ಚಿಂತನೆ/ ಮೂಡಲಿ ಆತ್ಮವಿಶ್ವಾಸದ ತೇಜ- ಡಾ. ಮಾಲತಿ ಪಟ್ಟಣಶೆಟ್ಟಿ

ಬೇಡ ಕಣ್ಣೀರ ಸಜಾ -ಮೂಡಲಿ ಹೆಣ್ಣ ಕಣ್ಣಲ್ಲಿ ಆತ್ಮವಿಶ್ವಾಸದ ತೇಜ. ಹೆಣ್ಣಿನ ಕಣ್ಣೀರಿಗೆ ಕಾರಣಗಳು ಸಾವಿರಾರು. ಆದರೆ ಕಣ್ಣೀರಿಗೆ ಅನೇಕ ಸಾಂದರ್ಭಿಕ ಮಹತ್ವಗಳಿವೆ. ಅದು ಹರಿಯುವುದಕ್ಕೆ ಕೆಲವೊಮ್ಮೆ ಕಾರಣವೇ ಬೇಕಿಲ್ಲ. ಆದರೆ ಭಾವನೆಗಳ ಅಭಿವ್ಯಕ್ತಿಗೆ ಅದೊಂದೇ ದಾರಿಯೇ? ಹೆಣ್ಣಿನ ಕಣ್ಣೀರನ್ನು ಅಸಹಾಯಕತೆ ಎಂದು ಭಾವಿಸುವ, ಮತ್ತಷ್ಟು ಕಿರುಕುಳ ನಡೆಸುವ ಜನರ ನಡುವೆ ಆತ್ಮವಿಶ್ವಾಸವನ್ನು ಪ್ರದರ್ಶಿಸುವುದು ಕಷ್ಟದ ಕೆಲಸ. ಆದರೆ ದಿಟ್ಟತನದಿಂದ ಅದನ್ನು ರೂಢಿಸಿಕೊಳ್ಳುವುದು ಅನಿವಾರ್ಯ.


‘ಹೆಣ್ಣೆಂದರೆ ಕಣ್ಣೀರು’ – ಶಾಪದಂತಿರುವ ಈ ವ್ಯಾಖ್ಯೆಯು ಬಹಳ ಹಿಂದಿನಿಂದ ಬೆನ್ನಿಗೆ ಅಂಟಿಕೊಂಡು ಬಂದಿದೆ. ಇದನ್ನು ಕೊಡವಿಕೊಂಡು ಮೇಲೇಳಬೇಕಾದ ಕಾಲವು ಈಗ ಬಂದಿದೆ. ಶಿಕ್ಷಣ, ಆರ್ಥಿಕ ಸ್ವಾವಲಂಬನ ಮತ್ತು ಲೋಕಾನುಭವಗಳ ಮಹಿಳಾ ಲೋಕದಾಗಸದಲ್ಲಿ ಸ್ವಾತಂತ್ರ್ಯ, ಸ್ವಾಭಿಮಾನದ ರೆಕ್ಕೆಗಳನ್ನು ಬಿಚ್ಚಿ ವಿಹರಿಸಬೇಕಾದದ್ದು ಈ ಸಮಯದ ಬೇಡಿಕೆ. ಪುರುಷರಲ್ಲಿ ಕಣ್ಣಿರಿಲ್ಲವೇ? ಇದ್ದೇ ಇರುತ್ತವೆ, ಆದರೆ ಪ್ರದರ್ಶನಗೊಳ್ಳುವುದಿಲ್ಲ. ಕಣ್ಣೀರು ಎಲ್ಲ ಜೀವ ಜೀವಿಗಳ ಒಂದು ಸಹಜ ಅಭಿವ್ಯಕ್ತಿ! ಎತ್ತು, ಆಕಳು, ಕುದುರೆ, ಆನೆ, ನಾಯಿಗಳ ಕಣ್ಣಾಲೆಗಳಲ್ಲಿಯ ಕಣ್ಣೀರನ್ನು ನಾನು ಸ್ವತ: ನೋಡಿದ್ದೇನೆ! ಚಳಿಗೊ, ಹಸಿವಿಗೋ, ಅನಾರೋಗ್ಯಕ್ಕೋ, ರಾತ್ರಿಯಿಡಿ ಊಳಿಡುವ ನಾಯಿ ಪಾಡಿಗೆ ಮರುಗದವರೇ ಇಲ್ಲ. ಜೀವಿ ಇದ್ದಲ್ಲಿ ನೋವು ಇದ್ದೇ ಇರುತ್ತದೆ. ಮಾತು ಬಾರದ ಕೂಸು ಹಸಿದಾಗ, ಆರೋಗ್ಯವಿಲ್ಲದಾಗ ಅಥವಾ ಅಲಕ್ಷ್ಯಕ್ಕೆ ಒಳಗಾದಾಗ ಅಳುತ್ತವೆ. ಅಳು ಹಸುಳೆಗಳ ಸಹಜ ಅಭಿವ್ಯಕ್ತಿ!

ನಾವು ಶಾಲೆ ಕಲಿಯುವಾಗ ಟಿ.ವಿ. ಮೊಬೈಲುಗಳು ಇರಲಿಲ್ಲ. ಮನರಂಜನೆಗೆ ಸಿನೆಮಾ ಗೃಹಗಳಿದ್ದವು. ಅಪ್ಪನ ಹತ್ತಿರ ಸಿನೇಮಾಕ್ಕಾಗಿ ನಾಲ್ಕಾಣೆ ಬೇಡಿದಾಗ ಅಪ್ಪ ನಗುತ್ತ ಕೈಗೆ ರೊಕ್ಕವಿಡುವಾಗ ಅನ್ನುತ್ತಿದ್ದರು. “ಹೋಗಿ ಬರ್ರೆವ್ವಾ, ರೊಕ್ಕಾ ಕೊಟ್ಟು ಅತ್ತ ಬರ್ರಿ”. ಹಳೆಯ ಕಾಲದ ಚಲನಚಿತ್ರಗಳು ಪ್ರೇಕ್ಷಕರನ್ನು ಅಳಿಸಲೆಂದೆ ದೇವರಾಣೆಗೂ ಹುಟ್ಟಿಕೊಂಡಿದ್ದವೆಂದು ಕಾಣುತ್ತವೆ. ಬಡತನದಲ್ಲಿಯ ಕುಡುಕ ಗಂಡನು ಹೆಂಡತಿಯನ್ನು ಹಿಗ್ಗಾ ಮುಗ್ಗಾ ಥಳಿಸುವ ದೃಶ್ಯ, ಮುಗ್ಧ ಮಕ್ಕಳಿಗೆ ಚಿತ್ರ ಹಿಂಸೆ ನೀಡುವ ದೃಶ್ಯ, ಮುಪ್ಪಿನ ತಾಯಿ ತಂದೆಗಳನ್ನು ರಾತ್ರೋ ರಾತ್ರಿ ಹೊರಗೆಳೆದು ಅಟ್ಟುವ ದೃಶ್ಯಗಳನ್ನು ಸಿನೇಮಾಗಳಲ್ಲಿ ನೋಡಿ ನಾನು ಧ್ವನಿಯೆತ್ತಿ ಅಳುತ್ತಿದ್ದೆ. ಅಕ್ಕಪಕ್ಕದಲ್ಲಿ ಕುಳಿತ ಹೆಂಗಸರು ಮೊಣಕೈಯಿಂದ ತಿವಿತಿವಿದು ನನ್ನನ್ನು ಬೈಯುತ್ತಿದ್ದರು. ಆ ದಿನಗಳಲ್ಲಿ ಸಿನೇಮಾದವರು ಪ್ರೇಕ್ಷಕರನ್ನು ಎಷ್ಟು ಅಳಿಸುತ್ತಿದ್ದರೋ ಅದರ ಮೇಲೆ ಸಿನೇಮಾದ ಯಶಸ್ಸು ಅವಲಂಬಿಸುತ್ತಿತ್ತೆಂದು ನನಗೆ ಅನ್ನಿಸಿದೆ.

ಬಹಳ ಹಿಂದಿನ ಒಂದು ನೆನಪು ಅಟ್ಟಿಕೊಂಡು ಬಂದಿದೆ. ಧಾರವಾಡ ಆಕಾಶವಾಣಿಯಲ್ಲಿಯ ನಾಟಕ ವಿಭಾಗದ ನಿರ್ದೇಶಕರ ನಿರ್ದೇಶನದಲ್ಲಿಯ ನಾಟಕಗಳಲ್ಲಿ ಅಳುವ ಹೆಣ್ಣಿನ ಪಾತ್ರಗಳನ್ನು ನನಗಾಗಿ ಯಾವಾಗಲೂ ಕಾದಿರಿಸಿ ಇಡುತ್ತಿದ್ದರು. ರಿಹರ್ಸಲ್‍ಗಳಲ್ಲಿ ಪದೇ ಪದೇ ಅಳುವುದು ಇರುತ್ತಿತ್ತು. ಲೈವ್ ಕಾರ್ಯಕ್ರಮಗಳಲ್ಲೂ ನಿಜವಾಗಿ ನಾನೂ ಅತ್ತು ಬಿಡುತ್ತಿದ್ದೆ. ಹೀಗೆ ನಾಲ್ಕು ವರ್ಷಗಳ ಎಲ್ಲ ಅಳುವ ಪಾತ್ರಗಳಲ್ಲಿ ನಾನು ತುಂಬಿ ತುಳುಕುತ್ತಿದ್ದೆ. ಕೊನೆಗೆ ಧೈರ್ಯದಿಂದ ಒಮ್ಮೆ ಕೇಳಿಯೇ ಬಿಟ್ಟೆ. “ಅಳುವ ಪಾತ್ರ ನನಗೇ ಏಕೆ?” ಉತ್ತರವೇನು ಬರುತ್ತಿತ್ತು ಗೊತ್ತೇ? “ನಿನ್ನ ಬಿಟ್ರ ಯಾರಿಗೂ ಚೆಂದಾಗಿ ಅಳಾಕ ಬರೂದಿಲ್ಲ” ಅಂತ ಅವರು ನಕ್ಕು ಹೇಳುತ್ತಿದ್ದರು. ಕೊನೆಗೆ ಬೇಸತ್ತು ನಾಟಕ ನಿರ್ದೇಶಕರಿಗೆ ಒಂದು ಪತ್ರ ಬರೆದು ಕೊಟ್ಟೆ. ನಾನು ಅಳುವ ಪಾತ್ರಗಳನ್ನು ತ್ಯಜಿಸಲು ನಗುತ್ತ ತೀರ್ಮಾನಿಸಿದ್ದೇನೆ” ಎಂದು ಮುಂದೆ ಅಳು ನಿಂತು ನನ್ನ ನಗೆಯ ಯುಗವು ಪ್ರಾರಂಭವಾಯಿತು ಎಂದೇ ಹೇಳಬಹುದು.

ಎಷ್ಟೋ ಸಲ ಕತೆ, ಕಾದಂಬರಿಗಳನ್ನು ಓದುವಾಗ, ಆತ್ಮಕಥೆ ಕವಿತೆಗಳನ್ನು ಓದುವಾಗ ಉಕ್ಕುವ ಕಣ್ಣೀರಿಗೆ ‘ಅಳು’ ಎಂದು ಹೆಸರಿಡಲಾಗದು. ಅವು ಸಹೃದಯರ ಸಹಸ್ಪಂದನದ ಪ್ರತಿಕ್ರಿಯೆಗಳು! ಅನಪೇಕ್ಷಿತವಾಗಿ ಬಂದ ಬಹುಮಾನ, ಪ್ರಶಸ್ತಿ, ಅಥವಾ ಪ್ರಥಮ ಸ್ಥಾನಮಾನದ ಮಾಹಿತಿ ಸಿಕ್ಕಾಗಲೆಲ್ಲಾ ಕಣ್ಣಾಲೆಗಳಲ್ಲಿ ಮುತ್ತಿನಂತ ಕಣ್ಣೀರು ಉಕ್ಕುತ್ತವೆ. ಇವಕ್ಕೆ ಕಣ್ಣೀರು ಅನ್ನುವುದು ಬೇಡ. “ಆನಂದ ಬಾಷ್ಪ” ಅನ್ನೋಣ. ಪಾಠ ಮಾಡುವ ಶಿಕ್ಷಕರು, ಹಿರಿಯರು ಮತ್ತು ಅಭಿಮಾನಿಗಳು ಒಳ್ಳೆಯ ನುಡಿಗಳನ್ನು ಆಡಿದಾಗ ಕಣ್ಣೀರು ಸಹಜವಾಗಿ ಕೆಳಗಿಳಿಯುತ್ತವೆ. ಇವು ಕೃತಜ್ಞತೆಯ ಅಶ್ರುಗಳು. ಕಣ್ಣೀರು ಅಳುವುದಕ್ಕದೆ ಇರುತ್ತವೆ ಎಂದು ಹೇಳಿಕೊಳ್ಳಬೇಕಿಲ್ಲ.

ಉದಾಹರಣೆಗೆ ದ್ರೌಪದಿಯ ವಸ್ತ್ರಾಪಹರಣದ ಸಂದರ್ಭವನ್ನೇ ತೆಗೆದುಕೊಳ್ಳೋಣ. ದುಶ್ಶಾಸನನು ಗುರುಹಿರಿಯರು ಮತ್ತು ಮಂತ್ರಿ ವರ್ಗಗಳಿಂದ ತುಂಬಿದ ಸಭೆಯಲ್ಲಿ ದ್ರೌಪದಿಯನ್ನು ಅವಳನ್ನು ಅವಮಾನಿಸಲಿಕ್ಕೆಂದೇ ಸೀರೆ ಸೆಳೆದಾಗ ದ್ರೌಪದಿ ಅಳಲಿಲ್ಲ. ಆಕೆ ತನ್ನ ಮಾನಾಪಹರಣಕ್ಕಾಗಿ ದುಶ್ಶಾಸನನನ್ನು ಮತ್ತು ಅಟ್ಟಹಾಸಗೈಯುತ್ತಿರುವ ದುರ್ಯೋಧನನನ್ನು, ತಲೆ ತಗ್ಗಿಸಿ ಮೌನವಾಗಿ ಕುಳಿತ ಧೃತರಾಷ್ಟ್ರ, ಭೀಷ್ಮ, ದ್ರೋಣಾದಿ ಳನ್ನು ಸಾತ್ವಿಕ ಕ್ರೋಧದಲ್ಲಿ ನಾಲ್ಕು ಕಣ್ಣ ಹನಿ ಉದುರಿಸುತ್ತ ಶಪಿಸುತ್ತಾಳೆ. ‘ನಿಮ್ಮೆಲ್ಲರನ್ನು ಯುದ್ಧದಲ್ಲಿ ಕೊಲ್ಲಲು ನಾನು ಪಣ ತೊಡುತ್ತೇನೆ”. ದ್ರೌಪದಿಯ ಕಣ್ಣೀರಿಗೆ ಸ್ವಾಭಿಮಾನದ, ವೀರಾವೇಶದ ಕಣ್ಣೀರು ಅನ್ನಬಹುದು. ಅವು ಅವಳ ಪ್ರತಿಭಟನೆಯ ವೀರೋಚಿತ ಕಣ್ಣೀರಾಗಿದ್ದವು!

ಅಳುವಿನ ಉತ್ತರ ಬೇಕಿಲ್ಲ : ಕೆಲವು ಹೊಟ್ಟೆಕಿಚ್ಚಿನವರು ವಿನಾಕಾರಣವಾಗಿ ಇನ್ನೊಬ್ಬರನ್ನು ದೂಷಿಸಲು ಮುಂದಾಗುತ್ತಾರೆ. ಆಗ ಅಳುಮುಂಜಿ ಹೆಣ್ಣುಮಕ್ಕಳು ಅತ್ತು ತಮ್ಮ ಅಶಕ್ತತೆಯನ್ನು, ಅಸಹಾಯಕತೆಯನ್ನು ತೋರುತ್ತಾರೆ. ಆ ಮೂಲಕ ತಮ್ಮ ಮೇಲಿನ ಎಲ್ಲ ದೂಷಣಗಳನ್ನು ನಾವು ಸ್ವೀಕರಿಸಿದ್ದೇವೆ ಎನ್ನುವಂತೆ ವರ್ತಿಸುತ್ತಾರೆ. ಇದೆಲ್ಲವು ಕೈಲಾಗದವರ ಮಾತು. ಪ್ರತಿಸಲವು ನಿಮ್ಮದು ಅಳುವಿನ ಉತ್ತರವೆಂಬುದು ನಿಶ್ಚಿತವಾದರೆ ವಿರೋಧಿಗಳು ತಿರು ತಿರುಗಿ ಆಪಾದನೆಗೆ ನಿಂತುಕೊಳ್ಳುತ್ತಾರೆ. ಇದೆಲ್ಲ ಯಾರಿಗೆ ಬೇಕು? ಖಂಡಿತವಾಗಿ ಬೇಕಿಲ್ಲ, ಬದಲಾಗಿ ದೂಷಣಿಯ ಕಾರಣಗಳನ್ನು ಗಂಭಿರವಾಗಿ ಪ್ರಶ್ನಿಸಿ ನಿಂತಾಗ ನಾವು ಅರ್ಧ ಯುದ್ಧವನ್ನು ಗೆದ್ದುಕೊಂಡಂತೆ ಇರುತ್ತೇವೆ. ದೂಷಣಕಾರರು ಈ ಧೈರ್ಯದ ಮುಂದೆ ನಿಲ್ಲದೆ ಬಾಲ ಮುಚ್ಚಿಕೊಂಡು ಅಜ್ಞಾತವಾಸಕ್ಕೆ ತೆರಳುತ್ತಾರೆ. ದೌರ್ಬಲ್ಯದ ಕಣ್ಣೀರಿನ ಉತ್ತರಕ್ಕೆ ಜಗತ್ತಿನಲ್ಲಿ ಯಾವ ಬೆಲೆಯೂ ಇಲ್ಲ.

ನಮ್ಮ ಸಮಾಜದಲ್ಲಿ ಪಾಷಾಣ ಹೃದಯಗಳಿಗೆ ಕೊರತೆಯಿಲ್ಲ. ಕಣ್ಣೀರು ಹರಿಸಲೇಬೇಕಾದ ಪ್ರಸಂಗಗಳಲ್ಲಿ ಅವರು ಕಲ್ಲಿನಂತೆ ನಿಂತಿರುತ್ತಾರೆ. ಇಂಥವರು ನೀಚರೆ ಇರಲು ಸಾಧ್ಯ ಅಥವಾ ಮಾನಸಿಕವಾಗಿ ಅಸ್ವಸ್ಥರಿರಬಹುದು. ಹಿರಣ್ಯಕಶಿಪು ತನ್ನ ಮಗ ಪ್ರಹ್ಲಾದನು ನಾರಾಯಣನನ್ನು ನೆನೆಯುವುದನ್ನು ಸಹಿಸಲಾಗದೆ ಬಗೆಬಗೆಯ ಕ್ರೂರ ಶಿಕ್ಷೆಗಳನ್ನು ಕೊಟ್ಟ ನಂತರ ಒಂದು ತೊಟ್ಟು ಕಣ್ಣೀರನ್ನು ಹರಿಸುವುದಿಲ್ಲ. ದೇವಕಿಯ ಅದೇ ಹುಟ್ಟಿದ ಏಳು ಹಸುಳೆಗಳನ್ನು ಸಂಹರಿಸುವಾಗ ಕಂಸನ ಕಣ್ಣಲ್ಲಿ ಒಂದು ಹನಿ ನೀರು ಬರುವುದಿಲ್ಲ. ಏಕೆಂದರೆ ಅವನನ್ನು ಕಾಡಿದ್ದು ಸ್ವಂತ ಮರಣದ ಭಯ. ಮಾನವೀಯತೆ ಇಲ್ಲದ ಇಂಥ ಪಾತ್ರಗಳನ್ನು ನಮ್ಮ ಪುರಾಣ, ಪುಣ್ಯಕಥೆ ಮಹಾಕಾವ್ಯಗಳಲ್ಲಿ ‘ರಾಕ್ಷಸರು’ ಎಂದು ಕರೆದದ್ದು ಅನ್ವರ್ಥಕವಾಗಿದೆ.

ವೈಜ್ಞಾನಿಕವಾಗಿ ಕಣ್ಣೀರು ಹರಿಸುವುದು ಆರೋಗ್ಯಕರ. ಅವು ಕಣ್ಣನ್ನು ಸ್ವಚ್ಛವಾಗಿರಿಸುವ ವಿಶಿಷ್ಟ ದ್ರವ. ಕಣ್ಣೀರು ಮನಸ್ಸನ್ನು ಹೃದಯವನ್ನು ಕಾಪಾಡುವ ರಕ್ಷಾ ಕವಚವೆಂದು ವಿಜ್ಞಾನಿಗಳು ಹೇಳುತ್ತಾರೆ. ಈ ಸಂದರ್ಭದಲ್ಲಿ ನಾನು ಬಾಲ್ಯದಲ್ಲಿ ಓದಿದ ಒಂದು ಕವಿತೆ ನೆನಪಾಗುತ್ತದೆ. ಕವಿತೆಯ ಹೆಸರು “ಊome ಣheಥಿ bಡಿoughಣ heಡಿ Wಚಿಡಿಡಿioಡಿ ಆeಚಿಜ” ಇದೊಂದು ಪುಟ್ಟ ಕಥನಕವನ, ಒಬ್ಬ ಸುಂದರ ಯುವತಿಯ ಜೊತೆಗೆ ಒಬ್ಬ ಸೈನಿಕನ ಮದುವೆಯಾಗುತ್ತದೆ. ಒಂದು ವರ್ಷದಲ್ಲಿ ಮಗುವಾಗುತ್ತದೆ. ಆಕೆ ಬಸುರಿಯಾಗಿದ್ದಾಗಲೇ ಸೈನಿಕನಿಗೆ ಯುದ್ಧಕ್ಕಾಗಿ ಕರೆ ಬರುತ್ತದೆ. ಕೆಲ ತಿಂಗಳಾದ ಮೇಲೆ ಯುದ್ಧವೂ ಮುಗಿಯುತ್ತದೆ. ಆಕೆ ಗಂಡನ ಬರುವಿಗಾಗಿ ಕಾಯುತ್ತಾಳೆ. ಆದರೆ ಬಾಗಿಲಿಗೆ ಅವನ ಶವದ ಪೆಟ್ಟಿಗೆ ಬರುತ್ತದೆ. ಇದು ಆಕೆಗೆ ಆಘಾತವನ್ನುಂಟು ಮಾಡುತ್ತದೆ. ಗಂಡನ ಶವವನ್ನು ನೋಡಿದ ಆಕೆ ನಿಂತಲ್ಲಿ ಕಲ್ಲಾಗುತ್ತಾಳೆ. ಮೂರು ದಿನವಾದರೂ ಕಣ್ಣೆವೆ ಪಿಳುಕಿಸುವುದಿಲ್ಲ. ಊರವರು ಚಿಂತಿಸುತ್ತಾರೆ ಮತ್ತು ನಿರ್ಧರಿಸುತ್ತಾರೆ. ಹೇಗಾದರೂ ಮಾಡಿ ಆಕೆಯನ್ನು ಅಳಿಸಬೇಕು. ಇಲ್ಲದಿದ್ದರೆ ಸಾವು ಕಟ್ಟಿಟ್ಟ ಬುತ್ತಿ ಎಂದು. ಒಬ್ಬ ವೃದ್ಧೆ ಬಂದು ಆಕೆಯ ಅಳುವ ಕಂದನನ್ನು ಮಡಿಲಲ್ಲಿ ಇಡುತ್ತಾಳೆ. ಮಗುವನ್ನು ನೋಡಿದ ತಕ್ಷಣ ಎಲ್ಲಿತ್ತೋ ಏನೋ ಅವಳ ದು:ಖ! ಮುಗಿಲು ಹರಿಯುವಂತೆ ಎತ್ತರದ ಧ್ವನಿಯಲ್ಲಿ ಬೋರಾಡಿ ಅಳುತ್ತಾಳೆ ಹಾಗೆ ಆಕೆ ಮಗುವಿಗಾಗಿ ಬದುಕಬೇಕೆಂಬ ಮನಸ್ಥಿತಿಯನ್ನು ತಂದುಕೊಳುತ್ತಾಳೆ.

ದಿನವೂ ಅಳುವವರನ್ನು ರಮಿಸುವವರಾರು? ಎನ್ನುವದೊಂದು ನುಡಿವಟ್ಟು ಇದೆ. ಸಣ್ಣ ಸಣ್ಣ ವಿಷಯಕ್ಕೆ ಕಣ್ಣೀರು ಸುರಿಸುವವರ ಕಣ್ಣೀರಿಗೆ ಕಿಮ್ಮತ್ತು ಇರುವುದಿಲ್ಲ. ಇಂಥ ಅಳುವನ್ನು ಒಂದು ಅಸ್ತ್ರವನ್ನಾಗಿ ಮಾಡಿಕೊಂಡು ನಿಷ್ಕಾರಣವಾಗಿ ಬಳಸಿಕೊಳ್ಳುವ ಅಂಜುಬುರುಕಿಯರನ್ನು ಯಾರೂ ಗೌರವಿಸುವಿದಿಲ್ಲ. ‘ಮೊಸಳೆ ಕಣ್ಣೀರು’ ಎಂಬ ಇನ್ನೊಂದು ನುಡಿಗಟ್ಟು ಇದೆ. ಕೃತ್ರಿಮ ಕಣ್ಣೀರಿಗಾಗಿ ಇದರ ಪ್ರಯೋಗವಾಗುತ್ತದೆ. ಇದನ್ನು ನಾಟಕದ ಕಣ್ಣೀರು ಎಂದು ಅನ್ನಬಹುದು. ಕಸ್ತೂರಬಾ ನಿಧನರಾದಾಗ ಗಾಂಧೀಜಿ ಅಳಲಿಲ್ಲ. ಅವರ ಕಣ್ಣಾಲಿಗಳಲ್ಲಿ ವಜ್ರದಂತಹ ಎರಡು ಕಣ್ಣು ಹನಿ ನಿಂತಿದ್ದವು… ಇವು ಕಸ್ತೂರಬಾ ಅವರ ಸೇವೆ, ಸಹನೆ, ಕ್ಷಮೆಗಳನ್ನು ನೆನೆಯುತ್ತ ಬಂದ ಕೃತಜ್ಞತೆಯ ಕಣ್ಣೀರು!

ಆಧುನಿಕ ಯುಗದಲ್ಲಿ ಮಹಿಳೆಯು ಮನೆಯಲ್ಲಿ, ಮನೆಯಿಂದ ಹೊರಗೆ ಎರಡು ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾಳೆ. ಪುರುಷರ ಮಧ್ಯ ಸರಿಸಮಾನವಾಗಿ ಕೆಲಸ ಹಂಚಿಕೊಂಡು ಕರ್ತವ್ಯಗಳನ್ನು ನಿಭಾಯಿಸಬೇಕಾಗುತ್ತದೆ. ಅವರಂತೆ ಬುದ್ದಿ ಕೌಶಲ್ಯಗಳನ್ನೂ ತೋರಬೇಕಾಗುತ್ತದೆ. ಮೇಲಧಿಕಾರಿಗಳು ಕಠೋರ ನುಡಿಗಳನ್ನು ಆಡಬಹುದು. ಸಹೋದ್ಯೋಗಿಗಳು ದೂಷಿಸಬಹುದು. ಆ ಸಂದರ್ಭದಲ್ಲಿ ಕಣ್ಣೀರು ಅವಳಿಂದ ಉತ್ತರ ರೂಪದಲ್ಲಿ ಬರಬಾರದು. ಪ್ರಾಮಾಣಿಕವಾಗಿ ದುಡಿಯುವಂಥವಳು ದೂಷಣೆಯ, ಆಪಾದನೆಯ ಕಟುಮಾತಿಗೆ ಶಾಂತವಾಗಿ ಕಾರಣ ಕೇಳುವಂಥ ಧೈರ್ಯವನ್ನು ಮಾಡಬೇಕು. ಅತ್ತಳೋ ಕತೆ ಮುಗಿಯಿತು. ‘ಪಾಪದ ಹೆಂಗಸು’ ಎಂದು ಕರುಣೆ ತೋರಿಸುವ ಪುರುಷ ಸಹೋದ್ಯೋಗಿಗಳು ಪದೇ ಪದೇ ಅವಳನ್ನು ಕಾಡಲು ಪ್ರಾರಂಭಿಸುತ್ತಾರೆ. ಈ ದುಃಸ್ಥಿತಿಯಿಂದ ಪಾರಾಗಬೇಕಾದರೆ ಆತ್ಮಾಭಿಮಾನದ ಧೈರ್ಯದ ಪ್ರಶ್ನೆಗಳನ್ನು ಮುಂದಿಡಬೇಕು ಎಂದಾಗ ಕಾಡುವವರು ಎಚ್ಚೆತ್ತುಕೊಳ್ಳುತ್ತಾರೆ.

ಕಣ್ಣೀರಿಗೆ ಅನೇಕ ಸಾಂದರ್ಭಿಕ ಮಹತ್ವಗಳಿವೆ. ಆದರೆ ದೂಷಣೆ, ಆಪಾದನೆ, ಅವಗಣನೆಯ ಸಮಯದಲ್ಲಿ ಆತ್ಮವಿಶ್ವಾಸದಿಂದ ಪ್ರಶ್ನೆಗಳನ್ನು ಕೇಳುವ ಹಕ್ಕು ಮಹಿಳೆಗಿದೆ. ಬುದ್ದಿಯ ಚಾಕಚಕ್ಯತೆಯ ಕೋಟೆಯನ್ನು ಕಟ್ಟಿಕೊಂಡ ಮಹಿಳೆಯನ್ನು ವಿನಾಕಾರಣವಾಗಿ ಕಾಲ್ಕೆದರಿ ಕೆಣಕಲು ಯಾರೂ ಬರುವುದಿಲ್ಲ, ಬದಲಾಗಿ ಅಂಥ ಮಹಿಳೆಯರಿಗೆ ಗೌರವ, ಆದರಗಳು ಸಿಗುತ್ತವೆ.

ಡಾ. ಮಾಲತಿ ಪಟ್ಟಣಶೆಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *