ಚಿಂತನೆ/ ಯುವತಿಯರು ಪೊಲೀಸ್ ವೃತ್ತಿಗೆ ಒಲಿಯಬೇಕು – ಸವಿತಾ ಶ್ರೀನಿವಾಸ

ಮಹಿಳೆಗೂ ಪೊಲೀಸ್  ಕೆಲಸಕ್ಕೂ ಎಲ್ಲಿಯ ಸಂಬಂಧ ಎನ್ನುವ ಮನೋಭಾವ ಪ್ರಪಂಚದಾದ್ಯಂತ ಇದ್ದೇ ಇದೆ. ಆದರೆ ಅವಳು ಆ ಕೆಲಸಕ್ಕೆ ಹೊಸಬಳಲ್ಲ. 1890 ರಲ್ಲೇ ಮೇರಿ ಓವೆನ್ಸ್ ಎಂಬ ಮಹಿಳೆ, ಅಮೆರಿಕದ ಇಲ್ಲಿನಾಯ್ಸ್, ಚಿಕಾಗೋನಲ್ಲಿ ಈ ಕೆಲಸಕ್ಕೆ ಆಯ್ಕೆಯಾಗಿ, ಪ್ರಥಮ ಮಹಿಳಾ ಪೊಲೀಸ್ ಎಂದು ಗಮನ ಸೆಳೆದಿದ್ದರು. ಹೆಣ್ಣುಮಕ್ಕಳಿಗೆ ಶಾಲಾ ದಿನಗಳಲ್ಲೇ ಪೊಲೀಸ್ ವೃತ್ತಿ ಕುರಿತು ತಿಳಿಸುವ ಅಗತ್ಯವಿದೆ.

ಪರಿಪೂರ್ಣ ಪೊಲೀಸ್ ಅಧಿಕಾರಿ ಎಂದು ಒಂದು ವಿಧದ ವ್ಯಕ್ತಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೇಳಲಾಗುವುದಿಲ್ಲ. ಈ ಇಲಾಖೆಯಲ್ಲಿ ಎಲ್ಲಾ ತರಹದ ವ್ಯಕ್ತಿಗಳು ಭಿನ್ನ ಭಿನ್ನ ಹಿನ್ನೆಲೆಯಿಂದ ಬಂದವರಾಗಿದ್ದು ಸಮಾಜ ಸೇವೆ ಮಾಡಲು ಭಿನ್ನ ಮಾರ್ಗ ಕಂಡುಕೊಂಡಿದ್ದಾರೆ. ಆದರೆ ಗಂಡು ಹೆಣ್ಣು ಯಾರೇ ಆಗಲಿ ಈ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು.

ಮಹಿಳಾ ಪೊಲೀಸ್ ಅಧಿಕಾರಿಗೆ ಕಾನೂನು ಸುವ್ಯವಸ್ಥೆ, ಠಾಣೆಯನ್ನು ಸ್ವತಂತ್ರವಾಗಿ ನಿಭಾಯಿಸುವ ಜವಾಬ್ದಾರಿ ಇವುಗಳನ್ನು ನೀಡುವುದೇ ಅಪರೂಪ. ಯಾವಾಗಲೂ ಸಮವಸ್ತ್ರದಲ್ಲಿ ಇದ್ದುಕೊಂಡು ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ದೌಡಾಯಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಗಲಾಟೆ, ದೊಂಬಿ, ಹೊಡೆದಾಟಗಳಾಗುತ್ತಿದ್ದರೆ ಪರಿಸ್ಥಿತಿ ತಕ್ಷಣ ತಿಳಿಗೊಳಿಸಲು ಪ್ರಯತ್ನಿಸಬೇಕು. ರೌಡಿಗಳನ್ನು ವಶಕ್ಕೆ ಪಡೆಯಬೇಕು. ನಾವು ಸಾಮಾನ್ಯ ಜೀವನದಲ್ಲಿ ನೋಡಬಾರದೆಂದು ಏನನ್ನು ಅಂದುಕೊಂಡಿದ್ದೇವೆಯೋ ಅದನ್ನೇ ನೋಡುವಂಥ ಪರಿಸ್ಥಿತಿ ಬರುತ್ತದೆ. ಅಪಘಾತಗಳು, ಕೊಲೆ, ದರೋಡೆ, ಆತ್ಮಹತ್ಯೆ, ಅತ್ಯಾಚಾರ ಹಾಗೂ ಅತ್ಯಂತ ಘೋರ ಕೃತ್ಯಗಳು ದಿನನಿತ್ಯ ದಾಖಲಾಗುತ್ತಿರುತ್ತವೆ. ದೊಡ್ಡ ನಗರ ಠಾಣೆಯಾದರೆ ಕೆಲವೊಂದೆಡೆ ಪ್ರತಿ ವರ್ಷ ಪ್ರಕರಣಗಳು ಸಾವಿರ ಸಂಖ್ಯೆ ಸಮೀಪಿಸಿವೆ. ಅದರಲ್ಲಿ ಮಹಿಳೆಯರ ಮೇಲಿನ ಪ್ರಕರಣಗಳನ್ನು ನಿಭಾಯಿಸಬೇಕಾದರೆ ಮಹಿಳಾ ಪೊಲೀಸರೇ ಇರಬೇಕು. ಒಂದು ಠಾಣೆಗೆ ಕನಿಷ್ಠ ಇಬ್ಬರೆಂದು ಲೆಕ್ಕ ತೆಗೆದುಕೊಂಡಾಗಲೂ ಇದು ತೀರಾ ಕಡಿಮೆ ಎಂದೇ ಹೇಳಬೇಕು.

ಪೊಲೀಸ್ ಠಾಣೆಗಳಲ್ಲಿ ಬರುವ ಪ್ರತಿ ಸಮಸ್ಯೆಯನ್ನು ಕೈಗೆತ್ತಿಕೊಳ್ಳುವಾಗಲೂ ಅನುಮಾನದ ನೋಟ ಎಲ್ಲೆಡೆ ಹರಿಸಬೇಕಾಗುತ್ತದೆ. ಯಾವೊಂದು ಸಣ್ಣ ಸುಳಿವು ಸಿಕ್ಕರೂ ಆ ತನಿಖೆಯ ಜಾಡನ್ನೇ ಬದಲಿಸುವ ಸಾಧ್ಯತೆ ಇರುವುದರಿಂದ ಪೊಲೀಸರು ಹಲವಾರು ಬಾರಿ ವಿಚಾರಣೆಯನ್ನು ನಡೆಸಬೇಕಾಗಿ ಬರುತ್ತದೆ. ಕೇವಲ ಠಾಣಾ ಕರ್ತವ್ಯ ಮಾತ್ರವಲ್ಲದೇ ಪೊಲೀಸ್ ಇಲಾಖೆಯ ಉಪಅಂಗಗಳಾದ ವಿಶೇಷ ಘಟಕಗಳಲ್ಲೂ ಅದರದೇ ಆದ ಕಾರ್ಯನೀತಿಗಳಿವೆ. ಇದರಲ್ಲಿನ ಕೆಲಸ ಪೊಲೀಸ್ ಅಧಿಕಾರಿಗಳಿಂದ ಬೇರೆಯದೇ ವಿಶೇಷ ನೈಪುಣ್ಯವನ್ನು ಅಪೇಕ್ಷಿಸುತ್ತದೆ. ಇಂತಹ ಘಟಕಗಳಲ್ಲಿ ನೈಪುಣ್ಯ ಇರುವವರು ಇತರರನ್ನು ಕೆಲಸದಲ್ಲಿ ಮೀರಿಸುವ ಸಾಧ್ಯತೆ ಇರುತ್ತದೆ.

ಹಾಗೆ ನೋಡಿದರೆ ಠಾಣೆಗಳಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಬೆಳೆಯಲು ಅವಕಾಶಗಳು ವಿಪುಲವಾಗಿದೆ. ದೈಹಿಕ ಶ್ರಮವಲ್ಲದ ಲೇಖಪಾಲಕ ಕೆಲಸ, ಕಂಪ್ಯೂಟರ್ ಆಪರೇಟರ್, ಸೆಂಟ್ರಿ ಕೆಲಸ, ವೈರ್‍ಲೆಸ್ ಇತ್ಯಾದಿ ಕೆಲಸಗಳಲ್ಲಿ ತೊಡಗಿಸಿಕೊಂಡವರೇ ಹೆಚ್ಚು. ಠಾಣಾ ಲೇಖಪಾಲಕರಿಗೆ ಸಹಾಯಕರಾಗಿರುವುದು ಹಾಗೂ ಕೆಲವು ಕಡೆ ಕಂಪ್ಯೂಟರ್ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಷ್ಟಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿಲ್ಲದಿರುವುದೂ ಕಂಡುಬರುತ್ತದೆ. ಲೇಖಪಾಲಕರಿಗೆ ಸಹಾಯಕರಾಗಿದ್ದಾರೆಯೇ ಹೊರತು ಸ್ವತಃ ತಾವೇ ಲೇಖಪಾಲಕರಾಗಿರುವುದಿಲ್ಲ.

ಹೊಸ ಪ್ರಪಂಚದೊಂದಿಗಿನ ಒಡನಾಟ, ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ತಮ್ಮ ಕೊಡುಗೆ ನೀಡಬಹುದಾಂತಹ ವೃತ್ತಿಗಳಲ್ಲಿ ಪೊಲೀಸ್ ಇಲಾಖೆ ಒಂದೆನಿಸಿ ಈಗಲೂ ಅದು ತನ್ನ ಆಕರ್ಷಣೆಯನ್ನು ಕಾಪಾಡಿಕೊಂಡಿದೆ. ವೈಯಕ್ತಿಕ ನೆಲೆಯಲ್ಲಿ ಕಾರ್ಯನಿರ್ವಹಣೆ ಅಲ್ಲದೆ ಗುಂಪಾಗಿ ಕಾರ್ಯಾಚರಣೆಗೆ ಇಳಿಯುವ ಕೆಲಸಗಳಲ್ಲೂ ತೊಡಗಿಸಿಕೊಳ್ಳಬಹುದು. ವ್ಯಕ್ತಿತ್ವವನ್ನು ಕಡೆದು ಆತ್ಮವಿಶ್ವಾಸ ಹೆಚ್ಚಿಸುವ ವಿವಿಧ ಸಂದರ್ಭಗಳನ್ನು ಎದುರಿಸುವ ಚಾಕಚಕ್ಯತೆಯನ್ನು ಅದು ಕಲಿಸುತ್ತದೆ.

ಹಲವಾರು ಬಾರಿ ನಾವು ಮಾಡಿದ ಸೇವೆ ಸಣ್ಣದೆನಿಸಿ ನೆನಪಿಟ್ಟುಕೊಳ್ಳಲಿಕ್ಕಾಗದಿದ್ದರೂ ಸಾರ್ವಜನಿಕರ ಸಮಸ್ಯೆ ಬಗೆಹರಿದಾಗ ಸಿಗುವಂಥ ತೃಪ್ತಿ ಅಗಾಧ. ಸಣ್ಣ ವಿಷಯಗಳು ಕೆಲವು ಅರಿವಿಗೇ ಬರುವುದಿಲ್ಲ. ಗಸ್ತು ವಾಹನ ರಸ್ತೆಯಲ್ಲಿ ಕಾಣಿಸಿಕೊಂಡಂತೆಯೇ ಮನೆಯೊಂದಕ್ಕೆ ಕನ್ನ ಹಾಕಬೇಕೆಂದಿದ್ದ ಕಳ್ಳ ತನ್ನ ಮನಸ್ಸು ಬದಲಿಸಿ ಆ ಜಾಗದಿಂದ ಕಾಲು ಕೀಳಬಹುದು, ಯಾವುದೋ ದೊಡ್ಡ ದರೋಡೆ ಅಥವಾ ಸರಗಳ್ಳತನ ಮಾಡಲು ಹೊಂಚು ಹಾಕುತ್ತಿದ್ದ ಕಳ್ಳರು ಸಂಚಾರಿ ಪೊಲೀ¸ರು ಕಣ್ಣಿಗೆ ಬೀಳುತ್ತಿದ್ದಂತೆಯೇ ತಮ್ಮ ಬೈಕ್ ಅನ್ನು ಹಿಂದಕ್ಕೆ ತಿರುಗಿಸಿ ಹೊರಟುಹೋಗಬಹುದು, ಕಾಲೇಜುಗಳ ಬಳಿ ಹುಡುಗಿಯರನ್ನು ಚುಡಾಯಿಸಲು ನಿಲ್ಲುವ ಪುಂಡಪೋಕರಿಗಳು ಗಸ್ತು ಪೊಲೀಸರನ್ನು ಇಲ್ಲವೇ ಪಿಂಕ್ ಹೊಯ್ಸಳ ವಾಹನ ನೋಡಿದೊಡನೆಯೇ ಓಟ ಕೀಳಬಹುದು,,,

ರಸ್ತೆಯಲ್ಲಿ ಸಂಚಾರ ನಿಯಮ ಪಾಲಿಸದ ಸಾರ್ವಜನಿಕರಿಗೆ ಪುರುಷ ಸಂಚಾರಿ ಪೊಲೀಸರು ತಡೆದು ನಿಲ್ಲಿಸಿ ಪ್ರಶ್ನಿಸುವಂತೆ ಮಹಿಳಾ ಸಿಬ್ಬಂದಿಯೂ ಪ್ರಶ್ನಿಸಿ ಜನರು ಏನು ಮಾಡಬೇಕೆಂದು ಹೇಳಬೇಕು. ಅವರು ತಮ್ಮ ಮಾತನ್ನು ಕೇಳುವಂತೆ ಮಾಡುವುದರಲ್ಲಿ ತಪ್ಪೇನಿದೆ, ಸಮಸ್ಯೆ ಬಗೆಹರಿಯುವುದು ಮುಖ್ಯವಷ್ಟೇ ಎಂದು ಯೋಚಿಸಬೇಕು. ಒಂದು ಅಧಿಕಾರವಿರುವ ಪದವಿಯಲ್ಲಿದ್ದರೆ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸದಲ್ಲಿ ಭಾಗಿಯಾಗುವುದು ಸಮಸ್ಯೆಯ ಒಂದು ಭಾಗವಾಗುವುದಕ್ಕಿಂತ ಶ್ರೇಷ್ಠ ಎನ್ನಬಹುದು.

ಮಾಧ್ಯಮಗಳಲ್ಲಿ ಹಲವಾರು ಬಾರಿ ಪೊಲೀಸರ ಕರ್ತವ್ಯವನ್ನು ವೈಭವೀಕರಿಸುವ ಇಲ್ಲವೇ ಕೀಳುಮಟ್ಟದಲ್ಲಿ ತೋರಿಸಿರುವುದರ ಅನುಭವ ನಮಗಾಗಿದೆ. ತುದಿಗಾಲಿನ ಮೇಲೆ ಯಾವಾಗಲೂ ಸನ್ನಧ್ಧರಾಗಿ ಇರಬೇಕಾದ ಸಂದರ್ಭಗಳಲ್ಲೂ ಹಲವಾರು ಬಾರಿ ಭದ್ರತೆಯ ವಿಷಯದಲ್ಲಾಗಲಿ ತನಿಖೆ ಅಥವಾ ಆರೋಪಿಗಳ ದಸ್ತಗಿರಿಯಲ್ಲಿ ಲೋಪ ಅಥವಾ ವಿಳಂಬವಾದರೆ ಮಾಧ್ಯಮಗಳಲ್ಲಿ ಕೂಡಲೇ ಈ ವಿಷಯ ಪ್ರಚಾರ ಗಿಟ್ಟಿಸಿಕೊಳ್ಳುವುದುಂಟು. ಕಾರ್ಯಾಚರಣೆಗಳ ಸಂದರ್ಭಗಳಲ್ಲಿ ಒಂದೊಂದು ಗಳಿಗೆಯನ್ನೂ ಲೆಕ್ಕಕ್ಕೆ ತೆಗೆದುಕೊಂಡು ಕೂಡಲೇ ಕಾರ್ಯ ಪ್ರವೃತ್ತರಾಗಬೇಕಿರುತ್ತದೆ. ಹೀಗೆ ಮಾಡುವಾಗ ನಾವು ನಮ್ಮ ಕುಟುಂಬದೊಂದಿಗೆ ಕಳೆಯಬಹುದಾದ ಹಬ್ಬ ಹರಿದಿನಗಳು, ರಜೆಯ ಅವಧಿ, ಉತ್ಸವಗಳನ್ನು ಬಹಳಷ್ಟು ವೇಳೆ ಅನುಭವಿಸಲಾಗದಂತಹ ಪರಿಸ್ಥಿತಿಯುಂಟು. ಆದರೂ ಪೊಲೀಸರಿದ್ದಾರೆ ಎಂಬ ಭಯವೇ ಹಲವಾರು ಅಪರಾಧಗಳು ಜರುಗದಿರಲು ಕಾರಣಗಳಾಗಿವೆ. ಸುರಕ್ಷಿತ ಮನೋಭಾವ ಮೂಡಿಸಿದೆ.

ಪೊಲೀಸ್ ಠಾಣೆಗಳನ್ನು ಸೃಜಿಸುವ ಸಂದರ್ಭದಲ್ಲಿ 75 ಕಿ.ಮೀ ವಿಸ್ತೀರ್ಣಕ್ಕೆ ಹಾಗೂ 50 ರಿಂದ 60 ಸಾವಿರ ಅಧಿಕ ಜನಸಂಖ್ಯೆ ಇರುವ ಪ್ರದೇಶಕ್ಕೆ ಹಾಗೂ ವಾರ್ಷಿಕ 300ಕ್ಕೂ ಅಧಿಕ ಅಪರಾಧಗಳನ್ನು ಜರುಗಿರುವುದನ್ನು ಗಣನೆಗೆ ತೆಗೆದುಕೊಂಡು 1 ಪೊಲೀಸ್ ಠಾಣೆಯಂತೆ ಲೆಕ್ಕ ಹಾಕಿದಾಗ ಹಾಲಿ ಕರ್ನಾಟಕದಲ್ಲಿ 847 ಕಾನೂನು ಸುವ್ಯವಸ್ಥೆ ನಿಭಾಯಿಸುವ ಪೊಲೀಸ್ ಠಾಣೆಗಳು, 107 ಸಂಚಾರ ಪೊಲೀಸ್ ಠಾಣೆ ಹಾಗೂ 35 ಮಹಿಳಾ ಪೊಲೀಸ್ ಠಾಣೆಗಳಿವೆ. ಕೆಲವು ಠಾಣೆಗಳಲ್ಲಿ ಅರ್ಥಾತ್ ಮಹಿಳಾ ಪೊಲೀಸ್ ಠಾಣೆಗಳಲ್ಲಿ ಹೆಚ್ಚು ಮಹಿಳಾ ಸಿಬ್ಬಂದಿಯಿದ್ದರೆ, ಇತರ ಠಾಣೆಗಳಲ್ಲಿ ಕೊಂಚ ಕಡಿಮೆ ಸಿಬ್ಬಂದಿ ಇದ್ದಾರೆ.
ಮಹಿಳಾ ಪೊಲೀಸರ ಕೆಲಸದ ಸ್ಥಳದಲ್ಲಿ ದೈಹಿಕ ಶ್ರಮ ಹೆಚ್ಚಾಗಿರುವ ಸಂದರ್ಭದಲ್ಲಿ ಪುರುಷ ಸಿಬ್ಬಂದಿಯೊಂದಿಗೆ ಸರಿ ಸಮಾನವಾಗಿ ದುಡಿಯಬೇಕಾಗಿರುವುದರಿಂದ ಅವರಿಗೆ ತಮ್ಮ ಸಾಮಥ್ರ್ಯದ ಪರೀಕ್ಷೆಯೂ ಆಗುವುದುಂಟು. ಮಹಿಳಾ ಪೊಲೀಸರು ವಿವಿಧ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದು ಅದನ್ನು ತಾವು ಯಶಸ್ವಿಯಾಗಿ ನಿರ್ವಹಿಸಲೂಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಹಲವಾರು ಬಾರಿ ಕೆಲಸದ ಸ್ಥಳದಲ್ಲಿ ಸಮಾನತೆ ಇರಬೇಕೆಂಬ ಮಾತು ಕೇಳಿ ಬರುತ್ತದೆ. ಆದರೆ ವಿಶೇಷ ಪುರಸ್ಕಾರಗಳಿಗಿಂತಲೂ ಕೆಲಸ ಮಾಡಲು ಅನುಕೂಲಕರ ವಾತಾವರಣ ನಿರ್ಮಿಸುವುದು ಅತಿಮುಖ್ಯವಾಗಿದೆ.

ಪುರುಷರಂತೆ ಮಹಿಳಾ ಪೊಲೀಸರೂ ತಮ್ಮ ಕರ್ತವ್ಯವನ್ನು ಹಾಗೂ ಗುರಿ ಸಾಧನೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಕೆಲಸದ ವಾತಾವರಣದಲ್ಲಿ ಕೊಂಚ ಸಡಿಲಿಕೆ ಹಾಗೂ ಸರಿಯಾದ ವ್ಯವಸ್ಥೆ ಇದ್ದರೆ ಅವರ ಕೊರಗು ನೀಗಿದಂತಾಗುತ್ತದೆ. ನಗರಗಳಲ್ಲಿ ಪಿಎಸ್‍ಐಗಳು ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾದ ವ್ಯವಸ್ಥೆ (ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ಹಾಗೂ ಮಧ್ಯಾಹ್ನ 2 ರಿಂದ ರಾತ್ರಿ 8 ಹಾಗೂ ರಾತ್ರಿ ಪಾಳಿ) ಜಾರಿಯಲ್ಲಿದೆ. ಮಹಿಳಾ ಎಎಸ್‍ಐಗಳು ಪುರುಷ ಅಧಿಕಾರಿಗಳಂತೆ ಠಾಣಾಧಿಕಾರಿಯಾಗಿ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಕರ್ತವ್ಯ ನಿರ್ವಹಿಸಬಹುದಾಗಿದ್ದು ರಾತ್ರಿ ಗಸ್ತಿನಿಂದ ವಿನಾಯಿತಿ ಇರುತ್ತದೆ. ನಗರ ಪ್ರದೇಶಗಳಲ್ಲಿ ತಡ ರಾತ್ರಿಯವರೆಗೆ ಕರ್ತವ್ಯ ನಿರ್ವಹಿಸಬೇಕಾದ ಸಂದರ್ಭ ಬಂದಾಗ ಮಹಿಳಾ ಪೊಲೀಸರಿಗೆ ಪ್ರತ್ಯೇಕ ವಾಹನದಲ್ಲಿ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಈಗ ಹಾಲಿ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಿಬ್ಬಂದಿ ನೇಮಕಾತಿ ಮಾಡುವಾಗ ಶೇ 20 ರಷ್ಟು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಈ ಸಂಖ್ಯೆಯನ್ನು ಶೇ 33 ರಷ್ಟಕ್ಕೆ ಏರಿಸಬೇಕೆಂಬ ಇರಾದೆ ಇದ್ದರೂ ಇದು ರಾಜ್ಯದ ಅಧಿಕಾರ ವ್ಯಾಪ್ತಿಗೆ ಬರುವುದರಿಂದ ಕೇಂದ್ರ ಗೃಹ ಇಲಾಖೆಯು ರಾಜ್ಯಗಳಿಗೆ ಮೀಸಲಾತಿ ಕಲ್ಪಿಸಲು ಸಲಹೆ ನೀಡಿದೆ.

ಕರ್ನಾಟಕದಲ್ಲಿ 2006 ರಿಂದ 2017 ರವರೆಗೆ 5,658 ಮಂದಿ ಮಹಿಳಾ ಸಿಬ್ಬಂದಿ ಹಾಗೂ 337 ಮಹಿಳಾ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್‍ಗಳನ್ನು ನೇಮಕ ಮಾಡಲಾಗಿದೆ. ಕಳೆದ ಮೂರು ವರ್ಷಗಳ ಅಂಕಿ ಅಂಶಗಳನ್ನು ತೆಗೆದುಕೊಳ್ಳುವುದೇ ಆದಲ್ಲಿ 2015-16ರ ಸಾಲಿನಲ್ಲಿ 615 ಮಹಿಳಾ ಪಿಸಿ, 13 ಮಹಿಳಾ ಪಿಎಸ್‍ಐ, 2016-17ರ ಸಾಲಿನಲ್ಲಿ 872 ಮಹಿಳಾ ಪಿಸಿ, 117 ಮಹಿಳಾ ಪಿಎಸ್‍ಐ ಹಾಗೂ 2017-18ರ ಸಾಲಿನಲ್ಲಿ 857 ಮಹಿಳಾ ಪಿಸಿ ಹಗೂ 57 ಮಹಿಳಾ ಪಿಎಸ್‍ಐಗಳನ್ನು ನೇಮಕ ಮಾಡಲಾಗಿದೆ.

ಎಲ್ಲಾ ರಾಜ್ಯಗಳಲ್ಲೂ ಮಹಿಳಾ ಪೊಲೀಸರನ್ನು ಹೆಚ್ಚು ಸಶಕ್ತವಾಗಿ ಬಳಸಿಕೊಳ್ಳುವತ್ತ ಮುಂದಡಿ ಇಡಲಾಗುತ್ತಿದೆ. ಬೆಂಗಳೂರಿನಲ್ಲಿ ಪಿಂಕ್ ಹೊಯ್ಸಳ ಜಾರಿಗೆ ಬಂದರೆ ನವದೆಹಲಿಯಲ್ಲಿ 60 ಮಹಿಳಾ ಪಿಎಸ್‍ಐಗಳನ್ನು ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನಾಗಿ 20 ಪೊಲೀಸ್ ಠಾಣೆಗಳಿಗೆ ನೇಮಿಸಿಕೊಳ್ಳಲಾಗಿದೆ. ಇದರ ಮುಖ್ಯ ಉದ್ದೇಶ ಪೊಲೀಸ್ ಠಾಣೆಗಳಲ್ಲಿ ಠಾಣಾಧಿಕಾರಿ ಅಥವಾ ತನಿಖಾಧಿಕಾರಿ ಲಭ್ಯವಿಲ್ಲದಿದ್ದ ಸಂದರ್ಭದಲ್ಲಿ ಈ ಮಹಿಳಾ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಥಮವಾಗಿ ಸಂಪರ್ಕಕ್ಕೆ ಸಿಗುವಂತಾಗುತ್ತದೆ. ಅವರಿಗೆ ಸಂವಹನ ಕೌಶಲ್ಯ ತರಬೇತಿ, ಪೊಲೀಸ್ ದೂರುಗಳನ್ನು ಸೂಕ್ಷ್ಮವಾಗಿ ನಿಭಾಯಿಸುವಂತೆ ತರಬೇತಿ ನೀಡಲಾಗಿರುತ್ತದೆ.

ಮಹಿಳಾ ಪೊಲೀಸರಿಗೆ ಅಗತ್ಯವಾದ ಸವಲತ್ತುಗಳೂ ಇದ್ದೇ ಇವೆ. ಗರ್ಭಪಾತವಾದಲ್ಲಿ ಆರು ವಾರಗಳ ರಜೆ ಇರುತ್ತದೆ. ಮಹಿಳಾ ಸರ್ಕಾರಿ ನೌಕರರು ಮಗುವೊಂದನ್ನು ದತ್ತು ಪಡೆದರೆ 60 ದಿನಗಳಿಗೆ ಮೀರದಂತೆ ರಜೆ ಪಡೆಯಬಹುದಾಗಿದೆ. ಮತ್ತು 1 ವರ್ಷದವರೆಗೆ ಅಥವಾ ದತ್ತು ಸ್ವೀಕರಿಸಿದ ಮಗುವಿಗೆ 1 ವರ್ಷಗಾಗುವವರೆಗೆ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಕುಟುಂಬ ಯೋಜನೆಯನ್ನು ಅಳವಡಿಸಿಕೊಳ್ಳುವ ಸಲುವಾಗಿ 7 ದಿನಗಳ ಕಾಲ ರಜೆಯನ್ನು ಪಡೆಯಬಹುದಾಗಿರುತ್ತದೆ. ಕೇಂದ್ರ ಸರ್ಕಾರದ ಮಹಿಳಾ ಅಧಿಕಾರಿ/ಸಿಬ್ಬಂದಿಗೆ ಮಕ್ಕಳಿದ್ದ ಪಕ್ಷದಲ್ಲಿ (1 ಅಥವಾ 2 ಮಕ್ಕಳಿದ್ದಲ್ಲಿ) ಅವರಿಗೆ ಶಿಶುಪಾಲನಾ ರಜೆ ಎಂದು 730 ದಿನಗಳವರೆಗೆ ಪಡೆಯಬಹುದಾಗಿರುತ್ತದೆ. ಕೆ.ಸಿ.ಎಸ್.ಆರ್. ನಿಯಮಗಳ ಅನ್ವಯ ಮಹಿಳಾ ನೌಕರರು ಹೆರಿಗೆ ರಜೆಯನ್ನು 180 ದಿನಗಳ ಅವಧಿಯವರೆಗೆ ಬಳಸಿಕೊಳ್ಳಬಹುದಾಗಿದೆ.

ಮಹಿಳಾ ಪೊಲೀಸ್ ಸಿಬ್ಬಂದಿ ಕೂಡ, ನಾಯಕತ್ವ ಗುಣಗಳನ್ನು ಪ್ರತಿಪಾದಿಸಿ ಸಮಾಜದಲ್ಲಿ ಗೌರವಯುಕ್ತ ಸ್ಥಾನ ದೊರಕಿಸಿಕೊಳ್ಳಬಹುದು. ಸಾಮಾನ್ಯವಾಗಿ ಪೊಲೀಸರನ್ನು ಕಂಡರೆ ಜನರು ಭಯ ಪಡುತ್ತಾರೆ ಅಥವಾ ಅವರು ಒರಟರೆಂಬ ಭಾವನೆ ರೇಜಿಗೆ ಹುಟ್ಟಿಸುವುದಿದೆ. ಆದರೆ, ನಾಯಕತ್ವ ಗುಣ ಹೇರಳವಾಗಿರುವಂತಹ ವೃತ್ತಿ ಇದು ಎಂದು ಹೆಮ್ಮೆಯಿಂದ ಹೇಳಬಹುದು.

ನಾವು ಹಲವಾರು ಜನರ ಪ್ರಾಣ ಉಳಿಸಿದ್ದೇವೆ, ಅಪರಾಧ ತಡೆಗಟ್ಟಿದ್ದೇವೆ. ದುಷ್ಟರಿಗೆ ಕಂಬಿ ಎಣಿಸುವಂತೆ ಮಾಡಿದ್ದೇವೆ ಎಂಬ ತೃಪ್ತಿಯ ಭಾವ ಅದರ ಹಿಂದಿನ ಶ್ರಮವನ್ನು ಮರೆಸುತ್ತದೆ. ಇಲ್ಲಿ ಪ್ರಾಮಾಣಿಕತೆಗೆ ಬೆಲೆ ಇದ್ದೇ ಇರುತ್ತದೆ. ಜವಾಬ್ದಾರಿಗಳು ಜೀವನವನ್ನು ಪಣಕ್ಕೊಡ್ಡುವಂತಹದಾಗಿರಬಹುದು. ಇದು ಬಹಳಷ್ಟು ವೇಳೆ ಅತೀ ಭಾರವೆನಿಸಿದರೂ ನಮ್ಮ ಕಾರ್ಯತತ್ಪ್ಪರತೆ ಸನ್ನಿವೇಶಕ್ಕೆ ತಿರುವು ನೀಡಿ ತಾತ್ವಿಕ ಅಂತ್ಯ ಕಾಣಿಸುತ್ತದೆ.

ಈ ವೃತ್ತಿಯಲ್ಲಿ ಯಶಸ್ವಿಯಾಗಲು ವಯಸ್ಸಿಗಿಂತ ಹೆಚ್ಚಾಗಿ ದಿನನಿತ್ಯ ಎದುರಾಗುವ ಪ್ರಸಂಗಗಳನ್ನು ನಿಭಾಯಿಸುವ ಚಾಕಚಕ್ಯತೆ, ಪರಿಣತಿ ಹಾಗೂ ದೇಹಸ್ಥಿತಿ ಉತ್ತಮವಾಗಿ ಇದ್ದರೆ ಸ್ಪರ್ಧೆಯಲ್ಲಿ ಮುಂದೆ ಇದ್ದಂತೆ.

ವಯಸ್ಸಿನೊಂದಿಗೆ ಅನುಭವವೂ ಹೆಚ್ಚಾಗಿ ದಿನನಿತ್ಯದ ವ್ಯವಹರಣೆಯನ್ನು ನಿಭಾಯಿಸಲು ಸಹಾಯಕವಾಗುತ್ತದೆ. ಯುವತಿಯರು ಪೊಲೀಸ್ ವೃತ್ತಿಯತ್ತ ಹೆಚ್ಚು ಗಮನ ಹರಿಸುವಂತಾಗಲು, ಶಾಲಾ ದಿನಗಳಲ್ಲೇ ಅವರಿಗೆ ಇದರ ಬಗ್ಗೆ ತಿಳಿಸುವ ಅಗತ್ಯವಿದೆ.

 

 

– ಸವಿತಾ ಶ್ರೀನಿವಾಸ ಐ.ಪಿ.ಎಸ್.

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *