ಚಿಂತನೆ / ಮನೋಭಾವ ರೂಪಿಸುವ ಮನೆ ವಾತಾವರಣ – ಬಿ. ಚಿದಾನಂದ

ತಂದೆತಾಯಂದಿರು ಬೇರೆ ಬೇರೆ ಸನ್ನಿವೇಶಗಳಲ್ಲಿ ಹೇಗೆ ನಡೆದುಕೊಳುತ್ತಾರೆ, ಸನ್ನಿವೇಶಗಳಲ್ಲಿ ಸಂಬಂಧಪಟ್ಟವರೊಡನೆ ಹೇಗೆ ಮಾತನಾಡುತ್ತಾರೆ, ತಮ್ಮ ಮನೆಯ ವಾತಾವರಣದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ ಮಕ್ಕಳು ಕಲಿಯುತ್ತಾರೆ. ಮಾತನಾಡುವುದಕ್ಕೂ ನಡೆದುಕೊಳ್ಳುವುದಕ್ಕೂ ವೈರುಧ್ಯ ಮಕ್ಕಳು ಸಂದೇಹಪಡುವುದು, ಪ್ರಶ್ನೆಮಾಡುವುದು, ಶೋಧಿಸುವುದು, ವಿಚಾರಮಾಡುವುದು ಮುಂತಾದ ಗುಣಗಳನ್ನು ಕಿಶೋರಾವಸ್ಥೆಗೆ ಕಾಲಿಟ್ಟಕೂಡಲೇ ಉತ್ತೇಜಿಸುವುದು ಬಹಳ ವಿರಳ. ಮೊದಲು ತಾಯಿ ತಂದೆಯರು, ಹಿರಿಯರು ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು.

ನಮ್ಮ ದೇಶದ ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ಹಿಂದುಳಿಯಲು ನಮ್ಮಲ್ಲಿಯ ಸಾಂಸ್ಕ್ರತಿಕ ಮತ್ತು ಸಾಮಾಜಿಕ ವ್ಯವಸ್ಥೆಗಳೆ ಕಾರಣ. ಇಂತಹ ಸಂಸ್ಕೃತಿ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಗಂಡಸರು ಮತ್ತು ಹೆಂಗಸರು ಎಷ್ಟರಮಟ್ಟಿಗೆ ವಿರೋಧಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ನಾವು ಬಹು ದೂರ ಹುಡುಕಬೇಕಾಗಿಲ್ಲ. ನಮ್ಮ ಮನೆಗಳಲ್ಲಿ ಆಚರಿಸುವ ಹಬ್ಬಗಳು ಮತ್ತು ಆಚರಣೆಗಳಲ್ಲಿ ಏನಾದರೂ ಅರ್ಥವಿದೆಯೇ ಅಥವಾ ಇಲ್ಲದ ಅರ್ಥವನ್ನು ನಾವು ತುಂಬುತ್ತಿದ್ದೇವೆಯೇ ಅಥವಾ ಸಂಬಂಧಿಕರು, ಸ್ನೇಹಿತರು ಮತ್ತು ನೆರೆಹೊರೆಯವರೊಡನೆ ಸೌಹಾರ್ದದಿಂದ ಬಾಳಲು ಈ ಹಬ್ಬಗಳನ್ನು ಮತ್ತು ಆಚರಣೆಗಳನ್ನು ಆಚರಿಸುತ್ತಿದ್ದೇವೆಯೆ? ಸಂಬಂಧಿಕರು, ಸ್ನೇಹಿತರು ಮತ್ತು ಹೆಚ್ಚಾಗಿ ನೆರೆಹೊರೆಯವರೊಡನೆ ಸೌಹಾರ್ದದಿಂದ ಬಾಳಲು ಬೇರೆ ದಾರಿಗಳಿಲ್ಲವೇ ಎಂಬುದನ್ನು ನಾವು ಕೇಳಿಕೊಳ್ಳಬೇಕಾಗಿದೆ.

ಚಿಕ್ಕಮಕ್ಕಳು ಹೇಗೆ ತಮ್ಮ ಪರಿಸರವನ್ನು ನೋಡಿ ಕಲಿಯುತ್ತಾರೋ, ಹುಡುಗ -ಹುಡುಗಿಯರೂ ಸಹ ತಮ್ಮ ಪರಿಸರದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ ಕಲಿಯುವುದಲ್ಲದೆ ಅದನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇಲ್ಲಿ ಪರಿಸರವೆಂದರೆ, ಮನೆಯ ವಾತಾವರಣ, ಅಂದರೆ, ಅವರ ತಂದೆತಾಯಂದಿರು ಬೇರೆ ಬೇರೆ ಸನ್ನಿವೇಶಗಳಲ್ಲಿ ಹೇಗೆ ನಡೆದು ಕೊಳ್ಳುತ್ತಾರೆ, ಅಂದರೆ ಸನ್ನಿವೇಶಗಳ ಸಂಬಂಧಪಟ್ಟವರೊಡನೆ ಹೇಗೆ ಮಾತನಾಡುತ್ತಾರೆ, ಅವರು ಮಾತನಾಡುವುದಕ್ಕೂ ನಡೆದುಕೊಳ್ಳುವುದಕ್ಕೂ ವೈರುಧ್ಯವಿದೆಯೇ, ಆ ವೈರುಧ್ಯಗಳನ್ನು ಹೇಗೆ ಅವರು (ಅಂದರೆ ತಾಯಿತಂದೆಯರು) ಸಮ್ಮತಿಸಿಕೊಳ್ಳುತ್ತಾರೆ, ಅವರ ಆ ಕಪಟಗಳು ರೂಢಿಯಾಗಿರುವುದು (ನಾರ್ಮಲೈಸ್) ಅಥವಾ ಸರ್ವೇಸಾಮಾನ್ಯವಾಗಿರುವದನ್ನು ಗಮನಿಸಿ ಅವನ್ನು ತಮ್ಮದನ್ನಾಗಿಸಿಕೊಳ್ಳುತ್ತಾರೆ. ಇವು ಅವರು ಇಪ್ಪತ್ತನೆಯ ವಯಸ್ಸಿಗೆ ಬರುವಷ್ಟರಲ್ಲೇ ಆಗಿಹೋಗಿರುತ್ತದೆ. ಇಂತಹ ಪರಿಸ್ಥಿತಿಯನ್ನು ತಡೆಯುವುದಕ್ಕೆ ಇರಬೇಕಾದ ಸಂದೇಹಪಡುವುದು, ಪ್ರಶ್ನೆಮಾಡುವುದು, ಶೋಧಿಸುವುದು, ವಿಚಾರಮಾಡುವುದು, ಮುಂತಾದ ಗುಣಗಳನ್ನು ಕಿಶೋರಾವಸ್ಥೆಗೆ ಕಾಲಿಟ್ಟಕೂಡಲೇ ಉತ್ತೇಜಿಸುವುದಿರಲಿ, ಅಂತಹ ಮನಸ್ಥಿತಿ ಇರುವವರನ್ನು ಕೇವಲವಾಗಿ ಕಾಣುವುದರ ಜೊತೆಗೆ ಹೀಯಾಳಿಸುತ್ತಾರೆ. ಇಂತಹ ವಿಚಾರದಲ್ಲಿ ಕಸಿನ್ಸ್ ಎಂಬ ಆಂಗ್ಲ ಪ್ರಾಧ್ಯಾಪಕರು ಕುವೆಂಪು ಅವರಿಗೆ ತಿಳಿವಳಿಕೆಯನ್ನು ಹೇಳಿದ ರೀತಿಯಲ್ಲಿ ಹೇಳುವ ಅಧ್ಯಾಪಕರು ಮತ್ತು ಹಿರಿಯರು ನಮ್ಮಲ್ಲಿ ಕಡಿಮೆ.

ಉನ್ನತ ಅಧ್ಯಯನವನ್ನು ಕೈಗೊಂಡು ಸಂಶೋಧನಾ ಕ್ಷೇತ್ರಕ್ಕೆ ಕಾಲಿಟ್ಟ ಮಹಿಳೆಯರ ಜೀವನವಂತೂ ಇನ್ನೂ ಕಷ್ಟ. ಎಲ್ಲಿ ತನ್ನ ಹೆಂಡತಿ ತನಗಿಂತ ಮೇಲೆ ಹೋಗುತ್ತಾಳೋ ಎಂಬ ಆತಂಕಕ್ಕಿಂತ ಹೆದರಿಕೆ ಇರುತ್ತದೆ. ಎಲ್ಲಿ ತನ್ನ ಹೆಂಡತಿ ತನ್ನ ಮಾತುಗಳನ್ನು ಕೇಳುವುದಿಲ್ಲವೋ ಎಂಬ ಹೆದರಿಕೆ. ಇದಕ್ಕೆ ಹುಡುಗನ ತಂದೆತಾಯಂದಿರು, ಹೆಚ್ಚಿನ ಮಟ್ಟಿಗೆ ತಾಯಂದಿರು ಸಾಮಾನ್ಯ ಮತ್ತು ಸಾಮಾಜಿಕ ಕಾರಣಗಳಿಂದ ತಮ್ಮ ಸೊಸೆ, ತಮ್ಮ ಮಗನ ಅಧೀನದಲ್ಲಿ ಇರುವುದನ್ನು ಬಯಸುತ್ತಾರೆ. ತವರು ಎನ್ನುವ ಅನವಶ್ಯಕತೆಯನ್ನು ಹುಡುಗನಾಗಲೀ ಹುಡುಗಿಯಾಗಲೀ ಮೈಗೂಡಿಸಿಕೊಂಡಿರುವುದಿಲ್ಲ. ಇತ್ತೀಚೆಗೆ ತವರು ಗಂಡನ ಮನೆಗೆ ಬರುವುದು ಪಟ್ಟಣಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಅತ್ತೆಯು ತವರಾಗುವುದು ವಿರಳ. ಇದು ನಮ್ಮ ಸಂಬಂಧಗಳ ಅಸರಳತೆಯನ್ನು ತೋರಿಸುತ್ತದೆ.

ದೃಷ್ಟಿಕೋನ : ಹುಡುಗಿಯ ಗರ್ಭಾವಸ್ಥೆ ಮತ್ತು ತದನಂತರದ ಜವಾಬ್ದಾರಿಗಳು ತಮ್ಮದಲ್ಲವೆಂಬಂತೆ ನಡೆದುಕೊಳ್ಳುವುದಲ್ಲದೆ ಅದು ತಮ್ಮದಲ್ಲವೇ ಅಲ್ಲ ಎಂಬುದನ್ನು ಪರಿಸರವು ಹುಡುಗರಿಗೆ ಮೈಗೂಡಿಸಿರುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಇದ್ದ ತಾಯ್ತನಕ್ಕಾಗಿ ಗ್ಯಾಪ್ ಕೊಟ್ಟು ಮತ್ತೆ ಸಂಶೋಧನೆಯನ್ನು ಮುಂದುವರಿಸುವ ವ್ಯವಸ್ಥೆ (ಇದನ್ನು ಬಂಡವಾಳಶಾಹಿಯು ಅಲ್ಲಿಯೂ ವಿರಳ ಮಾಡುವುದರ ಕಡೆಗೆ ಹೆಜ್ಜೆ ಹಾಕುತ್ತಿದೆ) ಭಾರತದಲ್ಲಿ ಬಹಳ ವಿರಳ.

ಮೊದಲು ತಾಯಿ ತಂದೆಯರು, ಹಿರಿಯರು ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು. ಇದು ವಿಜ್ಞಾನದ ಕೆಲಸವಲ್ಲ. ಇದು ವಿದ್ಯೆ/ಶಿಕ್ಷಣ ಮತ್ತು ರಾಜಕಾರಣದ ಕೆಲಸ. ಪರಿಸರವನ್ನು ಬದಲಿಸದೇ ತಾಯಿ ತಂದೆಯರು ತಮ್ಮ ದೃಷ್ಟಿಕೋನವನ್ನು ಬದಲಾಯಿಸಲು ಸಾಧ್ಯವಿಲ್ಲ. ಪರಿಸರವನ್ನು ಬದಲಾಯಿಸಲು ನಮಗೆ ದೊರೆಕುತ್ತಿರುವ ವಿದ್ಯೆ/ಶಿಕ್ಷಣದಲ್ಲಿ ಅನುಮಾನ ಮತ್ತು ಶೋಧನೆಗಳಿಂದ ಕೂಡಿದ ಜಿಜ್ಞಾಸೆಯನ್ನು ಮೈಗೂಡಿಸಿಕೊಳ್ಳುವ ಅಂಶಗಳಾವೂ ಇಲ್ಲ. ನಮಗೆ ಸಿಗುತ್ತಿರುವ ವಿದ್ಯೆ/ಶಿಕ್ಷಣ ಮಾರುಕಟ್ಟೆಗೆ ಬೇಕಾದ ಕೌಶಲ ಕೊಡುವ, ಅದಕ್ಕಿಂತ ಹೆಚ್ಚಾಗೆ, ಆ ಕೌಶಲವೇ ವಿದ್ಯೆ ಎಂಬ ಅಪತಿಳಿವಳಿಕೆಯನ್ನು ಕೊಡುವ ’ವಿದ್ಯೆ’. ಹೀಗಿರುವಾಗ ಮಹಿಳೆಯರು ತಮ್ಮ ಮೇಲಿರುವ ದಬ್ಬಾಳಿಕೆಯನ್ನು ತೊಡೆಯಲು ಗಂಡಿನ ಮನಸ್ಸನ್ನು ಬದಲಾಯಿಸಲು ಲಿಂಗ ವರ್ಗದ ಜೊತೆಗೆ ಬೇರೆ ವರ್ಗಗಳ ಮೇಲೂ ಗಮನ ಹರಿಸಬೇಕು. ಉದಾಹರಣೆಗೆ, ದಮನ ಮತ್ತು ಅಧೀನತೆಗಳ ಕಾರ್ಯನಿರ್ವಹಣೆ ಯಾವ ಕಾರಣಗಳಿಂದ ಆಗುತ್ತವೆ ಎಂಬುದನ್ನು ನೋಡಬೇಕು. ಈಗಿರುವ ವ್ಯವಸ್ತೆಯ ಪರಿಕರಗಳನ್ನು ಮತ್ತು ಸಂಸ್ಥೆಗಳನ್ನೇ (ಉದಾ: ಸಂಸಾರ, ಮದುವೆ, ಯಶಸ್ಸು ಮುಂತಾದ) ಅವಲಂಬಿಸಿ ಅವುಗಳ ಚೌಕಟ್ಟಿನಲ್ಲೇ ನೆಮ್ಮದಿ ಮತ್ತು ಸುಖವನ್ನು ಬಯಸುವುದು ಸರಿಯೆನಿಸುವುದಿಲ್ಲ.

ಸಮಾನತೆ ಮತ್ತು ಘನತೆಗಳನ್ನು ಮೈಗೂಡಿಸಿಕೊಂಡರೆ ಪತಿಗಾಗಲಿ ಅಥವಾ ಪತ್ನಿಗಾಗಲಿ ಕೀಳರಿಮೆ ಉಂಟಾಗಲು ಸಾಧ್ಯವಿಲ್ಲ. ಬಂಡವಾಳಶಾಹಿ ಮಾರುಕಟ್ಟೆಯ ವ್ಯವಸ್ಥೆ ಯಲ್ಲಿ ಸ್ಪರ್ಧೆಯಲ್ಲದೆ ಬೇರೇನೂ ಇರಲು ಸಾಧ್ಯವಿಲ್ಲ. ಅದು ಸಾಧ್ಯವಾಗಬೇಕಾದರೆ ಶಾಸನಗಳ ಮೊರೆಹೋಗಬೇಕು. ಸಮಾನತೆ ಮತ್ತು ಘನತೆಗಳು ಸಾಮಾಜಿಕ ಬದುಕಿನ ಮುಖ್ಯ ಅಂಶಗಳಾಗಬೇಕಾದರೆ ಬಂಡವಾಳಶಾಹಿ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ. ಆ ಅಂಶಗಳು ವೈಯಕ್ತಿಕ ಬದುಕಿನ ಮುಖ್ಯ ಅಂಶಗಳಾಗಬೇಕಾದರೆ ಆ ವ್ಯಕ್ತಿಗಳ ಭಯ ಮತ್ತು ದಮನಕಾರಿ ಪ್ರವೃತ್ತಿಗಳ ಮೇಲೆ ಹತೋಟಿ ಇರಬೇಕು. ಇದು ಸಾಧ್ಯವಾಗಲು ಸಾಮಾಜಿಕ ಪರಿಸರವು ಸಹಾಯಕಾರಿಯಾಗಿರಬೇಕು. ಸದ್ಯಕ್ಕೆ ಅದು ನಮ್ಮ ಸಮಾಜದಲ್ಲಿ ಇಲ್ಲವೇನೋ ಅನ್ನಿಸುತ್ತದೆ.

  • ಬಿ. ಚಿದಾನಂದ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *