಗೆ ಕಳಿಸಿ” ಅಂತಾರೆ.

“ನಮಗೇನೂ ಗೊತ್ತಿಲ್ಲ. ಅಡುಗೆಯವರ ಮುಷ್ಕರ ಮತ್ತು ಇಂತಹ ಸಮಯದಲ್ಲಿ ನೀವೇ (ಮುಖ್ಯೋಪಾಧ್ಯಾಯರು) ಪಾಲಕರನ್ನು ವ್ಯವಸ್ಥೆ ಮಾಡಿಕೋಬೇಕು” ಅಂತ ಇಲಾಖೆ ಹೇಳ್ತಿದೆ. ಪ್ರತಿತಿಂಗಳು ಮೂರು ದಿನ ಅಡುಗೆಗೆ ಜನರನ್ನ ಎಲ್ಲಿ ಹುಡುಕೋದು? ಹೀಗೆ ಪ್ರತಿಯಾಗಿ ಅಡುಗೆಗೆ ಜನ ಬಂದ್ರೆ ಸಿಲಿಂಡರ್ ಮುಂತಾದ ಅವಘಡಗಳಿಗೆ ಜವಾಬ್ದಾರಿ ಕೂಡ ಮುಖ್ಯೋಪಾಧ್ಯಾಯರದೇ …

ಅಡುಗೆಯವರ ಬದಲಿಗೆ ಇಂತಹ ಸಮಯದಲ್ಲಿ ಜನ ಬಂದ್ರೆ ಅಡುಗೆಯವರ ಹೊಟ್ಟೆ ಹೊಡೆದು ಅವರ ಹಣ ಇಸ್ಕೊಂಡು ಬದಲು ಅಡುಗೆಗೆ ಬಂದವರಿಗೆ ಕೊಡೋಕೆ ನಮಗೆ ಮನಸ್ಸು ಬರಲ್ಲ. ಮುಖ್ಯಾಧ್ಯಾಪಕರು ಪ್ರತಿತಿಂಗಳೂ ಕೈಯಿಂದ ಕೊಡೋಕೂ ಆಗಲ್ಲ. ಕೊಟ್ರೂ ದಿನಗೂಲಿಗೆ ಹೋದ್ರೆ ಮುನ್ನೂರು ರೂಪಾಯಿ ಸಿಗುವ ಅವರಿಗೆ ನಾವುಕೊಡುವ ಅಲ್ಪ ಸ್ವಲ್ಪ ಎಲ್ಲಿ ಸಾಕಾಗತ್ತೆ…? ಹಾಗಾಗಿ ಜನ ಬರಲ್ಲ.

ಬೇರೆಲ್ಲಾ ಶಾಲಾ ಕೆಲಸಕ್ಕೆ ಸಪೋರ್ಟ ಮಾಡುವ, ಉತ್ತಮ ಶಿಕ್ಷಕರಿಗೆ ಗೌರವ ಕೊಡುವ
ಊರವರು ಇದೊಂದು ಮುಟ್ಟಿನ ವಿಷಯಕ್ಕೆ ಹೊಂದಿಕೊಳ್ಳಲ್ಲ. ಇಲಾಖೆಯೂ ಉಪಾಯಗಾಣಲ್ಲ…
ಕಂದಾಚಾರ ಬಿತ್ತುವ ಸ್ವಾಮಿಗಳೇ ಇದಕ್ಕೇನು ಹೇಳ್ತೀರಾ? ಸರ್ಕಾರಿ ಶಾಲೆ ಅಡುಗೆಗೆ ನೀವು ಬರ್ತೀರಾ ಎಂದು ಈಗ ಅವರನ್ನು ಕೇಳಬೇಕಾಗಿದೆ.

ಹಂಗಾಗಿ ಹಿಂಗಾಗಿ ಇದು ನಮ್ಮ ತಲೆಗೇ ಬರತ್ತೆ.
ಬೇರೆ ದಾರಿಗಾಣದೇ, ಏನೂ ಆಗುಹೋಗದೇ ಎಷ್ಟೋ ಶಾಲೆಗಳಲ್ಲಿ ಶಿಕ್ಷಕಿಯರೇ ಮೂರು ದಿನ ಅಡುಗೆ ಮಾಡಿಹಾಕ್ತಾರೆ… ಏನ್ ಮಾಡೋದು ಬಾಯಿಬಿಡೋಕೂ ಆಗಲ್ಲ, ಬಾಯಿ ಮುಚ್ಚಿಕೊಂಡಿರೋದಕ್ಕೂ ಆಗಲ್ಲ.

-ರೇಣುಕಾ ರಮಾನಂದ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಚಿಂತನೆ/ ಶಾಲೆ ಊಟ ಮುಟ್ಟಿದ ಮುಟ್ಟಿನ ಕಬಂಧಬಾಹು – ರೇಣುಕಾ ರಮಾನಂದ

  • srinivas Kulkarni

    Good magzine .. Articles .

    Reply

Leave a Reply

Your email address will not be published. Required fields are marked *