Uncategorizedಚಿಂತನೆ

ಚಿಂತನೆ/ ಮಹಿಳಾ ಅಭಿವ್ಯಕ್ತಿ: ಕೆಲವು ಸವಾಲುಗಳು – ಎಚ್.ಎಸ್. ಶ್ರೀಮತಿ

ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ತನ್ನ ಪಾತ್ರವನ್ನು ಯಾವ ಕೊರತೆಯೂ ಬಾರದಂತೆ ನಿರ್ವಹಿಸಲು ಹೆಣ್ಣು ತನ್ನ ಜೀವವನ್ನೇ ತೇಯ್ದಿರುತ್ತಾಳೆ. ಈಗ ಸಾರ್ವಜನಿಕವಾಗಿ ಪ್ರಶ್ನಿಸಲಾಗುತ್ತಿದೆ. ಸಾಕ್ಷಿಗಳನ್ನು ಒದಗಿಸುವುದೂ ಅವಳ ಹೊಣೆಯೇ. ಇಲ್ಲವಾದರೆ ಅವಳ ಇನ್ನಿತರ ಯಾವುದೇ ಸಾಧನೆಗಳಿಗೂ ಬೆಲೆಯೇ ಇಲ್ಲ ಎಂಬಂತೆ ಆಗಿಬಿಡುತ್ತದೆ. ಸ್ವತಃ ಹೆಂಗಸರಿಗೇ ಇದು ಪಾಪಪ್ರಜ್ಞೆಯಾಗಿ ಕಾಡುವುದಿದೆ. ಇದರಿಂದ ಹೊರಬರುವುದು ಹೆಣ್ಣಿಗೆ ಸುಲಭದ ಮಾತಲ್ಲ.

ಸಿಮೋನ್ ದ ಬೊವಾ ತನ್ನ ‘ದ ಸೆಕೆಂಡ್ ಸೆಕ್ಸ್’ ಕೃತಿಯಲ್ಲಿ ಹೆಣ್ಣೊಬ್ಬಳು ತನ್ನ ಬಾಲ್ಯದಿಂದ ತೊಡಗಿ ಹದಿಹರಯ, ತಾರುಣ್ಯ, ಮಧ್ಯವಯಸ್ಸು, ಮುದಿವಯಸ್ಸುಗಳುದ್ದಕ್ಕೂ ಹೇಗೆ ಕಾಣಿಸಿಕೊಳ್ಳುತ್ತಾ ತನ್ನ ಆಯಸ್ಸು ಕಳೆಯುತ್ತಾಳೆ ಎಂಬುದನ್ನು ಬಾಹ್ಯ ವಿವರಗಳ ಮೂಲಕವೇ ಹಿಡಿದಿಡುತ್ತಾ ಹೋಗುತ್ತಾಳೆ. ಹದಿಹರಯಕ್ಕೆ ಕಾಲಿಡುತ್ತಿದ್ದಂತೆ ಹೆಣ್ಣು ಹೇಗೆ ಸ್ವಮೋಹಿಯಾಗುತ್ತಾಳೆ ಮತ್ತು ಅದೇ ಕಾರಣವಾಗಿ ತಾನು ಯಾರು ಎಂಬುದನ್ನೇ ಗುರುತಿಸಿಕೊಳ್ಳಲಾಗದೆ ಕಳೆದುಹೋಗುತ್ತಾಳೆ ಎಂಬುದನ್ನು ಚಿತ್ರವತ್ತಾಗಿ ನಿಲ್ಲಿಸುತ್ತಾಳೆ. ಸದಾಕಾಲವೂ ಕನ್ನಡಿಯ ಮುಂದೆ ತನ್ನನ್ನು ತಾನೇ ದಿಟ್ಟಿಸಿ ನೋಡುತ್ತಾ, ಮೋಹಿಸುತ್ತಾ ನಿಲ್ಲುವ ಹೆಣ್ಣು ಆ ಕನ್ನಡಿಯಲ್ಲಿ ಯಾರನ್ನು ನೊಡುತ್ತಿದ್ದಾಳೆ ಎಂಬ ಪ್ರಶ್ನೆ ಕುಹಕದ್ದು ಎನಿಸೀತು. ಆದರೆ ಆ ಹೆಣ್ಣು, ಗಂಡುನೋಟಕ್ಕೆ ತಾನು ಹೇಗೆ ಕಾಣಿಸಿದರೆ ಅವನ ಮೆಚ್ಚುಗೆ ಗಳಿಸಬಹುದು ಎಂಬುದನ್ನು ವಿವಿಧ ಭಾವಭಂಗಿಗಳಲ್ಲಿ ನಿಂತು ತನ್ನನ್ನು ಪರಿಕ್ಷಿಸಿಕೊಳ್ಳುತ್ತಾಳೆ. ಆದರೆ ಯಾವ ಖಾತರಿಯ ಉತ್ತರವೂ ಅಲ್ಲಿಲ್ಲ. ನಿರಂತರವಾಗಿ ಕನ್ನಡಿಯನ್ನು ಆರಾಧಿಸುತ್ತಾಳೆ.

ಸ್ವಲ್ಪಮಟ್ಟಿಗೆ ಶಿಕ್ಷಣ, ಉದ್ಯೋಗಗಳು ಅಥವಾ ಅಂಥ ಹಲವು ಸಾಮಾಜಿಕ ಕಾರಣಗಳಲ್ಲಿ ಒಂದಿಷ್ಟು ಶಕ್ತಿ ಬಂದಿದೆ ಎಂದೆನಿಸಿದ ಹೆಣ್ಣಾದರೆ, ನಾನು ಗಂಡನ್ನು ಮೆಚ್ಚಿಸಲೆಂದೇ ಬದುಕಬೇಕಾದ್ದಿಲ್ಲ ಎಂದು ತೋಚಿದರೆ ಅವಳು ಅಲಂಕಾರವನ್ನು ಮಾಡಿಕೊಳ್ಳಬೇಕೋ ಬೇಡವೋ ಎಂದು ಗೊಂದಲಕ್ಕೆ ಒಳಗಾಗುತ್ತಾಳೆ. ಮಾಡಿಕೊಳ್ಳುವುದಾದರೂ ತನಗಾಗಿ ತಾನು ಚಂದಕಾಣಬೇಕಿದೆ ಎಂದು ತೀರ್ಮಾನಿಸಲೂ ಬಹುದು. ಮೊದಲಿನದು ಅವನನ್ನು ಒಲಿಸಿಕೊಂಡು ಬದುಕುವೆ ಎಂಬ ಮಾದರಿಯಾದರೆ ಎರಡನೆಯದು ಅವನ ನೋಟಕ್ಕೆ ಸವಾಲೆಸೆದು ಬದುಕಬಲ್ಲೆ ಎಂಬ ಮಾದರಿಯದು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಎರಡೂ ಮಾದರಿಗಳೂ ಗಂಡಸನ್ನು ಅವನ ನೋಟವನ್ನು, ಅವನ ಗ್ರಹಿಕೆಯನ್ನು ಕೇಂದ್ರವಾಗಿರಿಸಿಕೊಂಡಿವೆ. ಭಕ್ತಿ ಮತ್ತು ವಿರೋಧ ಭಕ್ತಿಗಳ ಹಾಗೆ.

ಹೆಣ್ಣು ಅಭಿವ್ಯಕ್ತಿಯೂ ಕೂಡ ಈ ಮಾದರಿಗಳಲ್ಲಿಯೇ ಹಾಯುತ್ತದೆಯೇ, ಅದೇ ಅನಿವಾರ್ಯವೇ ಎಂಬುದು ಒಂದು ದೊಡ್ಡ ಪ್ರಶ್ನೆ. ಹೆಂಗಸರು ಹರಟೆ ಮಲ್ಲಿಯರು, ಮಾತು ಮನೆ ಕೆಡಿಸಿತು ತೂತು ಒಲೆಕೆಡಿಸಿತು, ಬಾಯ್ಮುಚ್ಚು, ಹೇಳಿದಷ್ಟು ಕೇಳು ಎಂಬ ಮಾತುಗಳನ್ನು ನಾವು ಹೆಂಗಸರು ಸದಾಕಾಲವೂ ಕೇಳುತ್ತಿರುತ್ತೇವೆ. ಹಾಗೆಂದು ಹೆಂಗಸರು ಬಾಯಿಗೇನೂ ಬೀಗ ಜಡಿದು ಕೂರುವುದಿಲ್ಲ. ಸಾಂಪ್ರದಾಯಿಕ ಕಟ್ಟುನಿಟ್ಟಿನ ಸಂದರ್ಭದಲ್ಲೂ ಅಷ್ಟೆ, ಎಲ್ಲರೊಂದಿಗೆ ಬೆರೆಯುವ ಮುಕ್ತ ವಾತಾವರಣವಿದೆ ಎಂದಾಗಲೂ ಅಷ್ಟೆ. ಅವರು ಮಾತನಾಡುತ್ತಲೇ ಇರುತ್ತಾರೆ ಎಂಬುದು ಎಲ್ಲರ ಅನುಭವ. ಆದರೆ ತಮಗೆ ಆಡಬೇಕೆನಿಸಿದ್ದನ್ನು, ಆಡಬೇಕೆನಿಸಿದವರ ಎದುರು, ಅಗತ್ಯದ ಸಂದರ್ಭಗಳಲ್ಲಿ ಆಡುತ್ತಾರೆಯೇ ಎಂಬ ಪ್ರಶ್ನೆಗೆ ಮಾತ್ರ ಸಮಾಧಾನ ಸಿಗಲಾರದು. ಜಾನಪದ ಸಾಹಿತ್ಯ ಅಥವಾ ಶಿಷ್ಟ ಸಾಹಿತ್ಯದಲ್ಲಿ ‘ಮಹಿಳಾ ಅಭಿವ್ಯಕ್ತಿಗಳು’ ಎಂದು ಕಾಣಿಸಿದ ಸಾಲುಗನ್ನು ಹೆಕ್ಕಿ ಹೆಣ್ಣು ತನ್ನ ಒಳಗಿನ ಆಸೆ ಆಕಾಂಕ್ಷೆ, ಸಿಟ್ಟುಸೆಡವುಗಳನ್ನು, ಒಳಗಿನ ಭಾವಲೋಕದ ಹಲವು ಸಂಗತಿಗಳನ್ನು ಮುಕ್ತವಾಗಿಯೇ ಹೇಳಿಕೊಳ್ಳುತ್ತಾಳೆ ಎಂಬ ಉದಾಹರಣೆಗಳನ್ನು ಜೋಡಿಸಿಕೊಳ್ಳುತ್ತೇವೆ.

ಆದರೆ ಹೊರದಾರಿಯೊಂದನ್ನು ಕಂಡುಕೊಂಡ ಅವಳ ಈ ಮಾತುಗಳು ಯಾರನ್ನು ಉದ್ದೇಶಿವೆ, ಏನನ್ನು ಹೇಳುತ್ತಿವೆ ಎಂಬುದನ್ನು ಗಮನಿಸಬೇಕು, ದಿನನಿತ್ಯದ ಮಾತಿನಲ್ಲಾದರೂ ಸರಿ, ಬರಹ ಅಥವಾ ಇನ್ನಿತರ ಯಾವುದೇ ‘ಕಲಾ ಪ್ರಕಾರ ‘ದ ಮಾತಿಗಾದರೂ ಸರಿ. ಅನುನಯ, ಅಹವಾಲು, ಅನುಸಂಧಾನಗಳ ಮಾದರಿಯೇ ಆಗಲಿ ಅಥವಾ ನ್ಯಾಯ, ಹಕ್ಕು ಎಂಬ ಆಕ್ರೋಶದ ಮಾದರಿಯೇ ಆಗಲಿ, ಹೆಣ್ಣು ಅಭಿವ್ಯಕ್ತಿಯು ಒಂದು ಕಲ್ಪಿತ ಪುರುಷ ಆಕಾರವನ್ನು ಎದುರು ನಿಲ್ಲಿಸಿಕೊಂಡಿರುತ್ತದೆ. ಅವನ ಮನಸ್ಸನ್ನು ಕರಗಿಸುವ ಅಥವಾ ಕೆರಳಿಸುವ ಪ್ರಯತ್ನಗಳು ಇರುತ್ತವೆ.

ಭಾಷಿಕ ಕ್ರಿಯೆ ಮಾತ್ರ: ಇದು ಸರಿಯೇ. ಏಕೆಂದರೆ ಹೆಣ್ಣು ಬದುಕಿನ ಎಲ್ಲ ಪ್ರಸಂಗಗಳಲ್ಲಿಯೂ ಎದುರಾಳಿಯಾಗಿ ಕಾಣುತ್ತಿರುವುದು ಗಂಡಸರೇ ಎಂಬುದು ನಿಜ. ಆದರೆ ಹೆಣ್ಣಿನ ಇಂಥ ಯಾವ ಮಾತುಗಳಿಗೂ ಕಿವಿಕೊಡಬೇಕಾದ ಅನಿವಾರ್ಯ ಅವನಿಗಂತೂ ಇಲ್ಲ. ಅಂದಮೇಲೆ ಹೆಣ್ಣಿನ ಈ ಅಭಿವ್ಯಕ್ತಿ ಎಂಬುದು ಕ್ರಿಯಾಶೀಲತೆಗೆ ಅವಕಾಶವೇ ಇಲ್ಲದ ಒಂದು ಭಾಷಿಕ ಕ್ರಿಯೆ ಮಾತ್ರವೇ ಆಗಿ ಉಳಿದು ಹೋಗುತ್ತದೆ. ಇಂಥ ಅಭಿವ್ಯಕ್ತಿಯನ್ನು ಹೆಂಗಸರ ಹರಟೆ ಎಂಬ ಸಾಲಿಗೇ ಸೇರಿಸಿ ನಿರಾಳವಾಗುವುದು ಅವನಿಗಂತೂ ಸುಲಭ. ಹೆಣ್ಣು ಅಭಿವ್ಯಕ್ತಿಯು ಕಲ್ಪಿತ, ನಿರಾಕಾರದ ಎದುರಾಳಿಯೊಂದಿಗೆ ಮಾತನಾಡಲು ನಿಂತು ನಿಷ್ಕ್ರಿಯಗೊಳ್ಳುತ್ತದೆ. ಈ ಅಭಿವ್ಯಕ್ತಿಗಾಗಿ ತಾನು ಬಳಸುತ್ತಿರುವ ಸಾಹಿತ್ಯ ಅಥವಾ ಇನ್ನಾವುದೇ ಕಲಾ ಪ್ರಕಾರಗಳು ಮತ್ತು ಅವುಗಳ ಮಾಧ್ಯಮವಾಗಿ ಬಳಸುತ್ತಿರುವ ಭಾಷೆಯಂತಹ ಸಾಧನಗಳು ತನ್ನವಲ್ಲ ಎಂಬ ಜಾಗೃತಿಯೂ ಸಾಧ್ಯವಾಗದ ಸಾಮಾಜಿಕತೆಯ ಸಂದರ್ಭದಲ್ಲಿ ಹೆಣ್ಣು ಇದ್ದಾಳೆ. ಅವಳು ಏನೇ ಮಾತನಾಡಲು ಹೊರಟರೂ ಅದು ಬೊವಾಳು ಹೇಳಿದ ಕನ್ನಡಿಯ ಎದುರು ನಿಂತ ಸ್ವಮೋಹಿ ಹೆಣ್ಣಿನ ರೀತಿಯದೇ ಆಗಿಬಿಡುತ್ತದೆ. ನಮ್ಮ ಶಿಕ್ಷಣ, ಉದ್ಯೋಗಗಳಂಥವು ನಮಗೆ ನೀಡಿವೆ ಎನ್ನಲಾದ ಬುದ್ಧಿ, ಆರ್ಥಿಕ ಸ್ವಾವಲಂಬನೆ ಎಂಬ ಪ್ರಗತಿಯ ನಡೆಗಳು ನಿಜಕ್ಕೂ ನಮ್ಮನ್ನು ಜಾಗೃತ ಗೊಳಿಸಿವೆಯೇ, ಬಲಗೊಳಿಸಿವೆಯೇ ಎಂಬ ಪ್ರಶ್ನೆಗಳನ್ನು ನಾವು ಹಾಕಿಕೊಳ್ಳಲು ಸಿದ್ಧರಿದ್ದೇವೆಯೇ ತಿಳಿಯದು.

ನಮ್ಮ ಸಾಮಾಜಿಕ ಸಂದರ್ಭದಲ್ಲಿ ಹೀಗೆ ಬರೆಯುವುದನ್ನು ತಮ್ಮ ಅಭಿವ್ಯಕ್ತಿ ಸಾಧನವಾಗಿ ಬಳಸುತ್ತಿರುವ ಮಹಿಳೆಯರನ್ನು ಗಮನಿಸಿದರೆ ಒಂದು ಸಂಗತಿ ಎದ್ದು ಕಾಣುತ್ತದೆ. ಇವರು ಬಹುಮಟ್ಟಿಗೆ ಶಿಕ್ಷಣ, ಉದ್ಯೋಗ ಮುಂತಾದ ಸೌಲಭ್ಯಗಳನ್ನು ಪಡೆದ ಮಧ್ಯಮ, ಮೇಲು ಮಧ್ಯಮ ಅಥವಾ ಮೇಲು ವರ್ಗಗಳಿಂದ ಬಂದವರು. ಕೆಳವರ್ಗದ ಮಹಿಳೆಯರಿಗೆ ಓದು ಬರಹಗಳ ಅವಕಾಶಗಳು ದೊರೆಯುವುದೇ ಕಷ್ಟ. ಅಲ್ಲದೆ ಅವರ ಬದುಕುಗಳ ಇನ್ನಿತರ ಬವಣೆಗಳಲ್ಲಿ ಬರಹದ ಅಭಿವ್ಯಕ್ತಿಗೆ ಸಮಯವಾಗಲೀ, ಹುಮ್ಮಸ್ಸಾಗಲೀ ಉಳಿಯುವುದು ಇನ್ನೂ ಕಷ್ಟ. ವಿನಾಯತಿಯಾಗಿ ಅಲ್ಲೊಬ್ಬರು ಇಲ್ಲೊಬ್ಬರು ಕಂಡಾರು. ಇತ್ತೀಚಿನ ಸಾಮಾಜಿಕ ರಾಜಕಾರಣದಲ್ಲಿ ಹೇಗೋ ತಳವರ್ಗ ಸಮುದಾಯಗಳ ಹಲಕೆಲವು ಮಹಿಳೆಯರಿಗಾದರೂ ಶಿಕ್ಷಣ, ಉದ್ಯೋಗ, ಬರಹ ಎಂಬ ಸಾಧ್ಯತೆಗಳು ಕಾಣುತ್ತಿವೆ ನಿಜ.

ಇರಲಿ. ಬರಹಗಳಲ್ಲಿ ತೊಡಗಿದ ಮಹಿಳೆಯರು ತಮ್ಮ ಅನುಭವ, ತಿಳಿವುಗಳನ್ನು ಆಧರಿಸಿ ಮಹಿಳಾ ಲೋಕದ ಒಳಗನ್ನು ಕಾಣಿಸಲು ಪ್ರಯತ್ನಿಸುತ್ತಾರೆ. ಅಧ್ಯಯನಶೀಲರಾದರೆ ತಮ್ಮ ಹಾಗೆ ಸೌಲಭ್ಯ ಮತ್ತು ಅವಕಾಶಗಳನ್ನು ಪಡೆಯದ ವರ್ಗ ಸಮುದಾಯಗಳ ಮಹಿಳಾಲೋಕವನ್ನೂ ಅವರು ಕಾಣಿಸಬಹುದು. ಆದರೆ ಇವರೆಲ್ಲರೂ ಯಾವುದೇ ಸಮುದಾಯದ ಮಹಿಳೆಯಾದರೂ ಅವಳ ಎಲ್ಲ ಸಾಮಾಜಿಕ ಸಮಸ್ಯೆಗಳಿಗೂ ಶಿಕ್ಷಣ, ಉದ್ಯೋಗಗಳು ದೊರೆತು ಸ್ವಾವಲಂಬಿಗಳಾಗಿ ಬಿಟ್ಟರೆ ಉತ್ತರ ದೊರೆಯುವುದು ಖಚಿತ ಎಂದು ನಂಬುತ್ತಾರೆ. ಇನ್ನೂ ಮುಖ್ಯವೆಂದರೆ ಇಂಥ ಸ್ವಾವಲಂಬನೆಯ ಸಾಧನಗಳಾದ ಶಿಕ್ಷಣ, ಮತ್ತು ಉದ್ಯೋಗಗಳನ್ನು ಎಟುಕಿಸಿಕೊಳ್ಳುವುದು ಮಹಿಳೆಯ ವ್ಯಕ್ತಿಗತ ನಿರ್ಧಾರ, ಛಲ, ಪ್ರಯತ್ನಗಳನ್ನೇ ಅವಲಂಬಿಸುತ್ತದೆ ಎಂದು ಅವರು ನಂಬುತ್ತಾರೆ. ಮಹಿಳೆಯರು ತಮ್ಮ ಧೈರ್ಯ, ಸಾಹಸಗಳಿಂದ ಇವೆಲ್ಲವನ್ನೂ ಸಾಧಿಸಬಹುದೇ ಎಂಬುದು ನಮ್ಮ ಸಾಮಾಜಿಕ ಸಂದರ್ಭದಲ್ಲಿ ನಾವು ಎದುರಿಸುತ್ತಿರುವ ದೊಡ್ಡ ಸವಾಲು. ಈ ಸವಾಲನ್ನು ಕುರಿತ ಚರ್ಚೆ ಬಹಳ ವಿಸ್ತಾರವಾದುದು.

ಪ್ರಸ್ತಾಪ ಇರುತ್ತದೆಯೇ?: ಏನಾದರೂ ಸಾಧನೆ ಮಾಡಿದ ಪುರುಷರನ್ನು ಸಂದರ್ಶನ ಮಾಡಿದವರು ಅವನ ಸಾಧನೆಯನ್ನು ಕುರಿತು ಮಾತ್ರವೇ ಮಾತನಾಡಿಸುತ್ತಾರೆ.ಅವನು ಕೆಲವೊಮ್ಮೆ ತನ್ನ ಸಾಧನೆಗಳಿಗೆ ಕಾರಣ, ಪ್ರೇರಣೆಯಾದವಳು ಎಂದು ತನ್ನ ತಾಯಿ, ಹೆಂಡತಿ, ಗೆಳತಿಯರಲ್ಲಿ ಯಾರನ್ನಾದರೂ ಪ್ರಸ್ತಾಪಿಸಲೂಬಹುದು. ಆದರೆ ಹೀಗೆ ಹೇಳುವಾಗ ತನ್ನ ದಿನನಿತ್ಯದ ಜಂಜಡಗಳು ತನಗೆ ಭಾರವಾಗಿ ತೋರದಂತೆ ಆ ಹೆಣ್ಣು ಹೇಗೆಲ್ಲ ತನಗೆ ಸೇವೆ ಸಲ್ಲಿಸಿದಳು ಎಂಬುದಷ್ಟೇ ಇರುತ್ತದೆ. ಒಂದು ವೇಳೆ ತನ್ನ ಸಾಧನೆಯಲ್ಲಿ ಒಬ್ಬ ಹೆಣ್ಣು ನೇರವಾಗಿಯೇ ಸಮಸಮನಾಗಿಯೇ ಭಾಗವಹಿಸಿದಾಗಲೂ ಅವಳು ಪ್ರಸ್ತಾಪಗೊಳ್ಳುತ್ತಾಳೆಯೇ ಎಂಬುದು ಪ್ರಶ್ನೆ. ಸೂಕ್ಷ್ಮಮತಿಯಾದ ಸಾಧಕನಾದರೆ ಆತ ಆಕೆಯನ್ನು ಸೂಕ್ತವಾಗಿ ಒಳಗೊಂಡೇ ಮಾತನಾಡುತ್ತಾನೆ. ಇಲ್ಲವಾದರೆ ಒಬ್ಬ ಪುರುಷನೊಂದಿಗೆ ಜಂಟಿಯಾಗಿ ಒಬ್ಬ ಮಹಿಳೆ ನೊಬೆಲ್ ಪ್ರಶಸ್ತಿಯನ್ನೇ ಪಡೆದರೂ ಆಕೆಯ ಸಾಧನೆಯ ಪ್ರಸ್ತಾಪವು ಗೌಣವೆನಿಸಿ ಆತನಷ್ಟೇ ಮುಂಚೂಣಿಗೆ ಬರುತ್ತಾನೆ. ಸಂದರ್ಶಕರಂತೂ ಆಕೆಯ ಇರವನ್ನೇ ಮರೆತಂತೆ ಆಗಿರುತ್ತಾರೆ.

ಅದೇ ಮಹಿಳೆಯೊಬ್ಬಳು ಅದೆಂತಹುದೇ ಮಹತ್ತರ ಸಾಧನೆ ಮಾಡಿದರೂ ಆರಂಭಕ್ಕೆ ಆ ಸಾಧನೆಗಾಗಿ ಇನ್ನಿಲ್ಲದಂತೆ ಹೊಗಳುತ್ತಾರಾದರೂ ಕೊನೆಗೆ ಒಂದು ಪ್ರಶ್ನೆ ಉಳಿಯುವುದು ಖಚಿತ. “ನಿಮ್ಮ ಸಾಧನೆ ದೊಡ್ಡದೇ ಸರಿ. ನಿಮ್ಮ ಕುಟುಂಬದ ಹೊಣೆಯನ್ನು ಸರಿಯಾಗಿ ನಿರ್ವಹಿಸಿದ್ದೀರಿ ತಾನೇ” ಎಂಬ ಪ್ರಶ್ನೆ ಆಕೆಯನ್ನು ಕಟಕಟೆಯಲ್ಲಿ ನಿಲ್ಲಿಸಿರುತ್ತದೆ. ಇಲ್ಲಿ ಆ ಹೆಣ್ಣು ಇಲ್ಲೇಕೆ ಈ ಪ್ರಶ್ನೆ ಎಂದು ಕೇಳಬೇಕು. ಆದರೆ ಕೇಳುವುದಿಲ್ಲ. ಬದಲಿಗೆ ಇಷ್ಟೆಲ್ಲ ಸಾಧನೆಗಳ ನಡುವೆಯೂ ತಾನು ಆ ಕರ್ತವ್ಯವನ್ನು ಮರೆತಿಲ್ಲ ಎಂಬುದನ್ನು ಸಾಬೀತು ಪಡಿಸಲು ಹೊರಡುತ್ತಾಳೆ. ವಾಸ್ತವದಲ್ಲಿ ಕೂಡಾ ಇದು ಸುಳ್ಳೇನಲ್ಲ. ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ತನ್ನ ಪಾತ್ರವನ್ನು ಯಾವ ಕೊರತೆಯೂ ಬಾರದಂತೆ ನಿರ್ವಹಿಸಲು ಅವಳು ತನ್ನ ಜೀವವನ್ನೇ ತೇಯ್ದಿರುತ್ತಾಳೆ. ಈಗ ಸಾರ್ವಜನಿಕವಾಗಿ ಪ್ರಶ್ನಿಸಲಾಗುತ್ತಿದೆ. ಸಾಕ್ಷಿಗಳನ್ನು ಒದಗಿಸುವುದೂ ಅವಳ ಹೊಣೆಯೇ. ಇಲ್ಲವಾದರೆ ಅವಳ ಇನ್ನಿತರ ಯಾವುದೇ ಸಾಧನೆಗಳಿಗೂ ಬೆಲೆಯೇ ಇಲ್ಲ ಎಂಬಂತೆ ಆಗಿಬಿಡುತ್ತದೆ. ಸ್ವತಃ ಹೆಂಗಸರಿಗೇ ಇದು ಪಾಪಪ್ರಜ್ಞೆಯಾಗಿ ಕಾಡುವುದಿದೆ. ಇದರಿಂದ ಹೊರಬರುವುದು ಹೆಣ್ಣಿಗೆ ಸುಲಭದ ಮಾತಲ್ಲ.

ಮದುವೆ, ಗಂಡ, ಮಕ್ಕಳು, ಮನೆ, ಮುಖ್ಯವಾಗಿ ಅಡಿಗೆಗಳ ಬಗ್ಗೆ ತನಗಿರುವ ಕಾಳಜಿ, ಅಭಿರುಚಿ, ಮುಖ್ಯವಾಗಿ ಅವನ್ನೆಲ್ಲ ಸ್ವತಃ ತಾನೇ ನಿರ್ವಹಿಸಬೇಕೆಂಬ ತನ್ನ ಆಸಕ್ತಿ ಮತ್ತು ಹುಮ್ಮಸ್ಸು, ಹಾಗೆ ಮಾಡಲು ಸಾಧ್ಯವಾಗದೆ ಹೋದಾಗ ತನಗೆ ಆಗುವ ಬೇಸರ ಮುಂತಾಗಿ ಹೇಳಿಕೊಳ್ಳುತ್ತಾಳೆ. ಇದು ಅವಳ ಸ್ವಂತದ ಭಾವವೋ, ಹಾಗೊಂದು ಸಾಮಾಜಿಕ ಒತ್ತಡದಲ್ಲಿ ತಾನು ಸಿಲುಕಿದ್ದೇನೆಯೋ ಎಂಬುದು ಸಾಧಕಿಯಾದ ಆ ಬುದ್ಧಿವಂತ ಹೆಣ್ಣಿಗೂ ತಿಳಿಯದೆ ಹೋಗುತ್ತದೆ. ಅಂದರೆ ಹೆಣ್ಣು ಕುಲವನ್ನು ಇಡಿಯಾಗಿ ಆವರಿಸಿಕೊಂಡಿರುವ ಕಣ್ಕಟ್ಟಿನ ಪ್ರಭಾವವನ್ನು ಕಲ್ಪಿಸಬಹುದು.

ಸಾಹಿತ್ಯ ವಲಯ ಅಥವಾ ಅಂಥ ಇನ್ನಿತರ ಕಲಾಪ್ರಕಾರಗಳಲ್ಲಿ ಸಾಧನೆ ಮಾಡಲು ಹೊರಟ ಮಹಿಳೆಯರು ಇನ್ನಿತರ ಜ್ಞಾನ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗಿಂತ ಇನ್ನಷ್ಟು ಸೂಕ್ಷ್ಮದ, ಕಷ್ಟದ ಪ್ರಶ್ನೆಗಳ ಎದುರು ನಿಲ್ಲುತ್ತಾರೆ. ಏಕೆಂದರೆ ಉಳಿದ ಜ್ಞಾನವಲಯಗಳು ಹೆಚ್ಚಾಗಿ ಬೌದ್ಧಿಕ ನೆಲೆಯವು. ಹಾಗಾಗಿ ಒಂದು ಹಂತದವರೆಗೆ ವಸ್ತುನಿಷ್ಠತೆಯಿಂದ ಉಳಿಯಬಹುದು. ಆದರೆ ಸಾಹಿತ್ಯವೇ ಮೊದಲಾದ ಕಲಾಪ್ರಕಾರಗಳು ನೇರವಾಗಿ ಮನುಷ್ಯರ ಸಾಮಾಜಿಕ ಬದುಕಿನೊಂದಿಗೆ ಸಂಪರ್ಕಿಸಿಕೊಳ್ಳುತ್ತವೆ. ಅಲ್ಲದೆ ಮನಸ್ಸು, ಸಂಬಂಧಗಳು, ಸಾಮಾಜಿಕ ಸಂದರ್ಭಗಳು ಎಂಬ ಹಲವು ಬಗೆಯ ಸಂಕೀರ್ಣವೂ ,ಬಹಳಷ್ಟು ವೇಳೆ ನಿರಾಕಾರದವೂ ಆದ ಸಂಗತಿಗಳೊಂದಿಗೆ ಸಂಬಂಧಿಸಿಕೊಳ್ಳುತ್ತವೆ. ಹಾಗಾಗಿ ಬೌದ್ಧಿಕ ಸಾಮರ್ಥ್ಯ ಮಾತ್ರವೇ ಇಲ್ಲಿ ತೊಡಗಿರುವುದಿಲ್ಲ. ಅಂದರೆ ವಸ್ತುನಿಷ್ಠತೆ ಎಂಬುದು ಇಲ್ಲಿ ಒಂದು ಗೌಣ ಸಂಗತಿಯೇ ಆಗುತ್ತದೆ. ಸಾಹಿತ್ಯ ಪ್ರಕಾರವನ್ನು ಅಭಿವ್ಯಕ್ತಿಗಾಗಿ ಆಯ್ದುಕೊಳ್ಳುವುದೆಂದರೆ ಇವೆಲ್ಲವನ್ನೂ ನಿಭಾಯಿಸಬೇಕಾಗುತ್ತದೆ. ಆದರೆ ಇದು ಅತ್ಯಂತ ಸೂಕ್ಷ್ಮದ ಒಂದು ಹೊಣೆಗಾರಿಕೆ.

ಪುರುಷನೋಟ ಪ್ರಧಾನ: ಈ ವಲಯದಲ್ಲಿ ಕೆಲಸ ಮಾಡುವ ಪುರುಷರಿಗೆ ಇಲ್ಲಿ ಸವಾಲುಗಳು ಕಡಿಮೆ. ಏಕೆಂದರೆ ನಮ್ಮ ಸಾಮಾಜಿಕ ಸಂದರ್ಭಗಳು ಪ್ರಧಾನವಾಗಿ ಪುರುಷನೋಟದವೇ ಆಗಿರುತ್ತವೆ. ಈ ನೋಟದಲ್ಲಿಯೇ ಅವನು ಲೋಕವನ್ನು ಗ್ರಹಿಸುತ್ತಾನೆ, ಬಳಸುತ್ತಾನೆ, ಅಭಿವ್ಯಕ್ತಿಸುತ್ತಾನೆ. ವಿಚಿತ್ರವೆಂದರೆ ಹೆಣ್ಣು ಕೂಡಾ ತನ್ನ ಲೋಕವನ್ನು ಇದೇ ನೋಟದಲ್ಲಿಯೇ ಗ್ರಹಿಸುತ್ತಾಳೆ. ಏಕೆಂದರೆ ಪಿತೃಪ್ರಧಾನ ವ್ಯವಸ್ಥೆಯು ಈ ಗಂಡುನೋಟದ ತರಬೇತಿಯನ್ನೇ ಗಂಡು ಮತ್ತು ಹೆಣ್ಣುಗಳಿಬ್ಬರಿಗೂ ಕಡ್ಡಾಯವಾಗಿ ನೀಡುತ್ತದೆ. ಅವರಿಬ್ಬರಿಗೂ ಈ ಕುರಿತು ಆಯ್ಕೆಗಳೇನೂ ಇರುವುದಿಲ್ಲ. ಆದರೆ ಇದು ಪುರುಷ ಪರವಾಗಿ ಇರುವುದರಿಂದ ಗಂಡಸಿಗೆ ಇದರ ಬಳಕೆಯಿಂದಾಗಿ ಬದುಕು ಅನುಕೂಲಕರವಾಗಿದೆ ಎನಿಸುತ್ತದೆ. ಈ ಗ್ರಹಿಕೆಯಲ್ಲಿಯೇ ಬದುಕು ನಡೆಸಬೇಕಾದ ಅನಿವಾರ್ಯದಲ್ಲಿರುವ ಹೆಂಗಸಿಗೆ ಸಹಜವಾಗಿಯೇ ಹಲವು ಸವಾಲುಗಳು ಎದುರಾಗುತ್ತವೆ. ಆದರೆ ತನ್ನದೇ ಆದ ನೋಟ, ಲೋಕಗ್ರಹಿಕೆಗಳು ಸಾಧ್ಯವಾಗದೆ ತನ್ನ ಬದುಕು ಹೀಗೇಕೆ ಎಂದು ಅರ್ಥವಾಗುವುದೇ ಇಲ್ಲ.

ತನ್ನದೇ ಗ್ರಹಿಕೆಯು ಸಾಧ್ಯವಾಗಬೇಕಾದರೆ ಅವಳಲ್ಲಿ ವಿಶೇಷವಾದ ಒಂದು ಜಾಗೃತಿ ಮೂಡಬೇಕು. ತನ್ನದು ಎಂಬುದನ್ನು ಸರಿಯಾಗಿ ಗುರುತಿಸಲು ವಿಶೇಷ ಪ್ರಯತ್ನವೂ ಬೇಕು. ಇದು ಸಾಧ್ಯವಾಗದೆ ಹೋದಾಗ ಅವಳ ಬೌದ್ಧಿಕ ಸಾಮರ್ಥ್ಯವು ತೀಕ್ಷ್ಣವಾದರೂ ಅವಳು ಗಂಡುನೋಟದ ಪ್ರಭಾವದಿಂದ ಹೊರಬರಲಾರಳು. ಈ ಬುದ್ಧಿವಂತ ಹೆಂಗಸಿಗೆ ತನ್ನ ಸಾಧನೆ, ತನ್ನ ಅಭಿವ್ಯಕ್ತಿ ಎಂದರೆ ಅದು ಗಂಡಸಿನ ಹಾಗೆಯೇ ಪ್ರವೃತ್ತವಾಗಬೇಕಾದ ಸಂಗತಿ ಎಂದಾಗಿಬಿಡುತ್ತದೆ. ಇವಳು ಇನ್ನಿತರ ಸಾಮಾನ್ಯ ಹೆಂಗಸರ ನಡೆನುಡಿ ಮಾತುಕತೆಗಳೆಂಬ ಅಭಿವ್ಯಕ್ತಿಗಳನ್ನೇ ನಿರಾಕರಿಸಿ ಗಂಡು ಮಾದರಿಯನ್ನು ಆವಾಹಿಸಿಕೊಳ್ಳಬಹುದು.ಇಲ್ಲವೇ ಗಂಡು ಮಾದರಿಯನ್ನು ವಿರೋಧಿಸುತ್ತೇನೆಂದು ಹೊರಟರೆ ಆ ವಿರೋಧವನ್ನು ವ್ಯಕ್ತ ಪಡಿಸುವ ವಿಧಾನವನ್ನೂ ಅದೇ ಗಂಡುಮಾದರಿಯಿಂದ ಪಡೆಯಬಹುದು. ಆಗ ಅವನಲ್ಲಿನ ಸ್ತ್ರೀದ್ವೇಷದ ಬಗೆಯಲ್ಲಿಯೇ ಇವಳಲ್ಲಿ ಅದು ಪುರುಷದ್ವೇಷವಾಗಿ ಅಭಿವ್ಯಕ್ತವಾಗಬಹುದು. ಹಾಗಲ್ಲದೆ ತನ್ನನ್ನು ಸ್ವತಂತ್ರವಾಗಿ ಗುರುತಿಸಿಕೊಳ್ಳುತ್ತೇನೆ ಎಂದು ಹೊರಟಾಗಲೂ ಗಂಡುನೋಟದ ಮಾದರಿಯನ್ನೇ ಆವಾಹಿಸಿಕೊಂಡು ಅವೇ ಸ್ಥಿರ ಮಾದರಿ ಪಾತ್ರಗಳ ಅಡಿಗೆ, ಮನೆ, ತಾಯ್ತನಗಳನ್ನು ವೈಭವೀಕರಿಸಿಕೊಳ್ಳುತ್ತಾ ಕೂರಬಹುದು.

ಮಹಿಳೆಯರು ತಮ್ಮ ದಿನನಿತ್ಯದ ಮಾತುಕತೆ, ನಡೆನುಡಿಗಳಿಂದ ಹಿಡಿದು ಬೌದ್ಧಿಕ, ಸೃಜನಶೀಲ ಎಂಬ ಯಾವುದೇ ಅಭಿವ್ಯಕ್ತಿಗಳನ್ನು ಮಾಡಲು ಹೊರಟಾಗಲೂ ಇಂಥ ಹಲವು ಸೂಕ್ಷ್ಮದ ಸವಾಲುಗಳನ್ನು ನಿರಂತರವಾಗಿ ಎದುರಿಸುತ್ತಲೇ ಇರುತ್ತಾರೆ. ಜಾಗೃತರಾಗುತ್ತಿರುವ ಮಹಿಳೆಯರಿಗೆ ಖಂಡಿತವಾಗಿಯೂ ಇವುಗಳನ್ನು ಎದುರಿಸುವ ಸಾಮರ್ಥ್ಯ ಇದ್ದೇ ಇರುತ್ತದೆ. ಆದರೆ ಮೊದಲಿಗೆ ಅವರು ತಲೆತಲಾಂತರಗಳಿಂದ ನಮ್ಮ ತಾಯಂದಿರ ಮೂಲಕವೇ ಹರಿದುಬಂದ ಗಂಡುನೋಟದ ತರಬೇತಿಯ ಪಾಠಗಳಿಂದ ಪಾರಾಗಿ ಹೊರಬರಲು ಸಾಧ್ಯವಾಗಬೇಕು. ತಮ್ಮದೇ ನೋಟ ಎಂದರೆ ಏನು ಎಂಬ ಪ್ರಾಥಮಿಕ ಪಾಠಗಳಿಂದಲೇ ನಮಗೆ ನಾವು ತರಬೇತುಗೊಳ್ಳುವುದು ಮೊದಲಾಗಬೇಕು. ಮಹಿಳೆಯರು ಈ ದಿಸೆಯಲ್ಲಿ ಸಾಕಷ್ಟು ಮುನ್ನಡೆಯುತ್ತಿದ್ದಾರೆ. ಇದು ನಿರಂತರವಾಗಿ ಸಾಗಿ ಮಹಿಳಾ ಸಮುದಾಯದಲ್ಲಿ ಇಡಿಯಾಗಿ ಹಬ್ಬಲಿ ಎಂಬುದೇ ನಮ್ಮೆಲ್ಲರ ಹಾರೈಕೆ.

-ಎಚ್.ಎಸ್. ಶ್ರೀಮತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *